ಇದೊಂದು ಪರಸ್ಪರರು ದೋಸೆಯ ತೂತುಗಳನ್ನು ಎಣಿಸುವ ಕೆಲಸ. ಮಾಡಲು ಸಾಧ್ಯವಾಗದಷ್ಟು ಮೈತುಂಬ ಕೆಲಸಗಳಿರುವಾಗ ಟೆಲಿಫೋನ್ ಕದ್ದಾಲಿಕೆಯಂತಹ ಪ್ರಕರಣಗಳನ್ನು ಸಿಬಿಐ ಗೆ ವಹಿಸಿ ರಾಜಕೀಯದ ಕಾವು ಉಳಿಸಿಕೊಳ್ಳುವ ವ್ಯರ್ಥ ಕಸರತ್ತಲ್ಲದೇ ಮತ್ತೇನೂ ಅಲ್ಲ.
ಹಿಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೂರಾರು ರಾಜಕಾರಣಿಗಳ, ಅಧಿಕಾರಿಗಳ ಮತ್ತು ಪತ್ರಕರ್ತರ ದೂರವಾಣಿಗಳಿಗೆ ಕಳ್ಳಗಿವಿ ಹಚ್ಚುವ ಮೂಲಕ ತಮ್ಮ ವಿರುದ್ಧ ನಡೆದ ರಾಜಕೀಯ ಪಿತೂರಿಗಳನ್ನು, ಸಂಚುಗಳ ಮಾಹಿತಿ ಪಡೆದುಕೊಳ್ಳುತ್ತಿದ್ದರೆಂಬುದು ಈಗ ಬಹಿರಂಗವಾಗುತ್ತಿರುವ “ಸತ್ಯ”! ಈ ಎಲ್ಲ “ಕಿವಿಗಳ್ಳತನವನ್ನು” ಸಿಬಿಐ ಗೆ ವಹಿಸುವ ಮೂಲಕ ಕುಮಾರಸ್ವಾಮಿ ಅವರನ್ನು ಇಕ್ಕಟ್ಟಿಗೆ ಸಿಕ್ಕಿಸಬೇಕೆಂಬುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿರುವದು ಸ್ಪಷ್ಟ.
ಸಿಬಿಐ ಗೆ ವಹಿಸಿದರೆ ಏನಾಗಬಹುದು, ಏನಾಗಲಿಕ್ಕಿಲ್ಲ ಎಂಬ ಬಗ್ಗೆ ಚರ್ವಿತ-ಚರ್ವಣ ಚರ್ಚೆ ಈಗ ರಾಜಕೀಯ ವಲಯದಲ್ಲಿ ನಡೆದಿದೆ. ದೂರವಾಣಿ ಕದ್ದಾಲಿಕೆಯ ವಿಚಾರಣೆ ಒಮ್ಮೆ ಆರಂಭವಾದರೆ ಯಾವ ಹಂತದಲ್ಲಿ ಯಾವ ತಿರುವು ಪಡೆದುಕೊಳ್ಳಬಹುದೆಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಸಿಬಿಐ ಗೆ ವಹಿಸುವ ಇಚ್ಛೆ ಸ್ವತಃ ಯಡಿಯೂರಪ್ಪ ಅವರಿಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಏಕೆಂದರೆ, ಅವರೇ ಇಂಥ ಆರೋಪಗಳಿಂದ ಮುಕ್ತರಾದವರಲ್ಲ.
ಕುಮಾರಸ್ವಾಮಿ ಅವರ ಸರಕಾರವನ್ನು ಪತನಗೊಳಿಸುವ ಯತ್ನವಾಗಿ ಅವರು ಜೆಡಿಎಸ್ ಶಾಸಕರೊಬ್ಬರ ಪುತ್ರನ ಜೊತೆಗೆ ನಡೆಸಿದ ಆಡಿಯೊ ಸಂಭಾಷಣೆ ಬಹಿರಂಗಗೊಂಡಾಗ ಆಗಿರುವ ಅನಾಹುತ ಅಷ್ಟಿಷ್ಟಲ್ಲ. ವಿಧಾನ ಸಭಾಧ್ಯಕ್ಷರೇ ಆ ಪ್ರಕರಣದ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ ಐ ಟಿ) ರಚಿಸಬೇಕೆಂದೂ, 15 ದಿನದೊಳಗೆ ತಂಡ ವರದಿ ನೀಡಬೇಕೆಂದೂ ವಿಧಾನಸಭೆಯಲ್ಲೇ ಸರಕಾರಕ್ಕೆ ನಿರ್ದೇಶನ ನೀಡಿದ್ದರು. ಆದರೆ, ತೆರೆಯ ಮರೆಯಲ್ಲಿ ನಡೆದ ಹೊಂದಾಣಿಕೆ ರಾಜಕಾರಣದ ಫಲವಾಗಿ ಎಸ್ ಐ ಟಿ ರಚನೆ ಆಗಲೇ ಇಲ್ಲ. ಯಡಿಯೂರಪ್ಪ ಪೇಚಿಗೆ ಸಿಕ್ಕಿಹಾಕಿಕೊಳ್ಳುವ ಪ್ರಸಂಗವೇ ಬರಲಿಲ್ಲ!
