ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರದ ವಿಶ್ವಾಸಮತ ಯಾಚನೆ ಚರ್ಚೆಯಲ್ಲಿ ಒಂದು ವಿಚಾರವನ್ನು ಬಹುತೇಕ ಮಂದಿ ಗುರುತಿಸಿರಬಹುದು. ಮೂರು ರಾಷ್ಟ್ರೀಯ ಪಕ್ಷಗಳ ಶಾಸಕರು ಮತ್ತು ಮೂಲತಃ ಜನತಾ ಪರಿವಾರದಲ್ಲಿದ್ದ ಶಾಸಕರು ಚರ್ಚೆಯಲ್ಲಿ ಭಾಗವಹಿಸಿದ ರೀತಿ.
ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ಸಿನ ಮೂಲ ನಿವಾಸಿಗಳು ಈ ಅಧಿವೇಶನದಲ್ಲಿ ತೀರ ಸಪ್ಪೆಯಾಗಿದ್ದರು. ಮಾತ್ರವಲ್ಲದೆ, ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಮೂಲ ಕಾಂಗ್ರೆಸ್ ನಾಯಕರು ಸರಕಾರದ ಪರವಾಗಿ ವಾದ ಮಂಡಿಸುವ ಗೋಜಿಗೆ ಹೋಗಿಲ್ಲ. ಬಹುಜನ ಸಮಾಜ ಪಾರ್ಟಿಯ ಮಹೇಶ್ ಚರ್ಚೆಯಲ್ಲಿ ನಾಪತ್ತೆಯಾಗಿದ್ದರು. ಹಣ ಥೈಲಿ, ಪ್ರಭಾವ, ಜಾತಿ, ಲಾಬಿಗಳ ಹಿಂದಿ ಬಿದ್ದಿರುವ ರಾಷ್ಟ್ರೀಯ ರಾಜಕೀಯ ಪಕ್ಷಗಳು ಸಮರ್ಥ ಸಂಸದೀಯ ಪಟುಗಳನ್ನು ಬೆಳೆಸುವಲ್ಲಿ ಸೋತಿವೆ ಎಂಬುದರಲ್ಲಿ ಸಂಶಯವಿಲ್ಲ.
ಹಲವು ದಿನಗಳು ನಡೆದ ವಿಶ್ವಾಸ ಚರ್ಚೆಯಲ್ಲಿ ರಾಷ್ಟ್ರೀಯ ಪಕ್ಷಗಳ ಮೂಲ ನಿವಾಸಿಗಳ ಪಾತ್ರ ಮತ್ತು ಮತ್ತು ಜನತಾ ಪರಿವಾರ ಹಾಗೂ ಪ್ರಾದೇಶಿಕ ಪಕ್ಷವಾದ ಜನತಾದಳ ಸದಸ್ಯರು ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿರುವುದು ಗಮನಾರ್ಹ. ಪ್ರಾದೇಶಿಕ ಪಕ್ಷಗಳು ಮತ್ತದರ ಜನಪ್ರತಿನಿಧಿಗಳು ಮಹತ್ವ ಪಡೆಯುವುದೇ ಇಂತಹ ವಿಚಾರಗಳಿಗಾಗಿ.
ವಿರೋಧ ಪಕ್ಷ ಭಾರತೀಯ ಜನತಾ ಪಾರ್ಟಿ ವತಿಯಿಂದ ಸರಕಾರ ವಿರುದ್ಧ ಬಿ. ಎಸ್. ಯಡಿಯೂರಪ್ಪ ದಾಳಿ ನಡೆಸಲು ಉಪಯೋಗಿಸಿದ್ದು ಮಾಧು ಸ್ವಾಮಿ ಅವರನ್ನು. ಮೈತ್ರಿ ಸರಕಾರದ ಕಡೆಯಿಂದ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಹೊರತಾಗಿ ಚರ್ಚೆಯ ನೇತೃತ್ವ ವಹಿಸಿದವರು ಕೃಷ್ಣ ಭೈರೇಗೌಡ. ಇವರಿಬ್ಬರು ಕೂಡ ಚರ್ಚೆಯಲ್ಲಿ ಭಾಗವಹಿಸಿದ ಪ್ರೌಢಿಮೆಯನ್ನು ಇಡೀ ರಾಜ್ಯ ಗಮನಿಸಿದೆ. ಇವರಿಬ್ಬರು ಕೂಡ ಜನತಾ ಪರಿವಾರದ ಕೊಡುಗೆ.

