ಹದಿನೇಳನೇ ಲೋಕಸಭೆ ಚುನಾವಣೆಗೆ ಚಾಲನೆ ಸಿಕ್ಕಾಗಿದೆ. ಈ ಬಾರಿ ಚುನಾವಣೆ ರಾಜಕೀಯ ಪಕ್ಷಗಳ ನಡುವಿನ ಚುನಾವಣೆ ಎನ್ನುವುದಕ್ಕಿಂತ ಒಬ್ಬ ವ್ಯಕ್ತಿ ಮತ್ತು ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿ. ‘ಮೋದಿ ಮತ್ತೊಮ್ಮೆ’ ಎಂಬ ಘೋಷಣೆಯೊಂದಿಗೆ ಬಿಜೆಪಿ ಮತ್ತದರ ಮಿತ್ರಪಕ್ಷಗಳು ಚುನಾವಣೆಗೆ ಸಜ್ಜಾಗಿದ್ದರೆ, ಮೋದಿ ತೊಲಗಿಸಿ ಎನ್ನುತ್ತಾ ಪ್ರತಿಪಕ್ಷಗಳು ಮತದಾರರ ಬಳಿ ಹೋಗುತ್ತಿವೆ. ಆದರೆ, ಪ್ರತಿಪಕ್ಷಗಳ ಮಧ್ಯೆ ಒಗ್ಗಟ್ಟು ಇಲ್ಲದೆ ಇರುವುದು ಫಲಿತಾಂಶದ ಮೇಲೆ ಪರಿಣಾಮ ಬೀರಲಿದ್ದು, ಆಡಳಿತಾರೂಢ ಎನ್.ಡಿ.ಎ.ಗೆ ಅನುಕೂಲವಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಚುನಾವಣಾಪೂರ್ವ ಮೈತ್ರಿ ವಿಚಾರದಲ್ಲಿ ಬಿಜೆಪಿ ಕಂಡ ಯಶಸ್ಸು ಮತ್ತು ಕಾಂಗ್ರೆಸ್ ಅನುಭವಿಸಿದ ನಿರಾಶೆಗಳೇ ಪ್ರತಿಪಕ್ಷಗಳ ಮಧ್ಯೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ ಯಶಸ್ವಿಯಾಗಿ ಸ್ಥಾನ ಹೊಂದಾಣಿಕೆ ಮಾಡಿಕೊಂಡಿದ್ದರೆ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸೀಟು ಹಂದಾಣಿಕೆಯಾಗದೆ ಏಕಾಂಗಿಯಾಗಿ ಸ್ಪರ್ಧಿಸಬೇಕಾದ ಸ್ಥಿತಿ ಎದುರಿಸುತ್ತಿದೆ. ಇನ್ನೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸ್ಥಾಪಿಸಹೊರಟಿದ್ದ ಮಹಾಘಟಬಂಧನ್ ಕೂಡ ವಿಫಲವಾಗಿದೆ.
ಈ ಚುನಾವಣೆ ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ನೆಹರೂ ವಂಶದ ಕುಡಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸುತ್ತಲೇ ಸುತ್ತುತ್ತಿದೆ. ಬಿಜೆಪಿ ಮಾತ್ರವಲ್ಲ, ಎನ್.ಡಿ.ಎ ಮಿತ್ರಪಕ್ಷಗಳು ಕೂಡ ಮೋದಿ ಹೆಸರಿನಲ್ಲೇ ಚುನಾವಣೆ ಎದುರಿಸುತ್ತಿವೆ. ಅಷ್ಟರಮಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಜನರನ್ನು ಮೋಡಿ ಮಾಡಿದ್ದಾರೆ. 2014ರಲ್ಲಿ ಯುಪಿಎ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬದಲಾವಣೆ, ಉತ್ತಮ ಆಡಳಿತ, ಕಾಳಧನಕ್ಕೆ ಅಂತ್ಯ ಹಾಡುವ ಘೋಷಣೆಯಂದಿಗೆ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಸರ್ಕಾರ, ಕಳೆದ ಐದು ವರ್ಷದಲ್ಲಿ ನೋಟು ಅಮಾನ್ಯ, ಆನ್‌ಲೈನ್ ಬ್ಯಾಂಕಿಂಗ್, ಜಿ.ಎಸ್.ಟಿ ಜಾರಿ, ಡಿಜಿಟಲೀಕರಣ ಮೂಲಕ ಆರ್ಥಿಕತೆ, ಆಡಳಿತ ವಿಚಾರದಲ್ಲಿ ಬದಲಾವಣೆ ತಂದಿದೆ. ಇನ್ನೊಂದೆಡೆ, ರಕ್ಷಣಾ ಕ್ಷೇತ್ರದಲ್ಲಿ ಅದರಲ್ಲೂ ಮುಖ್ಯವಾಗಿ ಉಗ್ರರ ವಿರುದ್ಧ ಹೋರಾಡುವ, ದೇಶ ರಕ್ಷಣೆಯಲ್ಲಿ ತೊಡಗಿರುವ ಸೈನಿಕರ ವಿಚಾರದಲ್ಲಿ ಕೈಗೊಂಡ ಹಲವು ನಿರ್ಧಾರಗಳು ಭಾವನಾತ್ಮಕವಾಗಿ ಜನರನ್ನು ತಟ್ಟಿದೆ.
