ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾದ 28 ಸಂಸದರ ಪೈಕಿ 27 ಸದಸ್ಯರು (ಹಾಸನದ ಸಂಸದ ಪ್ರಜ್ವಲ್ ಹೊರತುಪಡಿಸಿ) ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಇವರಲ್ಲಿ ಬೆಳಗಾವಿ ಬಿಜೆಪಿ ಸಂಸದ ಸುರೇಶ ಅಂಗಡಿ ಒಬ್ಬರೇ ಇಂಗ್ಲೀಷಿನಲ್ಲಿ ಪ್ರಮಾಣ ವಚನ ಸ್ವೀಕರಿದ್ದಾರೆ. ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಸಂಸ್ಕೃತದಲ್ಲಿ ಸ್ವೀಕರಿಸಿದ್ದಾರೆ. ಉಳಿದ ಎಲ್ಲ 25 ಸದಸ್ಯರೂ ಅಚ್ಚ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ! ತಮಗೆ ಮತ ನೀಡಿದ ಮರಾಠಿ ಭಾಷಿಕರು ಅಸಮಾಧಾನಗೊಂಡಾರು ಎಂಬ ಅಳುಕಿನಿಂದಾಗಿಯೇ ಅಂಗಡಿಯವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸದಿರುವುದು ಸ್ಪಷ್ಟವಾಗಿದೆ.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಜಾತಿ, ಭಾಷೆ ಮತ್ತು ಧರ್ಮ ಮೀರಿದ ಮೋದಿ ಅವರ ಪರವಾದ ಅಲೆ ಇತ್ತು ಎಂಬುದು ಬಿಜೆಪಿಯ ವಾದವಾಗಿತ್ತು. ಸ್ವತಃ ಮೋದಿಯವರೇ ಇದನ್ನು ಹಲವಾರು ಬಾರಿ ಹೇಳಿದ್ದಾರೆ. ಮೋದಿಯವರಿಗೆ ಮತ್ತು ಬಿಜೆಪಿಗೆ ಅರ್ಥವಾಗಿದ್ದು ಅಂಗಡಿಯವರಿಗೆ ಅರ್ಥವಾಗಿಲ್ಲವೆ? ಆದರೂ ಅವರು ಮರಾಠಿ ಭಾಷಿಕರ ಓಲೈಕೆಗೆ ಮುಂದಾಗಿದ್ದೇಕೆ?
ಅಂಗಡಿಯವರು ಆಯ್ಕೆಯಾಗಿದ್ದು ನಾಲ್ಕನೇ ಬಾರಿ. ಈ ಹೊತ್ತಿಗೆ ಅವರು ಸಾಕಷ್ಟು ಪಕ್ವವಾಗಬೇಕಿತ್ತು, ಮುತ್ಸದ್ದಿಯೆನಿಸಬೇಕಾಗಿತ್ತು. ಮಂತ್ರಿಯಾದ ಮೇಲಂತೂ ಅವರು ಒಂದೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಾಗಿತ್ತು.ಆದರೆ ಮಂತ್ರಿಯಾಗಿ ಒಂದು ತಿಂಗಳೂ ಆಗಿಲ್ಲ. ಈಗಲೇ ಮೈಮೇಲೆ ವಿವಾದ ಎಳೆದುಕೊಂಡಿದ್ದಾರೆ.
ಪ್ರಾದೇಶಿಕ ಭಾಷೆಗಳ ಸಂರಕ್ಷಣೆಯ ಹೊಣೆಯು ಕೇಂದ್ರ ಸರಕಾರದ ಮೇಲಿದೆ.ಸ್ವತಃ ಪ್ರಧಾನಿ ಮೋದಿಯವರು ತಮ್ಮ ಗುಜರಾತಿ ಭಾಷೆಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ. ಅದರ ಉಳಿವಿಗಾಗಿ ಬದ್ಧರಾಗಿದ್ದಾರೆ. ಪ್ರಾದೇಶಿಕ ಭಾಷೆಯ ಸಂರಕ್ಷಣೆಗಾಗಿ ಕೈಕೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನೆಯೊಂದು ಕೇಂದ್ರ ಸರಕಾರದ ಮುಂದಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 2014 ರಲ್ಲಿ ಮೋದಿಯವರ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಅಂಗಡಿಯವರು ಈಗ ಕೇಂದ್ರ ಸರಕಾರದ ಒಂದು ಭಾಗ. ಕೇಂದ್ರದ ನಿಲುವಿಗೆ ಅವರು ಬದ್ಧರಾಗಿರಬೇಕಾಗುತ್ತದೆ.



