ಇಂದು ಇಡೀ ವಿಶ್ವವೇ ಕರೋನಾ ಸೋಂಕು ಹರಡುವ ಭೀತಿಯಿಂದ ತತ್ತರಿಸುತ್ತಿದೆ. ಇಡೀ ದೇಶವೇ ಲಾಕ್ ಡೌನ್ ನಲ್ಲಿದೆ. ಈ ಸಂದರ್ಭದಲ್ಲಿ ಕಳೆದ ವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂಪಾಯಿಗಳ ಅರ್ಥಿಕ ಪ್ಯಾಕೇಜ್ ನ್ನು ಘೋಷಿಸಿದರು. ಆದರೆ ಈ ಪ್ಯಾಕೇಜ್ ನಿಂದ ನೆಲ ಕಚ್ಚಿರುವ ದೇಶದ ಆರ್ಥಿಕ ವ್ಯವಸ್ಥೆ ಚೇತರಿಕೆ ಕಾಣಲಿದೆ ಎಂಬುದು ಕೇಂದ್ರ ಸರ್ಕಾರದ ವಾದವಾಗಿತ್ತು. ಪ್ಯಾಕೇಜ್ ಘೋಷಣೆಯ ನಂತರ ಪ್ರತಿಪಕ್ಷಗಳಿಂದ ಎಚ್ಚರಿಕೆಯ , ಟೀಕೆಯ ಪ್ರತಿಕ್ರಿಯೆ ವ್ಯಕ್ತವಾಯಿತು. ದೇಶದ ಷೇರು ಮಾರುಕಟ್ಟೆಗಳು ಅಲ್ಪ ಏರಿಕೆ ಕಂಡರೂ ನಂತರ ಕುಸಿತವನ್ನೇ ದಾಖಲಿಸಿವೆ.
ನಂತರ ಮೂರು ದಿನಗಳಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿವಿಧ ವಲಯಗಳಿಗೆ ನೀಡಲಾಗಿರುವ ಪ್ಯಾಕೇಜಿನ ಮೊತ್ತವನ್ನು ಪತ್ರಿಕಾಗೋಷ್ಟಿಗಳ ಮೂಲಕ ವಿವರಿಸಿದರು. ಅದರೆ ದೇಶದ ಎಲ್ಲ ಪ್ರತಿಪಕ್ಷಗಳ ನಾಯಕರೂ ಕೂಡ ಈ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಕನ್ನಡಿಯೊಳಗಿನ ಗಂಟಾಗಲಿದೆ ಎಂಬ ಅಭಿಪ್ರಾಯವನ್ನೇ ಹೊಂದಿದ್ದಾರೆ. ಏಕೆಂದರೆ ಸರ್ಕಾರ ಪ್ಯಾಕೇಜ್ ಪ್ರಕಟಿಸಿ ಒಂದು ವಾರವೇ ಆಗುತ್ತ ಬಂದಿದ್ದರೂ ಲಾಕ್ ಡೌನ್ ನಿಂದ ತೀವ್ರ ಸಂಕಷ್ಟಕ್ಕೀಡಾಗಿರುವ ವಲಸಿಗ ಕಾರ್ಮಿಕರ ಸಾವಿನ ಸರಣಿ ನಿಲ್ಲುತ್ತಿಲ್ಲ.
ಈ ಬೆಳವಣಿಗೆ ನಡುವೆ ದೇಶದ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಆರ್ಥಿಕ ಪ್ಯಾಕೇಜ್ ಮೂಲಕ ಸರ್ಕಾರ ಜನರನ್ನು ದಾರಿತಪ್ಪಿಸುತ್ತಿದೆ ಎಂದು ಕಾಂಗ್ರೆಸ್ ಭಾನುವಾರ ಆರೋಪಿಸಿದೆ ಮತ್ತು ಕೇಂದ್ರ ಸರ್ಕಾರವು ಘೋಷಿಸಿದ ಕ್ರಮಗಳು ಭಾರತದ ಜಿಡಿಪಿಯಲ್ಲಿ ಕೇವಲ 1.6 ಶೇಕಡಾ ಮಾತ್ರ ಎಂದು ಹೇಳಿದೆ. ಅಂದರೆ ಈಗ ಘೋಷಿಸಲಾಗಿರುವ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ನಿಜಕ್ಕೂ 20 ಲಕ್ಷ ಕೋಟಿಯದ್ದಲ್ಲ, ಅದು ಕೇವಲ 3.22 ಲಕ್ಷ ಕೋಟಿ ರೂಪಾಯಿಗಳದ್ದು ಎಂಬುದು ಕಾಂಗ್ರೆಸ್ ವಾದ.
ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ವಕ್ತಾರ ಆನಂದ್ ಶರ್ಮಾ ಶರ್ಮಾ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕತೆಯನ್ನು ಪುರುಜ್ಜೀವನಗೊಳಿಸಲು ಬಡ ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ನೇರವಾಗಿ ಹಣವನ್ನು ನೀಡುವ ಮೂಲಕ ಅಗತ್ಯವಾದ ಕ್ರಮಗಳನ್ನು ಘೋಷಿಸಬೇಕು ಎಂದು ಹೇಳಿದ್ದಾರೆ. ಆರ್ಥಿಕತೆಗೆ ಉತ್ತೇಜನ ನೀಡುವುದು ಮತ್ತು ಜನರಿಗೆ ಸಾಲವನ್ನು ನೀಡುವುದರ ನಡುವೆ ವ್ಯತ್ಯಾಸವಿದೆ ಎಂದು ಅವರು ಹೇಳಿದ್ದಾರೆ. ಕೇಂದ್ರದ ಮಾಜಿ ಸಚಿವರಾಗಿದ್ದ ಶರ್ಮಾ ಅವರು ಪ್ರಧಾನ ಮಂತ್ರಿಯವರ ಪ್ಯಾಕೇಜ್ ಘೋಷಣೆಗಳ ಕುರಿತು ಕಟುವಾಗಿ ಟೀಕಿಸಿದ್ದು ಈ ಪ್ಯಾಕೇಜ್ ನ ಸಾಧಕ ಭಾದಕಗಳ ಬಗ್ಗೆ ತಮ್ಮೊಡನೆ ಚರ್ಚಿಸುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸವಾಲು ಹಾಕಿದ್ದಾರೆ. ಸರ್ಕಾರ ಅತಿ ಸಣ್ಣ , ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳ ಪುನಶ್ಚೇತನಕ್ಕೆ ಘೋಷಿಸಿರುವ 3.22 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಮಾತ್ರ ನಿಜವಾದದ್ದು ಮತ್ತು ವಾಸ್ತವಿಕತೆಗೆ ಹತ್ತಿರವಾಗಿದೆಯೇ ಹೊರತು ಇದು ಪ್ರಧಾನಿ ಹೇಳಿಕೊಂಡಂತೆ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಅಲ್ಲವೇ ಅಲ್ಲ ಎಂದೂ ಅವರು ಹೇಳಿದರು.
ನಾನು ಹಣಕಾಸು ಸಚಿವರನ್ನು ಪ್ರಶ್ನಿಸುತ್ತಿದ್ದೇನೆ, ಪ್ರಧಾನ ಮಂತ್ರಿಯ ಘೋಷಣೆಯನ್ನು ವಿವಾದವಾಗಿಸಿದ್ದೇನೆ. ನಾನು ನೀಡಿರುವ ಮಾಹಿತಿಯ ಸಂಖ್ಯೆಗಳ ಬಗ್ಗೆ ಸರ್ಕಾರ ಕನಿಷ್ಟ ನಿರಾಕರಿಸಲಿ ಎಂದು ಸರ್ಕಾರಕ್ಕೆ ಸವಾಲು ಹಾಕುತಿದ್ದೇನೆ ಅಲ್ಲದೆ ಹಣಕಾಸು ಸಚಿವರೊಂದಿಗೆ ಚರ್ಚೆಗೆ ಯಾವಾಗ ಕರೆದರೂ ಸಿದ್ದನಿದ್ದೇನೆ ಎಂದು ಹೇಳಿದ್ದಾರೆ. ಸಾವಿರಾರು ಕಿಲೋಮೀಟರ್ ದೂರದಿಂದ ಬದುಕು ಕಟ್ಟಿಕೊಳ್ಳಲು ಬಂದಿದ್ದ ವಲಸೆ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಮತ್ತು ಕಾನೂನಿನ ಹಕ್ಕುಗಳನ್ನೂ ನಿರಾಕರಿಸಲಾಗುತ್ತಿದೆ. ಅದರಿಂದ ಅವರು ಹೆಚ್ಚು ಸಾವಿಗೀಡಾಗುತಿದ್ದಾರೆ ಎಂದು ಅರೋಪಿಸಿದ ಅವರು, ದೇಶವು ಹಣಕಾಸು ಸಚಿವರಿಂದ ಗಂಭೀರತೆ ಮತ್ತು ವಸ್ತುನಿಷ್ಟತೆಯನ್ನು ನಿರೀಕ್ಷಿಸುತ್ತದೆ ಎಂದು ಹೇಳಿದರು. ಅಲ್ಲದೆ ಹಕ್ಕುಗಳ ಉಲ್ಲಂಘನೆಯ ಕಾರಣಕ್ಕೆ ದೇಶದ ಬಡ ನಾಗರಿಕರನ್ನು ಕ್ಷಮೆಯಾಚಿಸಬೇಕು ಎಂದೂ ಅವರು ಒತ್ತಾಯಿಸಿದರು.
