ಮೈತ್ರಿ ಸರ್ಕಾರದ ಸಂಕಷ್ಟ ಮುಂದುವರಿಯುತ್ತಲೇ ಇದೆ. ಸ್ಪೀಕರ್ ಅವರಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ನೀಡಿರುವ ರಾಜಿನಾಮೆ, ಈ ರೀತಿ ರಾಜಿನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಕಾಂಗ್ರೆಸ್ ಮತ್ತು ಜೆಡಿಎಸ್ ನೀಡಿರುವ ದೂರುಗಳ ಕುರಿತು ಯತಾಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್ ಸ್ಪೀಕರ್ ಅವರಿಗೆ ನಿರ್ದೇಶನ ನೀಡಿದ ಬೆನ್ನಲ್ಲೇ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿಶ್ವಾಸಮತ ಯಾಚಿಸಲು ಮುಂದಾಗಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಶಾಸಕರ ರಾಜಿನಾಮೆ ವಿವಾದ ಬಗೆಹರಿಯುವ ಮುನ್ನವೇ ವಿಶ್ವಾಸಮತ ಯಾಚಿಸುವುದಾಗಿ ಸದನದಲ್ಲಿ ಘೋಷಿಸಿದ ಕುಮಾರಸ್ವಾಮಿ ಅವರು, ಅದಕ್ಕಾಗಿ ಸಮಯ ನಿಗದಿಪಡಿಸಿ ಎಂದು ಸ್ಪೀಕರ್ ಅವರನ್ನು ಕೋರಿದ್ದಾರೆ. ಮುಖ್ಯಮಂತ್ರಿಯವರ ಈ ಅಚ್ಚರಿಯ ತೀರ್ಮಾನದ ಬಗ್ಗೆ ನಾನಾ ರೀತಿಯ ವಿಶ್ಲೇಷಣೆಗಳು ನಡೆಯುತ್ತಿದ್ದರೂ ಈ ತೀರ್ಮಾನದ ಹಿಂದಿರುವ ಉದ್ದೇಶ ಒಂದೆ. ಅದು, ರಾಜಿನಾಮೆ ನೀಡಿದ ಮೈತ್ರಿ ಪಕ್ಷದ ಶಾಸಕರು ತಮ್ಮ ನಿರ್ಧಾರದಿಂದ ಹಿಂದೆ ಸರಿದು ರಾಜಿನಾಮೆ ವಾಪಸ್ ಪಡೆಯದಿದ್ದರೆ ಸರ್ಕಾರ ಉಳಿಯುವುದಿಲ್ಲ ಎಂಬುದು ಮುಖ್ಯಮಂತ್ರಿಗಳಿಗೆ ಸ್ಪಷ್ಟವಾಗಿದೆ. ಇತರರಿಂದ ಹೇಳಿಸಿಕೊಳ್ಳುವ ಬದಲು ತಾವಾಗಿಯೇ ಪ್ರಬುದ್ಧ ನಿರ್ಧಾರ ಕೈಗೊಳ್ಳುತ್ತೇನೆ ಎಂದು ವಿಶ್ವಾಸಮತ ಯಾಚಿಸುವುದಾಗಿ ಹೇಳಿದ್ದಾರಷ್ಟೆ.
