ನಿಜವಾಗಿಯೂ ಇದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪಾಲಿಗೆ ಸವಾಲಿನ ದಿನಗಳು. ಅತ್ತ ಸಂಪುಟ ವಿಸ್ತರಣೆ ಸಾಧ್ಯವಾಗುತ್ತಿಲ್ಲ. ಇತ್ತ ರಾಜ್ಯಾದ್ಯಂತ ನೆರೆ ಹಾವಳಿ, ಕೆಲವೆಡೆ ಬರ ಪರಿಸ್ಥಿತಿ. ಇದೆಲ್ಲದರ ಮಧ್ಯೆ ಹೆಜ್ಜೆ ಹೆಜ್ಜೆಗೂ ಟೀಕೆ, ಆರೋಪಗಳನ್ನು ಮಾಡುತ್ತಿರುವ ಪ್ರತಿಪಕ್ಷಗಳು. ಇವೆಲ್ಲವನ್ನೂ ಏಕಾಂಗಿಯಾಗಿಯೇ ಎದುರಿಸಬೇಕಾದ ಪರಿಸ್ಥಿತಿ. ಅಷ್ಟಕ್ಕೂ ಅದನ್ನು ತಂದುಕೊಂಡಿದ್ದೂ ಯಡಿಯೂರಪ್ಪ ಅವರೆ.
2008ರಲ್ಲಿ ಅಲ್ಪಮತದೊಂದಿಗೆ ಪಕ್ಷೇತರರ ಬೆಂಬಲ ಪಡೆದು ತಾವು ಸರ್ಕಾರ ರಚಿಸಿದಾಗ ಎದುರಿಸಿದ ಸಂಕಷ್ಟ ಪರಿಸ್ಥಿತಿಯನ್ನೇ ಈ ಬಾರಿಯೂ ಯಡಿಯೂರಪ್ಪ ಅವರು ಎದುರಿಸುತ್ತಿದ್ದಾರೆ. ಆದರೆ, ಆಗ ಸಂಪುಟ ರಚನೆ ಸಮಸ್ಯೆ ಇರಲಿಲ್ಲ ಎಂಬುದನ್ನು ಹೊರತುಪಡಿಸಿದರೆ ಉಳಿದೆಲ್ಲವೂ ಯಥಾಸ್ಥಿತಿ.
ಯೂರಿಯಾ ವದಂತಿ ತಂದ ಆತಂಕ:
2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ಒಂದೆರಡು ದಿನಗಳಲ್ಲೇ ಹಾವೇರಿಯಲ್ಲಿ ಗೋಲಿಬಾರ್ ನಡೆದಿತ್ತು. ಇದಕ್ಕೆ ಕಾರಣ ರಸಗೊಬ್ಬರ, ಅದರಲ್ಲೂ ಯೂರಿಯಾ ಸಮಸ್ಯೆ. ಮಾರುಕಟ್ಟೆಯಲ್ಲಿ ಯೂರಿಯಾ ಲಭ್ಯವಾಗದ ಕಾರಣ ರೈತರು ಪ್ರತಿಭಟನೆ ಆರಂಭಿಸಿದ್ದರು. ಈ ಪ್ರತಿಭಟನೆ ಹಿಂಸಾರೂಪಕ್ಕಿಳಿದು ರೈತರೊಬ್ಬರು ಪೊಲೀಸರ ಗೊಲೀಬಾರ್ ಗೆ ಮೃತಪಟ್ಟಿದ್ದರು. ಪೊಲೀಸರಿಂದ ಗುಂಡೇಟು ತಿಂದ ಇನ್ನೊಬ್ಬ ಗಾಯಾಳು ಕೆಲ ದಿನಗಳ ಬಳಿಕ ಆಸ್ಪತ್ರೆಯಲ್ಲಿ ಅಸುನೀಗಿದ್ದರು. ಇದರಿಂದಾಗಿ ಯಡಿಯೂರಪ್ಪ ಅವರ ಮೇಲೆ ಈಗಲೂ ಅಧಿಕಾರಕ್ಕೆ ಬಂದ ಕೂಡಲೇ ರೈತರ ಮೇಲೆ ಗೋಲಿಬಾರ್ ನಡೆಸಿದ ಮುಖ್ಯಮಂತ್ರಿ ಎಂಬ ಆರೋಪವಿದೆ. ಅಂತಹದ್ದೇ ಪರಿಸ್ಥಿತಿ ಈ ಬಾರಿಯೂ ಉದ್ಭವಿಸುವ ಆತಂಕ ಕಾಣಿಸಿಕೊಂಡಿತ್ತು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಸದನದಲ್ಲಿ ವಿಶ್ವಾಸಮತ ಗೆದ್ದ ಎರಡೇ ದಿನಗಳಲ್ಲಿ ಹಾವೇರಿಯಲ್ಲಿ ಯೂರಿಯಾ ಸಮಸ್ಯೆ ಎಂಬ ವದಂತಿ ಹರಡಿತ್ತು. 2008ರ ಘಟನೆಯಿಂದ ತಕ್ಷಣ ಎಚ್ಚೆತ್ತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಾಸ್ತವತೆಯನ್ನು ಜನರಿಗೆ ತಿಳಿಸಿ, ಅಗತ್ಯ ಯೂರಿಯಾ ಸಂಗ್ರಹವಿದ್ದು, ಕೊರತೆ ಎಂಬುದು ಕೇವಲ ವದಂತಿ ಎಂಬುದನ್ನು ಮನವರಿಕೆ ಮಾಡಿಕೊಟ್ಟು ಯಡಿಯೂರಪ್ಪ ಅವರ ಸರ್ಕಾರಕ್ಕೆ 2008ರ ಪರಿಸ್ಥಿತಿ ಬಾರದಂತೆ ನೋಡಿಕೊಂಡರು.
ಪ್ರವಾಹ ತಂದ ಪ್ರಯಾಸ:
ಇನ್ನು ಪ್ರವಾಹ ಪರಿಸ್ಥಿತಿಗೂ ಯಡಿಯೂರಪ್ಪ ಅವರಿಗೂ ನಂಟು ಎನ್ನುವಂತೆ 2008ರಂತೆ ಈ ಬಾರಿಯೂ ರಾಜ್ಯದ ಹಲವು ಭಾಗಗಳಲ್ಲಿ ಅದರಲ್ಲೂ ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದೆ. 2008ರ ಪ್ರವಾಹದ ವೇಳೆ ಜನ ಮುಳುಗುತ್ತಿದ್ದಾಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಸೇರಿದಂತೆ ಅವರ ಸಂಪುಟ ಸದಸ್ಯರು, ಶಾಸಕರು ಯೋಗ ಮಾಡುತ್ತಿದ್ದುದು ಸಾಕಷ್ಟು ಟೀಕೆ, ಆಕ್ರೋಶಕ್ಕೆ ಕಾರಣವಾಯಿತು. ಆದರೆ, ನಂತರದಲ್ಲಿ ಖುದ್ದು ಯಡಿಯೂರಪ್ಪ ಅವರೇ ಮುಂದೆ ನಿಂತು ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿದ್ದು, ಪರಿಹಾರ ಕಾರ್ಯಗಳಿಗಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿದ್ದು.. ಹೀಗೆ ಹಲವು ಉತ್ತಮ ಕೆಲಸಗಳನ್ನು ಮಾಡಿದ್ದರು. ಆಗ ಈ ಎಲ್ಲಾ ಕೆಲಸಗಳಿಗೆ ಹೆಗಲು ಕೊಡಲು ಯಡಿಯೂರಪ್ಪ ಅವರ ಜತೆ ಸಚಿವ ಸಂಪುಟ ಸದಸ್ಯರಿದ್ದರು. ಆದರೆ, ಈ ಬಾರಿ ಏಕಾಂಗಿ. ಆದರೂ ಪ್ರವಾಹ ಪರಿಸ್ಥಿತಿ ಕುರಿತು ವೈಮಾನಿಕ ಸಮೀಕ್ಷೆ ನಡೆಸಿ, ಅಧಿಕಾರಿಗಳೊಂದಿಗೆ ಸಭೆ ಮಾಡಿ ಪರಿಹಾರ ಕಾರ್ಯಗಳಿಗೆ ಸೂಚಿಸಿದ್ದಾರೆ. ಆದರೆ, ಈ ಕೆಲಸದ ಮೇಲ್ವಿಚಾರಣೆ ನಡೆಸದೆ ದೆಹಲಿಗೆ ಹೋಗಿ ಕುಳಿತಿರುವುದು ಪ್ರತಿಪಕ್ಷಗಳು ಸೇರಿದಂತೆ ಸಂತ್ರಸ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಸಚಿವ ಸಂಪುಟ ವಿಸ್ತರಣೆ ಜತೆಗೆ ರಾಜ್ಯದ ಅಭಿವೃದ್ಧಿಗೆ ಕೇಂದ್ರದ ನೆರವು ಕೋರಲು ಯಡಿಯೂರಪ್ಪ ಅವರು ದೆಹಲಿಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಇಂತಹ ಪರಿಸ್ಥಿತಿಯಲ್ಲಿ ನಿಭಾಯಿಸುವ ಬದಲು ದೆಹಲಿಗೆ ಹೋಗಿ ಕುಳಿತುಕೊಳ್ಳಬೇಕಿತ್ತೇ ಎಂಬ ಪ್ರಶ್ನೆ ಏಳುವುದು ಸಹಜ. ಹೀಗಾಗಿ ರಸಗೊಬ್ಬರ ಕೊರತೆಯ ಭೀತಿ ದೂರವಾಗಿದೆಯಾದರೂ ಪ್ರವಾಹ ಪರಿಸ್ಥಿತಿ ಸುಧಾರಣೆಯಾಗದೇ ಇರುವುದು ಯಡಿಯೂರಪ್ಪ ಅವರಿಗೆ ಪ್ರಯಾಸ ತಂದೊಡ್ಡಿದೆ. ಇನ್ನೂ ಎರಡು ದಿನ ಯಡಿಯೂರಪ್ಪ ಅವರು ದೆಹಲಿಯಲ್ಲೇ ಇರಲಿದ್ದು, ಪ್ರವಾಹ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದರೆ ಆ ಭಾಗದ ಜನರ ಜತೆಗೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮುಗಿಬೀಳಲಿದೆ. ಯಡಿಯೂರಪ್ಪ ಅವರು ಮತ್ತೊಮ್ಮೆ ವಿವಾದಕ್ಕೆ ಸಿಲುಕಲಿದ್ದಾರೆ.
ಇನ್ನು ಸಂಪುಟ ರಚನೆಯಂತೂ ಯಡಿಯೂರಪ್ಪ ಪಾಲಿಗೆ ಕಬ್ಬಿಣದ ಕಡಲೆಯಾಗಿದೆ. ಅಲ್ಪಮತದ ಸರ್ಕಾರ ಬೀಳದಂತೆ ನೋಡಿಕೊಳ್ಳಲು ಯಾರನ್ನೆಲ್ಲಾ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಯಾರನ್ನು ಕೈಬಿಟ್ಟರೆ ಸರ್ಕಾರಕ್ಕೆ ಅಪಾಯವಾಗದು ಎಂದು ಅರ್ಥವಾಗದೆ ಎಲ್ಲವನ್ನೂ ಹೈಕಮಾಂಡ್ ಮುಂದೆ ಇಟ್ಟು ಕೈಚೆಲ್ಲಿ ಕುಳಿತಿದ್ದಾರೆ. ಸದ್ಯ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ಕಲಂ 370 ಮತ್ತು ಕಲಂ 35ಎ ರದ್ದುಗೊಳಿಸಿ ರಣೋತ್ಸಾಹದಲ್ಲಿರುವ ಹೈಕಮಾಂಡ್ ನಾಯಕರು ಅದೇ ಜೋಶ್ ನಲ್ಲಿ ಸಂಪುಟ ವಿಸ್ತರಣೆ ಸಮಸ್ಯೆ ಬಗೆಹರಿಸಿದರೆ ಯಡಿಯೂರಪ್ಪ ಬಚಾವ್. ಇಲ್ಲದಿದ್ದರೆ ನೆರೆ ಮತ್ತು ಸಂಪುಟ ವಿಸ್ತರಣೆ ವಿಚಾರದಲ್ಲಿ ಪ್ರತಿಪಕ್ಷಗಳು ವಾಚಾಮಗೋಚರವಾಗಿ ಪ್ರತಿಕ್ರಿಯಿಸುವುದು ಸ್ಪಷ್ಟ.
ಇನ್ನೂ ಎಚ್ಚೆತ್ತುಕೊಳ್ಳದ ಪ್ರತಿಪಕ್ಷಗಳ ನಾಯಕರು:
ಏಕೆಂದರೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವ ಕೆಲವೇ ದಿನಗಳ ಮುಂಚೆ ರಾಜ್ಯದಲ್ಲಿ ಬರ ಪರಿಸ್ಥಿತಿಯನ್ನು ಮುಂದಿಟ್ಟುಕೊಂಡು ಆಗ ಮುಖ್ಯಮಂತ್ರಿಯಾಗಿದ್ದ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಕೆಂಡಾಮಂಡಲರಾಗಿದ್ದರು. ಅತ್ತ ರೈತರ ಸಾಲ ಮನ್ನಾವನ್ನೂ ಸರಿಯಾಗಿ ಮಾಡುತ್ತಿಲ್ಲ, ಇತ್ತ ಬರ ಪರಿಸ್ಥಿತಿಯನ್ನೂ ನಿಭಾಯಿಸುತ್ತಿಲ್ಲ. ಇದೊಂದು ವಿಫಲ ಸರ್ಕಾರ ಎಂದೆಲ್ಲಾ ಟೀಕಿಸಿದ್ದರು. ಆದರೆ, ಈಗ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಲ್ಲಿದ್ದರೆ ಟೀಕಿಸುವ ಸ್ಥಾನದಲ್ಲಿ ಕುಮಾರಸ್ವಾಮಿ ಇದ್ದಾರೆ. ಅವರೊಂದಿಗೆ ಕಾಂಗ್ರೆಸ್ ಕೂಡ ಇದೆ. ಸದ್ಯ ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಂಡ ಬೇಸರದಲ್ಲಿ ವೈರಾಗ್ಯದ ಮಾತುಗಳಲ್ಲಿ ಮುಳುಗಿದ್ದರೆ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಸರ್ಕಾರ ಉಳಿಸಿಕೊಡಲಾಗದ ಬೇಸರದಿಂದ ಇನ್ನೂ ಹೊರಬಂದಿಲ್ಲ. ಇನ್ನು ಕೇಂದ್ರ ನಾಯಕರ ಮನವೊಲಿಸಲು ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಬಿಜೆಪಿಯನ್ನು ಟೀಕಿಸುವುದರಲ್ಲೇ ನಿರತರಾಗಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ರಾಜ್ಯದ ಸಮಸ್ಯೆಗಳ ಗಂಭೀರತೆ ಅರ್ಥವಾಗಿಯೇ ಇಲ್ಲ. ಇವೆರೆಲ್ಲರೂ ಚೇತರಿಸಿಕೊಂಡರೆ ಯಡಿಯೂರಪ್ಪ ಅವರಿಗೆ ಟೀಕೆ, ಆರೋಪಗಳನ್ನು ಎದುರಿಸುವುದು ಕಷ್ಟವಾಗಬಹುದು.