ಮರಳಿ ಬಾರದ ಸಾಲ ಅಥವಾ ನಿರುತ್ಪಾದಕ ಆಸ್ತಿ (Non Performing Assets – NPA), ಎಂದು ಗುರುತಿಸಲಾಗಿರುವ ಸಾಲದ ಸುದ್ದಿ ದಿನದಿಂದ ದಿನಕ್ಕೆ ಚಿಂತಾಜನಕವಾಗುತ್ತಿದೆ. ರಿಸರ್ವ್ ಬ್ಯಾಂಕ್ ನ ಇತ್ತೀಚಿನ ಮಾಹಿತಿಯ ಪ್ರಕಾರ 30 ಪ್ರಮುಖ ಖಾತೆಗಳ NPA ಮೌಲ್ಯವೇ ರೂ. 2.86 ಲಕ್ಷ ಕೋಟಿ ಇದೆ. ಈ ವಿವರವನ್ನು ರಿಸರ್ವ್ ಬ್ಯಾಂಕ್ `ದಿ ವೈರ್’ ಜಾಲತಾಣಕ್ಕೆ ಮಾಹಿತಿ ಹಕ್ಕಿನಡಿ ನೀಡಿದೆ.
ಮಾರ್ಚ್ 31, 2019 ರವರೆಗನ ಅವಧಿಯಲ್ಲಿ ದೇಶದ ಕಮರ್ಷಿಯಲ್ ಬ್ಯಾಂಕ್ ಗಳಲ್ಲಿನ ಒಟ್ಟು NPA ರೂ. 9.49 ಲಕ್ಷ ಕೋಟಿ. ಈ ಮಾಹಿತಿಯನ್ನು ನೀಡಿರುವ ರಿಸರ್ವ್ ಬ್ಯಾಂಕ್ ಆ ಪೈಕಿ ಬಹುಪಾಲು NPA ಆಗಿರುವ 30 ಖಾತೆಗಳ ವಿವರವನ್ನು ನೀಡಿಲ್ಲ. ಇದಕ್ಕೆ ನೀಡಿದ ಕಾರಣವೂ ಆಶ್ಚರ್ಯಕರವಾಗಿದೆ. “ಪ್ರತಿ ಖಾತೆಯ ವಿವರ ನಮ್ಮಲ್ಲಿ ಲಭ್ಯವಿಲ್ಲ’’ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಇದಕ್ಕೂ ಮೊದಲು, ಅಂದರೆ 2019 ಏಪ್ರಿಲ್ ಗೂ ಮೊದಲು, NPA ಖಾತೆಗಳ ಯಾವುದೇ ವಿವರವನ್ನು ಮಾಹಿತಿ ಹಕ್ಕಿನಡಿ ನೀಡಲು ರಿಸರ್ವ್ ಬ್ಯಾಂಕ್ ನಿರಾಕರಿಸಿತ್ತು. ಮನವಿ ಸುಪ್ರೀಂ ಕೋರ್ಟ್ ತಲುಪಿತ್ತು. ಏಪ್ರಿಲ್ 2019 ರಂದು ಸುಪ್ರೀಂ ಕೋರ್ಟ್ ವಿವರಗಳನ್ನು ನೀಡುವಂತೆ ರಿಸರ್ವ್ ಬ್ಯಾಂಕ್ ಗೆ ಕಟ್ಟಪ್ಪಣೆ ಮಾಡಿತ್ತು. ಇದೀಗ 30 ಪ್ರಮುಖ ಖಾತೆಗಳ NPA ಪ್ರಮಾಣವಷ್ಟೇ ಹೇಳಿರುವ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದೆ. ಒಂದೊಮ್ಮೆ ಈ 30 ಪ್ರಮುಖ ಖಾತೆಗಳ ಪೈಕಿ ಪ್ರತಿ ಖಾತೆಯ ವಿವರ ಲಭ್ಯವಿಲ್ಲದೇ ಇರುವುದು ಸತ್ಯವಾದಲ್ಲಿ, 30 ಪ್ರಮುಖ ಖಾತೆಯ ವಿವರವಾದರೂ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆ ಹಾಗೆಯೇ ಉಳಿಯುತ್ತದೆ.
ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ವಿವರಗಳನ್ನು ಸಲ್ಲಿಸಲು ಇದು ರಿಸರ್ವ್ ಬ್ಯಾಂಕ್ ಗೆ ಕೊನೆಯ ಅವಕಾಶ ಎಂದು ಹೇಳಿತ್ತು. ಆದೇಶದ ಬಳಿಕವೂ ವಿವರ ನೀಡಲು ನಿರಾಕರಿಸಿದಲ್ಲಿ, ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾದೀತು ಎಂದೂ ಸುಪ್ರಿಂ ಕೋರ್ಟ್ ರಿಸರ್ವ್ ಬ್ಯಾಂಕ್ ಗೆ ಎಚ್ಚರಿಕೆ ನೀಡಿತ್ತು. ಮಾಹಿತಿ ಹಕ್ಕು ಕಾರ್ಯಕರ್ತ ಸುಭಾಷ್ ಚಂದ್ರ ಅಗರವಾಲ್ ರಿಸರ್ವ್ ಬ್ಯಾಂಕ್ ನ ಮಾಹಿತಿ ನಿರಾಕರಣೆ ವಿರುದ್ಧ ಕಾನೂನು ಹೋರಾಟ ನಡೆಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಆದೇಶದ ಬಳಿಕವೂ ಮಾಹಿತಿ ನಿರಾಕರಿಸಿರುವ ರಿಸರ್ವ್ ಬ್ಯಾಂಕ್ ನಿಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ಅಗರವಾಲ್, ಜವಾಬ್ದಾರಿಯುತ ಸಂಸ್ಥೆಯಾಗಿ ರಿಸರ್ವ್ ಬ್ಯಾಂಕ್ ಇಂತಹ ಮಾಹಿತಿಗಳನ್ನು ತನ್ನ ವೆಬ್ ಸೈಟ್ ನಲ್ಲಿಯೇ ಪ್ರಕಟಿಸಬೇಕು ಎಂದಿದ್ದಾರೆ.
ಅದೇನೇ ಇರಲಿ. ಇದೀಗ ಬಹಿರಂಗಗೊಂಡಿರುವ ಮಾಹಿತಿಯನ್ನು ಅವಲೋಕಿಸಿರುವ `ದಿ ವೈರ್’ ಸುದ್ದಿ ಸಂಸ್ಥೆ 30 ಪ್ರಮುಖ ಖಾತೆಗಳ NPA ಮೌಲ್ಯ ಕೆಲವು ರಾಜ್ಯ ಸರ್ಕಾರಗಳು ಮಾಡಿರುವ ರೈತರ ಸಾಲ ಮನ್ನಾಕ್ಕಿಂತಲೂ ಹೆಚ್ಚು ಎಂದು ಅಂದಾಜಿಸಿದೆ. 30 ಪ್ರಮುಖ ಖಾತೆಗಳ NPA ಮೌಲ್ಯ ರೂ. 2.86 ಲಕ್ಷ ಕೋಟಿಯಾದರೆ, ಏಪ್ರಿಲ್ 2017ರಿಂದ ರಾಜ್ಯ ಸರ್ಕಾರಗಳು ಮನ್ನಾ ಮಾಡಿರುವ ರೈತರ ಸಾಲದ ಒಟ್ಟು ಮೌಲ್ಯ 1.9 ಲಕ್ಷ ಕೋಟಿ. ಇದಲ್ಲದೇ, ಮಧ್ಯಮ ಕೈಗಾರಿಕೆಗಳಿಗೆ ಇದುವರೆಗೂ ಮಂಜೂರು ಮಾಡಿರುವ ಸಾಲದ ಮೊತ್ತಕ್ಕಿಂತಲೂ 30 ಪ್ರಮುಖ ಖಾತೆಗಳ NPA ಮೌಲ್ಯ ಹೆಚ್ಚು. ರಿಸರ್ವ್ ಬ್ಯಾಂಕ್ ಮಾಹಿತಿಯಂತೆ, ಹೋಲ್ ಸೇಲ್ (2.26 ಲಕ್ಷ ಕೋಟಿ), ರಿಟೇಲ್ (2.80 ಲಕ್ಷ ಕೋಟಿ), ರಿಯಲ್ ಎಸ್ಟೇಟ್ (2 ಲಕ್ಷ ಕೋಟಿ), ನಂತಹ ಮಧ್ಯಮ ಕೈಗಾರಿಕೆಗಳಿಗೆ ಮಂಜೂರಾದ ಸಾಲವನ್ನು ಈ 30 ಪ್ರಮುಖ ಖಾತೆಗಳ NPA ಪ್ರಮಾಣ ಹಿಂದಿಕ್ಕಿದೆ.
ಈ ರೀತಿಯ ಹೋಲಿಕೆ ಮಾಡುವಂತ ಪರಿಸ್ಥಿತಿಯನ್ನು ನಿರ್ಮಿಸಿದ್ದು ರಿಸರ್ವ್ ಬ್ಯಾಂಕ್. ಏಕೆಂದರೆ, ಕೇವಲ 30 ಖಾತೆಗಳ NPA ಕೆಲವೊಂದು ಕೈಗಾರಿಕಾ ವಲಯಗಳಿಗೆ ನೀಡಿದ ಸಾಲವನ್ನೇ ಮೀರಿಸಿರಬೇಕಾದರೆ, ಅಂತಹ ಸಾಲಗಾರರ/ಖಾತೆಗಳ ವಿವರ ಪಾರದರ್ಶಕವಾಗಿ ಜನರಿಗೆ ತಿಳಿಯಬೇಡವೇ? ಉದಾಹರಣೆಗೆ, ಕಿಂಗ್ ಫಿಶರ್ ಕೆಲವು ಬ್ಯಾಂಕ್ ಗಳಿಗೆ ನೀಡಬೇಕಾಗಿರುವ ಸಾಲದ ಒಟ್ಟು ಮೊತ್ತ ರೂ. 9,000 ಕೋಟಿ. ಅದೇ, ಜೆಟ್ ಏರವೇಸ್ ಬ್ಯಾಂಕ್ ಗಳಿಗೆ ನೀಡಬೇಕಾದ ಸಾಲದ ಮೊತ್ತ 8,700 ಕೋಟಿ. ಈ ಎರಡು ಖಾತೆಗಳ ಬಗ್ಗೆ ವಿವರ ಲಭ್ಯವಿದ್ದರೂ ಇವು ಪ್ರಮುಖ 30 NPA ಖಾತೆಗಳಲ್ಲಿ ಸೇರಿರದಿಲ್ಲದೆಯೂ ಇರಬಹುದು. ಏಕೆಂದರೆ, ಇಂತಹ 30 ಖಾತೆಗಳು ಸೇರಿಯೂ NPA ಮೌಲ್ಯ 2.80 ಲಕ್ಷ ಕೋಟಿ ಆಗಲಾರದು.
ಅಂತೂ ಈ 30 ಪ್ರಮುಖ NPA ಖಾತೆಗಳು ಯಾರದ್ದು ಎನ್ನುವುದನ್ನು ತಿಳಿಯಲು ದೇಶದ ಜನ ಇನ್ನೂ ಕಾಯಬೇಕು ಎಂದರೆ, ರಿಸರ್ವ್ ಬ್ಯಾಂಕ್ NPA ಖಾತೆದಾರರ ಮಾಹಿತಿಯನ್ನು ಎಷ್ಟು ಗೌಪ್ಯವಾಗಿ ಇರಿಸಬಯಸುತ್ತದೆ ಎನ್ನುವುದು ತಿಳಿಯುತ್ತದೆ. ಇದಕ್ಕೆ ಪೂರಕ ಎಂಬಂತೆ, ಕೆಲವು ತಿಂಗಳುಗಳ ಹಿಂದಿನ ಮಾಹಿತಿಯಂತೆ ಕಳೆದ 10 ವರ್ಷಗಳಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ ಗಳು ಕೈ ಬಿಟ್ಟ ಸಾಲಗಳ ಒಟ್ಟು ಮೊತ್ತ ರೂ. 7 ಲಕ್ಷ ಕೋಟಿ ಈ ಪೈಕಿ ಐದನೆಯ ನಾಲ್ಕು ಭಾಗದಷ್ಟು ಮೊತ್ತ (5.55 ಲಕ್ಷ ಕೋಟಿ) 2014ರ ಏಪ್ರಿಲ್ ತಿಂಗಳ ನಂತರದ ಐದು ವರ್ಷಗಳಿಗೆ ಸಂಬಂಧಿಸಿದ್ದು. ಇಲ್ಲಿಯೂ ರಿಸರ್ವ್ ಬ್ಯಾಂಕ್ ಖಾತೆದಾರರ ವಿವರವನ್ನು ಬಹು ಗೌಪ್ಯವಾಗಿ ಇರಿಸಿಕೊಂಡಿದೆ.