ಒಂದು ಕಾಲದಲ್ಲಿ ಗಣಿ ಕೆಲಸ ಅಂದರೆ ಧಣಿಗಳೇ ಅವರು ಎನ್ನುವಂತಿದ್ದು, ಇಂದು ಲಕ್ಷಗಟ್ಟಲೇ ಜನರು ಕೆಲಸವಿಲ್ಲದೇ ಖಾಲಿ ಕುಳಿತಿದ್ದಾರೆ. ಅವರೆಲ್ಲ ತಮಗೆ ಏನೇನು ಬರುತ್ತೋ ಅದನ್ನು ಮಾಡುತ್ತ ದಿನಗೂಲಿಯಂತೆ ದುಡಿಯುತ್ತ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಇವರೆಲ್ಲ ಕೇಳುವುದು ಇಷ್ಟೇ.. ಪರಿಸರಕ್ಕೆ ಹಾನಿಯಾಗದಂತೆ, ದೇಶಕ್ಕೆ ಲಾಭವಾಗುವಂತೆ ಗಣಿ ಕಾರ್ಯವನ್ನು ಪ್ರಾರಂಭಿಸಲು ಸಾಧ್ಯವೇ ಇಲ್ಲವೇ? ಗಣಿ ಉದ್ಯಮ ದೊಡ್ಡ ಉದ್ಯಮಗಳಲ್ಲೊಂದು, ಅವರಿಗೆಲ್ಲ ಬೇರೆ ಕೆಲಸ ಬರುವುದಿಲ್ಲ. ಅವರತ್ತ ನೋಡುವುದೇ ಈ ಸರ್ಕಾರ?
ಗಣಿ….ಕೆಲ ವರ್ಷಗಳ ಹಿಂದೆ ಗಣಿಗಾರಿಕೆ ಅವ್ಯಾಹತವಾಗಿ ನಡೆದು ಹಲವು ಜನರು ಉದ್ಯೋಗ ಪಡೆದುಕೊಂಡಿದ್ದರು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 12.8 ಲಕ್ಷ ಮಂದಿ ಕರ್ನಾಟಕ ಹಾಗೂ ಗೋವಾದಲ್ಲಿನ ಗಣಿಗಾರಿಕೆಯಿಂದ ಉದ್ಯೋಗ ಪಡೆದುಕೊಂಡಿದ್ದರು. ನಂತರ ಆಕ್ರಮ ಗಣಿಗಾರಿಕೆಯ ಪ್ರಕರಣಗಳು ಹಾಗೂ ಪರಿಸರವಾದಿಗಳ ವಿರೋಧದಿಂದ 2012 ರಲ್ಲಿ ಗಣಿಗಾರಿಕೆಗೆ ಅಂಕುಶ ಬಿದ್ದಿದ್ದು ಹಲವು ಗಣಿ ಕಂಪನಿಗಳು ಸ್ಥಗಿತಗೊಂಡವು. ಇದರಲ್ಲಿ ಮೇಲ್ದರ್ಜೆ ಅಧಿಕಾರಿಗಳು ಹಾಗೂ ವ್ಯಾಪಾರಸ್ಥರು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡರೂ, ಗಣಿಯನ್ನೇ ಅವಲಂಬಿಸಿದ ಹಲವರು ಕೆಲಸ ಕಳೆದುಕೊಳ್ಳಬೇಕಾಯಿತು.
ಯಾರಿವರು?
ಗಣಿಗಾರಿಕೆ ಬಂದ್ ಆದ ಮೇಲೆ ನಿಜವಾದ ಪೆಟ್ಟು ಬಿದ್ದಿದ್ದು ಗಣಿ ಕೌಶಲ್ಯ ಹೊಂದಿದ ಗಣಿ ಕಾರ್ಮಿಕರು, ಟ್ರಕ್ ಮಾಲೀಕರು, ಚಾಲಕರು, ಕ್ಲೀನರ್ ಗಳು, ದೊಡ್ಡ ವಾಹನ ರಿಪೇರಿ ಅಂಗಡಿಗಳು, ಪೆಟ್ರೋಲ್, ಡಿಸೆಲ್ ಚಿಲ್ಲರೆ ಮಳಿಗೆಗಳು, ಊಟ, ಉಪಹಾರ, ಹಾಗೂ ರಸ್ತೆ ಪಕ್ಕದ ಹೋಟೆಲ್/ಡಾಬಾ ಗಳ.
