Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಭಾಷಾವಾರು ರಾಜ್ಯ ಕಲ್ಪನೆ ಮೀರಿ ಚಿಂತಿಸುತ್ತಿವೆಯೇ ಭಾಷಾ ಸಮುದಾಯಗಳು?

ಭಾಷಾವಾರು ರಾಜ್ಯ ಕಲ್ಪನೆ ಮೀರಿ ಚಿಂತಿಸುತ್ತಿವೆಯೇ ಭಾಷಾ ಸಮುದಾಯಗಳು?
ಭಾಷಾವಾರು ರಾಜ್ಯ ಕಲ್ಪನೆ ಮೀರಿ ಚಿಂತಿಸುತ್ತಿವೆಯೇ ಭಾಷಾ ಸಮುದಾಯಗಳು?
Pratidhvani Dhvani

Pratidhvani Dhvani

September 26, 2019
Share on FacebookShare on Twitter

ಬೆಂಗಳೂರು ದೂರದರ್ಶನವು 1994 ರ ಅಕ್ಟೋಬರ್ ಆರಂಭದಲ್ಲಿ 10 ನಿಮಿಷಗಳ ಉರ್ದು ವಾರ್ತೆಗಳನ್ನು ಆರಂಭಿಸಿದಾಗ, ಕೋಮು ಗಲಭೆ ನಡೆದು ಹಲವು ಮಂದಿ ಪ್ರಾಣ ಕಳೆದುಕೊಂಡರು. ಕಾಂಗ್ರೆಸ್ ಆಡಳಿತವು ಮುಸ್ಲಿಮರ ಓಲೈಕೆಗಾಗಿ ಉರ್ದು ವಾರ್ತೆಗಳನ್ನು ಆರಂಭಿಸಿದೆ ಎಂಬುದಾಗಿ ಆಪಾದಿಸಲಾಯಿತು. ಆ ಕಾಲದ ಅತ್ಯಂತ ದೊಡ್ಡ ಕನ್ನಡ ದನಿಗಳಲ್ಲೊಂದಾದ ಪ್ರೊ. ಎಂ. ಚಿದಾನಂದಮೂರ್ತಿಯವರು ತದನಂತರ ಹಿಂದುತ್ವ ತಂತ್ರೋಪಾಯದತ್ತ ಆಕರ್ಷಣೆ ಬೆಳೆಸಿಕೊಂಡರು.

ಹೆಚ್ಚು ಓದಿದ ಸ್ಟೋರಿಗಳು

ವಿಂಡ್‌ಶೀಲ್ಡ್‌ನಲ್ಲಿ ಬಿರುಕು ತುರ್ತು ಭೂಸ್ಪರ್ಶ ಮಾಡಿದ ಸ್ಪೈಸ್ ಜೆಟ್ ವಿಮಾನ

ಶಿವಸೇನೆ ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಸಲ್ಲಿಸಿದ ಶಿಂಧೆ ಬಣ

ಶೀಘವ್ರೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು : ಫಡ್ನವೀಸ್

ವಲಸೆಯು ಮಾಮೂಲಿ ಪ್ರಕ್ರಿಯೆಯಾಗಿರುವ ಈ ಬದಲಾಗುತ್ತಿರುವ ಜಗತ್ತಿನಲ್ಲಿ, ಬೆಂಗಳೂರಿನಲ್ಲಿ ಕನ್ನಡಕ್ಕೇ ಆದ್ಯತೆ ಎಂಬ ವಾದವು ಕಾಲವಿಸಂಗತಿಯಂತೆ ಕಾಣಿಸಬಹುದು. ಆದರೆ, ಅದು ಹುಟ್ಟಿಸುವ ಭಯವು ಚಳುವಳಿಗಳಿಗೆ ಆರ್ಥಿಕ ಪುಷ್ಟಿ ನೀಡುತ್ತದೆ. ರಾಜ್ಯದ ಒಟ್ಟು ಆದಾಯದಲ್ಲಿ ಬೆಂಗಳೂರಿನ ಪಾಲು ಶೇ. 60 ಕ್ಕೂ ಹೆಚ್ಚಿರುವಾಗ, ರಾಷ್ಟ್ರೀಯತವಾದಿ ಮತ್ತು ಉಪ-ರಾಷ್ಟ್ರೀಯತವಾದಿ ತಂತ್ರೋಪಾಯಗಳೆರಡಕ್ಕೂ ಭಯ ಹುಟ್ಟಿಸುವುದು ಮುಖ್ಯ ವಿಷಯವಾಗುತ್ತದೆ.

