ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸ್ಥಾಪನೆಗೆ ನೈಜ ಕಾರಣಕರ್ತರು ಮೈಸೂರು ಮಹಾರಾಣಿ ಕೆಂಪನಂಜಮ್ಮಣ್ಣಿ. ಅವರು ನೀಡಿದ ಸ್ಥಳ ಹಾಗೂ ಅನುದಾನದಿಂದ ಐಐಎಸ್ಸಿ ದೊಡ್ಡ ಮಟ್ಟಕ್ಕೆ ಬೆಳೆಯಲು ಉತ್ತಮ ಆರಂಭ ಸಿಕ್ಕಂತಾಯಿತು. ಈ ಹಿನ್ನೆಲೆಯಲ್ಲಿ, ಮಹಾರಾಣಿ ಅವರ ಬದುಕನ್ನು ನೆನೆಯುವಂಥ ಪರಿಚಯಾತ್ಮಕ ಲೇಖನವೊಂದನ್ನು ತನ್ನ ಜಾಲತಾಣ Connect ನಲ್ಲಿ ಪ್ರಕಟಿಸಿದೆ. ಈ ಲೇಖನದ ಭಾವಾನುವಾದವಿದು. ಮೂಲ ಬರಹಗಾರರು – ದೀಪಿಕಾ ಎಸ್
* * *
1881ರಿಂದ 1894ರವರೆಗೆ ಮೈಸೂರನ್ನು ಆಳಿದ ಚಾಮರಾಜೇಂದ್ರ ಒಡೆಯರ್, ಕೆಂಪನಂಜಮ್ಮಣ್ಣಿ ಅವರ ಪತಿ. 1902ರಿಂದ 1940ರವರೆಗೆ ರಾಜ್ಯವಾಳಿದ ಕೃಷ್ಣರಾಜ ಒಡೆಯರ್, ಕೆಂಪನಂಜಮ್ಮಣ್ಣಿ ಅವರ ಮಗ. ಆದರೆ, ಕೆಂಪನಂಜಮ್ಮಣ್ಣಿ ಅವರ ಕುರಿತು ಚರಿತ್ರೆಯಲ್ಲಿ ದಾಖಲಾಗಿದ್ದು ಹಾಗೂ ಜನರಿಗೆ ತಿಳಿದದ್ದು ಕಡಿಮೆಯೇ.
1950ರಲ್ಲಿ ಪ್ರಕಟವಾದ, ಜಿ.ಆರ್.ಜೊಯರ್ ಅವರ ‘ಹಿಸ್ಟರಿ ಆಫ್ ಮೈಸೂರ್ ಅಂಡ್ ದಿ ಯಾದವ ಡೈನಾಸ್ಟಿ’ ಪುಸ್ತಕದಲ್ಲಿ ಕೆಂಪನಂಜಮ್ಮಣ್ಣಿ ಅವರ ಕುರಿತು ಒಂದಷ್ಟು ಮಾಹಿತಿ ಇದೆ. ಮಹಾರಾಜ ಚಾಮರಾಜೇಂದ್ರ ಅವರಿಗೆ ಹದಿನಾಲ್ಕು ವರ್ಷ ವಯಸ್ಸಿರುವಾಗ, 1876ರಲ್ಲಿ ದೆಹಲಿಯಲ್ಲಿ ನಡೆದ ರಾಣಿ ವಿಕ್ಟೋರಿಯಾ 75ನೇ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗವಹಿಸಿದ್ದರು. ವಾಪಸು ಬರುವಾಗ, ಈಗಿನ ಮಧ್ಯಪ್ರದೇಶದ ರೇವ ರಾಜಮನೆತನದ ಹೆಣ್ಣನ್ನು ನೋಡುವ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅಲ್ಲಿನ ರಾಣಿಗೆ ದೂರದ ರಾಜಮನೆತನದೊಂದಿಗಿನ ಈ ನಂಟು ಇಷ್ಟವಾಗಲಿಲ್ಲ. ಹಾಗಾಗಿ ವಧು ಅನ್ವೇಷಣೆ ಚಾಲ್ತಿಯಲ್ಲಿತ್ತು. ಸ್ವಲ್ಪ ಸಮಯದಲ್ಲೇ ಮದ್ದೂರು ಬಳಿಯ ಕಳಲೆಯಲ್ಲಿ ಹೆಣ್ಣು ಗೊತ್ತಾಯಿತು. 1878ರ ಮೇ ತಿಂಗಳಲ್ಲಿ ಹದಿನೈದು ವರ್ಷದ ಚಾಮರಾಜೇಂದ್ರ ಮತ್ತು ಹನ್ನೆರಡು ವರ್ಷದ ಕೆಂಪನಂಜಮ್ಮಣ್ಣಿ ಮದುವೆ ನೆರವೇರಿತು. ರಾಜಮನೆತನವು ಕೆಂಪನಂಜಮ್ಮಣ್ಣಿ ಅವರಿಗೆ ಕೊಟ್ಟ ಹೆಸರು ‘ಮಹಾರಾಣಿ ವಾಣಿ ವಿಲಾಸ ಸನ್ನಿಧಾನ.’
