ಸಿಂಧೂ ಕಣಿವೆ ನಾಗರಿಕತೆ ನೆಲೆಸಿದ್ದ ಇಂದಿನ ಹರಿಯಾಣದ ರಾಖೀಗಢಿಯ ಉತ್ಖನನದಲ್ಲಿ ದೊರೆತ ಅನುವಂಶಿಕ ಜೈವಿಕ ಅಣುವಿನಲ್ಲಿ (ಡಿಎನ್ಎ) ‘ಆರ್ಯ’ರ ವಂಶವಾಹಿ ಇಲ್ಲ ಎಂಬುದಾಗಿ ಇತ್ತೀಚಿನ ಅಧ್ಯಯನ ಸಾರಿದೆ.
ನಾಲ್ಕೂವರೆ ಸಾವಿರ ವರ್ಷಗಳಷ್ಟು ಹಳೆಯದಾದ ರಾಖೀಗಢಿ ಮಹಿಳಾ ಅಸ್ಥಿಪಂಜರದ ಪುಟ್ಟ ಕಿವಿಮೂಳೆಯಿಂದ ಡಿಎನ್ಎ ಬೇರ್ಪಡಿಸಿ ತೆಗೆಯುವಲ್ಲಿ ಪುರಾತತ್ವಶಾಸ್ತ್ರಜ್ಞರು ಮತ್ತು ತಳಿವಿಜ್ಞಾನಿಗಳು ಕಡೆಗೂ ಯಶಸ್ಸು ಕಂಡಿದ್ದರು. ಸಿಂಧೂ ಕಣಿವೆಯ ನಾಗರಿಕತೆಯ ಹತ್ತಾರು ಸ್ಮಶಾನಗಳಿಂದ ಡಿಎನ್ಎ ತೆಗೆಯುವ ಪ್ರಯತ್ನಗಳು ಇತ್ತೀಚಿನವರೆಗೆ ವಿಫಲವಾಗಿದ್ದವು. ಹರಪ್ಪ ನಾಗರಿಕತೆಯು ನೂರಕ್ಕೆ ನೂರು ಭಾರತೀಯರು, ಅಲ್ಲಿದ್ದವರು ಈ ನೆಲದ ಮೂಲನಿವಾಸಿಗಳೇ ವಿನಾ ಹೊರಗಿನಿಂದ ವಲಸೆ ಬಂದವರಲ್ಲ ಎಂದು ವಾದಿಸುವ ವರ್ಗ ಈ ಅಧ್ಯಯನವನ್ನು ತನ್ನ ಅನುಕೂಲಕ್ಕೆ ತಿರುಗಿಸಿಕೊಂಡಿದೆ.
ಈ ಮಹಿಳೆಯ ಡಿಎನ್ಎ ದಲ್ಲಿ ಇರಾನ್ ನ ಪುರಾತನ ಪೂರ್ವಜರು ಮತ್ತು ಅಂಡಮಾನಿಗಳು ಅಥವಾ ಆಗ್ನೇಯ ಏಷ್ಯನ್ನರ ಮಿಶ್ರಿತ ಕೊಡುಗೆ ಪತ್ತೆಯಾಗಿದೆ. ತಳಿಶಾಸ್ತ್ರೀಯ ಕೋನದಿಂದ ನೋಡುವುದೇ ಆದಲ್ಲಿ ಆಕೆ ಇರಾನಿನ ಶಾಹ್ರಿ ಸೋಖ್ತಾದ ಖೋರಾಸಾನ್ ಎಂಬಲ್ಲಿ ಸಮಾಧಿ ಮಾಡಲಾಗಿರುವ ಮತ್ತೊಂದು ಗುಂಪಿನ ತಳಿಗೆ ಹತ್ತಿರವಾಗುತ್ತಾಳೆ. ಈ ಗುಂಪು ಮತ್ತು ರಾಖೀಗಢಿಯ ಮಹಿಳೆ ಒಂದೇ ಪೂರ್ವಜ ಪರಂಪರೆಯನ್ನು ಹಂಚಿಕೊಳ್ಳುತ್ತಾರೆ ಎಂದು ಅಧ್ಯಯನ ಸಾರಿದೆ. ಈ ನಮ್ಮ ಪೂರ್ವಜಳ ಡಿ.ಎನ್.ಎ. ಪೂರ್ವಜ ಚರಿತ್ರೆ ಇಂದು ಬದುಕಿರುವ ನಮ್ಮೆಲ್ಲರಿಗಿಂತ ಬಹು ಭಿನ್ನ. ಭಾರತದ ಹಾಲಿ ನಿವಾಸಿಗಳ್ಯಾರೂ ಈಕೆಯ ಡಿ.ಎನ್.ಎ. ಸಂರಚನೆಯನ್ನು ಹೊಂದಿಲ್ಲ.
