ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮೊಬೈಲ್ ಮೆಡಿಕಲ್ ಯೂನಿಟ್ (MMU) ಸೇವೆಯಲ್ಲಿ ಅವ್ಯವಹಾರದ ದಟ್ಟ ಛಾಯೆ ಆವರಿಸಿದೆ. `ಪ್ರತಿಧ್ವನಿ’ ಕಲೆಹಾಕಿದ ಮಾಹಿತಿ ಹಾಗೂ ದಾಖಲೆಗಳ ಪ್ರಕಾರ ಯೋಜನೆಯ ಎರಡನೇ ಹಂತದ ಕಾಂಟ್ರಾಕ್ಟ್ ಪಡೆದ ಹೈದರಾಬಾದ್ ಮೂಲದ ಸಂಸ್ಥೆ ಒಪ್ಪಂದದ ಕರಾರುಗಳನ್ನು ಉಲ್ಲಂಘಿಸಿದೆ ಹಾಗೂ ಕೆಲವು ತಾಲೂಕುಗಳ ಹಿಂದುಳಿದ ಪ್ರದೇಶಗಳಿಗೆ MMU ಸೇವೆಗಳನ್ನೇ ಒದಗಿಸಿಲ್ಲ.
ರಾಷ್ಟ್ರೀಯ ಆರೋಗ್ಯ ಮಿಷನ್ (National Health Mission) ಅಡಿಯಲ್ಲಿ ಜಾರಿಗೆ ಬಂದ ಮೊಬೈಲ್ ಮೆಡಿಕಲ್ ಯೂನಿಟ್ ಸೇವೆಗಳು ರಾಜ್ಯದಲ್ಲಿ ಅನುಷ್ಟಾನಕ್ಕೆ ಬಂದಿದ್ದು 2018ರಲ್ಲಿ. ರಾಜ್ಯದಲ್ಲಿ ಒಟ್ಟು 16 ಮೊಬೈಲ್ ಮೆಡಿಕಲ್ ಯೂನಿಟ್ ಗಳು ಅಸ್ತಿತ್ವದಲ್ಲಿದೆ. ಸರ್ಕಾರದ ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ಈ ಯೋಜನೆಯನ್ನು ಆರಂಭಿಸುವಾಗ, ಪ್ರತಿ ಮೊಬೈಲ್ ಮೆಡಿಕಲ್ ಯೂನಿಟ್ ಗೆ ರೂ 50 ಲಕ್ಷ ವೆಚ್ಚ ತಗುಲಿತ್ತು. ಆದರೆ, ಈ ಯೂನಿಟ್ ಗಳ ಮೂಲಕ ಬಡ ಜನರಿಗೆ ಸೇವೆ ಒದಗಿಸಲು (ವೈದ್ಯರು, ದಾದಿಯರು, ಲ್ಯಾಬ್ ತಂತ್ರಜ್ಞರು, ಕಿರಿಯ ವೈದ್ಯರು ಹಾಗೂ ಡ್ರೈವರ್ ಗಳನ್ನು ಒದಗಿಸುವ ಕುರಿತು) ಸರ್ಕಾರ ಟೆಂಡರ್ ಆಹ್ವಾನಿಸಿತ್ತು.
ಮೊದಲನೇ ಹಂತದಲ್ಲಿ ಈ ಸೇವೆಗಳನ್ನು ಕೊಡಗು (ಸೋಮವಾರಪೇಟೆ, ವಿರಾಜಪೇಟೆ ಹಾಗೂ ಮಡಿಕೇರಿ ತಾಲೂಕು), ಮೈಸೂರು (ಪಿರಿಯಾಪಟ್ಟಣ, ಎಚ್ ಡಿ ಕೋಟೆ ಹಾಗೂ ಹುಣಸೂರು ತಾಲೂಕು), ಚಾಮರಾಜನಗರ (ಕೊಳ್ಳೆಗಾಲ, ಎಳ್ಳಂದೂರು ಹಾಗೂ ಗುಂಡ್ಲುಪೇಟೆ ತಾಲೂಕು) ಜಿಲ್ಲೆಗಳಲ್ಲಿ ಆರಂಭಿಸಲಾಗಿತ್ತು.