ತಂದೆಯ ಮರಣದ ನಂತರ ಚಾಮರಾಜೇಂದ್ರ ಅವರಿಗೆ ಸಹಜವಾಗಿಯೇ ಮಹಾರಾಜ ಎಂಬ ಪಟ್ಟ ಬಂತಾದರೂ, ಆಳ್ವಿಕೆ ಬ್ರಿಟಿಷರ ಕೈಯಲ್ಲಿತ್ತು. ಚಾಮರಾಜೇಂದ್ರ ಅವರಿಗೆ ನಿಜವಾಗಿಯೂ ಅಧಿಕಾರ ಸಿಕ್ಕಿದ್ದು 1881ರ ಮಾರ್ಚ್‌ನಲ್ಲಿ, ಅದೂ ಕೆಲವು ಷರತ್ತುಗಳೊಂದಿಗೆ. ಉಸ್ತುವಾರಿಯೆಲ್ಲವೂ ಬ್ರಿಟಿಷ್ ಆಡಳಿತವೇ ನೋಡಿಕೊಳ್ಳುತ್ತಿತ್ತು, ರಾಜ ಅವರಿಗೆ ವಿಧೇಯನಾಗಿ ಇರಬೇಕಿತ್ತು ಮತ್ತು ವರ್ಷಕ್ಕೆ ಮುವತ್ತೈದು ಲಕ್ಷ ರೂಪಾಯಿಯನ್ನು ‘ರಕ್ಷಣಾ ವೆಚ್ಚ’ವಾಗಿ ಬ್ರಿಟಿಷರಿಗೆ ಪಾವತಿಸಬೇಕಿತ್ತು. ಬ್ರಿಟಿಷರ ಆಜ್ಞೆಗಳು ಚಾಲ್ತಿಯಲ್ಲಿವೆಯೇ ಎಂದು ನೋಡಿಕೊಳ್ಳಲು ರೆಸಿಡೆಂಟ್‌ನನ್ನು ನೇಮಿಸಲಾಗಿತ್ತು. ಇಷ್ಟೆಲ್ಲ ರಗಳೆಗಳ ನಡುವೆಯೂ ಚಾಮರಾಜೇಂದ್ರ ತಮ್ಮ ಹೆಸರು ಉಳಿಯುವಂತೆ ನಡೆದುಕೊಂಡರು. ಶಿಕ್ಷಣಕ್ಕೆ ಒತ್ತು ನೀಡಲಾಗಿತ್ತು. ಬಾಲಕಿಯರಿಗೆಂದೇ ಮೊದಲ ಶಾಲೆ ಸ್ಥಾಪನೆಯಾಯಿತು. ಹೊಸ ರಸ್ತೆಗಳು, ರೈಲ್ವೆ, ನೀರಾವರಿ, ಕಾರ್ಖಾನೆಗಳು ಮುಂತಾದ ಅಭಿವೃದ್ಧಿ ಕೆಲಸಗಳು ನಡೆದವು. ಕೃಷಿಭೂಮಿಯ ಪ್ರಮಾಣ ಹೆಚ್ಚಾಯಿತು. ಇದೆಲ್ಲದರ ಪರಿಣಾಮವಾಗಿ, ರಾಜ್ಯದ ಆದಾಯ ಹೆಚ್ಚೂಕಡಿಮೆ ದ್ವಿಗುಣವಾಯಿತು.

