ಪ್ರವಾಹ ಬಂದು ನಿಂತು, ಜನಜೀವನ ಹೀಗೆ ಸುಗಮಗೊಳ್ಳುತ್ತಿತ್ತು. ಅಷ್ಟರಲ್ಲೇ ಮತ್ತೇ ಪ್ರವಾಹ ಬಂದು, ಭೀತಿ ತಂದಿದೆ. ಉತ್ತರ ಕರ್ನಾಟಕದ ಜನರು ಬರದಿಂದ ತತ್ತರಿಸುತ್ತಿದ್ದರು. ಈಗ ಬರೀ ಇಪ್ಪತ್ತು ದಿನಗಳಲ್ಲಿ ಎರಡನೆಯ ಬಾರಿಗೆ ಪ್ರವಾಹಕ್ಕೆ ತತ್ತರಿಸಿದ್ದಾರೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಶರಾವತಿ, ತುಂಗಭದ್ರಾ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಉತ್ತರಕನ್ನಡ, ಬೆಳಗಾವಿ, ಬಾಗಲಕೋಟೆ, ಗದಗ್, ಕೊಪ್ಪಳ ಹಾಗೂ ಹಾವೇರಿ ಜಿಲ್ಲೆಗಳ ಜನರು ಪ್ರವಾಹ ಭೀತಿಯಿಂದ ಕಂಗಾಲಾಗಿದ್ದಾರೆ. ಎಲ್ಲ ಕಡೆ ಬೆಳೆಗಳು ಹಾಳಾಗಿದ್ದು, ಇನ್ನೇನು ಹೊಲಗಳನ್ನು ಸ್ವಚ್ಛ ಮಾಡಬೇಕು ಎಂದ ಸಮಯದಲ್ಲೇ ವರುಣಾಘಾತ ಹಾಗೂ ಪ್ರವಾಹ ಭೀತಿ ಎದುರಾಗಿದೆ.
ಹೆಚ್ಚು ಓದಿದ ಸ್ಟೋರಿಗಳು
ಬೆಳಗಾವಿಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆಗಸ್ಟ್ ನಲ್ಲಿ ಪ್ರವಾಹದಿಂದ ಶಾಲೆಗಳು ಬಂದ್ ಆಗಿದ್ದಕ್ಕೆ ಸರಿದೂಗಿಸಲು ಪ್ರತಿ ಭಾನುವಾರ ಜಿಲ್ಲೆಯ ಶಾಲೆಗಳು ನಡೆಯುತ್ತಿದ್ದವು. ಮಲಪ್ರಭಾ ಉಗಮ ಸ್ಥಾನವಾದ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಶನಿವಾರ 17.1 ಸೆಂ.ಮೀ. ಮಳೆ ಸುರಿದಿದೆ. ಅಥಣಿ ತಾಲೂಕಿನ ಶೋಭಾ ಸುತಾರ (40) ಎಂಬ ಮಹಿಳೆ ಶನಿವಾರ ಮನೆಯ ಸಾಮಾನುಗಳನ್ನು ಸ್ಥಳಾಂತರಿಸುವ ಸಮಯದಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಮುಂದೆ ಹೇಗೆ?
ಮಹಾರಾಷ್ಟ್ರ ರಾಜ್ಯ ವಾರಣಾ ಮತ್ತು ಮಹಾಬಲೇಶ್ವರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಕೊಯ್ನಾ ಹಾಗೂ ಮಲಪ್ರಭಾ ನದಿಯಿಂದ ಮತ್ತೆ ನೀರು ಬಿಡಲಾಗುತ್ತಿರುವುದು ಈ ಪ್ರವಾಹಕ್ಕೆ ಕಾರಣವಾಗಿದೆ. ಶುಕ್ರವಾರದಂದು ಚಿಕ್ಕೋಡಿ ತಾಲೂಕಿನಲ್ಲಿ ಹರಿಯುತ್ತಿರುವ ವೇದಗಂಗಾ ಹಾಗೂ ದೂಧಗಂಗಾ ತುಂಬಿ ಹರಿಯುತ್ತಿರುವುದರಿಂದ ನದಿ ತೀರದ ಗ್ರಾಮಗಳಿಗೆ ಹೈ ಅಲರ್ಟ್ ಘೋಷಿಸಿದ್ದು ಕೆಲವು ಸೇತುವೆಗಳು ಈಗಾಗಲೇ ಮುಳುಗಡೆಯಾಗಿವೆ.

ಉತ್ತರ ಕನ್ನಡದ ಕಾರವಾರ ಮತ್ತು ಹೊನ್ನಾವರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಗೇರುಸೊಪ್ಪ ಆಣೆಕಟ್ಟಿನಿಂದ 55,210 ಕ್ಯೂಸೆಕ್ಸ್ ನೀರು ಬಿಡಲಾಗಿದೆ. ಇದರಿಂದ ಶರಾವತಿ ನದಿಯ ಹತ್ತಿರದ ಹಳ್ಳಿಗಳು ಜಲಬಂಧನಕ್ಕೊಳಗಾಗಿವೆ.
ಇತ್ತ ಗಂಗಾವತಿ ಕಡೆಗೆ ತುಂಗಭದ್ರಾ ಜಲಾಶಯದಿಂದ ಶುಕ್ರವಾರ ಸಂಜೆ 75 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿದ್ದರಿಂದ ಆನೆಗೊಂದಿಯ ತಳವಾರ ಘಟ್ಟ, ಹಂಪಿ ಮತ್ತು ನವ ವೃಂದಾವನ ಗಡ್ಡೆಗೆ ಬೋಟ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಹನುಮನಹಳ್ಳಿ, ಸಣ್ಣಾಪುರ, ಚಿಕ್ಕಜಂತಗಲ್, ಕಕ್ಕರಗೊಳ ಮುಂತಾದ ಹಳ್ಳಿಗಳಲ್ಲಿ ಡಂಗುರ ಸಾರಿ ಜನತೆಗೆ ಎಚ್ಚರ ವಹಿಸಲು ತಿಳಿಸಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಹುನಗುಂದ ತಾಲೂಕಿನ ಹಲವು ಗ್ರಾಮಗಳಲ್ಲಿ ನೀರು ನುಗ್ಗಿದ್ದು ಮತ್ತೆ 20 ದಿನಗಳ ಹಿಂದಿನ ಪ್ರವಾಹ ದಂತಿದೆ ಎನ್ನುವಷ್ಟು ನೀರು ಹರಿಯುತ್ತಿದೆ.
ತುಂಗಭದ್ರಾ ಜಲಾಶಯದ 28 ಗೇಟುಗಳಿಂದ ಒಟ್ಟು 74,603 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ಈ ನೀರನ್ನು ಮಲೆನಾಡು ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದರಿಂದ ಬಿಡಲಾಗಿದ್ದು, ಈಗಾಗಲೇ ಹಲವಾರು ಸೇತುವೆಗಳ ಮಟ್ಟಕ್ಕೆ ನೀರು ಬಂದಿದೆ. ಹಂಪಿಯ ಕೆಲವು ಸ್ಮಾರಕಗಳು ಮತ್ತೆ ನೀರಿನಲ್ಲಿ ನಿಂತಿವೆ.

ಹಂಪಿ ದೇವಾಲಯಗಳಿಗೆ ಮತ್ತೆ ಜಲ ಬಂಧನ:
ಹಂಪಿಯ ವಿರುಪಾಪುರ ಗಡ್ಡೆ ಈಗಾಗಲೇ ಸಂಪರ್ಕ ಕಡಿದುಕೊಂಡಿದ್ದು ಹಂಪಿಯ ಹಲವು ದೇವಾಲಯಗಳು ಜಾಲವೃತವಾಗಿವೆ. 20 ದಿನಗಳ ಅಂತರದಲ್ಲಿ ಹಂಪಿ ದೇವಾಲಯಗಳು ಮತ್ತೆ ಜಲಬಂಧಕ್ಕೆ ಒಳಗಾಗಿದ್ದು, ಹೆಚ್ಚಿನ ಪ್ರವಾಹದ ಭೀತಿ ಉಂಟಾಗಿದೆ. ಹಂಪಿಯ ಕೋದಂಡರಾಮನ ಗುಡಿಯ ಹತ್ತಿರ ಹಾಗೂ ಮುಖ್ಯ ರಸ್ತೆಗಳಲ್ಲಿ ಹೆಚ್ಚಿನ ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸಿದ್ದು , ಭದ್ರತೆ ನೀಡಲಾಗಿದೆ. ಪ್ರವಾಸಿಗರಿಗೆ ಈಗಾಗಲೇ ನೀರಿನ ಹತ್ತಿರ ಹೋಗಬೇಡಿ ಎಂದು ತಿಳಿಸಲಾಗಿದ್ದು, ಮತ್ತೆ ಹಲವು ಐತಿಹಾಸಿಕ ಸ್ಥಳಗಳು ಮುಳುಗುವ ಅಪಾಯವಿದೆ. ಹಂಪಿಯ ಪುರಂದರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ಚಕ್ರತೀರ್ಥ, ರಾಮ ಲಕ್ಷ್ಮಣ ದೇವಸ್ಥಾನಕ್ಕೆ ಹೋಗುವ ದಾರಿಯೂ ಜಲಾವೃತವಾಗಿದೆ.
ಮಲಪ್ರಭಾ ನದಿ ನೀರಿನಿಂದ 12 ಸಾವಿರ ಕ್ಯೂಸೆಕ್ಸ್ ಬಿಡಲಾಗಿದ್ದು, ಗದಗ್ ನ ರೋಣ ಮತ್ತು ನರಗುಂದ ತಾಲೂಕಿನಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಲಖಮಾಪುರ, ಸುರಕೋಡ, ಕಪ್ಪಲಿ, ಮಕೊಣ್ಣು, ಬೂದಿಹಾಳ ಹಾಗೂ ಅಮರಗೋಳ ಗ್ರಾಮದ ಜನರು ಹಳ್ಳಿಗಳನ್ನು ಬಿಟ್ಟು ಶುಕ್ರವಾರವೇ ಗಣಪತಿಯನ್ನು ಅವಸರದಲ್ಲಿ ವಿಸರ್ಜಿಸಿ ಸ್ಥಳಾಂತರಗೊಂಡಿದ್ದಾರೆ. ಇದೇ ರೀತಿ ಇನ್ನೂ ಹೆಚ್ಚು ನೀರು ಬಿಟ್ಟರೆ ಕೊಣ್ಣುರು ಮತ್ತೆ ಮುಳುಗಡೆಯಾಗಲಿದ್ದು, ಹುಬ್ಬಳ್ಳಿ-ವಿಜಯಪುರ ರಸ್ತೆಯ ಸಂಪರ್ಕ ಕಡಿತಗೊಳ್ಳಲಿದೆ. ಗ್ರಾಮಸ್ಥರು ಜಾನುವಾರುಗಳನ್ನು ಮುಂಜಾಗ್ರತೆ ಕ್ರಮವಾಗಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಗದಗ ಜಿಲ್ಲಾಡಳಿತ ಮುನ್ನಚ್ಚರಿಕೆ ನೀಡಿದ್ದು, ಪ್ರವಾಹದ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳಿಸಲು ಹಾಗೂ ಸಂತ್ರಸ್ತರಿಗಾಗಿ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ.

ಹುಬ್ಬಳ್ಳಿ-ವಿಜಯಪುರ ಹೆದ್ದಾರಿ ಬಂದ್: ನರಗುಂದದ ಹತ್ತಿರದ ಕೊಣ್ಣೂರಿನಲ್ಲಿ ನೀರು ನುಗ್ಗಿದ್ದು ಹುಬ್ಬಳ್ಳಿ ವಿಜಯಪುರ ರಸ್ತೆ ಯನ್ನು ಬಂದ್ ಮಾಡಲಾಗಿದೆ. ಕಳೆದ ಬಾರಿ ಈ ರಸ್ತೆಯ ಡಾಂಬರು ಸಂಪೂರ್ಣ ಕೊಚ್ಚಿ ಹೋಗಿದ್ದು ಹದಿನೈದು ದಿನಗಳ ಹಿಂದಷ್ಟೇ ರಿಪೇರಿ ಮಾಡಲಾಗಿತ್ತು.
ಹಾವೇರಿಯಲ್ಲೂ ಮತ್ತೆ ಆತಂಕ!
ತುಂಗಭದ್ರಾ ನದಿಯಿಂದ ಹೆಚ್ಚು ನೀರು ಬಿಟ್ಟಿದ್ದು ಮತ್ತು ನಿರಂತರ ಮಳೆಯಿಂದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಲ್ಲಾಪುರ, ಕೂಡಲ, ಹರವಿ, ಹರನಗಿರಿ, ಬಸಾಪುರ, ಮೇಲ್ಮುರಿ, ಶಿಗ್ಗಾವಿ, ಹಿರೇಮಗದೂರ, ಚಿಕ್ಕಮಗದೂರ ಹಾಗೂ ಚಿಕ್ಕನೆಲ್ಲೂರ ಮುಂತಾದ ಗ್ರಾಮಗಳಲ್ಲಿ ಪ್ರವಾಹ ಭೀತಿ ಆವರಿಸಿದೆ. ಶನಿವಾರ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೊರ ಬಿಡುವ ನೀರಿನ ಪ್ರಮಾಣ 1.44 ಲಕ್ಷ ಕ್ಯೂಸೆಕ್ಸ್ ಗೆ ಏರಿಕೆ ಮಾಡಲಾಗಿದ್ದು, ರಾಯಚೂರು ಮತ್ತು ಯಾದಗಿರಿ ನದಿ ಪಾತ್ರದಲ್ಲಿ ನೀರು ಉಕ್ಕಿ ಹರಿಯುತ್ತಿದೆ.
ಇನ್ನು ಖಾನಾಪುರ ಅರಣ್ಯದಲ್ಲಿ ನಿನ್ನೆಗಿಂತ ಇಂದು ಮಳೆಯ ಪ್ರಮಾಣ ಹೆಚ್ಚಾಗಿದೆ. ಮೂಲಗಳ ಪ್ರಕಾರ ಖಾನಾಪುರ ಅರಣ್ಯದಲ್ಲಿ ಸುರಿದ ಮಳೆಯಿಂದ ಮಲಪ್ರಭಾ ನದಿಗೆ ಹರಿದುಬರುವ ನೀರು ಕಣಕುಂಬಿಯಿಂದ ೧೨೦ ಕಿಮೀ ದೂರದ ಸವದತ್ತಿ ನವಿಲುತೀರ್ಥ ಜಲಾಶಯ ತಲುಪಲು 18-22 ಗಂಟೆ ಸಮಯ ಬೇಕು. ಹೀಗಾಗಿ ಮುಂಜಾನೆವರೆಗೆ ತಾಲೂಕಿನ ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಸುರಿದ ಮಳೆಯಿಂದ ಸಂಗ್ರಹಗೊಂಡ ನೀರು ಸೋಮವಾರ ನವಿಲುತೀರ್ಥ ತಲುಪಲಿದ್ದು ನಾಳೆ 30 ಸಾವಿರಕ್ಕೂ ಹೆಚ್ಚು ಕ್ಯುಸೆಕ್ಸ್ ನೀರು ಹೊರಬಿಡುವ ಸಾಧ್ಯತೆ ಇದೆ. ಭಾನುವಾರ ಮುಂಜಾನೆ ಮಳೆಯ ರಭಸ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆ. ಆದರೂ ಮಲಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಕಣಕುಂಬಿಯಿಂದ ಎಂ. ಕೆ. ಹುಬ್ಬಳ್ಳಿಯ ವರೆಗೆ ಒಟ್ಟು 8 ಸೇತುವೆಗಳು ನದಿಯಲ್ಲಿ ಜಲಾವೃತಗೊಂಡಿವೆ.