ರಾಜ್ಯದಲ್ಲಿ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳಾಗಿ ಬೀಗಲು ಹೊರಟು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ 16 ಮಂದಿ ವಿಲವಿಲ ಎಂದು ಒದ್ದಾಡಲಾರಂಭಿಸಿದ್ದಾರೆ. ಅತ್ತ ಅನರ್ಹತೆ ವಿವಾದವೂ ಸುಪ್ರೀಂ ಕೋರ್ಟ್ ನಲ್ಲಿ ಬಗೆಹರಿಯುತ್ತಿಲ್ಲ. ಇತ್ತ ಸಚಿವ ಸ್ಥಾನವೂ ಸಿಗುತ್ತಿಲ್ಲ. ಹೀಗಾಗಿ ಮೈತ್ರಿ ಸರ್ಕಾರ ಉರುಳಿಸಿ ಗೆದ್ದು ಬೀಗುತ್ತಿದ್ದ ಈ ಅನರ್ಹಗೊಂಡ ಶಾಸಕರು ಮುಂದಿನ ದಾರಿ ಏನೆಂಬುದೂ ಸ್ಪಷ್ಟವಾಗದೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ತಮಗೆ ನ್ಯಾಯ ಒದಗಿಸುವಂತೆ ಕೇಳಿಕೊಳ್ಳುತ್ತಿದ್ದಾರೆ.
ತಮ್ಮನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶ ಪ್ರಶ್ನಿಸಿ ಎಲ್ಲಾ ಶಾಸಕರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅನರ್ಹತೆ ಆದೇಶಕ್ಕೆ ತಡೆ ನೀಡಬೇಕು ಎಂಬ ಮಧ್ಯಂತರ ಕೋರಿಕೆ ಜತೆಗೆ ಆದೇಶ ರದ್ದುಗೊಳಿಸುವ ಕೋರಿಕೆಯನ್ನೂ ಸುಪ್ರೀಂ ಮುಂದೆ ಇಟ್ಟಿದ್ದಾರೆ. ಆದರೆ, ಅಯೋಧ್ಯೆ ವಿವಾದವನ್ನು ಪ್ರತಿನಿತ್ಯ ವಿಚಾರಣೆ ನಡೆಸುತ್ತಿರುವುದರಿಂದ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ತ್ವರಿತ ವಿಚಾರಣೆಗೆ ಪರಿಗಣಿಸಲು ಸಾಧ್ಯವಿಲ್ಲ ಎಂದಿರುವ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೀಠ, ಬೇರೆ ಪೀಠದಲ್ಲಿ ಅರ್ಜಿಗಳನ್ನು ವಿಚಾರಣೆಗೆ ಹಾಕುವಂತೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಅವರನ್ನು ಮನವಿ ಮಾಡಿಕೊಳ್ಳಿ ಎಂದು ಅನರ್ಹ ಶಾಸಕರ ಪರ ವಕೀಲರಿಗೆ ಸೂಚಿಸಿದೆ. ಆದರೆ, ನಂತರದಲ್ಲಿ ಯಾವುದೇ ಬೆಳವಣಿಗೆಗಳು ಆಗದೇ ಇರುವುದು, ಬೇರೆ ಪೀಠದಲ್ಲಿ ವಿಚಾರಣೆ ಆರಂಭವಾಗದೇ ಇರುವುದು ಅನರ್ಹ ಶಾಸಕರ ಆತಂಕಕ್ಕೆ ಕಾರಣವಾಗಿದೆ.
