ಅತ್ತ ದೇಶ ಆರ್ಥಿಕ ಕುಸಿತದ ಭೀತಿ ಎದುರಿಸುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ತೆರಿಗೆ ಸಂಗ್ರಹ ಕುಸಿತವಾಗಿದೆ. ರಾಜ್ಯ ಆರ್ಥಿಕ ಸಂಕಷ್ಟದತ್ತ ಸಾಗುತ್ತಿದೆ ಎಂಬ ಆತಂಕದ ವರದಿಗಳು ಹೊರಬರುತ್ತಿವೆ. ಇದರ ಬೆನ್ನಲ್ಲೇ ಇನ್ನೇನು ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅಭಿವೃದ್ಧಿ ಕೆಲಸಗಳು ನೆನೆಗುದಿಗೆ ಬೀಳಲಿವೆ ಎಂಬ ಆತಂಕವೂ ಕಾಡಲಾರಂಭಿಸಿದೆ. ಆದರೆ, ಪರಿಸ್ಥಿತಿ ಅಷ್ಟೊಂದು ಕಳವಳಕಾರಿಯಾಗಿದೆಯೇ?
ಇಲ್ಲ ಎನ್ನುತ್ತವೆ ಆರ್ಥಿಕ ಇಲಾಖೆ ಮೂಲಗಳು. ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಬೆಳವಣಿಗೆ ಕಂಡು ಬಂದಿಲ್ಲ ಎಂಬುದನ್ನು ಹೊರತುಪಡಿಸಿ ಅಂತಹ ಕುಸಿತವೇನೂ ಆಗಿಲ್ಲ. ಆದರೆ, ವೆಚ್ಚ ಹೆಚ್ಚಾಗುತ್ತಿರುವ ಕಾರಣ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಕಠಿಣ ಎನ್ನಬಹುದು. ಕೇಂದ್ರದಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಪರಿಹಾರ ಪೂರ್ಣ ಪ್ರಮಾಣದಲ್ಲಿ ಬಾರದ ಕಾರಣ ತೆರಿಗೆ ಸಂಗ್ರಹ ಕುಸಿತವಾದಂತೆ ಕಂಡು ಬರುತ್ತಿದೆ. ಪ್ರತಿ ವರ್ಷದಂತೆ ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಈ ಪರಿಹಾರ ಬರಲಿದ್ದು, ಆಗ ತೆರಿಗೆ ಸಂಗ್ರಹದ ನಿಜವಾದ ಅಂಕಿ ಅಂಶಗಳು ಲಭ್ಯವಾಗಲಿವೆ. ಇದರ ಜತೆಗೆ ಕೇಂದ್ರದಿಂದ ನಿರೀಕ್ಷಿತ ಅನುದಾನ ಮತ್ತು ನೆರವು ಬಂದರೆ ಎಲ್ಲಾ ಸಮಸ್ಯೆಗಳು ಬಗೆಹರಿಯಲಿವೆ ಎಂದು ಹೇಳುತ್ತಾರೆ.
ಜೂನ್ ಅಂತ್ಯಕ್ಕೆ ಕೊನೆಗೊಂಡ 2019-20ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ರಾಜ್ಯದ ಒಟ್ಟಾರೆ ರಾಜಸ್ವ ಸ್ವೀಕೃತಿ 40,767 ಕೋಟಿ ರೂ. ಇದೆ. ಇದರಲ್ಲಿ ಸ್ವಂತ ತೆರಿಗೆ (ವಾಣಿಜ್ಯ ತೆರಿಗೆ, ಅಬಕಾರಿ, ಮೋಟಾರು ವಾಹನ ತೆರಿಗೆ, ಮುದ್ರಾಂಕ ಮತ್ತು ನೋಂದಣಿ ಶುಲ್ಕ ಮತ್ತು ಇತರೆ) 24,728 ಕೋಟಿ ರೂ. ಇದೆ. ಜತೆಗೆ ತೆರಿಗೆಯೇತರ ರಾಜಸ್ವ 1,368 ಕೋಟಿ ರೂ. ಇದ್ದರೆ, ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆ ರೂಪದಲ್ಲಿ 7,005 ಕೋಟಿ ರೂ., ಸಹಾಯಾನುದಾನದ ರೂಪದಲ್ಲಿ 7,667 ಕೋಟಿ ರೂ. ಬಂದಿದೆ. 2018ರ ಜೂನ್ ಅಂತ್ಯಕ್ಕೆ ಒಟ್ಟಾರೆ ತೆರಿಗೆ ರಾಜಸ್ವ 35,703 ಕೋಟಿ ರೂ. ಆಗಿತ್ತು. ಅಂದರೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 5,065 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ. 2018ರ ಜೂನ್ ಅಂತ್ಯಕ್ಕೆ ಒಟ್ಟು ತೆರಿಗೆ ಸಂಗ್ರಹ ಗುರಿಯ ಶೇ. 21.5ರಷ್ಟು ತೆರಿಗೆ ಸಂಗ್ರಹವಾಗಿದ್ದರೆ, 2019ರ ಜೂನ್ ಅಂತ್ಯಕ್ಕೆ ಒಟ್ಟಾರೆ ಗುರಿಯ ಶೇ. 22.4ರಷ್ಟು ತೆರಿಗೆ ಸಂಗ್ರಹಿಸಲಾಗಿದೆ.
ಆದಾಯ ಸಂಗ್ರಹದ ಪ್ರಮುಖ ಮೂಲವಾದ ವಾಣಿಜ್ಯ ತೆರಿಗೆ, ಅಬಕಾರಿ, ಮೋಟಾರು ವಾಹನ ತೆರಿಗೆ, ಮುದ್ರಾಂಕ ಮತ್ತು ನೋಂದಣಿ ಶುಲ್ಕ ಮೂಲಕ ಕಳೆದ ವರ್ಷಕ್ಕಿಂತ ಹೆಚ್ಚು ಆದಾಯ ಬಂದಿದೆ.

ಹೀಗಾಗಿ, ಆದಾಯ ಸಂಗ್ರಹದಲ್ಲಿ ಕುಸಿತ ಕಂಡು ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಜುಲೈನಿಂದ ತೆರಿಗೆ ಸಂಗ್ರಹ ಕಾರ್ಯ ಚುರುಕುಗೊಂಡಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಈ ಕುರಿತು ಸ್ಪಷ್ಟ ಮಾಹಿತಿ ಸಿಗಲಿದೆ. ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಎದುರಾಗುವಂತಹ ಪರಿಸ್ಥಿತಿ ಉದ್ಭವವಾಗಿಲ್ಲ ಎಂಬುದು ಆರ್ಥಿಕ ಇಲಾಖೆ ಅಧಿಕಾರಿಗಳ ಹೇಳಿಕೆ.
ಕೇಂದ್ರದಿಂದ ನಿರೀಕ್ಷಿತ ತೆರಿಗೆ ಹಂಚಿಕೆ ಬಂದಿಲ್ಲ