ಹರಪ್ಪ ನಾಗರಿಕತೆ ಎಂದೂ ಕರೆಯಲಾಗುವ ಸಿಂಧೂ ಕಣಿವೆ ನಾಗರಿಕತೆಯು ನಾಲ್ಕು ಸಾವಿರ ವರ್ಷಗಳಷ್ಟು ಹಳೆಯದು. ಗಾತ್ರದಲ್ಲಿ ತನ್ನ ಸಮಕಾಲೀನ ನಾಗರಿಕತೆಗಳಾದ ಮೆಸೊಪೊಟಾಮಿಯಾ, ಪ್ರಾಚೀನ ಈಜಿಪ್ಟ್ ನ್ನು ಕೂಡ ಮೀರಿಸಿತ್ತು. ಸಾವಿರಾರು ಕಿ. ಮೀ. ಉದ್ದದ ವಾಣಿಜ್ಯ ಮಾರ್ಗಗಳನ್ನು ಹೊಂದಿತ್ತು. ಕೃಷಿ, ಒಳಚರಂಡಿ ವ್ಯವಸ್ಥೆಯೂ ಸೇರಿದಂತೆ ಯೋಜಿತ ನಗರಗಳನ್ನು ಹೊಂದಿದ್ದ ಈ ನಾಗರಿಕತೆ ಹಠಾತ್ತನೆ ನಿಗೂಢವಾಗಿ ಕಣ್ಮರೆಯಾಯಿತು. ಈ ನಾಗರಿಕತೆಯಲ್ಲಿ ಬದುಕಿದ್ದ ಜನ ಯಾರು, ಎಲ್ಲಿಗೆ ಹೋದರು ಎಂಬುದನ್ನು ಖಚಿತವಾಗಿ ಹೇಳುವ ಪರಿಸ್ಥಿತಿ ಈಗಲೂ ಇಲ್ಲ.

ಹಿಂದೂ ಧರ್ಮದ ಪುರಾತನ ಪಠ್ಯ ಋಗ್ವೇದದಲ್ಲಿ ಸಮರ ದೇವ ಇಂದ್ರ ತನ್ನ ”ಅಪರಿಶುದ್ಧ-ಹೊಲಸು-ಅನೈತಿಕ ಶತ್ರುಗಳು’’ ಅಥವಾ ”ದಾಸರ’’ ಮೇಲೆ ತನ್ನ ಅಶ್ವರಥವನ್ನೇರಿ ಹೋಗಿ ಅವರ ಪುರಗಳನ್ನು ನಾಶ ಮಾಡಿ ತನ್ನ ಆರ್ಯ ಜನರಿಗಾಗಿ ನೀರು ಮತ್ತು ನೆಲವನ್ನು ಗಳಿಸುತ್ತಾನೆ. ಋಗ್ವೇದವನ್ನು 3000 ಮತ್ತು 4000 ವರ್ಷಗಳ ನಡುವೆ ರಚಿಸಲಾಯಿತು. ಬರೆಹದಲ್ಲಿ ದಾಖಲಿಸುವ ಎರಡು ಸಾವಿರ ವರ್ಷಗಳ ಮುನ್ನ ಬಾಯಿಂದ ಬಾಯಿಗೆ ಪೀಳಿಗೆಯಿಂದ ಪೀಳಿಗೆಗೆ ದಾಟಿ ಬಂದಿತ್ತು.
