ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಎಚ್. ವಿಶ್ವನಾಥ್, ‘ನವಮಾಸ’ ತುಂಬಿದ ಬಳಿಕ ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಶ್ವನಾಥ್ ಅವರನ್ನು ಹತ್ತಿರದಿಂದ ಬಲ್ಲವರಿಗೆ ಇದು ಅಚ್ಚರಿಯ ವಿಷಯವೇನೂ ಅಲ್ಲ. ಏಕೆಂದರೆ, ವಿಶ್ವನಾಥ್ ಈ ಸ್ಥಾನ ಅಲಂಕರಿಸಿದಾಗಲೇ ಅವರು ಹೆಚ್ಚು ದಿನ ಉಳಿಯುವುದಿಲ್ಲ ಎಂದು ಬಹುತೇಕರು ಅಂದುಕೊಂಡಿದ್ದರು. ಇದೀಗ ಆ ನಿರೀಕ್ಷೆ ನಿಜವಾಗಿದೆ ಅಷ್ಟೆ.
ತಮ್ಮ ರಾಜೀನಾಮೆಗೆ ವಿಶ್ವನಾಥ್ ನೀಡಿರುವ ಕಾರಣ, ಲೋಕಸಭೆ ಚುನಾವಣೆಯ ಹೀನಾಯ ಸೋಲು, ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯಲ್ಲಿ ತಮಗೆ ಅವಕಾಶ ಸಿಗದೇ ಇರುವುದು. ಇದನ್ನೇ ನೆಪವಾಗಿಟ್ಟುಕೊಂಡು ಅವರು ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ. ತಾವು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ತೊರೆಯಲು ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಾಗಲೀ, ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಾಗಲೀ ಕಾರಣರಲ್ಲ ಎಂದಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ತಮಗೆ ರಾಜಕೀಯ ಮರುಜನ್ಮ ನೀಡಿದವರೇ ದೇವೇಗೌಡ ಮತ್ತು ಕುಮಾರಸ್ವಾಮಿ ಎಂದೆಲ್ಲಾ ಹಾಡಿ ಹೊಗಳಿದ್ದಾರೆ.
ಈ ವಿಚಾರದಲ್ಲಿ ವಿಶ್ವನಾಥ್ ಹೃದಯದಿಂದ ಮಾತನಾಡಿದ್ದಾರೆ. ಇದ್ದುದನ್ನು ಇದ್ದಂತೆ ಹೇಳುವುದು ಅವರ ಸ್ವಭಾವ. ಯಾರನ್ನೋ ಮೆಚ್ಚಿಸಲು ಮೇಲೊಂದು ಮಾತನಾಡಿ ಒಳಗೊಂದು ಯೋಚಿಸುವ ಬುದ್ಧಿ ಅವರದ್ದಲ್ಲ. ಹೀಗಾಗಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಬಗ್ಗೆ ವಿಶ್ವನಾಥ್ ಹೇಳಿದ್ದು ಅವರಿಬ್ಬರ ಬಗ್ಗೆ ತಾವು ಹೊಂದಿರುವ ಅಭಿಪ್ರಾಯವನ್ನೇ ಹೊರತು ಮುಖಸ್ತುತಿ ಅಲ್ಲ. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಇದ್ದ ತಮ್ಮ ಆಕ್ರೋಶವನ್ನೂ ಹೊರಹಾಕಿದ್ದಾರೆ. ಈ ಆಕ್ರೋಶಕ್ಕೆ ಕಾರಣವಾಗಿರುವುದು ಕೂಡ ಸಿದ್ದರಾಮಯ್ಯ ಅವರ ರಾಜಕೀಯ ನಡವಳಿಕೆಗಳು.