ತೆರಿಗೆ ಹಂಚಿಕೆಯಲ್ಲಿ ಕೇಂದ್ರದಿಂದ ನಿರೀಕ್ಷಿತ ಹಣ ಬಂದಿಲ್ಲ. 2018-19ನೇ ಸಾಲಿನಲ್ಲಿ ತೆರಿಗೆ ಹಂಚಿಕೆ 36,215 ಕೋಟಿ ರೂ. ಪೈಕಿ ಜೂನ್ ಅಂತ್ಯಕ್ಕೆ ಕೇಂದ್ರದಿಂದ ತೆರಿಗೆ ಹಂಚಿಕೆ ರೂಪದಲ್ಲಿ 7,355 ಕೋಟಿ ರೂ. ಬಂದಿತ್ತು. 2019-20ನೇ ಸಾಲಿನಲ್ಲಿ ಒಟ್ಟು ತೆರಿಗೆ ಹಂಚಿಕೆ 39,806 ಕೋಟಿ ರೂ. ಪೈಕಿ ಜೂನ್ ಅಂತ್ಯಕ್ಕೆ 7,005 ಕೋಟಿ ರೂ. ಮಾತ್ರ ಬಂದಿದೆ. ಅಂದರೆ, ಕಳೆದ ವರ್ಷಕ್ಕಿಂತ ಈ ವರ್ಷ ತೆರಿಗೆ ಹಂಚಿಕೆ ಪ್ರಮಾಣ 3,500 ಕೋಟಿ ರೂ. ಹೆಚ್ಚಾಗಿದ್ದರೂ ಈ ಬಾರಿ ಕಳೆದ ವರ್ಷಕ್ಕಿಂತ 350 ಕೋಟಿ ರೂ. ಕಡಿಮೆ ಹಣ ಕೇಂದ್ರದಿಂದ ಬಂದಿದೆ. ನಿರೀಕ್ಷೆಯಂತೆ 7,800 ಕೋಟಿ ರೂ. ಬರಬೇಕಿತ್ತು. ಅಂದರೆ, ನಿರೀಕ್ಷೆಗಿಂತ 800 ಕೋಟಿ ರೂ. ಕಡಿಮೆ ಹಣ ಕೇಂದ್ರದಿಂದ ಬಂದಿದೆ. ಇದು ಸ್ವಲ್ಪ ಮಟ್ಟಿನ ಸಮಸ್ಯೆ ತಂದೊಂಡ್ಡಿದೆ. ಆದರೆ, ಇಂದಲ್ಲಾ ನಾಳೆ ಕೇಂದ್ರ ಸರ್ಕಾರ ಹಣ ಕೊಡಲೇ ಬೇಕು ಮತ್ತು ಕೊಡುತ್ತದೆ. ಬರುವುದು ಸ್ವಲ್ಪ ವಿಳಂಬವಾಗಬಹುದಷ್ಟೆ ಎಂಬುದು ಅಧಿಕಾರಿಗಳು ನೀಡುವ ಸಮಜಾಯಿಷಿ. ಆದರೆ, ಇನ್ನೊಂದೆಡೆ ಜೂನ್ ಅಂತ್ಯಕ್ಕೆ ಕೇಂದ್ರದಿಂದ ಸಹಾಯಾನುದಾನದಲ್ಲಿ ಸಾಕಷ್ಟು ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ 1,900 ಕೋಟಿ ರೂ. ಹೆಚ್ಚುವರಿ ರಾಜ್ಯಕ್ಕೆ ಬಂದಿದೆ.

ಹಾಗಿದ್ದರೆ ಆತಂಕವೇನು?
ಆರ್ಥಿಕ ಸಂಕಷ್ಟದ ಭೀತಿ ಎದುರಾಗುವುದಿಲ್ಲ ಎಂದಾದರೆ, ಅತಿ ಅಗತ್ಯ ಕಾಮಗಾರಿಗಳನ್ನು ಮಾತ್ರ ಆದ್ಯತೆ ಮೇಲೆ ಕೈಗೆತ್ತಿಕೊಳ್ಳಬೇಕು ಎಂದು ಆರ್ಥಿಕ ಇಲಾಖೆ ಇತರೆ ಇಲಾಖೆಗಳಿಗೆ ಆದೇಶ ನೀಡಿದ್ದೇಕೆ ಎಂಬ ಪ್ರಶ್ನೆ ಎದುರಾಗುತ್ತದೆ. ಇದಕ್ಕೆ ಅಧಿಕಾರಿಗಳು ನೀಡುವ ಉತ್ತರ, ‘ಇದು ತಾತ್ಕಾಲಿಕ ಆದೇಶವಷ್ಟೆ. ನೆರೆ ಪರಿಹಾರ ಕಾಮಗಾರಿ ಕೈಗೊಳ್ಳಬೇಕಾಗಿರುವುದರಿಂದ ಮತ್ತು ಸಂತ್ರಸ್ತರಿಗೆ ಪರಿಹಾರದ ಹಣ ನೀಡಬೇಕಾಗಿರುವುದರಿಂದ ಬೊಕ್ಕಸದ ಮೇಲೆ ಹೊರೆಯಾಗದಿರಲಿ ಎಂಬ ಕಾರಣಕ್ಕೆ ಈ ಆದೇಶ ಹೊರಡಿಸಲಾಗಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಬಜೆಟ್ ನಲ್ಲಿ ಘೋಷಿಸಿದ ಮತ್ತು ಈಗಾಗಲೇ ಉದ್ದೇಶಿಸಿರುವ ಎಲ್ಲಾ ಕೆಲಸಗಳನ್ನು ಆರಂಭಿಸಲಾಗುವುದು’ ಎಂಬುದು.
