ಮಂಗಳೂರು ಮಹಾನಗರವನ್ನು ಈಗಲೂ ಬಹುವಾಗಿ ಕಾಡುತ್ತಿರುವುದು ಮಲೇರಿಯಾ ಕಾಯಿಲೆ. ಮೂವತ್ತು ವರ್ಷಗಳ ಹಿಂದೆ ರಾಜ್ಯದ ಒಂದಂಶ ಮಲೇರಿಯಾ ಪ್ರಕರಣಗಳು ಕೂಡ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ವರದಿ ಆಗುತ್ತಿರಲಿಲ್ಲ. ಇಂದು ರಾಜ್ಯದ ಸಿಂಹಪಾಲು ಮಲೇರಿಯಾ ಪ್ರಕರಣಗಳು ಮಂಗಳೂರು ಮಹಾನಗರದಲ್ಲಿ ದಾಖಲಾಗುತ್ತವೆ. ಅಂಕಿ ಅಂಶಗಳನ್ನು ಗಮನಿಸಿದರೆ ಮಲೇರಿಯಾ ಕಾಯಿಲೆಯನ್ನು ನಿಯಂತ್ರಿಸಲು ಮಂಗಳೂರು ವಿಫಲವಾಗಿದೆ ಎನ್ನುತ್ತಾರೆ ವೈದ್ಯರಾದ ಡಾ. ಶ್ರೀನಿವಾಸ ಕಕ್ಕಿಲ್ಲಾಯ. ಜ್ವರ ತಜ್ಞರೆಂದೇ ಖ್ಯಾತಿ ಆಗಿರುವ ಕಕ್ಕಿಲ್ಲಾಯ ಎಲ್ಲಾ ಮಾಹಿತಿಗಾಗಿ www.malariasite.com ತೆರೆದಿದ್ದಾರೆ.
ಇಪ್ಪತ್ತೈದು ವರ್ಷಗಳ ಹಿಂದೆ 1994ರಲ್ಲಿ ಮಂಗಳೂರಿನಲ್ಲಿ ಮೊದಲ ಮಲೇರಿಯಾ ಸಾವು ಸಂಭವಿಸಿರುವುದು ದಾಖಲಾಗಿದೆ. 1995ರಲ್ಲಿ ಜಿಲ್ಲೆಯಲ್ಲಿ 26 ಮಂದಿ ಈ ಕಾಯಿಲೆಯಿಂದ ಸಾವನ್ನಪ್ಪುತ್ತಾರೆ. ಆಗ ರಾಜ್ಯದ ಇತರೆಡೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಲೇರಿಯಾ ಪ್ರಕಣಗಳು ಕಡಿಮೆಯಾಗಿತ್ತು. 1995ರಲ್ಲಿ ರಾಜ್ಯದಲ್ಲಿ 2.85 ಲಕ್ಷ ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9221 ಮಂದಿ ಮಾತ್ರ ಮಲೇರಿಯಾ ಕಾಯಿಲೆಗೆ ಚಿಕಿತ್ಸೆ ಪಡೆದುಕೊಂಡಿದ್ದರು. 2018ರಲ್ಲಿ ರಾಜ್ಯದಲ್ಲಿ ವರದಿಯಾದ 8174 ಕೇಸುಗಳಲ್ಲಿ 7042 ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ದಾಖಲಾಗಿದೆ. 2013ರಿಂದ ನಿರಂತರವಾಗಿ ಮಂಗಳೂರು ಮಹಾನಗರ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮಲೇರಿಯಾ ಕೇಸುಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಜರ್ಮನಿಯ Charite ವೈದ್ಯಕೀಯ ವಿಶ್ವವಿದ್ಯಾಲಯ ಧಾರವಾಡದ Karnataka Institute for DNA Research ಸಹಯೋಗದಲ್ಲಿ ಅಧ್ಯಯನ ನಡೆಸುತ್ತಿದೆ.
2003ರಲ್ಲಿ ಮಲೇರಿಯಾ ಪ್ರಕರಣಗಳು ಒಮ್ಮಿಂದೊಮ್ಮೆಗೆ ಹೆಚ್ಚಾಗ ತೊಡಗಿ ಅನಂತರ ನಿರಂತರವಾಗಿ ಮಂಗಳೂರು ಮಲೇರಿಯಾ ರಾಜಧಾನಿಯಾಗಿ ಗುರುತಿಸಿಕೊಂಡಿದೆ. ಅಂದಿನಿಂದಲೇ ಮಂಗಳೂರಿನಲ್ಲಿ ಮಲೇರಿಯಾ ನಿಂಯತ್ರಣ ಘಟಕವನ್ನು ಕೂಡ ಆರಂಭಿಸಲಾಯಿತು.
1991ರ ಆರ್ಥಿಕ ಉದಾರೀಕರಣ ನೀತಿಯಿಂದ ಅನಂತರದ ನಾಲ್ಕು ವರ್ಷಗಳಲ್ಲಿ ಆರಂಭವಾದ ಅಭಿವೃದ್ಧಿ ಚಟುಟಿಕೆಗಳು, ಕಟ್ಟಡ ನಿರ್ಮಾಣ, ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಇತ್ಯಾದಿ ಆರ್ಥಿಕ ಚಟುವಟಿಕೆಗಳಿಂದಾಗಿ ಕಟ್ಟುನಿಟ್ಟಿನ ನಿಯಮಗಳ ಕೊರತೆಯಿಂದ ಸೊಳ್ಳೆ ಉತ್ಪತ್ತಿ ಆಗುವ ನೀರು ತಂಗುವ ತಾಣಗಳಿಂದಾಗಿ ಕಾಯಿಲೆ ವಿಪರೀತವಾಗಿ ಹೆಚ್ಚಳವಾಗಿತ್ತು.
1994ರಲ್ಲಿ ಹೆಚ್ಚಳ ಆಗಿದ್ದ ಮಲೇರಿಯಾ ಕಾಯಿಲೆ ಪ್ರಮಾಣ ಸಾರ್ವಜನಿಕರ ಸಹಭಾಗಿತ್ವದ ಜನಜಾಗೃತಿ ಕಾರ್ಯಕ್ರಮಗಳಿಂದಾಗಿ 2000ರ ವೇಳೆಗೆ ಸಾಕಷ್ಟು ಕಡಿಮೆಯಾಗಿ ನಿಯಂತ್ರಣಕ್ಕೆ ಬಂದಿತ್ತು. ಆದರೆ, 2003ರ ಅನಂತರ ಮಲೇರಿಯಾ ಹರಡುವಿಕೆ ಹೆಚ್ಚಾಯಿತು. ಮಹಾಬಲ ಮಾರ್ಲ ಮೇಯರ್ ಆಗಿದ್ದ ಸಂದರ್ಭದಲ್ಲಿ ಮಲೇರಿಯಾ ನಿಯಂತ್ರಣಕ್ಕೆ ವೈದ್ಯರ ಸಹಯೋಗದಲ್ಲಿ ಸಾಫ್ಟ್ ವೇರ್ ಸಿದ್ಧಪಡಿಸಿ ಕರಾರುವಕ್ಕಾದ ಮಾಹಿತಿ ಸಂಗ್ರಹಿಸಿ ನಿಯಂತ್ರಣ ಕಾರ್ಯವನ್ನು ಇನ್ನಷ್ಟು ಉತ್ತಮಗೊಳಿಸಲಾಗಿತ್ತು. Mangalore Medical Relief Societyಯ ಡಾ.ಕೆ.ಆರ್.ಶೆಟ್ಟಿ, ಡಾ.ಶಾಂತರಾಮ ಬಾಳಿಗಾ ಈ ಕೆಲಸಕ್ಕೆ ಕೈಜೋಡಿಸಿದ್ದರು. ಮಲೇರಿಯಾ ನಿಯಂತ್ರಣ ಕಾರ್ಯಕ್ರಮದಲ್ಲಿ ನಗರದ ಪ್ರಸಿದ್ಧ ವೈದ್ಯರು, ವೈದ್ಯಕೀಯ ಮತ್ತು ನರ್ಸಿಂಗ್ ಕಾಲೇಜುಗಳು, ಸಾರ್ವಜನಿಕರು ಸ್ವಯಂ ಸೇವಕರಾಗಿ ಕೆಲಸ ಮಾಡಿದ ಕಾರಣ ಮತ್ತೊಮ್ಮೆ ನಿಯಂತ್ರಣ ಮಾಡಲು ಸಾಧ್ಯ ಆಯಿತು. ಆದರೆ, ಈ ವ್ಯವಸ್ಥೆಯನ್ನು ಅನಂತರ ಕೈ ಬಿಟ್ಟು ಮಲೇರಿಯಾ ವಿಭಾಗದ 60 ಮಂದಿ ಸಿಬ್ಬಂದಿಯನ್ನು ಕುಡಿಯುವ ನೀರು ವಿಭಾಗಕ್ಕೆ ವರ್ಗಾಯಿಸುವ ಮೂಲಕ ಢೆಂಗಿ ಪೆಡಂಭೂತ ತಲೆ ಎತ್ತಲು ಕಾರಣವಾಯಿತು.
ಕಳೆದ ನಾಲ್ಕು ವರ್ಷಗಳಲ್ಲಿ ಮಲೇರಿಯಾ ಮಾತ್ರವಲ್ಲದೆ ಮಿದುಳು ಜ್ವರ, ಢೆಂಗಿ, ಎಚ್1ಎನ್1, ಚಿಕೂನ್ ಗುನ್ಯ ಮಂಗಳೂರಿರನ್ನು ಕಂಗೆಡಿಸಿದ್ದು, ಜನಪ್ರತಿನಿಧಿಗಳು ಮತ್ತು ನೌಕರಶಾಹಿಯ ವೈಫಲ್ಯ ಸ್ಪಷ್ಟವಾಗಿದೆ. ಜಿಲ್ಲೆ ಮತ್ತು ನಗರದ ಎರಡು ಸಾಂಕ್ರಾಮಿಕ ರೋಗ ನಿಯಂತ್ರಣ ಪ್ರಚಾರ ಘಟಕಗಳಿದ್ದರೂ, ಮಂಗಳೂರು ಮಹಾನಗರಪಾಲಿಕೆಯ ಬತ್ತಲಿಕೆಯಲ್ಲಿ ಸಾಕಷ್ಟು ಕಾನೂನು ಅಧಿಕಾರ ಇದ್ದರೂ ರೋಗ ನಿಯಂತ್ರಣದಲ್ಲಿ ವಿಫಲ ಆಗಿದ್ದಾರೆ. ಆ ಕಾರಣದಿಂದಾಗಿಯೇ ಒಬ್ಬ ಅಧಿಕಾರಿಯನ್ನು ಕೂಡ ಅಮಾನತು ಮಾಡಲಾಗಿತ್ತು.
ರಾಜ್ಯದಲ್ಲಿ 2025ರ ವೇಳೆಗೆ ಸಂಪೂರ್ಣ ಮಲೇರಿಯ ನಿರ್ಮೂಲನ ಯೋಜನೆ ಮಾಡುವ ಕಾರ್ಯಸೂಚಿಯನ್ನು ಅಂಗೀಕರಿಸಲಾಗಿದೆ. 2011 ಜನಗಣಿತ ಪ್ರಕಾರ ಕೇವಲ ಐದು ಲಕ್ಷ ಜನಸಂಖ್ಯೆ ಇರುವ ಮಂಗಳೂರು ನಗರದಲ್ಲಿ ವಾರ್ಷಿಕ 500ಕ್ಕಿಂತ ಹೆಚ್ಚು ಮಲೇರಿಯಾ ಪ್ರಕರಣಗಳು ಸಂಭವಿಸಬಾರದು. ಕಳೆದೆರಡು ವರ್ಷಗಳಲ್ಲಿ ಸ್ವಲ್ಪ ಮಟ್ಟಿನ ನಿಯಂತ್ರಣ ಆಗಿದೆ. ಮಲೇರಿಯಾದಂತಹ ಕಾಯಿಲೆಗಳು ಜನರ ಸಾಮಾಜಿಕ-ಆರ್ಥಿಕ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
1998ರಿಂದ ಕೆಲವನ್ನು ಅಧಿಸೂಚಿತ ರೋಗಗಳೆಂದು ಕೂಡ ಘೋಷಿಸಲಾಗಿದೆ. ಆ ನಿಟ್ಟಿನಲ್ಲಿ ಸಾಕಷ್ಟು ಅನುದಾನ ಮತ್ತು ಕಾನೂನಿನ ಬಲವನ್ನು ನೀಡಲಾಗಿದೆ. ಸುಶಿಕ್ಷಿತರು, ಬುದ್ಧಿವಂತರು, ಕಾನೂನು ಪಾಲಿಸುವವರು, ದೇಶ ಭಕ್ತರು, ಸ್ವಚ್ಛತೆ ಪಾಲಿಸುವವರು ಎಂಬ ಹೆಗ್ಗಳಿಕೆ ಪಡೆದವರು ಇರುವ ಮಂಗಳೂರಿನಲ್ಲಿ ಇಂತಹ ಕಾಯಿಲೆಗಳ ನಿಯಂತ್ರಣ ಯಾಕಾಗುತ್ತಿಲ್ಲ ಎಂಬುದು ಯಕ್ಷಪ್ರಶ್ನೆ. ದಕ್ಷಿಣ ಕನ್ನಡದವರು ಬುದ್ಧಿವಂತರಾದರು ಸ್ವಾರ್ಥಿಗಳು ಮತ್ತು ಕಳೆದ ಎರಡು ದಶಕಗಳಲ್ಲಿ ಅವರು ಚುನಾಯಿಸಿ ಕಳುಹಿಸುವ ಜನಪ್ರತಿನಿಧಿಗಳು ಎಂತಹವರು ಎಂಬುದನ್ನು ಕೂಡ ಗಮನಿಸಬೇಕಾಗುತ್ತದೆ. ರಾಜಕೀಯ ಇಚ್ಛಾಶಕ್ತಿ ಇಲ್ಲದೆ ಯಾವು ಕಾರ್ಯವು ಪರಿಣಾಮಕಾರಿ ಅನುಷ್ಠಾನ ಆಗುವುದು ಅಷ್ಟರಲ್ಲೇ ಇದೆ.