• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಯೋಗ, ಧ್ಯಾನ, ಬೆಂಡೆ ಕಾಯಿ ಗೊಜ್ಜು ಮತ್ತು ಅಸಲೀ ಫಕೀರರ ಹಿಮ್ಮಡಿಯ ರಕ್ತ!

by
March 31, 2020
in ದೇಶ
0
ಯೋಗ
Share on WhatsAppShare on FacebookShare on Telegram

ಜಗತ್ತನ್ನೇ ಬೆಚ್ಚಿಬೀಳಿಸಿರುವ ಕರೋನಾ ವೈರಾಣು ರುದ್ರನರ್ತನದ ಈ ಹೊತ್ತು ವಿಶ್ವಾದ್ಯಂತ ಜನರ ಕಣ್ಣಲ್ಲಿ ಅಚ್ಚೊತ್ತಿರುವ ಭೀಕರ ದೃಶ್ಯಗಳಲ್ಲಿ ಬಹುಶಃ ಭಾರತದ ಕೂಲಿಕಾರ್ಮಿಕರ, ಬಡವರ ಬರಿಗಾಲಿನ ನಡಿಗೆ ಮತ್ತು ಪೊಲೀಸರ ಅಟ್ಟಹಾಸವೇ ಮೊದಲ ಸ್ಥಾನದಲ್ಲಿರಬಹುದು. ಭಾರತದ ಮಟ್ಟಿಗಂತೂ ಗಂಟುಮೂಟೆ ಹೊತ್ತುಕೊಂಡು, ಮಕ್ಕಳು ಮರಿ ಎತ್ತಿಕೊಂಡು, ಬೆನ್ನಿಗಂಟಿದ ಹೊಟ್ಟೆ, ನಿತ್ರಾಣ ದೇಹ ಮತ್ತು ಬಸವಳಿದ ಮುಖ ಹೊತ್ತು ಸೋತ ಕಾಲುಗಳನ್ನು ಎಳೆಯುತ್ತಾ ಹೆದ್ದಾರಿಗಳಲ್ಲಿ ಸಾಗುತ್ತಿರುವ ನತದೃಷ್ಟರ ಚಿತ್ರಗಳು ಐತಿಹಾಸಿಕ ವಲಸೆಯ ಚಿತ್ರಗಳಾಗಿ ದಾಖಲಾಗಿವೆ.

ADVERTISEMENT

ಅದೇ ಹೊತ್ತಿಗೆ, ಕರೋನಾ ಕಾಲದ ನಮ್ಮ ನೋಟಗಳಾಗಿ ಸ್ಮೃತಿಪಟಲಕ್ಕೆ ಸೇರಿಹೋದ ಮತ್ತೊಂದಿಷ್ಟು ಚಿತ್ರಗಳು, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಯೋಗಾಸನ ಮತ್ತು ಸಂಯಮ ಬೋಧನೆ, ರಾಮಾಯಣ ವೀಕ್ಷಿಸಿ ಎಂದು ಕರೆ ಕೊಟ್ಟ ಸಚಿವ ಜಾವ್ಡೇಕರ್ ಅವರು ಸ್ವತಃ ಟಿವಿ ಮುಂದೆ ಕೂತು ರಾಮಾಯಣ ವೀಕ್ಷಿಸುತ್ತಿರುವುದು, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ತಮ್ಮ ಪತ್ನಿಯೊಂದಿಗೆ ಪಗಡೆಯಾಡುತ್ತಾ, ಬೆಂಡೆ ಗೊಜ್ಜು ಮಾಡುತ್ತಾ ಲಾಕ್ ಡೌನ್ ಕಾಲ ಕಳೆಯುತ್ತಿರುವ ಚಿತ್ರ, .. ಹೀಗೆ ಲಾಕ್ ಡೌನ್ ನಿಂದಾಗಿ ಬೀದಿಪಾಲಾದ ಜನರು ಸ್ವತಃ ಮತ ಹಾಕಿ ಕಳಿಸಿದ ದಿಲ್ಲಿಯ ದೊರೆಗಳ ಸರಣಿ ಚಿತ್ರಗಳ ಮತ್ತೊಂದು ದೃಶ್ಯಾವಳಿ ಮತ್ತೊಂದು ಭಾರತವನ್ನು ಕಣ್ಣೆದುರಿಗಿಟ್ಟಿದೆ. ಒಂದು ಕಡೆ ಹೆದ್ದಾರಿಗಳು ಮತ್ತೊಂದು ಕಡೆ ದಿಲ್ಲಿಯ ಮಹಲುಗಳು ಭಿನ್ನ ಕಥೆ ಹೇಳುತ್ತಿವೆ. ಭಿನ್ನ ಭಾರತವನ್ನು ತೋರಿಸುತ್ತಿವೆ. ಈ ಎರಡು ಭಾರತಗಳ ನಡುವಿನ ಕಂದಕವನ್ನು ಕಣ್ಣಿಗೆ ರಾಚುತ್ತಿವೆ.