ಇವರೆಲ್ಲರ ಭವಿಷ್ಯದ ಯೋಚನೆಗಳು, ಮಂತ್ರಿಯಾಗುವ ಹಪಹಪಿಗೆ ಪೆಟ್ಟು ಕೊಟ್ಟಿದ್ದು ಅನರ್ಹಗೊಳಿಸುವ ಸಂದರ್ಭದಲ್ಲಿ ಸ್ಪೀಕರ್ ನೀಡಿದ ವಿಶೇಷ ಆದೇಶ. 16 ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ಆದೇಶ ಹೊರಡಿಸಿದ್ದರೆ ಅವರಾರೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಏಕೆಂದರೆ, ಕೇವಲ ಅನರ್ಹತೆ ಆದೇಶ ಹೊರಡಿಸಿದ್ದರೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಮಂತ್ರಿಗಳಾಗಬಹುದಿತ್ತು. ಸ್ವಲ್ಪ ಸಮಯ ಮಾತ್ರ ಅಧಿಕಾರ ಸಿಗುತ್ತಿರಲಿಲ್ಲ ಅಷ್ಟೆ. ಆದರೆ, ಸ್ಪೀಕರ್ ರಮೇಶ್ ಕುಮಾರ್ ಅವರು ಅನರ್ಹತೆ ಆದೇಶದಲ್ಲಿ 15ನೇ ವಿಧಾನಸಭೆ ಅವಧಿಗೆ ಈ ಶಾಸಕರನ್ನು ಅನರ್ಹಗೊಳಿಸಲಾಗಿದೆ ಎಂದು ಹೇಳಿರುವುದೇ ಅನರ್ಹರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ವಿಧಾನಸಭೆ ರಚನೆಯಾದ ಮೇಲೆ ಶಾಸಕರ ಸ್ಥಾನಗಳನ್ನು ಆರು ತಿಂಗಳಿಗಿಂತ ಹೆಚ್ಚು ಅವಧಿಗೆ ಖಾಲಿ ಬಿಡುವಂತಿಲ್ಲ. ಶಾಸಕರ ರಾಜಿನಾಮೆ ಅಥವಾ ಅನರ್ಹತೆ ನಿರ್ಧಾರವಾಗಿ ಆ ಶಾಸಕರು ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳು ಖಾಲಿಯಾಗಿವೆ ಎಂದು ಅಧಿಸೂಚನೆ ಹೊರಬಿದ್ದ ಆರು ತಿಂಗಳೊಳಗೆ ಚುನಾವಣೆ ನಡೆದು ಹೊಸಬರನ್ನು ಆಯ್ಕೆ ಮಾಡಬೇಕು. ಅಷ್ಟರೊಳಗೆ ಅನರ್ಹತೆ ಪ್ರಕರಣ ಇತ್ಯರ್ಥವಾಗಬೇಕು. ಇಲ್ಲವಾದಲ್ಲಿ ಆ ಸ್ಥಾನಗಳಿಗೆ ಬೇರೆಯವರನ್ನು ಕಣಕ್ಕಿಳಿಸಬೇಕಾಗುತ್ತದೆ. ಸುಪ್ರೀಂ ಕೋರ್ಟ್ ನಲ್ಲಿ ತಮ್ಮ ಪರ ತೀರ್ಪು ಬಾರದೇ ಇದ್ದಲ್ಲಿ ಕುಟುಂಬ ಸದಸ್ಯರನ್ನೇ ಕಣಕ್ಕಿಳಿಸಿ ಗೆಲ್ಲಿಸಿಕೊಳ್ಳುತ್ತೇವೆ ಎಂದು ಅನರ್ಹ ಶಾಸಕರು ಹೇಳುತ್ತಿದ್ದಾರಾದರೂ ಇದರಿಂದ ಸಚಿವ ಸ್ಥಾನ ಪಡೆಯುವ ಅವರ ಉದ್ದೇಶ ಈಡೇರುವುದಿಲ್ಲ.