ಮುಖ್ಯಮಂತ್ರಿಗಳ ಈ ಅನಿರೀಕ್ಷಿತ ನಿರ್ಧಾರಕ್ಕೆ ಕಾರಣಗಳೂ ಇಲ್ಲದಿಲ್ಲ. ಪ್ರಸ್ತುತ 16 ಶಾಸಕರು ರಾಜಿನಾಮೆ ನೀಡಿದ್ದು, ಇಬ್ಬರು ಪಕ್ಷೇತರರು ಬೆಂಬಲ ವಾಪಸ್ ಪಡೆದಿದ್ದಾರೆ. ಶಾಸಕರ ರಾಜಿನಾಮೆ ಅಂಗೀಕಾರವಾಗುವವರೆಗೆ ಸರ್ಕಾರಕ್ಕೆ ಅಪಾಯ ಇಲ್ಲವಾದರೂ ಅದು ಎಷ್ಟು ದಿನ ಎಂದು ಹೇಳಲು ಸಾಧ್ಯವಿಲ್ಲ. ಪ್ರಸ್ತುತ ವಿಧಾನಮಂಡಲ ಕಲಾಪ ನಡೆಯುತ್ತಿದ್ದು, ರಾಜಿನಾಮೆ ನೀಡಿದ ಶಾಸಕರು ಸದನಕ್ಕೆ ಹಾಜರಾಗದಿದ್ದರೆ ಸರ್ಕಾರಕ್ಕೆ ಬಹುಮತವಿಲ್ಲದೆ ಯಾವುದೇ ನಿರ್ಧಾರ ಕೈಗೊಳ್ಳಲು ಮುಂದಾದರೂ ಅದಕ್ಕೆ ಬಿಜೆಪಿ ಅಡ್ಡಿಪಡಿಸುತ್ತದೆ. ಇಲ್ಲವಾದರೆ ಬಿಜೆಪಿಯೇ ಅವಿಶ್ವಾಸ ನಿರ್ಣಯ ಮಂಡಿಸಬಹುದು. ಅಷ್ಟೇ ಅಲ್ಲ, ಈ ಬಾರಿ ಹಣಕಾಸು ವಿಧೇಯಕದಂತಹ ಪ್ರಮುಖ ವಿಧೇಯಕಗಳಿದ್ದು, ಅದಕ್ಕೆ ಸದನದಲ್ಲಿ ಅಂಗೀಕಾರ ಸಿಗದೇ ಇದ್ದರೆ ಅನಿವಾರ್ಯವಾಗಿ ರಾಜಿನಾಮೆ ನೀಡಲೇ ಬೇಕು. ಈ ರೀತಿ ಅವಮಾನ ಎದುರಿಸುವ ಬದಲು ತಾವಾಗಿಯೇ ವಿಶ್ವಾಸಮತ ಯಾಚಿಸಿಸುವುದೇ ಸೂಕ್ತ. ವಿಶ್ವಾಸಮತ ಯಾಚಿಸಲು ಸಾಧ್ಯವಾಗದೆ ರಾಜಿನಾಮೆ ನೀಡಬೇಕಾಗಿ ಬಂದರೆ, ಸದನದಲ್ಲಿ ಇದುವರೆಗೂ ಹೆಜ್ಜೆ ಹೆಜ್ಜೆಗೂ ಅಡ್ಡಿಯಾಗಿ ನಿಂತ ಬಿಜೆಪಿ ವಿರುದ್ಧ ಮಾತನಾಡಿ ಅದನ್ನೊಂದು ದಾಖಲೆಯಾಗಿ ಮಾಡಿ ಬಳಿಕ ರಾಜಿನಾಮೆ ನೀಡಬಹುದು ಎಂಬ ಕಾರಣಕ್ಕೆ ಮುಖ್ಯಮಂತ್ರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ.