ಈಗ ಭಾರತ ನಿಜಕ್ಕೂ ಬೆತ್ತಲಾಗಿದೆ; ಜಗತ್ತಿನ ಎದುರು ಮತ್ತು ತನ್ನದೇ ಆಶಾಢಭೂತಿ ಜನರ ಎದುರು. ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ದುಬಾರಿ ಕನಸಿನ ಲೋಲುಪತೆಯಲ್ಲಿ ಮೆರೆಯುತ್ತಿದ್ದ, ಜಗತ್ತಿನ ಬಿಲಿಯನೇರ್ ಉದ್ಯಮಿಗಳ ಸ್ವರ್ಗ ಎಂಬ ಹುಸಿ ಹೆಗ್ಗಳಿಕೆಯಲ್ಲಿ ಮೈಮರೆತಿದ್ದ ಭಾರತದ ವಾಸ್ತವ ಬದುಕಿನ ಕರಾಳ ಮುಖವನ್ನು ಈ ಲಾಕ್ ಡೌನ್ ದೃಶ್ಯಾವಳಿಗಳು ಬೆತ್ತಲು ಮಾಡಿವೆ. ಝಗಮಗಿಸುವ ಐಷಾರಾಮಿ ಚಿತ್ರಗಳ ಹಿಂದಿನ ಕಡುಬಡತನದ ನಾಚಿಕೆಗೇಡಿನ ವಾಸ್ತವ ಬೆಚ್ಚಿಬೀಳುವಂತೆ ಬಿಚ್ಚಿಕೊಂಡಿದೆ.

ದೇಶದ ಇಷ್ಟು ವರ್ಷಗಳ ಕಾಲದ ದುರ್ಬಲ ವರ್ಗದ ಕಲ್ಯಾಣ ಕಾರ್ಯಕ್ರಮಗಳು, ಯೋಜನೆಗಳು ಮತ್ತು ನೀತಿಗಳು ನಿಜಕ್ಕೂ ತಲುಪಬೇಕಾದವರಿಗೆ ತಲುಪಿವೆಯೇ? ಬಡವರ ಬದುಕಿನಲ್ಲಿ ಬದಲಾವಣೆ ತಂದಿವೆಯೇ? ‘ಗರೀಬಿ ಹಠಾವೋ’ದಿಂದ ‘ಅಚ್ಛೇದಿನ’ದವರೆಗೆ, ‘ಭಾರತ ಪ್ರಕಾಶಿಸುತ್ತಿದೆ’ಯಿಂದ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ವರೆಗಿನ ಘೋಷಣೆಗಳು ದೇಶದ ದುರ್ಬಲ ವರ್ಗದವರ ಬದುಕಿನಲ್ಲಿ ಎಂಥ ಬದಲಾವಣೆ ತಂದಿವೆ ಎಂಬುದನ್ನೂ ಈ ಲಾಕ್ ಡೌನ್ ದರ್ಶನ ಮಾಡಿಸಿದೆ. ಇಂಡಿಯಾ ಮತ್ತು ಭಾರತದ ನಡುವಿನ ಕಂದಕದ ನೈಜ ಸ್ವರೂಪವನ್ನು ತೆರೆದಿಟ್ಟಿದೆ.