2011 ರಿಂದ ಇಲ್ಲಿಯ ವರೆಗೆ ಕರ್ನಾಟಕದದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ 166 ಕಬ್ಬಿಣ ಅದಿರು ಗಣಿಗಳನ್ನು ಸ್ಥಗಿತಗೊಳಿಸಲಾಗಿದೆ. ಗೋವಾದಲ್ಲಿ 2012 ರಿಂದ ಎಲ್ಲ ಗಣಿ ಚಟುವಟಿಕೆಗಳಿಗೆ ಅಂಕುಶ ಹಾಕಲಾಗಿದೆ. ಭಾರತದಲ್ಲಿ ಕೃಷಿ ಮತ್ತು ನಿರ್ಮಾಣ ವಲಯದ ನಂತರ ಅತಿ ಹೆಚ್ಚು ಉದ್ಯೋಗ ಸೃಷ್ಟಿಯ ವಲಯವೆಂದರೆ ಗಣಿ ಉದ್ಯಮ. ಭಾರತೀಯ ಖನಿಜ ಕೈಗಾರಿಕೆಗಳ ಸಂಸ್ಥೆಯ ಅಧ್ಯಕ್ಷ ಸುನೀಲ್ ದಗ್ಗಲ್ ಇತ್ತೀಚೆಗೆ ಮಾಧ್ಯಮ ಸಂದರ್ಶನವೊಂದರಲ್ಲಿ ತಿಳಿಸಿದ್ದು, “2011 ರಿಂದ ಇಲ್ಲಿಯ ವರೆಗೆ ಕರ್ನಾಟಕ ಹಾಗೂ ಗೋವಾ ಗಣಿಗಳಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು 12.8 ಲಕ್ಷ ಉದ್ಯೋಗ ನಷ್ಟ ಉಂಟಾಗಿದೆ”. ಈಗ ಗಣಿಗಳಲ್ಲಿ ಕೆಲಸ ಮಾಡುತ್ತಿದ್ದವರು ಮಂಗಳೂರು, ಬೆಂಗಳೂರು, ಪುಣೆ, ಸೊಲ್ಲಾಪುರ, ಮುಂಬೈಗಳಿಗೆ ಗುಳೆ ಹೋಗುತ್ತಿದ್ದಾರೆ.
ಇಲ್ಲಿ ಕೆಲಸ ಮಾಡಿದವರು ಏನೆನ್ನುತ್ತಾರೆ?
ಪ್ರತಿಧ್ವನಿ ತಂಡ ಹಲವರನ್ನು ಮಾತನಾಡಿಸಿದಾಗ ಒಂದು ಸಾಮಾನ್ಯ ಸಂಗತಿ ತಿಳಿದಿದ್ದು, ಗಣಿ ಕಂಪನಿಗಳು ಬಂದ್ ಆದ ಮೇಲೆ ಹಲವಾರು ಪರೋಕ್ಷ ಉದ್ಯಮಗಳು ನೆಲಕಚ್ಚಿದವು. ಜೊತೆಗೆ ಗಣಿಯಲ್ಲೇ ನುರಿತ ಕಾರ್ಮಿಕರು ಇಂದು ಚಿಕ್ಕ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ಒಂದು ಕಾಲದಲ್ಲಿ ರೂ. 500 ಕ್ಕೆ ಕರಿ ಎಲೆ ಎಂದು ಕರೆಯುತ್ತಿದ್ದರಂತೆ. 100 ರೂ ನೋಟಿಗೆ ಅಂಬಾಡಿ ಎಲೆ ಅನ್ನುತ್ತಿದ್ದರಂತೆ. ಈಗ ಅಂಬಾಡಿ ಎಲೆ ಸಿಕ್ಕರೆ ಸಾಕು ಎಂದು ಪರಿತಪಿಸುತ್ತಿದ್ದಾರೆ.
ಸಂಡೂರಿನ ಟೌರಸ್ (10 ಗಾಲಿಯ ದೊಡ್ಡ ಟ್ರಕ್) ಗಾಡಿ ಮಾಲೀಕ ರಾಗಿದ್ದ ನರಸಿಂಹ ಗುಡ್ಡದ ಹೀಗೇನ್ನುತ್ತಾರೆ, “ಗಣಿಗಾರಿಕೆ ನಡೆಯುತ್ತಿದ್ದಾಗ ಸಾಲ ಮಾಡಿ ಟೌರಸ್ ಖರೀದಿಸಿದೆ. ಅದು ಅಷ್ಟು ದುಡಿದೂ ಕೊಟ್ಟಿತು. ಆದರೆ 2012 ರಲ್ಲಿ ಗಣಿ ಕೆಲಸಗಳು ಸ್ಥಗಿತ ಗೊಂಡಾಗ ನೂರಾರು ಗಾಡಿಗಳು ಕೆಲಸವಿಲ್ಲದೆ ನಿಂತವು. ನಂತರ ಬೆಂಗಳೂರಿಗೆ ಹೋಗಿ ಅತಿ ಕಡಿಮೆ ದರದಲ್ಲಿ ಆ ವಾಹನವನ್ನು ಮಾರಿದೆ. ನನ್ನಂತಹ ನೂರಾರು ಗಾಡಿ ಮಾಲೀಕರು ಇಂದು ಕೆಲಸವಿಲ್ಲದೇ ಪರದಾಡುತ್ತಿದ್ದೇವೆ. ಅಂದು ದಿನಕ್ಕೆ 3 ಸಾವಿರ ರೂಪಾಯಿ ಸಿಗುತ್ತಿತ್ತು. ಇಂದು 200 ಸಿಕ್ಕರೆ ಅದೇ ಸಾಕು ಅನ್ನುವಂತಹ ಪರಿಸ್ಥಿತಿ ಇದೆ”.
ಮಾಬುಸಾಬ ಜಂದಿ, ಬಳ್ಳಾರಿಯ ಗಣಿ ಕಾರ್ಮಿಕರು, ಹೇಳುವ ಪ್ರಕಾರ, “ನಾನು ಗುಡ್ಡಗಳಲ್ಲಿ ಮಣ್ಣು ಅಗಿಯುವುದು ಹಾಗೂ ಮ್ಯಾಂಗನೀಸ್ ಕಲ್ಲುಗಳನ್ನು ಬಾಂಬ್ ಸ್ಫೋಟಿಸಿದ ನಂತರ ಸಂಗ್ರಹಿಸೋದು ಹಾಗೂ ಇತರೆ ಕೆಲಸಗಳನ್ನು ಮಾಡುತ್ತಿದ್ದೆ. ಈಗ ಅದಾವುದೂ ಇಲ್ಲ. ಹೋಟೆಲ್ ಗಳಲ್ಲಿ ದುಡಿಯೋಣ ವೆಂದರೆ ಅತಿ ಕಡಿಮೆ ಪಗಾರ. ಹೀಗಾಗಿ ಗಣಿ ಮತ್ತೇ ಶುರುವಾಗುತ್ತಾ ಎಂದು ಕಾಯುತ್ತ ಕುಳಿತಿದ್ದೇವೆ”.
ಸಂಡೂರಿನ ಗಣಿ ಕಂಪೆನಿಯ ಮುಖ್ಯರಸ್ಥರೊಬ್ಬರು ಹೇಳುವ ಪ್ರಕಾರ, “ಗಣಿ ಉದ್ಯಮ ಆರಂಭವಾದಾಗಿನಿಂದ ನೇರವಾಗಿ ಹಾಗೂ ಪರೋಕ್ಷವಾಗಿ ಹಲವರು ಉದ್ಯೋಗಿಗಳಾದರು. ಆದರೆ ಕೆಲವರು ಮಾಡಿದ ಆಕ್ರಮ ಗಣಿಗಾರಿಕೆಯಿಂದ ಬಹುತೇಕರಿಗೆ ಪೆಟ್ಟು ಬಿದ್ದಿದ್ದು, ಅವರೆಲ್ಲ ನಿರುದ್ಯೋಗಿಗಳಾಗಿ ಇಂದು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಒಂದು ಕಾಲದಲ್ಲಿ ದಿನಕ್ಕೆ 500 ರಿಂದ ಸಾವಿರ ರೂಪಾಯಿ ಪಡೆಯುವ ಕಾರ್ಮಿಕರು, ಇಂದು ದಿನಕ್ಕೆ ನೂರು ರೂಪಾಯಿ ದುಡಿಯುವುದಕ್ಕೂ ಆಗುತ್ತಿಲ್ಲ. ಸಂಸಾರ ನಡೆಸಲು ಕಷ್ಟವಾಗಿ ಬೇರೆ ಊರುಗಳಿಗೆ ಗುಳೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣೆ ದೃಷ್ಟಿಕೋನದ ಕೊರತೆ, ಆಡಳಿತ ನಿಯಂತ್ರಣದ ವೈಫಲ್ಯ ಮತ್ತು ಅತ ಆಸೆ ಎಂದೇ ಹೇಳಬಹುದು”.
ಲಕ್ಕುಂಡಿಯ ಹತ್ತಿರದ ಅಡವಿ ಸೋಮಾಪುರ ರಾಮಣ್ಣ ಹೇಳಿದ್ದು ಹೀಗೆ, “ಅಂದು ನಮ್ಮ ಎಗ್ ರೈಸ್ ಅಂಗಡಿ ಎಂದರೆ ಯಾವಾಗಲೂ ಗದ್ದಲ. ದಿನಕ್ಕೆ 1000 ಪ್ಲೇಟುಗಳನ್ನು ಮಾರುತ್ತಿದ್ದೆ. ದಿನವೊಂದಕ್ಕೆ ಭರ್ಜರಿ ವ್ಯಾಪಾರ. ಬರೀ ಗಣಿ ಗಾಡಿಗಳೇ ನಿಲ್ಲುತ್ತಿದ್ದವು. ಹಗಲಿಗಿಂತ ರಾತ್ರಿ ವ್ಯಾಪಾರ ಜೋರು. ರಾತ್ರಿ ಹನ್ನೆರಡು ಗಂಟೆ ಆದರೆ ಸಾಕು, ಸಾಲು ಸಾಲು ಗಾಡಿಗಳು ನಿಲ್ಲುತ್ತಿದ್ದವು. ಗಣಿ ಬಂದ್ ಆದ ಮೇಲೆ ಈಗ 2000 ರೂಪಾಯಿ ವ್ಯಾಪಾರನೂ ಇಲ್ಲ”.
ಏನಾಗಿತ್ತು ಅಂದು?
2001-2011 ರ ಅವಧಿಯಲ್ಲಿ ಬಳ್ಳಾರಿಯಲ್ಲಿ ನಡೆದ ಬಹುಕೋಟಿ ಹಗರಣಗಳ ನಂತರ ಸುಪ್ರೀಂ ಕೋರ್ಟ್ ಗಣಿ ಉದ್ಯಮಕ್ಕೆ ಅಂಕುಶ ಹಾಕಿತ್ತು. ಇದರ ಪರಿಣಾಮವಾಗಿ ಗಣಿಗಳನ್ನು ಗುತ್ತಿಗೆ ನೀಡುವುದು ಮತ್ತು ಗಣಿ ಮಾಲೀಕರ ಪರವಾನಗಿಯನ್ನು ನವೀಕರಣ ಮಾಡುವ ಬದಲು ಹರಾಜು ನಡೆಸುವ ಸಂಬಂಧ ಸೂಚಿಸಿತ್ತು. 2011 ರ ಜುಲೈ 29 ಮತ್ತು ಆಗಸ್ಟ್ 26 ರಂದು ನೀಡಿದ್ದ ಆದೇಶಗಳಲ್ಲಿ ಸುಪ್ರೀಂ ಕೋರ್ಟ್, ರಾಜ್ಯದ ಮೂರು ಅತ್ಯಂತ ಸಿರಿವಂತ ಗಣಿ ಜಿಲ್ಲೆಗಳಲ್ಲಿನ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಿತ್ತು. ಗುತ್ತಿಗೆ ಪಡೆದ ಗಣಿ ಪ್ರದೇಶದಾಚೆಯೂ ಒತ್ತುವರಿ ಮತ್ತು ಎಸೆಯುವಿಕೆ ನಡೆಯುತ್ತಿದ್ದವು. 2012 ರ ಆಗಸ್ಟ್ 5 ರಂದು ಗೋವಾದಲ್ಲಿನ ಎಲ್ಲ ಗಣಿ ಕಾರ್ಯಾಚರಣೆಗಳನ್ನು ಕೂಡ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಇಲ್ಲಿ ಗಣಿಗುತ್ತಿಗೆಗಳ ಪರವಾನಗಿ ನವೀಕರಣ ಹಲವು ವರ್ಷಗಳಿಂದ ಬಾಕಿ ಇದ್ದವು. ಸುರಕ್ಷತಾ ಮಾನದಂಡಗಳ ಕೊರತೆಯಿಂದ ಈ ಭಾಗದಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. 2014 ರಲ್ಲಿ ಗೋವಾ ಸರ್ಕಾರ ವರ್ಷಕ್ಕೆ 20 ಮಿಲಿಯನ್ ಕಬ್ಬಿಣದ ಅದಿರು ಹೊರತೆಗೆಯಲು ಅನುಮತಿ ನೀಡಿ ಗುತ್ತಿಗೆ ನವೀಕರಿಸಿತ್ತು. 2018 ರ ಫೆಬ್ರುವರಿ 7 ರಂದು 88 ಗಣಿಗಳ ನವೀಕರಣ ಆದೇಶವನ್ನು ರದ್ದುಗೊಳಿಸಿತ್ತು. ನಂತರ ಗಣಿಗಳು ಮುಚ್ಚಿಹೋದವು.
ಸರ್ಕಾರಕ್ಕಾದ ನಷ್ಟ:
ಕರ್ನಾಟಕ ಸರ್ಕಾರಕ್ಕೆ ಈ ಎಳೆಂಟು ವರ್ಷಗಳಲ್ಲಿ ಪರವಾನಗಿ ಶುಲ್ಕ, ಸಹಾಯಧನ, ತೆರಿಗೆಗಳು ಮತ್ತು ಸುಂಕಗಳ ರೂಪದಲ್ಲಿ ಸುಮಾರು 10,000 ಕೋಟಿ ಆದಾಯ ನಷ್ಟ. ಒಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ 5,830 ಕೋಟಿಯಷ್ಟು ಆದಾಯ ನಷ್ಟವಾಗಿದೆ ಎಂದು ಗಣಿ ಅಧಿಕಾರಿಯೊಬ್ಬರು ತಿಳಿಸಿದರು.
ಗಣಿ ಕಾರ್ಮಿಕರ ಸಂಘದ ಪ್ರತಿಕ್ರಿಯೆ:
ಬಳ್ಳಾರಿ ಜಿಲ್ಲೆಯ 28 ಗಣಿ ಕಂಪೆನಿಗಳ ಸಾವಿರಾರು ಗಣಿ ಕಾರ್ಮಿಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಇದರ ಬಗ್ಗೆ ಬಳ್ಳಾರಿ ಜಿಲ್ಲೆ ಗಣಿ ಕಾರ್ಮಿಕರ ಸಂಘದ ಉಪಾಧ್ಯಕ್ಷರಾದ ವೈ. ಗೋಪಿ ಪ್ರತಿಧ್ವನಿ ಗೆ ತಿಳಿಸಿದರು, “ಕಾರ್ಮಿಕರ ಕಲ್ಯಾಣಕ್ಕಾಗಿ ನ್ಯಾಯಾಲಯ ಮೂರು ಹಂತಗಳಲ್ಲಿ ವಿಚಾರಿಸುತ್ತಿದೆ. ಒಂದು, ಕಾರ್ಮಿಕರ ಪುನರ್ವಸತಿ ಹಾಗೂ ಪುನರುಜ್ಜೀವನ, ಎರಡು ಪುನರ್ ಉದ್ಯೋಗ ನೀಡುವುದು ಹಾಗೂ ಮೂರು, ಪಾವತಿ (ಸೆಟಲ್ ಮೆಂಟ್) ಪೂರ್ಣಗೊಳಿಸುವುದು. ಇದರ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿದೆ.’’
14-05-2018 ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಗಣಿ ಕಾರ್ಮಿಕರ ಪುನರ್ ಉದ್ಯೋಗ ನೀಡುವಂತೆ ಸುಪ್ರೀಂ ಕೋರ್ಟ್ ತಿಳಿಸಿತ್ತು. ಈ ಬಗ್ಗೆ ಈಗಾಗಲೇ 6 ಬಾರಿ ವಿಚಾರಣೆ ನಡೆದಿದ್ದು, ಸಮಾಜ ಪರಿವರ್ತನಾ ಸಂಸ್ಥೆಯೂ ಈ ಬಗ್ಗೆ ಅರ್ಜಿ ಸಲ್ಲಿಸಿದ್ದು ಹಣ ದುರ್ಬಳಕೆ ಎಂಬ ಅವರ ವಾದವೂ ಕಾರ್ಮಿಕರ ಅಹವಾಲಿಗೆ ಸೇರಿದ್ದರಿಂದ ತಡವಾಗುತ್ತಿದೆ. ಕಾರ್ಮಿಕರ ಕಲ್ಯಾಣವೂ ಸೇರಿದಂತೆ ಗಣಿ ಬಾಧಿತ ಮೂರು ಜಿಲ್ಲೆಗಳ ಆಮೂಲಾಗ್ರ ಅಭಿವೃದ್ಧಿಗಾಗಿ ಮೀಸಲಾಗಿಟ್ಟಿರುವ 24,996 ಕೋಟಿ ರೂ ಗಳ ಕ್ರಿಯಾ ಯೋಜನೆ ಸಿದ್ಧವಾದರೂ ಅನುಷ್ಟಾನ ಇನ್ನೂ ಸಾಧ್ಯವಾಗಿಲ್ಲ ಎಂದು ಗೋಪಿ ಹೇಳಿದರು.