ಸದ್ಯಕ್ಕೆ ನರಕ ಎಂದರೆ ಯಾವುದು ಅಥವಾ ಎಲ್ಲಿದೆ ಎಂದರೆ ಹಿಂದುಮುಂದು ಯೋಚನೆ ಮಾಡದೆ ಬಿಹಾರ ಮತ್ತು ಉತ್ತರ ಪ್ರದೇಶದ ಹೆಸರು ಹೇಳಬಹುದು. ಸದ್ಯ, ಎನ್ಸೆಫಲಿಟೀಸ್ ಸೋಂಕಿನಿಂದ ಮಕ್ಕಳ ಸರಣಿ ಸಾವಿಗೆ ಬಿಹಾರ ಸಾಕ್ಷಿಯಾಗಿದ್ದರೆ, ಉತ್ತರ ಪ್ರದೇಶದಲ್ಲಿ ಚಿಕಿತ್ಸೆ ಸಿಗದೆ ಮೃತಪಡುವವರ ಸಂಖ್ಯೆ ಆತಂಕಕ್ಕೆ ದೂಡುವಷ್ಟು ಹೆಚ್ಚಿದೆ. ಇದೇ ಹೊತ್ತಿಗೆ ಪಶ್ಚಿಮ ಬಂಗಾಳ ವೈದ್ಯರ ಮುಷ್ಕರಕ್ಕೆ ಸಿಲುಕಿ ತತ್ತರಿಸಿದ್ದು, ಈ ಪ್ರತಿಭಟನೆಗೆ ಕೈಜೋಡಿಸಿದ್ದರಿಂದ ದೇಶಾದ್ಯಂತ ಆರೋಗ್ಯ ಸೇವೆ ಅಸ್ತವ್ಯಸ್ತವಾಗಿದೆ. ಇದೇ ಹೊತ್ತಿನಲ್ಲಿ ನೀತಿ ಆಯೋಗ ಬಿಡುಗಡೆ ಮಾಡಿರುವ ಆರೋಗ್ಯ ಸೇವಾ ಸೂಚ್ಯಂಕದಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳು ಅತ್ಯಂತ ಕಳಪೆ ಸೇವೆ ಇರುವ ಪ್ರದೇಶಗಳು ಎನಿಸಿಕೊಂಡಿವೆ.
ಕೇರಳದಲ್ಲಿ ನಿಫಾ ಸೋಂಕು ಕಾಣಿಸಿಕೊಂಡು ಇಡೀ ರಾಜ್ಯ ಹೈ ಅಲರ್ಟ್‌ನಲ್ಲಿದೆ. ಅತ್ತ ಬಿಹಾರದಲ್ಲಿ ಎನ್ಸೆಫಲಿಟೀಸ್ ಸೋಂಕು ಮಕ್ಕಳನ್ನು ಬಲಿ ಪಡೆಯುತ್ತಲೇ ಸಾಗಿದೆ. ಇನ್ನು, ಹೆಚ್ಚೂಕಡಿಮೆ ದೇಶದ ಅರ್ಧದಷ್ಟು ಪ್ರದೇಶ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಕಲುಷಿತ ನೀರಿನ ಸೇವನೆ ಅನಿವಾರ್ಯವಾಗಿ ಆರೋಗ್ಯ ಸಮಸ್ಯೆಗಳು ತೀವ್ರವಾಗತೊಡಗಿವೆ. ಇಂಥ ಹೊತ್ತಿನಲ್ಲೇ ವೈದ್ಯರು ದೇಶವ್ಯಾಪಿ ಮುಷ್ಕರಕ್ಕೆ ನಿಂತಿದ್ದು ಸರಿಯೇ ಎಂಬ ಪ್ರಶ್ನೆ ಸಾರ್ವಜನಿಕರದ್ದು.
ನೀತಿ ಆಯೋಗದಿಂದ ಹೊರಬಿದ್ದಿರುವ ಆರೋಗ್ಯ ಸೇವಾ ಸೂಚ್ಯಂಕವು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ವಿಶ್ವಬ್ಯಾಂಕ್ ಸಹಭಾಗಿತ್ವದಲ್ಲಿ ರೂಪುಗೊಂಡದ್ದು. ಸಾಮಾನ್ಯವಾಗಿ ಕೇಂದ್ರ ಆರೋಗ್ಯ ಸಚಿವಾಲಯವೇ ಈ ಕುರಿತ ಎಲ್ಲ ಅಂಕಿ-ಅಂಶವನ್ನು ಬಿಡುಗಡೆ ಮಾಡುವ ವಾಡಿಕೆ ಇದೆಯಾದರೂ, ಅದು ಯಾವಾಗಲೂ ಸೋಮಾರಿತನದಿಂದ ಕೂಡಿರುತ್ತಿತ್ತು. ಹಾಗಾಗಿ, ನೀತಿ ಆಯೋಗವು ಸಚಿವಾಲಯದಿಂದ ಅಗತ್ಯ ಮಾಹಿತಿ ಕಲೆಹಾಕಿ, ವಿಶ್ವಬ್ಯಾಂಕ್ ಸಹಭಾಗಿತ್ವದಲ್ಲಿ ಈ ಸೂಚ್ಯಂಕ ರೂಪಿಸಬೇಕಾಯಿತು. ಈ ಸೂಚ್ಯಂಕವು 2015-16 ಮತ್ತು 2017-18ರ ಅವಧಿಯ ಆರೋಗ್ಯ ಸೇವೆಗಳನ್ನು ಆಧರಿಸಿ ರೂಪುಗೊಂಡಿದೆ.
ಆರೋಗ್ಯ ಸೇವಾ ಸೂಚ್ಯಂಕದಲ್ಲಿ ಉತ್ತರ ಪ್ರದೇಶ ಅತ್ಯಂತ ಕಳಪೆ ಸಾಧನೆಯ ರಾಜ್ಯ ಎನಿಸಿಕೊಂಡರೆ, ಬಿಹಾರ, ಮಧ್ಯಪ್ರದೇಶ, ಉತ್ತರಾಖಂಡ, ರಾಜಸ್ಥಾನ ಅದನ್ನು ಹಿಂಬಾಲಿಸಿವೆ. ಅಸಲಿಗೆ, 2015-16ರ ಪರಿಸ್ಥಿತಿಗೆ ಹೋಲಿಸಿದರೆ ಉತ್ತರ ಪ್ರದೇಶ ಮತ್ತು ಬಿಹಾರದ 2017-18ರ ಅವಧಿಯ ಆರೋಗ್ಯ ಸೇವೆ ಇನ್ನಷ್ಟು ಕುಸಿದಿದೆ. ಈ ಎರಡೂ ರಾಜ್ಯಗಳು ಕ್ರಮವಾಗಿ ಶೇ.28.61 ಮತ್ತು ಶೇ.32.11 ಅಂಕ ತೆಗೆದುಕೊಂಡಿವೆ. ಇನ್ನು, ನೂರಕ್ಕೆ 74.01 ಅಂಕ ಗಳಿಸಿರುವ ಕೇರಳ, ಕಳೆದ ಸಾಲಿಗಿಂತ (ಶೇ.76.55) ಕಡಿಮೆ ಸಾಧನೆ ಮಾಡಿದರೂ ಮೊದಲ ಸ್ಥಾನದಲ್ಲೇ ಉಳಿದಿದೆ.
ಉ.ಪ್ರದೇಶ, ಬಿಹಾರಕ್ಕೆ ಆಗಿರುವುದೇನು?

ಆರೋಗ್ಯ ಸೇವಾ ಸೂಚ್ಯಂಕದಲ್ಲಿ ಬಿಹಾರ ಕೇವಲ ಕಡಿಮೆ ಅಂಕಿ ಗಳಿಸಿದ್ದು ಮಾತ್ರವಲ್ಲ, ಗಂಭೀರ ಎಚ್ಚರಿಕೆಯನ್ನೂ ಪಡೆದುಕೊಂಡಿದೆ. ಶಿಶುಗಳ ತೂಕ ಇಳಿಕೆ, ಜನನ ಪ್ರಮಾಣ, ಲಿಂಗಾನುಪಾತ, ಕ್ಷಯ ರೋಗ ನಿಯಂತ್ರಣ, ಸಾರ್ವಜನಿಕ ಆರೋಗ್ಯ ಸೇವೆಗಳ ಪ್ರಸಾರ, ರಾಷ್ಟ್ರೀಯ ಆರೋಗ್ಯ ಮಿಷನ್‌ನಿಂದ ಅನುದಾನ ಪಡೆದುಕೊಳ್ಳುವಲ್ಲಿನ ವಿಳಂಬ… ಈ ಎಲ್ಲ ಸಂಗತಿಗಳೂ ಸೇರಿ ಬಿಹಾರವನ್ನು ಅತ್ಯಂತ ಕಳಪೆ ಆರೋಗ್ಯ ಸೇವೆ ಇರುವ ರಾಜ್ಯಗಳಲ್ಲಿ ಒಂದು ಎಂಬ ಪಟ್ಟ ಬರುವಂತೆ ಮಾಡಿವೆ.
ಇನ್ನು, ಆರೋಗ್ಯ ಸೇವೆಯಲ್ಲಿ ಅತ್ಯಂತ ಕಳಪೆ ಸಾಧನೆ ಮೆರೆದ ರಾಜ್ಯ ಎನಿಸಿಕೊಂಡ ಉತ್ತರ ಪ್ರದೇಶದಲ್ಲಿ ಶಿಶುಗಳ ತೂಕ ಇಳಿಕೆ, ಕ್ಷಯ ರೋಗ ನಿಯಂತ್ರಣ ವೈಫಲ್ಯ, ಜನನ ನೋಂದಣಿ ಮುಂತಾದ ಸಂಗತಿಗಳು ಗುರುತಿಸಲ್ಪಟ್ಟಿವೆ.
ಹುಟ್ಟಿದ ಮಕ್ಕಳು ನಾನಾ ಕಾರಣಗಳಿಂದ ಸಾವನ್ನಪ್ಪುವುದು ಭಾರತದಲ್ಲಿ ಸಾಮಾನ್ಯ ಎನಿಸಿಕೊಂಡುಬಿಟ್ಟಿದೆ. ಶಿಶುಮರಣ ಪ್ರಮಾಣವನ್ನು ಕಡಿಮೆ ಮಾಡಲೇಬೇಕೆಂಬುದು ವಿಶ್ವ ಆರೋಗ್ಯ ಸಂಸ್ಥೆಯ ಖಡಕ್ ಎಚ್ಚರಿಕೆ ಕೂಡ. ಈ ನಿಟ್ಟಿನಲ್ಲಿ 2030ರೊಳಗೆ ಶಿಶುಮರಣ ಪ್ರಮಾಣವನ್ನು ಪ್ರತಿ 1,000 ಶಿಶುವಿಗೆ 12ರ ಮಟ್ಟಕ್ಕಾದರೂ ಇಳಿಸಬೇಕೆಂಬ ಗುರಿ ಹಾಕಿಕೊಳ್ಳಲಾಗಿದೆ. ಕೇರಳ ಮತ್ತು ತಮಿಳುನಾಡು ಈಗಾಗಲೇ ಈ ಸಾಧನೆ ಮಾಡಿಯಾಗಿದೆ. ಆದರೆ, ಉತ್ತರ ಪ್ರದೇಶದಲ್ಲಿ ಇದು 30 ಹಾಗೂ ಬಿಹಾರದಲ್ಲಿ 27ರ ಪ್ರಮಾಣದಲ್ಲೇ ಇದ್ದು, ಯಾವುದೇ ಸುಧಾರಣೆ ಕಂಡುಬಂದಿಲ್ಲ.
ಬಿಹಾರ ಮತ್ತು ಉತ್ತರ ಪ್ರದೇಶದ ಆರೋಗ್ಯ ರಗಳೆಗಳು ಇಷ್ಟಕ್ಕೇ ಮುಗಿಯುವುದಿಲ್ಲ. ಆಸ್ಪತ್ರೆಯಲ್ಲಿನ ಹೆರಿಗೆ ಪ್ರಮಾಣ ಹೆಚ್ಚಿಸಬೇಕು, ಆ ಮೂಲಕ ಶಿಶುಮರಣ ಪ್ರಮಾಣ ನಿಯಂತ್ರಿಸಬಹುದು ಎಂಬುದು ಸಹಜ ಲೆಕ್ಕಾಚಾರ. ಆದರೆ, ಈ ಎರಡೂ ರಾಜ್ಯಗಳು ಈ ಕುರಿತು ಜನಜಾಗೃತಿ ಮೂಡಿಸುವಲ್ಲಿ ಯಾವುದೇ ಪ್ರಯತ್ನ ಮಾಡದೆ ಕೈಕಟ್ಟಿ ಕುಳಿತಿವೆ. ಹಾಗಾಗಿಯೇ ಉ.ಪ್ರದೇಶದ ಆಸ್ಪತ್ರೆಗಳಲ್ಲಿ ಶೇ.50.6ರಷ್ಟು ಹೆರಿಗೆಗಳಾದರೆ, ಬಿಹಾರದಲ್ಲಿ ಶೇ.56ರಷ್ಟು ಹೆರಿಗೆಗಳು ಆಗುತ್ತಿವೆ. ಈ ವಿಷಯದಲ್ಲಿ ತೆಲಂಗಾಣದಲ್ಲಿ ಜಾಗೃತಿ ಹೆಚ್ಚಿದ್ದು, ಶೇ.91.7ರಷ್ಟು ಹೆರಿಗೆಗಳು ಆಸ್ಪತ್ರೆಗಳಲ್ಲೇ ನಡೆಯುತ್ತಿವೆ. ಇನ್ನು, ಜನನ ನೋಂದಣಿ ವಿಷಯದಲ್ಲಿ ಬಿಹಾರ ಅತ್ಯಂತ ಹಿಂದೆ ಬಿದ್ದಿದ್ದು, ಶೇ.60.7ರಷ್ಟು ಜನನ ಮಾತ್ರವೇ ನೋಂದಣಿ ಆಗುತ್ತಿದೆ!
ಇನ್ನು, ಬಿಹಾರದಲ್ಲಿ ಆರೋಗ್ಯ ಸೇವೆ ಕುಸಿಯಲು ಪ್ರಮುಖ ಕಾರಣ ಆಸ್ಪತ್ರೆಗಳಲ್ಲಿನ ನೌಕರರ ಕೊರತೆ. ಸದ್ಯ ಆ ರಾಜ್ಯದಲ್ಲಿ ಶೇ.59.5ರಷ್ಟು ಶುಶ್ರೂಷಕರ ಕೊರತೆ ಕಂಡುಬಂದಿದೆ. ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಶೇ.40ರಷ್ಟು ನೌಕರರ ಕೊರತೆ ಇದೆ. ಅಚ್ಚರಿ ಎಂದರೆ ಆರೋಗ್ಯ ಸೂಚ್ಯಂಕದಲ್ಲಿ ಅತ್ಯಂತ ಕಳಪೆ ಸಾಧನೆಯ ರಾಜ್ಯ ಎನಿಸಿಕೊಂಡಿರುವ ಉತ್ತರ ಪ್ರದೇಶದಲ್ಲಿ ನೌಕರರ ಕೊರತೆ ಇಲ್ಲ. ಆದರೆ, ಬಹುತೇಕ ನೌಕರರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ.
ಇಷ್ಟೆಲ್ಲ ಸಮಸ್ಯೆಗಳು ಇರುವ ಕಾರಣಕ್ಕೇ ಬಿಹಾರದಲ್ಲಿ ಮಕ್ಕಳ ಸರಣಿ ಸಾವು ಸಂಭವಿಸಿದರೂ ಆಡಳಿತ ಏನೂ ಮಾಡಲಾಗದೆ ಪರಿತಪಿಸುವಂತಾಗಿದೆ. ಉತ್ತರ ಪ್ರದೇಶದಲ್ಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಪಕ್ಷ ರಾಜಕೀಯದಲ್ಲಿ ಭಾರಿ ಮಹತ್ವದ ರಾಜ್ಯಗಳು ಎನಿಸಿಕೊಂಡ ಉತ್ತರ ಪ್ರದೇಶ ಮತ್ತು ಬಿಹಾರದ ನೇತಾರರು ಪಕ್ಷವನ್ನು ಬದಿಗಿಟ್ಟು, ರಾಜ್ಯದ ಜನರ ಆರೋಗ್ಯ ಕಾಪಾಡುವ ತಿರ್ತು ಕ್ರಮಗಳನ್ನು ಕೈಗೊಳ್ಳದೆ ಹೋದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಎಲ್ಲ ಸಾಧ್ಯತೆಗಳಿವೆ.