ಒಂದು ವಾರಕ್ಕೂ ಹೆಚ್ಚಿನ ರಾಜಕೀಯ ಆರೋಪ, ಪ್ರತ್ಯಾರೋಪ, ಟೀಕೆಗಳ ನಡುವೆ, ಬಿ ಎಸ್ ಯಡಿಯೂರಪ್ಪ ಹಾಗೂ ಡಿ ಕೆ ಶಿವಕುಮಾರ್ ಸುಪ್ರೀಂ ಕೋರ್ಟ್ ನಲ್ಲಿ ಒಂದಾಗಿದ್ದಾರೆ! ಅಕ್ರಮ ಡಿನೋಟಿಫೇಕೇಶನ್ ಪ್ರಕರಣವೊಂದರ ಮೊದಲೆರಡು ಆರೋಪಿಗಳಾಗಿರುವ ಬಿ ಎಸ್ ವೈ ಹಾಗೂ ಡಿಕೆಶಿ ಪರ ವಕೀಲರು ಶುಕ್ರವಾರ (ಜುಲೈ 26, 2019) ಒಂದೇ ರೀತಿಯ ವಾದ ಮಂಡಿಸಿದರು.
ಏಳು ವರ್ಷಗಳ ಹಿಂದಿನ ಬೆನ್ನಿಗಾನಹಳ್ಳಿ ಅಕ್ರಮ ಡಿನೋಟಿಫೇಕೇಶನ್ ಪ್ರಕರಣದಲ್ಲಿ ಬಿ ಎಸ್ ವೈ, ಡಿಕೆಶಿ ಅಲ್ಲದೇ ಅಂದಿನ ವಿಶೇಷ ಜಿಲ್ಲಾಧಿಕಾರಿ, ಸಬ್-ರಿಜಿಸ್ಟ್ರಾರ್ ಹಾಗೂ ಇನ್ನಿತರ ಅಧಿಕಾರಿಗಳು ಆರೋಪಿಗಳಾಗಿದ್ದಾರೆ. ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ಎಂ ಆರ್ ಶಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ವಿಚಾರಣೆಯನ್ನು ಮುಂದೂಡಿದೆ.
ಯಡಿಯೂರಪ್ಪ ಪರ ವಕೀಲ ಮುಕುಲ್ ರೋಹಟಗಿ ಹಾಗೂ ಶಿವಕುಮಾರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಇಬ್ಬರೂ ಪ್ರಕರಣದಲ್ಲಿನ ಮೇಲ್ಮನವಿಯನ್ನು ಮುಕ್ತಾಯಗೊಳಿಸಿದ ಆದೇಶವನ್ನು ಪುನರ್ ಪರಿಶೀಲಿಸುವಂತೆ ಅರ್ಜಿ ಸಲ್ಲಿಸಿದ ಸರ್ಕಾರೇತರ ಸಂಸ್ಥೆ `ಸಮಾಜ ಪರಿವರ್ತನಾ ಸಮುದಾಯ’ ದ ನಡೆಯನ್ನು ಪ್ರಶ್ನಿಸಿದರು. “ಈ ಪ್ರಕರಣದಲ್ಲಿ ಈಗ ಮಧ್ಯ ಪ್ರವೇಶಿಸಿರುವ ಅರ್ಜಿದಾರರ ಆಸಕ್ತಿ ಏನು’’ ಎಂದು ಇಬ್ಬರೂ ವಕೀಲರು ಪ್ರಶ್ನಿಸಿದರು. ಸುಪ್ರೀಂ ಕೋರ್ಟ್ ಪೀಠ ಯಾವುದೇ ಆದೇಶ ಹೊರಡಿಸದೇ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.
ಇದುವರೆಗೆ ಸಾಗಿ ಬಂದ ಹಾದಿ:
ಎರಡು ರಾಜಕೀಯ ಪಕ್ಷಗಳ ಪ್ರಮುಖ ನಾಯಕರ ವಿರುದ್ಧದ ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಚಾರ್ಜ್ ಶೀಟ್ ದಾಖಲಿಸಿದ್ದರು. ಲೋಕಾಯುಕ್ತ ಪೊಲೀಸರು ಯಡಿಯೂರಪ್ಪನವರನ್ನು ಪ್ರಕರಣದಿಂದ ಕೈಬಿಟ್ಟಿದ್ದರೂ, ಲೋಕಾಯುಕ್ತ ವಿಶೇಷ ಕೋರ್ಟ್ 2012ರಲ್ಲಿ ಯಡಿಯೂರಪ್ಪ ಸೇರಿದಂತೆ ಉಳಿದ ಲ್ಲಾ ಆರೋಪಿಗಳನ್ನು ಹಾಜರಾಗುವಂತೆ ಸಮನ್ಸ್ ಹೊರಡಿಸಿತ್ತು. ಆರೋಪಿಗಳು ಇದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಡಿಸೆಂಬರ್ 2015 ರಂದು ಕರ್ನಾಟಕ ಹೈ ಕೋರ್ಟ್ ನ್ಯಾಯಮೂರ್ತಿ ಆನಂದ್ ಭೈರಾರೆಡ್ಡಿ ಪ್ರಕರಣವನ್ನು ರದ್ದುಗೊಳಿಸಿದ್ದರು. ಹೆಚ್ಚೆಂದರೆ ಕ್ರಿಯಾಲೋಪದಂತಹ ಆರೋಪ ಬಿಟ್ಟರೆ, ಯಾವುದೇ ಕ್ರಿಮಿನಲ್ ಅಪರಾಧ ಈ ಪ್ರಕರಣದಲ್ಲಿ ಕಂಡುಬರುತ್ತಿಲ್ಲ ಎಂದು ನ್ಯಾ. ಭೈರಾರೆಡ್ಡಿ ಅಭಿಪ್ರಾಯಪಟ್ಟಿದ್ದರು.
