ಮಾಲ್ ಗಳು  ಪಾರ್ಕಿಂಗ್ ಶುಲ್ಕ ವಿಧಿಸುವಂತಿಲ್ಲ – ಗುಜರಾತ್ ಹೈ ಕೋರ್ಟ್

ಮಾಲ್ ಗಳು ಹಾಗೂ ಮಲ್ಟಿಪ್ಲೆಕ್ಸ್ ಗಳ ಆದಾಯದಲ್ಲಿ ಗಣನೀಯ ಪಾಲು ಪಾರ್ಕಿಂಗ್ ಶುಲ್ಕದಿಂದ ಬರುತ್ತದೆ. ಮಾಲ್ ಗಳು ಪಾರ್ಕಿಂಗ್ ಶುಲ್ಕ ವಿಧಿಸುವುದನ್ನು ಕಾನೂನು ಬಾಹಿರ ಎಂದಿರುವ ಗುಜರಾತ್ ಹೈ ಕೋರ್ಟ್ ಉಚಿತವಾಗಿ ಪಾರ್ಕಿಂಗ್ ಸೌಲಭ್ಯ ಒದಗಿಸುವಂತೆ ಆದೇಶಿಸಿದೆ. ಪಾರ್ಕಿಂಗ್ ಸಂಬಂಧ ಗುಜರಾತ್ ಬಿಲ್ಡಿಂಗ್ ಮತ್ತು ನಗರ ಯೋಜನಾ ಕಾಯ್ದೆಯ (Gujarat Building and Town Planning) ಅಂಶಗಳನ್ನು ಪರಿಶೀಲಿಸಿದ ಹೈಕೋರ್ಟ್ ನ ದ್ವಿಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

ಕಾಯ್ದೆಯಲ್ಲಿ `ಒದಗಿಸು’ (to provide) ಎಂದು ಹೇಳಲಾಗಿರುವುದನ್ನು ವಿಶ್ಲೇಸಿರುವ ಹೈ ಕೋರ್ಟ್ ಇದರ ಅರ್ಥ ಪಾರ್ಕಿಂಗ್ ಉಚಿತವಾಗಿ ಒದಗಿಸುವುದು ಎಂದು ಹೇಳಿದೆ. “ಗುಜರಾತ್ ಸಮಗ್ರ ಅಭಿವೃದ್ಧಿ ನಿಯಮಗಳಂತೆ (Gujarat Comprehensive General Development Regulations – GCDR), ಪಾರ್ಕಿಂಗ್ ನಂತಹ ವ್ಯವಸ್ಥೆಯಲ್ಲಿ `ಒದಗಿಸು’ ಎಂಬುದರ ಅರ್ಥ ಮಾಲ್ ಅಥವಾ ಅಲ್ಲಿರುವ ಅಂಗಡಿ ಮಾಲಿಕರು ಗ್ರಾಹಕರಿಗೆ ಉಚಿತವಾಗಿ ಒದಗಿಸುವುದು,’’ ಎಂದು ಕೋರ್ಟ್ ವಿವರಿಸಿದೆ.

ಏನಿದು ಪ್ರಕರಣ?

ಗುಜರಾತ್ ನ ಕೆಲವು ನಗರಗಳಲ್ಲಿ ಸಂಚಾರಿ ಪೊಲೀಸರು ಪಾರ್ಕಿಂಗ್ ಶುಲ್ಕ ವಿಧಿಸದಂತೆ ಮಾಲ್ ಗಳಿಗೆ ನೊಟೀಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಮಾಲ್ ಮಾಲಿಕರು ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಏಕ ಸದಸ್ಯ ಪೀಠ ಮಾಲ್ ಗಳ ಅರ್ಜಿಯನ್ನು ಪುರಸ್ಕರಿಸಿತು. ಕಾಯ್ದೆಯಲ್ಲಿ ಎಲ್ಲಿಯೂ ಪಾರ್ಕಿಂಗ್ ಉಚಿತ ಸೌಲಭ್ಯ ಎಂದು ಸ್ಪಷ್ಟ ಶಬ್ದಗಳಲ್ಲಿ ಹೇಳಿಲ್ಲವಾದ್ದರಿಂದ ಸಂಚಾರಿ ಪೊಲೀಸರ ಕ್ರಮ ಸರಿಯಲ್ಲ ಎಂದು ಏಕ ಸದಸ್ಯ ಪೀಠ ಆದೇಶಿಸಿತ್ತು. ಇದರ ಜೊತೆಗೆ, ಪಾರ್ಕಿಂಗ್ ಶುಲ್ಕ ನಿಯಂತ್ರಿಸುವಂತಹ ನಿಯಮಾವಳಿಗಳನ್ನು ರೂಪಿಸಿ ಎಂದೂ ಹೈ ಕೋರ್ಟ್ ಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ನಿರ್ದೇಶನವನ್ನು ಪ್ರಶ್ನಿಸಿ ಮಾಲ್ ಗಳು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದವು. ಆದರೆ, ದ್ವಿಸದಸ್ಯ ಪೀಠ ಅರ್ಜಿಯನ್ನು ಮತ್ತೆ ಸಮಗ್ರ ವಿಚಾರಣೆಗೆ ಒಳಪಡಿಸಿ `ಪಾರ್ಕಿಂಗ್ ಒದಗಿಸುವುದು’ ಎಂಬ ಶಬ್ದ ಬಳಕೆಯನ್ನು ವ್ಯಾಖ್ಯಾನಿಸಿ ಆದೇಶ ನೀಡಿದೆ.

ಮಾಲ್ ಗಳ ಮಾಲಿಕರು ಸಂವಿಧಾನದ 19 (1) (g) ಪರಿಚ್ಛೇದವನ್ನು (ಯಾವುದೇ ಉದ್ಯೋಗ, ವ್ಯವಹಾರ ಮಾಡುವ ಸ್ವಾತಂತ್ರ್ಯ) ಆಧರಿಸಿ ಪಾರ್ಕಿಂಗ್ ಶುಲ್ಕವೂ ಈ ಪರಿಚ್ಛೇದದಡಿ ಅನ್ವಯಿಸುತ್ತದೆ ಎಂದು ವಾದಿಸಿದ್ದರು. ಈ ವಾದವನ್ನು ಒಪ್ಪದ ಹೈ ಕೋರ್ಟ್ ಪೀಠ, ಕಟ್ಟಡದ ಮಾಲಿಕರು ಪಾರ್ಕಿಂಗ್ ಜಾಗ ನಿರ್ಮಿಸುವಾಗ ಮಹಡಿಗಳ ಅನುಪಾತ (Floor Area Ratio/Floor Space Index) ನಿಯಮದಿಂದ ವಿನಾಯಿತಿ ಪಡೆದಿರುತ್ತಾರೆ ಎಂದಿದೆ. ಅಲ್ಲದೇ, ಕಟ್ಟಡವನ್ನು ಬಳಸುವ ಅನುಮತಿ ಪತ್ರ (Occupation Certificate) ಪಡೆಯುವಾಗಲೂ ಈ ವಿನಾಯಿತಿ ಅನ್ವಯಿಸುವುದರಿಂದ, ಪಾರ್ಕಿಂಗ್ ಜಾಗದ ಸೌಲಭ್ಯ ಗ್ರಾಹಕರಿಗೆ ಉಚಿತವಾಗಿಯೇ ಸಲ್ಲಬೇಕು ಎಂದಿದೆ. ಈ ಪಾರ್ಕಿಂಗ್ ಜಾಗದ ನಿರ್ವಹಣೆಯನ್ನೂ ಮಾಲ್ ಮಾಲಿಕ ಹಾಗೂ ಅಂಗಡಿ ಮಾಲಿಕರು ಸಮಾನವಾಗಿ ಭರಿಸಬೇಕು ಎಂದೂ ಕೋರ್ಟ್ ಹೇಳಿದೆ.

ಕರ್ನಾಟಕದಲ್ಲಿ ಹೇಗಿದೆ?

ಕರ್ನಾಟಕದ ಹೆಚ್ಚಿನ ಬಹು ಮಹಡಿ ವಾಣಿಜ್ಯ ಸಂಕೀರ್ಣಗಳು, ಮಾಲ್ ಮತ್ತು ಮಲ್ಟಿಪ್ಲೆಕ್ಸ್ ಗಳು ಯಾವುದೇ ನಿಯಂತ್ರಣವಿಲ್ಲದ ಪಾರ್ಕಿಂಗ್ ಶುಲ್ಕ ವಿಧಿಸುತ್ತವೆ. ಬೆಂಗಳೂರಿನ ಕೆಲವು ಮಾಲ್ ಗಳಲ್ಲಿಯಂತೂ ಕಾರ್ ಪಾರ್ಕಿಂಗ್ ಶುಲ್ಕ ಅತ್ಯಂತ ದುಬಾರಿ. ಉದಾಹರಣೆಗೆ, ಮಲ್ಲೇಶ್ವರಂನ ಮಂತ್ರಿ ಮಾಲ್ ನಲ್ಲಿ ಕಾರ್ ಪಾರ್ಕಿಂಗ್ ಶುಲ್ಕ ಪ್ರತಿ ಗಂಟೆಗೆ ರೂ 30. ಅದೇ, ಕನ್ಹಿಂಗ್ ಹ್ಯಾಮ್ ರಸ್ತೆಯಲ್ಲಿರುವ ಸಿಗ್ಮಾ ಮಾಲ್ ನಲ್ಲಿ ಕಾರ್ ಗಳ ಪ್ರವೇಶಕ್ಕೇ ರೂ 100 ಶುಲ್ಕ, ಅದೇ ದ್ವಿಚಕ್ರ ವಾಹನಕ್ಕೆ ರೂ 50. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾವರು ಸಂಚಾರಿ ಪೊಲೀಸರೋ ಅಥವಾ ಬಿಬಿಎಂಪಿಯೋ ಎಂಬ ಬಗ್ಗೆಯೇ ಗೊಂದಲವಿದೆ.

ಮೈಸೂರು ಮಾದರಿ:

ಮೈಸೂರು ನಗರದಲ್ಲಿ ಮಾಲ್ ಗಳು ವಿಧಿಸುವ ಪಾರ್ಕಿಂಗ್ ಶುಲ್ಕವನ್ನು ನಿಷೇಧಿಸಲಾಗಿದೆ. 2017ರಲ್ಲಿ ಮೈಸೂರು ಮಹಾನಗರ ಪಾಲಿಕೆ ಈ ಆದೇಶ ಹೊರಡಿಸಿ ಯಾವುದೇ ವಾಣಿಜ್ಯ ಪ್ರದೇಶದ ಕಟ್ಟಡದಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸುವಂತಿಲ್ಲ ಎಂದು ಹೇಳಿದೆ. ಪತ್ರಿಕೆಗಳ ವರದಿಗಳ ಪ್ರಕಾರ, ಅಲ್ಲಲ್ಲಿ ಕೆಲವು ಮಾಲ್ ಗಳು ಶುಲ್ಕ ವಿಧಿಸುತ್ತಿವೆಯಾದರೂ ಜನರಲ್ಲಿ ಈ ಬಗ್ಗೆ ಅರಿವು ಮೂಡಿದೆ.

ವಸತಿ ಸಮುಚ್ಛಯಗಳಲ್ಲಿಯೂ ಇದೇ ಸಮಸ್ಯೆ:

ಬಹುಮಹಡಿ ವಸತಿ ಸಮುಚ್ಛಯಗಳಲ್ಲಿಯೂ ಅನಧಿಕೃತ ಪಾರ್ಕಿಂಗ್ ಜಾಗ ಶುಲ್ಕಗಳ ಹಾವಳಿ ಹೆಚ್ಚಿದೆ. ರೇರಾ (Real Estate Regulatory Authority Karnataka) ನಿಯಮಗಳ ಪ್ರಕಾರ ಪಾರ್ಕಿಂಗ್ ಕೂಡ ಕಾಮನ್ ಎರಿಯಾ ಎಂದೇ ಪರಿಗಣಿಸಲ್ಪಡುತ್ತದೆ. ಅಂದರೆ, ಲಿಪ್ಟ್, ಪಾರ್ಕ್, ತಳಮಹಡಿಯಂತೆ ಇದೂ ಕೂಡ ಉಚಿತವಾಗಿ ಉಪಯೋಗಿಸಲ್ಪಡುವಂತದ್ದು. ಹಲವು ಅಪಾರ್ಟ್ ಮೆಂಟ್ ಗಳು ಕಾರ್ ಪಾರ್ಕಿಂಗ್ ಗೆ ಪ್ರತ್ಯೇಕ ದರ ನಿಗದಿಪಡಿಸಿರುತ್ತದೆ.

Related posts

Latest posts

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಇನ್ನಿಲ್ಲ

ಭಾರತದ ಶ್ರೇಷ್ಠ ಓಟಗಾರ ಮಿಲ್ಖಾ ಸಿಂಗ್ ಕೊರೊನಾ ಸೋಂಕಿನಿಂದ ಉಂಟಾದ ಹಲವಾರು ಸಮಸ್ಯೆಗಳಿಂದ ಕೊನೆಯುಸಿರೆಳೆದಿದ್ದಾರೆ. ಚಂಡೀಗಡದ ಪಿಜಿಐ ಆಸ್ಪತ್ರೆಯಲ್ಲಿ ತಮ್ಮ 91 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಕಳೆದ ತಿಂಗಳು ಮಿಲ್ಖಾ ಸಿಂಗ್ ಅವರಿಗೆ...

ಒಂದೇ ದಿನದಲ್ಲಿ ಎರಡು ವಿವಿಧ ಕೋವಿಡ್-19 ಲಸಿಕೆಗಳನ್ನು ಪಡೆದ ಬಿಹಾರದ ಮಹಿಳೆ

ಬಿಹಾರದ 63 ವರ್ಷದ ಮಹಿಳೆಗೆ ಒಂದೇ ದಿನದಲ್ಲಿ ಎರಡು ವಿಭಿನ್ನ ಕಂಪನಿಯ ಕರೋನ ಲಸಿಕೆ ನೀಡಲಾಗಿದೆ. ಅವರು ಈಗ ವೈದ್ಯರ ನಿಗದಲ್ಲಿದ್ದು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಬಿಹಾರದ ಮಹಿಳೆ ಸುನಿಲಾ ದೇವಿ ಎಂಬುವವರಿಗೆ ಜೂನ್ 16...

ಮಸೀದಿಗೆ ಜಾಗ ದಾನ ನೀಡಿದ ಸಿಖ್ ವ್ಯಕ್ತಿ: ಮಸೀದಿಯಲ್ಲಿ ಕಾರ್ಯಕ್ರಮ ಆಯೋಜಿಸಿದ ಗುರುದ್ವಾರ

ಕೋಮು‌‌ ಸಂಘರ್ಷಗಳು, ಪ್ರಚೋದನೆಗಳು ಮತ್ತು ವಿಭಿನ್ನ ಕೋಮಿನ ಜನರ ಮೇಲೆ ವಿನಾಕಾರಣ ಹಲ್ಲೆ, ಕೊಲೆ ನಡೆಯುವ ವಿದ್ಯಮಾನಗಳ ನಡುವೆ ಪಂಜಾಬಿನ‌ ಎರಡು ಜಿಲ್ಲೆಗಳು ಕೋಮುಸಾಮರಸ್ಯವನ್ನು ಉತ್ತೇಜಿಸುವಂತಹ ಘಟನೆಗೆ ಸಾಕ್ಷಿಯಾಗಿವೆ. ಸ್ವಾಭಿಮಾನಕ್ಕೆ, ಕೆಚ್ಚೆದೆಗೆ ಹಠಕ್ಕೆ...