ರಾಜಿನಾಮೆ ನೀಡುತ್ತಿರುವ ಶಾಸಕರ ಸಂಖ್ಯೆ ಮೈತ್ರಿ ಸರ್ಕಾರವನ್ನು ಉರುಳಿಸುವ ಹಂತಕ್ಕೆ ತಲುಪುತ್ತಿದ್ದಂತೆ ರಾಜಿನಾಮೆ ಹಿಂಪಡೆಯುವಂತೆ ಶಾಸಕರನ್ನು ಮನವೊಲಿಸುವ ಕಾರ್ಯ ಕಾಂಗ್ರೆಸ್ ಪಕ್ಷದಲ್ಲಿ ತೀವ್ರಗೊಂಡಿದ್ದು, ಘಟಾನುಘಟಿ ನಾಯಕರೇ ಮಧ್ಯಪ್ರವೇಶಿಸಿದ್ದಾರೆ. ಇನ್ನೊಂದೆಡೆ, ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದ್ದರೂ ಅದೆಲ್ಲವನ್ನೂ ಅದುಮಿಟ್ಟುಕೊಂಡು ಶಾಸಕರ ರಾಜಿನಾಮೆ ಅಂಗೀಕಾರವಾಗುವವರೆಗೆ ಮೌನವಾಗಿರಲು ಬಿಜೆಪಿ ಮುಂದಾಗಿದೆ. ಇದರಿಂದಾಗಿ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಪ್ರಹಸನ ಕ್ಷಣಕ್ಕೊಂದು ತಿರುವು ಪಡೆಯುವಂತಾಗಿದ್ದು, ಶಾಸಕರ ಮನವೊಲಿಸುವ ಕಾರ್ಯದಲ್ಲಿ ಕಾಂಗ್ರೆಸ್ ಯಶಸ್ವಿಯಾಗುವುದೇ ಎಂಬುದರ ಮೇಲೆ ಸರ್ಕಾರದ ಭವಿಷ್ಯ ನಿರ್ಧಾರವಾಗಲಿದೆ.
ಶಾಸಕರ ರಾಜಿನಾಮೆ ಬೆದರಿಕೆ ಬ್ಲಾಕ್ ಮೇಲ್ ತಂತ್ರ ಎಂದು ಶನಿವಾರದವರೆಗೆ ಸುಮ್ಮನಿದ್ದ ಕಾಂಗ್ರೆಸ್ ನಾಯಕರು ಇದೀಗ ಸರ್ಕಾರದ ಬುಡ ಅಲ್ಲಾಡುತ್ತಿರುವುದರಿಂದ ರಾಜಿನಾಮೆ ನೀಡಿದವರನ್ನು ಮನವೊಲಿಸಲು ಪ್ರಯತ್ನಿಸುವುದರ ಜತೆಗೆ ಇನ್ನಷ್ಟು ಶಾಸಕರು ಅದೇ ಹಾದಿ ಹಿಡಿಯದಂತೆ ನೋಡಿಕೊಳ್ಳಲು ಶತ ಪ್ರಯತ್ನ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಇವೆಲ್ಲಕ್ಕೂ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರೇ ಕಾರಣ ಎಂದು ಇತರ ಕಾಂಗ್ರೆಸ್ ನಾಯಕರು ಈ ಪ್ರಕರಣದಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನೂ ಶುರುಹಚ್ಚಿಕೊಂಡಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಮಾತಿಗೆ ರಾಹುಲ್ ಗಾಂಧಿ ಮನ್ನಣೆ ನೀಡದೆ ಇದ್ದಾಗ ಮತ್ತು ಕಾಂಗ್ರೆಸ್ ನಾಯಕರ ಒತ್ತಡವನ್ನು ನಿರ್ಲಕ್ಷಿಸಿ ಇಬ್ಬರು ಪಕ್ಷೇತರರಿಗೆ ಮಾತ್ರ ಸಚಿವ ಸ್ಥಾನ ನೀಡಿದಾಗಲೇ ಮೈತ್ರಿ ಸರ್ಕಾರದ ಪತನಕ್ಕೆ ಮುಹೂರ್ತ ಫಿಕ್ಸ್ ಆಗಿತ್ತು.
