ಪ್ರತಿದಿನ ಪ್ರತಿಭಟನೆ, ದಿನನಿತ್ಯ ಸಂಘಟನೆ, ಶರಾವತಿ ನದಿ ಉಳಿಸಿ ಹೋರಾಟ ಜನಾಂದೋಲನ ಇಷ್ಟರಮಟ್ಟಿಗೆ ವಿಸ್ತಾರವಾಗುತ್ತೆ ಎಂಬುದರ ಅರಿವೂ ಸಂಘಟಕರಿಗೇ ಇರಲಿಲ್ಲ, ಹೋರಾಟದ ಕೇಂದ್ರವಾಗಿರುವ ಸಾಗರದಲ್ಲಿ ನಾಳೆ ಬೃಹತ್ ಜನಸಮೂಹ, ಶಿವಮೊಗ್ಗ ಸೇರಿ ಎಲ್ಲಾ ನಗರಗಳಲ್ಲಿ ಸ್ವಯಂ ಪ್ರೇರಿತ ಬಂದ್. ಉಪಮುಖ್ಯಮಂತ್ರಿ ಪರಮೇಶ್ವರ್ ಟ್ವಿಟ್ಟರ್ ಪೋಸ್ಟ್ ಕಿಡಿ ಸೃಷ್ಟಿಸಿದ ಆತಂಕ, ತಲ್ಲಣಗಳು ಇಂದು ಕಾಡ್ಗಿಚ್ಚಿನಂತೆ ಹರಡಿದೆ, ಜಲಸಾಕ್ಷರತೆ ಎಲ್ಲರಿಗೂ ಮುಟ್ಟುವಂತಾಗಿದೆ, ಶಾಲಾ ಮಕ್ಕಳೂ ಕೂಡ ಶರಾವತಿ ಬೆಂಗಳೂರಿಗೆ ಬೇಡ ಎಂಬುದನ್ನುವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡುವಷ್ಟು ಪರಿಸರ ಕಾಳಜಿ ಬೆಳೆದಿದೆ.
ಕಂಬಳಿ ಪ್ರತಿಭಟನೆ:
ಇದುವರೆಗೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕೂಡ ಸೇರಿಕೊಂಡು ನೂರಾರು ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಘೋಷಿಸಿವೆ, ಪ್ರತ್ಯೇಕವಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿವೆ. ಶಾಲಾ ಕಾಲೇಜುಗಳ ಮಕ್ಕಳು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿನ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದಾರೆ. ಗ್ರಾಮ ಪಂಚಾಯಿತಿ ಮಟ್ಟಗಳಲ್ಲಿನ ಸಭೆಯಲ್ಲಿ ಮುಂಗಾರು ಹಂಗಾಮು, ವಿಳಂಬದ ಹದ ಮಳೆಯನ್ನ ಮರೆತು ಹಳ್ಳಿಗರು ಸೇರಿಕೊಂಡಿದ್ದಾರೆ. ಬಸ್ ಮಾಲೀಕರು ಸಾರಿಗೆ ಸಂಚಾರ ಸ್ಥಗಿತಕ್ಕೆ ಹಸಿರು ನಿಶಾನೆ ತೋರಿದ್ದಾರೆ, ಆಟೋ-ಟ್ಯಾಕ್ಸಿ ಚಾಲಕರು ಸೇವೆ ಸ್ಥಗಿತ ಮಾಡಿದ್ದಾರೆ. ಅಂಗಡಿ ಮುಗ್ಗಟ್ಟುಗಳು, ಮಾರುಕಟ್ಟೆಗಳ ಸೇವೆ ಕೂಡ ಲಭ್ಯವಿರುವುದಿಲ್ಲ. ನಾಳೆ ಪ್ರತಿ ತಾಲೂಕಿನಲ್ಲಿ ಪ್ರತಿಭಟನೆ ನಡೆಯಲಿದ್ದು ಸಾಗರದಲ್ಲಿ ಬೃಹತ್ ಜನಸ್ತೋಮ ಬಂದ್‌ಗೆ ಸಾಕ್ಷಿಯಾಗಲಿದೆ. ಬೆಂಗಳೂರಿನ ಪುಟ್ಟಣ್ಣ ಜೆಟ್ಟಿ ಪುರಭವನ ( ಟೌನ್‌ಹಾಲ್) ನಲ್ಲಿ ಕೂಡ ಮಲೆನಾಡು ನಿವಾಸಿಗಳು ಹಾಗೂ ಪತ್ರಕರ್ತರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಹರತಾಳು ಹಾಲಪ್ಪ ಹಣವೂ ಬೇಡ:
ಪತ್ರಿಕಾಗೋಷ್ಟಿಯೊಂದರಲ್ಲಿ ಮಾತನಾಡಿದ್ದ ಹರತಾಳು ಹಾಲಪ್ಪ ಜನರಿಂದ ವಂತಿಗೆ ಪಡೆಯುವ ವಿಚಾರದಲ್ಲಿ ಸಂಘಟಕರು ನನ್ನನ್ನೇ ಮರೆತುಬಿಟ್ಟಿದ್ದಾರೆ, ಕೇಳಿದರೆ ನಾನೂ ಕೊಡುತ್ತಿದ್ದೆ ಎಂದು ಹೇಳಿದ್ದರು. ಆದರೆ, ಅವರ ಮಾತನ್ನು ನಯವಾಗಿ ತಿರುಗಿಸಿರುವ ಸಂಘಟಕರು ಜನರಿಂದ ನೂರು ರೂ ವಂತಿಗೆ ಪಡೆದು ಹೋರಾಟ ರೂಪಿಸಿದ್ದೇವೆ, ಇದರಲ್ಲಿ ಎಲ್ಲರ ಪರಿಶ್ರಮ ಇದೆ,ನಾವು ಹೋಗಿ ಕೇಳಲು ಇದು ರಾಜಕೀಯ ಕಾರ್ಯಕ್ರಮ ಅಲ್ಲ ಎಂದು ಹೇಳಿದ್ದಾರೆ.