2019 ರ ಆಗಸ್ಟ್ ತಿಂಗಳಲ್ಲಿ, ಜೈನ ಸಮುದಾಯ ಭವನದ ಹೊರಗೆ ಹಾಕಲಾಗಿದ್ದ ಹಿಂದಿ ಬ್ಯಾನರ್ ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಸಂಘಟನೆಯೊಂದರ ಆರು ಮಂದಿ ಕಾರ್ಯಕರ್ತರನ್ನು ಬಂಧಿಸಲಾಯಿತು. “ಕೆಲ ರೌಡಿಗಳು ದೇಗುಲದ ಮುಂದಿದ್ದ ಹಿಂದಿ ಬ್ಯಾನರ್ ಹರಿಯುವ ಮೂಲಕ ನಮ್ಮ ಜೈನ ಸಹೋದರರ ಮೇಲೆ ದಾಳಿ ನಡೆಸಿರುವುದು ತೀವ್ರ ಆಘಾತವುಂಟು ಮಾಡಿದೆ. ಇಂತಹವರು ಬೆಂಗಳೂರಿನಲ್ಲಿ ಉರ್ದು ಬಳಕೆ ಬಗ್ಗೆ ಎಂದಿಗೂ ಪ್ರಶ್ನಿಸುವುದಿಲ್ಲ. ಕರ್ನಾಟಕದ ಬೆಳವಣಿಗೆಗೆ ಕೊಡುಗೆ ನೀಡುತ್ತಿರುವ ಶಾಂತಿಪ್ರಿಯ ಜೈನರ ಮೇಲೆ ದಾಳಿ ನಡೆಸಿರುವುದು ನೈಜ ಕನ್ನಡಿಗರಿಗೆ ಮತ್ತು ಕನ್ನಡ ಹೋರಾಟಗಾರರಿಗೆ ಕೆಟ್ಟ ಹೆಸರು ತಂದಿದೆ” ಎಂಬುದಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದರು.

ಈ ಟ್ವೀಟ್ ನಂತರ ಮತ್ತೊಂದು ಟ್ವೀಟ್ ಮಾಡಿ, ಹಳಗನ್ನಡ ಸಾಹಿತಿಗಳಲ್ಲಿ ಜೈನರ ಸಂಖ್ಯೆ ಗಣನೀಯವಾಗಿದೆ ಎಂದು ಸಹ ವಾದಿಸಿದರು. ಅವರ ಟ್ವೀಟ್ ಗಳು ಕನ್ನಡ ನಿಷ್ಠೆಯ ಬಗೆಗಿನ ಯಾವುದೇ ಸ್ಪಷ್ಟತೆ ಇಲ್ಲದಂತೆ ಕಂಡಿರಬಹುದು. ಆದರೆ, ರಾಷ್ಟ್ರೀಯತಾವಾದಿ ಮತ್ತು ಉಪ-ರಾಷ್ಟ್ರೀಯತಾವಾದಿ ವಿಷಯಗಳೊಂದಿಗೆ ರಾಷ್ಟ್ರೀಯತಾವಾದಿ ತಂತ್ರೋಪಾಯವನ್ನು ಕೆರಳಿಸುವ (ಜೈನರು ಶಾಂತಿಪ್ರಿಯರು, ಆದರೆ ಉರ್ದು ಮಾತನಾಡುವವರು ಅಲ್ಲ ಎಂಬ ಗೊಂದಲ ಮೂಡಿಸುವ) ಕಿಡಿಗೇಡಿತನದ ಪ್ರಯತ್ನವನ್ನಂತೂ ನಡೆಸಿದವು.

