ಇನ್ನು 24 ಗಂಟೆಗಳಲ್ಲಿ 17ನೇ ಲೋಕಸಭಾ ಚುನಾವಣೆಗೆ ಅಧಿಕೃತವಾಗಿ ತೆರೆ ಬೀಳಲಿದೆ. ಫಲಿತಾಂಶಕ್ಕೆ ಇನ್ನೂ ಐದು ದಿನ ಬಾಕಿ ಉಂಟು. ಇದೇ ಹೊತ್ತಿನಲ್ಲಿ, ಸುಪ್ರೀಂ ಕೋರ್ಟ್ ಚಾಟಿ ಬೀಸಿದ ನಂತರವಷ್ಟೇ ಕೆಲವು ರಾಜಕೀಯ ನಾಯಕರ ಚುನಾವಣಾ ಪ್ರಚಾರ ನಿರ್ಬಂಧಿಸಿದ, ಸಾಲು-ಸಾಲು ಪ್ರಕರಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕ್ಲೀನ್‌ಚಿಟ್ ಕೊಟ್ಟ ಕೇಂದ್ರ ಚುನಾವಣಾ ಆಯೋಗದಲ್ಲಿ ಸಣ್ಣದೊಂದು ಬಿರುಕು ಕಾಣಿಸಿಕೊಂಡಿದೆ. ಈ ಬಿರುಕು ದೊಡ್ಡದಾದಲ್ಲಿ, ಚುನಾವಣಾ ದಿನಾಂಕ ನಿಗದಿಯಿಂದ ಹಿಡಿದು ಪ್ರತಿ ಹಂತದಲ್ಲೂ ಆಡಳಿತಾರೂಢರ ಪಕ್ಷಪಾತಿ ಎಂಬ ಹಣೆಪಟ್ಟಿ ಕಟ್ಟಿಕೊಂಡ ಚುನಾವಣಾ ಆಯೋಗಕ್ಕೆ ಸಂಕಟ ಎದುರಾಗಲಿದೆ ಎಂಬುದು ನಿಚ್ಚಳ.
ಸದ್ಯ ಕೇಂದ್ರ ಚುನಾವಣಾ ಆಯೋಗವನ್ನು ಸುದ್ದಿಗೆ ತಂದು ನಿಲ್ಲಿಸಿರುವುದು ಚುನಾವಣಾ ಆಯುಕ್ತರಲ್ಲಿ ಒಬ್ಬರಾದ ಅಶೋಕ್ ಲಾವಸ. ಹಣಕಾಸು ಇಲಾಖೆಯ ಮಾಜಿ ಅಧಿಕಾರಿಯಾದ ಲಾವಸ, ಚುನಾವಣಾ ನೀತಿಸಂಹಿತೆ ಉಲ್ಲಂಘನೆ ದೂರುಗಳನ್ನು ವಿಚಾರಣೆ ನಡೆಸುವಾಗ ತಮ್ಮ ಅಭಿಪ್ರಾಯವನ್ನು ಕಡೆಗಣಿಸಲಾಗಿದೆ ಮತ್ತು ದಾಖಲಿಸಿಕೊಂಡೂ ಇಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರ ಅವರಿಗೆ ಬರೆದ ಪತ್ರದಲ್ಲಿ ಲಾವಸ ಈ ತಕರಾರು ತೆಗೆದಿದ್ದಾರೆ. ಆಯೋಗದ ವಿರುದ್ಧ ಈ ತಕರಾರು ಕೇಳಿಬಂದಿರುವುದು ಮೋದಿಯವರಿಗೆ ನೀಡಿದ ಕ್ಲೀನ್‌ಚಿಟ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಂಬುದು ವಿಶೇಷ.
ಲಾವಸ ಅವರು ಈ ಪತ್ರ ಬರೆದದ್ದು ಮೇ ನಾಲ್ಕರಂದು. “ಭಿನ್ನ ಅಭಿಪ್ರಾಯಗಳು ಮತ್ತು ಅಂತಿಮ ಆದೇಶಕ್ಕೆ ಪೂರಕವಲ್ಲದ ಅಭಿಪ್ರಾಯಗಳನ್ನು ದಾಖಲಿಸಿಕೊಳ್ಳುವುದಿಲ್ಲ ಎಂದಮೇಲೆ ದೂರು ಪರಿಶೀಲನಾ ಸಭೆಗಳಲ್ಲಿ ಭಾಗವಹಿಸುವುದರಲ್ಲಿ ಅರ್ಥವಿಲ್ಲ. ಹಾಗಾಗಿ, ಅಂತಿಮ ಆದೇಶಕ್ಕೆ ಪೂರಕವಲ್ಲದ ಅಭಿಪ್ರಾಯಗಳಿದ್ದರೆ ಅದನ್ನೂ ದಾಖಲಿಸಿಕೊಳ್ಳುವವರೆಗೆ ಇಂಥ ಸಭೆಗಳಲ್ಲಿ ಭಾಗವಹಿಸದಿರಲು ತೀರ್ಮಾನಿಸಿದ್ದೇನೆ,” ಎಂದಿದ್ದಾರೆ ಅಶೋಕ್ ಲಾವಸ. ಇದಕ್ಕೆ ಮೊದಲು ಕೂಡ ಅವರು ಈ ಬಗ್ಗೆ ತಕರಾರು ತೆಗೆದಿದ್ದರಾದರೂ ಆಯೋಗ ಅದನ್ನು ಪರಿಗಣಿಸಿರಲಿಲ್ಲ ಎನ್ನಲಾಗಿದೆ.
ಅಸಲಿಗೆ, ಈ ಆರೋಪ ನೇರವಾಗಿ ಮುಖ್ಯ ಚುನಾವಣಾ ಆಯುಕ್ತರನ್ನೇ ಆರೋಪಿ ಎಂದು ಹೇಳುತ್ತಿದ್ದರೂ, ಲಾವಸ ತಮ್ಮ ತಕರಾರು ಹೇಳುವಾಗ ದೂರು ವಿಚಾರಣಾ ಪ್ರಕ್ರಿಯೆಯನ್ನಷ್ಟೇ ದೂರಿ ಸಂಯಮ ಮೆರೆದಿರುವುದು ಗಮನ ಸೆಳೆದಿದೆ. ಇದಕ್ಕೆ ಮೊದಲು ಪ್ರತಿಕ್ರಿಯೆ ನೀಡಿದ್ದ ಚುನಾವಣಾ ಆಯೋಗ, “ನ್ಯಾಯಾಂಗದಲ್ಲಿ ಹಲವರು ಸದಸ್ಯರ ನ್ಯಾಯಪೀಠ ವಿಚಾರಣೆ ನಡೆಸುವ ಸಂದರ್ಭದಲ್ಲಿ ಭಿನ್ನ ಅಭಿಪ್ರಾಯ ಮತ್ತು ತಕರಾರುಗಳನ್ನು ದಾಖಲಿಸಿಕೊಂಡಂತೆ ಚುನಾವಣಾ ಆಯೋಗವು ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ವಿಚಾರಣೆ ನಡೆಸುವಾಗ ದಾಖಲಿಸಿಕೊಳ್ಳುವ ಅವಶ್ಯಕತೆ ಇಲ್ಲ,” ಎಂದಿತ್ತು. ಆದರೆ, ಲಾವಸ ಅವರ ಗಂಭೀರ ಆರೋಪ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ, ತಮ್ಮನ್ನು ಪ್ರಶ್ನಿಸುವಂಥ ಸುದ್ದಿಗಳು ಪ್ರಕಟವಾದ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರ, “ಇಂಥ ಆಂತರಿಕ ವಿಷಯಗಳನ್ನು ವಿವಾದದಿಂದ ದೂರ ಇಡುವ ಸಾಧ್ಯತೆ ಇದ್ದೇ ಇರುತ್ತದೆ. ಕೇಂದ್ರ ಚುನಾವಣಾ ಆಯೋಗದ ಮೂವರು ಸದಸ್ಯರು ಪರಸ್ಪರರ ಬಗ್ಗೆ ಹೀಗೆ ದೂರಬಾರದು. ಅಂಥ ಭಿನ್ನಾಭಿಪ್ರಾಯಗಳು ವೈಯಕ್ತಿಕವಾಗಿದ್ದರೆ ಚಂದ,” ಎಂದು ನೇರವಾಗಿ ವಿವಾದ ಹತ್ತಿಕ್ಕುವ, ಪರೋಕ್ಷವಾಗಿ ಎಚ್ಚರಿಸುವಂಥ ಮಾತುಗಳನ್ನು ಆಡಿದ್ದಾರೆ.
ಆದರೆ, ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ನಿವೃತ್ತ ಮುಖ್ಯ ಚುನಾವಣಾ ಆಯುಕ್ತರ ಪ್ರಕಾರ, “ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಂಥ ಪ್ರಕರಣಗಳಲ್ಲೂ ಭಿನ್ನ ಅಭಿಪ್ರಾಯಗಳು ಇದ್ದಲ್ಲಿ ಅದನ್ನು ದಾಖಲಿಸಿಕೊಳ್ಳಬೇಕು ಮತ್ತು ಅಂತಿಮ ಆದೇಶದಲ್ಲಿ ಅದರ ಉಲ್ಲೇಖವಿರಬೇಕು.”
ಇನ್ನು, ಪ್ರಧಾನಿ ಮೋದಿಯವರಿಗೆ ಕ್ಲೀನ್‌ಚಿಟ್ ಕೊಟ್ಟ ಆರು ಪ್ರಕರಣಗಳ ಕುರಿತ ಅಂತಿಮ ಆದೇಶದ ವಿವರಗಳನ್ನು ಚುನಾವಣಾ ಆಯೋಗವು ತಡವಾಗಿ ತನ್ನ ಜಾಲತಾಣದಲ್ಲಿ ಪ್ರಕಟಿಸಿದೆಯಾದರೂ, ಅದರಲ್ಲಿ ಕೆಲವು ಮುಖ್ಯ ಅಂಶಗಳು ಇಲ್ಲದಿರುವುದು ಗಮನ ಸೆಳೆದಿದೆ. ಆಯೋಗ ಪ್ರಕಟಿಸಿರುವ ವಿವರಗಳಲ್ಲಿ, ಆಯೋಗವು ದೂರುದಾರರಿಗೆ ಕಳಿಸರುವ ಪ್ರತಿಕ್ರಿಯೆ ಇವೆ. ಆದರೆ, ನೀತಿಸಂಹಿತೆ ಉಲ್ಲಂಘನೆ ಆಗಿದೆ ಎನ್ನಲಾದ ಪ್ರದೇಶದ ಜಿಲ್ಲಾ ಅಥವಾ ರಾಜ್ಯ ಚುನಾವಣಾ ಅಧಿಕಾರಿಗಳು ಅಥವಾ ಸ್ಥಳೀಯ ಪೊಲೀಸ್ ಅಧಿಕಾರಿಗಳ ವರದಿಗಳನ್ನು ಪ್ರಕಟಿಸಿಲ್ಲ. ಮೋದಿಯವರ ಪ್ರಕರಣಗಳ ಕುರಿತ ವಿವರಗಳಲ್ಲಿ ಮಾತ್ರ ಈ ವರದಿಗಳಿಲ್ಲ ಎಂಬುದು ಕೂಡ ಚುನಾವಣಾ ಆಯೋಗದ ಕಾರ್ಯವೈಖರಿ ಬಗೆಗೆ ಅನುಮಾನ ಮೂಡುವಂತೆ ಮಾಡಿದೆ.