ಹಾಗೆಂದು ಎಲ್ಲವೂ ಆಡಳಿತ ಪಕ್ಷಕ್ಕೆ ಅನುಕೂಲವಾಗಿದೆ ಎನ್ನುವಂತಿಲ್ಲ. ಅಧಿಕಾರಕ್ಕೆ ಬರುವ ಮುನ್ನ ನೀಡಿದ ಭರವಸೆಯಂತೆ ಕಪ್ಪುಹಣಕ್ಕೆ ಕಡಿವಾಣ, ವಿದೇಶಿ ಬ್ಯಾಂಕ್‌ಗಳಲ್ಲಿ ಅಕ್ರಮವಾಗಿ ಇಟ್ಟಿರುವ ಹಣ ವಾಪಸ್ ತರುವ ನಿಟ್ಟಿನಲ್ಲಿ ಕೇಂದ್ರ ನಿರೀಕ್ಷಿತ ಯಶ ಕಂಡಿಲ್ಲ. ಇನ್ನೊಂದೆಡೆ, ನೋಟು ಅಮಾನ್ಯ, ಜಿಎಸ್‌ಟಿ ವಿಚಾರದಲ್ಲಿ ಒಳಪೆಟ್ಟಿನ ಆತಂಕ ಆಡಳಿತಾರೂಢ ಬಿಜೆಪಿಯನ್ನು ಕಾಡುತ್ತಿದೆ. ಮೊದಲಿನಿಂದಲೂ ತೆರಿಗೆ ವಂಚನೆ, ಕಪ್ಪುಹಣದ ವ್ಯವಹಾರದಲ್ಲಿ ತೊಡಗಿದ್ದ ಉದ್ಯಮ ಕ್ಷೇತ್ರದ ಕೆಲವರಿಗೆ ನೋಟು ಅಮಾನ್ಯ ಮತ್ತು ಜಿಎಸ್‌ಟಿಯಿಂದ ಸಾಕಷ್ಟು ತೊಂದರೆಯಾಗಿದೆ. ಬೇಕಾಬಿಟ್ಟಿ ಹಣ ಸಂಪಾದನೆಗೆ ಬ್ರೇಕ್ ಬಿದ್ದಿದೆ. ಹಾಗೆಂದು, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಹಿರಂಗವಾಗಿ ಟೀಕಿಸಿದರೆ ತಮ್ಮ ಅಕ್ರಮ ಬಯಲಾಗುತ್ತದೆ ಎಂಬ ಭೀತಿಯಿಂದ ಕೇಂದ್ರದ ಮೇಲಿನ ಸಿಟ್ಟನ್ನು ನುಂಗಿಕೊಂಡು ಮೌನವಾಗಿದ್ದಾರೆ. ಎಲ್ಲಾದರೂ ಇದು ಮತದಾನದ ವೇಳೆ ಬಹಿರಂಗಗೊಂಡರೆ ಆಗ ಎನ್‌ಡಿಎಗೆ ಸಮಸ್ಯೆ ಆಗಬಹುದು. ಆದರೆ, ಈ ಸಂಖ್ಯೆ ಕಡಿಮೆ ಇರುವುದರಿಂದ ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮ ಬೀರಲಾರದು ಎಂಬ ಭರವಸೆ ಬಿಜೆಪಿಯವರದ್ದು.