ಆದರೆ, ಶಾಸಕರ ರಾಜಿನಾಮೆ ವಿಚಾರದಲ್ಲಿ ಸಿದ್ದರಾಮಯ್ಯ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಏಕೆಂದರೆ, ಈ ಸರ್ಕಾರ ಇಷ್ಟು ದಿನ ಉಳಿಯಲು ಕಾರಣವಾಗಿದ್ದೇ ಸಿದ್ದರಾಮಯ್ಯ. ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಮುನ್ನ ಮೂರ್ನಾಲ್ಕು ಬಾರಿ ಸರ್ಕಾರ ಉರುಳಿಸುವ ಪ್ರಯತ್ನ ನಡೆದು, ಅಸಮಾಧಾನಿತ ಶಾಸಕರು ರಾಜಿನಾಮೆಗೆ ಮುಂದಾದಾಗ ಅವರ ಮನವೊಲಿಸಿದ್ದು ಇದೇ ಸಿದ್ದರಾಮಯ್ಯ. ಆದರೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಹೀನಾಯ ಪ್ರದರ್ಶನದ ಬಳಿಕ ಮೈತ್ರಿ ಉಳಿಯುವುದು ಕಷ್ಟ ಎಂಬ ಮಾತು ಕೇಳಿಬಂದಿತ್ತು. ಇತಿಹಾಸದಲ್ಲೇ ಮೊದಲ ಬಾರಿ ಕಾಂಗ್ರೆಸ್ ಕೇವಲ ಒಂದು ಸ್ಥಾನ ಗಳಿಸಿದಾಗ ಈ ಮೈತ್ರಿ ಉಳಿದರೆ ಕಾಂಗ್ರೆಸ್ ಪರಿಸ್ಥಿತಿ ಇನ್ನಷ್ಟು ಹಾಳಾಗಬಹುದು, ಶಾಸಕರು ಗುಳೇ ಹೋಗಬಹುದು ಎಂಬುದು ಸ್ಪಷ್ಟವಾಗಿತ್ತು. ಫಲಿತಾಂಶದ ನಂತರ ಸಿದ್ದರಾಮಯ್ಯ ಅವರು ಈ ವಿಚಾರವನ್ನು ರಾಹುಲ್ ಗಾಂಧಿ ಅವರ ಗಮನಕ್ಕೂ ತಂದಿದ್ದರು. ಆದರೆ, ಸಿದ್ದರಾಮಯ್ಯ ಅವರ ಮೇಲಿನ ಸಿಟ್ಟಿನಿಂದಾಗಿ, ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರೊಂದಿಗೆ ಅಧಿಕಾರ ಹಂಚಿಕೊಂಡಿರುವ ಪ್ರಮುಖ ಕಾಂಗ್ರೆಸ್ ನಾಯಕರೇ ಸಿದ್ದರಾಮಯ್ಯ ಅವರ ಮಾತಿಗೆ ವಿರುದ್ಧ ಅಭಿಪ್ರಾಯವನ್ನು ರಾಹುಲ್ ಮುಂದೆ ಮಂಡಿಸಿದ್ದರು. ಹೀಗಾಗಿ ಅಧಿ`ಕಾರ ಕಳೆದುಕೊಳ್ಳಲು ಇಚ್ಛಿಸದ ರಾಹುಲ್, ಹೇಗಾದರೂ ಮಾಡಿ ಮೈತ್ರಿ ಮುಂದುವರಿಸಿ ಎಂದು ತಾಕೀತು ಮಾಡಿದ್ದರು. ಆಗ ಸಿದ್ದರಾಮಯ್ಯ ಅವರ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಂತಾಗಿತ್ತು.
