2015ರಲ್ಲಿ ಸರಸಂಘ ಚಾಲಕ ಮೋಹನ್ ರಾವ್ ಭಾಗವತ್ ಹೀಗೆಯೇ ಮಾತಾಡಿದ್ದರು. ಜಾತಿ ಆಧಾರಿತ ಮೀಸಲಾತಿಯ ಅಗತ್ಯದ ಕುರಿತು ಸಂದೇಹ ಪ್ರಕಟಿಸಿದ್ದರು. ಪ್ರತಿಪಕ್ಷಗಳು ಹುಯಿಲೆಬ್ಬಿಸಿದ್ದವು. ಬಿಹಾರದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸೋಲು ಉಂಡಿತು. ನಿತೀಶ್ ಅವರ ಸಂಯುಕ್ತ ಜನತಾದಳ ಮತ್ತು ಲಾಲೂಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳ ಒಟ್ಟುಗೂಡಿ ಅಧಿಕಾರ ಸೂತ್ರ ಹಿಡಿದವು.
ಇದೀಗ, ಜಾತಿ ಆಧಾರಿತ ಮೀಸಲಾತಿ ಕುರಿತು ಸಾಮರಸ್ಯದ ವಾತಾವರಣದಲ್ಲಿ ಚರ್ಚೆ ನಡೆಯಬೇಕೆಂದು ವಾರದ ಹಿಂದೆ ಸಮಾರಂಭವೊಂದರಲ್ಲಿ ಹೇಳಿದ್ದಾರೆ.
ಅವರು ಈ ವಿಷಯವನ್ನು ಇಂದಿನ ಸನ್ನಿವೇಶದಲ್ಲಿ ಪುನಃ ಕೆದಕಿರುವುದು ಆಕಸ್ಮಿಕವೇನೂ ಅಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹಮಂತ್ರಿ ಅಮಿತ್ ಶಾ ಜೋಡಿ ಭುಗಿಲೆಬ್ಬಿಸಿರುವ ರಾಷ್ಟ್ರೀಯತೆಯ ಉನ್ಮಾದದಲ್ಲಿ ದೇಶ ಇಂದು ಮುಳುಗೇಳುತ್ತಿದೆ. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಮಿಂಚಿನ ನಡೆ ದೇಶಾದ್ಯಂತ ಉಂಟು ಮಾಡಿರುವ ಸಂಚಲನವೇ ಈ ಮಾತಿಗೆ ಸಾಕ್ಷಿ. ಪ್ರತಿಪಕ್ಷಗಳಲ್ಲಿ ಕೂಡ ಈ ವಿಷಯ ಭಿನ್ನಮತವನ್ನು ಬಿತ್ತಿದೆ. ಮೊದಲೇ ಸೊಂಟ ಮುರಿದುಕೊಂಡಿದ್ದ ಕಾಂಗ್ರೆಸ್ ಪಕ್ಷವನ್ನು ಕಾಶ್ಮೀರ ಕುರಿತ ಪ್ರಧಾನಿ ಕಾರ್ಯಾಚರಣೆ ಇನ್ನಷ್ಟು ಹಣಿದಿದೆ. ಕಾಂಗ್ರೆಸ್ ನಾಯಕರನೇಕರು ಸರ್ಕಾರದ ಕ್ರಮವನ್ನು ಬಹಿರಂಗವಾಗಿಯೇ ಮೆಚ್ಚಿದ್ದಾರೆ. ಈ ಕ್ರಮವನ್ನು ಕಾಂಗ್ರೆಸ್ ವಿರೋಧಿಸಿದ್ದು ತಪ್ಪೆಂದು ಎಷ್ಟೋ ಮಂದಿ ಕಾಂಗ್ರೆಸ್ಸಿಗರು ಪಕ್ಷವನ್ನೇ ತೊರೆದಿದ್ದಾರೆ. ಬಿ.ಎಸ್.ಪಿ. ಮತ್ತು ಆಮ್ ಆದ್ಮೀ ಪಾರ್ಟಿ ಕಾಶ್ಮೀರ ನಡೆಯನ್ನು ನೇರವಾಗಿ ಸ್ವಾಗತಿಸಿವೆ.

ಇತ್ತೀಚಿನ ಲೋಕಸಭಾ ಚುನಾವಣೆಗಳಿಗೆ ಮುನ್ನ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರ ಮೀಸಲಾತಿಯನ್ನು ಜಾರಿಗೆ ತಂದಿದ್ದ ಅವರ ಕ್ರಮ ಒಂದೆಡೆ ಮೇಲ್ಜಾತಿಗಳನ್ನು ಒಲಿಸಿಕೊಂಡಿತ್ತು. ಮತ್ತೊಂದೆಡೆ ಈಗಾಗಲೆ ಜಾರಿಯಲ್ಲಿದ್ದ ಮೀಸಲಾತಿಯನ್ನು ತೆಳುವಾಗಿಸಿತ್ತು. ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ಮತ್ತು ಜಂಟಿ ಕಾರ್ಯದರ್ಶಿಗಳ ಹುದ್ದೆಗಳಿಗೆ ಖಾಸಗಿ ವಲಯಗಳ ಪ್ರತಿಭಾವಂತರನ್ನು ನೇರ ನೇಮಕ ಮಾಡಿಕೊಳ್ಳುವ ಕ್ರಮವನ್ನು ಜಾರಿಗೆ ತರಲಾಗಿದೆ. ಈ ಹೊಸ ನೇಮಕಾತಿಗಳಲ್ಲಿ ಮೀಸಲಾತಿಗೆ ಎಡೆಯಿಲ್ಲ. ಸರ್ದಾರ್ ವಲ್ಲಭಭಾಯಿ ಪಟೇಲರು ಭಾರತದ ಉಕ್ಕಿನ ಚೌಕಟ್ಟು ಎಂದು ಬಣ್ಣಿಸಿದ್ದ ಐ.ಎ.ಎಸ್. ಅಧಿಕಾರಿಗಳು ಹತ್ತಾರು ವರ್ಷಗಳ ಸೇವಾ ಹಿರಿತನದ ನಂತರ ಕೇಂದ್ರದ ಕಾರ್ಯದರ್ಶಿ ಇಲ್ಲವೇ ಜಂಟಿ ಕಾರ್ಯದರ್ಶಿ ಹುದ್ದೆಗಳನ್ನು ತಲಪುತ್ತಿದ್ದರು. ಈ ಪ್ರತ್ಯೇಕತೆಯನ್ನು ಕಿತ್ತುಕೊಳ್ಳಲಾಗಿದೆ. ಈ ಹಂತದಲ್ಲಿ ಇರಬೇಕಿದ್ದ ನಾಮಮಾತ್ರದ ಮೀಸಲಾತಿಯನ್ನು ಕೂಡ ಅಳಿಸಿ ಹಾಕಲಾಗುತ್ತಿದೆ.
ಮೀಸಲಾತಿ ಎಂಬುದು ಅಭಿವೃದ್ಧಿಗೆ ಅಡ್ಡಿ ಎಂಬ ನಿರಂತರ ಪ್ರಚಾರವನ್ನು ಜಾರಿಯಲ್ಲಿ ಇಡಲಾಗಿದೆ. ನೂರಕ್ಕೆ ನೂರು ಮೀಸಲಾತಿ ಪಡೆಯುತ್ತ ಬಂದಿರುವ ಒಂದು ಸಂಘಟನೆಯ ಜನ ತಳವರ್ಗಗಳ ಮೀಸಲಾತಿಯನ್ನು ವಿರೋಧಿಸುತ್ತ ಬಂದಿದ್ದಾರೆ. ಅಂಬೇಡ್ಕರ್ ವಿಚಾರಗಳನ್ನು ಆಚರಣೆಯಲ್ಲಿ ಕೊಂದಿರುವವರು, ಬಾಯಿ ಮಾತಿನಲ್ಲಿ ಅವರನ್ನು ಕೊಂಡಾಡತೊಡಗಿದ್ದಾರೆ. ಅವರ ಹೆಸರಿನಲ್ಲಿ ಸ್ಥಾವರಗಳನ್ನು ಎಬ್ಬಿಸಿ ನಿಲ್ಲಿಸತೊಡಗಿದ್ದಾರೆ. ಬಾಬಾಸಾಹೇಬರ ಕೇಸರೀಕರಣ ಚುರುಕಾಗತೊಡಗಿದೆ. ಸಂವಿಧಾನವನ್ನು ಬದಲಾಯಿಸುವ ಮಾತುಗಳನ್ನು ಕೇಂದ್ರ ಮಂತ್ರಿಗಳೇ ಆಡತೊಡಗಿದ್ದಾರೆ. ಮೂಲ ಸಂವಿಧಾನದಲ್ಲಿ ಇರಲಿಲ್ಲವೆಂದು ಹೇಳಿ ಸೆಕ್ಯೂಲರ್ ಪದವನ್ನೇ ಸಂವಿಧಾನದ ಮುನ್ನುಡಿಯಿಂದ ಕೈ ಬಿಡುವ ಹುನ್ನಾರವೂ ಜರುಗಿತು. ಹಿಂದೂ ಬಹುಸಂಖ್ಯಾತ ರಾಷ್ಟ್ರವಾದ ವಿಜೃಂಭಿಸತೊಡಗಿದೆ. ಅಲ್ಪಸಂಖ್ಯಾತರು ದಲಿತರು ಆದಿವಾಸಿಗಳ ಬದುಕುಗಳು ದುರ್ಭರವಾಗಿವೆ. ರಾಜ್ಯಸಭೆಯಲ್ಲಿ ಆಳುವ ಪಕ್ಷಕ್ಕೆ ಬಹುಮತ ಇಲ್ಲದಿದ್ದರೂ ತ್ರಿವಳಿ ತಲಾಖ್ ರದ್ದು ಮಾಡಿದ ಮಸೂದೆಗೆ ಅಂಗೀಕಾರ ದಕ್ಕಿಸಿಕೊಳ್ಳಲಾಯಿತು. ಮುಸ್ಲಿಂ ಬಹುಸಂಖ್ಯಾತ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಅಲ್ಲಿನ ಜನಪ್ರತಿಧಿನಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ರದ್ದು ಮಾಡಿ ಜೀರ್ಣಿಸಿಕೊಳ್ಳಲಾಗುತ್ತಿದೆ. ಮೀಸಲಾತಿಯ ಕಡುಬೆಂಬಲಿಗ ಶಕ್ತಿಗಳ ದನಿ ಕ್ಷೀಣವಾಗಿದೆ. ಕಬ್ಬಿಣ ಇಷ್ಟು ಬಿಸಿಯಾಗಿರುವ ಸನ್ನಿವೇಶವಿದು. ಇಂತಹ ಸನ್ನಿವೇಶದಲ್ಲಿ ಮೀಸಲಾತಿ ಕುರಿತು ಚರ್ಚೆ ಮಾಡಬೇಕೆಂದು ಸರಸಂಘಚಾಲಕರು ಕರೆ ನೀಡಿರುವುದು ಆಕಸ್ಮಿಕ ಅಲ್ಲ.

ಮೋದಿ-ಶಾ ಜೋಡಿಗೆ ಮೀಸಲಾತಿ ಕುರಿತು ಯಾವ ಸಹಾನುಭೂತಿಯೂ ಇಲ್ಲ. ಸಹಾನುಭೂತಿಯ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದವರೂ ಅಲ್ಲ. ಮೀಸಲಾತಿಗೆ ಮಂಗಳ ಹಾಡುವ ಕಾರ್ಯಸೂಚಿಯ ಹಿನ್ನೆಲೆ ಅವರದು. ಆದರೆ ಚುನಾವಣಾ ರಾಜಕಾರಣ ಅವರ ಕೈಗಳನ್ನು ಈಗಲೂ ಕಟ್ಟಿ ಹಾಕಿದೆ. ಹೀಗಾಗಿ ತಳವರ್ಗಗಳ ಮೀಸಲಾತಿಯನ್ನು ತರಾತುರಿಯಲ್ಲಿ ಕಿತ್ತು ಹಾಕಲು ಅವರು ಕೈ ಹಾಕುತ್ತಿಲ್ಲ. ಅನುಕೂಲಕರ ಸಮಯದ ನಿರೀಕ್ಷೆಯಲ್ಲಿದ್ದಾರೆ ಅವರು. ಮಹಾರಾಷ್ಟ್ರ, ಹರಿಯಾಣದ ವಿಧಾನಸಭಾ ಚುನಾವಣೆಗಳು ಕದ ಬಡಿದಿವೆ ಎಂಬುದನ್ನು ಬಲ್ಲರು. 2015ರಲ್ಲಿ ಬಿಹಾರ ಚುನಾವಣೆ ಸಂದರ್ಭದಲ್ಲಿ ಭಾಗವತ್ ಹೇಳಿಕೆ ಉಂಟು ಮಾಡಿದ ಹಾನಿಯ ನೆನಪಿತ್ತು. ಹೀಗಾಗಿಯೇ ಭಾಗವತ್ ಹೇಳಿಕೆಗೆ ಆರೆಸ್ಸೆಸ್ ತಕ್ಷಣವೇ ಸ್ಪಷ್ಟೀಕರಣ ನೀಡಬೇಕಾಯಿತು. ಆರೆಸ್ಸೆಸ್ ಜಾತಿ ಆಧಾರಿತ ಮೀಸಲಾತಿಯನ್ನು ಬೆಂಬಲಿಸುತ್ತದೆಂಬ ಹೇಳಿಕೆ ಹೊರಬಿತ್ತು.
ಮೀಸಲಾತಿಯನ್ನು ನಿಷ್ಪಕ್ಷಪಾತ ಜನರ ಸಮಿತಿಯೊಂದು ಮರುವಿಮರ್ಶೆಗೆ ಒಳಪಡಿಸಬೇಕು ಎಂಬ ಗೊತ್ತುವಳಿಯನ್ನು ಆರೆಸ್ಸೆಸ್ ನ ಅಖಿಲ ಭಾರತೀಯ ಪ್ರತಿನಿಧಿ ಸಭಾ 1981ರಲ್ಲೇ ಅಂಗೀಕರಿಸಿತ್ತು. 1985ರಲ್ಲಿ ಇದೇ ಗೊತ್ತುವಳಿಯನ್ನು ಆರೆಸ್ಸೆಸ್ ನ ಅಖಿಲ ಭಾರತೀಯ ಕಾರ್ಯಕಾರಿ ಮಂಡಲದಲ್ಲಿ ಅಂಗೀಕರಿಸಲಾಯಿತು. ಈ ಮಾತುಗಳನ್ನೇ ಸರಸಂಘಚಾಲಕರು ಮತ್ತೆ ಮತ್ತೆ ಆಡುತ್ತಿದ್ದಾರೆ.
ಆರೆಸ್ಸೆಸ್ ಸರಕಾರ್ಯವಾಹ ಸುರೇಶ್ ಭಯ್ಯಾಜಿ ಜೋಶಿ ಮತ್ತು ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರೂ ಆರೆಸ್ಸೆಸ್ ಮೀಸಲಾತಿಯನ್ನು ಬೆಂಬಲಿಸುತ್ತದೆ ಎಂದೇ ಹೇಳಿಕೆಗಳನ್ನು ನೀಡಿದ್ದಾರೆ. ಈ ಸಮಾಜದಲ್ಲಿ ಅಸಮಾನತೆ ಇರುವ ತನಕ ನಾವು ಮೀಸಲಾತಿಯನ್ನು ಬೆಂಬಲಿಸುತ್ತೇವೆ ಎಂಬ ಮಾತನ್ನು ಆಡುತ್ತಲೇ ಮರುವಿಮರ್ಶೆಯ ಕಿಡಿಯನ್ನೂ ಆರದಂತೆ ಕಾಪಾಡಿಕೊಂಡು ಬಂದಿದ್ದಾರೆ ಮೋಹನ್ ಭಾಗವತ್.
ಜಾತಿ ಆಧಾರಿತ ಮೀಸಲಾತಿಯ ಅಗತ್ಯ ಈಗ ಇಲ್ಲ. ಯಾಕೆಂದರೆ ಯಾವ ಜಾತಿಯೂ ಹಿಂದುಳಿದಿಲ್ಲ. ತೀರಾ ಹೆಚ್ಚೆಂದರೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಮುಂದುವರೆಸಬಹುದು, ಅದೂ ಹತ್ತು ವರ್ಷಗಳ ಕಾಲ ಮಾತ್ರ. ಆನಂತರ ಎಲ್ಲ ಜಾತಿ ಆಧಾರಿತ ಮೀಸಲಾತಿಯನ್ನು ರದ್ದುಗೊಳಿಸಬೇಕು. ಮೀಸಲಾತಿಯು ಪ್ರತ್ಯೇಕತೆಯನ್ನು ಪ್ರೋತ್ಸಾಹಿಸುತ್ತಿದೆ. ಎಲ್ಲರಿಗೂ ಸಮಾನ ಅವಕಾಶಗಳಿರಬೇಕು ಎಂಬುದು ಆರೆಸ್ಸೆಸ್ ನ ಮತ್ತೊಬ್ಬ ಹಿರಿಯ ಎಂ. ಜಿ. ವೈದ್ಯ ಅವರ ನಿಲುವು. ಬಡ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಹುಡುಗ ಅಥವಾ ಹುಡುಗಿ ಮೀಸಲಾತಿಯಿಂದ ಯಾಕೆ ವಂಚಿತರಾಗಬೇಕು ಎಂಬುದು ನಿತಿನ್ ಗಡ್ಕರಿ ಅವರ ಪ್ರಶ್ನೆ.
ಜನಸಂಖ್ಯೆಯನ್ನು ಧೃವೀಕರಿಸಿ ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಸಾಕಾರಗೊಳಿಸುವುದು ಆರೆಸ್ಸೆಸ್ ಕಾರ್ಯಸೂಚಿ. ದಲಿತರನ್ನು ಎದುರು ಹಾಕಿಕೊಂಡರೆ ಈ ಕಾರ್ಯಸಾಧನೆ ಸಲೀಸಲ್ಲ. ಹೀಗಾಗಿಯೇ ದಲಿತರ ಮೀಸಲಾತಿ ಮತ್ತು ಅಂಬೇಡ್ಕರ್ ಅವರನ್ನು ಆರೆಸ್ಸೆಸ್ ದೂರ ಮಾಡಿಕೊಳ್ಳುವುದಿಲ್ಲ. ಅಂಬೇಡ್ಕರ್ ಕೇಸರೀಕರಣದ ಉದ್ದೇಶವೂ ಇದೇ ಆಗಿದೆ ಎಂಬುದು ಖ್ಯಾತ ದಲಿತ ಚಿಂತಕ ಆನಂದ್ ತೇಲ್ತುಂಬ್ಡೆ ಅವರ ವಿಶ್ಲೇಷಣೆ.
ಈ ಹಿನ್ನೆಲೆಯಲ್ಲಿ ಜಾತಿ ಆಧಾರಿತ ಮೀಸಲಾತಿ ಮರುವಿಮರ್ಶೆಗೆ ಒಳಪಡಬೇಕು ಮತ್ತು ಸಮಾಜದಲ್ಲಿ ಅಸಮಾನತೆ ಇರುವ ತನಕ ಮೀಸಲಾತಿ ಮುಂದುವರೆಯಬೇಕು ಎಂಬ ಇಬ್ಬಗೆಯ ಮಾತುಗಳು ಮುಂದುವರೆಯಲಿವೆ.