ಆಗಿನ್ನೂ ಕರ್ನಾಟಕದಲ್ಲಿ ಚುನಾವಣೆ ಮುಗಿದಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಪ್ರಚಾರದ ದಿನಪಟ್ಟಿ ಒಂದು ದಿನ ಹೀಗಿತ್ತು: ಮಧ್ಯಾಹ್ನ 2.20ಕ್ಕೆ ತಮಿಳುನಾಡಿನಲ್ಲಿ ಪ್ರಚಾರ ಮುಗಿಸಿ ಮಂಗಳೂರಿಗೆ ಬಂದು, ಅಲ್ಲಿ ಭಾಷಣ ಮುಗಿಸಿ, 4.45ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತುಕತೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಅದೇ ದಿನದ ಲಿಸ್ಟ್ ಹೀಗಿತ್ತು: ಮಧ್ಯಾಹ್ನ 12ಕ್ಕೆ ಕೋಲಾರ, 3ಕ್ಕೆ ಚಿತ್ರದುರ್ಗ, 5ಕ್ಕೆ ಮಂಡ್ಯ… ಇವರೆಲ್ಲ ರಾಷ್ಟ್ರ ಮಟ್ಟದ ನಾಯಕರಾಯಿತು. ಚುನಾವಣೆ ವೇಳೆಯಲ್ಲಿ ಯಾವುದೇ ರಾಜಕೀಯ ನಾಯಕರ ವೇಳಾಪಟ್ಟಿ ಗಮನಿಸಿದರೆ ಇದಕ್ಕಿಂತ ಹೆಚ್ಚೇನೂ ಭಿನ್ನವಾಗಿರುವುದಿಲ್ಲ. ನಮ್ಮದೇ ಮಾಜಿ ಮುಖ್ಯಮಂತ್ರಿ ಎಪ್ಪತ್ತರ ವಯಸ್ಸಿನ ಸಿದ್ದರಾಮಯ್ಯ, ಎಪ್ಪತ್ತಾರು ವರ್ಷದ ಬಿ.ಎಸ್.ಯಡಿಯೂರಪ್ಪ, ಐವತ್ತೊಂಬತ್ತರಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಎಂಬತ್ತೈದು ವಯಸ್ಸಾಗಿರುವ ದೇವೇಗೌಡರ ಓಡಾಟವೇನೂ ಕಡಿಮೆಯದ್ದಲ್ಲ.
ಇವರನ್ನು ನೋಡಿ, ‘ಹೇಗಪ್ಪಾ ಇಷ್ಟೆಲ್ಲಾ ತಿರುಗಾಡುತ್ತಾರೆ? ಸುಸ್ತಾಗೋದಿಲ್ವಾ?’ ಎನಿಸಿತು. ಹೀಗೆ ಹೋದ ಕಡೆ ಸೈಟ್‍ಸೀಯಿಂಗ್ ಮಾಡಿಕೊಂಡು, ಹೊಟೇಲ್‍ನಲ್ಲಿ ತಿಂದು, ರೂಮ್‍ನಲ್ಲಿ ಆರಾಮಾಗಿ ಮಲಗೆದ್ದು ಬರುವುದೂ ಅಲ್ಲ ಮತ್ತೆ. ಹಲವು ಬಾರಿ ಬೆಳಿಗ್ಗೆ ಒಂಬತ್ತಕ್ಕೆ ಶುರುವಾಗುವ ಕೆಲಸಗಳು ರಾತ್ರಿ ಹನ್ನೆರಡಾದರೂ ಮುಗಿಯುವುದಿಲ್ಲ. ವರ್ಷದ ಪ್ರತಿದಿನವೂ ಸಭೆಗಳು, ಭಾಷಣ, ಮೀಟಿಂಗ್, ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಒತ್ತಡ… ಹೀಗೆ, ಟೈಟ್‍ಪ್ಯಾಕ್ ದಿನಚರಿಯೇ ಇರುತ್ತದೆ. ರಾಜತಾಂತ್ರಿಕ ವಿದೇಶಿ ಪ್ರವಾಸವಾದರೆ ಮತ್ತೊಂದೇ ನಮೂನೆ. ಅದೂ ಅಲ್ಲದೆ ಮುಖ್ಯ ಸ್ಥಾನಗಳಲ್ಲಿ ಕೂತಿರುವ ಬಹಳಷ್ಟು ಸಚಿವರ ಮೇಲೆ ಸದಾ ಮಾಧ್ಯಮಗಳ ಕಣ್ಣೋಟ, ತಮ್ಮ ಇಲಾಖೆಗಳಿಗೆ ಸಂಬಂಧಿಸಿದಂತೆ ಬಹುಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳುವ ಒತ್ತಡ ಎಲ್ಲವೂ ಜೊತೆಗೇ ಇರುತ್ತದೆ. ನಾಲ್ಕು ಮಾತಾಡಿದರೆ ಹೆಚ್ಚು, ಒಂದು ಮಾತಾಡಿದರೆ ಕಡಿಮೆ ಎಂಬ ಅಡಕತ್ತರಿಯ ಸ್ಥಾನಗಳಿವು.