ಪ್ರಸ್ತುತ ಯಾರೆಲ್ಲಾ ರಾಜಿನಾಮೆ ನೀಡಿದ್ದಾರೋ ಅವರೆಲ್ಲರೂ ಸಿದ್ದರಾಮಯ್ಯ ಅವರ ಆಪ್ತರು ಮತ್ತು ಈ ಆಪ್ತತೆಯ ಕಾರಣಕ್ಕಾಗಿಯೇ ಮೈತ್ರಿ ಸರ್ಕಾರದಲ್ಲಿ ನಿರ್ಲಕ್ಷಕ್ಕೆ ಒಳಗಾಗಿದ್ದವರು. ಯಾವಾಗ ಸಿದ್ದರಾಮಯ್ಯ ಅವರ ಮಾತನ್ನು ನಿರ್ಲಕ್ಷಿಸಿದ ರಾಹುಲ್ ಮೈತ್ರಿ ಮುಂದುವರಿಸಲು ಸೂಚಿಸಿದರೋ ಆಗಲೇ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಕಾರಣಕ್ಕೆ ನಿರ್ಲಕ್ಷಕ್ಕೊಳಗಾಗಿದ್ದ ಶಾಸಕರು ಸರ್ಕಾರಕ್ಕೆ ಮುಹೂರ್ತ ಇಡಲು ನಿರ್ಧರಿಸಿದ್ದರು. ಆದರೆ, ಅವರನ್ನು ಒಟ್ಟು ಸೇರಿಸುವುದೇ ಒಂದು ಸವಾಲಾಗಿತ್ತು.

ಪಕ್ಷೇತರರಿಗೆ ಸಚಿವ ಸ್ಥಾನ ನೀಡಿದಾಗಲೇ ಮುಹೂರ್ತ ಫಿಕ್ಸ್
ಕೆಲವು ಶಾಸಕರೊಂದಿಗೆ ಸೇರಿ ಮೂರ್ನಾಲ್ಕು ಬಾರಿ ಸರ್ಕಾರ ಕೆಡವಲು ಯತ್ನಿಸಿ ವಿಫಲವಾಗಿದ್ದ ರಮೇಶ್ ಜಾರಕಿಹೊಳಿ ಒಳಗೊಳಗೇ ತಮ್ಮ ಪ್ರಯತ್ನ ಮುಂದುವರಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ಕಾರ್ಯತಂತ್ರಗಳನ್ನು ಬಹಿರಂಗಪಡಿಸುತ್ತಿದ್ದ ಒಬ್ಬೊಬ್ಬರನ್ನೇ ದೂರವಿಟ್ಟು ಗಟ್ಟಿಯಾಗಿ ಉಳಿದುಕೊಂಡವರನ್ನು ಮಾತ್ರ ನೆಚ್ಚಿಕೊಂಡು ಪ್ರಯತ್ನ ತೀವ್ರಗೊಳಿಸಿದ್ದರು. ಲೋಕಸಭೆ ಚುನಾವಣೆ ಬಳಿಕ ಮತ್ತೆ ಅತೃಪ್ತಿ ಹೆಚ್ಚಿದಾಗ ಮೂರ್ನಾಲ್ಕು ಮಂದಿಗೆ ಸಚಿವ ಸ್ಥಾನ ನೀಡಿ ಸಮಸ್ಯೆ ಬಗೆಹರಿಸಿಕೊಳ್ಳುವ ಬಗ್ಗೆ ಮಿತ್ರಪಕ್ಷಗಳ ಮಧ್ಯೆ ಚರ್ಚೆಯಾಗಿತ್ತು. ಆದರೆ, ಇದಕ್ಕೆ ಒಪ್ಪದ ಜೆಡಿಎಸ್ ವರಿಷ್ಠರು ಮತ್ತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಇಬ್ಬರು ಪಕ್ಷೇತರರಿಗೆ ಮಾತ್ರ ಸಚಿವ ಸ್ಥಾನ ನೀಡಿ ಕೈತೊಳೆದುಕೊಂಡಿದ್ದರು. ಈ ಮೂಲಕ ಸರ್ಕಾರ ಬೇಕಿದ್ದರೆ ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮದು ಎಂಬ ಸಂದೇಶವನ್ನು ಕಾಂಗ್ರೆಸ್ ಪಕ್ಷಕ್ಕೆ ಕಳುಹಿಸಿದ್ದರು. ಮುಖ್ಯಮಂತ್ರಿಗಳ ಈ ಕ್ರಮ ಕಾಂಗ್ರೆಸ್ ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಸೇರಿದಂತೆ ಕೆಲವರು ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಇತ್ತ ಜೆಡಿಎಸ್ ಪಕ್ಷದಲ್ಲೂ ಅಸಮಾಧಾನ ಹೊಗೆಯಾಡತೊಡಗಿತು. ಆಗಲೇ ಸರ್ಕಾರ ಕೆಡವಲು ಮುಹೂರ್ತ ಪಿಕ್ಸ್ ಮಾಡಲಾಯಿತು. ರಮೇಶ್ ಜಾರಕಿಹೊಳಿ ಅವರಿಗೆ ರಾಮಲಿಂಗಾರೆಡ್ಡಿ, ಎಚ್.ವಿಶ್ವನಾಥ್ ಮತ್ತಿತರರ ಸಹಕಾರ ಸಿಕ್ಕಿತು.
ಇದರ ಪರಿಣಾಮ ಆನಂದ್ ಸಿಂಗ್ ರಾಜೀನಾಮೆ. ಆನಂದ್ ಸಿಂಗ್ ರಾಜೀನಾಮೆ ನೀಡುತ್ತಿದ್ದಂತೆ ಕಾಂಗ್ರೆಸ್ ನಾಯಕರು ಅವರ ಆಪ್ತರ ಬೆನ್ನು ಬಿದ್ದರು. ಈ ಅವಕಾಶವನ್ನೇ ಸದುಪಯೋಗಪಡಿಸಿಕೊಂಡ ರಮೇಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ ಮತ್ತು ಎಚ್. ವಿಶ್ವನಾಥ್ ಪ್ರತ್ಯೇಕ ಕಾರ್ಯಾಚರಣೆಗಳ ಮೂಲಕ ಶಾಸಕರನ್ನು ಸೇರಿಸಿ ರಾಜೀನಾಮೆಗೆ ಶನಿವಾರದ ದಿನಾಂಕ ನಿಗದಿಪಡಿಸಿದ್ದರು. ಅಷ್ಟೇ ಅಲ್ಲ, ಇದು ಎಲ್ಲಿಯೂ ಬಹಿರಂಗವಾಗದಂತೆ ನೋಡಿಕೊಂಡರು. ಈ ಎಲ್ಲಾ ಮಾತುಕತೆ ವೇಳೆ ಬಿಜೆಪಿ ನಾಯಕರ ಜತೆ ನೇರ ಸಂಪರ್ಕ ಹೊಂದಿದ್ದವರು ರಮೇಶ್ ಜಾರಕಿಹೊಳಿ, ರಾಮಲಿಂಗಾರೆಡ್ಡಿ ಮತ್ತು ಎಚ್.ವಿಶ್ವನಾಥ್ ಮಾತ್ರ. ಇವರು ಯಾರ ಜತೆಗೆಲ್ಲಾ ಮಾತುಕತೆ ನಡೆಸುತ್ತಿದ್ದಾರೆ ಎಂಬುದು ಅವರ ತಂಡದ ಸದಸ್ಯರಿಗೇ ಗೊತ್ತಾಗದಂತೆ ಕಾರ್ಯಾಚರಣೆಯನ್ನು ಗೌಪ್ಯವಾಗಿಡಲಾಗಿತ್ತು. ಹೀಗಾಗಿ ತಮಗೆ ಆಪ್ತರಾಗಿದ್ದವರೇ ಸರ್ಕಾರ ಕೆಡವಲು ಒಂದಾಗಿರುವುದು ಸಿದ್ದರಾಮಯ್ಯ ಅವರ ಗಮನಕ್ಕೂ ಬರಲಿಲ್ಲ.