ಜೆ. ಎಚ್. ಪಟೇಲ್ ಸರಕಾರದಲ್ಲಿ 1996ರಿಂದ 1999 ತನಕ ಕೃಷಿ ಸಚಿವರಾಗಿದ್ದ ಕೃಷ್ಣ ಅವರ ತಂದೆ ಭೈರೇಗೌಡ ಸತತವಾಗಿ ಐದು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಅವರು 2003ರಲ್ಲಿ ನಿಧನರಾದಾಗ ಅಕ್ಟೋಬರ್ ತಿಂಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಕೃಷ್ಣ ಕೋಲಾರ ಜಿಲ್ಲೆಯ ವೇಮಗಲ್ ಕ್ಷೇತ್ರದಿಂದ ಜಯಗಳಿಸುತ್ತಾರೆ. ಅನಂತರ ಯುವ ಕಾಂಗ್ರೆಸ್ಸಿನ ರಾಜ್ಯ ಅಧ್ಯಕ್ಷರಾಗುವ ಕೃಷ್ಣ ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಸೋತು, ಕಳೆದ ಎರಡು ಸರಕಾರಗಳಲ್ಲಿ ಸಚಿವರಾಗಿ ಇದೀಗ ಮುಕ್ತಾಯಗೊಂಡ ಅಧಿವೇಶನದಲ್ಲಿ ಕೃಷ್ಣ ಭೈರೇಗೌಡರನ್ನು ಶಾಸಕಾಂಗದ ಪಕ್ಷದ ನಾಯಕ ಸಿದ್ದರಾಮಯ್ಯ ಒರೆಗೆ ಹಚ್ಚಿ ಸಂಸದೀಯ ಪಟು ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಜೆ. ಸಿ. ಮಾಧುಸ್ವಾಮಿ ಮೊದಲಿಗೆ ಜನತಾದಳದಿಂದ, ಅನಂತರ ಸ್ವತಂತ್ರನಾಗಿ, ಆಮೇಲೆ ಜೆಡಿಎಸ್ ನಿಂದ ಶಾಸಕರಾಗಿ ಯಡಿಯೂರಪ್ಪ ಅವರ ಕೆಜೆಪಿಯಲ್ಲಿ ಸೋತರೂ ಅನಂತರ ಬಿಜೆಪಿಯಲ್ಲಿ ಗೆಲ್ಲುತ್ತಾರೆ. ಮಾಧುಸ್ವಾಮಿ ಇದೇ ಮೊದಲಲ್ಲ, ಈ ಹಿಂದೆ ಶಾಸಕರಾಗಿದ್ದಾಗ ಉತ್ತಮ ಸಂಸದೀಯ ಪಟು ಎಂದು ಗುರುತಿಸಿಕೊಂಡವರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ, ಜೆ. ಎಚ್. ಪಟೇಲ್, ಎಚ್. ಡಿ. ದೇವೇಗೌಡ ಅವರೊಂದಿಗೆ ಪಳಗಿದವರು. ಸಿದ್ದರಾಮಯ್ಯನವರ ಸದನದ ಭಾಷಣ, ವ್ಯಾಕರಣ ಪಾಠ, ವಚನಗಳ ವಿಮರ್ಶೆ ಇತ್ಯಾದಿಗಳ ಬಗ್ಗೆ ಇಲ್ಲಿ ಉಲ್ಲೇಖಿಸುವ ಅಗತ್ಯವಿಲ್ಲ.
