ಅಧಿಕಾರಕ್ಕೆ ಬಂದ ದಿನದಿಂದಲೂ ಅಸ್ಥಿರತೆಯ ಭೀತಿಯಲ್ಲೇ ಮುಂದುವರಿಯುತ್ತಿದ್ದ ಹದಿನಾಲ್ಕು ತಿಂಗಳ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ಕೊನೆಗೂ ಪತನವಾಗಿದೆ. ಇದರೊಂದಿಗೆ ಕಳೆದ ಗುರುವಾರದಿಂದ ವಿಧಾನಸಭೆಯಲ್ಲಿ ನಡೆಯುತ್ತಿದ್ದ ವಿಶ್ವಾಸಮತ ಯಾಚನೆಯ ಗೊಂದಲಕ್ಕೆ ತೆರೆ ಬಿದ್ದಿದೆ. ಆ ಮೂಲಕ ಮೋದಿ-2 ಅವಧಿಯಲ್ಲಿ ಬಿಜೆಪಿಯೇತರ ಸರ್ಕಾರ ಉರುಳಿಸುವ ಖಾತೆ ತೆರೆದದಂತಾಗಿದೆ. ಜೊತೆಗೆ ದಕ್ಷಿಣ ಭಾರತದ ಬಾಗಿಲು ಮತ್ತೊಮ್ಮೆ ಬಿಜೆಪಿಗೆ ತೆರೆದಂತೆಯೂ ಆಗಿದೆ.
ಸುದೀರ್ಘ ನಾಲ್ಕು ದಿನಗಳ ಚರ್ಚೆಯ ಬಳಿಕ (ವಿಶ್ವಾಸಮತಕ್ಕೆ ಸಂಬಂಧಿಸದ ಚರ್ಚೆ, ವಾಗ್ವಾದಗಳೇ ಹೆಚ್ಚಾಗಿದ್ದವು) ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರ ವಿಶ್ವಾಸಮತ ಕಳೆದುಕೊಂಡಿದೆ. ವಿಶ್ವಾಸ ಮತ ಪರವಾಗಿ 99 ಮತಗಳು ಬಂದಿದ್ದರೆ, ವಿರುದ್ಧವಾಗಿ 105 ಮತಗಳು ಬಂದಿದ್ದವು. ವಿಶ್ವಾಸಮತ ಯಾಚನೆಯಲ್ಲಿ ಸೋಲು ಅನುಭವಿಸಿದ ಬಳಿಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯಪಾಲರನ್ನು ಭೇಟಿಯಾಗಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಇದೀಗ ಸರ್ಕಾರ ರಚನೆಗೆ ಬಿಜೆಪಿ ರಾಜ್ಯಪಾಲರ ಮುಂದೆ ಹಕ್ಕು ಮಂಡಿಸಿದ್ದು, ರಾಜ್ಯಪಾಲರ ಆಹ್ವಾನದ ಬಳಿಕ ಬಿ. ಎಸ್. ಯಡಿಯೂರಪ್ಪ ಅವರು ನಾಲ್ಕನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುತ್ತಾರೆ. ಬಹುಶಃ ಗುರುವಾರವೇ ಇದಕ್ಕೆ ಮುಹೂರ್ತ ಸಿಗಬಹುದು.
