ಕರ್ನಾಟಕದಲ್ಲಿ ಹದಿಮೂರು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗಿ ಇಪ್ಪತ್ತು ತಿಂಗಳವರೆಗೆ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ ನಡೆಸಿದ, ಜೆಡಿಎಸ್‌ನ ಮಖ್ಯಮಂತ್ರಿ ಕುಮಾರಸ್ವಾಮಿ, ಈಗ ಎರಡನೆಯ ಬಾರಿ ಮುಖ್ಯಮಂತ್ರಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಆದರೆ, ಕುಮಾರಸ್ವಾಮಿ ಈಗ ಬದಲಾಗಿದ್ದಾರೆ. ಮೊದಲಿನ ನಗು ಇಲ್ಲ. ಮಾತುಮಾತಿಗೂ ಸಿಡುಕುತ್ತಾರೆ. ಯಾವಾಗಲೂ ಒತ್ತಡದಲ್ಲಿ ಇರುವಂತೆ ವರ್ತಿಸುತ್ತಾರೆ. ಅವರ ಮಗ ಸ್ಪರ್ಧಿಸಿರುವ ಮಂಡ್ಯದ ವರದಿಗಳಿಂದ ತಿಳಿದುಬರುವುದೇನೆಂದರೆ, ಕುಮಾರಸ್ವಾಮಿಯವರು ಮಾಧ್ಯಮದವರೊಡನೆ ಮಾತನಾಡುವುದಿಲ್ಲ ಎನ್ನುವ ಪ್ರತಿಜ್ಞೆಯನ್ನೂ ಮಾಡಿದ್ದಾರೆ.
ಮೊದಲ ಬಾರಿ, ಯಾವ ರಾಜಕೀಯ ಅನುಭವವಿಲ್ಲದೆ ಒಮ್ಮೆಲೇ ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ್ದು 2006ರಲ್ಲಿ. ಅವರು ತಮ್ಮ ಪಕ್ಷದ ಸಹಕಾರದೊಡನೆ ಕಾಂಗ್ರೆಸಿನ ಧರ್ಮಸಿಂಗರ ನೇತ್ರತ್ವದಲ್ಲಿದ್ದ, 2004ರ ಚುನಾವಣೆಯ ನಂತರದ ಮೊದಲ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೆದ್ದು, ಬಿಜೆಪಿ ಸಹಯೋಗದಿಂದ ಎರಡನೆಯ ಸಮ್ಮಿಶ್ರ ಸರಕಾರ ರಚಿಸಿದ್ದರು. ಉಳಿದ 40 ತಿಂಗಳ ಅವಧಿಯನ್ನು ಜೆಡಿಎಸ್ ಮತ್ತು ಬಿಜೆಪಿ ಸರಿಯಾಗಿ ಹಂಚಿಕೊಳ್ಳಬೇಕೆಂಬ ಕರಾರಿನ ಜೊತೆ. ತಮ್ಮ ಇಪ್ಪತ್ತು ತಿಂಗಳ ಅವಧಿ ಮುಗಿದ ಮೇಲೆ ಬಿಜೆಪಿಗೆ ಕರಾರು ಪ್ರಕಾರ ಅಧಿಕಾರ ವರ್ಗಾಯಿಸಲು ನಿರಾಕರಿಸಿದ್ದರಿಂದ ನಂತರ ಅವರ ಸರ್ಕಾರ ಉರುಳಿ ಮರು ಚುನಾವಣೆ ನಡೆಯಿತೇ ಹೊರತು ಪಾಲುದಾರಿ ಪಕ್ಷವಾದ ಬಿಜೆಪಿ ಆಥವಾ ವಿರೋಧಿ ಪಕ್ಷದಲ್ಲಿ ಕುಳಿತಿದ್ದ ಕಾಂಗ್ರೆಸಿನವರ ಯಾವದೇ ಕಿತಾಪತಿಯಿಂದಲ್ಲ. ಇದರ ಪರಿಣಾಮವಾಗಿ ಅವಧಿಗೆ ಮುನ್ನವೇ ನಡೆದ ಹೊಸ ಚುನಾವಣೆಯಲ್ಲಿ, ಕುಮಾರಸ್ವಾಮಿಯವರ ವಚನ ಭ್ರಷ್ಟತೆಯನ್ನು ವಿಷಯವಾಗಿಸಿ ಬಿಜೆಪಿ ತನ್ನ ಸ್ವಂತ ಬಲದ ಮೇಲೆ ಸರ್ಕಾರ ಮಾಡುವಷ್ಟರ ಗೆಲುವು ಸಾಧಿಸಿತು. ಜೆಡಿಎಸ್ ಅಧಿಕಾರ ವಂಚಿತವಾಗಿ ಮುಂದಿನ ಐದು ವರ್ಷ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಬೇಕಾಯಿತು.
ಕುಮಾರಸ್ವಾಮಿ ಮೊದಲ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ, ಅವರಿಗೆ ಅನುಭವವೂ ಇರಲಿಲ್ಲ, ವಿಧಾನಸಭೆಗೆ ಆಯ್ಕೆಯಾಗಿಯೂ ಬಂದಿರಲಿಲ್ಲ. ಆದರೂ ಮುಖ್ಯಮಂತ್ರಿಯಾಗಿ ಜನ ಮೆಚ್ಚುವ ಕಾರ್ಯವನ್ನೇ ಮಾಡಿದರು. ಆಗ ಆಡಳಿತ ಯಾರ ಹಸ್ತಕ್ಷೇಪವಿಲ್ಲದೆ ನಿರಾತಂಕವಾಗಿ ಸುಲಲಿತವಾಗಿಯೇ ನಡೆದಿತ್ತು. ಗ್ರಾಮ ವಾಸ್ತವ್ಯ ಮೊದಲಾದ ಜನಸಂಪರ್ಕ ಕಾರ್ಯಕ್ರಮಗಳಿಂದ ಕುಮಾರಸ್ವಾಮಿ ಹೊಸ ವರ್ಚಸ್ಸು ಗಳಿಸಿದರಲ್ಲದೆ, ಜನರು ಅವರಲ್ಲಿ ಕರ್ನಾಟಕದ ಮುಂದಿನ ಪೀಳಿಗೆಯ ಮುಖಂಡರಲ್ಲಿ ಇರಬೇಕಾದ ಗುಣಗಳನ್ನು ಕಂಡರು. ಹೀಗೇ ಅವರು ಮುಂದುವರಿದರೆ, ಅವರ ತಂದೆಯ ಕಾಲದಲ್ಲಿ ಒಡೆದುಹೋದ ಜನತಾ ದಳ ಮತ್ತೆ ಒಂದಾಗಿ ಕರ್ನಾಟಕದಲ್ಲಿ ತೃತೀಯ ರಂಗ ಮತ್ತೆ ತಲೆ ಎತ್ತಬಹುದೆಂಬ ಭರವಸೆಯೂ ಮೂಡಿತ್ತು.
ಆದರೆ, ಯಾವ ಕಾರಣದಿಂದ ಅಧಿಕಾರ ಕಳೆದುಕೊಂಡರೋ ಅದೇ ಕಾರಣಗಳಿಗೆ ಕುಮಾರಸ್ವಾಮಿ ಬಹಳ ದುಬಾರಿ ರಾಜಕೀಯ ಬೆಲೆ ತೆತ್ತಿದ್ದಾರೆ. ರಾಜಕೀಯವಾಗಿ ಅವರು ಗಳಿಸಿದ ವರ್ಚಸ್ಸು ಮಣ್ಣುಪಾಲಾಯಿತು. ಅವರು ರಾಜಕೀಯವಾಗಿ ನಂಬಿಕೆಗೆ ಅರ್ಹ ವ್ಯಕ್ತಿ ಅಲ್ಲ ಎಂಬ ಹಣೆಪಟ್ಟಿ ಕಟ್ಟಿಕೊಂಡರು. ಹೋಳಾದ ಜನತಾ ದಳ ತಿರುಗಿ ರಾಜಕೀಯವಾಗಿ ಚಿಗುರಬಹುದಾದ ಕನಸು ಕಮರಿತು. ಮತ್ತದೇ ರಾಜಕೀಯ ವನವಾಸ.
2018ರ ಚುನಾವಣೆಯಲ್ಲಿ ಅವರು, ಅವರ ಪಕ್ಷ ಅಧಿಕಾರಕ್ಕೆ ಬಂದುದು ಕೇವಲ ಆಕಸ್ಮಿಕ. ಯಾವ ಪಕ್ಷಕ್ಕೂ ಅಧಿಕಾರ ಸಿಗದೆ ಮೂರನೆಯ ಸ್ಥಾನದಲ್ಲಿ ಕುಳಿತಿದ್ದ ಜೆಡಿಎಸ್ ಪಕ್ಷದ ಕುಮಾರಸ್ವಾಮಿಯವರಿಗೆ ಎರಡನೆಯ ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿ, ಕರೆದು ಅಧಿಕಾರ ಕೊಟ್ಟವರು ಕಾಂಗ್ರೆಸಿನವರು. ಅದಕ್ಕೆ ಕಾರಣ, ಬರಲಿರುವ ಲೋಕಸಭೆ ಚುನಾವಣೆ ಸಂದರ್ಭ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿರಬಾರದು ಎಂಬ ಕಾಂಗ್ರೆಸ್ ಅದ್ಯಕ್ಷ ರಾಹುಲ್ ಗಾಂಧಿಯವರ ಏಕಮೇವ ಉದ್ದೇಶ. ಅದು ತಂದೆ-ಮಕ್ಕಳಾದ ದೇವೇಗೌಡ- ಕುಮಾರಸ್ವಾಮಿಯವರಿಗೂ ಆಪ್ಯಾಯಮಾನವಾಗಿತ್ತು. ಕರೆದು ಅಧಿಕಾರ ಕೊಟ್ಟರೆ ಬೇಡವೆಂದು ಯಾರು ನಿರಾಕರಿಸುತ್ತಾರೆ?
ಈಗಿನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಮೊದಲಿನ ಬಿಜೆಪಿಯೊಂದಿಗಿನ ಸಮ್ಮಿಶ್ರ ಸರ್ಕಾರದಂತೆ ಸುಲಭವಾಗಿ, ಸುಲಲಿತವಾಗಿ ನಡೆದೀತು ಎಂಬ ಅವರ ವಿಚಾರಕ್ಕೆ ಭ್ರಮನಿರಸನವಾಗುವ ದಿವಸಗಳು ತಡವಾಗಲಿಲ್ಲ. ರಾಷ್ಟ್ರೀಯ ನಾಯಕರ ವಿಚಾರ ರಾಜ್ಯದ ಧುರೀಣರಿಗೆ ಒಪ್ಪಿಗೆ ಇರಲಿಲ್ಲ. ಜೆಡಿಎಸ್ ಅಧಿಕಾರ ನಡೆಸುತ್ತಿದೆ, ರಾಜಕೀಯ ಲಾಭ ಪಡೆಯುತ್ತಿದೆ ಎನ್ನುವ ಭಾವನೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮೂಡಿದ್ದರಿಂದ, ಕುಮಾರಸ್ವಾಮಿಯವರಿಗೆ ಹಲವಾರು ಎಡವಟ್ಟುಗಳು ಎದುರಾಗುತ್ತಲೇ ಇವೆ. ಅಧಿಕಾರ ಹಂಚಿಕೆ ವಿಷಯ ಮೊದಲಾದವುಗಳಲ್ಲಿ ಸಮ್ಮಿಶ್ರ ಸರಕಾರದ ಕಾರ್ಯವೈಖರಿ ಜನರಿಗೆ, ವಿಶೇಷವಾಗಿ ಅವರ ಪಾಲುದಾರಿ ಪಕ್ಷವಾದ ಕಾಂಗ್ರೆಸಿಗೆ ಸಮಾಧಾನ ತರಲೇ ಇಲ್ಲ. ಹೀಗಾಗಿ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಕುದಿಯುತ್ತಿರುವಾಗಲೇ ಲೋಕಸಭೆ ಚುನಾವಣೆ ಬಂದು, ಅದರಲ್ಲಿ ಮೈತ್ರಿಪಕ್ಷಗಳ ಪ್ರಯೋಗ ಮುಂದುವರಿದು, ಸ್ಥಾನ ಹೊಂದಿಕೆ ವಿಷಯದಲ್ಲಿ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ, ಗೊಂದಲ, ಅನುಮಾನಗಳು ಕಾಣಿಸಿಕೊಳ್ಳುತ್ತಲೇ ಇವೆ.
ವಿಶೇಷವಾಗಿ, ತಮ್ಮ ಕುಟುಂಬದ ಮೂರು ಮಂದಿ, ಅಂದರೆ ತಂದೆ ದೇವೇಗೌಡರು, ಅಣ್ಣನ ಮಗ ಪ್ರಜ್ವಲ್ ರೇವಣ್ಣ ಮತ್ತು ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸಿದ್ದ ತುಮಕೂರು, ಹಾಸನ ಮತ್ತು ಮಂಡ್ಯ ಬಿಟ್ಟು ಬೇರೆ ಮತಕ್ಷೇತ್ರದಲ್ಲಿ ಸರಿಯಾಗಿ ಪ್ರಚಾರ ಮಾಡದೆ ಇದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್ ಕಾರ್ಯಕರ್ತರ ಕೋಪಕ್ಕೆ ಒಳಗಾಗಿದ್ದಾರೆ. ಚುನಾವಣಾ ಮೈತ್ರಿ ಬರೀ ಕಾಗದದ ಮೇಲೆ ಇದೆ. ಹಳೆಯ ಮೈಸೂರು ಪ್ರದೇಶಗಳಲ್ಲಿ, ಸ್ಥಳೀಯವಾಗಿ ಮೈತ್ರಿ ಪಕ್ಷಗಳೇ ಜಗಳವಾಡುತ್ತಿವೆ. ಉತ್ತರ ಕರ್ನಾಟಕದಲ್ಲಿ ಬಿಜೆಪಿಯನ್ನು ಎದುರಿಸುತ್ತಿರುವ ಕಾಂಗ್ರೆಸಿಗೆ ಜೆಡಿಎಸ್ ಕಾರ್ಯಕರ್ತರಿಂದ ಸಾಕಷ್ಟು ಸಹಕಾರ ಸಿಗುತ್ತಿಲ್ಲ. ಮಂಡ್ಯ, ಹಾಸನ, ತುಮಕೂರು ಜಿಲ್ಲೆಯಲ್ಲಿನ ಚುನಾವಣಾ ಬೆಳವಣಿಗೆಗಳಂತೂ ಮುಖ್ಯಮಂತ್ರಿಗಳ ನೆಮ್ಮದಿ ಭಂಗ ಮಾಡಿವೆ. ಮಾಧ್ಯಮಗಳಲ್ಲಿ ಬರುತ್ತಿರುವ ಪ್ರತಿಯೊಂದು ವರದಿಯೂ ತಮ್ಮ ವಿರುಧ್ಧವೇ ಬರುತ್ತಿರುವಂತೆ ಕಾಣಿಸಿ ಅವರು ವ್ಯಗ್ರವಾದಂತೆ ತೋರುತ್ತಾರೆ.
ತಾಳ್ಮೆ ಕಳೆದುಕೊಳ್ಳದಂತೆ ರಾಜಕೀಯ ಹೇಗೆ ಮಾಡಬೇಕು ಮತ್ತು ಅದರಲ್ಲಿ ತಮ್ಮತನವನ್ನು ಹೇಗೆ ಉಳಿಸಿಕೊಳ್ಳಬೇಕು ಎನ್ನುವುದನ್ನು ಕುಮಾರಸ್ವಾಮಿಯವರು ತಮ್ಮ ತಂದೆ ದೇವೇಗೌಡರ ಅನುಭವದಿಂದ ಬಹುಶಃ ಕಲಿತಿಲ್ಲವೆಂದು ಕಾಣಿಸುತ್ತಿದೆ. ಮಗನಂತೆ ತಾಳ್ಮೆಗೆಟ್ಟು ತಮ್ಮ ಮೂಗನ್ನು ನೆಗಡಿ ಬಂದಿದೆ ಎಂದು ಕೊಯ್ದುಕೊಂಡಿದ್ದರೆ, ದೇವೇಗೌಡರು ಇಷ್ಟು ದೀರ್ಘಕಾಲ, ತಮ್ಮ ಇಳಿವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿ ರಾಜಕೀಯದಲ್ಲೇ ಇರುತ್ತಿರಲಿಲ್ಲ.
ಅಂಕಣಕಾರರು ಹಿರಿಯ ಪತ್ರಕರ್ತರು