ಸರಕಾರವೊಂದರ ಬಲಾಬಲದ ಪರೀಕ್ಷೆಗೆ ವಿಧಾನ ಸಭೆಯೊಂದೇ ವೇದಿಕೆಯಾಗಿರಬೇಕೇ ಹೊರತು ರಾಜಭವನದ ಅಂಗಳವು ಬಹುಮತದ ಪರೀಕ್ಷೆಯ ತಾಣವಾಗಬಾರದು ಎಂದು ಸರ್ವೋನ್ನತ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದ 25 ವರ್ಷಗಳ ನಂತರ ಶಾಸಕಾಂಗಕ್ಕೆ ಸಂಬಂಧಿಸಿದ ಮತ್ತೊಂದು ಐತಿಹಾಸಿಕ ತೀರ್ಪು ಹೊರಬರಹುದೆ ಎಂಬ ನಿರೀಕ್ಷೆ ಹುಟ್ಟಿದೆ.
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಜನತಂತ್ರದ ಮೂರು ಸ್ವತಂತ್ರ ಸ್ತಂಭಗಳಾದರೂ ಶಾಸಕಾಂಗ ಮತ್ತು ಕಾರ್ಯಾಂಗಗಳು ತಮ್ಮ ನಡೆಗಳಲ್ಲಿ ಒಂದೊಮ್ಮೆ ಎಡವಿದಾಗ ನ್ಯಾಯಾಂಗದ ಹಸ್ತಕ್ಷೇಪ ಒಂದು ಸಹಜ ಕ್ರಿಯೆ ಎನಿಸಿಬಿಡುತ್ತಿದೆ. ಈ ಉಭಯ ಅಂಗಗಳ ಕಾರ್ಯನಿರ್ವಹಣೆಯು ವಿವಾದಕ್ಕೆ ಒಳಗಾದಾಗ, ರಾಜಕೀಯ ಹಸ್ತಕ್ಷೇಪಗಳು ಒತ್ತಡಗಳು ಮಿತಿಮೀರಿದಾಗ “ಸಂತ್ರಸ್ತರು” ನ್ಯಾಯಾಂಗದ ಬಾಗಿಲನ್ನು ತಟ್ಟುವುದು ಅನಿವಾರ್ಯವಾಗಿಬಿಡುತ್ತದೆ. ಆಗ ನ್ಯಾಯಾಂಗವು ಶಾಸಕಾಂಗ ಮತ್ತು ಕಾರ್ಯಾಂಗಗಳ ವಿವಾದಿತ ನಿರ್ಧಾರಗಳನ್ನು ಸಂಪೂರ್ಣವಾಗಿ ಪರಿಷ್ಕರಣೆಗೆ ಒಳಪಡಿಸಿ ಅಂತಿಮ ನಿರ್ಧಾರವನ್ನು ಪ್ರಕಟಿಸಬೇಕಾಗುತ್ತದೆ. ನ್ಯಾಯಾಂಗ ಇಂಥ ಸಂದರ್ಭ ಮತ್ತು ಸನ್ನಿವೇಶಗಳಲ್ಲಿ ನೀಡುವ ಐತಿಹಾಸಿಕ ತೀರ್ಪುಗಳು ಒಂದು ಮೈಲಿಗಲ್ಲಾಗಿ ನಿಂತು ಬಿಡುತ್ತವೆ. ಮತ್ತು ಅದನ್ನು ಪಾಲಿಸಲೇಬೇಕಾಗುತ್ತದೆ.
ಕರ್ನಾಟಕ ವಿಧಾನ ಸಭಾಧ್ಯಕ್ಷರ ನಡೆಯನ್ನು ಈಗ ಸರ್ವೋನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ತಾವು ನೀಡಿದ ರಾಜಿನಾಮೆಗಳನ್ನು ಸಭಾಧ್ಯಕ್ಷರು ಅಂಗೀಕರಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಯಾರದೋ ಒತ್ತಡಕ್ಕೆ ಸಿಲುಕಿ ಈ ರೀತಿ ಮಾಡುತ್ತಿದ್ದಾರೆ. ತಮ್ಮನ್ನು ಸದಸ್ಯತ್ವದಿಂದ ಅನರ್ಹಗೊಳಿಸುವ ಉದ್ದೇಶ ಅವರಿಗೆ ಇದ್ದಂತೆ ಕಾಣುತ್ತಿದೆ, ಮುಂತಾದ ದೂರುಗಳನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸೇರಿದ ಹತ್ತು ಶಾಸಕರು ನ್ಯಾಯಾಲಯಕ್ಕೆ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಶಾಸಕರ ಈ ಅರ್ಜಿಯ ವಿಚಾರಣೆ ನಡೆದಿದ್ದು ಮಂಗಳವಾರದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ. ಎಲ್ಲರೂ ಕಾಯುತ್ತಿದ್ದಾರೆ.
1988 ರಲ್ಲಿ ಜಾರಿಗೆ ಬಂದ ಪಕ್ಷಾಂತರ ನಿಷೇಧ ಕಾನೂನಡಿ ಶಾಸಕರನ್ನು ಎಂಥ ಸಂದರ್ಭಗಳಲ್ಲಿ ಅನರ್ಹಗೊಳಿಸಬಹುದು ಎಂದು ಹೇಳಲಾಗಿದೆ. ಆದರೆ, ತಾವಾಗಿಯೇ ರಾಜಿನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಬಹುದೆ? ವಿಧಾನ ಸಭೆಯಲ್ಲಿ ನೀಡಲಾಗುವ ವಿಪ್ ಉಲ್ಲಂಘಿಸಿದರೆ ಮಾತ್ರ ಅನರ್ಹಗೊಳಿಸಬೇಕೆ ಅಥವಾ ಸದನದ ಹೊರಗೂ ಪಕ್ಷ ನೀಡುವ ವಿಪ್ ಉಲ್ಲಂಘಿಸಿದರೂ ಅನರ್ಹಗೊಳಿಸಬಹುದೆ? ತಮಗೆ ಸಲ್ಲಿಸಿದ ರಾಜಿನಾಮೆಗಳನ್ನು ಸ್ವೀಕರಿಸುವ ಸಂಬಂಧ ಸ್ಪೀಕರ್ ಗೆ ಇರುವ ಅಧಿಕಾರದ ಇತಿಮಿತಿ ಎಷ್ಟು? ಅವರು ಅನಗತ್ಯವಾಗಿ ವಿಳಂಬ ಧೋರಣೆ ಅನುಸರಿಸಬಹುದೆ? ಅವರ ಇಂಥ ಧೋರಣೆಯಿಂದ ಆಡಳಿತ ಪಕ್ಷಕ್ಕೆ ಲಾಭವಾಗುವದಿಲ್ಲವೆ? ನ್ಯಾಯಾಂಗವು ಸ್ಪೀಕರ್ ಗೆ ಹೀಗೇ ಮಾಡಿ ಎಂದು ಆದೇಶ ಕೊಡಬಹುದೆ? ಕೊಟ್ಟಲ್ಲಿ ಅದು ಶಾಸಕಾಂಗದಲ್ಲಿ ನ್ಯಾಯಾಂಗವು ಹಸ್ತಕ್ಷೇಪ ಮಾಡಿದಂತಾಗುವದಿಲ್ಲವೆ? ಮಾಡಿದರೆ ಶಾಸಕಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವದಿಲ್ಲವೆ?
ಇವೆಲ್ಲ ಪ್ರಶ್ನೆಗಳಿಗೆ ಶೀಘ್ರವೇ ಸರ್ವೋನ್ನತ ನ್ಯಾಯಾಲಯದ ತೀರ್ಪಿನಲ್ಲಿ ಉತ್ತರ ಸಿಗುವ ಸಾಧ್ಯತೆಯಿದೆ.
ದೇಶದಲ್ಲಿ 1967 ರಿಂದ 1971 ರವರೆಗೆ 50 ಸಾವಿರ ಪಕ್ಷಾಂತರಗಳು ನಡೆದಿವೆ. ಹರಿಯಾಣಾದಲ್ಲಿ ಶಾಸಕರೊಬ್ಬರು ಒಂದೇ ದಿನ ಮೂರು ಬಾರಿ ಪಕ್ಷಾಂತರ ಮಾಡಿದ ಪ್ರಸಂಗವು “ಪಕ್ಷಾಂತರ ಇತಿಹಾಸದಲ್ಲಿ” ಕಪ್ಪು ಚುಕ್ಕೆಯಾಗಿ ದಾಖಲಾಗಿದೆ. ಸದ್ಯ ನಡೆದಿರುವದೂ ಪಕ್ಷಾಂತರಗಳ ಮೂಲಕ ಸರಕಾರವನ್ನು ಅಲ್ಪಮತಕ್ಕೆ ಇಳಿಸುವ ಪ್ರಯತ್ನವೇ. ಈ ಪಕ್ಷಾಂತರಗಳಿಗೆ ಅವರದೇ ಆದ ಕಾರಣಗಳಿರುವುದು ಬೇರೆ ಮಾತು. ಆದರೆ ಶಾಸಕಾಂಗದ ವ್ಯಾಪ್ತಿಯಲ್ಲಿಯೇ ಬಗೆಹರಿಯಬೇಕಾದ ಬಿಕ್ಕಟ್ಟುಗಳ ಪರಿಹಾರಕ್ಕೆ ನ್ಯಾಯಾಂಗದ ಮಧ್ಯಪ್ರವೇಶ ಅನಿವಾರ್ಯವೆನಿಸಿಬಿಟ್ಟಿದೆ.
1988 ರ ಎಪ್ರಿಲ್ 21 ರಂದು ರಾಜ್ಯಪಾಲ ಪಿ .ವೆಂಕಟಸುಬ್ಬಯ್ಯ ಅವರು ಎಸ್.ಆರ್.ಬೊಮ್ಮಾಯಿ ಸರಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿ ಮಾಡಿದಾಗ ನ್ಯಾಯಾಂಗದ ಮೊರೆ ಹೋದರು ಬೊಮ್ಮಾಯಿ. ರಾಜ್ಯ ಹೈಕೋರ್ಟು ಬೊಮ್ಮಾಯಿ ಪರವಾಗಿ ನಿಲ್ಲಲಿಲ್ಲ. ಬೊಮ್ಮಾಯಿ ಸರ್ವೋನ್ನತ ನ್ಯಾಯಾಲಯಕ್ಕೆ ಮೊರೆಹೋದರು. ಆರು ವರ್ಷಗಳ ನಂತರ 1994 ರ ಮಾರ್ಚ್ 11 ರಂದು ತೀರ್ಪು ಹೊರಬಂತು. ಸರಕಾರವೊಂದರ ಬಲಾಬಲದ ಪರೀಕ್ಷೆಯು ವಿಧಾನ ಸಭೆಯಲ್ಲಿಯೇ ನಡೆಯಬೇಕೇ ಹೊರತು ರಾಜಭವನದ ಅಂಗಳದಲ್ಲಿ ಅಲ್ಲ ಎಂದು ಸರ್ವೋನ್ನತ ನ್ಯಾಯಾಲಯದ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಐತಿಹಾಸಿಕ ತೀರ್ಪು ಪ್ರಕಟಿಸಿತು. ಬೊಮ್ಮಾಯಿ ಅವರಿಗೆ ಈ ತೀರ್ಪಿನ ಲಾಭ ಸಿಗಲಿಲ್ಲವಾದರೂ ದೇಶದ ಅನೇಕ ರಾಜ್ಯಗಳಲ್ಲಿ ಸಂವಿಧಾನದ 356 ನೇ ಕಲಮಿನ (ರಾಷ್ಟ್ರಪತಿ ಆಳಿಕೆಯ ಜಾರಿ) ಬೇಕಾಬಿಟ್ಟಿ ದುರುಪಯೋಗ ನಿಂತು ಹೋಯಿತು.
ಈ ತೀರ್ಪು ಬಂದ 25 ವರ್ಷಗಳ ನಂತರ ಕರ್ನಾಟಕ ವಿಧಾನ ಸಭೆಗೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣವು ಸರ್ವೋನ್ನತ ನ್ಯಾಯಾಲಯದ ಪರಿಷ್ಕರಣೆಗೆ ಒಳಗಾಗಿದೆ. ಮುಂದಿನ ವಾರ ಹೊರಬರುವ ತೀರ್ಪೂ ಸಹ ಐತಿಹಾಸಿಕವೆನಿಸಬಹುದು. ಸರಕಾರವೊಂದನ್ನು ಅಲ್ಪಮತಕ್ಕೆ ಇಳಿಸುವ ಉದ್ದೇಶದಿಂದಲೇ ನಡೆಯುವ ಪಕ್ಷಾಂತರಗಳಿಗೆ ಅಥವಾ ರಾಜಿನಾಮೆಗಳಿಗೆ ಸರ್ವೋನ್ನತ ನ್ಯಾಯಾಲಯವು ಹೇಗೆ ಪ್ರತಿಕ್ರಿಯಿಸಬಹುದು? ಶಾಸಕಾಂಗದ ಕಾರ್ಯದ ಬಗ್ಗೆ ಯಾವ ನಿಲುವು ತಳೆಯಬಹುದು ಎಂಬ ಪ್ರಶ್ನೆಗಳಿಗೆ ಶೀಘ್ರದಲ್ಲಿಯೇ ಉತ್ತರ ಸಿಗಬಹುದಾಗಿದೆ. ಒಟ್ಟಿನಲ್ಲಿ ಕರ್ನಾಟಕ ದೇಶದಲ್ಲಿ ಮತ್ತೊಮ್ಮೆ “ಮಾದರಿ” ಎನಿಸಲಿದೆ.