ಖರ್ಗೆ ಬಂದರೂ ಸರ್ಕಾರ ಉಳಿಯುವುದು ಕಷ್ಟ
ಮುಖ್ಯಮಂತ್ರಿ ಸ್ಥಾನಕ್ಕೆ ಎಚ್. ಡಿ. ಕುಮಾರಸ್ವಾಮಿ ರಾಜಿನಾಮೆ ನೀಡಿ ಸರ್ಕಾರ ಉರುಳುವುದನ್ನು ತಪ್ಪಿಸಲು ಇದೀಗ ನಾನಾ ರೀತಿಯ ಕಾರ್ಯತಂತ್ರಗಳನ್ನು ಹೆಣೆಯಲಾಗುತ್ತಿದೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾಗಲು ಯಾವುದೇ ಕಾರಣಕ್ಕೂ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಸೇರಿದಂತೆ ಆ ಪಕ್ಷದ ಮುಂಚೂಣಿ ನಾಯಕರು ಒಪ್ಪುವುದಿಲ್ಲ. ಹೀಗಾಗಿ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿದರೆ ಒಂದಷ್ಟು ಶಾಸಕರು ರಾಜಿನಾಮೆ ಹಿಂಪಡೆಯಬಹುದು, ಸರ್ಕಾರ ಉಳಿಸಿಕೊಳ್ಳಬಹುದು ಎಂಬ ಭರವಸೆಯನ್ನು ಕಾಂಗ್ರೆಸ್ ವಲಯದಿಂದ ಜೆಡಿಎಸ್ ವಲಯಕ್ಕೆ ನೀಡಲಾಗಿದೆ. ಆದರೆ, ಸರ್ಕಾರ ಇರಬೇಕಾದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರಬೇಕು. ಇಲ್ಲವಾದಲ್ಲಿ ನಿಮ್ಮ ದಾರಿ ನಿಮಗೆ, ನಮ್ಮ ದಾರಿ ನಮಗೆ ಎಂಬ ಸಂದೇಶವನ್ನು ದೇವೇಗೌಡರು ಈಗಾಗಲೇ ಕಾಂಗ್ರೆಸ್ ವರಿಷ್ಠರಿಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಮುಖ್ಯಮಂತ್ರಿ ಬದಲಾದರೂ ಸರ್ಕಾರ ಉಳಿಯುವುದು ಕಷ್ಟ ಎನ್ನುವಂತಾಗಿದೆ.
ಮತ್ತೆ ಮಸಿ ಮೆತ್ತಿಕೊಳ್ಳಲು ಸಿದ್ಧವಿಲ್ಲದ ಬಿಜೆಪಿ
ಮೈತ್ರಿ ಸರ್ಕಾರ ಉರುಳಿಸಿ ತಾನು ಸರ್ಕಾರ ರಚಿಸಲು ಒಂದು ವರ್ಷದಿಂದ ತುದಿಗಾಲಲ್ಲಿ ನಿಂತಿರುವ ಬಿಜೆಪಿ, 14 ಶಾಸಕರ ರಾಜಿನಾಮೆ ಬಳಿಕವೂ ತಕ್ಷಣಕ್ಕೆ ಮುನ್ನಲೆಗೆ ಬಂದು ಸರ್ಕಾರ ರಚಿಸುವ ಪ್ರಯತ್ನ ಮಾಡದೇ ಇರಲು ತೀರ್ಮಾನಿಸಿದೆ. ಈಗಾಗಲೇ ಮೂರ್ನಾಲ್ಕು ಬಾರಿ ಈ ಪ್ರಯತ್ನ ನಡೆಸಿ ಮುಖಕ್ಕೆ ಮಸಿ ಬಳಿದುಕೊಂಡಿದ್ದ ಬಿಜೆಪಿ ನಾಯಕರು ಮತ್ತೊಮ್ಮೆ ಅಂತಹ ಅಪಾಯಕ್ಕೆ ಸಿಲುಕುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಪ್ರಸ್ತುತ ರಾಜಿನಾಮೆ ನೀಡಿರುವ ಕಾಂಗ್ರೆಸ್ ಶಾಸಕರ ಪೈಕಿ ಬಹುತೇಕರು ಸಿದ್ದರಾಮಯ್ಯ ಅವರಿಗೆ ಆಪ್ತರು. ಸಿದ್ದರಾಮಯ್ಯ ಈ ಎಲ್ಲರ ಮುಂದೆ ಖುದ್ದಾಗಿ ಬಂದು ರಾಜಿನಾಮೆ ಹಿಂಪಡೆಯಿರಿ ಎಂದು ಹೇಳಿದರೆ ಅದನ್ನು ಸಾರಾಸಗಾಟಾಗಿ ತಿರಸ್ಕರಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಇನ್ನೊಂದೆಡೆ, ಟ್ರಬಲ್ ಶೂಟರ್ ಎಂದೇ ಹೇಳಲಾಗುತ್ತಿರುವ ಡಿ. ಕೆ. ಶಿವಕುಮಾರ್ ಕೂಡ ರಾಜಿನಾಮೆ ನೀಡಿದ ಶಾಸಕರನ್ನು ಸಂಪರ್ಕಿಸಿ ಮನವೊಲಿಸಲು ಪ್ರಯತ್ನಿಸಿದ್ದಾರೆ. ಕೆಪಿಸಿಸಿ ಉಸ್ತುವಾರಿ ಕೆ. ಸಿ. ವೇಣುಗೋಪಾಲ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ನಾಯಕರ ದಂಡೇ ಸರ್ಕಾರ ಉಳಿಸಿಕೊಳ್ಳಲು ಶತಾಯ-ಗತಾಯ ಪ್ರಯತ್ನ ಮಾಡುತ್ತಿದ್ದಾರೆ. ಒಂದೊಮ್ಮೆ ಇವರ ಮಾತಿಗೆ ಮಣಿದು ನಾಲ್ಕೈದು ಶಾಸಕರು ರಾಜಿನಾಮೆ ಹಿಂಪಡೆದರೆ ಸರ್ಕಾರ ಸೇಫ್. ಬಿಜೆಪಿ ಮತ್ತೆ ಮುಖಭಂಗ ಅನುಭವಿಸಬೇಕಾಗುತ್ತದೆ. ಹೀಗಾಗಿ ಶಾಸಕರ ರಾಜಿನಾಮೆ ಅಂಗೀಕಾರವಾಗಿ ಸರ್ಕಾರ ಅಲ್ಪಮತಕ್ಕೆ ಕುಸಿಯುವವರೆಗೆ ಸುಮ್ಮನಿರಿ ಎಂಬ ಸಂದೇಶ ಬಿಜೆಪಿ ವರಿಷ್ಠರಿಂದ ಬಂದಿದ್ದು, ಅದಕ್ಕಾಗಿಯೇ ಸರ್ಕಾರ ಪತನದ ಪ್ರಯತ್ನಗಳಿಗೂ ನಮಗೂ ಸಂಬಂಧವೇ ಇಲ್ಲ ಎಂದು ಬಿಜೆಪಿ ನಾಯಕರು ದೂರ ಉಳಿದ್ದಾರೆ.
ಇಂದು ಭಾನುವಾರವಾಗಿರುವುದರಿಂದ ಶಾಸಕರ ರಾಜಿನಾಮೆ, ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ವಿರಾಮ ಸಿಕ್ಕಿದ್ದು, ಸೋಮವಾರದಿಂದ ಮತ್ತೆ ಚಾಲನೆ ಸಿಗಲಿದೆ. ಅದು ಯಾವ ಹಂತ ತಲುಪುತ್ತದೆಯೋ ಕಾದು ನೋಡಬೇಕು.