ಸಾಮಾನ್ಯವಾಗಿ ಐವತ್ತು ವರ್ಷ ಕಳೆಯುತ್ತಿದ್ದಂತೆಯೇ ಒಂದೆರಡು ದಿನಗಳ ಓಡಾಟ, ಆಹಾರದ ವ್ಯತ್ಯಯ, ವಿಪರೀತ ಕೆಲಸ ಎನ್ನುವುದು ದೇಹದ ಮೇಲೆ ಬಹಳವೇ ಪರಿಣಾಮ ಬೀರುತ್ತವೆ. ಮನೆಯಲ್ಲಿ ಸುಮ್ಮನೆ ಕುಳಿತದ್ದ ದಿನವೇ ಅದು ಹೇಗೋ ಅಂಟಿಕೊಂಡ ತಲೆನೋವು ಒಮ್ಮೊಮ್ಮೆ ವಾಸಿಯಾಗುವುದಿಲ್ಲ. ನಿತ್ಯದ ಕೆಲಸ ಮಾಡಲೇ ಹೈರಾಣಾಗಿ ಬಿಡುವಾಗ ಬಹುತೇಕ ರಾಜಕಾರಣಿಗಳು ಐವತ್ತರಿಂದ-ಎಪ್ಪತ್ತು ವರ್ಷದವರೇ… ಹೀಗೆಲ್ಲಾ ಓಡಾಡುವಾಗ ಬಂದ ತಲೆನೋವನ್ನು ಮಾತ್ರೆ ನುಂಗಿಯೇ ಕಡಿಮೆ ಮಾಡಿಕೊಳ್ಳುತ್ತಾರಾ? ಎಷ್ಟು ಹೊತ್ತಿಗೆ ಮಲಗಿ ಯಾವಾಗ ಏಳುತ್ತಾರೆ? ಮಧ್ಯಾಹ್ನ ಊಟ ಆದಮೇಲೆ ನಿದ್ರೆ ಬರುವುದಿಲ್ಲವಾ?
ಅವರಿಗೇನು? ತಮ್ಮದೇ ವೈದ್ಯಕೀಯ ತಂಡವೊಂದನ್ನು ಸದಾ ಜೊತೆಗಿಟ್ಟುಕೊಂಡು ಓಡಾಡುತ್ತಿರುತ್ತಾರೆ. ಹೆಲಿಕಾಫ್ಟರ್‌ಗಳು, ಕಾರ್‌ಗಳು, ಝೀರೋ ಟ್ರಾಫಿಕ್ ಎಂದು ಸಕಲ ಸೌಲಭ್ಯಗಳೂ ಸಿಗುತ್ತವಲ್ಲ ಎಂದು ಎರಡನೇ ಬಾರಿ ಯೋಚಿಸಿದಾಗ ಎನ್ನಿಸಬಹುದು. ಮೋದಿ ತಮ್ಮ ಅರವತ್ತೆಂಟನೇ ವಯಸ್ಸಲ್ಲೂ ಬೆಳಗ್ಗೆದ್ದು ಯೋಗ, ಪ್ರಾಣಾಯಾಮ ಮಾಡುತ್ತಾರೆ. ಅದೂ ಅಲ್ಲದೆ, ಅವರೇ ಹೇಳಿಕೊಂಡಂತೆ ನಲವತ್ತೈದು ವರ್ಷಗಳ ಕಾಲ ಊರಿಂದೂರಿಗೆ ಫಕೀರನಂತೆ ಅಲೆದಿದ್ದಾರೆ. ಹಾಗಾಗಿ, ಮೊದಲಿಂದಲೂ ತಿರುಗಾಡುವ ಅಭ್ಯಾಸ ಇದೆ ಎಂದೂ ಸಮಜಾಯಿಷಿ ಕೊಟ್ಟುಕೊಳ್ಳಬಹುದು.