ಋಗ್ವೇದದ ನಿರೂಪಣೆಯಲ್ಲಿ ದಾಳಿ ಮಾಡುವವರ ಬಳಿ ಕುದುರೆಗಳೂ ರಥಗಳೂ ಇದ್ದವು ಸಿಂಧೂ ಕಣಿವೆಯ ನಾಗರಿಕತೆಯು ಅಶ್ವಪೂರ್ವ ಸಮಾಜ ಎಂದು ಪುರಾತತ್ವ ಶಾಸ್ತ್ರ ಹೇಳುತ್ತದೆ. ಸಿಂಧೂ ನಾಗರಿಕತೆಯ ತಾಣಗಳಲ್ಲಿ ನಡೆದಿರುವ ಉತ್ಖನನಗಳಲ್ಲಿ ಕುದುರೆ ಅಥವಾ ರಥಗಳ ಪುರಾವೆಗಳು ಇಲ್ಲವೇ ಅರೆಕಡ್ಡಿಗಳನ್ನುಳ್ಳ ಚಕ್ರಗಳ (spoked wheels) ಅವಶೇಷಗಳಾಗಲಿ ದೊರೆತಿಲ್ಲ. ಜಾನುವಾರುಗಳು ಎಳೆಯುವ ಬಂಡಿಗಳ ಜೇಡಿಮಣ್ಣಿನ ಬೊಂಬೆಗಳು ಕಂಡು ಬಂದಿವೆ. ಕುದುರೆಗಳು ಮತ್ತು ಅರೆಕಡ್ಡಿಗಳ ಗಾಲಿಗಳ ರಥಗಳು ಯೂರೇಶಿಯಾದ ಕಂಚು ಯುಗದ ಸಾಮೂಹಿಕ ವಿನಾಶದ ಅಸ್ತ್ರಗಳಾಗಿದ್ದವು.
ಉತ್ತರ ಮತ್ತು ಪಶ್ಚಿಮದಿಂದ ಬಂದ ಇಂಡೋ ಆರ್ಯನ್ ವಲಸಿಗರ ಆಗಮನವೇ ಸಿಂಧೂ ಕಣಿವೆಯ ನಾಗರಿಕತೆಯ ಪತನಕ್ಕೆ ಕಾರಣವಾಯಿತು ಎನ್ನಲಾಗಿದೆ. ಭಿನ್ನ ಪೂರ್ವಜರನ್ನು ಹೊಂದಿದ ಜನಾಂಗಗಳು ಘರ್ಷಿಸಿ ಜನಸಂಖ್ಯಾ ಸಂರಚನೆಯೇ ಬದಲಾಯಿತು ಎಂದು ತಳಿಶಾಸ್ತ್ರೀಯ ಅಧ್ಯಯನಗಳು ಹೇಳಿವೆ. ಆರ್ಯರು ಹೊರಗಿನಿಂದ ಬಂದವರಲ್ಲ ಎಂಬ ತಮ್ಮ ವಾದವನ್ನು ಇತ್ತೀಚಿನ ರಾಖೀಗಢಿ ಅಧ್ಯಯನ ಸಾಬೀತು ಮಾಡಿದೆ ಎನ್ನುವುದು ಬಹು ಆಳದ ರಾಜಕಾರಾಣ. ಈ ರಾಜಕಾರಣದಿಂದಾಗಿಯೇ ಹಲವು ಸಂಶೋಧನಕಾರರು ನಿಷ್ಠುರ ಸತ್ಯಗಳನ್ನು ನೇರವಾಗಿ ಹೇಳಲು ಹಿಂಜರಿದಿದ್ದಾರೆ.

ಯಾರು ಎಲ್ಲಿಂದ ಬಂದವರು ಎಂಬ ಕಟು ಸತ್ಯ:
65 ಸಾವಿರ ವರ್ಷಗಳ ಹಿಂದೆ ಮೊದಲ ಮಾನವರು ಆಫ್ರಿಕಾದಿಂದ ಹೊರಬಿದ್ದರು ಎಂಬ ಬಗೆಗೆ ಯಾರಿಗೂ ತಕರಾರಿಲ್ಲ. ಮಧ್ಯ ಏಷ್ಯಾದಿಂದ ಆರ್ಯರ ವಲಸೆಯ ಮಾತಾಡಿದರೆ ಮಾತ್ರ ಹಲವರು ಸಹಿಸುವುದಿಲ್ಲ. ಎಲ್ಲವೂ ಹಿಂದು, ಎಲ್ಲವೂ ಭಾರತೀಯ, ವೈದಿಕ ಮತ್ತು ಆರ್ಯನ್ ಎಂದು ನಂಬುವುದರಿಂದ ಹೊಮ್ಮುವ ಸಮಸ್ಯೆಯಿದು. ಆರ್ಯರು ಹೊರಗಿನಿಂದ ವಲಸೆ ಬಂದರು ಎಂದು ಒಪ್ಪಿಕೊಳ್ಳಲಾರರು. ಒಪ್ಪಿಕೊಂಡರೆ ಇಲ್ಲಿನ ಮೂಲನಿವಾಸಿಗಳು ಯಾರು, ಯಾರು ಅಲ್ಲ ಎಂಬುದರ ಸುತ್ತಮುತ್ತ ಹೆಣೆಯಲಾಗಿರುವ ರಾಜಕೀಯ ಸಿದ್ಧಾಂತಗಳು ನುಚ್ಚುನೂರಾಗುತ್ತವೆ.
ಆರ್ಯರು ಭಾರತದಿಂದ ಏಷಿಯಾ ಮತ್ತು ಯೂರೋಪಿನ ಇತರೆ ಭಾಗಗಳಿಗೆ ವಲಸೆ ಹೋದರೇ ವಿನಾ ಹೊರಗಿನಿಂದ ಭಾರತಕ್ಕೆ ಬಂದವರಲ್ಲ ಎಂಬ ಸಿದ್ಧಾಂತವನ್ನು ಹೇಳುವವರಿದ್ದಾರೆ. ಆದರೆ ಈ ಬಗ್ಗೆ ಸಂಶೋಧನೆ ಮಾಡಿ ವೈಜ್ಞಾನಿಕ ನಿಯತಕಾಲಿಕಗಳಲ್ಲಿ ವಿಚಾರ ಮಂಡಿಸಿದವರು ಒಬ್ಬರೂ ಇಲ್ಲ. ಇಂದು ಶೇ 17.5ರಷ್ಟು ಭಾರತೀಯರಲ್ಲಿ ಆರ್ಯನ್ ಡಿಎನ್ಎ ಇದೆಯೆಂದು ಕಂಡು ಬಂದಿದೆ. ಇದೇ ಡಿಎನ್ಎ ಮಧ್ಯ ಏಷ್ಯಾ ಮತ್ತು ಯೂರೋಪಿನಲ್ಲೂ ಇದೆ. ರಾಖೀಗಢಿಯ 4,500 ವರ್ಷಗಳ ಹಿಂದಿನ ಅಸ್ಥಿಪಂಜರದಲ್ಲಿ ಈ ಡಿಎನ್ಎ ಇಲ್ಲ. ಅಂದರೆ ಮಧ್ಯ ಏಷ್ಯಾಕ್ಕೂ ಸಿಂಧೂ ನಾಗರಿಕತೆಗೂ ಸಂಬಂಧ ಇರಲಿಲ್ಲ. 4,500 ವರ್ಷಗಳ ಹಿಂದೆ ಆರ್ಯನ್ ಡಿಎನ್ಎ ಇರಲಿಲ್ಲ ಮತ್ತು ಇಂದು ಇದೆ ಎಂದರೆ ಅರ್ಥವೇನು? ಈ ನಡುವಣ ಅವಧಿಯಲ್ಲಿ ಯಾರೋ ಹೊಸಬರು ಭಾರತವನ್ನು ಪ್ರವೇಶಿಸಿದ್ದರು ಎಂದು ಅಲ್ಲವೇ ಎಂದು ಈ ಕ್ಷೇತ್ರದಲ್ಲಿ ಸುದೀರ್ಘ ಅಧ್ಯಯನ ಮಾಡಿರುವ ಟೋನಿ ಜೋಸೆಫ್ ಪ್ರಶ್ನಿಸಿದ್ದಾರೆ.