ಸದ್ಯ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಆ ಸರ್ಕಾರದಲ್ಲಿ ಅನರ್ಹರು ಮಂತ್ರಿಗಳಾಗುವ ಕನಸು ಕಾಣುತ್ತಿದ್ದಾರೆ. ಮಂತ್ರಿಗಳಾಗುವ ಆಸೆಯಿಂದ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಇವರನ್ನು ಬಿಜೆಪಿ ಕೈಬಿಡುವುದಿಲ್ಲ. ಆದರೆ, ಸುಪ್ರೀಂ ಕೋರ್ಟ್ ಮುಂದೆ ಇದ್ಯಾವುದೂ ಪರಿಗಣನೆಗೆ ಬರುವುದಿಲ್ಲ. ಅನರ್ಹತೆ ಆದೇಶ ಸರಿಯೇ, ತಪ್ಪೇ ಎಂಬ ವಿಶ್ಲೇಷಣೆ ಮಾಡಿ ತೀರ್ಪು ನೀಡುವುದಷ್ಟೇ ಸುಪ್ರೀಂ ಕೋರ್ಟ್ ಕೆಲಸ. ಇಂತಿಷ್ಟೇ ಅವಧಿಯಲ್ಲಿ ತೀರ್ಪು ನೀಡಬೇಕು ಎಂಬ ದರ್ದು ಕೂಡ ಸುಪ್ರೀಂಗೆ ಇಲ್ಲ. ಆದರೆ, ಇದು ಚುನಾವಣೆಗೆ ಸಂಬಂಧಿಸಿದ ಮತ್ತು ಅನರ್ಹ ಶಾಸಕರ ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಶ್ನೆಯಾಗಿರುವುದರಿಂದ ಉಪ ಚುನಾವಣೆಗೆ ಮುನ್ನ ಅನರ್ಹತೆ ಅರ್ಜಿ ಇತ್ಯರ್ಥಗೊಳಿಸಬೇಕಾಗುತ್ತದೆ.
ಆದರೆ, ಮಂತ್ರಿಗಳಾಗುವ ಆಸೆ ಹೊತ್ತ ಶಾಸಕರಿಗೆ ಅಷ್ಟು ಕಾಯುವ ತಾಳ್ಮೆಯೇ ಇಲ್ಲ. ಹೀಗಾಗಿಯೇ ಅರ್ಜಿಗಳ ತ್ವರಿತ ವಿಚಾರಣೆಗಾಗಿ ದುಂಬಾಲು ಬೀಳುತ್ತಿದ್ದಾರೆ. ಮೇಲಾಗಿ ಸ್ಪೀಕರ್ ಆದೇಶವನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ಇವರು ಸ್ಪೀಕರ್ ಹೊರಡಿಸಿರುವ ಅನರ್ಹತೆ ಆದೇಶವನ್ನೇ ರದ್ದುಗೊಳಿಸಿ ರಾಜಿನಾಮೆ ಅಂಗೀಕರವಾಗುವಂತೆ ನೋಡಿಕೊಂಡು ತಕ್ಷಣ ಸಚಿವರಾಗಬೇಕು ಎಂಬ ಹಪಹಪಿಗೆ ಬಿದ್ದಿದ್ದಾರೆ. ಇದಕ್ಕಾಗಿಯೇ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಗಳ ತ್ವರಿತ ವಿಲೇವಾರಿಗೆ ವಕೀಲರಿಗೆ ದುಂಬಾಲು ಬಿದ್ದಿದ್ದಾರೆ. ಒಬ್ಬೊಬ್ಬರು ಅಥವಾ ಇಬ್ಬರು ಸೇರಿ ಪ್ರತ್ಯೇಕ ವಕೀಲರನ್ನು ನೋಡಿಕೊಳ್ಳಲು ಮುಂದಾಗಿದ್ದಾರೆ.

ಸದ್ಯ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದ್ದು, ಅಲ್ಲಿ ಮೂರು ರೀತಿಯ ತೀರ್ಪು ಹೊರಬರಬಹುದು.