ಆರೋಗ್ಯದ ಏರುಪೇರುಗಳನ್ನು ಜೊತೆಗಿರುವ ವೈದ್ಯಕೀಯ ತಂಡ ನೋಡಿಕೊಳ್ಳಬಹುದು. ಸರಿಯಾದ ಹೊತ್ತಿಗೆ ಅಡುಗೆ ತಂಡ ಆಹಾರ ತಯಾರಿಸಬಹುದು ಎಂದುಕೊಂಡರೂ, ಸುಸ್ತನ್ನು ಅನುಭವಿಸಬೇಕಾದ್ದು ಖುದ್ದು ಅವರ ಶರೀರಗಳೇ. ನಿದ್ರೆ ಮಾಡಬೇಕಾದ್ದು ಸ್ವಂತ ದೇಹವೇ! ಅದೆಷ್ಟೋ ಬಾರಿ ರಾಜಕಾರಣಿಗಳು ಸಂಸತ್ ಕಲಾಪಗಳಲ್ಲಿ, ಸಭೆಗಳಲ್ಲಿ ನಿದ್ರೆ ಮಾಡುವ ಫೋಟೊಗಳನ್ನು ನೋಡಿ ನಾವು ಬೈದುಕೊಂಡಿರುತ್ತೇವೆ. ಅಧಿಕಾರ ಸ್ಥಾನದಲ್ಲಿರುವ ಇವರಿಗೆ ಸಾರ್ವಜನಿಕವಾಗಿ ಹೇಗಿರಬೇಕೆಂಬ ಬೇಸಿಕ್ ಸೆನ್ಸ್ ಇಲ್ಲ ಎಂದುಕೊಂಡಿರುತ್ತೇವೆ. ಆದರೆ ಅವರ ಕೆಲಸದೊತ್ತಡವೂ ಹೀಗೆಲ್ಲ ಮಾಡಿಸಿರಬಹುದಲ್ಲ ಎಂಬ ಯೋಚನೆ ಬರುವುದಿಲ್ಲ. ಹೀಗೆಲ್ಲ ಮಲಗುವುದು ಸರಿ ಎಂದು ಸಮರ್ಥಿಸಿಕೊಳ್ಳುತ್ತಿಲ್ಲ. ಖಂಡಿತ ಜವಾಬ್ದಾರಿಯುಳ್ಳ ನಾಯಕರು ಸಾರ್ವಜನಿಕ ನಡವಳಿಕೆಯ ಬಗ್ಗೆ ಗಮನ ಇಡಲೇಬೇಕು. ಆದರೆ, ಶರೀರಕ್ಕೆ ಹೆಚ್ಚು ಮೋಸ ಮಾಡಲು ಬರುವುದಿಲ್ಲ. ಅದನ್ನು ಸುಸ್ತುಗೊಳಿಸಿದ ಪರಿಣಾಮದಿಂದಲೇ ಹೀಗೆ ‘ಕಂಡಲ್ಲಿ ನಿದ್ರೆ’ ಫ6ಜೀತಿಗೆ ಒಳಗಾಗಿರುತ್ತಾರೆ.