1894ರ ಡಿಸೆಂಬರ್ 28ರಂದು 31ನೇ ವಯಸ್ಸಿನಲ್ಲಿ ಚಾಮರಾಜೇಂದ್ರ ಇಲ್ಲವಾಗುತ್ತಾರೆ. ಈ ಕುರಿತು ದಾಖಲಾಗಿರುವುದು ಹೀಗೆ: “ಚಳಿಗಾಲದಲ್ಲಿ ಕೋಲ್ಕತಾ ಪ್ರಯಾಣ ಕೈಗೊಳ್ಳಲಾಗಿತ್ತು. ಹಾಗೆಯೇ, ದೆಹಲಿಗೂ ತಲುಪಲಾಗಿತ್ತು. ಆದರೆ, ಕೋಲ್ಕತಾಗೆ ಬರುವಷ್ಟರಲ್ಲಿ ಅವರಿಗೆ ಗಂಟಲು ಬೇನೆ ಕಾಣಿಸಿಕೊಂಡಿತ್ತು. ಇದು ದೊಡ್ಡದಾಗಿ ಕೊನೆಗೆ ಪ್ರಾಣ ತೆರಬೇಕಾಯಿತು. ಪ್ರಯಾಣದುದ್ದಕ್ಕೂ ಜೊತೆಗಿದ್ದ ಮಹಾರಾಣಿ, ಇಬ್ಬರು ಗಂಡುಮಕ್ಕಳು, ಮೂವರು ಹೆಣ್ಣುಮಕ್ಕಳು ಮತ್ತು ದಿವಾನ್ ಕೆ.ಶೇಷಾದ್ರಿ ಅಯ್ಯರ್ ಆಘಾತಕ್ಕೆ ಸಿಲುಕಿದರು. ಕೊನೆಗೆ ಅಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿ ವಾಪಸು ಮೈಸೂರಿಗೆ ಬಂದರು.” ಚಾಮರಾಜೇಂದ್ರ ಅವರಿಗೆ ಸಂಗೀತ, ಸಾಹಿತ್ಯದಲ್ಲಿ ಅಪಾರ ಒಲವಿತ್ತು. ದೇಶಾದ್ಯಂತ ಪ್ರಮುಖ ವ್ಯಕ್ತಿಗಳ ಜೊತೆ ಒಳ್ಳೆಯ ಬಾಂಧವ್ಯವಿತ್ತು. ಜನರಿಗೆಲ್ಲ ಅವರ ಆಲೋಚನೆ ಮತ್ತು ಶಕ್ತಿ ಬಗೆಗೆ ಎಷ್ಟು ಗೊತ್ತಿತ್ತೋ ಅದಕ್ಕಿಂತ ಹೆಚ್ಚೇ ಮಹಾರಾಣಿಗೆ ಗೊತ್ತಿತ್ತು. ಹಾಗಾಗಿಯೇ, ನೋವಿನಲ್ಲಿದ್ದರೂ ರಾಜ್ಯ ನಿಭಾಯಿಸುವ ಭಾರ ಹೊರಲು ಅಣಿಯಾಗಿದ್ದಕ್ಕೆ ಇದೂ ಒಂದು ಕಾರಣ.
ಮಹಾರಾಜ ಚಾಮರಾಜೇಂದ್ರ ತೀರಿಕೊಂಡ ಎರಡು ದಿನ ಕಳೆದು ಬ್ರಿಟಿಷ್ ಆಡಳಿತದಿಂದ ಅಧಿಕೃತವಾಗಿ ಪ್ರಕಟಣೆ ಹೊರಬಿತ್ತು: ಮೈಸೂರು ಸಂಸ್ಥಾನದ ಮುಂದಿನ ಅರಸು ಕೃಷ್ಣರಾಜ ಒಡೆಯರ್. ಆದರೆ, ಕೃಷ್ಣರಾಜ ಕೇವಲ ಹತ್ತು ವರ್ಷ ವಯಸ್ಸಿನವರಾದ ಕಾರಣ, ಆಳ್ವಿಕೆ ನಡೆಸುವಷ್ಟು ವಯಸ್ಸು ಆಗುವವರೆಗೆ ಮಹಾರಾಣಿ (ಆಗಿನ್ನೂ 26 ವಯಸ್ಸು) ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಪ್ರಮುಖ ಕಾರ್ಯಗಳ ಮಾಹಿತಿಯನ್ನು ರೆಸಿಡೆಂಟ್‌ರಿಗೆ ತಲುಪಿಸುವುದು, ಸಲಹೆ ಪಡೆಯುವುದು ಮುಂತಾದ ಎಲ್ಲವನ್ನೂ ದಿವಾನ್ ಅವರು ನಿಭಾಯಿಸಲಿದ್ದರು, ಮಹಾರಾಣಿ ಅವರ ಆಶಯ ಮತ್ತು ಆದೇಶದಂತೆ. ಆದರೆ, ಬಹಳಷ್ಟು ಉಲ್ಲೇಖಗಳು ಹೇಳುವುದೇನೆಂದರೆ, ಆ ಅವಧಿಯಲ್ಲಿ ಅವರು ಮಹಾರಾಣಿ ಎಂಬುದಕ್ಕಿಂತ ಹೆಚ್ಚಾಗಿ ತಾಯಿಯಂತೆ ರಾಜ್ಯವನ್ನೂ ಯುವರಾಜನನ್ನೂ ಒಟ್ಟಿಗೇ ಪೋಷಿಸಿದರು.
ಅಧಿಕಾರಕ್ಕೆ ಬಂದ ತಕ್ಷಣ, ದಿವಾನ್ ಅವರಿಗೆ ಸಹಾಯ ಮಾಡಲೆಂದು ಮೂವರು ಸದಸ್ಯರ ಸಮಿತಿ ರಚಿಸಿದರು. ಜನರನ್ನು ಇನ್ನಿಲ್ಲದಂತೆ ಕಾಡುತ್ತಿದ್ದ ಪ್ಲೇಗ್ ನಿಯಂತ್ರಣಕ್ಕೆ ಬಂದಿತು. ಬೆಂಗಳೂರಿನಲ್ಲಿ ವಿಕ್ಟೋರಿಯಾ ಆಸ್ಪತ್ರೆ ನಿರ್ಮಾಣವಾಯಿತು. ಮೈಸೂರು ಮತ್ತು ಬೆಂಗಳೂರಿಗೆ ಕುಡಿಯುವ ನೀರಿನ ವ್ಯವಸ್ಥೆ, ಮಾರಿಕಣಿವೆ ನೀರಾವರಿ ಯೋಜನೆ ಮುಂತಾದ ಜನಪರ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಯಿತು. ಗ್ರಾಮೀಣ ಪ್ರದೇಶಗಳಿಂದ ನಗರಕ್ಕೆ ಓದಲು ಬರುತ್ತಿದ್ದವರಿಗಾಗಿ ಹಾಸ್ಟೆಲ್ ಸ್ಥಾಪನೆಯಾಯಿತು. ವಿದ್ಯಾರ್ಥಿವೇತನಗಳನ್ನು ಪರಿಚಯಿಸಲಾಯಿತು. ಶಾಲೆಗಳಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಿತು.