ಹರಪ್ಪಾದ ನಾಗರಿಕರು ಶಿಶ್ನ ಆರಾಧಕರಾಗಿದ್ದರು, ಲಿಂಗವನ್ನು ಪೂಜಿಸುತ್ತಿದ್ದರು ಎನ್ನಲು ಪುರಾತತ್ವ ಪುರಾವೆಗಳಿವೆ. ಮೊದಲು ರಚಿತವಾದ ಋಗ್ವೇದ ಈ ಜನರನ್ನು ತೀವ್ರವಾಗಿ ಝಾಡಿಸಿದೆ. ಒಂದು ವಚನದಲ್ಲಿ ಶಿಶ್ನಾರಾಧಕರ ನಗರವೊಂದನ್ನು ಇಂದ್ರ ಸೋಲಿಸುತ್ತಾನೆ. ನಿನ್ನ ಝಳದಿಂದ ಯಕ್ಷಿಣಿ ಕೆಲಸಗಾರರನ್ನು ನಾಶಗೊಳಿಸು (ಆರ್ಯರು ತಮ್ಮ ದಸ್ಯು ಶತ್ರುಗಳನ್ನು ಅನ್ಯವ್ರತರು ಅಂದರೆ ವಿಚಿತ್ರ ವಿಧಿಗಳನ್ನು ನಡೆಸುವವರು ಎಂದು ಬಣ್ಣಿಸಿದ್ದಾರೆ) ಎಂಬುದಾಗಿ ಆತ ಅಗ್ನಿಯನ್ನು ಆವಾಹಿಸುತ್ತಾನೆ. ಅನಿಂದ್ರರು ಅಂದರೆ ಇಂದ್ರನಿಲ್ಲದವರು ಅವರು, ಶಿಶ್ನದೇವರುಗಳು ಅಥವಾ ಶಿಶ್ನಾರಾಧಕರು. ದುಷ್ಟ ಶಕ್ತಿಗಳಾದ ಅವರನ್ನು ನಿನ್ನ ಶಕ್ತಿಯಿಂದ ಸಂಹರಿಸು ಎನ್ನುತ್ತಾನೆ. ನಿನ್ನ ಜ್ವಾಲೆಗಳಿಂದ ವಿಗ್ರಹಾರಾಧಕರಾದ ಅವರನ್ನು (ಋಗ್ವೇದ ವಿಗ್ರಹಾರಾಧನೆಯನ್ನು ಒಪ್ಪುವುದಿಲ್ಲ) ಸುಟ್ಟುಬಿಡು. ಕೊಲೆಗಡುಕ ಫಟಿಂಗರನ್ನು ಬೂದಿಯಾಗಿಸು ಎಂದು ಕೋರುತ್ತಾನೆ. ಆದರೆ ಯಜುರ್ವೇದ ಮತ್ತು ಅಥರ್ವ ವೇದಗಳು ಬರುವ ಹೊತ್ತಿಗೆ ವಿಗ್ರಹಾರಾಧನೆ ಮತ್ತು ಶಿಶ್ನಾರಾಧನೆಯನ್ನು ಪವಿತ್ರವೆಂದು ಒಪ್ಪಿಕೊಳ್ಳಲಾಗಿರುತ್ತದೆ.
ಮಧ್ಯ ಏಷ್ಯಾದಿಂದ ಬಂದ ಆರ್ಯರು ಹೊಸತರಲ್ಲಿ ತಾವು ನೋಡಿದ್ದನ್ನು ಇಷ್ಟಪಡಲಿಲ್ಲ. ಆನಂತರದ ಶತಮಾನಗಳಲ್ಲಿ ಅವರು ಹರಪ್ಪಾದ ನಾಗರಿಕರೊಂದಿಗೆ ಬೆರೆತರು. ತಮ್ಮ ಸಂಸ್ಕೃತಿಯನ್ನು ಪರಿಚಯಿಸಿದರು, ಹರಪ್ಪಾದ ಸಂಗತಿಗಳನ್ನು ತಮ್ಮ ರೂಢಿ ನಂಬಿಕೆಗಳಿಗೆ ಅಳವಡಿಸಿಕೊಂಡರು. ಆದರೆ ಎರಡೂ ಜನಾಂಗಗಳ ನಡುವಣ ವ್ಯತ್ಯಾಸ ತಳಿ ಮಾತ್ರವೇ ಅಲ್ಲ, ಇತಿಹಾಸವೂ ಬೇರೆ ಬೇರೆಯದಾಗಿತ್ತು. ಹರಪ್ಪಾದ ಲಿಪಿಯನ್ನು ಅರ್ಥಮಾಡಿಕೊಳ್ಳುವ ಕುರಿತು ವೇದಗಳಲ್ಲಿ ಯಾವ ಸುಳಿವೂ ಸಿಗುವುದಿಲ್ಲ. ಹಾಗೆಯೇ ಹರಪ್ಪಾದ ಮೊಹರುಗಳು ಮತ್ತು ವೇದಗಳ ಜಗತ್ತುಗಳ ನಡುವೆ ಕೂಡ ಯಾವ ಸಂಬಂಧವೂ ಇರಲಿಲ್ಲ.

ವೈದಿಕ ಪಠ್ಯಗಳು ಕುದುರೆಯನ್ನು ದೈವತ್ವಕ್ಕೆ ಏರಿಸುತ್ತವೆ. ಹರಪ್ಪಾದ ಮೊಹರುಗಳಲ್ಲಿ ಕುದುರೆಗಳ ಸುಳಿವೇ ಇಲ್ಲ. ಆದರೆ ಹರಪ್ಪನ್ ಸಂಸ್ಕೃತಿ ಆರ್ಯರ ಸಂಸ್ಕೃತಿಯೊಂದಿಗೆ ಮಿಳಿತಗೊಂಡು ದಕ್ಷಿಣ ಭಾರತದೆಡೆ ಪಯಣಿಸಿತು. ಅಲ್ಲಿ ವಾಸಿಸಿದ್ದ ಆದಿ ಭಾರತೀಯರನ್ನು ವರಿಸಿ ದ್ರಾವಿಡ ಸಂಸ್ಕೃತಿಗೆ ದಾರಿ ಮಾಡಿತು.
ಇನ್ನು ರಾಖೀಗಢಿ ಮಹಿಳಾ ಅಸ್ಥಿಪಂಜರದ ಅಧ್ಯಯನದ ಬಗ್ಗೆ ಸಮೂಹ ಮಾಧ್ಯಮಗಳು ಈಕೆಯ ದೇಸೀತನದ ಮೇಲೆ ಹೆಚ್ಚು ಒತ್ತು ಕೊಟ್ಟಿವೆ. ಈಕೆಯ ತಳಿಸಂಬಂಧಿ ಮಿಶ್ರಣವು ಇಂದಿನ ಭಾರತದ ನಿವಾಸಿಗಳಿಗಿಂತ ಹೆಚ್ಚು ಪಾಶ್ಚಿಮಾತ್ಯ ಎಂಬ ಅಂಶವನ್ನು ಮರೆಮಾಚಿವೆ. ಸಿಂಧೂ ಕಣಿವೆ ನಾಗರಿಕತೆಯು ಏಕ ತಳಿಯ ಜನಾಂಗವಾಗಿರಲಿಲ್ಲ ಎಂಬುದನ್ನು ಅಧ್ಯಯನ ಸಾರುತ್ತದೆ. ರಾಖೀಗಢಿಯು ಹರಪ್ಪಾದ ಸಾವಿರಾರು ನೆಲೆಗಳ ಪೈಕಿ ಒಂದು ಮಾತ್ರ. ಈ ಹೆಣ್ಣುಮಗಳನ್ನು ಸಮಾಧಿ ಮಾಡಿರುವಂತಹ ಸ್ಮಶಾನಗಳಲ್ಲಿ ಕೇವಲ ಗಣ್ಯರನ್ನು ಮಾತ್ರವೇ ಹುಗಿಯುತ್ತಿದ್ದರು ಎಂಬುದು ಗಮನಾರ್ಹ ಅಂಶ. ದಕ್ಷಿಣ ಏಷ್ಯಾದ ಪುರಾತತ್ವ ಗತವನ್ನು ಮತ್ತು ಈ ಜನರ ತಳಿಶಾಸ್ತ್ರೀಯ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಲು ಇನ್ನೂ ಸಾವಿರಾರು ಡಿಎನ್ಎ ಮಾದರಿಗಳ ಅಧ್ಯಯನ ಅಗತ್ಯವಿದೆ, ಕೇವಲ ಒಂದು ಡಿಎನ್ಎ ಅಧ್ಯಯನದಿಂದ ಅಂತಿಮ ನಿರ್ಧಾರಕ್ಕೆ ಬರುವುದು ಸಾಧ್ಯವಿಲ್ಲ ಎಂದು ರಾಖೀಗಢಿ ಅಧ್ಯಯನಕಾರರೇ ಹೇಳಿದ್ದಾರೆ.