ರಾಜಕಾರಣ-ನಿದ್ರಾಹೀನತೆ
ನಿದ್ರಾಹೀನತೆಯಿಂದ ಉಂಟಾಗುವ ಸಮಸ್ಯೆಗಳು ಹಲವು ಎನ್ನುವುದು ಗೊತ್ತಿರುವಂಥದ್ದೇ. ಆದರೂ ಬೇಗ ಮಲಗಿ ಬೇಗ ಏಳುವ ಪರಿಪಾಠ ರಾಜಕಾರಣದಲ್ಲಿ ಕಷ್ಟವೇ. ಇಡೀ ದಿನ ಚುರುಕಾಗಿರಲು, ಕೆಲಸಗಳಲ್ಲಿ ಏಕಾಗ್ರತೆ ವಹಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲು ಮೆದುಳಿಗೆ ಶಕ್ತಿ ಬರುವುದೇ ನಿದ್ರೆಯಿಂದ. ಅದಿಲ್ಲದಿದ್ದರೆ ಆರೋಗ್ಯದ ಮೇಲಾಗುವ ಏರುಪೇರುಗಳೇನು ಎಂದು ಹುಡುಕಿದರೆ ಇಷ್ಟುದ್ದ ಪಟ್ಟಿ ಸಿಗುತ್ತದೆ. ಇದರಲ್ಲಿ ಮುಖ್ಯವಾದ ಕೆಲವೆಂದರೆ ತೂಕ ಹೆಚ್ಚಳ, ಡಯಾಬಿಟಿಸ್, ರಕ್ತದೊತ್ತಡ, ಖಿನ್ನತೆ, ಹೃದಯ ಕಾಯಿಲೆಗಳು ಮತ್ತು ಸ್ಟ್ರೋಕ್. ಇವೆಲ್ಲ ದೊಡ್ಡ ಸಮಸ್ಯೆಯಾಯಿತು. ನಾವೇ ಒಂದೆರಡು ದಿನ ನಿದ್ರೆ ಬಿಟ್ಟರೆ ಮೂರನೇ ದಿನ ತಲೆನೋವು, ಅಜೀರ್ಣ, ಗ್ಯಾಸ್ಟ್ರಿಕ್ ಎಂದು ಒಂದಲ್ಲ ಒಂದು ಸಮಸ್ಯೆಯಾಗಿರುತ್ತದೆ. ಬಹುಬೇಗ ಕಿರಿಕಿರಿಯಾಗುವುದು, ಯಾರಾದರೂ ಎರಡು ಹೆಚ್ಚು ಮಾತಾಡಿದರೆ ಕೆನ್ನೆಗೆ ಹೊಡೆಯುವಷ್ಟು ಕೋಪ ಬರುವುದು, ಯಾವ ಕೆಲಸದ ಮೇಲೂ ಶ್ರದ್ಧೆ ಇಲ್ಲ ಎಂದಾಗುವುದೂ ಇದೆ. ಎಪ್ಪತ್ತರ ವಯಸ್ಸಿನ ನನ್ನಜ್ಜಿಯೊಬ್ಬರಿಗೆ ಊಟ ಆಗಿ ಕೈತೊಳೆಯುತ್ತಿದ್ದಂತೆ ಹಾಸಿಗೆ ರೆಡಿ ಇರಬೇಕು. ಒಂದು ಗಂಟೆ ನಿದ್ರೆ ಮಾಡಿ ಎದ್ದ ಮೇಲೆ ಅವರ ಕೆಲಸದ ಉತ್ಸಾಹ ನವತರುಣಿಯದ್ದು! ಅಜ್ಜಿಗೂ-ರಾಜಕಾರಣಿಗಳಿಗೂ ಹೋಲಿಕೆ ಸಾಧ್ಯವೇ ಇಲ್ಲವಾದರೂ ನಿದ್ರೆಗೆ ದೇಹವನ್ನು ರಿಫ್ರೆಶ್ ಮಾಡುವ ಶಕ್ತಿ ಆ ಮಟ್ಟಿಗಿದೆ. ಆದರೆ, ಎಷ್ಟು ರಾಜಕಾರಣಿಗಳಿಗೆ ಹೀಗೆ ಮಧ್ಯಾಹ್ನದ ಹೊತ್ತು ಸಣ್ಣ ನಿದ್ರೆ (ನ್ಯಾಪ್) ಮಾಡಿ ಏಳುವ ಅವಕಾಶವಿದೆ?