ವಿಶ್ವಾಸಮತದಿಂದ ಹಿಂದೆ ಸರಿಯದ ಸಿಎಂ:
ವಿಶ್ವಾಸಮತ ಪ್ರಸ್ತಾಪವನ್ನು ಸದನದಲ್ಲಿ ಮಂಡಿಸಿದ ಬಳಿಕವೂ ಮುಂಬೈನಲ್ಲಿ ಬೀಡುಬಿಟ್ಟಿದ್ದ ಅತೃಪ್ತ ಶಾಸಕರನ್ನು ಓಲೈಸಿ ವಾಪಸ್ ಕರೆಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಯಿತು. ಅತೃಪ್ತ ಶಾಸಕರಿಗೂ ವಿಪ್ ಅನ್ವಯವಾಗುತ್ತದೆ ಎಂದು ಸ್ಪೀಕರ್ ರೂಲಿಂಗ್ ಕೊಟ್ಟ ಬಳಿಕ, ವಿಪ್ ಜಾರಿಯಾದ ಬಳಿಕ ಸದನಕ್ಕೆ ಬಾರದೇ ಇದ್ದರೆ ಸದಸ್ಯತ್ವದಿಂದ ಅನರ್ಹಗೊಳ್ಳಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಕಳುಹಿಸಿಕೊಡಲಾಯಿತು. ಆದರೆ, ಅದಾವುದಕ್ಕೂ ಅತೃಪ್ತರು ಬಗ್ಗದೇ ಇದ್ದಾಗ ವಿಶ್ವಾಸಮತ ಕಳೆದುಕೊಳ್ಳಬೇಕಾಗುತ್ತದೆ ಎಂಬುದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸ್ಪಷ್ಟವಾಗಿತ್ತು.
ಸಾಮಾನ್ಯವಾಗಿ ಬಹುಮತಕ್ಕೆ ಒಂದು ಅಥವಾ ಎರಡು ಸದಸ್ಯರ ಕೊರತೆ ಇದ್ದಾಗ ವಿಶ್ವಾಸಮತ ಯಾಚಿಸಿ ಅದೃಷ್ಟ ಪರೀಕ್ಷಿಸುತ್ತಾರೆ. ಆದರೆ, ಇಲ್ಲಿ ಅಂತಹ ಅದೃಷ್ಟ ಪರೀಕ್ಷಿಸಲು ಸಾಧ್ಯವಿರಲಿಲ್ಲ. ಏಕೆಂದರೆ, 224 ಸದಸ್ಯಬಲದ ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ ಸದಸ್ಯರ ಸಂಖ್ಯೆ 105 ಇದ್ದರೆ, 20 ಸದಸ್ಯರು ಗೈರು ಹಾಜರಾಗಿದ್ದರು. ಹೀಗಾಗಿ ಸರ್ಕಾರದ ಪರವಾಗಿ ಇದ್ದವರು 99 ಶಾಸಕರು ಮಾತ್ರ. ಹೀಗಾಗಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡದೆ ವಿದಾಯ ಭಾಷಣ ಮಾಡಿ ರಾಜ್ಯಪಾಲರಿಗೆ ರಾಜಿನಾಮೆ ಸಲ್ಲಿಸಲಿದ್ದಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.
ಆದರೆ, ಕಲಾಪ ಇಷ್ಟೊಂದು ರಾದ್ಧಾಂತ ಸೃಷ್ಟಿಸಿದ ಮೇಲೆ ವಿಶ್ವಾಸಮತ ಯಾಚಿಸದೆ ಪಲಾಯನ ಮಾಡಿದರೆ ಜನರಿಂದ ಇನ್ನಷ್ಟು ಟೀಕೆಗಳು ಎದುರಾಗಬಹುದು ಎಂಬ ಕಾರಣಕ್ಕೆ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಮಾಡಿಯೇ ಬಿಟ್ಟರು. ಮೊದಲು ಈ ಪ್ರಸ್ತಾಪವನ್ನು ಧ್ವನಿಮತಕ್ಕೆ ಹಾಕಿದ ಸ್ಪೀಕರ್ ಬಳಿಕ ಮತ ವಿಭಜನೆಗೆ ಹಾಕಿದರು. ಈ ವೇಳೆ ವಿಶ್ವಾಸಮತ ನಿರ್ಣಯದ ಪರವಾಗಿ 99 ಮತಗಳು ಬಂದರೆ ವಿರುದ್ಧವಾಗಿ 105 ಮತಗಳು ಬಿದ್ದವು. ಪ್ರಸ್ತಾಪಕ್ಕೆ ಸೋಲಾದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರು.