ಇದರ ನಡುವೆಯೂ ಬಿಜೆಪಿಯವರು 2004ರ ಲೋಕಸಭೆ ಚುನಾವಣೆ ಫಲಿತಾಂಶವನ್ನು ನೆನಪಿಸಿಕೊಂಡು ಕೊಂಚ ಮೆತ್ತಗಾಗುತ್ತಾರೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ 1999ರಲ್ಲಿ ಅಧಿಕಾರಕ್ಕೆ ಬಂದ ಎನ್‌ಡಿಎ ಸರ್ಕಾರ, ತನ್ನ ಅಭಿವೃದ್ಧಿ ನೀತಿಯಿಂದ 2004ರಲ್ಲೂ ಅಧಿಕಾರಕ್ಕೆ ಬರುವುದು ಖಚಿತ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾದಾಗ ಎಲ್ಲವೂ ಉಲ್ಟಾ ಆಗಿತ್ತು. 1999ರಲ್ಲಿ 298 ಇದ್ದ ಸದಸ್ಯಬಲ 185ಕ್ಕೆ ಕುಸಿದು ಹೀನಾಯ ಸೋಲು ಅನುಭವಿಸುವಂತಾಗಿತ್ತು. ಇದರ ಮಧ್ಯೆಯೂ ಧೈರ್ಯ ತಂದುಕೊಳ್ಳುತ್ತಿರುವ ಪಕ್ಷದ ನಾಯಕರು, 2004ರ ಕಾಂಗ್ರೆಸ್ ನಾಯಕತ್ವ, ಆ ಪಕ್ಷದ ಬಲ, ಪ್ರಸ್ತುತ ಕಾಂಗ್ರೆಸ್ ನಾಯಕತ್ವ ಮತ್ತು ಬಲವನ್ನು ಹೇಳಿ ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ.
ಇನ್ನು, ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಉಂಟಾಗಿರುವ ಅನುಮಾನಗಳು ಸ್ವಲ್ಪ ಮಟ್ಟಿಗೆ ಬಿಜೆಪಿಯನ್ನು ಕಾಡಬಹುದಾದರೂ, ಕಳೆದ ಐದು ವರ್ಷದಲ್ಲಿ ನೀಡಿರುವ ಹಗರಣರಹಿತ ಆಡಳಿತ ಕಾಪಾಡಬಹುದು. ಈ ಹಿಂದೆಲ್ಲ ಬಿಜೆಪಿ ಕೋಮುವಾದಿ, ಮುಸ್ಲಿಂ ವಿರೋಧಿ, ಅಲ್ಪಸಂಖ್ಯಾತ ವಿರೋಧಿ ಎಂದು ಬಿಂಬಿಸುತ್ತಲೇ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಅಲ್ಪಸಂಖ್ಯಾತರ ಮತ ಸೆಳೆಯುತ್ತಿದ್ದವು. ಮೇಲ್ವರ್ಗದವರಿಗೆ ಸೀಮಿತವಾದ ಪಕ್ಷ ಎಂದು ಹಿಂದುಳಿದ ಮತ್ತು ದಲಿತ ಸಮುದಾಯವನ್ನು ಬಿಜೆಪಿಯಿಂದ ದೂರ ಇಡುವಲ್ಲಿ ಯಶಸ್ವಿಯಾಗಿದ್ದವು. ಆದರೆ, ತಲಾಖ್ ನಿಷೇಧಿಸುವ ವಿಚಾರದಲ್ಲಿ ಕೈಗೊಂಡ ದೃಢ ನಿರ್ಧಾರ, ಪರಿಶಿಷ್ಟ ಪಂಗಡಗಳ ಆಯೋಗ ರಚನೆಗೆ ಮುಂದಾಗಿರುವುದು ಸೇರಿದಂತೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೈಗೊಂಡ ಹಲವು ಕ್ರಮಗಳು ಬಿಜೆಪಿಯನ್ನು ಮುಸ್ಲಿಂ ವಿರೋಧಿ, ಹಿಂದುಳಿದವರ ವಿರೋಧಿ ಎಂಬ ಹಣೆಪಟ್ಟಿಯಿಂದ ಕೊಂಚ ಮಟ್ಟಿಗೆ ದೂರ ಮಾಡಿದೆ ಎನ್ನಬಹುದು.