ದಣಿವಾರದ ಹಿರಿ ಜೀವ ನಾ ಡಿಸೋಜಾ
ಇಡೀ ಆಂದೋಲನಕ್ಕೆ ಮುಕುಟವಿದ್ದಂತೆ ಕನ್ನಡದ ನಾಡಿ ಎಂದೇ ಖ್ಯಾತರಾಗಿರುವ ಲೇಖಕ ನಾ ಡಿಸೋಜಾ ಸಂಘಟಕರಾದ ಚಾರ್ವಕಾ ರಾಘವೇಂದ್ರ, ಶಶಿ ಸಂಪಳ್ಳಿ, ಹರ್ಷಕುಮಾರ್ ಕುಗ್ವೆ,ಅಖಿಲೇಶ್ ಚಿಪ್ಪಳಿಯವರ ಜೊತೆ ಜಲಸಾಕ್ಷರತೆ ಮೂಡಿಸಿ ಬೃಹತ್ ಆಂದೋಲನಕ್ಕೆ ಕಾರಣೀಭೂತರಾಗಿದ್ದಾರೆ. ಮುಳುಗಡೆ ಪ್ರದೇಶದ ಆಕ್ರಂದನವನ್ನು ಅಷ್ಟೇ ತೀಕ್ಷ್ಣವಾಗಿ ಬರಹರೂಪಕ್ಕಿಳಿಸಿದ ಮಲೆನಾಡಿನ ಸಂತ ಡಿಸೋಜಾ, ಇವರ ನೆಲ ಜಲಾ, ಲಿಂಗನಮಕ್ಕಿ ಅಣೆಕಟ್ಟು ನಿರಾಶ್ರಿತರ ಮೇಲಿನ ಕಾದಂಬದರಿಗಳು ಪ್ರಸಿದ್ಧ ಸಿನಿಮಾಗಳಾಗಿ ರಾಷ್ಟ್ರಪ್ರಶಸ್ತಿ ಪಡೆದುಕೊಂಡಿವೆ. ಇವುಗಳಲ್ಲಿ ಮುಳುಗಡೆ ದ್ವೀಪ ಹಾಗೂ ಕಾಡಿನ ಬೆಂಕಿ ಸಿನಿಮಾಗಳನ್ನ ಹೆಸರಿಸಬಹುದು. ಮೂವತ್ತಕ್ಕೂ ಅಧಿಕ ಕೃತಿಗಳಲ್ಲಿ ಹೆಚ್ಚಿನವು ಸಾಗರ ಸುತ್ತ ಮುತ್ತಲಿನ ಜನಜೀವನಕ್ಕೇ ಹೊಂದಿಕೊಂಡಿವೆ. ಅಂದು ಲಿಂಗನಮಕ್ಕಿ ಜಲಾಶಯದ ವಿರುದ್ಧ ನಡೆದ ಪ್ರತಿಭಟನೆಗೂ ಇಂದಿನ ಜನಾಂದೋಲನಕ್ಕೂ ಏಳು ದಶಕಗಳೇ ಆಗಿವೆ. ಚಿಕ್ಕವರಿದ್ದಾಗ ಜಲಾಶಯದ ನಿರಾಶ್ರಿತರ ಗೋಳು ಕಂಡ ಡಿಸೋಜಾ ಆ ಅನ್ಯಾಯದ ಪರಿಹಾರವೇ ಸಿಗದೇ ಮತ್ತೊಮ್ಮೆ ಶರಾವತಿ ನದಿ ಮೇಲಿನ ದೌರ್ಜನ್ಯವನ್ನ ತೀಕ್ಷ್ಣವಾಗಿ ಖಂಡಿಸಿದ್ದಾರೆ. ತಾವೇ ಮುಂದು ಬಂದು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.
Also Read: ‘ಬೆಂಗಳೂರಿಗೇಕೆ ಶರಾವತಿ ನೀರು? ರಾಜಧಾನಿಯನ್ನೇ ರಾಜ್ಯಕ್ಕೆ ಹಂಚಿ!’
