ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಸಂಪುಟ ರಚನೆಗೆ ಕ್ಷಣಗಣನೆ ಆರಂಭವಾಗಿದೆ. ಆದರೆ, ಇದುವರೆಗೂ ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎಂಬುದು ಗೊತ್ತಾಗದೆ ಸಚಿವಾಕಾಂಕ್ಷಿಗಳಲ್ಲಿ ಗೊಂದಲವೂ ಕಾಣಿಸಿಕೊಂಡಿದೆ. ಕೆಲವು ಹಿರಿಯ ಶಾಸಕರಿಗೆ ಸಚಿವ ಸ್ಥಾನ ಸಿಗುವ ಖಾತರಿ ಇಲ್ಲ. ಎಲ್ಲ ಭಾರವನ್ನೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಗಲಿಗೆ ಹಾಕಿ ಯಡಿಯೂರಪ್ಪ ನಿರಾಳರಾದಂತೆ ಕಾಣುತ್ತಿದ್ದಾರೆ. ಹಾಗೆಂದು ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿ ಇದೆ ಎಂದು ಅರ್ಥವಲ್ಲ. ಸಚಿವ ಸ್ಥಾನ ಸಿಗದೆ ಅಸಮಾಧಾನ ಹೊಗೆಯಾಡುವುದು ಸ್ಪಷ್ಟವಾಗಿದೆ.
ಆದರೆ, ಅಮಿತ್ ಶಾ ಅವರ ಒಂದು ಮಾತು ಸಚಿವಾಕಾಂಕ್ಷಿಗಳಲ್ಲಿ ಸರ್ಕಾರದ ಮತ್ತು ತಮ್ಮ ಭವಿಷ್ಯದ ರಾಜಕೀಯದ ಕುರಿತು ಆತಂಕವನ್ನು ಉಂಟು ಮಾಡಿದೆ. ಇದರಿಂದಾಗಿ ಸಚಿವ ಸಂಪುಟ ರಚನೆಯಾಗಿ ಅಸಮಾಧಾನ ಸ್ಫೋಟಗೊಂಡರೂ ಅದರ ಪರಿಣಾಮವನ್ನು ಅಸಮಾಧಾನಕ್ಕೆ ಕಾರಣವಾಗುವ ಸಚಿವಾಕಾಂಕ್ಷಿಗಳೇ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಈ ಕಾರಣಕ್ಕಾಗಿಯೇ ಸಚಿವರಾಗಬೇಕು ಎಂದು ಮೂಗಿನ ತುದಿಯವರೆಗೆ ಆಸೆ ತುಂಬಿಕೊಂಡಿರುವ ಆಕಾಂಕ್ಷಿಗಳೆಲ್ಲರೂ ತಮ್ಮ ಬಯಕೆಯನ್ನು ಅದುಮಿಟ್ಟುಕೊಂಡು ಸಚಿವರ ಅಂತಿಮ ಪಟ್ಟಿ ಹೊರಬೀಳುವವರೆಗೂ ಕಾಯುತ್ತಿದ್ದಾರೆ. ಸಚಿವ ಸ್ಥಾನ ಸಿಗದೇ ಇದ್ದರೆ ಮುಂದೇನು ಮಾಡಬಹುದು ಎಂದು ಯೋಚಿಸಲೂ ಸಾಧ್ಯವಾಗದೆ ಮೌನಕ್ಕೆ ಶರಣಾಗಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಉಳಿಸಿಕೊಳ್ಳಬೇಕಾದರೆ ಈಗಾಗಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಉರುಳಿಸಿದ ಶಾಸಕರಿಗೆ ಸ್ಥಾನಮಾನ ನೀಡಬೇಕಾಗುತ್ತದೆ. ಜತೆಗೆ ಮುಂದೆಯೂ ಆಪರೇಷನ್ ಕಮಲ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು. ಆಗೆಲ್ಲಾ ಮುಂದೆ ನಿಂತು ಕೆಲಸ ಮಾಡಲು ಯಡಿಯೂರಪ್ಪ ಅವರಂತಹ ನಾಯಕ ಪಕ್ಷಕ್ಕೆ ಬೇಕೇ ಬೇಕು. ಹೀಗಾಗಿ ಸಚಿವರ ಆಯ್ಕೆ ವಿಚಾರದಲ್ಲಿ ಯಡಿಯೂರಪ್ಪ ಮಾತನ್ನು ಒಂದು ಹಂತದವರೆಗೆ ಒಪ್ಪಲೇ ಬೇಕು. ಅದೇ ವೇಳೆ ಸಚಿವ ಸ್ಥಾನ ಸಿಗದೆ ಉದ್ಭವವಾಗುವ ಅಸಮಾಧಾನ ಸರ್ಕಾರಕ್ಕೆ ಅಪಾಯ ತಂದೊಡ್ಡದಂತೆ ನೋಡಿಕೊಳ್ಳಬೇಕು.