1881ರಿಂದ 1902ರ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಮಾಡುತ್ತಿದ್ದ ವೆಚ್ಚ ಬರೋಬ್ಬರಿ ನಾಲ್ಕು ಪಟ್ಟು ಹೆಚ್ಚಾಗಿತ್ತು. ಸಾರ್ವಜನಿಕ ಯೋಜನೆಗಳಿಗೆ ಮಾಡಲಾಗುತ್ತಿದ್ದ ವೆಚ್ಚ ಎರಡು ಪಟ್ಟು ಹೆಚ್ಚಿತು. ಆರೋಗ್ಯ ಕ್ಷೇತ್ರದ ಮೇಲಿನ ವೆಚ್ಚ ಮೂರು ಪಟ್ಟು ಏರಿಕೆ ಕಂಡಿತು. ಇದರೊಂದಿಗೆ ಆದಾಯ ಕೂಡ ದುಪ್ಪಟ್ಟಾಯಿತು. ತಮ್ಮ ಹಿರಿಯ ಮಗಳ ಮದುವೆ ಸಮಯದಲ್ಲಿ ಬೆಂಕಿಗೆ ಆಹುತಿಯಾಗಿದ್ದ ಅಂಬಾ ವಿಲಾಸ ಅರಮನೆಯನ್ನು ಪುನರುಜ್ಜೀವನ ಮಾಡಲು ಹೆನ್ರಿ ಇರ್ವಿನ್ ಎಂಬುವರನ್ನು ನೇಮಿಸಲಾಯಿತು. 1901ರಲ್ಲಿ ದಿವಾನ್ ಶೇಷಾದ್ರಿ ಅಯ್ಯರ್ ಕಾಲವಾದಾಗ, ಅವರಿಗೆ ರಾಜ್ಯದ ಅಭಿವೃದ್ಧಿಯ ಶ್ರೇಯವನ್ನು ಕೊಡಲು ಮಹಾರಾಣಿ ಸ್ವಲ್ಪವೂ ಹಿಂಜರಿಯಲಿಲ್ಲ. “ಮೈಸೂರು ಆಡಳಿತಕ್ಕೆ ಹೆಚ್ಚು ದಕ್ಷತೆ ಒದಗಿಸಿದ್ದರಲ್ಲಿ, ಸುಧಾರಣೆಗಳನ್ನು ಸಾಧ್ಯವಾಗಿಸಿದ್ದರಲ್ಲಿ ದಿವಾನರ ಆಲೋಚನೆ, ಬುದ್ಧಿವಂತಿಕೆಯ ಪಾಲು ದೊಡ್ಡದು,” ಎಂದು ಮಹಾರಾಣಿ ಹೇಳಿಕೊಂಡಿದ್ದರು.

ಆದರೆ, ಬಹುತೇಕರು ಟಿಪ್ಪಣಿ ಮಾಡುವಂತೆ, ಈ ಅವಧಿಯಲ್ಲಿನ ಎಲ್ಲ ಸುಧಾರಣೆ, ಅಭಿವೃದ್ಧಿಯಲ್ಲಿ ದಿವಾನರ ಪಾತ್ರವೂ ಇತ್ತು ನಿಜ; ಜೊತೆಗೆ, ಅವುಗಳನ್ನು ಸಾಧ್ಯವಾಗಿಸುವಲ್ಲಿ ಮಹಾರಾಣಿಯವರ ಪಾತ್ರವೂ ಅಷ್ಟೇ ಮುಖ್ಯವಾಗಿತ್ತು. ಮಹಾರಾಣಿಯವರನ್ನು ರಾಣಿ ವಿಕ್ಟೋರಿಯಾ ಅವರಿಗೆ ಹೋಲಿಸುವ ಉಲ್ಲೇಖಗಳೂ ಉಂಟು. “ನನ್ನ ಅಭಿಪ್ರಾಯದಲ್ಲಿ, ಮೈಸೂರು ಮಹಾರಾಣಿಯವರಂಥ ದಕ್ಷ ಮತ್ತು ಗೌರವಯುತ ಮಹಿಳೆ ಇಂಡಿಯಾದಲ್ಲಿ ಮತ್ತೊಬ್ಬರಿಲ್ಲ,” ಎಂದಿದ್ದಾರೆ ಯುರೋಪಿನಿಂದ ಬಂದ ಪ್ರವಾಸಿಯೊಬ್ಬರು. ಹೀಗೆ ಹೇಳಲು ಕಾರಣವೂ ಇತ್ತು: ಮಕ್ಕಳನ್ನು