ಲೋಕಸಭೆಯಲ್ಲಿ 1967 ರಲ್ಲಿ ಮೊಟ್ಟ ಮೊದಲು ಕನ್ನಡದಲ್ಲಿ ಮಾತನಾಡಿದ ಕೀರ್ತಿ ದಿ. ಜೆ. ಎಚ್. ಪಟೇಲರಿಗೆ ಸಲ್ಲುತ್ತದೆ. ಸಂಸದ ಶಿವಣ್ಣ, ದಿ. ಅನಂತಕುಮಾರ ಅವರು ಲೋಕಸಭೆಯಲ್ಲಿ ಕನ್ನಡದ ಕಹಳೆ ಮೊಳಗಿಸಿದ್ದಾರೆ. ಸುರೇಶ ಅಂಗಡಿಯವರು ಇಂಗ್ಲೀಷಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಮರಾಠಿಗರು `ಖುಷ್’ ಆಗುತ್ತಾರೆಯೆ? ಮರಾಠಿ ಭಾಷಿಕ ಕನ್ನಡ ಮತದಾರರು ಭಾಷೆಯ ಗಡಿ ಮೀರಿ, ಅಂಗಡಿಯವರ ನಿರೀಕ್ಷೆಯನ್ನೂ ಮೀರಿ ಮತ ನೀಡಿದ್ದಾರೆ. ಎಮ್.ಇ.ಎಸ್ .ನಾಯಕರು ಎಷ್ಟೇ ಹೊಯ್ಕೊಂಡರೂ ಮರಾಠಿ ಭಾಷಿಕರು ಅವರ ಬೆನ್ನು ಹತ್ತದೇ ರಾಜಕೀಯ ಪಕ್ಷಗಳತ್ತ ಮುಖ ಮಾಡಿದ್ದಾರೆ . ಈ ರಾಜಕೀಯ ಧ್ರುವೀಕರಣ ಸ್ವಾಗತಾರ್ಹವೇ. ಸುರೇಶ ಅಂಗಡಿಯವರು ಮಂತ್ರಿಯಾಗಿ ಇಷ್ಟು ಬೇಗ ಮೈಮೇಲೆ ರಾಡಿ ಸಿಡಿಸಿಕೊಳ್ಳುವರೆಂದು ನಾನು ಭಾವಿಸಿರಲಿಲ್ಲ. ಕೇವಲ ಸಂಸದರಾಗಿ ಅವರು ಮೂರು ಅವಧಿಯಲ್ಲಿ ಸಾಕಷ್ಟು ಬಾರಿ ವಿವಾದಕ್ಕೆ ಒಳಗಾಗಿದ್ದರು .ಆದರೆ ಮಂತ್ರಿಯಾಗಿ ವಿವಾದಕ್ಕೆ ಒಳಗಾಗುವುದರಿಂದ ಪ್ರಧಾನಿಯವರ ಗಮನಕ್ಕೆ ಬಂದೇ ಬರುತ್ತದೆ. ಇಂಥ ಸಂದರ್ಭಕ್ಕೆ ಅವರ ಪಕ್ಷದ ನಾಯಕರೇ ಕಾಯುತ್ತಿರುತ್ತಾರೆ. ಅಂಗಡಿಯವರು ಈಗಾಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದರೆ ಅವರ ಮಂತ್ರಿಗಿರಿಗೇ ಹೊಡೆತ ಬಿದ್ದೀತು.
ಅಂಕಣಕಾರರು ಹಿರಿಯ ಪತ್ರಕರ್ತರು