ಇದು ರಾಜ್ಯ ಸರ್ಕಾರಕ್ಕೂ ಎಚ್ಚರಿಕೆಯಂತಿರುವ ಸುಪ್ರೀಂ ಕೋರ್ಟ್ ಆದೇಶ. ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ನಿಯಂತ್ರಿಸಲು ವಿಫಲವಾದ ಹಿನ್ನೆಲೆಯಲ್ಲಿ ಮೇಘಾಲಯ ಸರ್ಕಾರಕ್ಕೆ ರೂ 100 ಕೋಟಿ ಠೇವಣಿ ಇರಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ರಾಷ್ಟ್ರೀಯ ಹಸಿರು ಪೀಠದ (National Green Tribunal – NGT) ಆದೇಶವನ್ನು (ಸ್ವಲ್ಪ ಮಟ್ಟಿನ ಮಾರ್ಪಾಡಿನೊಂದಿಗೆ) ಎತ್ತಿ ಹಿಡಿದ ಸುಪ್ರೀಂ ಕೋರ್ಟ್, ಮೇಘಾಲಯ ಸರ್ಕಾರದ ನಿರ್ಲಕ್ಯವನ್ನು ಕಟುವಾಗಿ ಟೀಕಿಸಿದೆ. NGT ಆದೇಶವನ್ನು ಪ್ರಶ್ನಿಸಿ ಮೇಘಾಲಯ ಸರ್ಕಾರ ಸಲ್ಲಿಸಿದ್ದ ಮನವಿ ಅರ್ಜಿಯ ಮೇಲೆ ಆದೇಶ ಪ್ರಕಟಿಸಿದ ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಹಾಗೂ ಕೆ. ಎಂ. ಜೋಸೆಫ್ ಅವರ ಪೀಠ, ಪರಿಸರ ರಕ್ಷಣೆಯ ಪೂರ್ಣ ಹೊಣೆ ಚುನಾಯಿತ ಸರ್ಕಾರಗಳ ಮೇಲೆ ಇದೆ ಎಂಬುದನ್ನು ಮತ್ತೊಮ್ಮೆ ಪುನರುಚ್ಛರಿಸಿದೆ.
“ದೇಶದ ನೈಸರ್ಗಿಕ ಸಂಪತ್ತನ್ನು ರಕ್ಷಿಸಿ, ಕಾಪಿಟ್ಟುಕೊಳ್ಳುವ ಹೊಣೆ ಇಂದಿನ ಜನಾಂಗದ ಮೇಲಿದೆ. ಹಾಗೆ ಮಾಡಿದಲ್ಲಿ ಮುಂದಿನ ಜನಾಂಗವೂ ಅದನ್ನು ಜಾಗರೂಕತೆಯಿಂದ ಬಳಸಿಕೊಳ್ಳುವಲ್ಲಿ ಸಹಾಯಕವಾಗಬಲ್ಲದು,’’ ಎಂದು ಪೀಠ ಹೇಳಿದೆ.
ಹಸಿರು ಪೀಠದ ಆದೇಶವನ್ನು ಸ್ವಲ್ಪ ಮಾರ್ಪಡಿಸಿದ ಸುಪ್ರೀಂ ಕೋರ್ಟ್ ಪೀಠ, ರೂ. 100 ಕೋಟಿ ಹಣವನ್ನು ಮೇಘಾಲಯ ಪರಿಸರ ರಕ್ಷಣೆ ಮತ್ತು ಪುನರ್ ಸ್ಥಾಪನೆ ನಿಧಿಯಿಂದ (Meghalaya Environment Protection and Restoration Fund) ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪರವಾಗಿ ಠೇವಣಿ ಇರಿಸುವಂತೆ ಹೇಳಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಈ ಹಣವನ್ನು ಸಂಪೂರ್ಣವಾಗಿ ಪರಿಸರ ಪುನರ್ ಸ್ಥಾಪನೆಗೆ ವಿನಿಯೋಗಿಸುವಂತೆಯೂ ನಿರ್ದೇಶನ ನೀಡಿದೆ.