ಆದರೆ, ವಿಶ್ವಾಸಮತ ಯಾಚನೆ ಸೇರಿದಂತೆ ಎಲ್ಲಾ ಬೆಳವಣಿಗೆಗಳು (ವಿಶ್ವಾಸಮತ ಯಾಚನೆ ನಿರ್ಣಯದ ವಿರುದ್ಧ ಮತ ಹಾಕುವ ಶಾಸಕರ ಅನರ್ಹತೆ ಸೇರಿದಂತೆ) ಸುಪ್ರೀಂ ಕೋರ್ಟ್ ತೀರ್ಪಿಗೆ ಅನ್ವಯವಾಗಿರುತ್ತದೆ. ಏಕೆಂದರೆ, ಶಾಸಕರ ರಾಜಿನಾಮೆ, ಅನರ್ಹತೆ ವಿಚಾರಗಳು ಸ್ಪೀಕರ್ ಮುಂದೆ ನಿರ್ಣಯವಾಗುವ ಮುನ್ನವೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಸ್ಪೀಕರ್ ಅವರಿಗೆ ಆದೇಶ ನೀಡುವ ಅಧಿಕಾರ ಸುಪ್ರೀಂ ಕೋರ್ಟ್ ಗೆ ಇದೆಯೇ ಎಂಬ ಜಿಜ್ಞಾಸೆಯ ಮಧ್ಯೆಯೇ ಶಾಸಕರ ರಾಜಿನಾಮೆ ಮತ್ತು ಅನರ್ಹತೆ ವಿಚಾರದಲ್ಲಿ ಯತಾಸ್ಥಿತಿ ಕಾಪಾಡಿಕೊಳ್ಳುವಂತೆ ಸ್ಪೀಕರ್ ಅವರಿಗೆ ಸೂಚಿಸುವ ಮೂಲಕ ಸ್ಪೀಕರ್ ಅವರಿಗೆ ನಿರ್ದೇಶನ ನೀಡುವ ಅಧಿಕಾರ ತನಗಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದಂತಾಗಿದೆ.
ಇದರ ಮಧ್ಯೆ ಶಾಸಕರ ರಾಜಿನಾಮೆ ಮತ್ತು ಅನರ್ಹತೆ ಕುರಿತ ಪ್ರಕರಣಗಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಬಹುದಾದ ಆದೇಶಗಳು, ಸ್ಪೀಕರ್ ಅವರ ಮುಂದಿನ ನಡೆ, ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚನೆಗೆ ಮುಂದಾಗಿರುವ ವಿಚಾರಗಳ ಕುರಿತು ನಾನಾ ಚರ್ಚೆ, ಕಾನೂನು ವಿಶ್ಲೇಷಣೆಗಳು ನಡೆಯುತ್ತಿವೆ. ಸದನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದ್ದ ಬಿಜೆಪಿ ಮತ್ತು ರಾಜಿನಾಮೆ ನೀಡಿರುವ ಶಾಸಕರಿಗೆ ವಿಶ್ವಾಸಮತ ಯಾಚನೆ ಕುರಿತು ಮುಖ್ಯಮಂತ್ರಿಗಳ ಏಕಾಏಕಿ ಹೇಳಿಕೆ ಅಚ್ಚರಿ ಜತೆಗೆ ಕೊಂಚ ಗಲಿಬಿಲಿಯನ್ನೂ ಉಂಟುಮಾಡಿದೆ. ಇನ್ನೇನು ಮುಖ್ಯಮಂತ್ರಿಗಳು ರಾಜಿನಾಮೆ ನೀಡಿ ಸರ್ಕಾರ ಉರುಳುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿ ಮತ್ತು ಅತೃಪ್ತ ಶಾಸಕರು ತಮ್ಮ ಮುಂದಿನ ನಡೆ ನಿರ್ಧರಿಸಲು ಸ್ವಲ್ಪ ಯೋಚಿಸುವಂತಾಗಿದೆ.
ಇಷ್ಟೆಲ್ಲಾ ಇದ್ದರೂ ಸರ್ಕಾರ ಮತ್ತು ಅತೃಪ್ತ ಶಾಸಕರ ಸೋಲು-ಗೆಲುವು ಅವಲಂಬಿತವಾಗಿರುವುದುಈ ಮೂರು ವಿಚಾರಗಳ ಮೇಲೆ ಮಾತ್ರ.
1. ಶಾಸಕರ ರಾಜಿನಾಮೆ ಮತ್ತು ಅನರ್ಹತೆ ವಿಚಾರದಲ್ಲಿ ಮಂಗಳವಾರ ಸುಪ್ರೀಂ ಕೋರ್ಟ್ ಯಾವ ರೀತಿಯ ಆದೇಶ ನೀಡುತ್ತದೆ? ರಾಜಿನಾಮೆ ನೀಡಿದ ಶಾಸಕರಿಗೆ ವಿಪ್ ಜಾರಿಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ?
2. ಶಾಸಕರ ರಾಜಿನಾಮೆ ಮತ್ತು ಅನರ್ಹತೆ ವಿಚಾರದಲ್ಲಿ ಸ್ಪೀಕರ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ? ಸುಪ್ರೀಂ ಕೋರ್ಟ್ ಆದೇಶ ಪಾಲಿಸುತ್ತಾರೆಯೇ ಅಥವಾ ತಮ್ಮ ಅಧಿಕಾರ ಬಳಸಿ ತೀರ್ಮನ ಕೈಗೊಳ್ಳುತ್ತಾರೆಯೇ? ಇದರಿಂದ ಅತೃಪ್ತರು ಬಚಾವಾಗುತ್ತಾರೆಯೇ?
3. ರಾಜಿನಾಮೆ ಪ್ರಕರಣ ಇತ್ಯರ್ಥಗೊಳಿಸಿದ ಬಳಿಕ ವಿಶ್ವಾಸಮತ ಯಾಚನೆ ಮಾಡಿ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದರೆ ಆಗ ಸ್ಪೀಕರ್ ಮತ್ತು ಮೈತ್ರಿ ಸರ್ಕಾರ ಯಾವ ರೀತಿಯ ನಿರ್ಧಾರಕ್ಕೆ ಬರಬಹುದು? ಮುಂದಿನ ಬೆಳವಣಿಗಳು ಯಾರ ತೀರ್ಮಾನ ಅವಲಂಬಿತವಾಗಿರುತ್ತದೆ?

ಶಾಸಕರ ರಾಜಿನಾಮೆ, ರಾಜಿನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಬೇಕು ಎಂಬ ಅರ್ಜಿ ಹಾಗೂ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವುದು ಪರಸ್ಪರ ಸಂಬಂಧ ಹೊಂದಿದೆ. ಹೀಗಾಗಿ ರಾಜಿನಾಮೆ ನೀಡಿದ ಅತೃಪ್ತ ಶಾಸಕರ ಪರ ವಕೀಲರು ಮಂಗಳವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ವೇಳೆ ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚಿಸಲು ಮುಂದಾಗಿರುವ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರುವುದು ಖಚಿತ. ನಮ್ಮ ರಾಜಿನಾಮೆ ಕುರಿತು ಸ್ಪೀಕರ್ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಅದರ ಮಧ್ಯೆಯೇ ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚನೆಗೆ ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ವಿಶ್ವಾಸಮತ ಯಾಚನೆ ವೇಳೆ ಕಡ್ಡಾಯವಾಗಿ ಸದನದಲ್ಲಿ ಹಾಜರಿದ್ದು, ಸರ್ಕಾರದ ಪರ ಮತ ಹಾಕುವಂತೆ ವಿಪ್ ಜಾರಿ ಮಾಡಬಹುದು. ಮೈತ್ರಿ ಸರ್ಕಾರದ ಆಡಳಿತದಿಂದ ಬೇಸತ್ತು ನಾವು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇವೆ. ಹೀಗಿರುವಾಗ ಸದನದಲ್ಲಿ ಹಾಜರಾಗಿ ಸರ್ಕಾರದ ಪರ ಮತ ಹಾಕುವಂತೆ ವಿಪ್ ಜಾರಿಗೊಳಿಸಿದರೆ ಅದನ್ನು ಪಾಲಿಸಲು ನಮ್ಮಿಂದ ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ವಿಪ್ ಉಲ್ಲಂಘನೆ ಆರೋಪದ ಮೇಲೆ ನಮ್ಮನ್ನು ಅನರ್ಹಗೊಳಿಸಬಹುದು. ಆದ್ದರಿಂದ ರಾಜಿನಾಮೆ ಪ್ರಕರಣ ಇತ್ಯರ್ಥವಾಗದೆ ವಿಶ್ವಾಸಮತ ಯಾಚನೆಗೆ ಅವಕಾಶ ಬೇಡ ಎಂದು ಅತೃಪ್ತ ಶಾಸಕರು ವಾದ ಮಂಡಿಸಬಹುದು.