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಸ್ಲೀಪ್ ಆಪ್ನಿಯಾ’ ಎಂಬ ನಿದ್ರಾರೋಗದಿಂದ ಬಳಲುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಸರಿಯಾದ ಚಿಕಿತ್ಸೆ ಪಡೆದು ಸಮಸ್ಯೆ ಇಲ್ಲವಾಗಿದೆ ಎಂದು ಅವರೇ ಹೇಳಿದ್ದರು. ಸದ್ಯ ಎಪ್ಪತ್ತರಲ್ಲಿರುವ ಅವರು ಯೋಗ-ಪ್ರಾಣಾಯಾಮಗಳನ್ನು ಮಾಡುವ ಚಿತ್ರಗಳನ್ನೂ ನೋಡಿದ್ದೆವು. ಆದರೆ, ಈ ಸಮಸ್ಯೆ ಬಗ್ಗೆ ಗೊತ್ತಿಲ್ಲದ ಎಷ್ಟೋ ಮಂದಿ ಅವರ ಸಾರ್ವಜನಿಕ ನಿದ್ರೆಯ ಫೋಟೋಗಳ ಬಗ್ಗೆ ಆಡಿಕೊಳ್ಳುವಾಗ ರಾಜಕಾರಣಿಗಳು ವೈಯಕ್ತಿಕ ಬದುಕಿನ ಮೇಲೆ, ತಮ್ಮ ದೇಹಾರೋಗ್ಯದ ಮೇಲೆ ಗಮನ ಹರಿಸಬೇಕಾದದ್ದು ಎಷ್ಟು ಮುಖ್ಯ ಎಂದು ಗೊತ್ತಾಗುತ್ತದೆ.
ಕೆಲವರಷ್ಟೇ ನಾಲ್ಕೈದು ಗಂಟೆಗಳ ನಿದ್ರೆಯಿಂದ ಇಡೀ ದಿನ ಲವಲವಿಕೆಯಿಂದ ಕೆಲಸ ಮಾಡಬಹುದು. ಆದರೆ, ಎಲ್ಲರ ಶರೀರಕ್ಕೂ ಈ ಸಾಮರ್ಥ್ಯ ಇರುವುದಿಲ್ಲ ಎನ್ನುತ್ತದೆ ಅಧ್ಯಯನ. ಕನಿಷ್ಠ ಆರೇಳು ಗಂಟೆಗಳ ನಿದ್ರೆ ಸಾಮಾನ್ಯ ಶರೀರಕ್ಕೆ ಬೇಕೇ ಬೇಕು. ಆದರೆ, ಕಡಿಮೆ ನಿದ್ರಿಸಿ ಯಶಸ್ಸು ಕಂಡ ವಿಶ್ವನಾಯಕರಿದ್ದಾರೆ. ಬರಾಕ್ ಒಬಾಮ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭ ದಿನಕ್ಕೆ ಆರು ಗಂಟೆ ನಿದ್ರಿಸುತ್ತಿದ್ದರಂತೆ. ಕೆಲವೊಮ್ಮೆ ಅಷ್ಟೂ ಸಾಧ್ಯವಾಗುತ್ತಿರಲಿಲ್ಲ ಎಂದು ಅವರೇ ಹೇಳಿಕೊಂಡಿದ್ದರು. ಅಮೆರಿಕದ ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ತಾನು ಮಲಗುವುದು ನಾಲ್ಕೇ ತಾಸು, 12-14 ತಾಸು ಮಲಗುವವರು ನನ್ನ ಜೊತೆ ಸ್ಪರ್ಧಿಸಲು ಯೋಗ್ಯರೇ ಅಲ್ಲ,” ಎಂದು ವಿವಾದಾತ್ಮಾಕ ಹೇಳಿಕೆ ನೀಡಿದ್ದರು.