ಎರಡನೇ ಹಂತದಲ್ಲಿ ಇದೇ ಸೇವೆಗಳನ್ನು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿನ ಕೆಲವು ತಾಲೂಕುಗಳಲ್ಲಿಆರಂಭಿಸಲಾಗಿತ್ತು. ಈ ಎರಡನೇ ಹಂತದ ಸೇವೆಗಳನ್ನು ಇ-ಟೆಂಡರ್ (RFP No: STWD/TSP/CR/21/8 MMUs/Ph-2/2017-18) ಮೂಲಕ ಕ್ರಿಯಾ ಹೆಲ್ತ್ ಕೇರ್ ಪ್ರೈವೇಟ್ ಲಿ. (Kria Healthcare Pvt Ltd) ಎಂಬ ಕಂಪೆನಿಗೆ ನೀಡಲಾಗಿತ್ತು. ಈ ಬಗ್ಗೆ ಮೇ 24, 2018ರಂದು ಸರ್ಕಾರದ ಆದೇಶ ಹೊರಡಿಸಲಾಗಿತ್ತು.
ಎರಡನೇ ಹಂತದಲ್ಲಿ ಎಂಟು ಮೊಬೈಲ್ ಮೆಡಿಕಲ್ ಯೂನಿಟ್ ಗಳನ್ನು 5 ಜಿಲ್ಲೆಗಳ ಕೆಲವು ತಾಲೂಕಗಳಲ್ಲಿ ನೆಲೆಸಿರುವ ಬುಡುಕಟ್ಟು ಜನಾಂಗದ ಜನರ ಆರೋಗ್ಯ ತಪಾಸಣೆ ಸೇವೆಗಾಗಿ ಬಳಸುವ ಉದ್ದೇಶವಿತ್ತು. ಕ್ರಿಯಾ ಸಂಸ್ಥೆ ಹಾಗೂ ಕರ್ನಾಟಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ (ಸಮಾಜ ಕಲ್ಯಾಣ ಇಲಾಖೆ ಅಡಿ) ನಡುವೆ ಇರುವ ಒಪ್ಪಂದದ ಪ್ರಕಾರ ಈ ಯೂನಿಟ್ ಗಳು ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಎರಡು ಹಳ್ಳಿಗಳಿಗೆ ಭೇಟಿ ನೀಡಬೇಕು, ಆಯಾ ಹಳ್ಳಿಗಳಲ್ಲಿನ ನಿವಾಸಿಗಳ ಆರೋಗ್ಯ ತಪಾಸಣೆ ನಡೆಸಿ, ಔಷಧಿ ವಿತರಿಸುವುದಲ್ಲದೇ ಊರಿನವರಿಗೆ ಆರೋಗ್ಯ ಸಂಬಂಧ ಅರಿವು ಮೂಡಿಸಬೇಕು.
ಇದುವರೆಗೆ ಆದದ್ದೇನು?
ಕ್ರಿಯಾ ಸಂಸ್ಥೆ ಒಪ್ಪಂದದಲ್ಲಿನ ಹೆಚ್ಚಿನ ಅಂಶಗಳ್ನು ಅನುಷ್ಟಾನಗೊಳಿಸುವಲ್ಲಿ ವಿಫಲವಾಗಿದೆ. ಹೆಚ್ಚೇನು, ಕೆಲವು ತಾಲೂಕುಗಳಿಗೆ ಮೊಬೈಲ್ ಯೂನಿಟ್ ಗಳು ಇನ್ನೂ ಮೊದಲ ಭೇಟಿಯನ್ನೇ ನೀಡಿಲ್ಲ. ಕರ್ನಾಟಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಡಿಸೆಂಬರ್ 7, 2018ರ ಪತ್ರದಲ್ಲಿ ಕ್ರಿಯಾ ಸಂಸ್ಥೆಗೆ ಒಪ್ಪಂದದನ್ವಯ ಮಾಹಿತಿ ನೀಡದಿರುವ ಬಗ್ಗೆ ಗಮನ ಸೆಳೆದಿತ್ತು. ಈ ನ್ಯೂನತೆಗಳು ದಿನಗಳೆದಂತೆ ಬೆಳೆದು, ಕರ್ನಾಟಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕಾರ್ಯಕ್ರಮ ಸಂಯೋಜಕರು ಕ್ರಿಯಾ ಸಂಸ್ಥೆಗೆ ಹಲವಾರು ಪತ್ರ ಬರೆದು ಒಪ್ಪಂದದಂತೆ ಕಾರ್ಯ ನಿರ್ವಹಿಸಲು ತಿಳಿಸಿದ್ದಾರೆ. ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಕಚೇರಿ ಪತ್ರ ಪ್ರಮುಖವಾದದ್ದು. ಈ ಪತ್ರದ ಪ್ರಕಾರ ಒಪ್ಪಂದದಂತೆ ಕ್ರಿಯಾ ಸಂಸ್ಥೆ ಪುತ್ತೂರು, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕಗಳ 100 ಹಳ್ಳಿಗಳಿಗೆ (ಪುತ್ತೂರು – 35, ಸುಳ್ಯ – 27, ಬೆಳ್ತಂಗಡಿ – 24 ಹಳ್ಳಿಗಳು) ಭೇಟಿ ನೀಡಬೇಕಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಸಂಯೋಜನಾಧಿಕಾರಿಯ ಮಾರ್ಚ್ 14, 2019ರ ಪತ್ರದ ಪ್ರಕಾರ ಕ್ರಿಯಾ ಸಂಸ್ಥೆ ಬೆಳ್ತಂಗಡಿ ಮತ್ತು ಬಂಟ್ವಾಳಕ್ಕೆ ಇನ್ನೂ ಭೇಟಿಯೇ ನೀಡಿಲ್ಲ. ಇದಕ್ಕೆ ಕ್ರಿಯಾ ಸಂಸ್ಥೆ ಉತ್ತರಿಸಿದ್ದು, ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗಿರುವ ದೂರ ಹೆಚ್ಚಿರುವುದರಿಂದ ಸಾಧ್ಯವಾಗಿಲ್ಲ ಎಂದಿದೆ.