Also Read: ಹಿಂದಿ ಹೇರಿಕೆಯನ್ನು ಮಾತ್ರ ವಿರೋಧಿಸಿದರೆ ಸಾಕೆ?

ಇನ್ನೂ ಆಳವಾಗಿ ಆಲೋಚಿಸಿದರೆ, ಕನ್ನಡ ಮಾತೆ ಭುವನೇಶ್ವರಿ ದೇವಿಯು ಯಾವ ರೀತಿ ಭಾರತ ಮಾತೆಯ ಆಲೋಚನೆ ಮತ್ತು ಪ್ರತಿಮೆಯ ವಿಸ್ತೃತ ರೂಪವಾಗಿದೆ ಎಂಬುದನ್ನು ಗುರುತಿಸಬಹುದು. ಕನ್ನಡ ಭಾವುಟದಲ್ಲಿರುವ ಕುಂಕುಮ ಮತ್ತು ಅರಿಸಿನ ಬಣ್ಣಗಳು ಸಹ ಹಿಂದುತ್ವಕ್ಕೆ ಪ್ರೀತಿಪಾತ್ರವಾದ ಪ್ರತಿಮಾ ರೂಪವಾಗಿವೆ.

“ನಾವು ನಮ್ಮ ಭಾಷೆಯನ್ನು ರಾಜರಾಜೇಶ್ವರಿ ಮತ್ತು ಭುವನೇಶ್ವರಿ ಎಂಬುದಾಗಿ ಕರೆಯುತ್ತೇವೆ. ನಮ್ಮ ಭಾಷೆಯನ್ನು ತಾಯಿ ಅಥವಾ ದೇವರು ಎಂಬುದಾಗಿ ಕರೆಯಬಾರದೆಂದು ಕೆಲವರು ಹೇಳುತ್ತಾರೆ. ಆದರೆ ಇದು ನಾವೇ ಸೃಷ್ಟಿಸಿಕೊಂಡಿದ್ದಲ್ಲ. ಇದು ನಮ್ಮ ಹಿರಿಯರಿಂದ ಬಂದ ಪರಂಪರೆ… ಕನ್ನಡಮಾತೆ ಎಂದು ಹೇಳುವುದು ತಪ್ಪು ಎಂಬುದಾಗಿ ನೀವು ಪರಿಗಣಿಸುವುದಾದರೆ, ಭಾರತಮಾತೆ ಎಂದು ಹೇಳುವುದು ಸಹ ತಪ್ಪಾಗುತ್ತದೆ. ಅದು ಹೇಗೆ ಸಾಧ್ಯ?” ಎಂಬುದಾಗಿ ಕನ್ನಡದ ವರನಟ ದಿ. ಡಾ. ರಾಜಕುಮಾರ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.

ಇಂತಹ ಮುಗ್ಧ ಸಾಂಸ್ಕೃತಿಕ ಪ್ರತಿಪಾದನೆಯು ಈಗ ತುಂಡರಿಸಲ್ಪಟ್ಟಿದ್ದು, ದೇಶದಾದ್ಯಂತ ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಭುವನೇಶ್ವರಿಯು ಈಗ ಗಡಿಯುದ್ದಕ್ಕೂ `ತೆಲಂಗಾಣ ತಲ್ಲಿ’ (ತೆಲಂಗಾಣ ಮಾತೆ)ಯಾಗಿದ್ದಾಳೆ. ಹಾಗಾಗಿ, ಜನರು ತಮ್ಮ ಭಾಷಾ ಹೆಮ್ಮೆಯ ಬಗ್ಗೆ ಮಾತನಾಡುವಾಗ, ಅವರು ಅದೇ ಸಮಯದಲ್ಲಿ ಭಾಷಾ ರಾಷ್ಟ್ರೀಯತಾವಾದಗಳನ್ನೂ ಪ್ರತಿಬಿಂಬಿಸಬೇಕಾಗುತ್ತದೆ. ಎರಡನ್ನೂ ಪ್ರತ್ಯೇಕಿಸಲು ಸಾಧ್ಯವೇ?

www.truthprofoundationindia.com  

ಭಾಷಾವಾರು ರಾಜ್ಯಗಳ ಕುಸಿತ:

ಪೊಟ್ಟಿ ಶ್ರೀರಾಮುಲು ಅವರು 1952 ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಗಾಗಿ ರಾಜ್ಯಗಳ ಪುನರ್ವಿಂಗಡಣಾ ಆಯೋಗ ರಚಿಸುವಂತೆ ಆಗಿನ ಪ್ರಧಾನಿ ಜವಹರಲಾಲ್ ನೆಹರು ಅವರ ಮೇಲೆ ಒತ್ತಡ ಹೇರಿದ ಪರಿಸ್ಥಿತಿಯನ್ನು ಇಂದಿನ ಸಂದರ್ಭಕ್ಕೆ ಹೋಲಿಸಿದರೆ, ಇತ್ತೀಚಿನ ತೆಲಂಗಾಣ ಪ್ರಾಂತ್ಯವು ಭಾಷಾವಾರು ರಾಜ್ಯದ ಕುಸಿತವನ್ನು ಸಂಕೇತಿಸುತ್ತದೆ. ಮೂರು ವಿಧದಲ್ಲಿ ವಿಭಜಿಸುವ ಬೇಡಿಕೆ ಇದ್ದರೂ, 2014 ರಲ್ಲಿ ಆಂಧ್ರಪ್ರದೇಶವನ್ನು ಸಾಂಸ್ಕೃತಿಕ ಆಧಾರದಲ್ಲಿ ಎರಡು ರಾಜ್ಯಗಳಾಗಿ ವಿಂಗಡಿಸಲಾಯಿತು. ಇಲ್ಲಿ ಭಾಷಾವಾರು ಅಂಶಗಳು ನೇಪಥ್ಯಕ್ಕೆ ಸರಿದು ಸಾಂಸ್ಕೃತಿಕ ಅಂಶಗಳು ಮುನ್ನೆಲೆಗೆ ಬಂದಿದ್ದರಿಂದ, ರಾಷ್ಟ್ರೀಯ ಮತ್ತು ಉಪ-ರಾಷ್ಟ್ರೀಯತೆಗಳ ನಡುವಿನ ಒಡನಾಟವು ಹೊಸ ಕ್ರಿಯಾತ್ಮಕ ಎಲ್ಲೆಯನ್ನು ಗುರುತಿಸಿಕೊಳ್ಳಬೇಕಾಗಿದೆ.