ಈ ಕಾರಣದಿಂದಲೇ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಬಿಜೆಪಿ, ಎನ್‌ಡಿಎಗಿಂತ ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಟಾರ್ಗೆಟ್ ಮಾಡಿವೆ. ಮೋದಿ ಮತ್ತೆ ಪ್ರಧಾನಿಯಾದರೆ ಸಂವಿಧಾನ ತಿದ್ದುಪಡಿ ಮಾಡುತ್ತಾರೆ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಿವೆ. ಭಯೋತ್ಪಾದಕರ ಮೇಲೆ ಕೇಂದ್ರ ಸರ್ಕಾರ ಮತ್ತು ಸೇನೆ ಕೈಗೊಳ್ಳುತ್ತಿರುವ ಕಠಿಣ ಕ್ರಮಗಳನ್ನೇ ಅಲ್ಪಸಂಖ್ಯಾತ ವಿರೋಧಿ ನಿಲುವು ಎಂದು ಬಿಂಬಿಸುತ್ತಿವೆ. ರಫೇಲ್ ಯುದ್ಧ ವಿಮಾನ ಖರೀದಿ ವಿವಾದವನ್ನೇ ದೊಡ್ಡ ಹಗರಣ ಎಂದು ಬಂಬಿಸುವ ಪ್ರಯತ್ನ ಮಾಡುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತಿರುಗಿಬಿದ್ದಿರುವ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸುವಲ್ಲಿ ವಿಫಲವಾಗಿರುವುದೇ ಮಹಾಘಟಬಂಧನ್ ಪೂರ್ಣ ಪ್ರಮಾಣದಲ್ಲಿ ರಚನೆಯಾಗದಿರಲು ಕಾರಣವಾಗಿದೆ. ಕಾಂಗ್ರೆಸ್ ಜೊತೆ ಕೈಜೋಡಿಸಲು, ಪ್ರಧಾನಿ ಹುದ್ದೆಗೆ ರಾಹುಲ್ ಗಾಂಧಿಯನ್ನು ಒಪ್ಪಿಕೊಳ್ಳಲು ಅಸಮ್ಮತಿ ಸೂಚಿಸಿದ ಪಕ್ಷಗಳು ಮಹಾಘಟಬಂಧನ್‌ನಿಂದ ದೂರವೇ ಉಳಿದಿವೆ. ಅಷ್ಟೇ ಅಲ್ಲ, ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನೂ ಕಡಿದುಕೊಂಡಿವೆ. ಇದಕ್ಕೆ ಪ್ರಮುಖ ಉದಾಹರಣೆ ಉತ್ತರ ಪ್ರದೇಶದಲ್ಲಿ ಎಸ್.ಪಿ ಮತ್ತು ಬಿ.ಎಸ್.ಪಿ ಸೇರಿ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿರುವುದು. ಇದರ ಮಧ್ಯೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಅಮೇಠಿ ಜೊತೆ ಕೇರಳದ ವಯನಾಡ್‌ನಿಂದ ಸ್ಪರ್ಧಿಸುತ್ತಿರುವುದು ಎಡಪಕ್ಷಗಳ ಕಣ್ಣು ಕೆಂಪಗಾಗಿಸಿದೆ. ಕೇರಳದಲ್ಲಿ ಎಡಪಕ್ಷಗಳು ಮತ್ತು ಕಾಂಗ್ರೆಸ್ ಪರಸ್ಪರ ಎಣ್ಣೆ-ಸೀಗೇಕಾಯಿ ರೀತಿ ಇದ್ದರೂ ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಒಂದಾಗಿ ಹೋರಾಡಲು ಮುಂದಾಗಿದ್ದವು. ಇದೀಗ ವಯನಾಡ್‌ನಿಂದ ರಾಹುಲ್ ಸ್ಪರ್ಧಿಸಿದರೆ ಕೇರಳದಲ್ಲಿ ಎಡಪಕ್ಷಗಳ ರಾಜಕೀಯ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಆತಂಕದಿಂದ ಎಡಪಕ್ಷಗಳು ಕಾಂಗ್ರೆಸ್ ವಿರುದ್ಧ ಕಿಡಿಕಾರುತ್ತಿವೆ. ಎನ್‌ಡಿಎ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟಿಗೆ ಇದು ಕೂಡ ಹಿನ್ನಡೆ ತಂದೊಡ್ಡಿದೆ.