ಸಾಮಾಜಿಕ ಹೋರಾಟಗಾರ ಹಾಗೂ ಆರ್ಥಿಕ ತಜ್ಞ ಜೀನ್ ಡ್ರಜ್ ಹೇಳಿದಂತೆ, “ಈ ಲಾಕ್ ಡೌನ್ ನಿಜಕ್ಕೂ ದೊಡ್ಡ ವಿಪತ್ತಾಗಿ ಪರಿವರ್ತನೆಯಾಗುತ್ತಿದೆ. ಭಾರತದ ಪಾಲಿಗೆ ಇದು ದಶಕಗಳ ಕಾಲ ಸುಧಾರಿಸಿಕೊಳ್ಳಬೇಕಾದ ಪೆಟ್ಟು ಕೊಟ್ಟಿದೆ. ಅದರಲ್ಲೂ ವಲಸೆ ಕಾರ್ಮಿಕರು ಮತ್ತು ಬಡವರ ಬದುಕು ಅತ್ಯಂತ ಹೀನಾಯ ಬಿಕ್ಕಟ್ಟಿಗೆ, ಹಸಿವಿನ ಹಾಹಾಕಾರಕ್ಕೆ ಸಿಲುಕಿದೆ. ಸರ್ಕಾರ ಇಂತಹ ಹೊತ್ತಲ್ಲಿ ಸರಿಯಾದ ಕಾರ್ಯಯೋಜನೆ ಮತ್ತು ಸೂಕ್ತ ವಾಸ್ತವಿಕ ಜಾರಿ ವಿಧಾನದೊಂದಿಗೆ ಅಂಥವರ ನೆರವಿಗೆ ಧಾವಿಸಬೇಕಿದೆ. ಅದರಲ್ಲೂ ಮುಖ್ಯವಾಗಿ ಹಸಿವು ಮತ್ತು ನಿರುದ್ಯೋಗ ಮನುಷ್ಯನನ್ನು ಎಂಥ ಹತಾಶೆಗೂ, ಕ್ರೌರ್ಯಕ್ಕೆ ದೂಡಬಲ್ಲದು. ಆ ಹಿನ್ನೆಲೆಯಲ್ಲಿ ಸರ್ಕಾರಿ ಗೋದಾಮುಗಳಲ್ಲಿ ಕೊಳೆಯುತ್ತಿರುವ ಬರೋಬ್ಬರಿ 60 ದಶಲಕ್ಷ ಟನ್ ಆಹಾರ ಧಾನ್ಯವನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಕೂಡಲೇ ಆಗಬೇಕಿದೆ. ಪಡಿತರ ಚೀಟಿ, ಆಧಾರ್ ಎಂದು ಜನರನ್ನು ಗೋಳುಹೊಯ್ದುಕೊಳ್ಳದೆ, ಯಾರೆಲ್ಲಾ ಹಸಿವು ಎಂದು ಕೈಯೊಡ್ಡುತ್ತಾರೋ ಅವರೆಲ್ಲರಿಗೂ ಮನೆಮಂದಿಗೆ ತಿಂಗಳಿಗಾಗುವಷ್ಟಾದರೂ ಪಡಿತರ ವಿತರಣೆಯಾಗಬೇಕಿದೆ. ಹಣಕಾಸಿನ ಬೆಂಬಲವನ್ನು ಕೂಡ ಬ್ಯಾಂಕ್ ಖಾತೆಗಳ ಮೂಲಕ ತಲುಪಿಸುವಲ್ಲಿ ಸಾಕಷ್ಟು ವಿಳಂಬವಾಗಲಿದೆ. ಹಾಗಾಗಿ ಮೊದಲು ಅವರಿಗೆ ಅನ್ನ ನೀಡುವ ಕೆಲಸವಾಗಬೇಕು. ಅದು ಆಗದೇ ಇದ್ದರೆ, ಭೀಕರ ಸಾವಿನ ಸರಣಿಗೆ ದೇಶ ಸಾಕ್ಷಿಯಾಗಬಹುದು” ಎಂದು ಎಚ್ಚರಿಸಿದ್ದಾರೆ.