ಸುಪ್ರೀಂ ಆದೇಶದ ಬಗ್ಗೆಯೇ ಕುತೂಹಲ
ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನೀಡುವ ಆದೇಶ ಅತ್ಯಂತ ಕುತೂಹಲಕಾರಿ. ಏಕೆಂದರೆ, ಈ ರೀತಿ ಶಾಸಕರು ರಾಜಿನಾಮೆ ನೀಡಿ ಅದು ಅಂಗೀಕಾರವಾಗುವ ಅಥವಾ ಶಾಸಕರು ರಾಜಿನಾಮೆ ವಾಪಸ್ ಪಡೆಯುವ ಮುನ್ನವೇ ಮುಖ್ಯಮಂತ್ರಿ ವಿಶ್ವಾಸಮತ ಯಾಚನೆ ಮಾಡಲು ಮುಂದಾಗಿರುವುದು ಇದೇ ಮೊದಲ ಪ್ರಕರಣ. ಇಂತಹ ಪ್ರಕರಣಗಳಲ್ಲಿ ಸ್ಪೀಕರ್, ಸದನ, ವಿಶ್ವಾಸಮತ ಯಾಚನೆ ವಿಷಯಗಳಿಗೆ ನಿಯಮಾವಳಿಗಳು ಯಾವ ರೀತಿ ಇದೆ ಎಂಬುದು ಅಸ್ಪಷ್ಟ. ವಿಧಾನಸಭೆಯ ಸದಸ್ಯ ಬಲ ಹೆಚ್ಚುಕಮ್ಮಿಯಾದಾಗ ತಮ್ಮ ಬಗ್ಗೆ ಸದನಕ್ಕೆ ವಿಶ್ವಾಸವಿದೆ ಎಂಬುದನ್ನು ತೋರಿಸಿಕೊಳ್ಳಲು ಮುಖ್ಯಮಂತ್ರಿಗಳು ವಿಶ್ವಾಸಮತ ಯಾಚಿಸಿ ಅದರಲ್ಲಿ ಸೋತಿದ್ದೋ, ಗೆದ್ದಿದ್ದೋ ಇದೆ. ಆದರೆ, ಶಾಸಕರು ರಾಜಿನಾಮೆ ನೀಡಿ ಅದು ಅಂಗೀಕಾರವಾಗದೆ ಸದನದ ಸದಸ್ಯ ಬಲ ಯತಾಸ್ಥಿತಿ ಇರುವಾಗ ವಿಶ್ವಾಸಮತ ಯಾಚಿಸಿದ ಉದಾಹರಣೆ ಇಲ್ಲ. ಈ ಕಾರಣದಿಂದಲಾದರೂ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕಾಗುತ್ತದೆ.
ಈ ಎಲ್ಲಾ ಕಾರಣಗಳಿಂದಾಗಿ ಮುಖ್ಯಮಂತ್ರಿಗಳ ವಿಶ್ವಾಸಮತ ಯಾಚನೆಗಿಂತ ಮುಖ್ಯವಾಗಿ ಸುಪ್ರೀಂ ಕೋರ್ಟ್ ನಲ್ಲಿ ಮಂಗಳವಾರ ನಡೆಯಲಿರುವ ವಿಚಾರಣೆ ಬಳಿಕ ಕೋರ್ಟ್ ನೀಡುವ ನಿರ್ದೇಶನಗಳೇ ಮೈತ್ರಿ ಸರ್ಕಾರದ ಅಳಿವು-ಉಳಿವು ನಿರ್ಧರಿಸಲಿದೆ.