ದೇಶದ ಆಂತರಿಕ ಭದ್ರತೆಯನ್ನು, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಅಪರಾಧಗಳನ್ನು ನಿಯಂತ್ರಣ ಮಾಡಲು ಪ್ರತಿಯೊಂದು ದೇಶಕ್ಕೂ, ತನ್ನ ದೇಶದಲ್ಲಿ ವಾಸಿಸುವ ಕೆಲವು ವ್ಯಕ್ತಿಗಳ ಸಂವಹನವನ್ನು ಗಮನಿಸಬೇಕಾದ ಅವಶ್ಯಕತೆಯಿದೆ. ಇಂತಹ ಸಂವಹನವು ಟೆಲಿಫೋನ್, ಇ-ಮೇಲ್, ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಮೂಲಕವಾಗಿ ನಡೆಯುತ್ತಿರಬಹುದು. ಇಲ್ಲವೇ ಅಂಚೆಯ ಮುಖಾಂತರವೂ ಆಗಿರಬಹುದು. ಈ ಕಾರ್ಯಕ್ಕೆ ಇಂಟರ್‍ಸೆಪ್ಶನ್ ಎನ್ನಲಾಗುತ್ತದೆ. ಟೆಲಿಫೋನ್ ಮತ್ತಿತರ ಮಾಧ್ಯಮಗಳ ಕದ್ದಾಲಿಕೆಯನ್ನು ನಿಗದಿತ ಏಜೆನ್ಸಿಗಳಾದ ಪೋಲಿಸ್ ಇಲಾಖೆಯಾಗಲಿ, ಆದಾಯ ತೆರಿಗೆ ಇಲಾಖೆಯಾಗಲಿ, ರೆವಿನ್ಯೂ ಇಂಟೆಲಿಜೆನ್ಸ್ ಇಲಾಖೆಯಾಗಲಿ ಅಥವಾ ಬೇರೆ ಯಾವುದೇ ಇಲಾಖೆಯಾಗಲಿ ಮಾಡಲು ಭಾರತದ ಕಾನೂನಿನಲ್ಲಿ ಅವಕಾಶವಿದೆ.
ಅನಾದಿ ಕಾಲದಿಂದಲೂ ಗುಪ್ತಚರ ದಳಗಳು ವಿವಿಧ ದೇಶಗಳಲ್ಲಿ ಹಲವಾರು ಜನರ ಹಾಗೂ ಸಂಘ ಸಂಸ್ಥೆಗಳ ಸಂವಹನಗಳ ಕದ್ದಾಲಿಕೆಯನ್ನು ಮಾಡುತ್ತಲೇ ಬಂದಿವೆ. ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಸಂವಹನವನ್ನು ಅವಲೋಕಿಸಿ ಮುಂದೆ ಆಗಬಹುದಾದಂತಹ ಅನಾಹುತಗಳನ್ನು ತಪ್ಪಿಸುವುದೇ ಕದ್ದಾಲಿಕೆಯ ಉದ್ದೇಶ. ಉದಾಹರಣೆಗೆ ಸಂಘಟನೆಯೊಂದು ಬಾಂಬ್ ದಾಳಿ ನಡೆಸಬೇಕೆಂದು ಉದ್ದೇಶಿಸಿ ಬಾಂಬ್‍ಗಳನ್ನು ತಯಾರಿಸಲು ಮಾಡುವ ಸಾಮಗ್ರಿಗಳನ್ನು ಕಲೆಹಾಕುವಾಗ ಆ ಸಾಮಗ್ರಿಗಳನ್ನು ಎಲ್ಲಿಂದ ತರಿಸಬೇಕು, ಹೇಗೆ ತರಿಸಬೇಕು ಎಂದು ಬೇರೆಯವರ ಜೊತೆ ಸಂವಹನ ಮಾಡಲೇಬೇಕು. ಇಂತಹ ಜಾಗಕ್ಕೆ, ಇಂತಹ ಸಮಯಕ್ಕೆ ಸ್ಪೋಟಕ ವಸ್ತುಗಳು ಬರುತ್ತಿವೆ ಎಂಬ ಮಾಹಿತಿ ಪೊಲೀಸರಿಗೆ ತಿಳಿದರೆ ಸಾಗಾಟ ಮಾಡುವ ವ್ಯಕ್ತಿಗಳ ಚಲನವಲನಗಳ ಮೇಲೆ ನಿಗಾ ಇಟ್ಟು ಆಗುವಂತಹ ಅನಾಹುತಗಳನ್ನು ತಪ್ಪಿಸಬಹುದಾಗಿದೆ.
ಪ್ರತಿಯೊಬ್ಬ ವ್ಯಕ್ತಿಯ ಖಾಸಗಿತನವನ್ನು ನಾವು ಗೌರವಿಸಲೇಬೇಕಾದ್ದರಿಂದ ಯಾವ ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ಖಾಸಗಿ ಸಂಭಾಷಣೆಗಳನ್ನು ಇನ್ನೊಬ್ಬರು ಅರಿಯಬೇಕಾದರೆ ಆ ವ್ಯಕ್ತಿಯ ಚಟುವಟಿಕೆಗಳ ಫಲವಾಗಿ ಆಂತರಿಕ ಭದ್ರತೆಗೆ ಧಕ್ಕೆ ಬರುತ್ತದೆ ಎನ್ನುವುದನ್ನು ಸರ್ಕಾರಕ್ಕೆ ತಿಳಿಸಿಕೊಡಬೇಕಾಗುತ್ತದೆ. ಇಂಡಿಯನ್ ಟೆಲಿಗ್ರಾಫ್ ಕಾನೂನಿನ ಅನ್ವಯ ಯಾವ ಸಮಯದಲ್ಲಿ ಯಾವ ಕಾರಣಕ್ಕೆ ಪೋಲಿಸ್ ಮತ್ತಿತರ ಸಂಸ್ಥೆಗಳು ಇನ್ನೊಬ್ಬರ ಸಂವಹನವನ್ನು ಕದ್ದಾಲಿಸಬಹುದು ಎಂದು ನಿಗದಿಪಡಿಸಲಾಗಿದೆ.
ಇಂತಹ ವ್ಯಕ್ತಿಯ ಟೆಲಿಫೋನ್ ಸಂಭಾಷಣೆಯನ್ನು ಕದ್ದಾಲಿಸಬೇಕಾದ್ದು ಅವಶ್ಯವೆಂದು ಸಕಾರಣವನ್ನು ಕೊಟ್ಟು ಸಂಬಂಧಪಟ್ಟ ರಾಜ್ಯ ಸರ್ಕಾರದ ಗೃಹ ಕಾರ್ಯದರ್ಶಿಗೆ ಕದ್ದಾಲಿಕೆ ಮಾಡಲು ಬಯಸುವ ಅಧಿಕಾರಿಯು ಪತ್ರವನ್ನು ಬರೆಯಬೇಕು. ಇಂತಹ ಅಧಿಕಾರಿಯು ಕಡಿಮೆಯೆಂದರೆ ಪೊಲೀಸ್ ಐಜಿಪಿ ದರ್ಜೆಯವರಾಗಿರಬೇಕು. ಗೃಹ ಕಾರ್ಯದರ್ಶಿಯು ಆ ಮನವಿಯನ್ನು ಪರಿಶೀಲಿಸಿ ಕದ್ದಾಲಿಕೆಗೆ ಅನುಮತಿಯನ್ನು ಕೊಡಬಹುದೇ ಬೇಡವೇ ಎಂದು ತೀರ್ಮಾನಿಸುತ್ತಾರೆ. ಆ ನಂತರ ಸರ್ಕಾರದ ಅನುಮತಿ ಪತ್ರವನ್ನು ಟೆಲಿಫೋನ್ ಸರ್ವಿಸ್ ಪ್ರೊವೈಡರ್ಸ್‍ಗಳಾದ ಜಿಯೋ, ಏರ್‍ಟೆಲ್, ವೋಡಾಫೋನ್, ಬಿ ಎಸ್‍ಎನ್‍ಎಲ್ ಮುಂತಾದ ಸಂಸ್ಥೆಗಳ ಅಧಿಕಾರಿಗಳಿಗೆ ಕೊಟ್ಟು ಇಂತಹ ಫೋನ್ ನಂಬರನ್ನು ಕದ್ದಾಲಿಸಲು ಅನುಕೂಲ ಮಾಡಿಕೊಡಲು ಕೇಳಲಾಗುತ್ತದೆ.
ಸಾಮಾನ್ಯವಾಗಿ ಕದ್ದಾಲಿಕೆಗೆ 7 ದಿನಗಳ ಅವಧಿಯನ್ನು ನಿಗದಿಪಡಿಸಲಾಗುತ್ತದೆ. ಈ 7 ದಿನಗಳ ಕಾಲ ಒಂದು ಟೆಲಿಫೋನ್ ನನ್ನು ಆಲಿಸಿದ ನಂತರ, ಆ ಆಲಿಕೆಯಿಂದ ಯಾವ ಮಾಹಿತಿಯನ್ನು ಪಡೆಯಲಾಯಿತು, ಆ ಮಾಹಿತಿಯಿಂದ ಯಾವ ರೀತಿಯ ಉಪಯೋಗವಾಯಿತು, ಆಲಿಕೆಯನ್ನು ಮತ್ತೊಂದು ಅವಧಿಗೆ ಮುಂದುವರಿಸಬೇಕೇ ಬೇಡವೇ? ಎನ್ನುವುದರ ಬಗ್ಗೆ ಮತ್ತೊಮ್ಮ ಸರ್ಕಾರದ ಗೃಹ ಕಾರ್ಯದರ್ಶಿಗಳಿಗೆ ಮಾಹಿತಿಯನ್ನು ಕೊಡಬೇಕು. ಒಂದು ವೇಳೆ ಒಂದು ವಾರದ ಕದ್ದಾಲಿಕೆಯ ನಂತರ ಯಾವುದೇ ರೀತಿಯ ಉಪಯುಕ್ತ ಮಾಹಿತಿ ಬರದೇ ಹೋದರೆ ಕದ್ದಾಲಿಕೆಯನ್ನು ನಿಲ್ಲಿಸಬಹುದು. ಅಥವಾ ಇನ್ನು ಒಂದು ವಾರದ ಅವಧಿಗೆ ವಿಸ್ತರಣೆಯನ್ನು ಪಡೆದು ಕದ್ದಾಲಿಕೆಯನ್ನು ಮುಂದುವರೆಸಬಹುದು. ಆದರೆ ತಿಂಗಳಾನುಗಟ್ಟಲೇ, ವರ್ಷಾನುಗಟ್ಟಲೇ ಕದ್ದಾಲಿಸುವಂತಹ ಅಧಿಕಾರ ಇಲ್ಲ.
ಕೆಲವೊಂದು ವೇಳೆ ಕೆಲವು ಫೋನ್‍ಗಳ ಕದ್ದಾಲಿಕೆಯನ್ನು ಅತ್ಯಂತ ಜರೂರಾಗಿ ಮಾಡಬೇಕಾದ ಪ್ರಮೇಯ ಬರುತ್ತದೆ. ಉದಾಹರಣೆಗೆ ಇಂದು ಮಧ್ಯರಾತ್ರಿ ಒಂದು ಜಾಗದಲ್ಲಿ ಒಬ್ಬ ವ್ಯಕ್ತಿ ಕಿಡ್ನ್ಯಾಪ್ ಆಗುತ್ತಾನೆ ಎಂಬ ಮಾಹಿತಿ ಬಂದಾಗ, ಆ ಕಿಡ್ನ್ಯಾಪರ್ ಯಾರ ಜತೆಗೆ ಮಾತುಗಳನ್ನು ಆಡುತ್ತಾನೆ, ಯಾವ ಜಾಗದಲ್ಲಿದ್ದಾನೆ, ಏನು ಮಾಡುತ್ತಾನೆ ಎಂದು ತಿಳಿಯಲು ಕೆಲವು ಫೋನ್‍ಗಳನ್ನು ಆಲಿಸುವ ಅವಶ್ಯಕತೆ ಬರುತ್ತದೆ. ಆ ಸಮಯದಲ್ಲಿ ಸರ್ಕಾರಕ್ಕೆ ಪತ್ರ ಬರೆದು ಸರ್ಕಾರದಿಂದ ಅನುಮತಿ ತರಿಸಲು ಸಮಯ ವಿಳಂಬವಾಗಿರುವುದರಿಂದ ಐಜಿಪಿ ಹುದ್ದೆಯ ಅಧಿಕಾರಿ ಅಲ್ಪಕಾಲಕ್ಕೆ ಕೆಲವು ಫೋನ್ ಗಳನ್ನು ತನ್ನ ಸ್ವಯಂ ವಿವೇಚನೆಯಿಂದ ಆಲಿಸುವ ಆದೇಶವನ್ನು ನೀಡಿ ಆನಂತರ ಸರ್ಕಾರಕ್ಕೆ ಆ ಬಗ್ಗೆ ಮಾಹಿತಿ ಕೊಟ್ಟು ಸರ್ಕಾರದಿಂದ ಕಾರ್ಯೋತ್ತರ ಪರವಾನಗಿಯನ್ನು ಪಡೆಯುತ್ತಾನೆ. ಹೀಗಾಗಿ ಕೆಲವೊಂದು ನಿರ್ದಿಷ್ಟ ಸನ್ನಿವೇಶಗಳಲ್ಲಿ ಸರ್ಕಾರದ ಪೂರ್ವಾನುಮತಿಯನ್ನು ಪಡೆಯದೆಯೇ ಟೆಲಿಫೋನ್‍ಗಳ ಆಲಿಕೆಯನ್ನು ಮಾಡಬಹುದಾಗಿದೆ.
ರಾಜಕಾರಣಿಗಳು ಹಾಗೂ ಅಧಿಕಾರಿಗಳ ಫೋನ್ ಸಂಭಾಷಣೆಯನ್ನು ಕದ್ದಾಲಿಸಬಹುದೇ?
ಸಾಮಾನ್ಯ ಸಂದರ್ಭಗಳಲ್ಲಿ ಇಂತಹ ಸಂಭಾಷಣೆಗಳನ್ನು ಆಲಿಸುವಂತಹ ಪ್ರಮೇಯ ಬರುವುದಿಲ್ಲ. ಆದರೆ ಯಾವುದೇ ಅಧಿಕಾರಿ ಅಥವಾ ರಾಜಕಾರಣಿ ಯಾವುದಾದರೊಂದು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವರೆಂಬ ಅನುಮಾನ ಬಂದರೆ ಅಂತಹ ಸಂಭಾಷಣೆಯನ್ನು ಆಲಿಸಬಹುದು. ಒಬ್ಬ ಶಾಸಕನ ಮುಂದಿನ ರಾಜಕೀಯ ನಡೆ ಏನು, ಒಬ್ಬ ಅಧಿಕಾರಿ ಯಾವ ಹುದ್ದೆಗೆ ಪ್ರಯತ್ನ ಪಡುತ್ತಿದ್ದಾನೆ ಮುಂತಾದ ವಿಷಯಗಳ ಬಗ್ಗೆ ಆಲಿಸುವುದು ಕಾನೂನು ಬಾಹಿರ. ನಿಯಮಗಳಿಗೆ ಒಳಪಡಲಾಗದ ಟೆಲಿಫೋನ್ ಕದ್ದಾಲಿಕೆಯನ್ನು ಯಾರೇ ಮಾಡಲಿ, ಅವರು ಶಿಕ್ಷಾರ್ಹ ಅಪರಾಧವನ್ನು ಎಸಗಿದಂತೆ.
ಕದ್ದಾಲಿಕೆಗೆ ಪರವಾನಗಿಯನ್ನು ಕೊಡುವವರು ರಾಜಕಾರಣಿಗಳೇ ಅಥವಾ ಅಧಿಕಾರಿಗಳೇ?
ಈಗಾಗಲೇ ತಿಳಿಸಿದಂತೆ ಯಾವುದೇ ಟೆಲಿಫೋನ್ ಕದ್ದಾಲಿಕೆಯನ್ನು ಮಾಡಬೇಕಾದರೂ ಸರ್ಕಾರದ ಗೃಹ ಕಾರ್ಯದರ್ಶಿಯ ಲಿಖಿತ ಪರವಾನಗಿ ಇರಬೇಕು. ಅಧಿಕಾರಸ್ಥ ರಾಜಕಾರಣಿಗಳು ಇಂತಹ ಟೆಲಿಫೋನ್ ಕದ್ದಾಲಿಸಬಹುದು ಎಂದು ಸಂಬಂಧಪಟ್ಟವರಿಗೆ ಮೌಖಿಕ ಸೂಚನೆ ಕೊಡುವ ಸಂದರ್ಭವನ್ನು ಅಲ್ಲಗಳೆಯುವಂತಿಲ್ಲ. ಅಂತಹ ಸೂಚನೆಗಳ ಮೇರೆಗೆ ಯಾರೇ ಕದ್ದಾಲಿಕೆಯನ್ನು ಮಾಡಿದರೂ ಅದರ ಜವಾಬ್ದಾರಿಯನ್ನು ಅದೇ ಅಧಿಕಾರಿಯೇ ಹೊರಬೇಕಾಗುತ್ತದೆ.
ಕದ್ದಾಲಿಕೆಯ ಫಲವಾಗಿ ಲಭ್ಯವಾದ ಧ್ವನಿಮುದ್ರಣವನ್ನು ಕೂಡಲೇ ನಾಶಮಾಡಬೇಕಾಗುತ್ತದೆ. ಇಂತಹ ಧ್ವನಿಮುದ್ರಣವನ್ನು ಅನಧಿಕೃತವಾಗಿ ತಮ್ಮ ಬಳಿ ಇಟ್ಟುಕೊಳ್ಳುವುದು ಆಫಿಷಿಯಲ್ ಸೀಕ್ರೆಟ್ ಆಕ್ಟ್ ಪ್ರಕಾರ ಅಪರಾಧವಾಗುತ್ತದೆ.
ಲೇಖಕರು ನಿವೃತ್ತ ಡಿ. ಜಿ. ಪಿ