ಸಮ್ಮಿಶ್ರಸರ್ಕಾರದ ಸಮನ್ವಯ ಸಮಿತಿಯಲ್ಲಿ ಮಿತ್ರಪಕ್ಷಗಳ ಅಧ್ಯಕ್ಷರೇ ಇಲ್ಲದಿರುವುದು ವಿಚಿತ್ರ. ವಿಶ್ವನಾಥ್ ಅವರು ಸಮನ್ವಯ ಸಮಿತಿಯಲ್ಲಿರಬಾರದು ಎಂಬ ಕಾರಣದಿಂದಲೇ ಕೆಪಿಸಿಸಿ ಅಧ್ಯಕ್ಷರನ್ನೂ ಸಮನ್ವಯ ಸಮಿತಿಯಿಂದ ಹೊರಗಿಡಲಾಯಿತು ಎಂಬುದು ಹೇಗೆ ಸುಳ್ಳಲ್ಲವೋ, ಇದರ ಹಿಂದೆ ಸಿದ್ದರಾಮಯ್ಯ ಅವರ ಕೈವಾಡವಿರುವುದೂ ಅಷ್ಟೇ ಸತ್ಯ. ಅಷ್ಟೇ ಅಲ್ಲ, ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಗಾಗ್ಯೆ ಸರ್ಕಾರಕ್ಕೆ ಬೆದರಿಕೆ ಒಡ್ಡುತ್ತಿರುವವರು ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಶಾಸಕರು. ಹೀಗಿದ್ದರೂ ಆ ಶಾಸಕರನ್ನು ಕರೆದು ಗದರುವ ಇಲ್ಲವೇ ಎಚ್ಚರಿಕೆ ಕೊಡುವ ಕೆಲಸವನ್ನು ಸಿದ್ದರಾಮಯ್ಯ ಮಾಡಲಿಲ್ಲ. ಈ ಕಾರಣಗಳಿಂದಾಗಿಯೇ ಸಿದ್ದರಾಮಯ್ಯ ಬಗ್ಗೆ ವಿಶ್ವನಾಥ್ ಕಿಡಿ ಕಾರಿದ್ದಾರೆ.
ಹಾಗೆಂದು ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಅವರೇ ಹೇಳಿದಂತೆ ಲೋಕಸಭೆ ಚುನಾವಣೆ ಸೋಲಿನ ನೈತಿಕ ಹೊಣೆ ಅಥವಾ ಸಿದ್ದರಾಮಯ್ಯ ಕಾರಣದಿಂದ ಸಮನ್ವಯ ಸಮಿತಿಯಲ್ಲಿ ತಮಗೆ ಸ್ಥಾನ ಸಿಗಲಿಲ್ಲ ಎಂಬುದಲ್ಲ. ಏಕೆಂದರೆ, ಈ ಸೋಲಿಗೆ ವಿಶ್ವನಾಥ್ ಅಥವಾ ಅವರ ಕಾರ್ಯವೈಖರಿ ಕಾರಣವಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಸ್ವತಃ ವಿಶ್ವನಾಥ್ ಅವರಿಗೂ ಇದು ಗೊತ್ತು.
