ರಾಜಸ್ಥಾನದಲ್ಲಿನ ರಾಜಕೀಯ ಸ್ಥಿತಿಗತಿಗಳು ದಿನೇ ದಿನೇ ರೋಚಕ ತಿರುವನ್ನು ಪಡೆದುಕೊಳ್ಳುತ್ತಲೇ ಇವೆ. ಇತ್ತೀಚಿನ ಬೆಳವಣಿಗೆಯಲ್ಲಿ ಕಾಂಗ್ರೆಸ್‌ನಿಂದ ಅಪರೇಷನ್ ನಡೆಯುವ ಭೀತಿಯಿಂದ ಬಿಜೆಪಿ ತನ್ನ 12ಕ್ಕೂ ಹೆಚ್ಚು ಶಾಸಕರನ್ನು ಗುಜರಾತ್‌ಗೆ ಶಿಫ್ಟ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಕುರಿತು ವರದಿಯಾಗಿದೆ.
ಈಗಾಗಲೇ ಆರು ಜನ ಶಾಸಕರನ್ನು ಪೋರಬಂದರಿನಲ್ಲಿರುವ ರೆಸಾರ್ಟ್‌ಗೆ ಸ್ಥಳಾಂತರಿಸಿರುವ ಬಿಜೆಪಿ ನಾಯಕರು, ಇನ್ನೂ ಹನ್ನೆರಡು ಜನರನ್ನು ಸ್ಥಳಾಂತರಿಸುವ ಇರಾದೆಯನ್ನು ಹೊಂದಿದ್ದಾರೆ. ಕಳೆದ ಒಂದು ದಶಕದಲ್ಲಿ ರಾಜಸ್ಥಾನದ ರಾಜಕೀಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿದೆ.
“ಅಶೋಖ್ ಗೆಹ್ಲೋಟ್ ನೇತೃತ್ವ ಸರ್ಕಾರ ರಲ್ಲಾ ರೀತಿಯಲ್ಲೂ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳಲು ಪ್ರಯತ್ನ ಪಡುತ್ತಿದೆ. ನಮ್ಮ ಶಾಸಕರ ಮೇಲೂ ಸಾಕಷ್ಟು ಒತ್ತಡವನ್ನು ಹೇರುವ ಪ್ರಯತ್ನ ನಡೆಯುತ್ತಿದೆ. ಶಾಸಕರು ಅಹಮದಾಬಾದಿಗೆ ಅವರ ಇಷ್ಟದ ಪ್ರಕಾರ ಹೋಗಿದ್ದಾರೆ. ಬಹುಶಃ ಸೋಮನಾಥ ದೇವಸ್ಥಾನ ನೋಡಲು ಹೋಗಿರಬೇಕು,” ಎಂದು ರಾಜಸ್ಥಾನ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರೆಸಾರ್ಟ್‌ಗೆ ಸ್ಥಳಾಂತರವಾಗಿರುವ ರಾಜಕಾರಣಿಗಳಲ್ಲಿ ಹೆಚ್ಚಿನವರು ಮರ್ವಾರ್ ಮತ್ತು ಮೇವಾರ್ ಪ್ರದೇಶದವರು.
ಇನ್ನು, ಸಚಿನ್ ಪೈಲಟ್ ಅವರು ಕೂಡಾ ತಮ್ಮ ಮುಂದಿನ ನಡೆಯನ್ನು ಬಿಚ್ಚಿಡದಿದ್ದಿದ್ದು ಎರಡೂ ಪಕ್ಷದವರಿಗೆ ನುಂಗಲಾರದ ತುತ್ತಾಗಿದೆ. ಹಾಗಾಗಿ ಯಾವುದೇ ರೀತಿಯ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ತೊಂದರೆಯನ್ನು ಬಿಜೆಪಿ ತೆಗೆದುಕೊಳ್ಳುವ ಇಚ್ಚೆಯನ್ನು ಹೊಂದಿಲ್ಲ. ಆದಷ್ಟು ದೂರದಲ್ಲೇ ನಿಂತು ಆಟವನ್ನು ಗಮನಿಸಿ ನಂತರ ಅಖಾಡಕ್ಕಿಳಿಯುವ ಇರಾದೆ ಬಿಜೆಪಿಯದು ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಈಗಲೇ ಪಕ್ಷ ಬದಲಾವಣೆ ಮಾಡಿ ಶಾಸಕತ್ವವನ್ನು ಕಳೆದುಕೊಳ್ಳುವ ಧೈರ್ಯವನ್ನು ಸಚಿನ್ ಪೈಲಟ್ ಬಣದ ಶಾಸಕರೂ ಹೊಂದಿಲ್ಲ. ಏನೇ ನಿರ್ಧಾರವಿದ್ದರು ಅದನ್ನು ಆಗಸ್ಟ್ 11ಕ್ಕೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.