‘ದಿ ಕ್ಯಾರವಾನ್’ ಸುದ್ದಿತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ಆಡಿರುವ ಮಾತುಗಳು, ಯೋಗ ಧ್ಯಾನದಲ್ಲಿ ಮುಳುಗಿರುವ, ಐಷಾರಾಮಿ ಸರ್ಕಾರಿ ಬಂಗಲೆಯಲ್ಲಿ ಸಂಯಮದ ಪಾಠ ಮಾಡುವ ಆಳುವ ಮಂದಿಯ ಕಣ್ಣು ತೆರೆಸಿದರೆ ಮಾತ್ರ, ಬೀದಿಪಾಲಾಗಿರುವ ಬರಿಗಾಲಿನ ಅಸಲೀ ಫಕೀರರ ಜೀವ ಉಳಿಯಬಹುದು. ದೇಶ ಕಟ್ಟಿದ ಶ್ರಮಿಕರ ತೋಳುಗಳು ಮತ್ತೆ ಬಲತುಂಬಬಹುದು.

ಆದರೆ, ಜೀವ್ ಡ್ರಜ್ ಅವರ ಇಂತಹ ಕಿವಿಮಾತುಗಳನ್ನು ಕೇಳಿಸಿಕೊಂಡು ಜನರ ನೆರವಿಗೆ ಬರುವ ನಿಟ್ಟಿನಲ್ಲಿ ಸರ್ಕಾರ ನಡೆಸುವವರು ನಿಜಕ್ಕೂ ಕ್ರಿಯಾಶೀಲವಾಗಿ, ಯೋಜನಾಬದ್ಧವಾಗಿ ಕಾಳಜಿಯಿಂದ ಕೆಲಸ ಮಾಡುವರೇ ? ಎಂಬ ಬಗ್ಗೆ ನಂಬಿಕೆ ಬರದ ಸ್ಥಿತಿ ಸದ್ಯಕ್ಕಿದೆ. ಲಾಕ್ ಡೌನ್ ನಂತಹ ಕ್ರಮಕ್ಕೆ ಮುನ್ನ ಕನಿಷ್ಠ ಪ್ರಮಾಣದ ಯೋಜನೆ, ಯೋಚನೆಗಳನ್ನೂ ಮಾಡದೇ ಏಕಾಏಕಿ ರಾತ್ರಿ ಎಂಟಕ್ಕೆ ಘೋಷಣೆ ಮಾಡಿ, ಕೇವಲ ನಾಲ್ಕು ತಾಸಲ್ಲಿ ಇಡೀ ದೇಶ ಎಲ್ಲಿದ್ದೀರೋ ಅಲ್ಲಿ ಹಾಗೇಯೇ ಇದ್ದುಬಿಡಿ ಎಂಬಂತಹ ಘೋಷಣೆ ಮಾಡುವಷ್ಟರಮಟ್ಟಿಗೆ ಈ ದೇಶ ಸಶಕ್ತವಾಗಿದೆಯೇ? ಕದಲದೇ ತಿಂಗಳುಗಟ್ಟಲೆ ನಾಲ್ಕುಗೋಡೆಯ ನಡುವೆ ಇದ್ದು ಬದುಕು ಉಳಿಸಿಕೊಳ್ಳುವ ಶಕ್ತಿ ದೇಶದ ಎಷ್ಟು ಜನರಿಗೆ ಇದೆ? ಶೇ.25ರಷ್ಟು ವೇತನದಾರರು ಮತ್ತು ವ್ಯಾಪಾರ ವಹಿವಾಟು ಮಂದಿಯನ್ನು ಹೊರತುಪಡಿಸಿ ಉಳಿದವರ ಬದುಕು ಹೇಗೆ ನಡೆಯುತ್ತಿದೆ? ಅಂತಹ ಬದುಕಿಗೆ ಇಂಥ ನಿರ್ಧಾರ ಕೊಡಬಹುದಾದ ಪೆಟ್ಟೇನು? ಎಂಬ ಬಗ್ಗೆ ಯೋಚನೆಯನ್ನೇ ಮಾಡದೇ ಇರುವ ಆಡಳಿತ ಇದೀಗ ಬಡವರ ಹಸಿವು ನೀಗಿಸಲು ತ್ವರಿತಗತಿಯಲ್ಲಿ ನೈಜ ಕಾಳಜಿಯಿಂದ ಕೆಲಸ ಮಾಡಬಲ್ಲದೆ? ಎಂಬ ಪ್ರಶ್ನೆಗಳ ಹಿನ್ನೆಲೆಯಲ್ಲಿ ಆ ಅನುಮಾನಗಳು ಎದ್ದಿವೆ.

ಅಲ್ಲದೆ, ಯಾವುದೇ ಜನನಾಯಕ ಅಥವಾ ಪ್ರಭುತ್ವ ಜನರ ಕಷ್ಟ-ಸಂಕಷ್ಟಗಳಿಗೆ ಸ್ಪಂದಿಸಲು ಒಂದೋ ಆ ಆಡಳಿತಕ್ಕೆ ಮತ್ತು ಅದರ ಚುಕ್ಕಾಣಿ ಹಿಡಿದವರಿಗೆ ನೈಜ ಜನಪರ ಕಾಳಜಿ ಇರಬೇಕು. ಜನರನ್ನು ಕಾಪಾಡುವ ತಾತ್ವಿಕ ಬದ್ಧತೆ ಇರಬೇಕು. ಇಲ್ಲವೇ ನಾಳೆ ಜನ ನನ್ನನ್ನು ಪ್ರಶ್ನಿಸುತ್ತಾರೆ? ತಿರಸ್ಕರಿಸುತ್ತಾರೆ ಎಂಬ ಭಯವಾದರೂ ಇರಬೇಕು. ಆದರೆ, ಸದ್ಯದ ಭಾರತದ ಇತ್ತೀಚಿನ ದಶಕಗಳ ರಾಜಕೀಯ ಇತಿಹಾಸ ನೋಡಿದರೆ, ರಾಜಕೀಯ ನಾಯಕನೊಬ್ಬ ಅಥವಾ ರಾಜಕೀಯ ಪಕ್ಷವೊಂದು ಆಡಳಿತ ಚುಕ್ಕಾಣಿ ಹಿಡಿಯಲು ಅಂತಹ ಜನಪರ ಯೋಜನೆ, ಪ್ರಣಾಳಿಕೆಗಳ ಹಂಗಿಲ್ಲ. ಬದಲಾಗಿ ಕೋಮುವಾದ, ರಾಷ್ಟ್ರೀಯತೆ ಮತ್ತು ಕೋಮು ರಾಷ್ಟ್ರೀಯತೆಗಳೆಂಬ ಅಜೆಂಡಾಗಳಿದ್ದು, ಅವನ್ನು ಜನರಿಗೆ ಆಕರ್ಶಕ ಪ್ಯಾಕೇಜುಗಳಲ್ಲಿ ತಲುಪಿಸುವ ಮಾಧ್ಯಮ ಮತ್ತು ಅಂತಹ ಕಥನಗಳನ್ನು ಜನರ ಅಂಗೈಗೆ ತಲುಪಿಸುವ ಟ್ರೋಲ್ ಪಡೆ ಇದ್ದರೆ ಸಾಕು; ನಾಯಕನೊಬ್ಬ ಆರಾಧ್ಯದೈವವಾಗಿ ಬದಲಾಗಬಲ್ಲ; ಪಕ್ಷವೊಂದು ದೇವರಕ್ಷಕ ಪಡೆಯಾಗಿ ಬದಲಾಗಬಲ್ಲದು ಎಂಬುದನ್ನು ಸದ್ಯದ ಇತಹಾಸ ತೋರಿಸಿಕೊಟ್ಟಿದೆ.

