“ಅರೆ ನ್ಯಾಯಾಂಗದ ಅಧಿಕಾರ ಹೊಂದಿರುವ ಸ್ಪೀಕರ್ ಅವರ ಆದೇಶ ಹೊರಬೀಳುವ ಮುನ್ನ ಅವರ ಕಾರ್ಯಕ್ಷೇತ್ರದಲ್ಲಿ ಮಧ್ಯಪ್ರವೇಶ ಸಾಧ್ಯವಿಲ್ಲ. ಆದರೆ, ಶಾಸಕರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ರಾಜಕೀಯ ಪಕ್ಷಗಳಿಗೆ ನಿರ್ದೇಶನ ನೀಡಬಹುದು. ಪಕ್ಷಗಳು ರಾಜಿನಾಮೆ ನೀಡಿದ ತನ್ನ ಶಾಸಕರನ್ನು ರಾಜಕೀಯ ಉದ್ದೇಶ ಈಡೇರಿಸಿಕೊಳ್ಳಲು ಬಲವಂತ ಮಾಡುವುದು ಸರಿಯಲ್ಲ”
– ಇದು ಮೈತ್ರಿ ಸರ್ಕಾರದ ಅತೃಪ್ತ ಶಾಸಕರ ರಾಜಿನಾಮೆ, ಅನರ್ಹತೆ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ನೀಡಿದ ಮಧ್ಯಂತರ ಆದೇಶದ ಒಟ್ಟಾರೆ ಸಾರಾಂಶ.
ಈ ಮೂಲಕ ವಿಪ್ ಜಾರಿ ಮೂಲಕ ಅನರ್ಹತೆಯ ಬೆದರಿಕೆಯೊಡ್ಡಿ ತಮ್ಮ ಶಾಸಕರನ್ನು ಸದನಕ್ಕೆ ಕರೆಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಹಾಗೆ ಮಾಡದಂತೆ ಸುಪ್ರೀಂ ಕೋರ್ಟೇ ‘ವಿಪ್’ ಜಾರಿ ಮಾಡಿದೆ.
ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮುಂದೆ ಇದ್ದುದು ಮೂರು ಅಂಶಗಳು.
1. ಶಾಸಕರ ರಾಜಿನಾಮೆಯನ್ನು ಶೀಘ್ರ ಇತ್ಯರ್ಥಪಡಿಸುವಂತೆ ಸ್ಪೀಕರ್ ಅವರಿಗೆ ನಿರ್ದೇಶನ ನೀಡುವ ಕೋರಿಕೆ.
2. ಶಾಸಕರ ರಾಜಿನಾಮೆ ಮತ್ತು ಅನರ್ಹತೆ ವಿಚಾರದಲ್ಲಿ ರಾಜಿನಾಮೆಯನ್ನು ಮೊದಲು ಇತ್ಯರ್ಥಗೊಳಿಸಬೇಕೋ ಅಥವಾ ಅನರ್ಹತೆ ದೂರನ್ನು ಮೊದಲು ವಿಚಾರಣೆ ನಡೆಸಿ ನಿರ್ಧಾರ ಕೈಗೊಳ್ಳಬೇಕೋ ಎಂಬುದು.
3. ಅನರ್ಹತೆ ದೂರು ಮತ್ತು ರಾಜಿನಾಮೆ ಅಂಗೀಕಾರ ಈ ಎರಡನ್ನೂ ಏಕಕಾಲದಲ್ಲಿ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಬೇಕೋ ಎಂದು.
ಆದರೆ, ಮೊದಲ ವಿಚಾರವನ್ನು ಸ್ಪೀಕರ್ ಅವರ ವಿವೇಚನೆಗೆ ಬಿಟ್ಟಿರುವ ನ್ಯಾಯಪೀಠ, ಉಳಿದೆರಡು ವಿಷಯಗಳ ಆಳಕ್ಕೆ ಹೋಗದೆ ವಿವಾದಕ್ಕೆ ತಕ್ಷಣದ ಪರಿಹಾರವಾಗಿ ಮಧ್ಯಂತರ ಆದೇಶ ಕೊಟ್ಟಿದೆ. ರಾಜಿನಾಮೆ ನೀಡಿ ಕೋರ್ಟ್ ಮೆಟ್ಟಿಲೇರಿದ ಶಾಸಕರನ್ನು ಬಲವಂತವಾಗಿ ಸದನಕ್ಕೆ ಕರೆಸುವಂತಿಲ್ಲ ಎಂಬ ಆದೇಶ ನೀಡಿ, ಈ ಕುರಿತು ಆಳವಾದ ಅಧ್ಯಯನ ಮತ್ತು ವಿಚಾರಣೆಯನ್ನು ಕಾಯ್ದಿರಿಸಿದೆ.
ಇದೇ ವೇಳೆ ಸ್ಪೀಕರ್ ಅವರ ವಿವೇಚನಾಧಿಕಾರವನ್ನೂ ಒಪ್ಪಿಕೊಂಡಿರುವ ಕೋರ್ಟ್, ರಾಜಿನಾಮೆ ವಿಚಾರದಲ್ಲಿ ಸ್ಪೀಕರ್ ಅವರು ಕಾಲಮಿತಿಯೊಳಗೆ ನಿಯಮಾನುಸಾರ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದೆ. ಆದರೆ, ಕಾಲಮಿತಿ ಎಷ್ಟು ಎಂಬುದನ್ನು ಹೇಳದೇ ಇರುವ ಮೂಲಕ ಅದನ್ನೂ ಸ್ಪೀಕರ್ ಅವರ ವಿವೇಚನೆಗೇ ಬಿಟ್ಟಿದೆ. ಇದರ ಮಧ್ಯೆ, ಸ್ಪೀಕರ್ ಕೈಗೊಳ್ಳುವ ತೀರ್ಮಾನವನ್ನು ಕೋರ್ಟ್ ಮುಂದೆ ಇಡಬೇಕು ಎನ್ನುವ ಮೂಲಕ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳಲ್ಲಿ ಸ್ಪೀಕರ್ ಸ್ಥಾನದಲ್ಲಿದ್ದವರು ಹೇಗೆ ನಿರ್ಧಾರ ಕೈಗೊಳ್ಳಬೇಕು ಎಂಬುದನ್ನು ಅಂತಿಮ ತೀರ್ಪಿನಲ್ಲಿ ನಿಗದಿಪಡಿಸುವ ಮುನ್ಸೂಚನೆಯನ್ನೂ ನೀಡಿದೆ.
ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಸಂದೇಶ
ಇದರ ಮಧ್ಯೆಯೇ ಶಾಸಕರ ರಾಜಿನಾಮೆ ನಂತರ ವಿಧಾನಸಭೆ ಕಲಾಪದಲ್ಲಿ ಆಗುವ ರಾಜಕೀಯ ನಿರ್ಧಾರಗಳ ವಿಚಾರದಲ್ಲಿ ಸರ್ಕಾರ ಅಥವಾ ಆಳುವ ಪಕ್ಷಗಳು ಅಥವಾ ಪ್ರತಿಪಕ್ಷಗಳು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡು ರಾಜಿನಾಮೆ ನೀಡಿದ ತಮ್ಮ ಶಾಸಕರನ್ನು ಕಟ್ಟಿಹಾಕುವ ಪ್ರಯತ್ನ ನಡೆಸುವಂತಿಲ್ಲ ಎಂಬುದು ಸುಪ್ರೀಂ ಆದೇಶದಿಂದ ಸ್ಪಷ್ಟವಾಗಿದೆ. ಸಾಮಾನ್ಯವಾಗಿ ಈ ರೀತಿಯ ವಿಚಾರಗಳು (ಅದು ರಾಜಿನಾಮೆ, ಅನರ್ಹತೆ ಅಥವಾ ವಿಪ್ ಉಲ್ಲಂಘನೆ ವಿಚಾರವಾಗಿರಲಿ) ಬಂದಾಗ ಸ್ಪೀಕರ್ ತೀರ್ಮಾನ ಕೈಗೊಂಡ ಬಳಿಕವೇ ಕೋರ್ಟ್ ಮಧ್ಯಪ್ರವೇಶಿಸುತ್ತಿತ್ತು. ಸ್ಪೀಕರ್ ಆದೇಶ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ವಿಚಾರಣೆ ನಡೆಸಿ ಸ್ಪೀಕರ್ ನಿರ್ಧಾರ ಸರಿಯೇ ತಪ್ಪೇ ಎಂಬುದನ್ನು ನಿರ್ಧರಿಸುತ್ತಿತ್ತು. ಆದರೆ, ಈ ಪ್ರಕರಣದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಸುಪ್ರೀಂ ಕೋರ್ಟ್, ಸದನದ ಆಂತರಿಕ ವಿಚಾರವೇ ಆಗಿರಲಿ, ಅದು ರಾಜಕೀಯ ಕಾರಣದಲ್ಲಿ ನಡೆಯುತ್ತಿದೆ ಎಂದಾದರೆ ಕೋರ್ಟ್ ಮಧ್ಯಪ್ರವೇಶಿಸಲು ಅವಕಾಶವಿದೆ ಎಂಬುದನ್ನು ರಾಜಿನಾಮೆ ನೀಡಿದ ಶಾಸಕರನ್ನು ಬಲವಂತದಿಂದ ಸದನಕ್ಕೆ ಕರೆಸಿಕೊಳ್ಳುವಂತಿಲ್ಲ ಎಂಬ ಆದೇಶದ ಮೂಲಕ ರಾಜಕೀಯ ಪಕ್ಷಗಳಿಗೆ ಒಂದು ರೀತಿಯ ವಿಪ್ ಜಾರಿ ಮಾಡಿತು.
ರಾಜಿನಾಮೆ ಶಾಸಕರ ಹಕ್ಕು ಎಂಬುದನ್ನು ಕೋರ್ಟ್ ಈ ಹಿಂದೆಯೇ ಸ್ಪಷ್ಟವಾಗಿ ಹೇಳಿತ್ತು. ಒಬ್ಬ ಶಾಸಕ ತಾನು ಯಾವ ಪಕ್ಷದಿಂದ ಆಯ್ಕೆಯಾಗಿದ್ದೇನೋ ಆ ಪಕ್ಷ ತನಗೆ ಬೇಡ ಎಂದಾದಲ್ಲಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬರಬಹುದು ಎಂಬುದು ಇದರ ಸಾರಾಂಶ. ಈ ಪ್ರಕರಣದಲ್ಲೂ ಸುಪ್ರೀಂ ಕೋರ್ಟ್ ಅದನ್ನೇ ಹೇಳಿದೆ. ಇದನ್ನು ನೇರವಾಗಿ ಹೇಳದಿದ್ದರೂ ಆದೇಶದ ಅರ್ಥ ಅದೇ ಆಗಿರುತ್ತದೆ. ಆಡಳಿತ ಪಕ್ಷದ ಶಾಸಕರು ಸರ್ಕಾರದ ಕಾರ್ಯವೈಖರಿಯಿಂದ ಬೇಸತ್ತು ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಅಂದರೆ, ಆ ಶಾಸಕರಿಗೆ ತಮ್ಮದೇ ಪಕ್ಷಗಳು ನಡೆಸುತ್ತಿರುವ ಸರ್ಕಾರದ ಬಗ್ಗೆ ವಿಶ್ವಾಸವಿಲ್ಲ ಎಂಬುದು ಅರ್ಥ. ಸರ್ಕಾರ ಉಳಿಸಿಕೊಳ್ಳಲು ಅಂತಹ ಶಾಸಕರನ್ನು ಬಲವಂತವಾಗಿ ಕರೆತರುವುದು (ವಿಪ್ ಜಾರಿಗೊಳಿಸಿ, ಅದನ್ನು ಉಲ್ಲಂಘಿಸಿದರೆ ಅನರ್ಹಗೊಳಿಸಬೇಕಾಗುತ್ತದೆ ಎಂದು ಬೆದರಿಸಿ ಕರೆತರುವುದು) ಸರಿಯಲ್ಲ. ಅದಕ್ಕೆ ಅವಕಾಶವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ.

ವಿಶ್ವಾಸಮತವೋ, ವಿದಾಯ ಭಾಷಣವೋ?
ರಾಜಿನಾಮೆ ನೀಡಿದ ಶಾಸಕರನ್ನು ಸದನದ ಕಲಾಪಗಳಲ್ಲಿ ಭಾಗವಹಿಸುವಂತೆ ಬಲವಂತ ಮಾಡುವಂತಿಲ್ಲ. ಅದನ್ನು ಅವರ ವಿವೇಚನೆಗೆ ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ ಬೆನ್ನಲ್ಲೇ, ರಾಜಿನಾಮೆ ನೀಡಿರುವ 15 ಶಾಸಕರು ತಾವು ಗುರುವಾರ ವಿಶ್ವಾಮತ ಯಾಚನೆ ವೇಳೆ ಸದನಕ್ಕೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ತಾವು ಈ ಹಿಂದೆ ಸದನದಲ್ಲಿ ಘೋಷಿಸಿದಂತೆ ವಿಶ್ವಾಸಮತ ಯಾಚನೆ ಮಾಡುತ್ತಾರೋ ಅಥವಾ ವಿದಾಯ ಭಾಷಣ ಮಾಡಿ ರಾಜಿನಾಮೆ ನೀಡುವ ಘೋಷಣೆಯೊಂದಿಗೆ ಸದನದಿಂದ ನಿರ್ಗಮಿಸುತ್ತಾರೋ ಎಂಬುದನ್ನು ಕಾದು ನೋಡಬೇಕು.
ರಾಜಿನಾಮೆ ನೀಡಿರುವ 15 ಶಾಸಕರು ಗುರುವಾರ ಕಲಾಪಕ್ಕೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ 224 ಸದಸ್ಯಬಲದ ವಿಧಾನಸಭೆಯ ಸದಸ್ಯಬಲ ಸದನದಲ್ಲಿ 209ಕ್ಕೆ ಕುಸಿಯುತ್ತದೆ. ಇಬ್ಬರು ಪಕ್ಷೇತರರೂ ಸರ್ಕಾರದಿಂದ ದೂರ ಸರಿಯುವ ಮೂಲಕ 119 ಸದಸ್ಯರನ್ನು ಹೊಂದಿದ್ದ ಮಿತ್ರಪಕ್ಷಗಳ ಬಲ 102ಕ್ಕೆ ಕುಸಿದಿದೆ. ಆದರೆ, ಪ್ರತಿಪಕ್ಷ ಬಿಜೆಪಿಯ ಸದಸ್ಯ ಬಲ 105 ಇದ್ದು (ಪಕ್ಷೇತರರಿಬ್ಬರು ಸೇರಿದರೆ 107 ಆಗುತ್ತದೆ) ವಿಶ್ವಾಸಮತ ಯಾಚಿಸಿದರೆ ಸೋಲು ಖಚಿತ. ಆದರೆ, ಬಿಜೆಪಿಯ ಕೆಲ ಸದಸ್ಯರು ತಮ್ಮ ಬೆಂಬಲಕ್ಕೆ ನಿಲ್ಲಬಹುದು ಎಂಬ ಕನಸಿನೊಂದಿಗೆ ಮುಖ್ಯಮಂತ್ರಿಗಳು ಸದನದಲ್ಲಿ ಸಂಖ್ಯಾಬಲ ತೋರಿಸಲು ಪ್ರಯತ್ನಿಸುತ್ತಾರೋ ಅಥವಾ ಸದನದಲ್ಲಿ ವಿಶ್ವಾಸಮತ ಸಿಗುವುದು ಸಾಧ್ಯವೇ ಇಲ್ಲ ಎಂದು ಮನದಟ್ಟಾಗಿ ವಿದಾಯ ಭಾಷಣ ಮಾಡಿ ರಾಜಿನಾಮೆ ಸಲ್ಲಿಸುತ್ತಾರೋ ಎಂಬುದಷ್ಟೇ ಉಳಿದಿರುವ ಪ್ರಶ್ನೆ.
ಸದನದಲ್ಲಿ ವಿಶ್ವಾಸಮತ ಯಾಚಿಸದೆ ವಿದಾಯ ಭಾಷಣ ಮಾಡಿ ರಾಜಿನಾಮೆ ಸಲ್ಲಿಸುವುದೇ ಸೂಕ್ತ ಎಂದು ಕುಮಾರಸ್ವಾಮಿ ಅವರು ನಿರ್ಧಿರಿಸಿದಂತಿದೆ. ಏಕೆಂದರೆ, ವಿದಾಯ ಭಾಷಣ ಮಾಡಿ, ಸರ್ಕಾರ ರಚನೆ ಮತ್ತು ಆ ಬಳಿಕ ಇರುವವರೆಗೆ ತಾವು ಏನೆಲ್ಲಾ ಸಮಸ್ಯೆ, ನೋವುಗಳನ್ನು ಎದುರಿಸಬೇಕಾಯಿತು? ಹೆಜ್ಜೆ ಹೆಜ್ಜೆಗೂ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಹೇಗೆ ಪ್ರಯತ್ನಿಸಿತು? ಕಾಂಗ್ರೆಸ್ ಜತೆಗಿನ ಮೈತ್ರಿ ವೇಳೆ ತಾವು ಯಾವ ಪರಿಸ್ಥಿತಿ ಎದುರಿಸಬೇಕಾಗಿ ಬಂದಿತ್ತು? ಎಂಬಿತ್ಯಾದಿ ವಿಚಾರಗಳನ್ನು ಸದನದ ಕಡತದಲ್ಲಿ ದಾಖಲು ಮಾಡಲು ಸಾಧ್ಯವಾಗುತ್ತದೆ. ಸದನದ ನಡಾವಳಿಗಳಿಗೆ ಸಂಬಂಧಿಸಿದಂತೆ ಇದೊಂದು ದಾಖಲೆಯಾಗುತ್ತದೆ ಮತ್ತು ತಮ್ಮ ಮನಸ್ಸಿನಲ್ಲಿದ್ದುದನ್ನು ಹೇಳಿಕೊಂಡಂತೆಯೂ ಆಗುತ್ತದೆ ಎಂಬ ಕಾರಣಕ್ಕೆ ಕುಮಾರಸ್ವಾಮಿ ಅವರು ವಿದಾಯ ಭಾಷಣದೊಂದಿಗೆ ರಾಜಿನಾಮೆ ಸಲ್ಲಿಸಬಹುದು.