ಸಂಭಾಳಿಸಿಕೊಂಡು, ಯುವರಾಜನ ತರಬೇತಿಯತ್ತ ಗಮನ ಕೊಡುತ್ತ, ರಾಜ್ಯಭಾರವನ್ನೂ ನೋಡಿಕೊಳ್ಳುವುದು ಸುಲಭದ ಕೆಲಸವೇನೂ ಆಗಿರಲಿಲ್ಲ. ದಿವಾನ್ ಶೇಷಾದ್ರಿ ಅಯ್ಯರ್ ಅವರಿಗೆ ಸಹಾಯ ಮಾಡಲೆಂದು ಮಹರಾಣಿ ರಚಿಸಿದ್ದ ಸಮಿತಿಯ ಸದ್ಯಸರಲ್ಲಿ ಒಬ್ಬರಾಗಿದ್ದ ಟಿಆರ್‌ಎ ತುಂಬೂ ಚೆಟ್ಟಿಯವರು ಹೇಳಿರುವುದು ಹೀಗೆ: “ಅವರ ವ್ಯವಹಾರ ಜಾಣ್ಮೆ, ಅರಿವು, ವ್ಯಕ್ತಿತ್ವ ಪ್ರಭಾವಿಯಾಗಿತ್ತು. ಪ್ರತಿಯೊಂದನ್ನೂ ತಾಳ್ಮೆಯಿಂದ ಆಲಿಸುವ ಗುಣವಿತ್ತು. ನೇರಾನೇರ ಮಾತನಾಡುವುದು ಇತ್ತು. ಯಾವುದೇ ಚರ್ಚೆ ಇರಲಿ, ಹೇಳಬೇಕಾದುದನ್ನು ನೇರವಾಗಿ ಹೇಳುವುದು ಸಾಧ್ಯವಿತ್ತು. ಬಹಳಷ್ಟು ಸಮಸ್ಯೆಗಳಿಗೆ ಅವರು ಥಟ್ಟನೆ ಹೇಳುತ್ತಿದ್ದ ಪರಿಹಾರಗಳು ನನ್ನನ್ನು ದಂಗುಬಡಿಸಿದ್ದೂ ಉಂಟು.“
1902ರ ಆಗಸ್ಟ್ ಎಂಟರಂದು ಮಹಾರಾಣಿಯವರ ಉಸ್ತುವಾರಿ ಕೊನೆಗೊಂಡು, ಕೃಷ್ಣರಾಜ ಅಧಿಕೃತವಾಗಿ ಮಹಾರಾಜ ಎನಿಸಿಕೊಂಡರು. ನಂತರವೂ ಮಗ ಕೃಷ್ಣರಾಜ, ಅನೇಕ ವಿಷಯಗಳಲ್ಲಿ ಕೆಂಪನಂಜಮ್ಮಣ್ಣಿ ಅವರ ಸಲಹೆಗಳಿಗಾಗಿ ಭೇಟಿ ಆಗುತ್ತಿದ್ದದ್ದು ಹೌದು. ಕೆಂಪನಂಜಮ್ಮಣ್ಣಿ ಕೂಡ ಆಗೊಮ್ಮೆ ಈಗೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು. 1917ರಲ್ಲಿ ಮೈಸೂರಿನಲ್ಲಿ ಮಹಾರಾಣಿ ಮಹಿಳಾ ಕಾಲೇಜು ಉದ್ಘಾಟನೆ ಮಾಡಿದ್ದು ಇದೇ ಕೆಂಪನಂಜಮ್ಮಣ್ಣಿ ಅವರು. 1934ರ ಜುಲೈ ಏಳರಂದು ಮಹಾರಾಣಿ ನಿಧನರಾದರು. 1935ರಲ್ಲಿ, ಅವರ ನೆನಪಿಗೆ, ವಾಣಿ ವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಬಳಿಯೇ ಸ್ಥಾಪಿಸಲಾಯಿತು. ನಂತರವೂ ಹಲವು ಯೋಜನೆಗಳಿಗೆ ‘ವಾಣಿ ವಿಲಾಸ’ ಎಂಬ ಹೆಸರು ಕೊಟ್ಟು ಅವರನ್ನು ನೆನಪಿಸಿಕೊಳ್ಳಲಾಯಿತು.