ಯಾವುದೇ ದೇಶದ ರಾಜಕೀಯ ಸ್ವರೂಪ ನಿರ್ಣಯ ಆಗುವುದು ಅಲ್ಲಿನ ಭೂಸಂಪತ್ತಿನಿಂದ. 1947 ಕ್ಕಿಂತ ಮುಂಚೆ ಭಾರತ ದೇಶದಲ್ಲಿ ಶೇಕಡಾ 80ರಷ್ಟು ಜಮೀನು ಜಮೀನ್ದಾರರು, ಇನಾಂದಾರರು, ಜೋಡಿದಾರರ ಕೈಯಲ್ಲಿತ್ತು. ಉಳಿದ ಶೇಕಡಾ 75 ರಷ್ಟು ಜನರು ಭೂಮಾಲೀಕರ ಕೈಕೆಳಗೆ ಕೃಷಿ ಗೇಣಿಗೆ ಮಾಡುತ್ತಿದ್ದರು. ಇದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವಾಗಿನ ಸ್ಥಿತಿ.
ಸ್ವಾತಂತ್ರ್ಯದ ಬಳಿಕ ನಮ್ಮ ಸರ್ಕಾರಗಳು ಕೈಗಾರಿಕೆ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಿತು. ಕೈಗಾರಿಕೆಗಳು ಬೆಳೆದು ಬಂತು. ಗ್ರಾಹಕ ಉತ್ಪನ್ನಗಳು ಮಾರುಕಟ್ಟೆಗೆ ಬಂದವು. ಆದರೆ ಉತ್ಪನ್ನಗಳನ್ನು ಕೊಳ್ಳುವ ಶಕ್ತಿ ಈ 75 ಶೇಕಡಾ ಜನರಲ್ಲಿ ಇರಲಿಲ್ಲ. ಹಾಗಾಗಿ ಅವರಲ್ಲಿ ಕೊಂಡುಕೊಳ್ಳುವ ಶಕ್ತಿ ತುಂಬಿಸಬೇಕಾಗಿತ್ತು. ಆ ಶಕ್ತಿಯನ್ನು ಅವನಲ್ಲಿ ತುಂಬಿಸಲು ಉಳುವವನೇ ಹೊಲದೊಡೆಯ ಎಂಬ ಕಾಯ್ದೆಯನ್ನು ಜಾರಿಗೆ ತಂದು, ಗೇಣಿದಾರರಿಗೆ ರಕ್ಷಣೆ ಕೊಟ್ಟು ಅವನು ಗೇಣಿಯ ಫಸಲು ಅವನಲ್ಲಿ ಉಳಿಯುವಂತೆ ಮಾಡಿದರೆ ಅವನಲ್ಲಿ ಕೊಂಡುಕೊಳ್ಳುವ ಶಕ್ತಿ ಉತ್ತಮಗೊಳ್ಳುತ್ತದೆ, ಅವನು ಮಾರುಕಟ್ಟೆಗೆ ಪ್ರವೇಶಿಸುತ್ತಾನೆ, ಮಾರುಕಟ್ಟೆಯಲ್ಲಿ ಸರಕು ಖರ್ಚಾಗುತ್ತದೆ, ಮಾರುಕಟ್ಟೆ ವಿಸ್ತರಣೆಯಾಗುತ್ತದೆ, ದೇಶ ಅಭಿವೃದ್ಧಿಯಾಗುತ್ತದೆ ಎಂಬ ಅಂಶಗಳು ನಮ್ಮ ದೇಶದಲ್ಲಿ ಭೂಸುಧಾರಣೆ ಕಾಯ್ದೆ ಬರಲು ಇದೂ ಒಂದು ಕಾರಣವಾಯಿತು.
ಸ್ವಾತಂತ್ರ ಬಂದ ನಂತರ ಜನಸಂಖ್ಯೆ ಏರುತ್ತಾ ಹೋಯಿತು. ಬೆಳೆದು ಬರುತ್ತಿದ್ದಂತಹಾ ಜನಸಂಖ್ಯೆಗೆ ಆಹಾರ ಸಾಕಾಗದೇ ನಾವು ಆಹಾರವನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಅಂತಹ ಪರಿಸ್ಥಿತಿಯಲ್ಲಿ ನಾವು ಉಳುವವನಿಗೆ ಭೂಮಿ ನೀಡಿದರೆ ಆತ ಹೆಚ್ಚು ಶ್ರಮ ಹಾಕಿ ಹೆಚ್ಚು ಬಂಡವಾಳ ಹೂಡುತ್ತಾನೆ. ಆ ಮೂಲಕ ಕೃಷಿ ಉತ್ಪಾದನೆ ಜಾಸ್ತಿಯಾಗುತ್ತದೆ. ಮಾರುಕಟ್ಟೆ ವಿಸ್ತಾರ ಮಾಡುವ ಉದ್ದೇಶದಿಂದ ಹಾಗೂ ಕೃಷಿ ಉತ್ಪಾದನೆ ಹೆಚ್ಚಿಸಲು 1947ರ ನಂತರ ಭೂಸಂಬಂಧಗಳಲಿ ಕೆಲವು ಬದಲಾವಣೆ ತರಲಾಯಿತು.
ಮೊದಲ ಹೆಜ್ಜೆಯಾಗಗಿ 1954-55 ರಲ್ಲಿ ಕರ್ನಾಟಕದಲ್ಲಿ ಜಮೀನ್ದಾರಿ ಪದ್ಧತಿಯನ್ನು ರದ್ದುಗೊಳಿಸಲಾಯಿತು. 1965 ರಲ್ಲಿ ಮೊದಲನೇ ಭೂಸುಧಾರಣೆ ಕಾಯ್ದೆ ಜಾರಿಗೆ ಬಂತು. 1974 ರಲ್ಲಿ ಎರಡನೇ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಬಂತು. ಈ ಎರಡೂ ತಿದ್ದುಪಡಿಗಳ ಪರಿಣಾಮವಾಗಿ ಇನಾಂದಾರರುಗಳು, ಜೋಡಿದಾರ್ ಪದ್ಧತಿ ರದ್ದತಿಯಾಯಿತು. ಗೇಣಿ ಪದ್ದತಿ ರದ್ದತಿ ಆಯಿತು. ಉಳುವವನೇ ಭೂ ಒಡೆಯ ಎಂಬ ರೀತಿಯಲ್ಲಿ ನೀತಿ ಪ್ರಾರಂಭವಾಯಿತು. ಕೃಷಿಯೇತರರು ಕೃಷಿಭೂಮಿ ಕೊಳ್ಳುವಂತಿಲ್ಲ. ಕೃಷಿಯೇತರ ವರಮಾನ 12 ಸಾವಿರಕ್ಕಿಂತಲೂ ಹೆಚ್ಚಿದ್ದರೆ ಅವರೂ ಕೂಡಾ ಕೃಷಿ ಭೂಮಿ ಕೊಂಡುಕೊಳ್ಳುವಂಗಿಲ್ಲ. ಶಿಕ್ಷಣ ಸಂಸ್ಥೆಗಳು, ಮಠಮಾನ್ಯಗಳು, ದತ್ತಿಗಳು ಕೃಷಿಭೂಮಿಯನ್ನು ಹೊಂದುವಂತಿಲ್ಲ. ಅದರ ಜೊತೆಗೆ ಇಷ್ಟೇ ಭೂಮಿಯನ್ನು ಹೊಂದಬೇಕೆಂದು ಕೃಷಿಭೂಮಿಗೆ ಮಿತಿಯನ್ನು ಜಾರಿಗೆ ಗೊಳಿಸಲಾಯಿತು. ಇದರ ಒಟ್ಟು ಪರಿಣಾಮವಾಗಿ ಕ್ರಾಂತಿ ಸಂಭವಿಸದಿದ್ದರೂ, ಭೂಸಂಬಂಧಗಳಲ್ಲಿ ಬದಲಾವಣೆ ಆಗಿರುವುದು ಕಾಣಬಹುದು.