ಹಾಗಾಗಿ ತಮ್ಮದೇ ನಡುವಿನ ಸಮುದಾಯಗಳ ವಿರುದ್ಧದ ಕೋಮು ದ್ವೇಷದ ಮೇಲೆ, ನೆರೆಯ ದೇಶಗಳ ವಿರುದ್ಧದ ಅಸಹನೆಯ ಅಲೆಯ ಮೇಲೆ, ಸೇನೆ ಮತ್ತು ಗಡಿಯನ್ನು ಬಳಸಿಕೊಂಡು ಸೃಷ್ಟಿಸುವ ಹುಸಿ ರಾಷ್ಟ್ರೀಯತೆಯ ಅಮಲಿನ ಮೇಲೆ ಮತದಾರರ ಬೆರಳ ದಿಕ್ಕನ್ನು ನಿರ್ಧರಿಸುವುದು, ಚುನಾವಣೆಗಳನ್ನು ಗೆಲ್ಲುವುದು ಸುಲಭ ಇರುವಾಗ, ಜನಾದೇಶವನ್ನು ತಯಾರು(ಮಾನ್ಯುಫ್ಯಾಕ್ಚರಿಂಗ್ ಮ್ಯಾಂಡೇಟ್) ಮಾಡುವುದು ಕರಗತವಾಗಿರುವಾಗ ಆಳುವ ಮಂದಿಗೆ ಜನರ ಭಯವಿರಲು ಹೇಗೆ ಸಾಧ್ಯ? ಇನ್ನು ಜನಪರ ಬದ್ಧತೆಯ ಬಗ್ಗೆಯಾಗಲೀ, ಕಾಳಜಿಯ ಬಗ್ಗೆಯಾಗಲೀ ಸದ್ಯದ ಆಡಳಿತದ ನಿಲುವುಗಳೇನು ಎಂಬುದು ಕಳೆದ ಹಲವು ಚುನಾವಣೆಗಳಲ್ಲಿ ಪ್ರಣಾಳಿಕೆಗೆ ನೀಡಿರುವ ಮಹತ್ವವೆಷ್ಟು ಎಂಬುದರಲ್ಲೇ ಅರ್ಥವಾಗುತ್ತದೆ. ಜನಕಲ್ಯಾಣ ಕಾರ್ಯಕ್ರಮಗಳು, ನೀತಿಗಳ ಪ್ರಸ್ತಾಪವೇ ಇಲ್ಲದೆ ಚುಣಾವಣಾ ಪ್ರಣಾಳಿಕೆಗಳನ್ನು ತಯಾರು ಮಾಡುವ ಮಟ್ಟಿಗಿನ ಆತ್ಮವಿಶ್ವಾಸದ ಒಂದು ರಾಜಕೀಯ ಪಕ್ಷ ಅಭೂತಪೂರ್ವ ಜನಾದೇಶ ಪಡೆಯುವಲ್ಲಿ ಯಶಸ್ಸಿಯಾದರೆ ಅದರರ್ಥ ಜನಪರ ಕಾಳಜಿ ಎಂಬುದು ಭಾರತದ ರಾಜಕಾರಣದ ಭಾಗವಾಗಿ ಉಳಿದಿಲ್ಲ ಎಂದೇ ಅಲ್ಲವೆ? ಅಂತಹ ಆತ್ಮವಿಶ್ವಾಸದ ಚಿತ್ರಗಳೇ ಪ್ರಧಾನಿಯ ಯೋಗ, ಸಚಿವರ ರಾಮಾಯಣ ವೀಕ್ಷಣೆ, ಬೆಂಡೆ ಗೊಜ್ಜಿನ ರೆಸಿಪಿಯ ನೋಟಗಳು.

