ಉತ್ತರ ಪ್ರದೇಶದ ಬನ್ಸಗಾಂವ್ ಗ್ರಾಮದ ʼಪ್ರಧಾನ್ʼ ಆಗಿರುವ ದಲಿತ ನಾಯಕನನ್ನು ಗ್ರಾಮದ ಮೇಲ್ಜಾತಿ ಠಾಕೂರರು ಗುಂಡಿಟ್ಟು ಹತ್ಯೆಗೈದಿದ್ದಾರೆ. ಕಳೆದ ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಮೃತಪಟ್ಟ ವ್ಯಕ್ತಿಯನ್ನು ʼಸತ್ಯಮೇವ್ ಜಯತೇʼ ಎಂದು ಗುರುತಿಸಲಾಗಿದೆ. ಘಟನೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ 8 ವರ್ಷದ ಬಾಲಕ ಸೂರಜ್ ಪೊಲೀಸ್ ವಾಹನದ ಚಕ್ರದಡಿ ಸಿಲುಕಿ ಕೊನೆಯುಸಿರೆಳೆದಿದ್ದಾರೆ.
ಸತ್ಯಮೇವ್ ಜಯತೇ, ಗ್ರಾಮದಲ್ಲಿ ಪ್ರಭಾವೀ ದಲಿತ ನಾಯಕರಾಗಿದ್ದು ಗ್ರಾಮದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಬನ್ಸ್ಗಾಂವ್ ಗ್ರಾಮದಲ್ಲಿ ಗ್ರಾಮ ಮುಖ್ಯಸ್ಥರಾಗಿ ದಲಿತ ಸಮುದಾಯದ ವ್ಯಕ್ತಿಯೊಬ್ಬರು ಆಯ್ಕೆಯಾಗುವುದು ಇದೇ ಮೊದಲು. ಆದರೆ ದಲಿತ ವ್ಯಕ್ತಿಯೊಬ್ಬರನ್ನು ತಮ್ಮ ಗ್ರಾಮ ಪ್ರಧಾನ್ ಆಗಿ ನೋಡಲು ಸಹಿಸದ ಜಾತಿವಾದಿಗಳು ಸತ್ಯಮೇವ್ ವಿರುದ್ಧ ಹಗೆ ಸಾಧಿಸಿದ್ದರು ಎನ್ನಲಾಗಿದೆ. ಮುಖ್ಯವಾಗಿ, ಸತ್ಯಮೇವ್ ಅವರು ಗ್ರಾಮದಲ್ಲಿ ಪ್ರಭಾವಿಯಾಗಿದ್ದ ಠಾಕೂರ್ ಜಾತ್ಯಸ್ಥರ ಎದುರು ತಲೆ ಬಾಗಿ ನಮಸ್ಕರಿಸಲು ನಿರಾಕರಿಸಿದ್ದರಿಂದ ಅವರನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.

ಸತ್ಯಮೇವ್ ಅವರ ಪತ್ನಿ ಮುನ್ನಿ ದೇವಿ ನೀಡಿರುವ ದೂರಿನಲ್ಲಿ, ತಮ್ಮ ಮನೆಯಲ್ಲಿದ್ದ ಸತ್ಯಮೇವ್ ಅವರನ್ನು ಆರೋಪಿಗಳಲ್ಲಿ ಓರ್ವನಾಗಿದ್ದ ವಿನಾಯಕ್ ಸಿಂಗ್ ತನ್ನ ದ್ವಿಚಕ್ರದಲ್ಲಿ ಕರೆದೊಯ್ದಿದ್ದಾನೆ. ತಮ್ಮ ನಿವಾಸದಿಂದ 500 ಮೀಟರ್ ದೂರದವರೆಗೆ ಕರೆದೊಯ್ದು ಅಲ್ಲಿ ಗುಂಡಿಟ್ಟು ಕೊಲ್ಲಲಾಗಿದೆ ಎಂದಿದ್ದಾರೆ. ಸತ್ಯಮೇವ್ ಅವರದ್ದು 30 ಜನರ ಅವಿಭಕ್ತ ಕುಟುಂಬವಾಗಿದ್ದು, ದಂಪತಿಗೆ ಮೂರು ಮಕ್ಕಳಿದ್ದಾರೆ.