ಮೂಲೆಗುಂಪು ಮಾಡಿದ್ದೇ ರಾಜೀನಾಮೆಗೆ ಕಾರಣ
ವಿಶ್ವನಾಥ್ ರಾಜೀನಾಮೆಗೆ ಪ್ರಮುಖ ಕಾರಣ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರೂ ಅಲ್ಲಿ ಅವರಿಗೆ ಉಸಿರುಕಟ್ಟುವಂತೆ ಮಾಡಿದ್ದು ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ದೂರ ಇಟ್ಟಿದ್ದು. ರಾಜಕೀಯದಲ್ಲೂ ನೇರ ಮತ್ತು ನಿಷ್ಠುರವಾಗಿ ಮಾತನಾಡುವ ಮತ್ತು ನಡೆದುಕೊಳ್ಳುವ ಬೆರಳೆಣಿಕೆಯ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ವಿಶ್ವನಾಥ್ ಅವರು ತಮ್ಮ ಸ್ಥಾನಕ್ಕೆ ಅಗೌರವ, ಅವಮಾನ ಉಂಟಾದಾಗ ಅದನ್ನು ಸಹಿಸಿಕೊಳ್ಳುವವರಲ್ಲ. ಸಹಿಸಿಕೊಂಡು ಅಧಿಕಾರಕ್ಕೆ ಅಂಟಿಕೊಳ್ಳುವವರೂ ಅಲ್ಲ. ಹೀಗಾಗಿ ಒಂದು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದರೂ ಆ ಸ್ಥಾನಕ್ಕೆ ತಕ್ಕ ಗೌರವ ತಮಗೆ ಸಿಗುತ್ತಿಲ್ಲ ಎಂಬ ಕಾರಣಕ್ಕೆ ವಿಶ್ವನಾಥ್ ರಾಜೀನಾಮೆ ನೀಡಿದ್ದಾರೆ. ಆದರೆ, ರಾಜೀನಾಮೆಯ ನಿಜವಾದ ಕಾರಣಗಳನ್ನು ಬಹಿರಂಗಪಡಿಸಿದರೆ ತಮಗೆ ರಾಜಕೀಯ ಪುನರ್ಜನ್ಮ ನೀಡಿದ ದೇವೇಗೌಡ, ಕುಮಾರಸ್ವಾಮಿ ಅವರಿಗೆ ಅವಮಾನ ಮಾಡಿದಂತಾಗುತ್ತದೆ ಎಂಬ ಒಂದೇ ಕಾರಣಕ್ಕೆ ಸೋಲು ಮತ್ತು ಸಿದ್ದರಾಮಯ್ಯ ಅವರ ನೆಪವನ್ನು ಮುಂದಿಟ್ಟಿದ್ದಾರೆ ಎಂದು ವಿಶ್ವನಾಥ್ ಅವರ ಆಪ್ತರೇ ಹೇಳುತ್ತಾರೆ.
ವಿಶ್ವನಾಥ್ ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷದಲ್ಲಿ ಸಾಕಷ್ಟು ಇರುಸು-ಮುರುಸು ಅನುಭವಿಸಿದ್ದರು. ಒಕ್ಕಲಿಗ ಸಮುದಾಯದವರೇ ಪ್ರಬಲವಾಗಿರುವ ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಹೊಂದಿರುವ ಜೆಡಿಎಸ್ ನಲ್ಲಿ ಸಹಜವಾಗಿಯೇ ಆ ಪಕ್ಷದ ನಾಯಕರಿಗೆ ಮಣೆ ಹಾಕಲಾಗುತ್ತದೆ. ಜೊತೆಗೆ, ಪಕ್ಷದ ವರಿಷ್ಠರು, ಮುಖ್ಯಮಂತ್ರಿ ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಆ ಸಮುದಾಯದ ಮುಖಂಡರು ವಿಶ್ವನಾಥ್ ಮಾತಿಗೆ ಕಿಮ್ಮತ್ತು ನೀಡುತ್ತಿರಲಿಲ್ಲ. ಪಕ್ಷದ ಸಚಿವರು, ಶಾಸಕರು ಕೂಡ ಇದೇ ರೀತಿ ವರ್ತಿಸುತ್ತಿದ್ದರು. ಈ ಬಗ್ಗೆ ಗೊತ್ತಿದ್ದರೂ ದೇವೇಗೌಡರಾಗಲಿ, ಕುಮಾರಸ್ವಾಮಿಯವರಾಗಲಿ ಪಕ್ಷದ ಮುಖಂಡರಿಗೆ ಬುದ್ಧಿಮಾತು ಹೇಳಲಿಲ್ಲ. ಈ ಬೇಸರ ವಿಶ್ವನಾಥ್ ಅವರಲ್ಲಿತ್ತು. ಈ ಕಾರಣಕ್ಕಾಗಿಯೇ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದ ಬಳಿಕ ಸಚಿವ ಸಾ. ರಾ. ಮಹೇಶ್ ವಿರುದ್ಧ ಬಹಿರಂಗವಾಗಿ ಕಿಡಿ ಕಾರಿದ್ದರು. ಆ ಮೂಲಕ ತಮ್ಮನ್ನು ನಿರ್ಲಕ್ಷಿಸಿದರೆ ಇನ್ನು ಸುಮ್ಮನಿರುವುದಿಲ್ಲ ಎಂಬ ಸಂದೇಶವನ್ನು ಕಳುಹಿಸಿದ್ದರು.

