ಕರ್ನಾಟಕದ ಹಿಂದಿನ 10 ವರ್ಷಗಳಲ್ಲಿ, ಈ ವರ್ಷ (2019) ಮೊದಲ ಬಾರಿಗೆ ಮುಂಗಾರು ಪ್ರವೇಶ ದಾಖಲೆಯ ವಿಳಂಬ ಕಂಡಿದೆ. ಪ್ರತಿ ವರ್ಷ ಜೂನ್ 12 ತಾರೀಖಿನೊಳಗೆ ಸಂಪೂರ್ಣವಾಗಿ ಕರ್ನಾಟಕವನ್ನು ಆವರಿಸುತ್ತಿತ್ತು. ಆದರೆ ಈ ವರ್ಷ ‘ವಾಯು’ ಚಂಡಮಾರುತದಿಂದ ಮುಂಗಾರಿನ ಸಿಂಚನ ತಪ್ಪಿದೆ. ‘ವಾಯು’ ಚಂಡಮಾರುತ ತೀವ್ರಗೊಂಡು ಮೋಡಗಳನ್ನು ಉತ್ತರದ ಕಡೆಗೆ ಹೊತ್ತೊಯ್ದಿದೆ. ಹೀಗಾಗಿ ಮುಂಗಾರು ದುರ್ಬಲಗೊಂಡಿದೆ.
ಮುಂಗಾರು ಮಳೆ ಇದೇ ತಿಂಗಳ ಜೂನ್ 8ರಂದೇ ಕೇರಳದ ನೈರುತ್ಯ ದಿಕ್ಕಿನಿಂದ ದಕ್ಷಿಣ ಕನ್ನಡ, ಉಡುಪಿ, ಕೊಡಗಿನಿಂದ ಮೈಸೂರಿಗೆ ಪ್ರವೇಶಿಸಿತ್ತು. ಆದರೆ ಸದ್ಯಕ್ಕೆ ಮುಂಗಾರು, ಇಟ್ಟ ಹೆಜ್ಜೆಯನ್ನು ಮುಂದಕ್ಕೆ ಇಡದೇ, ಇಟ್ಟ ಜಾಗದಲ್ಲೇ ಮರೆಯಾದದ್ದು ದುರಂತ. ಹವಾಮಾನ ಇಲಾಖೆಯು “ಮುಂದಿನ ನಾಲ್ಕೈದು ದಿನಗಳ ಒಳಗೆ ಮುಂಗಾರು ಪ್ರವೇಶಿಸಿ, ಒಂದು ವಾರದಲ್ಲಿ ಸಂಪೂರ್ಣವಾಗಿ ಕರ್ನಾಟಕವನ್ನು ಆವರಿಸಲಿದೆ” ಎಂದು ಸೂಚಿಸಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ಪ್ರಕಾರ ಜೂನ್ 1ರಿಂದ ಜೂನ್ 17ವರೆಗೆ (2017ರಿಂದ 2019ರವರೆಗೆ) ಮುಂಗಾರು ಮಳೆಯ ಪ್ರಮಾಣ

ಮಳೆಯ ಪ್ರಮಾಣವನ್ನು 6 ಬಣ್ಣಗಳಿಂದ ಗುರುತಿಸಿ ನಿರ್ಧಾರ ಮಾಡಲಾಗುತ್ತದೆ. 0.52mm-2.4mmನಷ್ಟು ಬರುವ ಕೇಸರಿ ಬಣ್ಣದ ಮಳೆಯನ್ನುತುಂಬಾ ಲಘು ಮಳೆ ಎಂದು ಗುರುತಿಸಲಾಗುತ್ತದೆ. ಅಂತೆಯೇ 2.5mm-7.5mmನಷ್ಟು ಬರುವ ಹಳದಿ ಬಣ್ಣದ ಮಳೆಯನ್ನು ಲಘು ಮಳೆ ಎಂದೂ, 7.5mm-35.5mmನಷ್ಟು ಬರುವ ಹಸಿರು ಬಣ್ಣದ ಮಳೆಯನ್ನು ಮಧ್ಯಮ ಮಳೆ ಎಂದೂ, 35.5mm-64.5mmನಷ್ಟು ಬರುವ ಆಕಾಶ ನೀಲಿ ಮಳೆಯನ್ನು ಮಧ್ಯಮಕ್ಕಿಂತ ಸ್ವಲ್ಪ ಹೆಚ್ಚಿನ ಮಳೆ ಎಂದೂ, 64.5mm-124.4mmನಷ್ಟು ಬರುವ ನೀಲಿ ಬಣ್ಣದ ಮಳೆಯನ್ನು ಹೆಚ್ಚು ಮಳೆ ಎಂದೂ ಹಾಗೂ 124.4mmಕ್ಕಿಂತ ಹೆಚ್ಚು ಬರುವ ಮಳೆಯನ್ನು ಭೀಕರ ಮಳೆ ಎಂದು ಹವಾಮಾನ ಇಲಾಖೆ ಹೆಸರಿಸಿದೆ. ಇಲಾಖೆ 3 ದಿನದ ಹವಾಮಾನವನ್ನು ಗಮನಿಸಿ ಮಳೆಯ ಸಾಧ್ಯತೆಯ ಬಗ್ಗೆ ವರದಿ ಮಾಡುತ್ತದೆ.
ಕರ್ನಾಟಕದ ಕಳೆದ 10ವರ್ಷಗಳಲ್ಲಿ ಮುಂಗಾರು ಮಳೆ ಬಹಳ ಬೇಗ ಸಂಪೂರ್ಣವಾಗಿ ಆವರಿಸಿತ್ತು. 2011ರಲ್ಲಿ ಜೂನ್ 11ಕ್ಕೆ ಎಲ್ಲಾ ಪ್ರಾಂತ್ಯಗಳಲ್ಲೂ ಸಿಂಚನ ಮೂಡಿಸಿತ್ತು. ಅಂತೆಯೇ 2012ರಲ್ಲಿ ಜೂನ್ 10, 2013ರಲ್ಲಿ ಜೂನ್ 8, 2014ರಲ್ಲಿ ಜೂನ್ 16, 2015, 2016, 2017ರಲ್ಲಿ ಜೂನ್ 12, 2018ರಲ್ಲಿ ಜೂನ್ 8 ಹಾಗೂ 2019ರಲ್ಲೂ ಜೂನ್ 8ಕ್ಕೆ ಪ್ರವೇಶಿಸಿತ್ತು.
2018ರ ಮುಂಗಾರು ಮಳೆಯ ಒಟ್ಟು ಪ್ರಮಾಣ

ಕಳೆದ ವರ್ಷ ಕೊಡಗಿನಲ್ಲಾದ ಪ್ರವಾಹದಿಂದ ಅಲ್ಲಿನ ಸಾಕಷ್ಟು ಮನೆ, ಹೊಲ-ಗದ್ದೆಗಳೆಲ್ಲಾ ಕಣ್ಮರೆಯಾಗಿ ಹೋಗಿದ್ದವು. ಹಾಗೂ ನೂರಾರು ಜನರನ್ನು ಪ್ರವಾಹ ಬಲಿ ತೆಗೆದುಕೊಂಡಿತು. ಇದರಿಂದ ಈ ವರ್ಷ ಎಚ್ಚೆತ್ತುಕೊಂಡ ಕೊಡಗಿನ ಜಿಲ್ಲಾಡಳಿತದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ 19.06.2019ರಂದು ಹವಾಮಾನ ಮುನ್ಸೂಚನೆಯನ್ನು ನೀಡಿದೆ.

ರಾಜ್ಯದ ಬಹುತೇಕ ರೈತರು ಮಳೆಯನ್ನೇ ನಂಬಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಅದರಲ್ಲೂ ಜೂನ್ ನಿಂದ ಅಕ್ಟೋಬರ್ ತಿಂಗಳವರೆಗೆ ಬರುವ ಮುಂಗಾರು ಮಳೆಯೇ ಅವರಿಗೆ ಬಹಳ ಮುಖ್ಯ. ಮತ್ತು ಈಗಾಗಲೇ ಉತ್ತರ ಕರ್ನಾಟಕದ ಸಾಕಷ್ಟು ತಾಲ್ಲೂಕುಗಳು ಹಿಂಗಾರು ಮಳೆಯು ಬಾರದೆ ಬರವನ್ನು ಎದುರಿಸುತ್ತಿದೆ. ನೀರಿಲ್ಲದೆ ಜನ-ಜಾನುವಾರುಗಳು ತತ್ತರಿಸಿವೆ. ರಾಜ್ಯ ಸರ್ಕಾರ ಕೂಡ ರೈತರ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ಗಡುವನ್ನು ಮುಂದಕ್ಕೆ ಹಾಕುತ್ತಿರುವುದು ದೊಡ್ಡ ದುರಂತ. ಕೆಲವೊಮ್ಮೆ ಮಳೆ ಬಾರದೆ ಹೋದರೆ ರೈತರು ಸರ್ಕಾರದ ಮೇಲೆ ನಂಬಿಕೆಯಿಡುತ್ತಾರೆ. ಸರ್ಕಾರ, ಮೇ 2019ರಲ್ಲಿ 88ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ಮತ್ತು ಬೆಂಗಳೂರು ಕೇಂದ್ರದಲ್ಲಿ ಮೋಡ ಬಿತ್ತನೆ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಆದರೆ ಅದು ವಿಫಲವಾದಂತೆ ಕಾಣುತ್ತಿದೆ. ಮತ್ತು ಜೂನ್ 19ರಂದು ಕಂದಾಯ ಸಚಿವರಾದ ಆರ್. ದೇಶಪಾಂಡೆ ಜುಲೈ ಮೊದಲ ವಾರದಲ್ಲಿ ಪುನಃ ಮೋಡ ಬಿತ್ತನೆ ಕಾರ್ಯವನ್ನು ತೆಗೆದುಕೊಂಡಿರುವುದು ಸಂತೋಷವೇ ಆಗಿದ್ದರೂ, ರೈತರ ಬೆಳೆಗೆ ಮತ್ತು ಬರಕ್ಕೆ ತುರ್ತಾಗಿ ಪರಿಹಾರವನ್ನು ನೀಡುವುದು ಒಳಿತು.
ಈ ಮುಂಗಾರಿನ ಸಮಯದಲ್ಲೂ ಬೇಸಿಗೆಯಂತಹ ಕಾವನ್ನು ತಡೆಯುವುದು ಅಸಾಧ್ಯವಾಗಿದೆ. ಮಾರ್ಚ್, ಏಪ್ರಿಲ್, ಮೇ ತಿಂಗಳ ಬೇಸಿಗೆಯ ಕಾವು, ಜೂನ್ ತಿಂಗಳಲ್ಲೂ ಉಳಿದಿರುವಂತೆ ಆಗಿದೆ.