ಠಾಕೂರರ ಕೆಂಗಣ್ಣಿಗೆ ಗುರಿಯಾದ ಸತ್ಯಮೇವ್ ಅಭಿಮಾನ
ತಿಂಗಳ ಹಿಂದೆ, ಮತ್ತೋರ್ವ ಆರೋಪಿಯಾಗಿರುವ ಗಪ್ಪು ಎಂಬಾತನ ಜಮೀನು ವಿವಾದದಲ್ಲಿ ಸತ್ಯಮೇವ್ ಅವರು ಆತನ ವಿರುದ್ಧ ನಿಂತಿದ್ದರು. ಸಾರ್ವಜನಿಕ ರಸ್ತೆಯನ್ನು ಕಬಳಿಸಿ ಗಪ್ಪು ತನ್ನ ಜಮೀನಿಗೆ ಬೇಲಿ ಹಾಕಿದ್ದ. ಗ್ರಾಮ ಮುಖಂಡರಾಗಿದ್ದ ಸತ್ಯಮೇವ್ ಸಾರ್ವಜನಿಕ ರಸ್ತೆಯನ್ನು ಖಾಸಗಿ ವ್ಯಕ್ತಿಗಳು ಸ್ವಾಧೀನಪಡಿಸುವುದನ್ನು ಸಮ್ಮತಿಸಿರಲಿಲ್ಲ. ಇದೂ ಕೂಡಾ ಸತ್ಯಮೇವ್ ಅವರ ಮೇಲಿನ ಹಗೆತನಕ್ಕೆ ಕಾರಣವಾಗಿದೆ. ಅಲ್ಲದೆ, ದಲಿತ ಸಮುದಾಯದ ಹೊಸ ತಲೆಮಾರು, ವಿಧ್ಯಾಭ್ಯಾಸ ಪಡೆದು ಅಧಿಕಾರ, ಸರ್ಕಾರಿ ಹುದ್ದೆಗಳನ್ನು ಪಡೆಯುತ್ತಿದ್ದಾರೆ. ಇದು ಮೇಲ್ಜಾತಿ ಜಾತಿ ವಾದಿಗಳ ಅಸಹನೆಗೆ ಕಾರಣವಾಗಿದೆ ಎಂದು ಪ್ರಸ್ತುತ ಕಲ್ಕತ್ತಾದಲ್ಲಿ ಸರ್ಕಾರಿ ಉದ್ಯೋಗಿಯಾಗಿ ನೇಮಕವಾಗಿರುವ ರಾಮು ರಾಮ್ ಎಂಬವರು ಹೇಳಿದ್ದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.