ಮಠಾಧೀಶರು, ರಾಜಕಾರಣಿಗಳ ಬೆಂಬಲ
ಶರಾವತಿ ನದಿ ನೀರನ್ನ ಬೆಂಗಳೂರಿಗೆ ಹರಿಸುವ ವಿಚಾರ ಈ ಸರ್ಕಾರದ ನಿರ್ಧಾರವೇನಲ್ಲ, ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಲೇ ಇದಕ್ಕೆ ಕರುಡು ತಯಾರಿಸಲು ನಿರ್ಧರಿಸಲಾಗಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗಲೂ ಇದಕ್ಕೆ ಮರುಜೀವ ನೀಡಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಡಿಸಿಎಂ ಪರಮೇಶ್ವರ್ ತಜ್ಞರ ಜೊತೆ ಸೇರಿ ಚರ್ಚಿಸಿದ್ದಾರೆ ಅಷ್ಟೇ, ಈ ಅಪ್ರಸ್ತುತ ಯೋಜನೆಯ ಹಿಂದೆ ಎಲ್ಲಾ ಪಕ್ಷದ ಕರಾಳ ನೆರಳೂ ಇರುವುದರಿಂದ ಸಂಘಟಕರು ರಾಜಕಾರಣಿಗಳಿಂದ ಅಂತರ ಕಾದುಕೊಂಡಿದ್ದಾರೆ. ಸಾಗರದ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ, ಡಿಸಿಎಂ ಪರಮೇಶ್ವರ್ ವಿರುದ್ಧ ಗುಡುಗಿದ್ದಾರೆ. ರಾಮಚಂದ್ರಪುರ ಮಠದ ಸ್ವಾಮೀಜಿ ರಾಘವೇಶ್ವರ, ಬೆಕ್ಕಿನಕಲ್ಮಠದ ಮುರುಘರಾಜೇಂದ್ರ ಸ್ವಾಮೀಜಿಗಳು ಸೇರಿ ಬಸವಕೇಂದ್ರ ಹಾಗೂ ಚಿಕ್ಕಪುಟ್ಟ ಸಂಸ್ಥಾನಗಳು ಬಹಳ ಮುಖ್ಯವಾಗಿ ಹೊಸನಗರದ ಮೂಲೆಗದ್ದೆ ಮಠ ಕೂಡ ಪ್ರತಿಭಟನಾಕಾರರಿಗೆ ಬೆಂಬಲವಾಗಿ ನಿಂತಿದ್ದಾರೆ. ಕಿಮ್ಮನೆ ರತ್ನಾಕರ್,ಮಧು ಬಂಗಾರಪ್ಪ, ಬಿಜೆಪಿ ಸಂಸದ ಬಿವೈ ರಾಘವೇಂದ್ರ ಕೂಡ ನೀರೊಯ್ಯಲು ಬಿಡಲ್ಲ ಎಂಬುದಾಗಿ ಹೇಳಿದ್ದಾರೆ.
ಸುಮಾರು ಹದಿಮೂರು ಸಾವಿರ ಕೋಟಿ ಯೋಜನೆಯಲ್ಲಿ ಶರಾವತಿ ಜಲಾಶಯದ ನೀರನ್ನ ಎತ್ತಿ ನಾಲ್ಕುನೂರು ಕಿಲೋಮೀಟರ್ ದೂರದ ಹಾಗೂ ಮೂರು ಸಾವಿರ ಅಡಿ ಎತ್ತರದ ಬೆಂಗಳೂರಿಗೆ ದಬ್ಬುವ ಹುಚ್ಚು ಸಾಹಸ. ಹಣದ ಹೊಳೆಯ ಜೊತೆ ನೂರಾರು ಹೆಕ್ಟೇರ್ ಅರಣ್ಯ ನಾಶ, ವಿದ್ಯುದ್ದಾಗಾರ ಕ್ರಮೇಣ ಮುಗಿಸುವ ಹುನ್ನಾರ, ಇಲ್ಲೇ ಕುಡಿಯಲು ನೀರಿಲ್ಲ,ರಕ್ಕಸನಂತೆ ಬೆಳೆಯುತ್ತಿರುವ ಬೆಂಗಳೂರಿಗೆ ಕಾವೇರಿ, ಹೇಮಾವತಿ ಬಲಿಯಾಗಿಯಾಯ್ತು ಈಗ ಶರಾವತಿಯ ಹರಿವು, ಬದಲಿ ಶಾಶ್ವತ ಯೋಜನೆಗಳನ್ನ ಮಾಡದೇ ಹೋದರೆ ಭವಿಷ್ಯದಲ್ಲಿ ನಮ್ಮ ಅಳಿವು ಶತಸಿದ್ಧ ಎಂಬುದು ಪರಿಸರವಾದಿಗಳು. ಲೇಖಕರು ಹಾಗೂ ಸಂಘನಟನಾಕಾರರ ವಾದ.