ಇದರ ನಡುವೆ, ಉರಿ ಸೇನಾನೆಲೆ ಮೇಲೆ ಉಗ್ರರು ದಾಳಿ ನಡೆಸಿದ ಬಳಿಕ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿ, ಪುಲ್ವಾಮಾ ಘಟನೆ ನಂತರ ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಗಳ ಮೇಲೆ ನಡೆದ ವಾಯುದಾಳಿ ಕುರಿತಂತೆ ಕಾಂಗ್ರೆಸ್ ಸೇರಿದಂತೆ ಬಹುತೇಕ ಪ್ರತಿಪಕ್ಷಗಳ ನಾಯಕರು ಸಾಕ್ಷ್ಯ ಕೇಳಿರುವುದು, ದಾಳಿ ಕುರಿತಂತೆ ಕೇವಲವಾಗಿ ಮಾತನಾಡಿರುವುದು ಬಹುಸಂಖ್ಯಾತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಇದು ಕೂಡ ಪ್ರತಿಪಕ್ಷಗಳ ಪಾಲಿಗೆ ಮುಳುವಾಗುವ ಸಾಧ್ಯತೆ ಇದೆ. ಮತ್ತೊಂದೆಡೆ, ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಸೇನೆಯ ಪರಾಕ್ರಮವನ್ನು ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವ ಸರ್ಕಾರದ ವಿರುದ್ಧ ಕೆಂಡ ಕಾರುತ್ತಿರುವ ಪ್ರತಿಪಕ್ಷ ಪ್ರಮುಖರು, ಚುನಾವಣೆಯಲ್ಲೂ ಇದೇ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸುತ್ತಿದ್ದಾರೆ.
ನೋಟು ರದ್ದತಿ, ಜಿಎಸ್‌ಟಿ, ಡಿಜಿಟಲೀಕರಣದಿಂದ ಆಗಿರುವ ಕೆಲವು ತೊಂದರೆಗಳನ್ನು ಜನ ಮರೆಯುತ್ತಿರುವುದು ಪ್ರತಿಪಕ್ಷಗಳಿಗೆ ತಲೆನೋವಾಗಿದೆ. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳೆಲ್ಲವೂ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಮತ್ತಿತರ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಪ್ರತಿಪಕ್ಷಗಳನ್ನು ಹಣಿಯುತ್ತಿದೆ ಎಂಬ ಆರೋಪದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಿವೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಪ್ರಬಲ ಅಸ್ತ್ರಗಳನ್ನು ಹುಡುಕುತ್ತಿರುವ ಪ್ರತಿಪಕ್ಷಗಳು, ಇದೀಗ ರಫೇಲ್ ಯುುದ್ಧ ವಿಮಾನ ಖರೀದಿ ಒಂದನ್ನೇ ಮುಂದಿಟ್ಟುಕೊಂಡು ಭ್ರಷ್ಟಾಚಾರದ ಆರೋಪವನ್ನು ತೀವ್ರಗೊಳಿಸುತ್ತಿವೆ.
ಮಹಾಘಟಬಂಧನ್ ಗೊಂದಲದ ನಡುವೆಯೂ ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೊಂದಿಗೆ ಮಾಡಿಕೊಂಡಿರುವ ಹೊಂದಾಣಿಕೆ, ಪ್ರಧಾನಿ ನರೇಂದ್ರ ಮೋದಿ ವಿರೋಧಿ ಮತ್ತು ಆಡಳಿತ ವಿರೋಧಿ ಅಲೆಯ ನೆರವು ಪಡೆದು ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. ಹಾಗಾಗಿಯೇ, ತಾನು ಮುಂದಿನ ಪ್ರಧಾನಿ ಎಂದು ಸ್ವತಃ ರಾಹುಲ್ ಗಾಂಧಿ ಘೋಷಿಸಿಕೊಂಡಿರುವುದು. ಇನ್ನೊಂದೆಡೆ, ದೇಶ ಕಾಂಗ್ರೆಸ್ ಮುಕ್ತವಾಗುತ್ತದೆ, ನಾನೇ ಮತ್ತೊಮ್ಮೆ ಪ್ರಧಾನಿ ಎನ್ನುವಂತೆ ನರೇಂದ್ರ ಮೋದಿ ಕೂಡ ಬೀಗುತ್ತಿದ್ದಾರೆ. ಆದರೆ, ಮತದಾರ ಏನು ಭವಿಷ್ಯ ಬರೆಯುತ್ತಾನೆ ಎಂಬುದು ಮೇ 23ರಂದಷ್ಟೇ ಗೊತ್ತಾಗುತ್ತದೆ.