ಮೇಘಾಲಯ ರಾಜ್ಯ ಸರ್ಕಾರದ ನಿರ್ಲಕ್ಯದ ಬಗ್ಗೆ ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್, ರಾಜ್ಯದ ಬೆಟ್ಟಗಳಲ್ಲಿ ಅವ್ಯಾಹತವಾಗಿ ನಡೆದಿರುವ ಕಲ್ಲಿದ್ದಲು ಗಣಿಗಾರಿಕೆಯನ್ನು ನಿಯಂತ್ರಿಸುವಲ್ಲಿ ಸರ್ಕಾರದ ವೈಫಲ್ಯ ಮುಂದುವರಿಯುವಂತಿಲ್ಲ ಎಂದು ಹೇಳಿದೆ. ಹಸಿರು ಪೀಠದ ನಿರ್ದೇಶನದಂತೆ ಮೇಘಾಲಯ ಪರಿಸರ ರಕ್ಷಣೆ ಮತ್ತು ಪುನರ್ ಸ್ಥಾಪನೆ ನಿಧಿ ಸ್ಥಾಪಿತವಾಗಿತ್ತು. ಮೇಘಾಲಯ ಸರ್ಕಾರ ಹಸಿರು ಪೀಠದ ಈ ಆದೇಶವನ್ನು ಪ್ರಶ್ನಿಸಿತ್ತು ಹಾಗೂ ಹಸಿರು ಪೀಠಕ್ಕೆ ಈ ರೀತಿ ಸಮಿತಿ ರಚಿಸುವ ನಿಧಿ ಸ್ಥಾಪಿಸುವ ಅಧಿಕಾರವೇ ಇಲ್ಲ ಎಂದು ವಾದಿಸಿತ್ತು. ಆದರೆ, ಹಸಿರು ಪೀಠದ ಅಧಿಕಾರವನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, ಸಮಿತಿ ರಚಿಸಿ, ವರದಿ ಪಡೆಯುವ ಅಧಿಕಾರ ಹಸಿರು ಪೀಠಕ್ಕಿದೆ ಎಂದು ಹೇಳಿದೆ.
ರಾಜ್ಯದ ಸ್ಥಿತಿ:
ಕರ್ನಾಟಕದಲ್ಲಿ ಗಣಿ ಬಾಧಿತ ಪ್ರದೇಶಗಳ ಪುನರ್ ನಿರ್ಮಾಣ ಹಾಗೂ ಪುನಶ್ಚೇತನಕ್ಕೆ ಬಳಸಲು ಒಟ್ಟುಗೂಡಿರುವ ರೂ 15,000 ಕೋಟಿಗೂ ಹೆಚ್ಚು ಹಣ ಇನ್ನೂ ಬಳಕೆಯಾಗಿಲ್ಲ. ಗಣಿ ಬಾಧಿತ ಪ್ರದೇಶಗಳಲ್ಲಿನ ಪರಿಸರ ಹಾಗೂ ಜನರ ಜೀವನ ಸುಧಾರಣೆ ಮಾಡುವ ಉದ್ದೇಶದಿಂದ ಸಿ ಕೆಟಗರಿ ಗಣಿಗಳ ಅದಿರಿನ ಇ-ಹರಾಜು ಪ್ರಕ್ರಿಯೆಯಿಂದ ಬಂದ ಹಣದ ಶೇಕಡಾ 10 ಭಾಗವನ್ನು ಹಾಗೂ ಮುಂದೆ ನಡೆಸಲಾದ ಗಣಿಗಾರಿಕೆಯ ಮಾರಾಟದ ಲಾಭಾಂಶವನ್ನು ಒಟ್ಟುಗೂಡಿಸಿ ನಂತರ ಯೋಜನೆಯ ಕಾರ್ಯ ತಂತ್ರದ ಬಗ್ಗೆ ತಿಳಿಸಿ ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿತ್ತು.
ಈ ಹಣ ಈಗ ಕರ್ನಾಟಕ ರಾಜ್ಯ ಗಣಿ ಪರಿಸರ ಪುನಶ್ಚೇತನ ನಿಗಮ (Karnataka Mining Environment Restoration Corporation) ದಲ್ಲಿ ಇರಿಸಲಾಗಿದೆ. ಈ ಹಣದ ಬಳಕೆಯ ಬಗ್ಗೆ ಸರ್ಕಾರದ ಪ್ರಸ್ತಾಪಗಳಿಗೆ ಸುಪ್ರೀಂ ಕೋರ್ಟ್ ಇನ್ನೂ ಅನುಮತಿ ನೀಡಿಲ್ಲ. ಅಕ್ರಮ ಗಣಿಗಾರಿಕೆಯ ವಿರುದ್ಧ ಕಾನೂನು ಹೋರಾಟ ನಡೆಸಿದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್ ಆರ್ ಹಿರೇಮಠ ಅವರು ಈ ಹಣದ ಸದ್ಭಳಕೆ ದೃಢಪಡಿಸಲು ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದಾರೆ.