ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಉತ್ತಮ ಆಡಳಿತ ನೀಡುವ ಭರವಸೆಯೊಂದಿಗೆ ಅಧಿಕಾರದ ಗದ್ದುಗೆ ಏರಿದ್ದಾರೆ. ಆ ಮೂಲಕ ಮೈತ್ರಿ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬರುವ ಕನಸು ಈಡೇರಿರುವುದರಿಂದ ಒಂದು ರೀತಿಯ ತೃಪ್ತಿ, ಖುಷಿ, ಸಮಾಧಾನ ಅವರಲ್ಲಿ ಮೂಡಿದೆ. ಆದರೆ, ಇದರಲ್ಲಿ ಮೈಮರೆಯುವಂತಿಲ್ಲ. ಏಕೆಂದರೆ, ಅಧಿಕಾರದ ಜತೆಗೆ ಸವಾಲುಗಳ ಸರಮಾಲೆಯೂ ಯಡಿಯೂರಪ್ಪ ಅವರ ಬೆನ್ನೇರಿದೆ. ರಾಜ್ಯದ ಮತದಾರ ತನಗೆ ಪೂರ್ಣ ಪ್ರಮಾಣದಲ್ಲಿ ಬಹುಮತ ನೀಡದೇ ಇದ್ದರೂ ಬೇರೆಯದೇ ದಾರಿ ಹಿಡಿದು ಅಧಿಕಾರಕ್ಕೇರಿರುವ ಯಡಿಯೂರಪ್ಪ ಅವರಿಗೆ ಅದನ್ನು ಉಳಿಸಿಕೊಳ್ಳುವುದರ ಜತೆಗೆ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗದಂತೆ ಆಡಳಿತ ನಡೆಸಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಅವರ ಆಡಳಿತದ ಬಗ್ಗೆ ಸಾಕಷ್ಟು ನಿರೀಕ್ಷೆಯ ಜತೆಗೆ ಕುತೂಹಲವೂ ಇದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ಬಳಿಕ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರೊಬ್ಬರೇ ಅಧಿಕಾರ ಸ್ವೀಕರಿಸಿದ್ದಾರೆ. ಸದನದಲ್ಲಿ ಸರ್ಕಾರ ಬಹುಮತ ಸಾಬೀತುಪಡಿಸಿದ ಬಳಿಕವಷ್ಟೇ ಅವರು ಸಂಪುಟ ರಚನೆ ಮಾಡಲಿದ್ದಾರೆ. ಸದ್ಯದ ಮಟ್ಟಿಗೆ ಬಹುಮತ ಸಾಬೀತುಪಡಿಸಲು ಸಮಸ್ಯೆಯೇನೂ ಆಗದು. ಆದರೆ, ನಂತರ ಸಂಪುಟ ರಚನೆ ಮತ್ತು ಆಡಳಿತ ನಡೆಸುವುದೇ ಯಡಿಯೂರಪ್ಪ ಅವರ ಮುಂದಿರುವ ಪ್ರಮುಖ ಸವಾಲುಗಳು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಆಡಳಿತದ ಮೂಲಕ ಎರಡನೇ ಬಾರಿ ಇನ್ನಷ್ಟು ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆಯಿದ್ದು, ಕೇಂದ್ರದ ಮಾದರಿಯ ಆಡಳಿತ ಬಯಸುತ್ತಾರೆ. ಸವಾಲುಗಳನ್ನು ಕಟ್ಟಿಕೊಂಡೇ ಯಡಿಯೂರಪ್ಪ ಅವರು ಜನರ ನಿರೀಕ್ಷೆ ಮುಟ್ಟಲು ಪ್ರಯತ್ನಿಸಬೇಕು. ಜತೆಗೆ ತಮ್ಮದೇ ಪಕ್ಷದ ನೇತೃತ್ವದಲ್ಲಿ ನಡೆಯುತ್ತಿರುವ ಕೇಂದ್ರ ಸರ್ಕಾರ ಮತ್ತು ಬಿಜೆಪಿಗೆ ಮುಜುಗರವಾಗದಂತೆಯೂ ನೋಡಿಕೊಳ್ಳಬೇಕು.