ಈ ಕಾರಣಕ್ಕಾಗಿಯೇ ಅಮಿತ್ ಶಾ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮುಂದುವರಿಯುವುದು ಮುಖ್ಯವೇ ಅಥವಾ ವೈಯಕ್ತಿಕ ಅಧಿಕಾರ ಮುಖ್ಯವೇ ಎಂಬುದನ್ನು ನಿರ್ಧರಿಸಿ ಎಂದು ಸಚಿವಾಕಾಂಕ್ಷಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಸಚಿವ ಸ್ಥಾನ ಸಿಗದೆ ಅಸಮಾಧಾನಗೊಳ್ಳುವವರು ಸರ್ಕಾರಕ್ಕೆ ಅಪಾಯವಾಗುವಂತಹ ನಿರ್ಧಾರ ಕೈಗೊಂಡರೆ ಅದಕ್ಕೆ ಅವರೇ ಜವಾಬ್ದಾರರಾಗಬೇಕಾಗುತ್ತದೆ. ಸರ್ಕಾರ ಉರುಳಿ ಚುನಾವಣೆ ನಡೆದರೆ ಅದಕ್ಕೆ ಕಾರಣರಾದವರಿಗೆ ಮುಂದಿನ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಸಿಗುವುದಿಲ್ಲ. ಹೀಗಾಗಿ ವೈಯಕ್ತಿಕವಾಗಿ ಅಧಿಕಾರ ಸಿಗಲಿಲ್ಲ ಎಂದು ಅಸಮಾಧಾನ ಬಹಿರಂಗಪಡಿಸದೆ ಸರ್ಕಾರ ಮುಂದುವರಿಯಲು ಅವಕಾಶ ಮಾಡಿಕೊಡಿ ಎಂಬುದು ಅಮಿತ್ ಶಾ ಅವರ ಈ ಸಂದೇಶದ ಒಟ್ಟಾರೆ ಸಾರಾಂಶ.

ಸಚಿವ ಸ್ಥಾನ ಸಿಗದವರಿಗೆ ಪಕ್ಷದ ಜವಾಬ್ದಾರಿ
ಅಮಿತ್ ಶಾ ಅವರ ಈ ಯೋಚನೆ ಹಿಂದೆ ಸರ್ಕಾರ ಉಳಿಸಿಕೊಳ್ಳುವುದರ ಜತೆಗೆ ಭವಿಷ್ಯದಲ್ಲಿ ರಾಜ್ಯದಲ್ಲಿ ಪಕ್ಷ ಬಲಪಡಿಸುವ ಉದ್ದೇಶವೂ ಇದೆ. ಅದಕ್ಕಾಗಿ ಕೇಂದ್ರದಲ್ಲಿ ಮೋದಿ-2 ಸರ್ಕಾರದ ಜತೆಗೆ ಪಕ್ಷ ಬಲಪಡಿಸುವ ಉದ್ದೇಶದಿಂದ ಯಾವ ರೀತಿಯ ತೀರ್ಮಾನಗಳಾಗಿವೆಯೋ ಅದೇ ರೀತಿ ರಾಜ್ಯದಲ್ಲೂ ಕ್ರಮ ಕೈಗೊಳ್ಳುವುದು ಅಮಿತ್ ಶಾ ಅವರ ತಂತ್ರಗಾರಿಕೆಯಾಗಿದೆ. ಮೋದಿ-1 ಸರ್ಕಾರದಲ್ಲಿ ಸಚಿವರಾಗಿದ್ದು ಉತ್ತಮ ಸಾಧನೆ ತೋರಿದ್ದರೂ ಜೆ. ಪಿ. ನಡ್ಡಾ (ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಬ್ಬರಿಗೂ ಆತ್ಮೀಯರು), ಸುರೇಶ್ ಪ್ರಭು ಸೇರಿದಂತೆ ಕೆಲವರಿಗೆ ಸಚಿವ ಸ್ಥಾನ ನೀಡಿಲ್ಲ. ಈ ಪೈಕಿ ಜೆ. ಪಿ. ನಡ್ಡಾ ಅವರಿಗೆ ಈಗಾಗಲೇ ಪಕ್ಷದ ಕಾರ್ಯಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಉಳಿದವರಿಗೆ ಪಕ್ಷದ ರಾಷ್ಟ್ರೀಯ ಘಟಕ ಪುನಾರಚನೆ ವೇಳೆ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ. ಅದೇ ರೀತಿ ಯಾವೆಲ್ಲಾ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಸಿಗುವುದಿಲ್ಲವೋ ಅವರಿಗೆ ಪಕ್ಷದ ರಾಜ್ಯ ಘಟಕದ ಸಂಘಟನೆಯ ಜವಾಬ್ದಾರಿ ನೀಡಲು ಅವರು ಯೋಚಿಸಿದ್ದಾರೆ. ಈ ಸಂದೇಶವನ್ನೂ ಅಮಿತ್ ಶಾ ಅವರು ರಾಜ್ಯದ ನಾಯಕರಿಗೆ ತಲುಪಿಸಿದ್ದಾರೆ.
ಈ ಹಿಂದೆ (2008-13) ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ಮತ್ತು ಸಚಿವರಾಗಿದ್ದ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಅರವಿಂದ ಲಿಂಬಾವಳಿ, ಗೋವಿಂದ ಕಾರಜೋಳ, ಉಮೇಶ್ ಕತ್ತಿ, ಬಸವರಾಜ ಬೊಮ್ಮಾಯಿ, ಶ್ರೀರಾಮುಲು, ವಿ. ಸೋಮಣ್ಣ, ಎಸ್. ಸುರೇಶ್ ಕುಮಾರ್, ಬಾಲಚಂದ್ರ ಜಾರಕಿಹೊಳಿ, ಸಿ. ಟಿ. ರವಿ, ಕೋಟ ಶ್ರೀನಿವಾಸ ಪೂಜಾರಿ (ವಿಧಾನ ಪರಿಷತ್ ಸದಸ್ಯ), ರಾಜುಗೌಡ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳು. ಇವರ ಜತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಸತತ ಆರು ಬಾರಿ ಗೆದ್ದು ಬಂದಿರುವ ಪರಿಶಿಷ್ಟ ಜಾತಿಗೆ ಸೇರಿದ ಎಸ್. ಅಂಗಾರ, ಉಡುಪಿ ಜಿಲ್ಲೆಯ ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ (ಕಳೆದ ಅವಧಿಯಲ್ಲಿ ಬಿಜೆಪಿಯ ಚೀಫ್ ವಿಪ್ ಆಗಿದ್ದರು), ಪ್ರಸಕ್ತ ವಿಧಾನಸಭೆಯಲ್ಲಿ ಬಿಜೆಪಿಯ ಶಕ್ತಿಯಾಗಿ ಹೊರಹೊಮ್ಮಿರುವ ಜೆ. ಸಿ. ಮಾಧುಸ್ವಾಮಿ (ಯಡಿಯೂರಪ್ಪ ಅವರಿಗೆ ಆಪ್ತರೂ ಹೌದು), ದತ್ತಾತ್ರೇಯ ಪಾಟೀಲ ರೇವೂರ, ಪಿ. ರಾಜೀವ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಆಪರೇಷನ್ ಕಮಲದ ಮುಂಚೂಣಿಯಲ್ಲಿದ್ದ ಮಾಜಿ ಸಚಿವ ಸಿ. ಪಿ. ಯೋಗೇಶ್ವರ್, ಡಾ. ಸಿ. ಎನ್. ಅಶ್ವತ್ಥನಾರಾಯಣ… ಹೀಗೆ 30 ಮಂದಿ ಸಚಿವ ಸ್ಥಾನಕ್ಕಾಗಿ ಮೊದಲ ಸಾಲಿನಲ್ಲಿ ನಿಂತಿದ್ದಾರೆ. ಸದ್ಯ ಒಟ್ಟು ಸಚಿವ ಸ್ಥಾನದ (ಮುಖ್ಯಮಂತ್ರಿ ಹೊರತುಪಡಿಸಿ 33) ಅರ್ಧದಷ್ಟು ಭಾಗವನ್ನು ಮಾತ್ರ ಭರ್ತಿ ಮಾಡಲು ನಿರ್ಧರಿಸಿರುವುದರಿಂದ ಎಲ್ಲರಿಗೂ ಸಚಿವ ಸ್ಥಾನ ಸಿಗುವುದಿಲ್ಲ.
ಈ ಪೈಕಿ ಕೆಲವರು ಈಗಾಗಲೇ ಅಧಿಕಾರದ ರುಚಿ ಅನುಭವಿಸಿದ್ದರೆ, ಬಹುತೇಕರು ಮೊದಲ ಬಾರಿ ಮಂತ್ರಿಗಳಾಗುವ ಕನಸು ಹೊತ್ತವರು. ಅದರಲ್ಲೂ ಕೆಲವರು ಪಕ್ಷ ಬಲವರ್ದನೆ ಮತ್ತು ಸರ್ಕಾರ ರಚನೆಗೆ ಶ್ರಮಿಸಿದವರು. ಹೀಗಾಗಿ ಹಿರಿಯರ ಜತೆಗೆ ಪಕ್ಷ ಬಲವರ್ಧನೆ ಮತ್ತು ಸರ್ಕಾರ ರಚನೆಗೆ ಶ್ರಮಿಸಿದವರಿಗೂ ಅವಕಾಶ ನೀಡಬೇಕಾಗಿದೆ. ಈ ವೇಳೆ ಕೆಲವು ಹಿರಿಯ ಶಾಸಕರನ್ನು ಸಚಿವ ಸ್ಥಾನದಿಂದ ದೂರವಿಟ್ಟು ಪಕ್ಷ ಸಂಘಟನೆಗೆ ಬಳಸಿಕೊಳ್ಳಬೇಕು ಎಂಬುದು ಅಮಿತ್ ಶಾ ಅವರ ನಿಲುವು.
ಪ್ರಸ್ತುತ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದು, ಪದಾಧಿಕಾರಿಗಳಾಗಿದ್ದ ಕೆಲವರು ಸಚಿವ ಸ್ಥಾನ ಅಲಂಕರಿಸಲಿದ್ದಾರೆ. ಇದರ ಪರಿಣಾಮ ಪಕ್ಷದ ರಾಜ್ಯ ಘಟಕವನ್ನು ಪುನಾರಚಿಸಬೇಕಾಗಿದ್ದು, ಆಗ ಸಚಿವ ಸ್ಥಾನ ಸಿಗದೇ ಇರುವವರಿಗೆ ಅವಕಾಶ ನೀಡಲಾಗುತ್ತದೆ. ಮತ್ತೆ ವಿಧಾನಸಭೆ ಚುನಾವಣೆ ನಡೆದು ಪಕ್ಷ ಅಧಿಕಾರಕ್ಕೆ ಬಂದಾಗ ಸಂಘಟನೆಯಲ್ಲಿ ತೊಡಗಿಕೊಂಡವರಿಗೆ ಅಧಿಕಾರ ನೀಡಲಾಗುತ್ತದೆ. ಈಗ ಸಚಿವರಾಗುವವರಿಗೆ ನಂತರದಲ್ಲಿ ಪಕ್ಷದ ಜವಾಬ್ದಾರಿ ವಹಿಸಲಾಗುತ್ತದೆ ಎಂಬ ಸೂಚನೆಯನ್ನು ಅಮಿತ್ ಶಾ ಅವರು ನೀಡಿದ್ದಾರೆ. ಅಷ್ಟೇ ಅಲ್ಲ, ಸಚಿವ ಸ್ಥಾನ ಸಿಗದೇ ಇರುವವರಿಗೆ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ನೀಡುವುದಾಗಿಯೂ ಭರವಸೆ ಕೊಟ್ಟಿದ್ದಾರೆ. ಒಂದೊಮ್ಮೆ ಇದಕ್ಕೆ ಅವಕಾಶವಾಗದೆ ವೈಯಕ್ತಿಕವಾಗಿ ಅಧಿಕಾರ ಸಿಕ್ಕಿಲ್ಲ ಎಂದು ಅಸಮಾಧಾನ ಹೊರಹಾಕಿದರೆ ಅಂಥವರಿಗೆ ಮುಂದೆ ಅಧಿಕಾರವೂ ಇಲ್ಲ, ಪಕ್ಷದ ಜವಾಬ್ದಾರಿಯೂ ಇಲ್ಲ ಎಂಬ ಸ್ಪಷ್ಟ ಎಚ್ಚರಿಕೆ ಕೂಡ ಅಮಿತ್ ಶಾ ಅವರಿಂದ ಬಂದಿದೆ. ಈ ಕಾರಣಕ್ಕಾಗಿಯೇ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದವರೂ ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಹೇಳುತ್ತಿದ್ದಾರೆ.
ಒಂದೊಮ್ಮೆ ಅಮಿತ್ ಶಾ ಅವರ ಎಚ್ಚರಿಕೆಯ ಸಂದೇಶ ಪರಿಣಾಮ ಬೀರಿದರೆ ಆಗ ಯಡಿಯೂರಪ್ಪ ನೇತೃತ್ವದ ಸರ್ಕಾರ ಯಾವುದೇ ಅಪಾಯವಿಲ್ಲದೆ ಮುಂದುವರಿಯುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಅಮಿತ್ ಶಾ ಅವರ ನಿರ್ಧಾರವನ್ನು ಪ್ರಶ್ನಿಸುವ ಧೈರ್ಯ ರಾಜ್ಯದ ಯಾವ ಹಿರಿಯ ಶಾಸಕರಲ್ಲೂ ಇಲ್ಲ. ಹೀಗಾಗಿ ಸಂಪುಟ ರಚನೆ ಸರ್ಕಾರಕ್ಕೆ ಯಾವುದೇ ಅಪಾಯ ತರುವುದಿಲ್ಲ ಎಂಬ ನಿರೀಕ್ಷೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿದೆ.