ಜಗತ್ತಿನಲ್ಲಿರುವ ಪ್ರಾಣಿ ಮತ್ತ ಸಸ್ಯ ಸಂಕುಲಗಳು ಜೀವಿಸಬೇಕಾದರೆ ಗಾಳಿ, ಬೆಳಕು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ನೀರು. ದೇಶದ ಬೆಳವಣಿಗೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಎಷ್ಟೋ ಕೆರೆಗಳು ಕಣ್ಮರೆಯಾಗುತ್ತಿವೆ ಹಾಗೂ ಅಸ್ತಿತ್ವದಲ್ಲಿರುವ ನದಿಗಳು ಕಲುಷಿತವಾಗುತ್ತಿವೆ.
“ರಾಜ್ಯದಲ್ಲಿರುವ 15 ನದಿಗಳ ನೀರು ಸ್ನಾನಕ್ಕೂ ಯೋಗ್ಯವಲ್ಲ ಮತ್ತು ಈ ನದಿಗಳ ನೀರನ್ನು ಕುಡಿಯಲು ಬಳಸಬೇಡಿ” ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯದಲ್ಲಿರುವ 15 ಪ್ರಮುಖ ನದಿಗಳು ಹಾಗೂ ಬೆಂಗಳೂರು ನಗರದಲ್ಲಿರುವ ಕೆರೆಗಳು ದಿನ ಬಳಕೆಗೆ ಎಷ್ಟು ಸೂಕ್ತ ಎಂಬ ವರದಿಯನ್ನು ಸಿದ್ಧಪಡಿಸಿದೆ. “ರಾಜ್ಯದಲ್ಲಿರುವ ಪ್ರಮುಖ ನದಿಗಳ ನೀರು ಸ್ನಾನಕ್ಕೆ ಯೋಗ್ಯವಲ್ಲ, ಈ ಎಲ್ಲಾ ನದಿಗಳು ಸಿ. ಮತ್ತು ಡಿ ವರ್ಗಕ್ಕೆ ಸೇರಿವೆ. ಬಿ ವರ್ಗದಲ್ಲಿರುವ ನದಿಗಳು ಸ್ನಾನಕ್ಕೆ ಯೋಗ್ಯವಾಗಿವೆ. ಸಿ ವರ್ಗದಲ್ಲಿರುವ ನದಿಗಳ ನೀರನ್ನು ಶುದ್ದೀಕರಣ ಮಾಡಿದ ನಂತರ ಕುಡಿಯಲು ಬಳಸಬೇಕು. ಹಾಗೂ ಡಿ ವರ್ಗಕ್ಕೆ ಸೇರಿರುವ ನದಿಗಳ ನೀರನ್ನು ವನ್ಯಜೀವಿ ಮತ್ತು ಮೀನುಗಾರಿಕೆಗೆ ಮಾತ್ರ ಬಳಸಬಹುದು” ಎಂದು ಮಂಡಳಿ ಹೇಳಿದೆ.
ಜನವರಿ’2019 – ಏಪ್ರಿಲ್’2019ರವರೆಗೆ ನದಿಗಳ ಗುಣಮಟ್ಟದ ವರದಿ

ಮಂಗಳೂರಿನ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಬಿ ವರ್ಗಕ್ಕೆ ಸೇರಿದೆ. ಇದು ಸ್ನಾನಕ್ಕೆ ಯೋಗ್ಯವಾಗಿದೆ, ಈ ಎರಡು ನದಿಗಳ ನೀರು, ಬೇರೆ ನದಿಗಳಿಗೆ ಹೋಲಿಸಿದರೆ ಉತ್ತಮವಾಗಿದೆ ಹಾಗೂ ಗುಣಮಟ್ಟದಲ್ಲಿ ಸ್ಥಿರವಾಗಿದೆ. ಮಂಡಳಿಯ ಏಪ್ರಿಲ್ 2019ರ ವರದಿಯ ಪ್ರಕಾರ ತುಂಗಭದ್ರಾ, ಕಾವೇರಿ, ಕಬಿನಿ, ಮಲಪ್ರಭಾ, ಭದ್ರಾ ನದಿಗಳು ಸಿ ವರ್ಗಕ್ಕೆ ಸೇರಿವೆ. ಈ ನದಿಗಳ ನೀರನ್ನು ಶುದ್ಧೀಕರಣವಿಲ್ಲದೆ ಕುಡಿಯಲು ಬಳಸಬಾರದು. ಕುಶಾಲನಗರದಲ್ಲಿ ಹರಿಯುತ್ತಿರುವ ಕಾವೇರಿ ನೀರು ಬಿ ವರ್ಗಕ್ಕೆ ಸೇರಿದ್ದರಿಂದ ಅದನ್ನು ಸ್ನಾನಕ್ಕೆ ಬಳಸಬಹುದು. ಇನ್ನು ಡಿ ವರ್ಗಕ್ಕೆ ಸೇರಿರುವ ಘಟಪ್ರಭಾ, ಅರ್ಕಾವತಿ, ಭೀಮ, ತುಂಗಾ, ಶಿಂಷಾ ಮತ್ತು ಕೃಷ್ಣಾ ನದಿಗಳ ನೀರನ್ನು ವನ್ಯಜೀವಿ ಮತ್ತು ಮೀನುಗಾರಿಕೆಗೆ ಮಾತ್ರ ಬಳಸಬೇಕು.ಯಗಚಿ, ಕಾವೇರಿ, ಕಬಿನಿ ಮತ್ತು ಕಾಳಿ ನದಿಗಳು ಕಳೆದ ಒಂದು ವರ್ಷದಿಂದ ಸಿ ವರ್ಗದಲ್ಲೇ ಉಳಿದುಕೊಂಡಿದೆ.
ಇನ್ನು ಬೆಂಗಳೂರಿನಲ್ಲಿರುವ ಕೆರೆಗಳ ಸ್ಥಿತಿಯಂತೂ ಚಿಂತಾಜನಕ. ಮಡಿವಾಳ ಕೆರೆ, ಬೆಳ್ಳಂದೂರು ಕೆರೆ, ಕೈಕೊಂಡನಹಳ್ಳಿ ಕೆರೆ, ಅಗರ ಕೆರೆ, ಸಿಂಗಸಂದ್ರ ಕೆರೆ, ಪರಪ್ಪನ ಅಗ್ರಹಾರ ಕೆರೆ, ವರ್ತೂರು ಕೆರೆ, ಕೆಂಪಾಬುದಿ ಕೆರೆ, ಯಡಿಯೂರು ಕೆರೆ, ಹಲಸೂರು ಕೆರೆ, ಸ್ಯಾಂಕಿ ಕೆರೆ ಇನ್ನೂ ಸಾಕಷ್ಟು ಕೆರೆಗಳು ಡಿ ವರ್ಗಕ್ಕೆ ಸೇರಿವೆ. ಸರ್ಕಾರ, ಕೆರೆಗಳ ಜವಾಬ್ದಾರಿಯನ್ನು ತೆಗೆದುಕೊಂಡು, ಯಾವಾಗ ಪುನರುಜ್ಜೀವನಗೊಳಿಸುತ್ತದೆ ಎಂಬುದು ದೊಡ್ಡ ಪ್ರಶ್ನೆ.
ಇವೆಲ್ಲದರ ಪರಿಣಾಮದಿಂದಲೇ ಹೈಕೋರ್ಟ್, “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಎಷ್ಟು ಕೆರೆಗಳಿವೆ ಎಂಬುದನ್ನು ಖಚಿತವಾಗಿ ಗುರುತಿಸಿ ಅವುಗಳ ಪುನರುಜ್ಜೀವನಗೊಳಿಸುವ ಜವಾಬ್ದಾರಿಯನ್ನು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆಗೆ (NEERI) ವಹಿಸಬೇಕು” ಎಂದು 17 ಜೂನ್ 2019 ರಂದು ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ. “ಕೆರೆಗಳು ಸರ್ಕಾರದ ಸ್ವತ್ತು. ಸರ್ಕಾರ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಕೆರೆಗಳನ್ನು ಅಭಿವೃದ್ಧಿಯ ಹೆಸರಿನಲ್ಲಿ ಹಾಳುಮಾಡುವುದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾಪತ್ತೆಯಾಗಿರುವ ಕೆರೆಗಳನ್ನು ಗುರುತಿಸಬೇಕು ಮತ್ತು ‘NEERI’ ಮೂರು ತಿಂಗಳಲ್ಲಿ ತನ್ನ ಅಧ್ಯಯನ ವರದಿಯನ್ನು ನೀಡಬೇಕು” ಎಂದು ಆದೇಶಿಸಿದೆ. ಹೀಗಾಗಿ, ಸರ್ಕಾರ ಈ ನದಿಗಳ ನೀರನ್ನು ಬಳಸುವುದಕ್ಕೆ ಕನಿಷ್ಠ ಮಟ್ಟದ ಹಿತಾಸಕ್ತಿಯನ್ನು ತೋರಬೇಕು.