ಕಳೆದ ವರ್ಷದ ಆಗಸ್ಟ್ ನಲ್ಲಿ ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಬಳಿಕ ಅನಾರೋಗ್ಯದ ಮಧ್ಯೆಯೂ ರಾಜ್ಯಾದ್ಯಂತ ಓಡಾಡಿ ಪಕ್ಷ ಸಂಘಟಿಸುವ ಹುಮ್ಮಸ್ಸನ್ನು ವಿಶ್ವನಾಥ್ ಹೊಂದಿದ್ದರು. ಆದರೆ, ಅದಾಗಲೇ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮುಂದುವರಿಸುವ ತೀರ್ಮಾನ ಕೈಗೊಂಡ ಪಕ್ಷದ ವರಿಷ್ಠರು ಇದ್ಯಾವುದಕ್ಕೂ ಅವಕಾಶ ಮಾಡಿಕೊಡಲಿಲ್ಲ. ಪಕ್ಷ ಸಂಘಟಿಸಬೇಕಾದರೆ ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್ ವಿರುದ್ಧವೂ ಮಾತನಾಡಬೇಕು. ಹಿಂದೆ ಕಾಂಗ್ರೆಸ್ ನಲ್ಲಿದ್ದುದರಿಂದ ಆ ಪಕ್ಷದ ಒಳ-ಹೊರಗುಗಳನ್ನು ಬಲ್ಲವರಾಗದ್ದ ವಿಶ್ವನಾಥ್ ಪಕ್ಷ ತೊರೆಯಲು ಕಾರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಹೀಗಾಗಿ ಸಿದ್ದರಾಮಯ್ಯ ಬಗ್ಗೆ ಅವರಲ್ಲಿ ಸಿಟ್ಟು ಇದೆ. ಪಕ್ಷ ಸಂಘಟನೆಗೆ ಮುಕ್ತ ಅವಕಾಶ ನೀಡಿದರೆ ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಸೆಟೆದು ನಿಲ್ಲಬಹುದು. ಇದರಿಂದ ಮೈತ್ರಿ ಸರ್ಕಾರಕ್ಕೆ ತೊಂದರೆಯಾಗಿ ಕುಮಾರಸ್ವಾಮಿ ಅವರು ಅಧಿಕಾರದಿಂದ ಕೆಳಗಿಳಿಯುವ ಪರಿಸ್ಥಿತಿ ಬರಬಹುದು ಎಂಬ ಕಾರಣಕ್ಕಾಗಿ ಅಧಿಕಾರ ಉಳಿಸಿಕೊಳ್ಳುವ ಏಕೈಕ ಉದ್ದೇಶದಿಂದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ವಿಶ್ವನಾಥ್ ಕೈಗೆ ಶಸ್ತ್ರ ಕೊಟ್ಟು ಆ ಕೈಯ್ಯನ್ನೇ ಕಟ್ಟಿ ಹಾಕಿದ್ದರು. ಇದರ ಜತೆಗೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಸೀಟು ಹಂಚಿಕೆ ಮಾಡಿಕೊಂಡಾಗ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯದ ಕಾಂಗ್ರೆಸ್ ಪ್ರಮುಖರ ಜತೆಗೆ ಚರ್ಚಿಸಿದರೇ ಹೊರತು ಸೌಜನ್ಯಕ್ಕಾದರೂ ವಿಶ್ವನಾಥ್ ಅವರ ಅಭಿಪ್ರಾಯ ಕೇಳಲಿಲ್ಲ. ಇದು ಕೂಡ ವಿಶ್ವನಾಥ್ ಅವರಿಗೆ ನೋವು ಉಂಟುಮಾಡಿತ್ತು.