ಇವತ್ತು ಕರ್ನಾಟಕದಲ್ಲಿ ಸರಿಸುಮಾರು 70- 75 ಲಕ್ಷ ಕುಟುಂಬಗಳು ಭೂಮಿಯನ್ನು ಹೊಂದಿವೆ. ಇವರುಗಳ ಪೈಕಿ ಶೇಕಡಾ75 ರಷ್ಟು ಜನ 5 ಎಕರೆಗಿಂತ ಕಡಿಮೆ ಭೂಮಿ ಇರುವ ಸಣ್ಣ ಭೂ ಹಿಡುವಳಿದಾರರು ಇದ್ದಾರೆ. ಸರ್ಕಾರ ಅನುಸರಿಸತಕ್ಕಂತಹ ಅನೇಕ ಕೃಷಿ ನೀತಿಗಳಿಂದಾಗಿ ಇವತ್ತು ಕೃಷಿ ಬಿಕ್ಕಟ್ಟಿನಲ್ಲಿವೆ. ಕೃಷಿ ಬಂಡವಾಳ ವೆಚ್ಚ ದುಬಾರಿಯಾಗಿದೆ. ಕೃಷಿ ಉತ್ಪಾದನೆಗೆ ಬೆಂಬಲ ಬೆಲೆ ಇಲ್ಲ. ವಿಜ್ಞಾನದ ಸಾಧನಗಳನ್ನು ಅವೈಜ್ಞಾನಿಕವಾಗಿ ಬಳಕೆ ಮಾಡಿಕೊಂಡಿದ್ದೇವೆ. ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಇವತ್ತು ಕೂಡಾ ಗ್ರಾಮಾಂತರ ಪ್ರದೇಶಗಳ ಬಡ ರೈತರು ಅಲ್ಲಿನ ಲೇವಾದಾರರಿಂದ ಬಿಡುಗಡೆಹೊಂದಲು ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಕಾರಣಗಳ ಪರಿಣಾಮವಾಗಿ ನಾವು ಕೃಷಿ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ.
ಈ ಕೃಷಿ ಬಿಕ್ಕಟ್ಟಿನ ಪರಿಣಾಮವಾಗಿ ರೈತರಿಗೆ ಸರಿಯಾದ ದಾರಿ ತೋಚದೆ ಆತ್ಮಹತ್ಯೆಗಳಿಗೆ ಶರಣಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಿಂದಾಗಿ ಸುಮಾರು ರೈತರು ಉಳುಮೆ ಮಾಡುವುದನ್ನು ನಿಲ್ಲಿಸಿದ್ದಾರೆ. ಸರಿ ಸುಮಾರು 21 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಇವತ್ತು ಉಳುಮೆಯಿಂದ ದೂರ ಉಳಿದಿದೆ. ಕದ್ದುಮುಚ್ಚಿ ರೈತರು ತಮ್ಮ ಭೂಮಿಯನ್ನು ಗೇಣಿಗೆ ಕೊಡುತ್ತಿದ್ದಾರೆ. ಕಾನೂನುಗಳ ಅಡ್ಡಿಯಿದ್ದರೂ ಮಾರಾಟ ಮಾಡುವಂತಹ ಸಾಹಸಕ್ಕೆ ಇಳಿಯುತ್ತಿದ್ದಾರೆ.
ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡಿ, ನಮಗೆ ಬೆಂಬಲ ಬೆಲೆ ಕೊಡಿ, ಕೃಷಿ ಬಂಡವಾಳ ಕಡಿಮೆ ಮಾಡಿ. ಮೂಲ ಭೂತ ಸೌಕರ್ಯ ಹೆಚ್ಚಿಸಿ. ಕೃಷಿ ಸಂಬಂಧಿತ ಕೈಗಾರಿಕೆಗಳನ್ನು ಪ್ರಾರಂಭ ಮಾಡಿ ಎಂದು ಜನರು ಬೇಡಿಕೆಯಿಟ್ಟು ಹೋರಾಟ ಮಾಡುತ್ತಿರುವ ಸಂಧರ್ಭದಲ್ಲಿ ಸರ್ಕಾರಗಳು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲಾಗಿ ಭೂಸುಧಾರಣೆ ಕಾಯ್ದೆಗಳಿಗೆ ತಿದ್ದುಪಡಿ ಮಾಡಲು ಹೊರಟಿದೆ. ಈ ಭೂಸುಧಾರಣೆ ಕಾಯ್ದೆಗಳಿಗೆ ತಿದ್ದುಪಡಿಯೆಂದರೆ ಕಲಂ 79 (ಎ) 79 (ಬಿ) 79 (ಸಿ) ಹಾಗೂ 63. ಈ ಕಲಂಗಳ ತಿದ್ದುಪಡಿ. ಈ ಕಲಂಗಳ ತಿದ್ದುಪಡಿಯ ಒಟ್ಟು ಪರಿಣಾಮವೆಂದರೆ ರೈತರು ತಮ್ಮಲ್ಲಿರತಕ್ಕಂತಹ ಜಮೀನನ್ನ ಯಾರಿಗೆ ಬೇಕಾದರೂ ಮಾರಬಹುದು. ಕೃಷಿಯೇತರರೂ ಕೃಷಿಭೂಮಿಯನ್ನು ಕೊಂಡುಕೊಳ್ಳಬಹುದು. ಯಾವದೇ ವರಮಾನದ ಮಿತಿಯಿಲ್ಲದೆ ಕೃಷಿಭೂಮಿಯನ್ನು ಕೊಂಡುಕೊಳ್ಳಬಹುದು. ಕೊಂಡುಕೊಂಡ ಭೂಮಿಯನ್ನು ಯಾವುದೇ ಕಾರಣಕ್ಕೂ ಬಳಸಬಹುದು. ಅದರ ಜೊತೆಗೆ ಭೂಮಿತಿಯನ್ನು ಕೂಡಾ ತಿದ್ದುಪಡಿ ಮಾಡಿ, ಇವತ್ತು ಒಂದು ಕುಟುಂಬ 54 ಎಕರೆಗಿಂತ ಜಮೀನನ್ನು ಹೊಂದಿರಬಾರದೆಂಬ ಮಿತಿಯನ್ನು ಸರಳೀಕರಿಸಿ ಇವತ್ತು 246 ಎಕರೆಗೆ ಏರಿಸಿದೆ. ಈ ಎಲ್ಲಾ ಒಟ್ಟು ಪರಿಣಾಮವೇನೆಂದರೆ, ಬಂಡವಾಳಗಾರರು, ರಿಯಲ್ ಎಸ್ಟೇಟ್ಗಳು, ಕಪ್ಪುಹಣ ಹೊಂದಿದವರು, ರೆಸಾರ್ಟ್ ನಿರ್ಮಾಣಕ್ಕೆ ಹೊರಟವರು, ಭೂ ಬ್ಯಾಂಕ್ ಮಾಡಲು ಹೊರಟವರು ಫಾರಂ ಹೌಸ್ ನಿರ್ಮಿಸಿಕೊಳ್ಳಲು ಹೊರಟ ಜನ ಇವತ್ತು ಬಂಡವಾಳ ಹಾಕಿ ರೈತರಿಂದ ಜಮೀನನ್ನು ಕಸಿಯುತ್ತಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಒಂದೆರಡು ವರ್ಷಗಳಲ್ಲಿ ಇವರು ಕೊಂಡುಕೊಂಡ ರೈತರ ಜಮೀನು ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟವಾಗುತ್ತದೆ. ಹಾಗಾಗಿ ರೈತರ ಕೈಯಲ್ಲಿ ಇರಬೇಕಾದಂತಹ ಈ ಜಮೀನನ್ನು ಅವರ ಕೈತಪ್ಪಿ ಕಾರ್ಪೊರೇಟ್ ಸಂಸ್ಥೆಗಳ ಪಾಲಾಗುವ ಬಾಗಿಲನ್ನು ಈ ತಿದ್ದುಪಡಿಗಳು ತೆರೆದು ಕೊಟ್ಟಿದೆ.
ಈ ತಿದ್ದುಪಡಿಯಿಂದ ಜಮೀನು ಕಳೆದುಕೊಳ್ಳುವಂತಹ ರೈತರಿಗೆ ಸರಿಯಾದ ಉದ್ಯೋಗ ಸಿಗುತ್ತದೆಯೇ ಎಂದು ನೋಡಿದರೆ, ಆ ಉದ್ಯೋಗಕ್ಕೂ ಯಾವುದೇ ಅವಕಾಶಗಳನ್ನು ಸರ್ಕಾರ ಕಲ್ಪಿಸಿಕೊಟ್ಟಿಲ್ಲ. ಒಂದುಕಡೆಯಿಂದ ಜಮೀನೂ ಇಲ್ಲ, ಇನ್ನೊಂದು ಕಡೆ ಉದ್ಯೋಗವೂ ಇಲ್ಲ. ಸ್ವಾಭಿಮಾನದಿಂದ, ಸ್ವಾವಲಂಬಿಯಾಗಿ ಬದುಕುವ ರೈತಾಪಿ ವರ್ಗ ಕೃಷಿ ಕೂಲಿಕಾರ್ಮಿಕರಾಗುತ್ತಾರೆ. ಕೃಷಿ ಕೂಲಿಗಾರರು ಗುಲಾಮರಂತೆ ಬಾಳಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಕಾರ್ಪೊರೇಟ್ ಕಂಪೆನಿಗಳು ಈ ದೇಶಕ್ಕೆ ಬೇಕಾದಂತಹ ಆಹಾರವನ್ನು ಉತ್ಪಾದನೆ ಮಾಡುವುದಿಲ್ಲ. ಅದರ ಬದಲಿಗೆ ಅವರಿಗೆ ಲಾಭಾಗುವಂತಹ ಬೆಳೆ ಬೆಳೆಯುತ್ತಾರೆ. ಹಾಗಾಗಿ ನಮ್ಮ ಆಹಾರ ಭದ್ರತೆಗೆ ದೊಡ್ಡ ಪೆಟ್ಟು ಬೀಳುತ್ತದೆ. ಕಾರ್ಪೊರೇಟ್ ಕಂಪೆನಿಗಳು ಇವತ್ತು ನವೀನ ಕೃಷಿ ಮಾದರಿ ಬಳಸಿ,ದೊಡ್ಡ ದೊಡ್ಡ ಉಪಕರಣಗಳನ್ನು ಬಳಸಿ ರೋಬೋಟ್, ಡ್ರೋನ್ , ಕಂಪ್ಯೂಟರ್ ಬಳಸಿ ಕೆಲವೇ ಕೆಲವು ಕಾರ್ಮಿಕರನ್ನು ಬಳಸಿ ಸಾವಿರಾರು ಎಕರೆಯಲ್ಲಿ ಕೃಷಿ ಮಾಡುತ್ತಾರೆ. ಅದರಲ್ಲಿ ರೈತರಿಗೆ ಉದ್ಯೋಗ ಸಿಗುವುದಿಲ್ಲ.
ಒಂದು ಕಡೆ ಆಹಾರ ಭದ್ರತೆಗೆ ತೊಂದರೆಯಾಗುತ್ತದೆ, ರೈತರ ಭದ್ರತೆಗೆ ತೊಂದರೆಯಾಗುತ್ತದೆ. ಮೂರನೆಯದಾಗಿ ಈ ಇಡೀ ಪ್ರಕ್ರಿಯೆ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದದ್ದು. ಹೆಚ್ಚು ಹೆಚ್ಚು ಜನರನ್ನು ನಿರ್ಗತಿಕರನ್ನಾಗಿ ಅವರನ್ನು ಬಡವರನ್ನಾಗಿ, ಅವರ ಕೊಂಡುಕೊಳ್ಳುವ ಶಕ್ತಿ ಇಲ್ಲದವರಂತಾಗಿ ಮಾಡಿದರೆ ಅವರು ಮಾರುಕಟ್ಟೆಗೆ ಬರುವುದಿಲ್ಲ. ಮಾರುಕಟ್ಟೆ ವಿಸ್ತರಣೆ ಕುಗ್ಗುತ್ತದೆ. ಮಾರುಕಟ್ಟೆ ವಿಸ್ತರಣೆಯಾಗದೆ ಕೈಗಾರಿಕೆ ಅಭಿವೃದ್ಧಿಗೊಳ್ಳುವುದಿಲ್ಲ. ಕೈಗಾರಿಕೆ ಅಭಿವೃದ್ಧಿಯಾಗದಿದ್ದರೆ ದೇಶದ ಪ್ರಗತಿಯಾಗುವುದಿಲ್ಲ. ರೈತರ ಹಿತದೃಷ್ಟಿಯಿಂದ, ದೇಶದ ಆಹಾರ ಭಧ್ರತೆ ಹಿತದೃಷ್ಟಿಯಿಂದ, ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಹಾಗೂ ದೇಶದ ಅಭಿವೃದ್ಧಿಯ ಹಿತದೃಷ್ಟಿಯಿಂದ ಸರ್ಕಾರ ಈ ಕಾನೂನು ಹಿಂಪಡೆಯಬೇಕು. ರೈತರ ಸಮಸ್ಯೆಯನ್ನು ಪರಿಹರಿಸಿ ಕೃಷಿ ಒಂದು ಲಾಭದಾಯಕ ಉದ್ದಿಮೆಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.
ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಹೆಚ್ ಎನ್ ನಾಗಮೋಹನ ದಾಸ್ ಅವರು ಪ್ರತಿಧ್ವನಿಗೆ ನೀಡಿದ ವಿಡಿಯೋ ಸಂದರ್ಶನದ ಗದ್ಯ ಅವತರಣಿಕೆ.