ರೈತರ ಸಾಲ ಮನ್ನಾ ಯೋಜನೆಗೆ 10 ಸಾವಿರ ಕೋಟಿ ರೂಪಾಯಿಗೂ ಅಧಿಕ ಅನುದಾನ ಬೇಕು. ಇದರ ಜತೆಗೆ ಭಾರೀ ಮಳೆ ಮತ್ತು ಜಲ ಪ್ರವಾಹದಿಂದ ಸುಮಾರು 32 ಸಾವಿರ ಕೋಟಿ ರೂ. ಹಾನಿಯಾಗಿದೆ. ತುರ್ತು ಪರಿಹಾರ ಕಾಮಗಾರಿಗಳಿಗೆ ಸುಮಾರು 4,000 ಕೋಟಿ ರೂ. ಅಗತ್ಯವಿದೆ. ಈ ಮೊತ್ತ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. 4000 ಕೋಟಿ ರೂ. ಬಾರದೇ ಇದ್ದರೂ 2,000ದಿಂದ 2,500 ಕೋಟಿ ರೂ. ನೆರವು ಇನ್ನು ತಿಂಗಳೊಳಗೆ ರಾಜ್ಯಕ್ಕೆ ಬಂದು ತಲುಪುವ ನಿರೀಕ್ಷೆಯಿದೆ. ಅಷ್ಟರ ವೇಳೆಗೆ ತೆರಿಗೆ ಸಂಗ್ರಹ ಹೆಚ್ಚಾಗಲಿದೆ. ಒಂದೊಮ್ಮೆ ಕೇಂದ್ರದಿಂದ ನಿರೀಕ್ಷಿತ ತೆರಿಗೆ ಹಂಚಿಕೆ ಮತ್ತು ಪರಿಹಾರ ಬಾರದೇ ಇದ್ದರೆ ಮಾತ್ರ ಆರ್ಥಿಕವಾಗಿ ಸಮಸ್ಯೆ ಎದುರಾಗಬಹುದು. ಆದರೆ, ಸಂಕಷ್ಟದ ಪರಿಸ್ಥಿತಿ ಬರಲಿಕ್ಕಿಲ್ಲ ಎನ್ನುತ್ತಾರೆ.
ಈ ಮಧ್ಯೆ ನೆರೆ ಪರಿಹಾರಕ್ಕಾಗಿ ಸಾರ್ವಜನಿಕರು, ಸಂಘ ಸಂಸ್ಥೆಗಳು ಸೇರಿದಂತೆ ವಿವಿಧ ಮೂಲಗಳಿಂದ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಸಾಮಾಜಿಕ ಹೊಣೆಗಾರಿಕೆಯಡಿ ಕಾರ್ಪೋರೇಟ್ ಸಂಸ್ಥೆಗಳಿಂದಲೂ (ಸಿಎಸ್ಆರ್ ನಿಧಿ) ಹೆಚ್ಚಿನ ನೆರವು ಕೋರಲಾಗಿದೆ. ಈ ಮೂಲಗಳಿಂದ ನಿರೀಕ್ಷಿತ ಹಣ ಸಂಗ್ರಹವಾದರೆ ಸಮಸ್ಯೆಯಿಲ್ಲ. ಇಲ್ಲವಾದಲ್ಲಿ ವರ್ಷಾಂತ್ಯಕ್ಕೆ ಬಹುತೇಕ ಇಲಾಖೆಗಳು ಅನುದಾನದ ಕೊರತೆ ಎದುರಿಸಬೇಕಾಗುತ್ತದೆ ಎಂಬ ಮಾತುಗಳು ಸರ್ಕಾರದ ಮಟ್ಟದಲ್ಲಿ ಕೇಳಿಬರುತ್ತಿವೆ.