ಕರ್ನಾಟಕದ ನೆಲಕ್ಕಾಗಿ ಕಳೆದ ಅರವತ್ತು ವರ್ಷಗಳಿಂದ ತಗಾದೆ ತೆಗೆಯುತ್ತಿರುವ ನೆರೆಯ ಮಹಾರಾಷ್ಟ್ರ ರಾಜ್ಯ ಬೇಸಿಗೆ ಕಾಲದಲ್ಲಿ ತಾನು ಕರ್ನಾಟಕಕ್ಕೆ ಬಿಡುಗಡೆ ಮಾಡುತ್ತ ಬಂದಿರುವ ನೀರಿನ ಬದಲಾಗಿ ನೀರೇ ಬೇಕೆಂದು ಪಟ್ಟು ಹಿಡಿದಿದೆ! ಬತ್ತಿಹೋಗಿರುವ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿಗೆ ಇನ್ನೂ ಕೊಯ್ನಾದಿಂದ ನೀರು ಬಿಡುಗಡೆ ಆಗದಿರಲು ಮಹಾರಾಷ್ಟ್ರದ ಈ ಹಠಮಾರಿತನವೇ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯ ರಾಜಕೀಯ ಮುಖಂಡರು ಪ್ರತಿ ವರ್ಷದ ಏಪ್ರಿಲ್‌ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಒಯ್ಯುತ್ತಾರೆ. ಕೊಯ್ನಾ ಆಣೆಕಟ್ಟಿನಿಂದ ನೀರು ಬಿಡುಗಡೆಗೆ ಒತ್ತಾಯಿಸುತ್ತಾರೆ. ನೀರು ಹರಿದುಬರುತ್ತದೆ. ಈ ನೀರನ್ನು ತಾವೇ ಬಿಡಿಸಿದ್ದಾಗಿ ಹೇಳಿಕೊಳ್ಳುತ್ತಾರೆ. ಇದರಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ಮಧ್ಯೆ ಪೈಪೋಟಿ ನಡೆಯುತ್ತದೆ!
ಈ ಬಾರಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದಲೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಫೋನ್ ಮಾಡಿಸಲಾಗಿದೆ. ಅಥಣಿ ಭಾಗದ ಸಂಘಟನೆಗಳು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿವೆ. ಇನ್ನಿತರ ಕಡೆಗಳಲ್ಲಿ ರಸ್ತೆ ತಡೆ, ಸತ್ಯಾಗ್ರಹಗಳೂ ನಡೆದಿವೆ. ಆದರೂ ಮಹಾರಾಷ್ಟ್ರ ನೀರು ಬಿಡುತ್ತಿಲ್ಲ.
ರಾಜಾಪುರ ಅಣೆಕಟ್ಟೆಯಿಂದ ತನ್ನ ಹಳ್ಳಿಗಳಿಗೆ ಅತ್ಯಲ್ಪ ನೀರನ್ನು ಮಹಾರಾಷ್ಟ್ರ ಬಿಟ್ಟಿದೆ. ಕೃಷ್ಣಾ ನದಿಗೆ ಈ ನೀರು ಹರಿದಿದೆ. ನದಿಯ ಇನ್ನೊಂದು ಬದಿಗೆ ಕರ್ನಾಟಕದ ಹಳ್ಳಿಗಳಿದ್ದು, ಅವುಗಳಿಗೆ ಮಾತ್ರ ಅಲ್ಪ ಸ್ವಲ್ಪ ಕುಡಿಯಲು ನೀರು ಸಿಕ್ಕಿದೆ.
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕೊಯ್ನಾ ನಗರದ ಬಳಿ 1954ರಿಂದ ಹತ್ತು ವರ್ಷಗಳ ಕಾಲ ನಿರ್ಮಿಸಲ್ಪಟ್ಟ ಕೊಯ್ನಾ ಅಣೆಕಟ್ಟೆಯಲ್ಲಿ (339 ಅಡಿ ಎತ್ತರ, 2,648 ಅಡಿ ಉದ್ದ) ಸಾಕಷ್ಟು ನೀರಿನ ಸಂಗ್ರಹವಿದೆ. ಮಳೆಗಾಲ ಆರಂಭವಾಗುವ ಮೊದಲೇ ನೀರನ್ನು ಬಿಡುಗಡೆ ಮಾಡಲೇಬೇಕಾಗುತ್ತದೆ. ಮಳೆಗಾಲದಲ್ಲಿ ಅಣೆಕಟ್ಟೆ ಸಾಮರ್ಥ್ಯ ಮೀರಿ ನೀರು ಸಂಗ್ರಹಿಸಿದರೆ ಅಪಾಯವನ್ನು ಎದುರಿಸಬೇಕಾದೀತೆಂದು ಬೇಸಿಗೆಯಲ್ಲೇ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ.
