ಹಿಂದೆ ಎಂದೂ ಕಾಣದ ಮಹಾಮಳೆ ಮತ್ತು ಪ್ರವಾಹದಿಂದ ಕರ್ನಾಟಕದ ಜನ ಜನಜೀವನವೇ ಧ್ವಂಸವಾಗಿದೆ. ಅಭಿವೃದ್ದಿ ಮತ್ತು ಮೂಲಸೌಕರ್ಯಗಳ ದೃಷ್ಟಿಯಿಂದ ಮೊದಲೇ ಹಿಂದುಳಿದ ಪ್ರದೇಶವೆಂದು ತಲೆಪಟ್ಟಿ ಹೊಂದಿದ್ದ ಉತ್ತರ ಕರ್ನಾಟಕ, ಅಭಿವೃದ್ದಿ ದೃಷ್ಟಿಯಿಂದ ಸುಮಾರು 15-20 ವರ್ಷಗಳಷ್ಟು ಹಿಂದೆ ಹೋಗಿದೆ. ಈ ಹೊಡೆತಕ್ಕೆ ಸಿಕ್ಕಿದ ಜನ ತಮ್ಮ ಇವತ್ತಿನ ಊಟದ ಮತ್ತು ನಾಳಿನ ಜೀವನ ಹೇಗೆ ಎಂದು ಚಿಂತೆಯಲ್ಲಿದ್ದರೆ, ಅರ್ಧ ಸಚಿವ ಸಂಪುಟ ರಚನೆಯಿಂದ `ಅತೃಪ್ತಿಗೆ’ ಜಾರಿರುವ ಶಾಸಕರು ಬಿಜೆಪಿಯಲ್ಲಿ ಹೆಚ್ಚಿದರೆ, ಅಧಿಕಾರ ಕಳೆದುಕೊಂಡ ವ್ಯಥೆಯಲ್ಲಿ ಪ್ರತಿಪಕ್ಷಗಳಿವೆ. ನೈಸರ್ಗಿಕ ಪ್ರಕೋಪದಿಂದ ಜನ ತತ್ತರಿಸಿದ್ದರೂ, ರಾಜಕಾರಣಿಗಳು ಟೆಲಿಫೋನ್ ಕದ್ದಾಲಿಕೆಯ ಬಗ್ಗೆಯೇ ಮಾತನಾಡುತ್ತಾರೆ.
ಕಾಂಗ್ರೆಸ್/ಜೆಡಿಎಸ್ ಮೈತ್ರಿ ಸರಕಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಗಳಿಸುವಲ್ಲಿ ವಿಫಲವಾದ ಮೇಲೆ, ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹಲವಾರು ಕಾರಣಗಳಿಂದ ಸಚಿವ ಸಂಪುಟ ರಚನೆ ವಿಳಂಬವಾಯಿತು. ಆದರೀಗ, ಮಂತ್ರಿ ಪದವಿಯ ಮೇಲೆ ಕಣ್ಣಿಟ್ಟು ಕುಳಿತಿದ್ದ ಹಲವು ಶಾಸಕರಿಗೆ ನಿರಾಸೆಯಾಗಿದೆ. ಹೀಗಾಗಿ, ಬಿಜೆಪಿಯ ಏಕವ್ಯಕ್ತಿ ಮಂತ್ರಿ ಮಂಡಲದ ಯಡಿಯೂರಪ್ಪ, ಮೊದಲು ನೈಸರ್ಗಿಕ ಪ್ರಕೋಪ ಪರಿಸ್ಥಿತಿಯನ್ನು ಒಂಟಿಯಾಗಿ ನಿಭಾಯಿಸಿದರೂ, ಈಗ ಮಂತ್ರಿಗಿರಿ ಸಿಕ್ಕಿದವರ ಸಹಾಯವಷ್ಟೇ ಪಡೆಯುವಂತಾಗಿದೆ.
ಮೈತ್ರಿ ಸರ್ಕಾರದ ಪತನದೊಂದಿಗೆ ಅಧಿಕಾರ ಕಳೆದುಕೊಂಡ ಶಾಸಕರು ಒಬ್ಬಂಟಿಯಾಗಿದ್ದ ಯಡಿಯೂರಪ್ಪನವರ ಕೈ ಬಲಪಡಿಸಲಿಲ್ಲ. ಹೀಗಾಗಿ ಅಧಿಕಾರಿಗಳು ಮಾಡಿದ್ದೇ ಕೆಲಸವೇ ಹೊರತು, ಅವರಿಗೆ ಯಾವ ಮಾರ್ಗದರ್ಶನವೂ ಇರಲಿಲ್ಲ. ಹೀಗಾಗಿ ಪರಿಹಾರ ಕಾಮಗಾರಿಗಳು ಅಸಮರ್ಪಕ ರೀತಿಯಲ್ಲಿ ನಡೆಯುತ್ತಿದೆ ಎಂಬ ವರದಿಗಳು ಸಾಕಷ್ಟು ಬಂದವು. ಈಗ ಅಧಿಕಾರದಲ್ಲಿ ಇಲ್ಲದೇ ಇರುವುದರಿಂದ, ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆ ಬಿಜೆಪಿ ಮೇಲೆ ಹೊರಿಸಿ ಮೈತಿ ಪಕ್ಷಗಳು ನಿರಮ್ಮಳವಾಗಿ ಕುಳಿತಿವೆ. ಒಮ್ಮೊಮ್ಮೆ ಬಿಜೆಪಿ ಸರ್ಕಾರವನ್ನು ಕುಟುಕಿದರೆ ತನ್ನ ಕೆಲಸವಾಯಿತು ಎಂದು ಮಿತ್ರ ಪಕ್ಷಗಳ ನಾಯಕರು ತಿಳಿದಂತಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಕಣ್ಣು ನೋವಿನಿಂದ ಪ್ರವಾಸ ಮಾಡಲು ಆಗುವದಿಲ್ಲವೆಂದು ಹೇಳಿದರೂ, ಅವರು ಹೊಸದಿಲ್ಲಿಗೆ ಪಕ್ಷದ ವರಿಷ್ಠ ಮಂಡಳಿ ಸಭೆಗೆ ಹೋಗುವಲ್ಲಿ ಆರೋಗ್ಯ ಸಮಸ್ಯೆ ಅಡ್ಡಿ ಬಂದಿಲ್ಲ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಮತ್ತು ಈಶ್ವರ ಖಂಡ್ರೆ ಅವರಿಗೆ ಜನರ ನೋವಿಗೆ ಸ್ಪಂದಿಸಲು ವೇಳೆಯೇ ಇರಲಿಲ್ಲ. ಕಮಲ ಕಾಯಾಚರಣೆಯನ್ನು ಬಿಜೆಪಿ ಮುಂದುವರಿಸುತ್ತಿದೆಯಾ ಎಂಬುದು ಕಾಂಗ್ರೆಸ್ ನ ದೊಡ್ಡ ಚಿಂತೆಯಾಗಿ ಕಾಣಿಸುತ್ತಿದೆ.