1. ಶಾಸಕರ ಅನರ್ಹತೆ ರದ್ದುಗೊಳಿಸಬಹುದು
2. ಶಾಸಕರ ಅನರ್ಹತೆ ಎತ್ತಿಹಿಡಿದು 15ನೇ ವಿಧಾನಸಭೆ ಅವಧಿಗೆ ಎಂಬ ಸ್ಪೀಕರ್ ಆದೇಶ ಅಸಿಂಧು ಎಂದು ಹೇಳಬಹುದು
3. ಅನರ್ಹತೆ ಆದೇಶ ಎತ್ತಿಹಿಡಿಯಬಹುದು.
ಈ ಪೈಕಿ ಮೊದಲ ತೀರ್ಪು ಬಂದರೆ ಅನರ್ಹತೆ ರದ್ದಾಗಿ ರಾಜಿನಾಮೆ ಅಂಗೀಕಾರಗೊಂಡು ಶಾಸಕರು ತಕ್ಷಣದಿಂದಲೇ ಮಂತ್ರಿಗಳಾಗಬಹುದು. ಎರಡನೇ ತೀರ್ಪು ಹೊರಬಂದರೆ ಮಂತ್ರಿಗಳಾಗಲು ಉಪ ಚುನಾವಣೆ ನಡೆದು ಗೆದ್ದು ಬರುವವರೆಗೆ ಕಾಯಬೇಕು. ಆದರೆ, ಮೂರನೇ ತೀರ್ಪು ಬಂದರೆ ಮೈತ್ರಿ ಸರ್ಕಾರ ಉರುಳಿಸಿದ ಉದ್ದೇಶವೇ ಈಡೇರುವುದಿಲ್ಲ. ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗದೆ ತಮ್ಮವರನ್ನು ನಿಲ್ಲಿಸಿ ಗೆಲ್ಲಿಸಬಹುದಷ್ಟೆ. ಅವರೇ ಗೆದ್ದು ಬರಲು 15ನೇ ವಿಧಾನಸಭೆ ಅವಧಿ ಮುಗಿಯುವವರೆಗೆ ಕಾಯಬೇಕು.
ಬಿಜೆಪಿಗೆ ತರಾತುರಿ ಇಲ್ಲ
ತಮ್ಮ ಅನರ್ಹತೆ ರದ್ದುಗೊಳಿಸುವ ವಿಚಾರದಲ್ಲಿ ಅನರ್ಹ ಶಾಸಕರಿಗೆ ಇರುವ ತರಾತುರಿ ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿಗೆ ಇಲ್ಲ. ಏನೇ ತೀರ್ಪು ಬಂದರೂ ತಲೆಕೆಡಿಸಿಕೊಳ್ಳಬೇಕಾಗಿಯೂ ಇಲ್ಲ. ವಿಶೇಷದ ಸಂಗತಿ ಏನೆಂದರೆ, ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ಆದೇಶವನ್ನು ಸುಪ್ರೀಂ ಎತ್ತಿಹಿಡಿದರೆ ಬಿಜೆಪಿಗೇ ಹೆಚ್ಚು ಲಾಭ. ಹೀಗಾಗಿ ಬಿಜೆಪಿಯವರು ಕೋರ್ಟ್ ಆದೇಶ ಬರಲಿ ಎಂದು ಹೇಳಿ ಅನರ್ಹ ಶಾಸಕರನ್ನು ಸುಮ್ಮನಾಗಿಸಿದ್ದಾರೆ.