ಮತ್ತೊಂದು ಪ್ರಮುಖ ಪ್ರತಿಪಕ್ಷ ಸಿಪಿಐ(ಎಂ) ಈಗಾಗಲೇ ಈ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ನ್ನು ಟೀಕಿಸಿದೆ. ಈ ಕುರಿತು ಮಾತನಾಡಿದ ನಾಯಕ ಸೀತಾರಾಂ ಯೆಚೂರಿ, ಅವರು ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡಬೇಕಾದ ಹಣಕಾಸಿನ ಪಾಲನ್ನೇ ಇನ್ನೂ ನೀಡಿಲ್ಲ. ರಾಜ್ಯಗಳು ತಮ್ಮ ಕಾನೂನುಬದ್ಧ ಬಾಕಿ ಮತ್ತು ಹಣಕಾಸಿನ ಪಾಲನ್ನು ಕಳೆದುಕೊಳ್ಳುತ್ತಿದೆ. ಈ ದಿಸೆಯಲ್ಲಿ ಸಿಪಿಎಂ ಪಕ್ಷವು ಎಲ್ಲ ಪ್ರತಿಪಕ್ಷಗಳನ್ನೂ ಒಟ್ಟಾಗಿ ಪ್ರತಿಭಟಿಸಲು ಆಹ್ವಾನಿಸುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ ಪ್ರಮುಖ ಮತ್ತು ಸೂಕ್ಷ್ಮ ವಲಯದಲ್ಲೂ ಕೇಂದ್ರ ಸರ್ಕಾರ ಖಾಸಗೀಕರಣ ಮಾಡಿ ರಾಷ್ಟ್ರೀಯ ಹಿತಾಸಕ್ತಿಯನ್ನು ಬಲಿಗೊಡುತ್ತಿದೆ ಎಂದು ಆಪಾದಿಸಿದ್ದಾರೆ.

ಹಿಂದೆ ಮುಂದೆ ನೋಡದೆ ಯಾವುದೇ ಪೂರ್ವಸಿದ್ದತೆ ಇಲ್ಲದೆ ಮೋದಿ ಅವರು ಏಕಾಏಕಿ ಲಾಕ್ ಡೌನ್ ಘೋಷಿಸಿದರು. ನಂತರ ರಾಜ್ಯಗಳಿಗೆ ನಿರ್ದೇಶನ ನೀಡಿ ಜನರ ಸುರಕ್ಷತೆ ನೋಡಿಕೊಳ್ಳಿ ಎಂದಿದ್ದಾರೆ. ಇದು ಬೇಜವಾಬ್ದಾರಿತನ ಎಂದು ಹೇಳಿದರಲ್ಲದೆ, ಒಟ್ಟು ಕಳೆದ 5 ದಿನಗಳಿಂದ ವಿವರ ನೀಡುತ್ತಿರುವ 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ನಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ನೀಡುತ್ತಿರುವುದು ಕೇವಲ 2 ಲಕ್ಷ ಕೋಟಿ ರೂಪಾಯಿ ಮಾತ್ರ ಎಂದು ಹೇಳಿದ್ದಾರೆ. ಅಲ್ಲದೆ ರಾಜ್ಯಗಳಿಗೆ ಪ್ಯಾಕೇಜ್ ನಲ್ಲಿ ಯಾವುದೇ ಪಾಲು ನೀಡದಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನಿರ್ಧಾರವು “ಸಾಮಾನ್ಯ ಜ್ಞಾನ” ವನ್ನು ಕೂಡ ಹೊಂದಿಲ್ಲ ಎಂಬುದು ಸ್ಪಷ್ಟ ಎಂದು ಹೇಳಿದ ಅವರು, ಮೋದಿಯವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೂಲಕ ಘೋಷಿಸಿದ ಪ್ಯಾಕೇಜ್ ‘ಆತ್ಮ ನಿರ್ಭಾರ ಭಾರತ್’ (ಸ್ವಯಂ ಅವಲಂಬಿತ ಭಾರತ) ನಿರ್ಮಿಸಲು ಹೋಗುತ್ತಿಲ್ಲ ಎಂದು ಹೇಳಿದರು. ಇದು ಜನರಿಗೆ ಅಗತ್ಯವಾದ ತ್ವರಿತ ಪರಿಹಾರವನ್ನು ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಸಾಲ ನೀಡುವುದು ಆರ್ಥಿಕ ಚೇತರಿಕೆಗೆ ಕಾರಣವಾಗುವುದಿಲ್ಲ ಬದಲಿಗೆ ಬೇಡಿಕೆಯನ್ನು ಸೃಷ್ಟಿಸಿದಾಗ ಮಾತ್ರ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಬಹುದು ಮತ್ತು ನೀವು ಹಣವನ್ನು ಜನರ ಕೈಯಲ್ಲಿ ಇರಿಸಿದಾಗ ಮಾತ್ರ ಇದನ್ನು ಸಾಧಿಸಬಹುದು. ಬೇಕಾಗಿರುವುದು ದೊಡ್ಡ ಪ್ರಮಾಣದ ಸಾರ್ವಜನಿಕ ಹೂಡಿಕೆ. ಸುಧಾರಣಾ ಕ್ರಮಗಳೆಂದು ಕರೆಯಲ್ಪಡುವ ಮೂಲಕ, ರಾಷ್ಟ್ರೀಯ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಮೋದಿ ಸರ್ಕಾರದಿಂದ ಪ್ಯಾಕೇಜ್ ಎಂದು ಕರೆಯಲ್ಪಡುವ ಕಠಿಣ ವಾಸ್ತವವೆಂದರೆ ಎಲ್ಲವೂ ಅವರ ಗೆಳೆಯರಿಗಾಗಿ, ಅರ್ಹರಿಗೆ ,ಬಡವರಿಗೆ ಏನೂ ಅಲ್ಲ ಎಂದು ಅವರು ಹೇಳಿದರು.
ಸಿಪಿಐ(ಎಂ) ಈಗಾಗಲೇ ಕೋವಿಡ್ -19 ರ ಸಮಯದಲ್ಲಿ ಪರ್ಯಾಯ ಆರ್ಥಿಕ ಪುನರುಜ್ಜೀವನ ಯೋಜನೆಯನ್ನು ಪ್ರಸ್ತುತಪಡಿಸಿದೆ. ಇದರಲ್ಲಿ ಪ್ರತಿ ಆದಾಯರಹಿತ ತೆರಿಗೆ ಪಾವತಿಸುವ ವ್ಯಕ್ತಿಗಳಿಗೆ 7,500 ರೂ., ಬಡವರಿಗೆ ಉಚಿತ ಆಹಾರ ಮತ್ತು ವಲಸೆ ಕಾರ್ಮಿಕರ ಉಚಿತ ಪ್ರಯಾಣವನ್ನು ಒಳಗೊಂಡಿದೆ. ಜನರ ಕಲ್ಯಾಣವಿಲ್ಲದೆ ಯಾವುದೇ ಸ್ವಾವಲಂಬನೆ ಇಲ್ಲ. ಹೊಸ ಪ್ಯಾಕೇಜ್ ಜಿಡಿಪಿಯ 1% ಕ್ಕಿಂತ ಕಡಿಮೆಯಿರುವುದರಿಂದ ಅಸಮರ್ಪಕವಾಗಿದೆ ಎಂದು ಅವರು ಹೇಳಿದ್ದಾರೆ.
ಇನ್ನು ತೃಣಮೂಲ ಕಾಂಗ್ರೆಸ್, ಶಿವಸೇನೆ ಎಲ್ಲವೂ ನೂತನ 20 ಲಕ್ಷ ಕೋಟಿ ಪ್ಯಾಕೇಜ್ ನ್ನು ಕಟುವಾಗಿ ಟೀಕಿಸಿವೆ. ಈ ಪ್ಯಾಕೇಜ್ ನಲ್ಲಿ ಬಡವರಿಗೆ ಹೆಚ್ಚಿನ ಅನುಕೂಲವಾಗುವುದಿಲ್ಲ ಎಂದು ಅವು ದೂರಿವೆ.