ಸತ್ಯಮೇವ್ ಅವರ ಕುಟುಂಬದ ಯುವಕ ಲಿಂಕಾಲ್ನ್, ತನ್ನ ಚಿಕ್ಕಪ್ಪನ ಕಠಿಣ ಪರಿಶ್ರಮದಿಂದ ನಮ್ಮ ಕುಟುಂಬಕ್ಕೆ 15 ಭಿಗಾ (3 ಎಕರೆ) ದಷ್ಟು ಜಮೀನಿದೆ. ಇದು ಮೇಲ್ಜಾತಿಯವರಿಗೆ ಸಹಿಸಲು ಆಗಿರಲಿಲ್ಲ. ನಮ್ಮ ಚಿಕ್ಕಪ್ಪನನ್ನು ಧ್ವೇಷಿಸಲು ಇದೂ ಕೂಡಾ ಅವರಿಗೆ ಕಾರಣವಾಗಿತ್ತು. ಕಳೆದ ಕೆಲವು ವಾರಗಳಿಂದ ಚಿಕ್ಕಪ್ಪ ಹಾಗೂ ಅವರ (ಆರೋಪಿಗಳ) ನಡುವೆ ವಾಗ್ವಾದಗಳು ನಡೆಯುತ್ತಿತ್ತು. ಮುಖ್ಯ ಆರೋಪಿಯಾಗಿರುವ ಶ್ರೆಯಾಂಶ್ ಕುಮಾರ್ ದುಭೆ, ನನಗೆ ಗೊತ್ತಿರುವಂತೆ ಮೂರು ಭಾರಿ ಚಿಕ್ಕಪ್ಪನ ಕಛೇರಿಗೆ ಬಂದಿದ್ದಾನೆ. ತಾನು (ದುಭೆ) ಹಳ್ಳಿಯಲ್ಲಿಯೇ ಇದ್ದುದಾಗಿ ಧೃಡೀಕರಿಸುವ ಪತ್ರಕ್ಕೆ ಸಹಿ ಹಾಕಿ ನೀಡುವಂತೆ ಒತ್ತಾಯಿಸಿದ್ದಾನೆ. ಚಿಕ್ಕಪ್ಪ ಮೂರು ಬಾರಿಯೂ ನಿರಾಕರಿಸಿದ್ದಾರೆ. ದಲಿತ ವ್ಯಕ್ತಿಯೊಬ್ಬ ತಮ್ಮ ಮಾತಿಗೆ ನಿರಾಕರಿಸುವುದನ್ನು, ತಮ್ಮೆದುರು ಅಭಿಮಾನದಿಂದ ತಲೆಯೆತ್ತಿ ನಡೆದಾಡುವುದನ್ನು ಸಹಿಸದ ಅವರು ಚಿಕ್ಕಪ್ಪನನ್ನು ಹತ್ಯೆಗೈದಿದ್ದಾರೆ. ನಮ್ಮ(ದಲಿತರ) ಸ್ಥಾನ ಯಾವುದೆಂದು ನಾವು ಅರ್ಥ ಮಾಡಿಕೊಳ್ಳಲು ಅವರು ಈ ಕೃತ್ಯ ಎಸಗಿದ್ದಾರೆ ಎಂಬ ಲಿಂಕಾಲ್ನ್ರ ಹೇಳಿಕೆಯನ್ನು ಇಂಡಿಯನ್ ಎಕ್ಸ್ಪ್ರೆಸ್ ವರದಿಯಲ್ಲಿ ಉಲ್ಲೇಖಿಸಿದೆ.

ಭುಗಿಲೆದ್ದ ಪ್ರತಿಭಟನೆ: ಪೋಲಿಸರ ವಾಹನದ ಚಕ್ರಗಳಿಗೆ ಸಿಲುಕಿ ಬಾಲಕ ಮೃತ್ಯು
ಬನ್ಸ್ಗಾಂವ್ ಗ್ರಾಮದಲ್ಲಿ 300 ರಷ್ಟು ದಲಿತ ಕುಟುಂಬಗಳಿವೆ. ಹಾಗೂ ಠಾಕೂರ್, ಬ್ರಾಹ್ಮಣ ಸೇರಿದಂತೆ 30 ರಷ್ಟು ಸೋ-ಕಾಲ್ಡ್ ಮೇಲ್ಜಾತಿ ಕುಟುಂಬಗಳಿವೆ. ಗ್ರಾಮ ಪ್ರಧಾನ್ ಆಗಿ ಮೊದಲ ಬಾರಿಗೆ ದಲಿತ ವ್ಯಕ್ತಿಯೊಬ್ಬರು ಆಯ್ಕೆಯಾಗಿರುವುದು ಹಾಗೂ ದಲಿತರು ವಿಧ್ಯಾಭ್ಯಾಸ ಪಡೆದು, ಸರ್ಕಾರಿ ಉದ್ಯೋಗ, ಜಮೀನು ಪಡೆಯುವುದು ಮೇಲ್ಜಾತಿ ಜಾತಿವಾದಿಗಳಲ್ಲಿ ಅಸಹನೆಯುಂಟು ಮಾಡಿತ್ತು. ಪರೋಕ್ಷವಾಗಿ, ಪ್ರತ್ಯಕ್ಷವಾಗಿ ಹಲವು ಬಾರಿ ಜಾತಿ ನಿಂದೆಗಳು ನಡೆಯುತ್ತಿತ್ತು ಎನ್ನಲಾಗಿದೆ. ಈ ಎಲ್ಲಾ ಕಾರಣಗಳಿಗೆ ಸತ್ಯಮೇವ್ ಅವರ ಹತ್ಯೆಯಾಗಿದೆ ಎಂದು ಮೇಲ್ನೋಟಕ್ಕೆ ತೋರುತ್ತದೆ.