ಒಂದು ರೀತಿಯಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೂ ಪೂರ್ಣ ಜನಾದೇಶ ದೊರಕದಾಗ ರಾಜ್ಯದ ಜನತೆ ಅನುಭವಿಸಬೇಕಾಗಿ ಬರುವ ಸಂಕಷ್ಟವಿದು. ತಮ್ಮ ರಾಜಕೀಯ ಅಧಿಕಾರದ ಹಪಾಪಿತನದ ಭರದಲ್ಲಿ, ಮೂರೂ ಪಕ್ಷಗಳು ರಾಜ್ಯದ ಜನರ ಹಿತ ವನ್ನು ಮತ್ತು ಬವಣೆಯನ್ನು ಕಡೆಗೆಣಿಸಿವೆ. ಮೊದಲು ಸಮ್ಮಿಶ್ರ ಸರಕಾರ ಮಾಡಿದ ಕಾಂಗ್ರೆಸ್ ಮತ್ತು ಜೆಡಿಎಸ್ ಗಾಗಲೀ, ಮತ್ತು ಈಗ ಸರಕಾರ ರಚಿಸಿದ ಬಿಜೆಪಿ ಆಗಲೀ, 224 ಸದಸ್ಯರ ವಿಧಾನ ಸಭೆಯಲ್ಲಿ ಬಹುಮತವುಳ್ಳ ಪಕ್ಷಗಳಲ್ಲ. ಇವರು ಯಾರಿಗೂ ಸರಕಾರ ಮಾಡುವ ಹಕ್ಕು ಮತದಾರ ಕರುಣಿಸಿಲ್ಲ. ಬಿಜೆಪಿ ಇನ್ನೆರಡು ಪಕ್ಷಗಳಿಗಿಂತ ಹೆಚ್ಚು ಸ್ಥಾನ ಗೆದ್ದಿರಬಹುದು. ಆದರೆ ಬಹುಮತ ಇಲ್ಲ. ಬಿಜೆಪಿಗಿಂತ ಕಡಿಮೆ ಸ್ಥಾನ ಗಳಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಪರಿಸ್ಥಿತಿ ಇನ್ನೂ ಶೋಚನೀಯ. ವಿಧಾನಸಭೆಯಲ್ಲಿ ಅವರಿಗಿರುವುದು ಪ್ರತಿ ಏಳು ಸ್ಥಾನಗಳಲ್ಲಿ ಒಂದು ಮಾತ್ರ. ಹೀಗಿದ್ದರೂ, ಮೂರು ಪಕ್ಷದ ನಾಯಕರು ಮಾತೆತ್ತಿದರೆ ಪ್ರಜಾಪ್ರಭುತ್ವದ ಹಿರಿಮೆಯ ಬಗ್ಗೆ ಪುಂಖಾನುಪುಂಖ ಮಾತನಾಡುತ್ತಾರೆ.
ವಿಧಾನಸಭೆ ಚುನಾವಣೆಯಾಗಿ, ಒಂದು ವರ್ಷದ ತನಕ ಅಧಿಕಾರ ಹಂಚಿಕೆಯ ಗೊಂದಲ ಮತ್ತು ಜಗಳದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವೇಳೆ ಕಳೆದವು. ಅವರ ನಿರ್ಗಮನದ ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿಗೆ ಸಚಿವ ಸಂಪುಟ ರಚಿಸಲು ಸುಮಾರು ಒಂದು ತಿಂಗಳು ಬೇಕಾಗಿದೆ. ಸರಕಾರ ಇನ್ನೂ ಪೂರ್ತಿಯಾಗಿಲ್ಲವೆಂದು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಸರಿಯಾದ ಸರಕಾರ ಮತ್ತು ಸರಿಯಾದ ಧುರೀಣರಿದ್ದರೆ, ನೈಸರ್ಗಿಕ ಪ್ರಕೋಪದಂತಹ ಪ್ರಕರಣಗಳನ್ನು ಉತ್ತಮ ರೀತಿಯಿಂದ ರೀತಿಯಿಂದ ನಿಭಾಯಿಸಬಹುದಿತ್ತು. ಪಕ್ಷಗಳ ರಾಜಕೀಯ ಹಪಾಪಿತನಕ್ಕೆ ಕರ್ನಾಟಕದ ಮತದಾರ ಬಹಳ ದೊಡ್ಡಬೆಲೆ ತೆತ್ತಿದ್ದಾನೆ.