ವಾಸ್ತವದ ಸ್ಥಿತಿ ಹೀಗಿರುವಾಗ, ಜನರ ಭಯವೂ ಇರದ, ಸಿದ್ಧಾಂತ, ತಾತ್ವಿಕತೆಯ ಆತ್ಮಸಾಕ್ಷಿಯೂ ಇರದ ಒಂದು ಆಡಳಿತ ವ್ಯವಸ್ಥೆಯಲ್ಲಿ ಬರಿಗಾಲಿನ ಫಕೀರನ ಒಡೆದ ಹಿಮ್ಮಡಿಗಳಿಂದ ಸೋರುವ ರಕ್ತ, ಕಾಂಕ್ರೀಟು ರಸ್ತೆಗಳಲ್ಲಿ ಕಲೆಯಾಗಿ ಮಾತ್ರ ಉಳಿಯಬಲ್ಲದು. ದಿಲ್ಲಿಯ ದರ್ಬಾರಿನ ಸ್ವಯಂಘೋಷಿತ ಫಕೀರರ ಆತ್ಮದ ಪಸೆಯನ್ನು ಆರಿಸಲಾರದು! ಇದು ಕರೋನಾ ತೆರೆದಿಟ್ಟಿರುವ ಭಾರತದ ಅಸಲೀ ಸತ್ಯ ಮತ್ತು ನಿಜ ದೇಶಪ್ರೇಮಿಗಳ ಎದುಗಿರುವ ದೊಡ್ಡ ಸವಾಲು ಕೂಡ!

Tags: Ache DinCorona VirusHareebhi HathaoRamayanSab ka saath Sabka VIkasಅಚ್ಛೇದಿನ್ಗರೀಭಿ ಹಠಾವೋಪ್ರಧಾನಿ ಮೋದಿರಾಮಾಯಣಸಬ್ ಕಾ ವಿಕಾಸ್ಸಬ್ ಕಾ ಸಾಥ್
Previous Post

PM-CARES ಗೆ ಕರ್ನಾಟಕದ ನೆಟ್ಟಿಗರ ವಿರೋಧ..! 

Next Post

ʼಪರಿವಾರʼ ಪ್ರಯೋಗ ನಡೆಸಲು ಹೋಗಿ ಕೈ ಸುಟ್ಟುಕೊಂಡ ಜನಪ್ರತಿನಿಧಿಗಳು..

Related Posts

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..
Top Story

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಸುಸ್ಥಿರ ಅಭಿವೃದ್ಧಿ ಗುರಿಗಳು (SDGs) ರಾಷ್ಟ್ರಗಳಿಗೆ ಬೆಳವಣಿಗೆ ಮತ್ತು ಸಸ್ಥಿರತೆಯನ್ನು ಸಮನ್ವಯಗೊಳಿಸುವ ಜಾಗತಿಕ ಚೌಕಟ್ಟನ್ನು ಒದಗಿಸುತ್ತವೆ. ಆದ್ದರಿಂದ ಅಭಿವೃದ್ಧಿ ಮತ್ತು ಸುಸ್ಥಿರತೆ ಹಾಗೂ ಒಳಗೊಳ್ಳುವಿಕೆಯ ಗುರಿಯ...

Read moreDetails
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

ಸುಳ್ಳು ಹೇಳುವ ಮುನ್ನ ವಾಸ್ತವ ಹಾಗೂ ಕಾನೂನು ತಿಳಿದುಕೊಳ್ಳಿ! : ಕೇಂದ್ರ ಸಚಿವ ಹೆಚ್‌ಡಿಕೆ ವಿರುದ್ಧ ನಟರಾಜ್‌ ಗೌಡ ಕಿಡಿ..

April 18, 2026
ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

ಆಟೋ ಚಾಲಕರ ನೋವು, ಸಂಕಷ್ಟ ಈ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ : ಆಪ್‌ ಆಕ್ರೋಶ..!

April 18, 2026
ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

ಪ್ಯಾರಾಚೂಟ್​ ತರಬೇತಿ ವೇಳೆ ಅವಘಡ ಸೇನಾ ಸಿಬ್ಬಂದಿಗೆ ಗಾಯ : ಮುಂದೇನಾಯ್ತು..?

April 18, 2026
Next Post
ʼಪರಿವಾರʼ ಪ್ರಯೋಗ ನಡೆಸಲು ಹೋಗಿ ಕೈ ಸುಟ್ಟುಕೊಂಡ ಜನಪ್ರತಿನಿಧಿಗಳು..

ʼಪರಿವಾರʼ ಪ್ರಯೋಗ ನಡೆಸಲು ಹೋಗಿ ಕೈ ಸುಟ್ಟುಕೊಂಡ ಜನಪ್ರತಿನಿಧಿಗಳು..

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada