ಆಗುಂಬೆ ರಸ್ತೆ ದುರಸ್ತಿ ಕಾರ್ಯ ಆರಂಭವಾಗಿ ಇಂದಿಗೆ 30 ದಿನಗಳು ಕಳೆದಿದ್ದು, ಒಂದು ತಿಂಗಳ ಗಡುವಿನೊಳಗೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಮಧ್ಯ ಕರ್ನಾಟಕ ಹಾಗೂ ಮಲೆನಾಡು ಪ್ರಾಂತ್ಯವನ್ನು ಬೆಸೆಯುವ ಪ್ರಮುಖ ಮಾರ್ಗ ಆಗುಂಬೆ ಘಾಟಿ ಕಾಮಗಾರಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿತ್ತು. ದ್ವಿಚಕ್ರ ವಾಹನ ಹೊರತುಪಡಿಸಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆಗುಂಬೆ ಘಾಟಿಯ ತಿರುವುಗಳಲ್ಲಿ ಹೆಬ್ಬಂಡೆಗಳು, ಆಳಕ್ಕೆ ಬೇರೂರಿರುವ ದೈತ್ಯ ಮರಗಳು, ನೀರಿನ ಚಿಕ್ಕಪುಟ್ಟ ಕಿರುದಾರಿಗಳು, ಗುಹೆಗಳಿವೆ. ರಸ್ತೆ ದುರಸ್ತಿಗೆ ಮೊದಲಿಂದಲೂ ಆಕ್ಷೇಪಣೆ ವ್ಯಕ್ತಪಡಿಸುತ್ತಿರುವ ಪರಿಸರವಾದಿಗಳು, ಕಾಮಗಾರಿಯನ್ನು ಸೂಕ್ಷ್ಮವಾಗಿ ಅವಲೋಕನ ಮಾಡುತ್ತಿದ್ದಾರೆ. ಕಾಮಗಾರಿಯಿಂದ ವ್ಯಾಪಕವಾಗಿ ಪರಿಸರಕ್ಕೆ ಹಾನಿಯಾಗುತ್ತಿರುವುದನ್ನು ಗಮನಿಸಿದ್ದಾರೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಉಡುಪಿ ವನ್ಯಜೀವಿ ವಲಯದ ಅಧಿಕಾರಿಗಳು ಕಾಮಗಾರಿಯನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಆಗುಂಬೆ ಘಾಟಿಯ ಮೇಲೆ ಇತ್ತೀಚಿನ ದಿನಗಳಲ್ಲಿ ಒತ್ತಡ ಹೇರುತ್ತಿರುವುದಕ್ಕೆ ನಿದರ್ಶನ ಎಂಬಂತೆ ಪದೇಪದೇ ಮಣ್ಣು ಕುಸಿತ ಕಂಡುಬರುತ್ತಿದೆ. ಕಳೆದ ವರ್ಷ ಮೂರು ಸಲ ಭಾರಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಈ ಭಾಗದಲ್ಲಿ ಶಾಶ್ವತ ದುರಸ್ತಿ ಕಾರ್ಯದ ಅನಿವಾರ್ಯತೆ ಇದ್ದುದರಿಂದ ಮುಂಗಾರು ಆರಂಭದ ಮೊದಲು ಕಾಮಗಾರಿಯನ್ನು ಮುಗಿಸಿಬಿಡುವ ಸಂಕಲ್ಪ ಮಾಡಲಾಯಿತು. ಶಿವಮೊಗ್ಗ-ಉಡುಪಿ ಜಿಲ್ಲೆಯಲ್ಲಿ ಹಂಚಿರುವ ಘಾಟಿಯನ್ನು ಮೂರ್ನಾಲ್ಕು ವನ್ಯಜೀವಿ ವಿಭಾಗಗಳು ಕಣ್ಗಾವಲು ಮಾಡುತ್ತಿವೆ. ಅಪರೂಪದ ಜೀವಸಂಕುಲದ ಆಗರವಾಗಿರುವ ಆಗುಂಬೆ ಕಾಡಿನಲ್ಲಿ ರಸ್ತೆ ಸೇರಿಕೊಂಡು ಯಾವುದೇ ಅಭಿವೃದ್ಧಿ ಕಾರ್ಯ ಶುರುಮಾಡಿದರೂ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತೆ. ಈ ಕಾಮಗಾರಿಯ ವಿಳಂಬಕ್ಕೆ ಕಾರಣ ಮೇಲ್ನೋಟಕ್ಕೆ ವನ್ಯಜೀವಿ ವಿಭಾಗದ್ದೇ ಆದರೂ ಅದರ ಹಿಂದಿರುವುದು ಪರಿಸರವಾದಿಗಳೇ.

ಕಳೆದೊಂದು ವಾರದಿಂದ ಆನೆಬಂಡೆ ಅಥವಾ ಆನೆಕಲ್ಲು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಪರೂಪದ ಈ ಹೆಬ್ಬಂಡೆ ರಸ್ತೆಗೆ ಚಾಚಿಕೊಂಡಿದೆ. ಬ್ರಿಟಿಷರ ಕಾಲದಿಂದಲೂ ಈ ಬಂಡೆಯನ್ನು ಹಾಗೆಯೇ ಉಳಿಸಿಕೊಂಡು ಬರಲಾಗಿದೆ. ಈಗ ಇದರ ಬಳಿಯಲ್ಲಿ ಕಾಮಗಾರಿ ವಿಳಂಬವಾಗಿದ್ದು, ಪ್ರತಿದಿನ ಪರಿಶೀಲನೆಗಳದ್ದೇ ಕಾರುಬಾರಾಗಿದೆ.
ರಸ್ತೆ ದುರಸ್ತಿ ಕಾಮಗಾರಿ ವೆಚ್ಚ 2 ಕೋಟಿ 15 ಲಕ್ಷ ರೂಪಾಯಿ. ಈ ವರ್ಷದ ಮೊದಲೇ ಕಾಮಗಾರಿ ಶುರುವಾಗಿ ಮಳೆಗಾಲ ಆರಂಭವಾಗುವುದರಲ್ಲೇ ಮುಕ್ತಾಯವಾಗಬೇಕಿತ್ತು, ಮಾರ್ಚ್ ತಿಂಗಳಿನಲ್ಲೇ ಹೊರಡಿಸಿದ್ದ ನಿಷೇಧ ಆದೇಶ ಎಸ್ಎಸ್ಎಲ್ ಸಿ ಹಾಗೂ ಪಿಯು ಪರೀಕ್ಷೆ ವೇಳೆ ಸಡಿಲಿಸಲಾಗಿತ್ತು.
ಏಪ್ರಿಲ್ 1ರಿಂದ ಅಧಿಕೃತ ಅದೇಶದಿಂದ ಹೇಗೋ ಆರಂಭವಾದ ಕಾಮಗಾರಿ ಶೇ.60ರಷ್ಟು ಮುಕ್ತಾಯವಾಗಿದೆ. ಆದರೆ, ಉಳಿದ ಕೆಲಸ ತಿಂಗಳಾದರೂ ಮುಕ್ತಾಯವಾಗುವ ಲಕ್ಷಣಗಳು ಕಾಣುತ್ತಿಲ್ಲ, ರಕ್ಷಣಾ ಗೋಡೆ ದುರಸ್ತಿ ಆಗಿದೆ. ಐದನೇ ತಿರುವಿನ ಆನೆ ಬಂಡೆ ಬಳಿ ರಸ್ತೆಯನ್ನು ಅಗಲ ಮಾಡಬೇಕಿದೆ. ವನ್ಯಜೀವಿ ವಿಭಾಗ ಹಾಗೂ ಪರಿಸರವಾದಿಗಳ ಆಕ್ಷೇಪದ ನಡುವೆಯೂ ಈಗಿರುವ ರಸ್ತೆಯನ್ನು ಎಂಟು ಅಡಿ ಆಳ ಹೊಡೆದು, ಕೆಳಬದಿಯಲ್ಲಿ ಸ್ಲ್ಯಾಬ್ ಹಾಕಿ ರೀಟೇನಿಂಗ್ ವಾಲ್ ಹಾಕಲಾಗಿದೆ. ಇದು ನೆಲಮಟ್ಟಕ್ಕೆ ಬಂದಾಗ ಅಲ್ಲಿ ರೀಟೇನಿಂಗ್ ವಾಲ್‌ನ ರಾಡ್‌ಗಳನ್ನು ಬಗ್ಗಿಸಿ ಕಾಂಕ್ರೀಟ್ ಮಾಡಲು ಮುಂದಾಗಿದ್ದಾರೆ. ಇಲ್ಲಿ ಸಮಸ್ಯೆ ಆರಂಭವಾಗಿದ್ದು ಆನೆಬಂಡೆಗೆ ಹಾನಿಯಾಗದಂತೆ ಡಾಂಬಾರ್ ಬಳಸಬೇಕಾಗಿರುವುದು. ರಸ್ತೆಗೂ ಕೂಡ ಕಾಂಕ್ರೀಟ್ ಬೇಡ ಎಂಬುದು ಪರಿಸರವಾದಿಗಳ ತಕರಾರು.
ಸುಮಾರು ಮೂವತ್ತು ಜನರ ತಂಡ ಮೂರು ಜೆಸಿಬಿಗಳನ್ನು ಬಳಸಿ ಕೆಲಸ ಮಾಡುತ್ತ ಬಂದಿದೆ. ನಿಯಮಾವಳಿ ಪ್ರಕಾರ, ಬೆಳಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಆರರೊಳಗೆ ಕೆಲಸ ಮುಗಿಸಬೇಕಿದೆ. ರಸ್ತೆ ಕೆಲಸಗಾರರು ಅಡುಗೆ ಆಹಾರ ಪದಾರ್ಥಗಳನ್ನು ತಯಾರು ಮಾಡುವುದಕ್ಕೆ ನಿರ್ಬಂಧ ಇದೆ. ಎಂತಹ ಸಂದಿಗ್ಧತೆಯಲ್ಲೂ ರಾತ್ರಿ ಕೆಲಸ ಮಾಡುವ ಹಾಗಿಲ್ಲ ಎಂದು ವನ್ಯಜೀವಿ ವಿಭಾಗ ತಾಕೀತು ಮಾಡಿದೆ. ಹದಿನಾಲ್ಕನೇ ತಿರುವು ಶಿವಮೊಗ್ಗ ವ್ಯಾಪ್ತಿಗೆ ಸೇರುತ್ತದೆ.

“ಧರಂ ಸಿಂಗ್ ಲೋಕೋಪಯೋಗಿ ಸಚಿವರಾಗಿದ್ದಾಗ ಕೂಡ ದುರಸ್ತಿ ಕಾರ್ಯವಾಗಿತ್ತು (1.58 ಕೋಟಿ) ಅಂದೂ ಕೂಡ ಒಂದು ತಿಂಗಳು ಘಾಟ್ ಬಂದ್ ಆಗಿತ್ತು. ಆದರೆ, ಈಗಿನಷ್ಟು ಕಿರಿಕಿರಿ ಇರಲಿಲ್ಲ ಸಾರಾಗವಾಗಿ ಕಾರ್ಯ ಸಾಗಿತ್ತು,” ಎನ್ನುತ್ತಾರೆ ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧಿಕಾರಿ.
ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳನ್ನು ಬಿಡಲು ಯಾವಾತ್ತೂ ಅವಕಾಶವಿಲ್ಲ. ಆದರೂ, ಎಗ್ಗಿಲ್ಲದೆ ವಾಹನಗಳು ಓಡಾಡುತ್ತವೆ. ಈಗಲೂ ಪರಿಸರವಾದಿಗಳು ಹಾಗೂ ಸ್ಥಳೀಯರು ವಾಹನ ಸಂಚಾರಕ್ಕೆ ನಿರ್ಬಂಧ ಹೇರಬೇಕೆಂದು ಕೇಳಿಕೊಳ್ಳುತ್ತಾರೆ.
ಪರಿಸರವಾದಿಗಳಾದ ಅಜಯ್ ಕುಮಾರ್ ಶರ್ಮಾ ಮಡಿಕೇರಿಯ ಸ್ಥಿತಿ ಆಗುಂಬೆ ಭಾಗದಲ್ಲೂ ಬರುತ್ತೆ ಎಂಬ ಆತಂಕ ವ್ಯಕ್ತಪಡಿಸುತ್ತಾರೆ. ವನ್ಯಜೀವಿ ಇಲಾಖೆಯ ನಿಯಮಗಳನ್ನು ಉಲ್ಲಂಘಿಸಲಾಗಿದ್ದು, ದೈತ್ಯಮರದ ಬುಡದಲ್ಲಿನ ಮಣ್ಣು ಸಡಿಲಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಗುಡ್ಡ ಕುಸಿಯುವುದರಲ್ಲಿ ಸಂಶಯವೇ ಇಲ್ಲ ಎನ್ನುತ್ತಾರೆ. ಹಾಗೆ ನೋಡಿದರೆ, ಕಾಮಗಾರಿಯ ಸಲಕರಣೆಗಳು, ಹಳೆಯ ತಡೆಗೋಡೆಯ ಅವಶೇಷಗಳನ್ನು ಅಲ್ಲಿಯೇ ಡಂಪ್ ಮಾಡಲಾಗಿರುವುದು ಕೂಡ ಸ್ಪಷ್ಟವಾಗಿ ಗೋಚರಿಸುತ್ತಿದೆ.
ಈ ಕಾಮಗಾರಿಯ ಟೆಂಡರ್‌ದಾರ ಅಬ್ದುಲ್ ರಹೀಮ್, “ವನ್ಯಜೀವಿ ವಿಭಾಗದಿಂದ ವಿಳಂಬವಾಗುತ್ತಿದೆ,” ಎನ್ನುತ್ತಾರೆ. “ಆನೆಬಂಡೆಯಲ್ಲಿ ಸಮಸ್ಯೆಯಾಗಿರುವುದು ನಿಜ. ಮೂಲ ಹೇಗಿತ್ತೋ ಹಾಗೆ ಇರಬೇಕು. ಕಾಂಕ್ರೀಟ್, ಡಾಂಬಾರ್ ಬಳಸದಂತೆ ಕಾಮಗಾರಿ ನಡೆಸಬೇಕು. ಕೆಲವು ಮರಗಳನ್ನು ಮುಟ್ಟುವಂತೆಯೇ ಇಲ್ಲ. ಇಲಾಖೆಯ ಪ್ರಕಾರ ಹೋದರೆ ದುರಸ್ತಿ ಕಾರ್ಯವಾಗೋದೇ ಇಲ್ಲ,’’ ಎನ್ನುತ್ತಾರೆ.

ಈ ಮಧ್ಯೆ, ತೀರ್ಥಹಳ್ಳಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ, “ಕಾಮಗಾರಿಗೆ ತಡೆಯಾದರೆ ವನ್ಯಜೀವಿ ಇಲಾಖೆ ಎದುರು ಬಿಜೆಪಿ ಶಾಸಕರಿಂದ ಪ್ರತಿಭಟನೆ ಮಾಡಲಾಗುವುದು,” ಎಂದು ಎಚ್ಚರಿಸಿದ್ದಾರೆ. ಶಾಸಕರ ವಿರುದ್ಧ ಫೇಸ್‌ಬುಕ್‌ನಲ್ಲಿ ಪರಿಸರವಾದಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ.
ಶನಿವಾರ ಆಗುಂಬೆ ಘಾಟಿ ಕೆಲಸವನ್ನು ಪರಿಶೀಲನೆ ಮಾಡಿರುವ ಜಿಲ್ಲಾಧಿಕಾರಿ ಕೆ ಎ ದಯಾನಂದ, “ವನ್ಯಜೀವಿ ಇಲಾಖೆ ಅಧಿಕಾರಿಗಳ ತಕರಾರು ಇರುವುದು ನಿಜ. ಆದರೆ, ನಿಗದಿತ ಸಮಯದೊಳಗೆ, ಅಂದರೆ, ಇನ್ನೊಂದು ವಾರದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಕಳೆದ ವರ್ಷಕ್ಕಿಂತ ವಿಳಂಬವಾಗಿ ಮಳೆ ಮಲೆನಾಡನ್ನು ಪ್ರವೇಶಿಸಲಿದ್ದು, ಸದ್ಯಕ್ಕೆ ಕಾಮಗಾರಿಗೆ ತೊಡಕಿಲ್ಲ,” ಎನ್ನುತ್ತಾರೆ.