ಹೈಕೋರ್ಟ್ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿರಲಿಲ್ಲ. 2013-2018ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಆದರೆ ಲೋಕಾಯುಕ್ತ ಕೋರ್ಟ್ ನಲ್ಲಿ ಮೂಲ ದೂರಾದಾರರಾಗಿದ್ದ ಕಬ್ಬಾಳೆ ಗೌಡ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಮೂರು ವರ್ಷ ವಿಚಾರಣೆಯೇ ಇಲ್ಲದೇ ತಣ್ಣಗಿದ್ದ ಪ್ರಕರಣ ಒಮ್ಮಿಂದೊಮ್ಮೆಲೆ ವಿಚಾರಣೆಗೆ ಬಂದಿದ್ದು ಫೆಬ್ರವರಿ 21, 2019ರಂದು. ಆ ದಿನ ಸುಪ್ರೀಂ ಕೋರ್ಟ್ ವಿಚಾರಣಾ ಪಟ್ಟಿಯಲ್ಲೂ ಮೇಲ್ಮನವಿ ಸಂಖ್ಯೆ ನಮೂದಾಗಿರಲಿಲ್ಲ. ಪ್ರಕರಣ ಎತ್ತಿಕೊಂಡನೆ ಕಬ್ಬಾಳೆ ಗೌಡ ಮೇಲ್ಮನವಿ ಅರ್ಜಿ ಹಿಂಪಡೆಯುವುದಾಗಿ ಹೇಳಿಕೆ ಸಲ್ಲಿಸಿದರು. ಸುಪ್ರೀಂ ಕೋರ್ಟ್ ಕೂಡ ಅದೇ ದಿನ ಅರ್ಜಿಯನ್ನು ಮಾನ್ಯ ಮಾಡಿ ಮನವಿಯನ್ನು ವಿಚಾರಣೆಯೇ ಇಲ್ಲದೇ ಮುಕ್ತಾಯಗೊಳಿಸಿ ಆದೇಶ ಹೊರಡಿಸಿತು. ಇದಲ್ಲದೇ, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮನವಿ ಸಲ್ಲಿಸದೇ ಇದ್ದಾಗ, ಕಬ್ಬಾಳೇ ಗೌಡ ಜೊತೆಗೆ ಇನ್ನೊರ್ವ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಕೂಡ ಮೇಲ್ಮನವಿ ಸಲ್ಲಿಸಿದ್ದರು. ಆದರೆ, ಅವರು ಜುಲೈ 2017ರಲ್ಲಿಯೇ ತಮ್ಮ ಮನವಿಯನ್ನು ಹಿಂಪಡೆದಿದ್ದರು.
ಆಗ, ಎಸ್ ಆರ್ ಹಿರೇಮಠ ಅವರ ಸಂಸ್ಥೆ – ಸಮಾಜ ಪರಿವರ್ತನಾ ಸಮುದಾಯ (SPS) ಒಂದು ಅರ್ಜಿ ಸಲ್ಲಿಸಿ, ಫೆಬ್ರವರಿ 21ರ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿತು. SPS ಪರ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿ ರಾಜ್ಯ ಸರ್ಕಾರ ಪ್ರಕರಣದಲ್ಲಿ ಮನವಿಯನ್ನು ಸಲ್ಲಿಸಿಲ್ಲ, ಲೋಕಾಯುಕ್ತ ಪೊಲೀಸರು ಮನವಿ ಸಲ್ಲಿಸುವಂತೆ ಕಳಿಸಿದ ವರದಿಯನ್ನೂ ಸರ್ಕಾರ ತಳ್ಳಿಹಾಕಿದೆ, ದೂರುದಾರ ಸಲ್ಲಿಸಿದ ಮನವಿಯನ್ನು ಯಾವುದೇ ಕಾರಣವನ್ನೂ ನೀಡದೇ ಹಿಂಪಡೆಯುತ್ತಾರೆ. ಹೀಗಾಗಿ SPS ಈ ಪ್ರಕರಣದಲ್ಲಿ ಅರ್ಜಿ ಸಲ್ಲಿಸಲಿದೆ ಎಂದು ಹೇಳಿದ್ದರು.