ನೂರಾರು ಕೆರೆಗಳು ಇದ್ದ ಕಡೆಯಲ್ಲಿ ವಸತಿ ಕಟ್ಟಗಳು ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲು ಸರ್ಕಾರ ಅನುಮತಿಯನ್ನು ಕೊಟ್ಟಿದ್ದರಿಂದಲೇ ನಗರವು ನೀರಿಗಾಗಿ ಸಾಕಷ್ಟು ಸಮಸ್ಯೆಯನ್ನು ಎದುರಿಸುತ್ತಿದೆ. ಇನ್ನು ಉಳಿದಿರುವ ನದಿ ಪಾತ್ರದ ಭೂಮಿಯನ್ನು ಖಾಸಗಿ ಸಂಸ್ಥೆಗಳಿಗೆ ಮತ್ತು ಕಟ್ಟಡ ನಿರ್ಮಾಣಗಳಿಗೆ ಅನುಮತಿಯನ್ನು ಕೊಡದೆ, ನ್ಯಾಯಲಯದ ಆದೇಶದಂತೆ ಅದರ ಪುನರುಜ್ಜೀವನಗೊಳಿಸಲು ಸರ್ಕಾರ ಮುಂದಾಗಬೇಕು. ದಿನದಿಂದ ದಿನಕ್ಕೆ ಸಾವಿರಾರು ಮಂದಿ ಬೆಂಗಳೂರಿಗೆ ಆಗಮಿಸುತ್ತಲೇ ಇದ್ದಾರೆ. 90ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರದಲ್ಲಿ, ಬೆಂಗಳೂರಿನ ಯಾವ ಕೆರೆಗಳು ಜನರ ದಿನನಿತ್ಯ ಬಳಕೆಗೂ ಉಪಯೋಗಕ್ಕೆ ಬಾರದೇ ಇರುವುದು ನಗರಕ್ಕೆ ಒದಗಿರುವ ದೊಡ್ಡ ದುರಂತ.
ನಾವೆಲ್ಲರೂ ಅಭಿವೃದ್ಧಿ ಎಂಬ ರೈಲಿನ ಹಿಂದೆ ಓಡುತ್ತಿದ್ದೇವೆ ವಿನಃ, ಪರಿಸರವನ್ನು ಸಂರಕ್ಷಿಸಬೇಕು ಹಾಗೂ ಆ ಪರಿಸರದೊಳಗೆ ಜೀವಿಸಬೇಕು ಎಂಬ ಮನೋಭಾವನೆಯನ್ನು ಬೆಳೆಸಿಕೊಳ್ಳವುದರಲ್ಲಿ ವಿಫಲವಾಗಿದ್ದೇವೆ. ಅಲ್ಲದೇ ರಾಜ್ಯದಲ್ಲಿ, ಅರಣ್ಯ ಅಧಿಕಾರಿಗಳೇ ಮರಗಳನ್ನು ಕಡಿಯುವುದಕ್ಕೆ ಆದೇಶ ಕೊಡುತ್ತಿರುವ ಸಮಾಜದೊಳಗೆ ನಾವು ಬದುಕುತ್ತಿದ್ದೇವೆ. ಮಾತಿಗೂ ಮುಂಚೆ “ಸರ್ಕಾರವು ಪರಿಸರ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿವೆ” ಎಂದು ಹೇಳುವ ಸಚಿವರು, ಪರಸರವನ್ನು ನಾಶ ಮಾಡಿ, ಅದರ ಹೆಸರಿನಲ್ಲಿ ದೊಡ್ಡ ದೊಡ್ಡ ಕಾರ್ಖಾನೆಗಳನ್ನು ತೆರೆಯುತ್ತಲೇ ಇದ್ದಾರೆ. “ಸರ್ಕಾರಿ ಜಾಗದಲ್ಲಿ ವ್ಯವಸಾಯ ಮಾಡುವುದಕ್ಕೆ ನಮಗೆ ಸ್ವಲ್ಪ ಜಾಗವನ್ನು ಕೊಡಿ” ಎಂಬ ರೈತರ ಕೂಗನ್ನು ಕೇಳಿಸಿಕೊಳ್ಳದ ಸರ್ಕಾರ, ಉದ್ಯಮ ನಡೆಸಲು ಖಾಸಗಿ ಸಂಸ್ಥೆಗಳಿಗೆ ಸಾವಿರಾರು ಎಕರೆ ಜಾಗವನ್ನು ಮಾರಾಟ ಮಾಡುತ್ತಿರುವುದು ವಿಪರ್ಯಾಸ.