ಸತ್ಯಮೇವ್ ಹತ್ಯೆಯಿಂದಾಗಿ ದಲಿತರು ಆಕ್ರೋಶಿತರಾಗಿದ್ದಾರೆ. ಕೊಲೆ ಮಾಡಿದವರನ್ನು ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಆರೋಪಿಗಳನ್ನು ಬಂಧಿಸಲು ಪೊಲೀಸರು ತಡ ಮಾಡಿದ್ದರಿಂದ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಪ್ರತಿಭಟನಾ ಸಂಧರ್ಭದಲ್ಲಿ ಉಂಟಾದ ಘರ್ಷಣೆಯಲ್ಲಿ ಪೋಲಿಸ್ ವಾಹನದ ಚಕ್ರಗಳಡಿಯಲ್ಲಿ ಸಿಲುಕಿ 8 ವರ್ಷದ ಸೂರಜ್ ಎನ್ನುವ ಬಾಲಕ ಮೃತಪಟ್ಟಿದ್ದಾರೆ.
ಪ್ರತಿಭಟನೆಯ ಸಂಧರ್ಭದಲ್ಲಿ ಗಾಯಗೊಂಡಿರುವ ದೀಪಕ್ ಎಂಬ 18 ವರ್ಷದ ಯುವಕನ ಹೇಳಿಕೆ ಪ್ರಕಾರ, ಸತ್ಯಮೇವ್ ಹತ್ಯೆಯ ಬಳಿಕ ಜನರು ಆಕ್ರೋಶಿತರಾಗಿದ್ದರು, ಆರೋಪಿಗಳ ಮಾಹಿತಿಯನ್ನು ನೀಡಿದ್ದರೂ, ಬಂಧಿಸುವಲ್ಲಿ ಪೊಲೀಸರು ತಡಮಾಡಿದ್ದಾರೆ. ಸೂರಜ್ ಪೊಲಿಸರ ವಾಹನದ ಅಡಿಗೆ ಬಿದ್ದು ಮೃತಪಟ್ಟಿದ್ದಾನೆ. ಸೂರಜ್ ಮೇಲೆ ಹತ್ತಿರುವ ಪೊಲೀಸ್ ವಾಹನದ ಮೇಲೆ CO (ಸರ್ಕಲ್ ಆಫಿಸರ್) ಎಂದು ಬರೆಯಲ್ಪಟ್ಟಿತ್ತು ಎಂದಿದ್ದಾರೆ.

ಸತ್ಯಮೇವ್ ಹತ್ಯೆ: ಜಾತಿ ಪ್ರತಿಷ್ಠೆಯ ಕೃತ್ಯ
ಕೊಲೆಗಾರರು ಸತ್ಯಮೇವ್ರನ್ನು ಹತ್ಯೆಗೈದ ಬಳಿಕ, ಸತ್ಯಮೇವ್ ಅವರ ತಾಯಿ ಬಳಿ ಹೋಗಿದ್ದಾರೆ. ಅವರಿಗೆ ಜಾತಿ ನಿಂದನೆ ಮಾಡಿ, ನಿಮ್ಮ ಮಗನಿಗೆ ಗುಂಡು ಹೊಡೆದಿದ್ದೇವೆ, ಹೋಗಿ ಅವನ ದೇಹ ನೋಡಿ ಎಂದು ಹೇಳಿದ್ದಾರೆ ಎಂದು ಲಿಂಕಲ್ನ್ ವರದಿಗಾರರೊಂದಿಗೆ ತಿಳಿಸಿದ್ದಾರೆ.