ಏಕೆಂದರೆ, ಅನರ್ಹತೆ ಆದೇಶ ರದ್ದಾದರೆ ಕೊಟ್ಟ ಮಾತಿನಂತೆ ತಕ್ಷಣ ಅವರೆಲ್ಲರನ್ನು ಮಂತ್ರಿಗಳಾಗಿ ಮಾಡಬೇಕು. ಅನರ್ಹತೆ ಆದೇಶ ಎತ್ತಿಹಿಡಿದು 15ನೇ ವಿಧಾನಸಭೆ ಅವಧಿಗೆ ಅನರ್ಹ ಎಂಬ ಅಂಶವನ್ನು ಮಾತ್ರ ಸುಪ್ರೀಂ ಕೋರ್ಟ್ ರದ್ದುಗೊಳಿಸಿದರೆ ಉಪ ಚುನಾವಣೆ ನಡೆದು ಅದರಲ್ಲಿ ಗೆದ್ದು ಬಂದವರಿಗಷ್ಟೇ ಮಂತ್ರಿ ಸ್ಥಾನ ನೀಡಿದರೆ ಸಾಕು. ಈ ವೇಳೆ ಎಲ್ಲರೂ ಗೆದ್ದು ಬರುತ್ತಾರೆ ಎಂಬ ಖಾತರಿ ಇಲ್ಲ. ಅಳಿದುಳಿದ ಸಚಿವ ಸ್ಥಾನಗಳನ್ನು ಬಿಜೆಪಿಯವರಿಗೇ ಹಂಚಬಹುದು. ಇನ್ನು ಸ್ಪೀಕರ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದರೆ ಬಿಜೆಪಿಗೆ ಹೆಚ್ಚು ಲಾಭವಾಗುತ್ತದೆ. ಅನರ್ಹಗೊಂಡವರಾರೂ 15ನೇ ವಿಧಾನಸಭೆಗೆ ಆಯ್ಕೆಯಾಗುವಂತಿಲ್ಲ. ಅವರ ಬದಲಾಗಿ ಕುಟುಂಬ ಸದಸ್ಯರು ಇಲ್ಲವೇ ಆಪ್ತರು ಗೆದ್ದು ಬರಬಹುದು. ಇವರೆಲ್ಲರೂ ಹೊಸಬರಾಗಿರುವುದರಿಂದ ಬಹುತೇಕರಿಗೆ ಸಚಿವ ಸ್ಥಾನ ನೀಡಬೇಕಾಗುವುದಿಲ್ಲ. ಅವುಗಳನ್ನು ಬಿಜೆಪಿಯವರಿಗೇ ಹಂಚಿಕೆ ಮಾಡಿ ಪಕ್ಷದೊಳಗಿನ ಅಸಮಾಧಾನವನ್ನು ದೂರ ಮಾಡಬಹುದು.
ಅನರ್ಹ ಶಾಸಕರಲ್ಲಿ ಆತಂಕ ಹೆಚ್ಚಲು ಇದು ಕೂಡ ಕಾರಣ. ಸುಪ್ರೀಂ ಕೋರ್ಟ್ ಅನರ್ಹತೆ ಎತ್ತಿಹಿಡಿದರೆ ಆಗ ಬಿಜೆಪಿ ಸರ್ಕಾರದಲ್ಲಿ ಮಂತ್ರಿಗಳಾಗುವ ಕನಸು ಈಡೇರುವುದಿಲ್ಲ. 15ನೇ ವಿಧಾನಸಭೆ ಅವಧಿಯಿಂದ ಪೂರ್ಣ ದೂರವಾಗಬೇಕಾದ ಪರಿಸ್ಥಿತಿ ಬರುವುದರ ಜತೆಗೆ ಅವರ ಜಾಗಕ್ಕೆ ಬೇರೆ ಶಾಸಕರು ಬರುತ್ತಾರೆ. ಹೀಗಾಗಿ 16ನೇ ವಿಧಾನಸಭೆಗೆ ಗೆದ್ದು ಬರುತ್ತೇವೆ ಎಂಬ ಖಾತರಿಯೂ ಇಲ್ಲದೆ ತಮ್ಮ ರಾಜಕೀಯ ಭವಿಷ್ಯವೇ ಡೋಲಾಯಮಾನವಾಗುವ ಭೀತಿ ಕಾಣಿಸಿಕೊಂಡಿದೆ. ಅದಕ್ಕಾಗಿಯೇ ಅರ್ಜಿಯ ತ್ವರಿತ ವಿಲೇವಾರಿಗಾಗಿ ದುಂಬಾಲು ಬಿದ್ದಿದ್ದಾರೆ.