ಆಪರೇಷನ್ ಕಮಲ ಭೀತಿ, ಅತೃಪ್ತ ಶಾಸಕರ ಬೆದರಿಕೆ ಕಾರಣಗಳಿಂದ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಅವರ ಸರ್ಕಾರ ಎಷ್ಟು ತೊಂದರೆ ಅನುಭವಿಸಿದ್ದರೋ ಅದಕ್ಕೆಲ್ಲಾ ಸೇಡು ತೀರಿಸುವಂತೆ ಅಧಿಕಾರಕ್ಕಾಗಿ ಹಾತೊರೆಯುತ್ತಿದ್ದ ಬಿಜೆಪಿಯಲ್ಲಿ ಮೂರು ದಿನಗಳ ಕಾಲ ಆತಂಕ ಸೃಷ್ಟಿಸಿ ಕೊನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ಆದರೆ, ಇದರ ಮಧ್ಯೆ ಕಲಾಪ ನಡೆದ ರೀತಿ, ಆಡಳಿತ ಪಕ್ಷ ಮತ್ತು ಸ್ಪೀಕರ್ ಅವರ ಕಾರ್ಯವೈಖರಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದಲ್ಲದೆ, ರಾಜಕಾರಣಿಗಳ ಅಧಿಕಾರ ಲಾಲಸೆ ಹೇಸಿಗೆ ಹುಟ್ಟಿಸಿದ್ದು ಮಾತ್ರ ದುರಂತ.
ಹಾಗೆ ನೋಡಿದರೆ ವಿಶ್ವಾಸಮತ ನಿರ್ಣಯ ಮಂಡಿಸಿದ ದಿನವೇ (ಜು. 18) ಸರ್ಕಾರಕ್ಕೆ ವಿಶ್ವಾಸಮತ ಸಿಗುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು. ಆದರೂ ವಿಶ್ವಾಸಮತ ಪ್ರಸ್ತಾಪದ ಮೇಲಿನ ಚರ್ಚೆ ವೇಳೆ ಸರ್ಕಾರ ಉರುಳಿಸಲು ಇದುವರೆಗೆ ನಡೆದ ಬಿಜೆಪಿ ಪ್ರಾಯೋಜಿತ ಭಿನ್ನಮತೀಯ ಚಟುವಟಿಕೆಗಳು, ಅತೃಪ್ತರ ನಡವಳಿಕೆಗಳು, ಸ್ಪೀಕರ್ ಸೇರಿದಂತೆ ಸರ್ಕಾರದ ಮೇಲೆ ಅತೃಪ್ತರು ಮಾಡಿದ ಆರೋಪಗಳು, ಅದರ ಹಿಂದಿನ ಕಾರಣಗಳೆಲ್ಲವೂ ಸದನದಲ್ಲಿ ಚರ್ಚೆಯಾಗಿ ಕಡತದಲ್ಲಿ ಸೇರುವಂತಾಯಿತು. ಆ ಮೂಲಕ ಹೇಗೆಲ್ಲಾ ಆಪರೇಷನ್ ಪ್ರಯತ್ನಗಳಾದವು? ಇದರ ಹಿಂದೆ ಯಾರಿದ್ದರು? ಯಾವ ರೀತಿಯಲ್ಲಿ ಆಪರೇಷನ್ ನಡೆಯಿತು? ಎಂಬ ದಾಖಲೆಗಳನ್ನು ಮುಂದಿನ ತಲೆಮಾರಿಗೆ ಕಾಯ್ದಿರಿಸಿದಂತಾಯಿತು.