ಜಾತಿ ದೌರ್ಜನ್ಯ ಅನುಭವಿಸುತ್ತಿದ್ದ ಗ್ರಾಮಸ್ಥರಲ್ಲಿ ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರು ಬಂಧನಕ್ಕೆ ಮೀನಾಮೇಷ ಎಣಿಸಿದ್ದರಿಂದ ಇನ್ನಷ್ಟು ಆಕ್ರೋಶಿತರಾದ ಜನಸಮೂಹ, ಆರೋಪಿಗಳ ಮನೆಯೆದುರು ಸೇರಿದ್ದಾರೆ. ಅಲ್ಲಿ ಆರೋಪಿಗಳ ಮನೆ ಮೇಲೆ ಕಲ್ಲು ಬೀಸಿದ್ದರಿಂದ ಕೆಲಕಾಲ ಉದ್ವಿಘ್ನ ಪರಿಸ್ಥಿತಿ ತಲೆದೋರಿತ್ತು ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.
ಅಪರಾಧ ಪ್ರಮಾಣಗಳ ಏರುವಿಕೆಯ ನಡುವೆಯೂ ಯೋಗಿಯದ್ದು ಉತ್ತಮ ಆಡಳಿತ..!?
ಉತ್ತರ ಪ್ರದೇಶದಲ್ಲಿ ಜಾತಿಯಾಧಾರಿತ ಹಲ್ಲೆ, ಕೊಲೆ, ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರದಂತಹ ಘಟನೆಗಳು ಪದೇ ಪದೇ ನಡೆಯುತ್ತಿದೆ. ಯೋಗಿ ಆದಿತ್ಯನಾಥರ ಬಿಜೆಪಿ ಪಕ್ಷದ ಕೋಮು, ಜಾತಿ ರಾಜಕಾರಣಕ್ಕೆ ರಾಜ್ಯ ನಲುಗಿದೆ. ಲಕ್ಷ್ಮಿಪುರದ ಖೆರಿ ಜಿಲ್ಲೆಯಲ್ಲಿ ಕಳೆದ ಶುಕ್ರವಾರದಂದೇ ಮಧ್ಯಾಹ್ನ ನಾಪತ್ತೆಯಾದ 13 ವರ್ಷದ ದಲಿತ ಹೆಣ್ಣುಮಗಳ ದೇಹ ಅತ್ಯಾಚಾರವಾದ ಸ್ಥಿತಿಯಲ್ಲಿ ಕಬ್ಬಿನ ಗದ್ದೆಯಲ್ಲಿ ಸಿಕ್ಕಿತ್ತು. ಬಾಲಕಿಯ ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ಧೃಡಪಟ್ಟಿತ್ತು. ಅಲ್ಲದೆ, ಉತ್ತರ ಪ್ರದೇಶದ ಹಾಪುರ್ ಪ್ರದೇಶದಲ್ಲಿ ಕಳೆದ ವಾರವಷ್ಟೇ 6 ವರ್ಷದ ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರ ನಡೆಸಲಾಗಿತ್ತು.
ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದರೂ, ನಕಲಿ ಸರ್ವೆ ಮೂಲಕ ದಲಿತರ ಅವಮಾನದ ಮೇಲೆ, ಅಲ್ಪಸಂಖ್ಯಾತರ ಅಭದ್ರತೆಯ ಮೇಲೆ, ಅತ್ಯಾಚಾರಕ್ಕೊಳಗಾದ ಮಹಿಳೆಯರ ದೇಹದ ಮೇಲೆ ಮೊಳೆ ಹೊಡೆದಂತೆ ಯೋಗಿ ಆದಿತ್ಯನಾಥ್ರ ಅತ್ಯುತ್ತಮ ಮುಖ್ಯಮಂತ್ರಿಯ ಶಿಫಾರಸ್ಸು ಪತ್ರವನ್ನು ತೂಗು ಹಾಕಲಾಗಿದೆ.