ಹಾಗಾದರೆ ಕೃಷ್ಣಾಗೆ ಏಕೆ ನೀರು ಬಿಡುತ್ತಿಲ್ಲ?
ಒಂದು ತಿಂಗಳ ಹಿಂದೆ ಪುಣೆಯಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ನೀರಾವರಿ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಯಿತು. ಪುಣೆಯ ಸಭೆಯಲ್ಲಿ ಮಹಾರಾಷ್ಟ್ರದ ಕೃಷ್ಣಾ ಕೊಳ್ಳದ ಅಭಿವೃದ್ಧಿ ನಿಗಮದ ಕಾರ್ಯಕಾರಿ ನಿರ್ದೇಶಕ ಅನ್ಸಾರಿ ಹಾಗೂ ಕರ್ನಾಟಕದ ಹಿರಿಯ ಅಧಿಕಾರಿಗಳು ಹಾಜರಿದ್ದರು. ಕೊಯ್ನಾದಿಂದ ಬಿಡುಗಡೆ ಮಾಡುವ ನೀರಿನ ಬದಲಾಗಿ ವಿಜಯಪುರ ಜಿಲ್ಲೆಯ ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಯಿಂದ ಸಾಂಗ್ಲಿ ಜಿಲ್ಲೆ ಸೇರಿದಂತೆ ಕೆಲವು ಪ್ರದೇಶಗಳಿಗೆ ನೀರು ಬಿಡುಗಡೆ ಮಾಡಬೇಕೆಂದು ಮಹಾರಾಷ್ಟ್ರದ ಅಧಿಕಾರಿಗಳು ಕರಾರು ಹಾಕಿದರಲ್ಲದೆ, ಈ ಸಂಬಂಧ ಎಂಒಯು ಮಾಡಿಕೊಳ್ಳಬೇಕೆಂದು ಪಟ್ಟು ಹಿಡಿದರು. ಮಹಾರಾಷ್ಟ್ರದ ಈ ನಿಲುವಿನಿಂದಾಗಿ 2016ರಲ್ಲಿ ಅದು ಬಿಡುಗಡೆ ಮಾಡಿದ 2 ಟಿಎಂಸಿ ಹಾಗೂ 2017ರಲ್ಲಿ ಬಿಡುಗಡೆ ಮಾಡಿದ 4.5 ಟಿಎಂಸಿ ನೀರಿನ ಮಾರಾಟ ಮೊತ್ತವಾದ ಸುಮಾರು 20 ಕೋಟಿ ರೂ.ಗಳನ್ನು ಕರ್ನಾಟಕದಿಂದ ಪಡೆದಿಲ್ಲ. ಒಂದು ಟಿಎಂಸಿ ನೀರಿಗೆ 3 ಕೋಟಿ ರೂ.ಗಳನ್ನು ಕರ್ನಾಟಕ ಮೊದಲಿನಿಂದಲೂ ಪಾವತಿಸುತ್ತಲೇ ಬಂದಿದೆ.
ತುಬಚಿ ಬಬಲೇಶ್ವರ ಏತ ನೀರಾವರಿ ಯೋಜನೆಗೆ ಆಲಮಟ್ಟಿಯ ಹಿನ್ನೀರಿನಿಂದ 6.5 ಟಿಎಂಸಿ ನೀರನ್ನು ಎತ್ತಲಾಗುತ್ತಿದೆ. 52 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಗುರಿ ಇದೆ. ಮಹಾರಾಷ್ಟ್ರದ ಬೇಡಿಕೆಯಂತೆ ನೀರು ಬಿಡುಗಡೆ ಮಾಡುವಷ್ಟು ಸದ್ಯ ನೀರಿಲ್ಲ. ನೀರಾವರಿಗಾಗಿ ನಿಗದಿಪಡಿಸಿದ ಪ್ರಮಾಣದಲ್ಲಿ ಹೆಚ್ಚೂಕಡಿಮೆ ಮಾಡಿದರೂ ತಿಕೋಟಾ ನೀರು ವಿತರಣಾ ಕೇಂದ್ರದಿಂದ ಮಹಾರಾಷ್ಟ್ರದ ಜತ್ತ ಮತ್ತಿತರ ಪ್ರದೇಶಗಳಿಗೆ ನೀರು ಕೊಡಬೇಕಾದರೂ 20 ಕಿಮೀನಷ್ಟು ಕೊಳವೆ ಮಾರ್ಗ ಹಾಕಬೇಕು. ಈ ಮೂಲಭೂತ ಸೌಲಭ್ಯವನ್ನು ಯಾರು ಮಾಡಿಕೊಡಬೇಕು? ಕರ್ನಾಟಕ ಮಾಡಬೇಕೋ ಅಥವಾ ಮಹಾರಾಷ್ಟ್ರವೋ? ಈ ಅಂಶವು ಮೊದಲು ನಿರ್ಧಾರವಾಗಬೇಕು.
ಉಭಯ ರಾಜ್ಯಗಳ ನಡುವೆ ಕರಾರು ಒಪ್ಪಂದ ಮಾಡುವ ಸಂಬಂಧ ಒಂದು ವಾರದ ಹಿಂದೆಯಷ್ಟೆ ಬೆಂಗಳೂರಿನಲ್ಲಿ ಹಿರಿಯ ನೀರಾವರಿ ಅಧಿಕಾರಿಗಳ ಸಭೆ ನಡೆಯಿತು. ಕರ್ನಾಟಕ ನೀರಾವರಿ ನಿಗಮ ಮತ್ತು ಕೃಷ್ಣಾ ಜಲಭಾಗ್ಯ ನಿಗಮದ ಅಧಿಕಾರಿಗಳು ಇದರಲ್ಲಿ ಪಾಲ್ಗೊಂಡು ವಿಸ್ಟೃತವಾಗಿ ಚರ್ಚಿಸಿದರು. ಈ ಸಭೆಯಲ್ಲಿ ಎಂಒಯು ಬಹುತೇಕ ಅಂತಿಮಗೊಂಡಿದ್ದು, ರಾಜ್ಯ ಸಚಿವ ಸಂಪುಟದ ಅನುಮೋದನೆ ದೊರೆಯಬೇಕಾಗಿದೆ.
ತುಬಚಿ ಬಬಲೇಶ್ವರ ಯೋಜನೆಯಿಂದ ನೀರನ್ನು ಸಾಂಗ್ಲಿ ಜಿಲ್ಲೆಗೆ ಹರಿಸಬೇಕಾದರೆ ನೀರಾವರಿ ಯೋಜನಾ ಪ್ರದೇಶವನ್ನು ಮೊಟಕುಗೊಳಿಸಬೇಕಾಗುತ್ತದೆ. ಈ ಸಂಬಂಧ ರಾಜ್ಯ ಸಚಿವ ಸಂಪುಟವೇ ನಿರ್ಧಾರ ಕೈಕೊಳ್ಳಬೇಕಾಗುತ್ತದೆ. ಕರ್ನಾಟಕದ ರಾಜಕಾರಣಿಗಳು ಈ ವಿಷಯದಲ್ಲಿ ಪಕ್ಷ ರಾಜಕಾರಣ ಮಾಡದೆ ಸರ್ವಪಕ್ಷಗಳ ನಿಯೋಗವನ್ನು ಮಹಾರಾಷ್ಟ್ರಕ್ಕೆ ಕಳಿಸಬೇಕು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಅಥಣಿ, ರಾಯಬಾಗ ತಾಲೂಕುಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದೆ. ದನಕರುಗಳು ನೀರು, ಮೇವಿಲ್ಲದೆ ನರಳುತ್ತಿವೆ. ಚುನಾವಣೆ ಮುಗಿದಿದೆಯೆಂದು ರಾಜಕಾರಣಿಗಳು ನೀರಿನ ಸಮಸ್ಯೆಯ ಬಗ್ಗೆ ಜಾಣಕಿವುಡನ್ನು ಪ್ರದರ್ಶಿಸಬಾರದು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಕೊಯ್ನಾ ಅಣೆಕಟ್ಟೆಯಿಂದ ಕೃಷ್ಣೆಗೆ ನೀರು ಹರಿಯುವಂತೆ ನೋಡಿಕೊಳ್ಳಬೇಕು.
ಅಂಕಣಕಾರರು ಹಿರಿಯ ಪತ್ರಕರ್ತರು