ಈಗಾಗಲೇ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಲು ಇಷ್ಟೊಂದು ಹೋರಾಟ ನಡೆಸಿದ ಮೂಲ ಉದ್ದೇಶ ಅಧಿಕಾರಕ್ಕೆ ಬರುವುದಕ್ಕಿಂತಲೂ ಮಾದರಿ ಆಡಳಿತ ನೀಡಿ ಹಿಂದಿನ ಅವಧಿಯಲ್ಲಿ (2008-10) ತಮ್ಮ ಮೇಲೆ ಮತ್ತು ತಮ್ಮ ನೇತೃತ್ವದ ಸರ್ಕಾರದ ಮೇಲೆ ಬಂದ ಭ್ರಷ್ಟಾಚಾರ, ದುರಾಡಳಿತ ಮುಂತಾದ ಆರೋಪಗಳಿಂದ ಮುಕ್ತರಾಗುವುದು. ಈಗಾಗಲೇ ಈ ಮಾತನ್ನು ತಮ್ಮ ಆಪ್ತ ವಲಯ ಮಾತ್ರವಲ್ಲ, ಪಕ್ಷದ ಬಹುತೇಕ ಎಲ್ಲರಿಗೂ ಸ್ಪಷ್ಟವಾಗಿ ಹೇಳಿದ್ದಾರೆ. ತಮ್ಮ ಈ ಹೆಜ್ಜೆಗೆ ಹೆಜ್ಜೆ ಹಾಕಿ ನಡೆಯುವಂತೆ ಸೂಚನೆಯನ್ನೂ ನೀಡಿದ್ದಾರೆ. ಆದರೆ, ಅಂತಹ ಆಡಳಿತ ನೀಡಲು ಅವರ ಮುಂದೆ ಸವಾಲುಗಳ ಸರಮಾಲೆಯೇ ಇದೆ. ಅದೆಲ್ಲವನ್ನೂ ಅವರು ಮೆಟ್ಟಿ ನಿಲ್ಲಬೇಕು.

ಯಡಿಯೂರಪ್ಪ ಮುಂದಿರುವ ಪ್ರಮುಖ ಸವಾಲುಗಳು
1. ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಜೆಪಿ ಸರ್ಕಾರ ಸಾಕಷ್ಟು ಹೆಸರು ಕೆಡಿಸಿಕೊಂಡಿತ್ತು. ಹೀಗಾಗಿ ಅಂತಹ ತಪ್ಪುಗಳಾಗದಂತೆ ಹೈಕಮಾಂಡ್ ನಾಯಕರು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಯಡಿಯೂರಪ್ಪ ಅವರ ಆಡಳಿತವನ್ನು ಭೂತಗನ್ನಡಿಯಲ್ಲಿ ನೋಡುತ್ತಿರುತ್ತಾರೆ. ಅವರಿಗೆ ತೃಪ್ತಿಯಾಗುವಂತೆ ಆಡಳಿತ ನಡೆಸಬೇಕು.
2. ಯಡಿಯೂರಪ್ಪ ಜತೆಗಿರುವವರು ಅದರಲ್ಲೂ ಅವರ ಸುತ್ತಮುತ್ತ ತಿರುಗಾಡುತ್ತಿರುವ ಬಹುತೇಕ ಶಾಸಕರು ಅಧಿಕಾರದ ಆಸೆ ಇಟ್ಟುಕೊಂಡೇ ಆ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಹೆಚ್ಚಿನ ಸ್ಥಾನಮಾನ ನೀಡಿದರೆ ಕಳೆದ ಸರ್ಕಾರದ ಅವಧಿಯಲ್ಲಿ ಆದಂತೆ ಪಕ್ಷದಲ್ಲಿ ಗುಂಪುಗಾರಿಕೆ ಹೆಚ್ಚಾಗಬಹುದು. ಇದು ಆಡಳಿತ ಮಾತ್ರವಲ್ಲ, ಪಕ್ಷದ ಮೇಲೂ ಪ್ರತೀಕೂಲ ಪರಿಣಾಮ ಬೀರಬಹುದು.
3. ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಮೈತ್ರಿ ಸರ್ಕಾರ ಉರುಳಲು ಕಾರಣರಾದವರ ಜತೆಗೆ ಪಕ್ಷದಲ್ಲಿದ್ದವರಿಗೂ ಸಚಿವ ಸಂಪುಟ, ನಿಗಮ-ಮಂಡಳಿಗಳಲ್ಲಿ ಅವಕಾಶ ನೀಡಬೇಕು. ಇರುವ ಕೆಲವೇ ಸ್ಥಾನಗಳನ್ನು ಅಸಮಾಧಾನ ಭುಗಿಲೇಳದಂತೆ ಹಂಚಿಕೆ ಮಾಡಿ ಸರ್ಕಾರ ಯಾವುದೇ ಅಡೆತಡೆಯಿಲ್ಲದಂತೆ ನಡೆಸಿಕೊಂಡು ಹೋಗಬೇಕು. ಆಡಳಿತದ ಜತೆಗೆ ರಾಜಕೀಯವಾಗಿಯೂ ಎಡವಬಾರದು.
4. ಆಡಳಿತದಲ್ಲಿ ತಾವು ಮಾತ್ರವಲ್ಲ, ಸಂಪುಟ ಸದಸ್ಯರೂ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಜತೆಗೆ ಕುಟುಂಬ ಸದಸ್ಯರು ಆಡಳಿತದ ಆಗುಹೋಗುಗಳಲ್ಲಿ ಕೈಯಾಡಿಸಲು ಅವಕಾಶ ನೀಡಬಾರದು. (ಹಿಂದಿನ ಅವಧಿಯಲ್ಲಿ ಕುಟುಂಬ ಸದಸ್ಯರನ್ನು ಒಳಬಿಟ್ಟುಕೊಂಡಿದ್ದೇ ಸಮಸ್ಯೆಗಳು ಸೃಷ್ಟಿಯಾಗಲು ಕಾರಣವಾಗಿತ್ತು). ಆಪ್ತ ವಲಯದವರಿಗೂ ಕಡಿವಾಣ ಹಾಕಬೇಕು.
5. ಅಧಿಕಾರ ಕಳೆದುಕೊಂಡು ಸೇಡಿಗಾಗಿ ಕಾಯುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪ್ರತಿ ಹಂತದಲ್ಲೂ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸಬಹುದು. ರಾಜಕೀಯ ಮತ್ತು ಆಡಳಿತ ತೀರ್ಮಾನಗಳಲ್ಲಿ ಸ್ವಲ್ಪ ಎಡವಿದರೂ ಸರ್ಕಾರ ಕೆಡವಲು ಪ್ರಯತ್ನಿಸಬಹುದು. ಆದ್ದರಿಂದ ಸೇಡಿಗಾಗಿ ಕಾಯುತ್ತಿರುವ ಪ್ರತಿಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.
ಇವುಗಳಲ್ಲಿ ಯಡಿಯೂರಪ್ಪ ಅವರಿಗೆ ಅತ್ಯಂತ ಕಠಿಣ ಸವಾಲು ಎಂದರೆ ಅದು ಪ್ರತಿಪಕ್ಷಗಳದ್ದು. ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದು ಮುಖ್ಯಮಂತ್ರಿ ಸ್ಥಾನಕ್ಕೆ ಎಚ್. ಡಿ. ಕುಮಾರಸ್ವಾಮಿ ರಾಜಿನಾಮೆ ನೀಡಿದ ಸಂದರ್ಭದಲ್ಲಿ ಕುಮಾರಸ್ವಾಮಿ, ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಅವರು, ಯಡಿಯೂರಪ್ಪ ಅವರು ಅದು ಹೇಗೆ ಸರ್ಕಾರ ನಡೆಸುತ್ತಾರೆ, ನಾವೂ ನೋಡುತ್ತೇವೆ ಎಂಬರ್ಥದಲ್ಲಿ ಸವಾಲು ಹಾಕಿದ್ದರು. ಯಡಿಯೂರಪ್ಪ ಅವರು ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದಾಗ ಮತ್ತು ಅದಕ್ಕೆ ರಾಜ್ಯಪಾಲರು ಸಮ್ಮತಿಸಿದಾಗಲೂ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಜೊತೆಗೆ ಯಡಿಯೂರಪ್ಪ ಅವರ ಪ್ರಮಾಣವಚನಕ್ಕೂ ಎರಡೂ ಪಕ್ಷಗಳ ನಾಯಕರು, ಶಾಸಕರು (ಭಿನ್ನಮತೀಯರನ್ನು ಹೊರತುಪಡಿಸಿ) ಗೈರು ಹಾಜರಾಗಿದ್ದರು. ಮುಂದಿನ ದಿನಗಳಲ್ಲಿ ಇವರು ರಾಜಕೀಯವಾಗಿ ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನಿಸುವುದರ ಜತೆಗೆ ಆಡಳಿತದ ಪ್ರತಿ ಹೆಜ್ಜೆಯನ್ನು ಹದ್ದಿನ ಕಣ್ಣಿನಲ್ಲಿ ಗಮನಿಸಿ ಟೀಕೆ, ಆರೋಪಗಳನ್ನು ಮಾಡಬಹುದು. ಇದರಿಂದಾಗಿ ಆರಂಭದಿಂದಲೇ ಯಡಿಯೂರಪ್ಪ ಅವರು ತಮ್ಮ ವಿರುದ್ಧ ರಾಜಕೀಯ ಸಮರ ಸಾರಿರುವ ಪ್ರತಿಪಕ್ಷಗಳ ನಾಯಕರನ್ನು ಎದುರಿಸಲು ಸಿದ್ಧರಾಗಿಯೇ ಅಖಾಡಾಕ್ಕಿಳಿಯಬೇಕಾಗಿದೆ.