ನರೇಂದ್ರಮೋದಿ ನೇತೃತ್ವದ ಎನ್ ಡಿ ಎ ಸರ್ಕಾರದ ಅವಧಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ನಿಷ್ಕ್ರಿಯ ಸಾಲದ (Non Performing Assets – NPA) ಮೊತ್ತ ಬೃಹತ್ತಾಗಿ ಬೆಳೆಯುತ್ತಿರುವ ಪ್ರಮಾಣದಲ್ಲೇ ಬ್ಯಾಂಕುಗಳಲ್ಲಿ ಆಗುತ್ತಿರುವ ವಂಚನೆ ಪ್ರಕರಣಗಳು ಬೆಳೆಯುತ್ತಿವೆ. ಭಾರತೀಯ ರಿಸರ್ವ್ ಬ್ಯಾಂಕು ನೀಡಿರುವ ಅಂಕಿ ಅಂಶಗಳ ಪ್ರಕಾರ ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಐದು ಪ್ಲಸ್ ವರ್ಷದಲ್ಲಿ ದೇಶದಲ್ಲಿನ ಬ್ಯಾಂಕುಗಳಿಗೆ ವಂಚನೆ ಮಾಡಲಾಗಿರುವ ಮೊತ್ತವು ರೂ 2,06,695.67 (2.06 ಲಕ್ಷ ಕೋಟಿ) ಕೋಟಿಗೆ ಏರಿದೆ.
ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕವೊಂದರಲ್ಲೇ ರೂ 31,898.63 ಕೋಟಿಗಳಷ್ಟನ್ನು 18 ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ವಂಚಿಸಲಾಗಿದೆ. ಮೊದಲ ತ್ರೈಮಾಸಿಕದಲ್ಲಿ ಅಂದರೆ ಏಪ್ರಿಲ್ ಮತ್ತು ಜೂನ್ ಮೂರು ತಿಂಗಳ ಅವಧಿಯಲ್ಲೇ 2,480 ವಂಚನೆ ಪ್ರಕರಣಗಳು ದಾಖಲಾಗಿವೆ.
ಆಗಿರುವ ವಂಚನೆ ಪ್ರಕರಣಗಳನ್ನು ದಿನದ ಲೆಕ್ಕದಲ್ಲಿ ನೋಡಿದರೆ ಆಘಾತಕಾರಿ ಸಂಗತಿ ಹೊರಬರುತ್ತದೆ. ರಜೆ ದಿನಗಳೂ ಸೇರಿದಂತೆ ಈ 90 ದಿನಗಳಲ್ಲಿ ಪ್ರತಿ ದಿನ ರೂ 354.42 ಕೋಟಿಗಳಷ್ಟು ವಂಚಿಸಲಾಗಿದೆ. ಈ ಅವಧಿಯಲ್ಲಿ ಪ್ರತಿ ದಿನ ಸರಾಸರಿ 83 ವಂಚನೆ ಪ್ರಕರಣಗಳು ನಡೆದಿವೆ. ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತಿ ಹೆಚ್ಚು ವಂಚನೆಗೀಡಾಗಿದೆ. ವಂಚನೆ ಪ್ರಕರಣಗಳ ಪೈಕಿ ಶೇ. 38ರಷ್ಟು ಪ್ರಕರಣಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಂದರಲ್ಲೇ ನಡೆದಿವೆ.

ಇವು ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಅಂಕಿಅಂಶಗಳು. ನಿಮೂಚ್ ಮೂಲದ ಚಂದ್ರಶೇಖರ್ ಗೌರ್ ಎಂಬವರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಈ ಮಾಹಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಪಡೆದಿದ್ದಾರೆ.
ಆರ್ ಬಿ ಐ ನೀಡಿರುವ ಮಾಹಿತಿ ಪ್ರಕಾರ, ಮೊದಲ ತ್ರೈಮಾಸಿಕದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ರೂ 12,012.77 ಕೋಟಿಗಳನ್ನೊಳಗೊಂಡ 1,197 ವಂಚನೆ ಪ್ರಕರಣಗಳು ನಡೆದಿವೆ. ಅತಿಹೆಚ್ಚು ವಂಚನೆ ಪ್ರಕರಣ ನಡೆದಿರುವ ಬ್ಯಾಂಕುಗಳ ಪಟ್ಟಿಯಲ್ಲಿ ಅಲಹಾಬಾದ್ ಬ್ಯಾಂಕ್ ಎರಡನೇ ಸ್ಥಾನದಲ್ಲಿದೆ. ಮೂರು ತಿಂಗಳ ಅವಧಿಯಲ್ಲಿ ಅಲಹಬಾದ್ ಬ್ಯಾಂಕಿಗೆ 381 ಪ್ರಕರಣಗಳಲ್ಲಿ ರೂ 2,855.46 ಕೋಟಿಗಳನ್ನು ವಂಚಿಸಲಾಗಿದೆ. ಆದರೆ, ಆರ್ ಬಿ ಐ ನೀಡಿರುವ ಮಾಹಿತಿಯಲ್ಲಿ ನಡೆದಿರುವ ವಂಚನೆಗಳ ಸ್ವರೂಪ ಯಾವುದು ಮತ್ತು ಅದರಿಂದ ಆಯಾ ಬ್ಯಾಂಕುಗಳ ಗ್ರಾಹಕರಿಗೆ ಆಗಿರಬಹುದಾದ ನಷ್ಟದ ಮೊತ್ತ ಎಷ್ಟು ಎಂಬುದರ ವಿವರ ನೀಡಿಲ್ಲ.
ಬ್ಯಾಂಕ್ ಆಫ್ ಬರೋಡಾದಲ್ಲಿ ರೂ 2,297.05 ಕೋಟಿ ಮೊತ್ತದ 75 ವಂಚನೆ ಪ್ರಕರಣಗಳು ನಡೆದಿವೆ. ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನಲ್ಲಿ ರೂ 2,133.08 ಕೋಟಿ ಮೊತ್ತದ 45 ಪ್ರಕರಣಗಳು, ಕೆನರಾ ಬ್ಯಾಂಕ್ ನಲ್ಲಿ ರೂ 2,035.81 ಕೋಟಿ ಮೊತ್ತದ 69 ಪ್ರಕರಣಗಳು, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ರೂ 1,982.27 ಕೋಟಿ ಮೊತ್ತದ 194 ಪ್ರಕರಣಗಳು ನಡೆದಿವೆ. ಯುನೈಟೆಡ್ ಬ್ಯಾಂಕ್ ರೂ 1,196.19 ಕೋಟಿ (31 ಪ್ರಕರಣ), ಕಾರ್ಪೊರೇಷನ್ ಬ್ಯಾಂಕ್ ರೂ 960.80(16) ಇಂಡಿಯನ್ ಓವರ್ಸೀಸ್ ಬ್ಯಾಂಕ್ ರೂ 753.37 (51) ಬ್ಯಾಂಕ್ ಆಫ್ ಇಂಡಿಯಾ ರೂ 517 ಕೋಟಿ (42) ಯುಕೋ ಬ್ಯಾಂಕ್ ರೂ 470.74 ಕೋಟಿ (34) ವಂಚನೆ ನಡೆದಿದೆ. ಆಂಧ್ರ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲೂ ವಂಚನೆ ಪ್ರಕರಣಗಳು ನಡೆದಿವೆ.

ಐತಿಹಾಸಿಕ ಅಂಕಿಅಂಶಗಳನ್ನು ಗಮನಿಸಿ…
ಆರ್ ಬಿ ಐ ಅಂಕಿ ಅಂಶಗಳ ಪ್ರಕಾರ ಕಳೆದ ಹನ್ನೊಂದು ವಿತ್ತೀಯ ವರ್ಷಗಳಲ್ಲಿ ಬ್ಯಾಂಕುಗಳಿಗೆ ವಂಚನೆ ಮಾಡಿರುವ ಒಟ್ಟು ಮೊತ್ತ ರೂ 2.05 ಲಕ್ಷ ಕೋಟಿಗಳಷ್ಟಿದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೊದಲ ಐದು ವರ್ಷಗಳಲ್ಲಿ ದೇಶದಲ್ಲಿರುವ ಬ್ಯಾಂಕುಗಳಿಗೆ ವಂಚಿಸಿರುವ ಮೊತ್ತವೇ ರೂ 1.74 ಲಕ್ಷ ಕೋಟಿಗೇರಿತ್ತು. ಈ ಮೊತ್ತದಲ್ಲಿ ಪ್ರಸಕ್ತ ವಿತ್ತೀಯ ವರ್ಷದ (ಮೇಲಿನ ಅಂಕಿ ಅಂಶಗಳು) ಸೇರ್ಪಡೆಯಾಗಿಲ್ಲ ಎಂಬುದನ್ನು ಗಮನಿಸಬೇಕು. ಅದೂ ಸೇರ್ಪಡೆಯಾದರೆ ಮೊತ್ತವು ರೂ 2,06,695.67 ಕೋಟಿಗೆ ಏರುತ್ತದೆ.
ಕಳೆದ ಹನ್ನೊಂದು ವರ್ಷಗಳ ಪೈಕಿ ಮೊದಲ ಆರು ವರ್ಷಗಳಲ್ಲಿ ಸುಮಾರು ರೂ 31,000 ಕೋಟಿಗಳಷ್ಟು ಬ್ಯಾಂಕುಗಳಿಗೆ ವಂಚಿಸಿದ್ದರೆ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರದ ಐದು ವರ್ಷಗಳಲ್ಲಿ ರೂ 1,74,797.67 ಕೋಟಿಗಳಷ್ಟು ಬ್ಯಾಂಕುಗಳಿಗೆ ವಂಚಿಸಲಾಗಿದೆ. 2008-09ರಲ್ಲಿ ದೇಶದಲ್ಲಿನ ಬ್ಯಾಂಕುಗಳಿಗೆ ವಂಚಿಸಲಾದ ಮೊತ್ತ ರೂ 1,860.09 ಕೋಟಿ. 2018-19ರಲ್ಲಿ ಬ್ಯಾಂಕುಗಳಿಗೆ ವಂಚಿಸಲಾದ ಮೊತ್ತ ರೂ 71,542.93 ಕೋಟಿ. ಅಂದರೆ, ಈ ಹತ್ತು ವರ್ಷಗಳಲ್ಲಿ ವಂಚನೆ ಪ್ರಮಾಣ 38 ಪಟ್ಟು ಹೆಚ್ಚಳವಾಗಿದೆ.
ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೊದಲ ವರ್ಷ ಅಂದರೆ 2014-15ರಲ್ಲಿ ದೇಶದಲ್ಲಿನ ಬ್ಯಾಂಕುಗಳಿಗೆ ರೂ 19,455.07 ಕೋಟಿಗಳಷ್ಟು ವಂಚನೆಯಾಗಿದೆ. 2015-16ರಲ್ಲಿ ರೂ 18,698.82 ಕೋಟಿ, 2016-17ರಲ್ಲಿ ರೂ 23,933.85 ಕೋಟಿಗಳಷ್ಟು ವಂಚನೆಯಾಗಿದೆ. 2017-18ರಲ್ಲಿ ಬ್ಯಾಂಕುಗಳಿಗೆ ವಂಚಿಸಿದ ಮೊತ್ತವು ರೂ 41,167 ಕೋಟಿಗೆ ಜಿಗಿದಿದೆ. 2018-19ನೇ ಸಾಲಿನಲ್ಲಿ ಈ ಮೊತ್ತ ರೂ 71,542.93 ಕೋಟಿ ರುಪಾಯಿಗಳಷ್ಟಾಗಿದೆ. ಅಂದರೆ ಮೋದಿ ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲಿ ಬ್ಯಾಂಕುಗಳಿಗೆ ವಂಚಿಸಲಾಗಿರುವ ಮೊತ್ತಕ್ಕೆ ಹೋಲಿಸಿದರೆ ನಂತರದ ನಾಲ್ಕು ವರ್ಷಗಳಲ್ಲಿ ವಂಚಿಸಲಾದ ಮೊತ್ತ ನಾಲ್ಕು ಪಟ್ಟು ಜಿಗಿದಿದೆ.
ಕಳೆದ ಹನ್ನೊಂದು ವರ್ಷದಲ್ಲಿ ಒಟ್ಟು 53,334 ವಂಚನೆ ಪ್ರಕರಣಗಳು ನಡೆದಿವೆ. ಯಾವ ಯಾವ ಬ್ಯಾಂಕುಗಳಿಗೆ ಎಷ್ಟೆಷ್ಟು ವಂಚಿಸಲಾಗಿದೆ ಎಂಬ ವಿವರ ಇಲ್ಲಿದೆ. (ಕಂಸದಲ್ಲಿರುವುದು ವಂಚನೆ ಪ್ರಕರಣಗಳ ಸಂಖ್ಯೆ) ಈ ಅಂಕಿ ಅಂಶದಲ್ಲಿ ಪ್ರಸಕ್ತ ವಿತ್ತೀಯ ವರ್ಷದಲ್ಲಾಗಿರುವ ವಂಚನೆ ಮೊತ್ತ ಮತ್ತು ಪ್ರಕರಣಗಳ ಸಂಖ್ಯೆ ಸೇರಿಲ್ಲ.

ಆರ್ ಬಿ ಐ ನೀಡಿರುವ ಅಂಕಿ ಅಂಶಗಳ ಪ್ರಕಾರ, ಮೋದಿ ಅಧಿಕಾರಕ್ಕೆ ಬರುವ ಮೊದಲ ಆರು ವರ್ಷಗಳಲ್ಲಿ ಬ್ಯಾಂಕುಗಳಿಗೆ ವಂಚಿಸಲಾಗಿರುವ ಮೊತ್ತದ ವರ್ಷವಾರು ವಿವರ ಗಮನಿಸಿ. 2008-09ರಲ್ಲಿ ಬ್ಯಾಂಕುಗಳಿಗೆ ವಂಚಿಸಲಾದ ಮೊತ್ತ ರೂ 1,860.09 ಕೋಟಿ. 2009-10ರಲ್ಲಿ ಈ ಮೊತ್ತ ರೂ 1,998.94 ಕೋಟಿಗಳಷ್ಟಿತ್ತು. 2010-11ರಲ್ಲಿ ರೂ 3,815.76 ಕೋಟಿ ಮತ್ತು 2011-12ರಲ್ಲಿ ರೂ 4,501.15 ಕೋಟಿಯಾಗಿತ್ತು. 2012-13ರಲ್ಲಿ ರೂ 8,590.86 ಕೋಟಿಗೆ ಮತ್ತು 2013-14ರಲ್ಲಿ ರೂ 10,170.81 ಕೋಟಿ ರುಪಾಯಿಗೆ ಏರಿತ್ತು.
ಮೋದಿ ಅಧಿಕಾರಕ್ಕೆ ಬಂದ ಮೊದಲ ವರ್ಷವೇ ಬ್ಯಾಂಕುಗಳಿಗೆ ವಂಚಿಸಲಾದ ಮೊತ್ತವು ರೂ 19,455.07 ಕೋಟಿಗೆ ಜಿಗಿಯಿತು. ಅಂದರೆ ಒಂದೇ ವರ್ಷದಲ್ಲಿ ದುಪ್ಪಟ್ಟಾಯಿತು. ಐದು ವರ್ಷಗಳ ನಂತರ ಈ ಮೊತ್ತವು ರೂ 71,542.93 ಕೋಟಿಗೆ ಏರಿತು. ಅಂದರೆ ಐದು ವರ್ಷಗಳಲ್ಲಿ ಏಳು ಪಟ್ಟು ಜಿಗಿದಿದೆ.
ಈಗ ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ರೈಮಾಸಿಕದಲ್ಲೇ ರೂ 31,898.63 ಏರಿದೆ. ಮುಂದಿನ ಮೂರು ತ್ರೈಮಾಸಿಕಗಳಲ್ಲೂ ಇದೇ ಪ್ರಮಾಣದಲ್ಲಿ ವಂಚನೆ ಪ್ರಕರಣಗಳು ಏರಿದರೆ, ಒಂದೇ ವರ್ಷದಲ್ಲಿ ಒಂದು ಲಕ್ಷ ಕೋಟಿ ರುಪಾಯಿ ದಾಟುವ ನಿರೀಕ್ಷೆ ಇದೆ. ಅಂದರೆ, ಮೊದಲ ತ್ರೈಮಾಸಿಕದಲ್ಲಿ ನಡೆದಿರುವ ವಂಚನೆ ಪ್ರಕರಣಗಳ ಪೈಕಿ ಖಾಸಗಿ ಬ್ಯಾಂಕುಗಳಲ್ಲಿ ನಡೆದಿರುವ ವಂಚನೆ ಪ್ರಕರಗಳು ಸೇರಿಲ್ಲ. ಖಾಸಗಿ ಬ್ಯಾಂಕುಗಳ ವಂಚನೆ ಪ್ರಕರಣಗಳು ಸೇರಿದರೆ ವಂಚನೆಯಾಗಿರುವ ಮೊತ್ತ ಮತ್ತಷ್ಟು ಹೆಚ್ಚಾಗಲಿದೆ.