ಬಿಜೆಪಿಯೇತರ ಸರ್ಕಾರ ಪತನದ ಅಕೌಂಟ್ ತೆರೆಯಿತು:
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ, ಅಮಿತ್ ಶಾ ಅವರು ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ದೇಶವನ್ನು ಕಾಂಗ್ರೆಸ್ ಮುಕ್ತಗೊಳಿಸುವ ಆಪರೇಷನ್ ಆರಂಭವಾಗಿತ್ತು. ಅದರಿಂದಾಗಿ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಸೇರಿದಂತೆ ಬಿಜೆಪಿಯೇತರ ಸರ್ಕಾರಗಳು ಉರುಳುವಂತಾಯಿತು. ದೇಶವನ್ನೇ ಕೇಸರಿಮಯಗೊಳಿಸುವ ಪ್ರಯತ್ನಗಳಾದವು. ಆದರೆ, 2018ರಲ್ಲಿ ಕೆಲವು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳು ಬಿಜೆಪಿಗೆ ಎಚ್ಚರಿಕೆಯ ಗಂಟೆಯಾಯಿತು. ಭದ್ರ ಕೋಟೆಯಾಗಿದ್ದ ಮಧ್ಯಪ್ರದೇಶ, ರಾಜಸ್ತಾನ ರಾಜ್ಯಗಳು ಬಿಜೆಪಿಯ ಕೈತಪ್ಪಿದವು. ಬಿಜೆಪಿಯ ಆಪರೇಷನ್ ಕಮಲ ಮತ್ತು ದೇಶವನ್ನು ಕೇಸರೀಕರಣಗೊಳಿಸುವ ಪ್ರಕ್ರಿಯೆಗೆ ಇದು ಜನ ನೀಡಿದ ಉತ್ತರ ಎಂದೇ ಈ ಫಲಿತಾಂಶವನ್ನು ಬಿಂಬಿಸಲಾಗಿತ್ತು.
ಆದರೆ, 2019ರ ಲೋಕಸಬೆ ಚುನಾವಣೆ ಫಲಿತಾಂಶ ಇದಕ್ಕೆ ವಿರುದ್ಧವಾಗಿ ಬಂದು ದೇಶದ ಜನ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವವನ್ನು 2014ಕ್ಕಿಂತಲೂ ಬಲವಾಗಿ ಬೆಂಬಲಿಸಿದರು. ಆಗಲೇ ರಾಜಸ್ತಾನ, ಮಧ್ಯಪ್ರದೇಶಗಳಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಉರುಳಿಸುವ ಪ್ರಯತ್ನ ನಡೆದಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಈ ಮಧ್ಯೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸುವ ಪ್ರಯತ್ನವೂ ತೀವ್ರಗೊಂಡಿತ್ತು. ಆದರೆ, ಈ ಹಿಂದೆಲ್ಲಾ ಇಂತಹ ಪ್ರಯತ್ನ ವಿಫಲವಾಗಿದ್ದರಿಂದ ಮೈತ್ರಿ ನಾಯಕರು ಇದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದರ ಅನುಕೂಲ ಪಡೆದುಕೊಂಡ ಬಿಜೆಪಿ ತನ್ನ ಗೌಪ್ಯ ಆಪರೇಷನ್ ಮುಂದುವರಿಸಿ ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲ ಸಿಗುವಂತೆ ಆಡಳಿತ ಪಕ್ಷಗಳ ಶಾಸಕರ ರಾಜಿನಾಮೆ ಕೊಡಿಸಿ ಸರ್ಕಾರ ಪತನಕ್ಕೆ ನಾಂದಿ ಹಾಕಿಯೇ ಬಿಟ್ಟಿತ್ತು. ಅದು ಮೈತ್ರಿ ನಾಯಕರಿಗೆ ಗೊತ್ತಾಗುವ ವೇಳೆಗೆ ಸರ್ಕಾರ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಮೋದಿ-2 ಸರ್ಕಾರದಲ್ಲಿ ಬಿಜೆಪಿಯೇತರ ಸರ್ಕಾರ ಉರುಳಿಸುವ ಖಾತೆ ತೆರೆಯುವಂತಾಯಿತು.