ಪ್ರಕರಣ ಏನು?
ಬೆನ್ನಿಗಾನಹಳ್ಳಿಯ 4.20 ಎಕರೆ ಭೂಮಿ ಸೇರಿದಂತೆ ಇನ್ನೂ ಹಲವಾರು ಭೂಮಿಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 1986 ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು. 2003ರಲ್ಲಿ ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಡಿ ಕೆ ಶಿವಕುಮಾರ್ ಅವರು ಬಿಡಿಎ ಸ್ವಾಧೀನದಲ್ಲಿದ್ದ 4.20 ಎಕರೆ ಭೂಮಿಯನ್ನು ಮೂಲ ಭೂಮಾಲಿಕರಿಂದ ಖರೀದಿಸುತ್ತಾರೆ. ಭೂದಾಖಲೆಗಳಲ್ಲಿ ಸ್ಪಷ್ಟವಾಗಿ ಸ್ವಾಧೀನಕ್ಕೊಳಪಟ್ಟ ಭೂಮಿ ಎಂದು ನಮೂದಾಗಿದ್ದರೂ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಯಾವುದೇ ಆಕ್ಷೇಪ ಇಲ್ಲದೇ ನೋಂದಣಿ ಆಗುತ್ತದೆ. ಖಾತಾ, ಪಹಣಿ ಹಾಗೂ ಮ್ಯುಟೇಷನ್ ಕಾಲದಲ್ಲಿಯೂ ಯಾವುದೇ ಕ್ರಮ ಅನುಸರಿಸದೇ ಇದ್ದದು ಲೋಕಾಯುಕ್ತ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಇಷ್ಟೆಲ್ಲಾ ಅಕ್ರಮಗಳ ಮಧ್ಯೆ ಡಿ ಕೆ ಶಿವಕುಮಾರ್ ಈ ಭೂಮಿಯನ್ನು ಅಭಿವೃದ್ಧಿಪಡಿಸಲು ರಿಯಲ್ ಎಸ್ಟೇಟ್ ಕಂಪೆನಿಯೊಂದಿಗೆ – Prudential Hoousing and Infrastructure – ಜಂಟಿ ಅಭಿವೃದ್ಧಿ ಒಪ್ಪಂದ ಮಾಡಿಕೊಳ್ಳುತ್ತಾರೆ. ನಂತರ, 2004 ರಲ್ಲಿ ಈ ಭೂಮಿಯನ್ನು ಕೈಗಾರಿಕಾ ಉದ್ದೇಶದಿಂದ ವಸತಿ ಉಪಯೋಗಕ್ಕೆ ಅಕ್ರಮವಾಗಿ ಪರಿವರ್ತನೆ ಮಾಡಲಾಗುತ್ತದೆ.
ಕೊನೆಯದಾಗಿ, ಮೇ 13, 2010ರಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಅವರು ಭೂ ಸ್ವಾಧೀನದಲ್ಲಿದ್ದ ಇದೇ ಭೂಮಿಯನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡುತ್ತಾರೆ. ಇದಕ್ಕೂ ಮೊದಲು ಡಿನೋಟಿಫಿಕೇಶನ್ ಮಾಡುವಂತೆ ವಿನಂತಿಸಿ ಶಿವಕುಮಾರ್ ತಮ್ಮ ಹೆಸರಿನಲ್ಲಿಯೇ ಮೂರು ಪತ್ರ ಬರೆಯುತ್ತಾರೆ. ಈ ಪತ್ರಗಳಲ್ಲಿ ಶಿವಕುಮಾರ್ ಭೂಮಿ ತಮ್ಮದು ಎಂದು ಎಲ್ಲಿಯೂ ಹೇಳದೇ ಮೂಲ ಮಾಲಿಕ ಶ್ರೀನಿವಾಸ್ ಹೆಸರನ್ನೇ ಬಳಸುತ್ತಾರೆ. ಆದರೆ, ಆ ಹೊತ್ತಿಗಾಗಲೇ ಮೂಲ ಭೂ ಮಾಲಿಕ ಮರಣ ಹೊಂದಿದ್ದರು ಎಂಬುದು ಲೋಕಾಯುಕ್ತ ತನಿಖೆಯಲ್ಲಿ ಬಹಿರಂಗಗೊಳ್ಳುತ್ತದೆ.