ಇನ್ನು, ಪ್ರಧಾನಿ ಮೋದಿಯವರು ಎಷ್ಟು ಹೊತ್ತು ಮಲಗುತ್ತಾರೆ ಎನ್ನುವುದು ಬಹುತೇಕ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರವಾಗಿಬಿಟ್ಟಿದೆ. ಮೂರರಿಂದ ನಾಲ್ಕು ತಾಸು ನಿದ್ರಿಸಿ ಛಕ್ಕನೆ ಎದ್ದು ಕೂರುವ ಅವರೂ ನಿದ್ರೆಯಿಂದ ಮಾರುದೂರವೇ. ಆದರೆ, “ತನ್ನ ದೇಹ ಎಷ್ಟೋ ವರ್ಷಗಳಿಂದ ಇಷ್ಟೇ ನಿದ್ರೆಗೆ ಟ್ಯೂನ್ ಆಗಿಹೋಗಿದೆ. ಹೆಚ್ಚಿಗೆ ಬೇಕೆಂದು ಅನ್ನಿಸುವುದೇ ಇಲ್ಲ,” ಎಂದು ನಟ ಅಕ್ಷಯ್ ಕುಮಾರ್ ನಡೆಸಿದ್ದ ಸಂದರ್ಶನದಲ್ಲಿ ನಿದ್ರೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದರು.
ಏನು ಮಾಡಬಹುದು?
ಇಂತಹ ಸಲಹೆಗಳನ್ನು ರಾಜಕಾರಣಿಗಳಿಗೆ ಕೊಡುವುದು ಕಷ್ಟವೇ ಆದರೂ, ಒಳ್ಳೆಯ ದಿನಚರಿ ಅಭ್ಯಾಸದಿಂದ ಲಾಭವಲ್ಲದೆ ನಷ್ಟವಂತೂ ಇಲ್ಲ. ಎಷ್ಟೇ ಒತ್ತಡವಿದ್ದರೂ ರಾತ್ರಿ ಹನ್ನೆರಡಕ್ಕಂತೂ ಮಲಗಲೇಬೇಕು ಎಂಬ ಲೆಕ್ಕಾಚಾರವಿಟ್ಟುಕೊಳ್ಳುವುದು ಉತ್ತಮ. ವಾರದಲ್ಲಿ ಕೊನೇ ಪಕ್ಷ ನಾಲ್ಕೈದು ದಿನವಾದರೂ ಇದನ್ನು ರೂಢಿಸಿಕೊಳ್ಳುವ ಪ್ರಯತ್ನ ಮಾಡಬೇಕು. ವರ್ಷಾನುಗಟ್ಟಲೆ ಒಂದು ತೆರನಾದ ಜೀವನಕ್ರಮ ರೂಢಿಯಾದಾಗ ಇದ್ದಕ್ಕಿದ್ದಂತೆ ಬದಲಾವಣೆ ತರುವುದು ಕಷ್ಟವೇ. ನಿಧಾನವಾಗಿಯಾದರೂ ಇದು ಅಭ್ಯಾಸವಾಗಲಿ.
ಉತ್ತಮ ಆಹಾರಕ್ರಮ, ವ್ಯಾಯಾಮಗಳು ದೇಹವನ್ನು ಸುಸ್ಥಿತಿಯಲ್ಲಿಡುತ್ತದೆ. ಎಷ್ಟೇ ಕೆಲಸದೊತ್ತಡವಿದ್ದರೂ ನಿಯಮಿತವಾಗಿ ಇವನ್ನು ಪಾಲಿಸಿದರೆ ನಿದ್ರೆಯ ಚಕ್ರ ಸರಿಯಾಗಿರುತ್ತದೆ.