“ಹೊಂದಾಣಿಕೆ ರಾಜಕಾರಣ” ನಮ್ಮ ರಾಜ್ಯದ ರಾಜಕೀಯಕ್ಕೆ ಹೊಸದೇನಲ್ಲ. ದೇವರಾಜ ಆರಸು ಕಾಲದಿಂದಲೂ ಇದು ನಡೆದುಬಂದಿದೆ. ಯಡಿಯೂರಪ್ಪ ಅವರ “ಸಂಕಷ್ಟದ” ಸಮಯದಲ್ಲಿ ಕಾಂಗ್ರೆಸ್ಸಿಗರೇ ಅವರನ್ನು ಯಾವುದ್ಯಾವುದೊ ಕಾರಣದಿಂದ ರಕ್ಷಿಸಿದ ಬಗ್ಗೆ ವದಂತಿಗಳಿವೆ. ಅಂಥದ್ದರಲ್ಲಿ ದೂರವಾಣಿ ಕದ್ದಾಲಿಕೆಯಂಥ ಪ್ರಕರಣಗಳನ್ನು ಸಿಬಿಐ ಗೆ ವಹಿಸುವಂಥ ಅಪಕ್ವ ರಾಜಕಾರಣಿ ಅವರಲ್ಲ ಎಂಬುದು ಅವರನ್ನು ಬಲ್ಲವರಿಗೆಲ್ಲ ಚೆನ್ನಾಗಿ ಗೊತ್ತು! ಹಾಗಾದರೆ ಸಿಬಿಐ ಗೆ ವಹಿಸುವಂಥ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡಿರುವುದರ ಹಿಂದೆ ಕೆಲಸ ಮಾಡಿದ ಕೈಗಳು ಯಾವುವು? ರಾಜ್ಯ ಬಿಜೆಪಿಯ ಕೆಲವರು ಯಡಿಯೂರಪ್ಪ ಅವರನ್ನು ಪೇಚಿಗೆ ಸಿಲುಕಿಸಲು ಕೇಂದ್ರವೇ ಈ ಕೆಲಸ ಮಾಡಿದೆ ಎನ್ನುತ್ತಿದ್ದಾರೆ. ಈ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಗುಸು ಗುಸು ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ.

ಕುಮಾರಸ್ವಾಮಿ ಸುಮ್ಮನಿರುತ್ತಾರೆಯೇ?
ಸಿಬಿಐ ತನಿಖೆ ಆರಂಭವಾದ ನಂತರ ಕುಮಾರಸ್ವಾಮಿ ಅವರು ಸುಮ್ಮನೇ ಕೈಕಟ್ಟಿ ಕುಳಿತುಬಿಡುತ್ತಾರೆಯೆ? ಸಾಧ್ಯವೇ ಇಲ್ಲ. ಆರು ತಿಂಗಳ ಹಿಂದೆ ಅವರ ಸರಕಾರವನ್ನು ಕೆಡವಲು ಕಾಂಗ್ರೆಸ್ ಬಂಡುಕೋರರು ಏನೆಲ್ಲ ಕಸರತ್ತು ನಡೆಸಿದಾಗ ಕುಮಾರಸ್ವಾಮಿ ಅವರು ತಮ್ಮ ಬಳಿಯಿರುವ ಆಡಿಯೊ ಮತ್ತು ವಿಡಿಯೊಗಳ ಬಗ್ಗೆ ಸೂಚ್ಯವಾಗಿ ತಿಳಿಸಿದ್ದರು. ಮಹಾರಾಷ್ಟ್ರದಲ್ಲಿ ನಡೆದ ಚಟುವಟಿಕೆಗಳ ಬಗ್ಗೆ ತಮ್ಮಲ್ಲಿ ಎಲ್ಲ ದಾಖಲೆಗಳಿವೆಯೆಂದೂ ಅವರು ಬಂಡುಕೋರ ಶಾಸಕರೊಬ್ಬರಿಗೆ ನೇರವಾಗಿಯೇ ಹೇಳಿದ್ದರಂತೆ!