ಅಧಿವೇಶನವನ್ನು ಚೆನ್ನಾಗಿ ಮುನ್ನಡೆಸುವ ಹಾಲಿ ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್ ಮತ್ತು ಕಂದಾಯ ಸಚಿವರಾಗಿದ್ದ ಆರ್. ವಿ. ದೇಶಪಾಂಡೆ ಮೂಲದಲ್ಲಿ ಕಾಂಗ್ರೆಸ್ಸಿನವರೇ ಆಗಿದ್ದರೂ ಜನತಾ ಪರಿವಾರದ ಒಡನಾಡಿಗಳು. ರಮೇಶ್ ಕುಮಾರ್ ಒಂದು ಬಾರಿ ಜನತಾಪಾರ್ಟಿಯಿಂದ ಮತ್ತೊಂದು ಬಾರಿ ಜನತಾದಳದಿಂದ ಶಾಸಕರಾಗಿ 2004ರಲ್ಲಿ ಕಾಂಗ್ರೆಸ್ ಸೇರಿದ್ದರು. ಮೂಲತಃ ಸಿನಿಮಾ ನಿರ್ಮಾಪಕ-ವಿತರಕರಾಗಿದ್ದ ಎಚ್. ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ವಿಚಾರಗಳನ್ನು ಮಂಡಿಸುವಲ್ಲಿ ಸಮರ್ಥರಾಗಿದ್ದಾರೆ. ವಿಶ್ವಾಸ ಕಲಾಪದಲ್ಲಿ ಗಮನಸೆಳೆದ ಶಿವಲಿಂಗೇಗೌಡ ಮತ್ತು ಮಾರ್ಮಿಕವಾಗಿ ಮಾತನಾಡಿದ ವಿರಳ ರಾಜಕಾರಣಿ ಎ. ಟಿ. ರಾಮಸ್ವಾಮಿ ಜೆಡಿಎಸ್ ಸದಸ್ಯರು. ಗ್ರಾಮೀಣ ಸೊಗಡಿನಲ್ಲಿ ಮುಗ್ಧವಾಗಿ ಮಾತುಗಳನ್ನು ಹರಿಯಬಿಟ್ಟ ನಾರಾಯಣಸ್ವಾಮಿ ಅವರು ಕೂಡ ಮೂಲದಲ್ಲಿ ಜನತಾ ಪರಿವಾರದವರೇ ಆಗಿದ್ದಾರೆ.
ಇದೀಗ ಮುಖ್ಯಮಂತ್ರಿ ಆಗುತ್ತಿರುವ ಯಡಿಯೂರಪ್ಪ ಸದನದ ಚರ್ಚೆಯಲ್ಲಿ ಭಾಗವಹಿಸಲಿಲ್ಲ. ಸದನದಲ್ಲಿ ಮುಖಂಡನಾಗಿ ಏನು ಹೇಳಿಕೆ ನೀಡಬೇಕು ಅದನ್ನು ಅಚ್ಚುಕಟ್ಟಾಗಿ ಹೇಳಿ ಮುಗಿಸುವವರು ಯಡಿಯೂರಪ್ಪ. ಬಿಜೆಪಿಯವರು ತಂತ್ರಗಾರಿಕೆಯ ಭಾಗವಾಗಿ ಚರ್ಚೆಯಲ್ಲಿ ಭಾಗವಹಿಸದೆ ಸುಮ್ಮನಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ಘಟಾನುಘಟಿ ಮುಖಂಡರು, ಸಚಿವರು, ಸಚಿವರು ಆಗುವವರು, ಮುಖ್ಯಮಂತ್ರಿ ಆಗುವವರು ಹಲವು ಮಂದಿ ಇದ್ದರೂ ಗಮನ ಸೆಳೆಯುವ ಪ್ರೌಢಿಮೆಯ ಚರ್ಚೆಯನ್ನು ಸದನದ ಮುಂದಿಡುವಲ್ಲಿ ಸಫಲರಾಗಲಿಲ್ಲ. ಕೇವಲ ವಿಶ್ವಾಸಮತ ಯಾಚನೆ ಮಾತ್ರವಲ್ಲದೆ ಇತರ ಅಧಿವೇಶನಗಳಲ್ಲೂ ರಾಜಕೀಯ ಓದು, ಇತಿಹಾಸದ ಮೆಲುಕು ಹಾಕಬಲ್ಲ, ಕಾನೂನು ಪರಿಧಿಗಳನ್ನು ಅರಿತುಕೊಂಡು ಮತಾನಾಡಬಲ್ಲ ಸಮರ್ಥ ಸಂಸದೀಯ ಪಟುಗಳು ಈ ರಾಷ್ಟ್ರೀಯ ಪಕ್ಷಗಳಲ್ಲಿ ತುಂಬಾ ಕಡಿಮೆ ಜನ ಇದ್ದಾರೆ ಎಂಬುದನ್ನು ಒಪ್ಪತಕ್ಕ ವಿಚಾರವಾಗಿದೆ.
ಕ್ಲಿಷ್ಟ ಸಂದರ್ಭಗಳಲ್ಲಿ ಸರಕಾರವನ್ನು ಸಮರ್ಥಿಸಕೊಳ್ಳಬಲ್ಲ, ಸೂಕ್ತ ಸಂದರ್ಭಗಳಲ್ಲಿ ಸರಕಾರವನ್ನು ಸಿಕ್ಕಿಸಿ ಹಾಕಬಲ್ಲ ಸಂಸದೀಯ ಪಟುಗಳು ಎರಡೂ ಕಡೆಗೂ ಅಗತ್ಯವಿದೆ. ಆದರೆ, ಇಂದಿನ ಬದಲಾದ ಸನ್ನಿವೇಶದಲ್ಲಿ ಲೋಕಸಭೆ ಸೇರಿದಂತೆ ಸದನಗಳಲ್ಲಿ ಚರ್ಚೆಯ ಗುಣಮಟ್ಟ ಗಮನಾರ್ಹವಾಗಿ ಕುಸಿಯುತ್ತಿರುವುದು ವಾಸ್ತವ. ಈ ರಾಜಕೀಯ ಪಕ್ಷಗಳು ಕೋಟ್ಯಾಧಿಪತಿಗಳಿಗೆ ಮಣೆ ಹಾಕುತ್ತಿರುವುದೇ ಇದಕ್ಕೆ ಮೂಲ ಕಾರಣ.
ಅದರಲ್ಲೂ ಕಾಂಗ್ರೆಸ್ಸಿನ ಇಂದಿನ ಪರಿಸ್ಥಿತಿ ಅತ್ಯಂತ ಹೀನಾಯವಾಗಿದೆ. ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆ ಮತ್ತು ಈ ಬಾರಿ ಅಧೀರ್ ರಂಜನ್ ಚೌಧರಿ ಅವರನ್ನು ಹೊರತುಪಡಿಸಿದರೆ ಅರ್ಧ ಡಜನ್ ಸಮರ್ಥ ವಾಗ್ಮಿಗಳನ್ನು ಗೆಲ್ಲಿಸಿಕೊಳ್ಳಲು ಸಾಧ್ಯ ಆಗಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರಿಲ್ಲದಿದ್ದರೆ ಕಾಂಗ್ರೆಸ್ ಪರಿಸ್ಥಿತಿ ಯಾವಾಗಲೋ ಮುಗಿದುಹೋಗುತಿತ್ತು ಎಂಬ ಪರಿಸ್ಥಿತಿ ಇತ್ತು. ಆದರೂ, ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಎಚ್ಚರ ಆಗಿಲ್ಲ. ಬಿಜೆಪಿ ಮತ್ತು ಬಿಎಸ್ಪಿಯ ಉದ್ದೇಶಗಳೇ ಬೇರೆ ಇವೆ.