ಕರ್ನಾಟಕದಲ್ಲಿ ಸಹ, ಸಾಂಸ್ಕೃತಿಕವಾಗಿ ವಿಶಿಷ್ಟತೆ ಹೊಂದಿರುವ ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗಗಳ ನಡುವೆ ಭಾವನಾತ್ಮಕ ಬಂಧದ ಕೊರತೆ ಇರುವ ಕಾರಣ ಆಗಿಂದಾಗ್ಗೆ ಭಾಷಾ ಐಕ್ಯತೆಗೆ ಧಕ್ಕೆ ತರುವ ಹೇಳಿಕೆಗಳು ಹೊರಬೀಳುತ್ತಿರುತ್ತವೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರಬಲ ಶಕ್ತಿಯಾಗಿರುವ ಲಿಂಗಾಯತರು ದಶಕಗಳಿಂದ ಬಿಜೆಪಿಗೆ ನಿಷ್ಟರಾಗಿ ಮತ ಹಾಕುತ್ತಾ ಬಂದಿದ್ದಾರೆ. 2018 ರಲ್ಲಿ ಹಿಂದುತ್ವ ತಂತ್ರೋಪಾಯದಿಂದ ಲಿಂಗಾಯತರನ್ನು ಹೊರತರಲು ಪ್ರಯತ್ನಿಸಿ ನಡೆದ ಲಿಂಗಾಯತ ಧರ್ಮ ಚಳವಳಿಯು ಚುನಾವಣೆಯಲ್ಲಿ ಫಲ ನೀಡಲಿಲ್ಲ. ಭಾಷಾ ಪ್ರಾಂತ್ಯದ ವಿಚಾರವು ನಿಧಾನವಾಗಿ ನೇಪಥ್ಯಕ್ಕೆ ಸರಿದು ಒಟ್ಟಾರೆ ಸಾಂಸ್ಕೃತಿಕ ಮತ್ತು ಆರ್ಥಿಕ ಆಲೋಚನೆಗಳು ಮುನ್ನೆಲೆಗೆ ಬರುತ್ತಿವೆಯೇ? ಭೌಗೋಳಿಕವಾಗಿ ವಿವಿಧೆಡೆ ಹರಡಿಕೊಂಡಿರುವ ಆದರೆ ತಾಂತ್ರಿಕವಾಗಿ ಪರಸ್ಪರ ಸಂಪರ್ಕದಲ್ಲಿರುವ ಭಾಷಾ ಸಮುದಾಯಗಳು ಭಾಷಾವಾರು ರಾಜ್ಯದ ಕಲ್ಪನೆಯನ್ನು ಮೀರಿ ಚಿಂತಿಸುತ್ತಿವೆಯೇ? ಎಂಬುದು ವಿಚಾರಮಾಡಬೇಕಾದ ಪ್ರಶ್ನೆಗಳಾಗಿವೆ.

ಭಾಷಾವಾರು ಚರ್ಚೆಗಳು ಬಂದಾಗಲೆಲ್ಲಾ ತಮಿಳುನಾಡಿನ ಉದಾಹರಣೆಯನ್ನು ಪ್ರಸ್ತಾಪಿಸಲಾಗುತ್ತದೆ. ತಮಿಳುನಾಡು ಈಗಲೂ ಹಿಂದಿ ಹೇರಿಕೆ ವಿರೋಧಿಸುವ ಭದ್ರ ನೆಲೆಯಾಗಿರಬಹುದು. ಆದರೆ, ದ್ರಾವಿಡ ಚಳವಳಿಯ ಪ್ರತಿಮಾಪುರುಷರ (ಐಕಾನ್) ನಿಧನದೊಂದಿಗೆ ದ್ರಾವಿಡ ಸಿದ್ಧಾಂತವೂ ದುರ್ಬಲಗೊಳ್ಳುತ್ತಿರುವುದು, ಮತ್ತು ದ್ರಾವಿಡ ಪಕ್ಷಗಳು ಬಿಜೆಪಿಯೊಂದಿಗೆ ಅಧಿಕಾರ ಹಂಚಿಕೊಳ್ಳುತ್ತಿರುವುದರಿಂದ, 1965ರ ಹಿಂದಿ ವಿರೋಧಿ ಪ್ರತಿಭಟನೆಗಳ ಉತ್ಮಂಠತೆಯು ಮಾತ್ರ ಇದುವರೆಗಿನ ಹೇಳಿಕೆಗಳು ಮತ್ತು ರಾಜಕೀಯ ಕ್ರಿಯೆಗಳನ್ನು ಪ್ರಚೋದಿಸುತ್ತಿದೆ ಎಂದು ಹೇಳಬಹುದಾಗಿದೆ.

ಯಾವುದೇ ಹೊಸ ಕಲ್ಪನೆ ಇಲ್ಲ. ಸ್ಟಾಲಿನ್ ಮತ್ತು ಕಮಲ್ ಹಾಸನ್ ಅವರ ಯಾವುದೇ ಹೇಳಿಕೆಯಲ್ಲಿ ರಜನಿಕಾಂತ್ ಹೇಳಿಕೆಗೆ ಪ್ರತಿರೋಧ ವ್ಯಕ್ತಪಡಿಸುವ ಬಲವಂತದ ಸಂದಿಗ್ಧತೆ ಕಂಡುಬರುತ್ತದೆ. “ಯಾವುದೇ ದೇಶವಿರಲಿ, ಒಂದು ಸಾಮುದಾಯಿಕ ಭಾಷೆಯು ದೇಶದ ಬೆಳವಣಿಗೆ, ಅಭಿವೃದ್ಧಿ ಮತ್ತು ಏಕತೆಗೆ ಸಹಕಾರಿಯಾಗಿರುತ್ತದೆ. ದುರದೃಷ್ಟಕರ ಸಂಗತಿ ಎಂದರೆ, ಭಾರತದಲ್ಲಿ ನೀವು ಒಂದೇ ಸಾಮುದಾಯಿಕ ಭಾಷೆ ಹೊಂದಲು ಸಾಧ್ಯವಿಲ್ಲ” ಎಂಬುದಾಗಿ ರಜನಿಕಾಂತ್ ಕಳೆದ ಸೆಪ್ಟೆಂಬರ್ 18 ರಂದು ಹೇಳಿದ್ದರು. ಈ ಹೇಳಿಕೆಯಲ್ಲಿ ಪ್ರತಿರೋಧ ಕಂಡುಬರುತ್ತಿಲ್ಲ, ಬದಲಿಗೆ ಒಂದೇ ಸಾಮುದಾಯಿಕ ಭಾಷೆ ಹೊಂದಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ವಿಷಾದ ಭಾವ ವ್ಯಕ್ತವಾಗಿದೆ.

ನೈತಿಕ ಬಹುಮತದ ಅಗತ್ಯ:

ದ್ರಾವಿಡ ಚಳವಳಿಯ ಅಗ್ರಮಾನ್ಯರಾದ ಪೆರಿಯಾರ್ ಇ. ರಾಮಸ್ವಾಮಿ ಮತ್ತು ಸಿ. ಎನ್. ಅಣ್ಣಾದುರೈ ಜನ್ಮ ವಾರ್ಷಿಕೋತ್ಸವಗಳು ಸೆಪ್ಟೆಂಬರ್ ತಿಂಗಳಲ್ಲೇ ಬಂದಿರುವುದು ವಿಶೇಷ. ಈ ಇಬ್ಬರ ಪ್ರಕಾರ, ಭಾಷಾ ಪ್ರತಿರೋಧವು ವಿಶಾಲ ಸಾಂಸ್ಕೃತಿಕ ಮತ್ತು ಜನಾಂಗೀಯ ವ್ಯವಸ್ಥೆಯ ಒಂದು ಭಾಗ. ಆದರೀಗ, ಭಾಷೆಯನ್ನು ಪ್ರತ್ಯೇಕ ವಿಷಯವಾಗಿ ನೋಡಲಾಗುತ್ತಿದೆ. “ರಾಜಕೀಯ ಲೆಕ್ಕಾಚಾರಗಳ ನಡುವೆಯೂ ಈ ವಿನಮ್ರ ಸದನವು ರಾಜಕೀಯ ನೈತಿಕತೆ ಮತ್ತು ಪ್ರಜಾಪ್ರಭುತ್ವೀಯ ಉದಾರವಾದಕ್ಕೆ ಸ್ವಲ್ಪಮಟ್ಟಿನ ಗಮನ ನೀಡಿದೆ. ಪ್ರಜಾಪ್ರಭುತ್ವ ಎಂದರೆ, ಕೇವಲ ಬಹುಸಂಖ್ಯಾತರ ಆಡಳಿತವಲ್ಲ” ಎಂಬುದಾಗಿ 1963 ರಲ್ಲಿ ರಾಜ್ಯಸಭೆಯಲ್ಲಿ ಅಧಿಕೃತ ಭಾಷೆಗಳ ಮಸೂದೆ ಕುರಿತ ಚರ್ಚೆಯಲ್ಲಿ ಅಣ್ಣಾದುರೈ ಹೇಳಿದ್ದರು. “ಒಂದು ನಿಬಿಡ ಪ್ರದೇಶದಲ್ಲಿ ಶೇ.42 ರಷ್ಟು ಜನ ವಾಸವಾಗಿದ್ದರೆ, ಅದು ನೈತಿಕ ಬಹುಮತದ ಸೂಚಿಯಾಗುವುದಿಲ್ಲ, ಅದು ಸಂಖ್ಯಾ ಬಹುಮತ ಮಾತ್ರ” ಎಂದು ಹಿಂದಿಯನ್ನು ಬಹುಸಂಖ್ಯಾತರು ಮಾತನಾಡುತ್ತಾರೆ ಎಂಬ ವಾದಕ್ಕೆ ಸಂಬಂಧಿಸಿದಂತೆ ಅವರು ಪ್ರತಿವಾದ ಮಂಡಿಸಿದ್ದರು.

ಅಣ್ಣಾದುರೈ ಅವರು 1962 ರಲ್ಲಿ ರಾಜ್ಯಸಭೆಯಲ್ಲಿ ಮೊಟ್ಟಮೊದಲ ಬಾರಿಗೆ ಮಾತನಾಡುವಾಗ, ಪ್ರತ್ಯೇಕ ದ್ರಾವಿಡನಾಡು ಬೇಕೆಂದು ಮನವಿ ಮಾಡಿಕೊಂಡಿದ್ದರು. “ಯಾವುದೇ ವಿರೋಧ ಭಾವನೆಯಿಂದ ನಾನು ಪ್ರತ್ಯೇಕ ದ್ರಾವಿಡನಾಡನ್ನು ಪ್ರತ್ಯೇಕಿಸಬೇಕೆಂದು ಕೇಳುತ್ತಿಲ್ಲ. ದ್ರಾವಿಡನಾಡನ್ನು ಪ್ರತ್ಯೇಕಗೊಳಿಸಿದರೆ, ಅದು ಪುಟ್ಟ, ಏಕರೂಪದ ಒಗ್ಗಟ್ಟಿನ ದೇಶವಾಗುತ್ತದೆ. ತದನಂತರ ನಾವು ಪುನರುತ್ಪಾದನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಸಾಮಾಜಿಕ ಪುನರುತ್ಪಾದನೆಯನ್ನು ಅತ್ಯಂತ ಫಲದಾಯಕವಾಗಿ ಮಾಡಬಹುದು ಎಂಬ ಕಾರಣದಿಂದ ಕೇಳುತ್ತಿದ್ದೇನೆ” ಎಂಬುದಾಗಿ ವಿನಂತಿ ಮಾಡಿಕೊಂಡಿದ್ದರು. (ಎಂ.ಜೆ. ಅಕ್ಬರ್ ಅವರ ‘India: The Siege Within’ ಎಂಬ ಕೃತಿಯಲ್ಲಿ ಉಲ್ಲೇಖಿಸಲಾಗಿದೆ). 1965 ರಲ್ಲಿ, ಪ್ರತ್ಯೇಕತಾವಾದಿ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬುದಾಗಿ ಸಂವಿಧಾನದ 19ನೇ ವಿಧಿಗೆ ತಿದ್ದುಪಡಿ ತಂದ ನಂತರ, ಅಣ್ಣಾದುರೈ ಅವರು ಪ್ರತ್ಯೇಕ ದ್ರಾವಿಡನಾಡಿನ ಬೇಡಿಕೆ ಕೈಬಿಟ್ಟರು.