ಸಿಬಿಐ ತನಿಖೆಯ ವ್ಯಾಪ್ತಿಯನ್ನು ನಿಗದಿಗೊಳಿಸುವ ಅಧಿಕಾರ ರಾಜ್ಯ ಸರಕಾರಕ್ಕಿದ್ದರೂ ಸಹಿತ ತನಿಖೆಯ ಸಂದರ್ಭದಲ್ಲಿ ಮಾಧ್ಯಮದಲ್ಲಿ,ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಿಡಿಯುವ ವಿಡಿಯೊ ಮತ್ತು ಆಡಿಯೊ ಬಾಂಬ್ ಗಳನ್ನು ಎದುರಿಸುವ ಶಕ್ತಿ ಅಧಿಕಾರಸ್ಥರಲ್ಲಿ ಇರಲಿದೆಯೆ? ಒಂದು ವೇಳೆ ಯಡಿಯೂರಪ್ಪ ಅವರಿಗೇ ಸಂಬಂಧಿಸಿದ ಆಡಿಯೊ ಅಥವಾ ವಿಡಿಯೊ ಬಹಿರಂಗವಾದಲ್ಲಿ ಈ ಬಗ್ಗೆ ತನಿಖೆ ನಡೆಸಲು ಕೇಂದ್ರಕ್ಕೆ ಸಾಧ್ಯವೆ?
1988 ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಸ್ವಪಕ್ಷಿಯರ ಮತ್ತು ಪ್ರತಿಪಕ್ಷಗಳ ನಾಯಕರ ದೂರವಾಣಿ ಕದ್ದಾಲಿಕೆ ಮಾಡಿದರೆಂದು ಆರೋಪ ಬಂದಿತ್ತು.ಈ ಪ್ರಕರಣ ಲೋಕಸಭೆಯಲ್ಲಿ ಭಾರೀ ಸದ್ದು ಮಾಡಿತ್ತು. ಕೊನೆಗೆ ನೈತಿಕತೆ ಆಧಾರದ ಮೇಲೆ ಹೆಗಡೆಯವರು ರಾಜಿನಾಮೆ ನೀಡಿ ಅಧಿಕಾರದಿಂದ ನಿರ್ಗಮಿಸಬೇಕಾಯಿತು. ಈಗ ಬಿಜೆಪಿ ಯಲ್ಲಿಯ ಕೆಲವರಿಗೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ನೋಡುವುದೇ ಬೇಡವಾಗಿದೆ. ಆದರೂ ಅವರನ್ನು ಅಲ್ಲಿ ಕೂಡಿಸಲೇಬೇಕಾಗಿರುವದು ಕೇಂದ್ರ ನಾಯಕರಿಗೆ ಇರುವ ಅನಿವಾರ್ಯತೆ. ದೂರವಾಣಿ ಕದ್ದಾಲಿಕೆ ಪ್ರಕರಣ ಸಿಬಿಐ ತನಿಖೆಗೆ ಒಳಗಾಗಿ ಯಡಿಯೂರಪ್ಪ ಅವರಿಗೆ ತಿರುಗುಬಾಣವಾದಲ್ಲಿ ಅದನ್ನೇ ನೆಪವನ್ನಾಗಿಸಿ ಅವರನ್ನು ಕುರ್ಚಿಯಿಂದ ಕೆಳಗಿಳಿಸುವ ಸಂಚನ್ನು ಅವರ ವಿರೋಧಿಗಳೇನಾದರೂ ನಡೆಸಿದ್ದಾರೆಯೆ ಎಂಬ ಸಂದೇಹ ಉಂಟಾಗಿದ್ದರೆ ಅತಿಶಯೋಕ್ತಿಯೇನಲ್ಲ.
ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡು ಇನ್ನೂ ಗಟ್ಟಿಯಾಗಿ ನಿಲ್ಲುವ ಮೊದಲೇ ಯಡಿಯೂರಪ್ಪ ಅವರಿಗೆ ಪ್ರಕೃತಿ ವಿಕೋಪ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರವೂ ಅವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ, ಬೆಂಬಲ ನೀಡುತ್ತಿಲ್ಲ ಎಂಬ ಭಾವನೆ ರಾಜ್ಯದ ಜನರಲ್ಲಿ ಮೂಡತೊಡಗಿದೆ. 76 ವರ್ಷ ವಯಸ್ಸಿನ ಯಡಿಯೂರಪ್ಪ ಅವರೊಬ್ಬ ಪಟ್ಟು ಬಿಡದ ಛಲಗಾರನಾಗಿದ್ದರೂ ಅವರನ್ನು ಒಂದಿಲ್ಲೊಂದು ನೆಪದಲ್ಲಿ ಕಟ್ಟಿಹಾಕಬೇಕೆಂದು ಕೆಲವರು ಪ್ರಯತ್ನಿಸುತ್ತಲೇ ಇದ್ದಾರೆ. ಈ ನೆಪಗಳಲ್ಲಿ ದೂರವಾಣಿ ಕದ್ದಾಲಿಕೆ ಪ್ರಕರಣದ ಸಿಬಿಐ ತನಿಖೆಯೂ ಒಂದಾಗಿದ್ದರೆ ಅಚ್ಚರಿಯೇನಲ್ಲ.