ತಮಿಳುನಾಡಿನ ಚೆನ್ನೈನಲ್ಲಿ ಸಮುದ್ರದ ಉಪ್ಪು ನೀರು ಶುದ್ಧೀಕರಿಸುವ ಘಟಕಗಳ ಸ್ಥಾಪನೆಗೆ ಚಾಲನೆ ನೀಡಲಾಗಿದೆ. ಚೆನ್ನೈ ಮಹಾನಗರ ಸೇರಿದಂತೆ ತಮಿಳುನಾಡಿನ ಬಹುತೇಕ ನಗರ ಪ್ರದೇಶಗಳು ಕುಡಿಯುವ ನೀರಿನ ತೀವ್ರ ಕೊರತೆಯನ್ನು ಹಲವು ದಶಕಗಳಿಂದ ಎದುರಿಸುತ್ತಿದೆ. ಕಳೆದ ಹನ್ನೆರಡು ವರ್ಷಗಳಿಂದ ಕಾನೂನು ಹೋರಾಟ ಮತ್ತು ವಿರೋಧಗಳಿಂದ ಅನುಷ್ಟಾನವಾಗದ ಯೋಜನೆ ಇದೀಗ ಚೆನ್ನೈನಲ್ಲಿ ಸ್ಥಾಪನೆ ಆಗುತ್ತಿದೆ. ಇದೇ ಸಂದರ್ಭದಲ್ಲಿ ಮಂಗಳೂರು ಮತ್ತು ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆಗಳಿಗೆ ಸಮುದ್ರ ನೀರೇ ಪರಿಹಾರವೇ ಎಂಬ ಚರ್ಚೆ ಮತ್ತೆ ಆರಂಭವಾಗಿದೆ.
ಮಂಗಳೂರಿನಲ್ಲಿ ಈಗಾಗಲೇ ಮಂಗಳೂರು ತೈಲಾಗಾರ (ಎಂಆರ್ ಪಿಎಲ್ ) ಸಮುದ್ರ ನೀರು ಶುದ್ಧೀಕರಣ ಘಟಕ ಸ್ಥಾಪನೆಗೆ ಮುಂದಾಗಿದೆ. ಪಣಂಬೂರು ಸಮುದ್ರ ತೀರದಲ್ಲಿ ಸಮುದ್ರ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಟೆಂಡರ್ ನೀಡಲಾಗಿದ್ದು ಕೆಲಸ ಆರಂಭವಾಗಿದೆ. ಸುಮಾರು 30 MLD ಸಾಮರ್ಥ್ಯದ ಘಟಕವು ತೈಲಾಗಾರಕ್ಕೆ ಕೈಗಾರಿಕಾ ಉಪಯೋಗಕ್ಕಾಗಿ ಶುದ್ಧೀಕರಿಸಿದ ನೀರನ್ನು ಪೂರೈಕೆ ಮಾಡಲಿದೆ.
ಕರಾವಳಿಯ ಪ್ರದೇಶದ ಬೃಹತ್ ಕೈಗಾರಿಕೆಗಳು ನೀರಿನ ತೀವ್ರ ಕೊರತೆಯನ್ನು ಎದುರಿಸುತ್ತಿವೆ. ಪಡುಬಿದ್ರೆಯ ಅದಾನಿ ಯುಪಿಸಿಎಲ್ ಕಲ್ಲಿದ್ದಲು ಉಷ್ಣ ವಿದ್ಯುತ್ ಸ್ಥಾವರ ಸಮದ್ರ ನೀರನ್ನು ನೇರವಾಗಿ ತನ್ನ ಕೂಲಿಂಗ್ ಕುಲುಮೆಗಳಿಗೆ ಬಳಸುತ್ತಿದೆ. ಮಂಗಳೂರಿನ MRPL, MCF (ಮಂಗಳೂರು ಫರ್ಟಿಲೈಸರ್ಸ್ ಆಂಡ್ ಕೆಮಿಕಲ್ಸ್), ಮಂಗಳೂರು ವಿಶೇಷ ಆರ್ಥಿಕ ವಲಯ (ಎಂಎಸ್ಇಝೆಡ್) ಹಾಗೂ ಖಾದ್ಯ ತೈಲ ಸಂಸ್ಕರಣ ಘಟಕಗಳಿಗೆ ದೊಡ್ಡ ಪ್ರಮಾಣದ ನೀರಿನ ಅಗತ್ಯವಿದೆ.