ಅಧ್ಯಯನಗಳ ಪ್ರಕಾರ, ಹಗಲಿನ ವೇಳೆಯಲ್ಲಿ ಇಪ್ಪತ್ತು-ಮೂವತ್ತು ನಿಮಿಷಗಳ ಚಿಕ್ಕ ನಿದ್ರೆ (ನ್ಯಾಪ್) ಮಾಡುವುದರಿಂದ ಯೋಚನಾಶಕ್ತಿ, ಚುರುಕುತನ ಹೆಚ್ಚುತ್ತದೆ. ದಿನದಲ್ಲಿ ಇಂತಹ ಒಂದು ನ್ಯಾಪ್ ಮಾಡುವ ಬಗ್ಗೆ ರಾಜಕಾರಣಿಗಳು ಗಮನ ಹರಿಸಬಹುದು. ಪ್ರಪಂಚ ಕಂಡ ಮಹಾ ಮುತ್ಸದ್ದಿ, ಬ್ರಿಟಿಷ್ ಪ್ರಧಾನಿಯಾಗಿದ್ದ ವಿನ್‍ಸ್ಟನ್ ಚರ್ಚಿಲ್ ರಾತ್ರಿ ಐದಾರು ತಾಸಷ್ಟೇ ನಿದ್ರಿಸಿದರೆ, ಹಗಲು ಹೊತ್ತು ಎರಡು ಗಂಟೆಗಳಷ್ಟು ನ್ಯಾಪ್ ಮಾಡುತ್ತಿದ್ದರಂತೆ!
ಆಡಳಿತದ ಚುಕ್ಕಾಣಿಯ ಸ್ಥಾನದಲ್ಲಿ ನಿರ್ಧಾರಗಳನ್ನು ತ್ವ6ರಿತವಾಗಿ ತೆಗೆದುಕೊಳ್ಳುವುದು, ಎಷ್ಟೋ ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸುವುದು ಸಾಮಾನ್ಯ. ಇಂಥ ವಿಪರೀತ ಒತ್ತಡಗಳನ್ನು ಆಗಾಗ ಎದುರಿಸುವುದರಿಂದಲೇ ರಾಜಕಾರಣಿಗಳು ಇತರರಿಗಿಂತ ಬೇಗನೆ ಭಾವನಾತ್ಮಕ ಮತ್ತು ಮಾನಸಿಕ ತೊಳಲಾಟಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ಬಹಳಷ್ಟು ಸಂಶೋಧನೆಗಳನ್ನು ನಡೆಸಿ ಬರೆದ ತಮ್ಮ ಪುಸ್ತಕ ‘ಲೂಸಿಂಗ್ ಪೊಲಿಟಿಕಲ್ ಆಫೀಸ್’ನಲ್ಲಿ ಜೇನ್ ರಾಬರ್ಟ್ಸ್ ಹೇಳುತ್ತಾರೆ. ಅಂದರೆ, ಎಲ್ಲ ಒತ್ತಡಗಳ ನಡುವೆಯೂ ರಾಜಕಾರಣಿಗಳು ತಮ್ಮ ಆರೋಗ್ಯದ ಮೇಲೆ, ಸರಿಯಾದ ಪ್ರಮಾಣದ ನಿದ್ರೆಗೆ ಗಮನ ಕೊಡುವುದು ಬಹಳ ಮುಖ್ಯ. ಆಡಳಿತದ ಬಹುಮುಖ್ಯ ಸ್ಥಾನಗಳಲ್ಲಿ ಕುಳಿತು ಅತ್ಯುತ್ತಮ ನಿರ್ಧಾರಗಳನ್ನು ಕೈಗೊಳ್ಳಲು ದೇಹ-ಮನಸ್ಸು ಸುಸ್ಥಿತಿಯಲ್ಲಿರುವುದು ಅವಶ್ಯ. ಯಾಕೆಂದರೆ, ರಾಜಕಾರಣಿಗಳ ಒಂದು ನಿರ್ಧಾರ ಜನಸಾಮಾನ್ಯರ ಬದುಕು ಬದಲಿಸಬಲ್ಲದು!
ಅಂಕಣಕಾರರು ಹವ್ಯಾಸಿ ಪತ್ರಕರ್ತರು