ವಿಶ್ವನಾಥ್ ಈ ಹಿಂದಿನಂತೆ ತೀರ್ಮಾನಗಳನ್ನು ಕೈಗೊಳ್ಳುವಂತಿದ್ದರೆ ಯಾವತ್ತೋ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದರು. ಜತೆಗೆ ಅದಕ್ಕೆ ಕಾರಣಗಳೇನು ಎಂಬುದನ್ನು ಬಿಡಿಸಿ ಜೆಡಿಎಸ್ ನಾಯಕರ ಚಳಿ ಬಿಡಿಸುತ್ತಿದ್ದರು. ಆದರೆ, ಕಾಂಗ್ರೆಸ್ ನಲ್ಲಿ ಮೂಲೆಗುಂಪಾಗಿದ್ದ ತಮ್ಮನ್ನು ಜೆಡಿಎಸ್ ಗೆ ಬರಮಾಡಿಕೊಂಡು ಶಾಸಕನಾಗಿ ಆಯ್ಕೆ ಮಾಡುವ ಮೂಲಕ ರಾಜಕೀಯ ಮರುಜನ್ಮ ನೀಡಿದ್ದಲ್ಲದೆ, ಪಕ್ಷದ ರಾಜ್ಯಾಧ್ಯಕ್ಷನನ್ನಾಗಿ ಮಾಡಿದ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಬಗ್ಗೆ ಇದ್ದ ಗೌರವ, ಕೃತಜ್ಞತಾ ಭಾವದ ಕಾರಣದಿಂದ ಲೋಕಸಭೆ ಚುನಾವಣೆ ಸೋಲು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೇಲಿನ ಸಿಟ್ಟಿನ ನೆಪ ಹೇಳಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಿಮ್ಮ ಸಮಸ್ಯೆಗಳನ್ನು ಸರಿಪಡಿಸುತ್ತೇವೆ. ರಾಜೀನಾಮೆ ಹಿಂಪಡೆಯಿರಿ ಎಂದು ದೇವೇಗೌಡರು ಹೇಳಿದರೂ ವಿಶ್ವನಾಥ್ ಕೇಳುವ ಪರಿಸ್ಥಿತಿಯಲ್ಲಿ ಇಲ್ಲ. ಏಕೆಂದರೆ, ತಮಗೊಬ್ಬರಿಗಾಗಿ ಅಧಿಕಾರ ಕಳೆದುಕೊಳ್ಳುವ ಮನಸ್ಥಿತಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರದ್ದಲ್ಲ. ಹೀಗಿರುವಾಗ ದೇವೇಗೌಡರ ಮಾತಿಗೆ ಮಣಿದು ರಾಜೀನಾಮೆ ಹಿಂಪಡೆದರೂ ಮುಂದೆಯೂ ಮುಕ್ತ ಸ್ವಾತಂತ್ರ್ಯ ಸಿಗುವುದಿಲ್ಲ ಎಂಬುದನ್ನು ಅರಿತಿರುವ ವಿಶ್ವನಾಥ್, ಉಸಿರುಕಟ್ಟುವ ಪರಿಸ್ಥಿತಿಯಿಂದ ಹೊರಬಂದು “ಮುಕ್ತ ಹಳ್ಳಿ ಹಕ್ಕಿ”ಯಾಗಿಯೇ ಮುಂದುವರಿಯಲು ನಿರ್ಧರಿಸಿದ್ದಾರೆ.