MRPL ಮತ್ತು MSEZ ಕೈಗಾರಿಕೆಗಳಿಗೆ ಬಂಟ್ವಾಳ ತಾಲೂಕಿನ ಸರಪಾಡಿಯಲ್ಲಿ ನೇತ್ರಾವತಿ ನದಿಗೆ ಕಟ್ಟಲಾಗಿರುವ 45 ಕಿ.ಮೀ. ದೂರದಲ್ಲಿರುವ ಎಎಂಆರ್ ಅಣೆಕಟ್ಟಿನಿಂದ ನೀರು ಪೂರೈಕೆ ಆಗುತ್ತದೆ. ಈ ಕೈಗಾರಿಕೆಗಳು ದಿನ ನಿತ್ಯ 60 ದಶ ಲಕ್ಷ ಲೀಟರ್ ನೀರು ಉಪಯೋಗಿಸುತ್ತವೆ. ಎಂಸಿಎಫ್ ಒಂಬತ್ತು ದಶ ಲಕ್ಷ ಲೀಟರ್ ನೀರು ಪಡೆಯುತ್ತದೆ.
ಎಎಂಆರ್ ಅಣೆಕಟ್ಟಿನಿಂದ ಕೆಳಗಡೆ ಬಂಟ್ವಾಳದ ತುಂಬೆಯಲ್ಲಿ ಇರುವ ಅಣೆಕಟ್ಟು ಮಂಗಳೂರು ಮಹಾನಗರ ಮತ್ತು ಉಳ್ಳಾಲ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸುತ್ತದೆ. ಕೈಗಾರಿಕೆಗಳು ಕೂಡ ಈ ನೀರನ್ನು ಬಳಸುತ್ತವೆ. ಮಂಗಳೂರು ಹೊರವಲಯದ ಗ್ರಾಮಗಳು ಫಲ್ಗುಣಿ ನದಿಗೆ ಕಟ್ಟಲಾದ ಡ್ಯಾನಿಂದ ನೀರನ್ನು ಬಳಸುತ್ತವೆ.
ತುಂಬೆ ಡ್ಯಾಂನಿಂದ ಮತ್ತಷ್ಟು ಕೆಳಗಡೆ ಅಡ್ಯಾರಿನಲ್ಲಿ ಸಣ್ಣ ನೀರಾವರಿ ಇಲಾಖೆ ಪಶ್ಚಿಮವಾಹಿನಿ ಯೋಜನೆಯಡಿ ಮತ್ತೊಂದು ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಟೆಂಡರ್ ಕರೆದಿದ್ದು, ಇದರಿಂದ ಉಳ್ಳಾಲ ಪುರಸಭೆ ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ಕುಡಿಯುವ ನೀರಿನ ಪೂರೈಕೆ ಆಗಲಿದೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಿನ ವರ್ಷದಿಂದ ತುಂಬೆ ಡ್ಯಾಂನಲ್ಲಿ ಏಳು ಮೀಟರಿನಷ್ಟು ನೀರು ಸಂಗ್ರಹಿಸಲು ಜಿಲ್ಲಾಡಳಿತ ರಾಜ್ಯ ಸರಕಾರದ ಸಮ್ಮತಿ ಕೋರಿದೆ. ಇಷ್ಟೊಂದು ಪ್ರಮಾಣದಲ್ಲಿ ನೀರು ಸಂಗ್ರಹಿಸಲು ಬಾಡಿಗೆ ಆಧಾರದಲ್ಲಿ ಭೂ ಸ್ವಾಧೀನಕ್ಕೆ ರೂ. 130 ಕೋಟಿ ರೂಪಾಯಿ ಅಗತ್ಯವಿದೆ. ಸಂಗ್ರಹ ಹೆಚ್ಚಳದಿಂದ ಹೆಚ್ಚುವರಿಯಾಗಿ 344 ಎಕರೆ ಭೂಮಿ ಜಲಾವೃತವಾಗಲಿದೆ.
ನೀರಿನ ಕೊರತೆಯಿಂದಾಗಿ ಪ್ರತಿವರ್ಷ ಈ ಬೃಹತ್ ಕೈಗಾರಿಕೆಗಳು ಏಪ್ರಿಲ್-ಮೇ ತಿಂಗಳಲ್ಲಿ ಕಾರ್ಯಾಚರಿಸುವುದಿಲ್ಲ. ಇದರಿಂದ ಕಂಪೆನಿಗಳಿಗೆ ನಷ್ಟ ಸಹಜ. ಕಳೆದ ನಾಲ್ಕು ವರ್ಷಗಳಿಂದ ಕೈಗಾರಿಕೆಗಳಿಗೆ ನೀರಿನ ಕೊರತೆ ಕಾಡುತ್ತಿದ್ದು, MRPL ಎರಡನೇ ಹಂತ ಮಾತ್ರ ಮಂಗಳೂರು ಪಾಲಿಕೆಯ ಒಳಚರಂಡಿಯ ಶುದ್ಧೀಕರಿಸಿದ ನೀರನ್ನು ಬಳಸುತ್ತಿದೆ.
ನೀರಿನ ಕೊರತೆಯನ್ನು ಬಗೆಹರಿಸಲು ಮಂಗಳೂರು ತೈಲಾಗಾರ ಸಮುದ್ರ ಉಪ್ಪು ನೀರನ್ನು ಶುದ್ಧೀಕರಿಸುವ ಘಟಕ ಸ್ಥಾಪಿಸುತ್ತಿದೆ. ಸುಮಾರು 595 ಕೋಟಿ ರೂಪಾಯಿ ವೆಚ್ಚದಲ್ಲಿ 30 MLD (ಮುಂದಕ್ಕೆ 70 MLD ಹೆಚ್ಚಿಸುವ ಅವಕಾಶವಿದೆ) ಸಾಮರ್ಥ್ಯದ ಉಪ್ಪು ನೀರು ಶುದ್ಧೀಕರಣ ಘಟಕ ಮುಂದಿನ ವರ್ಷ ನವೆಂಬರ್ ತಿಂಗಳಿಗೆ ಸಿದ್ಧವಾಗಲಿದೆ.
ಅರಬಿ ಸಮುದ್ರ ಮತ್ತು ಫಲ್ಗುಣಿ ನದಿ ನಡುವೆ ತಣ್ಣೀರುಬಾವಿ ಗ್ರಾಮದಲ್ಲಿ ನವಮಂಗಳೂರು ಬಂದರು ಮಂಡಳಿಗೆ ಸೇರಿದ ಜಮೀನಿನಲ್ಲಿ ಶುದ್ಧೀಕರಣ ಘಟಕ ಸ್ಥಾಪನೆ ಆಗಲಿದೆ. ರಾಜ್ಯ ಸರಕಾರದ ಪ್ರಾಧಿಕಾರಗಳಿಂದ ಅಗತ್ಯ ಅನುಮತಿ ದೊರೆತಿರುವುದರಿಂದ ಸ್ಥಾವರದ ಪೂರ್ವಭಾವಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಇದೀಗ ಕೇಂದ್ರ ಪ್ರಾಧಿಕಾರದ ಅನುಮತಿ ದೊರೆತಿದ್ದು, ಚೆನ್ನೈ ಮೂಲಕ ಕಂಪೆನಿಯೊಂದು ಶುದ್ಧೀಕರಣ ಘಟಕ ಸ್ಥಾಪಿಸಲಿದೆ. ಅರಬಿ ಸಮುದ್ರದಲ್ಲಿ ಅರ್ಧ ಕಿಲೋ ಮೀಟರ್ ದೂರದಿಂದ ಉಪ್ಪು ನೀರು ಎತ್ತಲಿದ್ದು, ಒಂದೂವರೆ ಕಿಲೋ ಮೀಟರ್ ದರದಲ್ಲಿ ಸಮುದ್ರದೊಳಗೆ ಉಪ್ಪು ಸಾಂದ್ರತೆಯ ಬೇಡವಾದ ನೀರನ್ನು ಬಿಡಲಾಗುವುದು.
ಚೈನ್ನೈಯ ನೀರು ಶುದ್ಧೀಕರಣ ಘಟಕಗಳಿಗೆ ಪರಿಸರವಾದಿಗಳ ವಿರೋಧವಿದ್ದರೂ, ಮಂಗಳೂರಿನಲ್ಲಿ ಅಂತಹ ವಿರೋಧ ಕಂಡುಬಂದಿಲ್ಲ. ಆದರೂ, ಎಂಆರ್‍ಪಿಎಲ್ ಸ್ಥಾಪಿಸುತ್ತಿರುವ ಉಪ್ಪುನೀರು ಶುದ್ಧೀಕರಿಸುವ ಯೋಜನೆಯ ಬಾಧಕಗಳನ್ನು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕರಾವಳಿಯ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶ ಕುಡಿಯುವ ನೀರಿನ ಕೊರತೆಯನ್ನು ನೀಗಿಸಲು ಸಮುದ್ರ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸುವುದು ಪರಿಹಾರ ಆಗಬಹುದೇ ಎಂಬುದು ಈಗ ಮುನ್ನಲೆಗೆ ಬಂದಿರುವ ವಿಚಾರ.

ಉಪ್ಪು ನೀರು ಶುದ್ಧೀಕರಣ ಯೋಜನೆಯ ಸ್ಥಾಪನಾ ವೆಚ್ಚ ದುಬಾರಿ. ಅನಂತರ ನಿರ್ವಹಣಾ ವೆಚ್ಚದಲ್ಲಿ ಪ್ರಮುಖವಾಗಿರುವುದು ವಿದ್ಯುತ್ ಖರ್ಚು. ಎರಡು ಲೀಟರ್ ಉಪ್ಪು ನೀರಿನಿಂದ ಒಂದು ಲೀಟರ್ ಕುಡಿಯುವ ನೀರು ಪಡೆಯಲಾಗುತ್ತದೆ. ಸಮುದ್ರದ ಶುದ್ಧೀಕರಿಸಿದ ನೀರು ಕುಡಿಯಲು ಯೋಗ್ಯವೇ ಹೊರತು ಕೃಷಿ ನೀರಾವರಿಗೆ ಉಪಯುಕ್ತವಲ್ಲ.
ಉಪ್ಪು ನೀರಿನಿಂದ ಪರಿಸರ ಸಮಸ್ಯೆಗಳು ಇಲ್ಲದಿಲ್ಲ. ಉಪ್ಪು ನೀರು ಕೃಷಿ ಭೂಮಿಯನ್ನು ಮತ್ತು ಅಂತರ್ಜಲವನ್ನು ಹಾಳುಗೆಡಹುತ್ತದೆ. ಸಂಸ್ಕರಣ ಘಟಕಗಳು ಉಪ್ಪಿನ ಅಂಶವನ್ನು ಹೊರತೆಗೆದ ನಂತರ ಇನ್ನುಳಿದ ಉಪ್ಪು ನೀರನ್ನು ಹಲವು ಕಿಲೋ ಮೀಟರ್ ದೂರದ ತನಕ ಸಮುದ್ರದಲ್ಲಿ ಬಿಡಬೇಕಾಗುತ್ತದೆ.
ಬೇಸಿಗೆ ಕಾಲದಲ್ಲಿ ಕರಾವಳಿಯಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಅದೇ ಬೆಂಗಳೂರಲ್ಲೂ ನೀರಿನ ಸಮಸ್ಯೆ ಎದುರಾಗುತ್ತದೆ. ಕೃಷ್ಣರಾಜ ಸಾಗರ (KRS) ಬರಿದಾದರೆ ಬೆಂಗಳೂರಲ್ಲೂ ನೀರಿನ ಸಮಸ್ಯೆ ಉಂಟಾಗುತ್ತದೆ. ಕರಾವಳಿಯ ನೀರಿನ ಸಮಸ್ಯೆಗೆ ಮಳೆಗಾಲದಲ್ಲಿ ತುಂಬಿ ಹರಿಯುವ ನದಿ ನೀರೊಂದೇ ಪರಿಹಾರ, ಸಮುದ್ರ ನೀರು ಉಪಯೋಗ ಸಾಧುವಲ್ಲ ಎನ್ನುವವರೂ ಇದ್ದಾರೆ.
ಕರಾವಳಿ ಜಿಲ್ಲೆಯಲ್ಲಿ ಹರಿಯುವ ಹನ್ನೆರಡಕ್ಕೂ ಹೆಚ್ಚು ನದಿಗಳಿಗೆ ಕಿಂಡಿ ಅಣೆಕಟ್ಟು ನಿರ್ಮಿಸುವ ಮೂಲಕ ಬೇಸಿಗೆ ಕಾಲದ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದಾಗಿದೆ. ಸರಕಾರ ಕೂಡ ಈ ನಿಟ್ಟಿನಲ್ಲಿ ಯೋಜನೆ ಹಾಕಿಕೊಂಡಿದ್ದು, ವಿಳಂಬ ಗತಿಯಲ್ಲಿ ಅನುಷ್ಟಾನ ಆಗುತ್ತಿರುವುದರಿಂದ ಸಮಸ್ಯೆ ತೀವ್ರಗೊಂಡಿದೆ.
ಹೀಗಿದ್ದರೆ, ಮಂಗಳೂರು ತೈಲಾಗಾರವೇಕೆ ಸಮುದ್ರ ನೀರು ಶುದ್ಧೀಕರಣಕ್ಕೆ ಮುಂದಾಯಿತು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಎಂಆರ್ ಪಿಎಲ್ ತೀವ್ರತರವಾದ ನೀರಿನ ಕೊರತೆಯನ್ನು ಮೊದಲ ಬಾರಿಗೆ ಅನುಭವಿಸಿದ್ದೇ 2012ರಲ್ಲಿ. ಅನಂತರ 2016 ಮತ್ತು 2017ರಲ್ಲಿ ಇದೇ ರೀತಿಯ ಸಮಸ್ಯೆ ಉಂಟಾದಾಗ ಅನಿವಾರ್ಯವಾಗಿ ತನ್ನ ತೈಲ ಸಂಸ್ಕರಣ ಘಟಕಗಳನ್ನು ಮುಚ್ಚಬೇಕಾದ ಪರಿಸ್ಥಿತಿ ಉಂಟಾಗಿತ್ತು. ಮಂಗಳೂರು ತೈಲಾಗಾರಕ್ಕೆ ಕೂಡ ಇದು ಎರಡನೇ ಡ್ಯಾಂ. ಈ ಹಿನ್ನೆಲೆಯಲ್ಲಿ ಸಮುದ್ರ ನೀರಿನ ಮೊರೆ ಹೋಗಬೇಕಾಗಿ ಬಂದಿದೆ.
ಕರಾವಳಿಗೆ ಸಂಬಂಧಿಸಿ ಸುಲಭ ಸಾಧ್ಯವಾದ ಬದಲಿ ಅವಕಾಶ ಇರುವಾಗ ಸಾವಿರಾರು ಕೋಟಿ ರೂಪಾಯಿ ಹೂಡುವ ಮೂಲಕ ಸಮುದ್ರ ನೀರಿನ ಶುದ್ಧೀಕರಣಕ್ಕೆ ಸರಕಾರ ಮುಂದಾಗುವ ಸಾಧ್ಯತೆ ಸದ್ಯಕ್ಕಿಲ್ಲ. ತಮಿಳುನಾಡಿನ ಮಳೆ ಸರಾಸರಿ ಮತ್ತು ನದಿಗಳಲ್ಲಿ ನೀರಿನ ಪ್ರವಾಹ ಪರಿಗಣಿಸಿದಾಗ ಚೆನ್ನೈ ಮಹಾನಗರಕ್ಕೆ ಸಮುದ್ರ ನೀರೆ ಗತಿ ಎಂದರೆ ತಪ್ಪಾಗದು.