ಇದೇ ರೀತಿ, ಉಡುಪಿ ಸಂಯೋಜನಾಧಿಕಾರಿಯ ಪತ್ರದ ಪ್ರಕಾರ ಸಂಸ್ಥೆ ಕ್ರಿಯಾ ಯೋಜನೆಯನ್ನೇ ಸಲ್ಲಿಸಿಲ್ಲ. ಒಪ್ಪಂದದ ಪ್ರಕಾರ ಸಂಸ್ಥೆ ಕರಾರು ಸಹಿ ಹಾಕಿದ 30 ದಿನದೊಳಗೆ ಕ್ರಿಯಾ ಯೋಜನೆಯನ್ನು ಸಲ್ಲಿಸಬೇಕಿತ್ತು. ಇದಲ್ಲದೇ ಒಪ್ಪಂದಕ್ಕೆ ವಿರುದ್ಧವಾಗಿ ಕೆಲವು ಯೂನಿಟ್ ಗಳಲ್ಲಿ ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಸೆಪ್ಟೆಂಬರ್ 2018ರ ನಂತರ ಉಡುಪಿ ಜಿಲ್ಲೆಯ ಯಾವ ಹಳ್ಳಿಗೂ ಯೂನಿಟ್ ಗಳು ಭೇಟಿ ನೀಡಿಲ್ಲ.
ಕೊನೆಯದಾಗಿ, ಕರ್ನಾಟಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜೂನ್ 6, 2019ರಂದು ಕ್ರಿಯಾ ಸಂಸ್ಥೆಗೆ ಪತ್ರ ಬರೆದಿದ್ದು, ಅದರ ಪ್ರಕಾರ ಸಂಸ್ಥೆ ಎಷ್ಟೆಲ್ಲಾ ರೋಗಿಗಳಿಗೆ ಚಿಕಿತ್ಸೆ ನೀಡಿದೆ, ಯಾವೆಲ್ಲಾ ಔಷಧ ನೀಡಿದೆ, ಪ್ರತಿ ಯೂನಿಟ್ ನ ಡ್ಯಾಷ್ ಬೋರ್ಡ್ ಲಾಗಿನ್ ಮಾಹಿತಿ, ಬಯೊಮೆಟ್ರಿಕ್ ಹಾಜರಾತಿ ವಿವರ ಹೀಗೆ ಯಾವ ಮಾಹಿತಿಯನ್ನೂ ನೀಡಿಲ್ಲ.
ಈ ಬಗ್ಗೆ ಕರ್ನಾಟಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯನ್ನುಕೇಳಿದಾಗ ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸುವಂತೆ ಸೂಚಿಸಲಾಯಿತು. ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಅವರುನ್ನು ಸಂಪರ್ಕಿಸುವ ಪ್ರಯತ್ನ ನಡೆಸಲಾಯಿತಾದರೂ ಅವರು ಕರೆಯನ್ನು ಸ್ವೀಕರಿಸಲಿಲ್ಲ. ಅವರ ಪ್ರತಿಕ್ರಿಯೆ ಬಂದೊಡನೆ ಮಾಹಿತಿಯನ್ನು ಪರಿಷ್ಕರಿಸಲಾಗುವುದು.