ಅಡಕತ್ತರಿಯಲ್ಲಿ ಜೆಡಿಎಸ್
ವಿಶ್ವನಾಥ್ ರಾಜೀನಾಮೆಯಿಂದ ಜೆಡಿಎಸ್ ಇದೀಗ ಅಡಕತ್ತರಿಯಲ್ಲಿ ಸಿಕ್ಕಿಕೊಂಡಂತಾಗಿದೆ. ವಿಶ್ವನಾಥ್ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದೇ ಒಕ್ಕಲಿಗರ ಪಕ್ಷ ಎಂಬ ಹಣೆಪಟ್ಟಿಯಿಂದ ಹೊರಬಂದು ರಾಜ್ಯಾದ್ಯಂತ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ. ಹಿಂದುಳಿದ ಸಮುದಾಯಕ್ಕೆ (ಕುರುಬ) ಸೇರಿದ ವಿಶ್ವನಾಥ್ ಅವರು ಅದೇ ಸಮುದಾದ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಕಡು ವೈರಿ. ಹೀಗಾಗಿ ವಿಶ್ವನಾಥ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಸಿದ್ದರಾಮಯ್ಯ ವಿರುದ್ಧ ಅವರದೇ ಸಮುದಾಯದವರನ್ನು ಮುಂದಿಟ್ಟುಕೊಂಡು ಹೋರಾಡಲು ಅನುಕೂಲವಾಗುತ್ತದೆ. ಜತೆಗೆ ಹಳೆ ಮೈಸೂರು ಹೊರತುಪಡಿಸಿ ರಾಜ್ಯದ ಇತರ ಭಾಗಗಳಲ್ಲಿ ತಮ್ಮದು ಒಕ್ಕಲಿಗರ ಪಕ್ಷವಲ್ಲ ಎಂಬುದನ್ನು ತೋರಿಸಿ ಸಂಘಟನೆ ಬಲಗೊಳಿಸಲು ಸಾಧ್ಯವಾಗುತ್ತದೆ ಎಂಬ ಕಾರಣಗಳಿಂದಾಗಿ. ಇದೀಗ ವಿಶ್ವನಾಥ್ ಹೊರಹೋದರೆ ಜೆಡಿಎಸ್ ಒಕ್ಕಲಿಗರ ಪಕ್ಷ ಎಂಬ ಕೂಗು ಇನ್ನಷ್ಟು ಬಲವಾಗಿ ಸಂಘಟನೆ ಬಲಗೊಳಿಸಲು ಕಷ್ಟವಾಗುತ್ತದೆ.
ಇನ್ನೊಂದೆಡೆ, ವಿಶ್ವನಾಥ್ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಿದರೂ ಕಷ್ಟ. ಮೈತ್ರಿ ವಿಚಾರದಲ್ಲಿ ಆಗಿರುವ ಗೊಂದಲಗಳು, ಅದಕ್ಕೆ ಕಾರಣಕರ್ತರಾದವರ ಬಗ್ಗೆ ಈಗಾಗಲೇ ಬಹಿರಂಗ ಹೇಳಿಕೆಗಳನ್ನು ನೀಡಲು ಆರಂಭಿಸಿರುವ ವಿಶ್ವನಾಥ್ ಅದನ್ನು ಮತ್ತಷ್ಟು ತೀವ್ರಗೊಳಿಸಬಹುದು. ಇದು ಸರ್ಕಾರಕ್ಕೆ ಅಪಾಯ ತಂದೊಡ್ಡಬಹುದು. ಹೀಗಾಗಿ ವಿಶ್ವನಾಥ್ ಅವರನ್ನು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪರಿಸ್ಥಿತಿ ಅಡಕತ್ತರಿಯಲ್ಲಿ ಸಿಕ್ಕಿದಂತಾಗಿದೆ. ವಿಶ್ವನಾಥ್ ಅವರನ್ನು ಮುಂದುವರಿಸಲು ದೇವೇಗೌಡರು ಒಲವು ವ್ಯಕ್ತಪಡಿಸಿದ್ದರೂ, ಪಕ್ಷದ ಸಚಿವರು ಮತ್ತು ಶಾಸಕರು (ಹಳೆ ಮೈಸೂರು ಭಾಗದವರು) ವಿರೋಧ ವ್ಯಕ್ತಪಡಿಸುತ್ತಿದ್ದಾರೆ.