ರಾಷ್ಟ್ರೀಯತಾವಾದಿ ಮತ್ತು ಉಪ-ರಾಷ್ಟ್ರೀಯತಾವಾದಿ ಪ್ರಯೋಗಗಳ ಹಾಗೂ ಕೆಲವರನ್ನು ಹೊರಗಿಡುವ ತಂತ್ರೋಪಾಯದ ಹೊಸ ನೆಲೆಗಳಾಗಿರುವ ಕಾಶ್ಮೀರ ಮತ್ತು ಅಸ್ಸಾಂನಲ್ಲಿ, ಈ ಆಲೋಚನೆಗಳು ಇತರ ಭಾಷಾ ಮತ್ತು ಸಾಂಸ್ಕೃತಿಕ ಸರಹದ್ದುಗಳ ಒಳಗೆ ಯಾವ ರೀತಿ ಜಿನುಗಲಾರಂಭಿಸಿವೆ ಎಂಬುದನ್ನು ಬಹಳ ಹತ್ತಿರದಿಂದ ಗಮನಿಸಬಹುದು.

ಸಿ. ಎನ್. ಅಣ್ಣಾದುರೈ

ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭ ಭಾಯಿ ಪಟೇಲ್ ಮತ್ತು ಜವಹರಲಾಲ್ ನೆಹರು ಅವರು ಆರಂಭದಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆ ಕುರಿತು ಆಲೋಚಿಸಿದಾಗ, ಮೊದಲು ಭಾರತವನ್ನು ಒಗ್ಗೂಡಿಸಬೇಕು, ತದನಂತರ ಸ್ವಾಯತ್ತ ಸಂಸ್ಕೃತಿಗಳ ಒಕ್ಕೂಟವಾಗಿ ದೇಶವನ್ನು ಅಭಿವೃದ್ಧಿಪಡಿಸಬೇಕು ಎಂಬುದು ಅವರ ಉದ್ದೇಶವಾಗಿತ್ತು. ಕಾಶ್ಮೀರಿತನದ ಜಾತ್ಯತೀತ ಮತ್ತು ಪ್ರಗತಿಪರ ಆಲೋಚನೆಯನ್ನು ಬೆಸೆದಂತೆ, ಪ್ರತಿ ಭಾಷಾವಾರು ಪ್ರಾಂತ್ಯವು ಸೌಮ್ಯ ಮತ್ತು ಉದಾತ್ತ ಉದ್ದೇಶಗಳನ್ನು ಅಳವಡಿಸಿಕೊಂಡವು.

ಕಾಶ್ಮೀರಿತನದ ಅವಸಾನದ ಕುರಿತು ಇತ್ತೀಚೆಗೆ ಇತಿಹಾಸಕಾರ್ತಿ ಚಿತ್ರಲೇಖಾ ಝುಟ್ಷಿ ಬರೆದಿದ್ದಾರೆ. “ಭಾರತದಲ್ಲಿ ಒಟ್ಟಾರೆ ಜಾತ್ಯತೀತ ಒಮ್ಮತದ ಸಹಜ ಅವಸಾನದ ಸನ್ನಿವೇಶದಲ್ಲಿ ಕಾಶ್ಮೀರಿತನದ ಅವಸಾನವನ್ನು ನೋಡಬೇಕಿದೆ. ಕಾಶ್ಮೀರ ಬಂಡಾಯದ (ಹಲವು ರೀತಿಯಲ್ಲಿ ತನ್ನದೇ ಆದ ಬಹುಮತವನ್ನು ಒಳಗೊಂಡಿದೆ) ಆರಂಭದ ಕ್ಷಣಗಳಲ್ಲಿ, ಹಿಂದು ಬಹುಮತದ ಜೊತೆ ಜೊತೆಯಲ್ಲಿ ಬಿಜೆಪಿಯ ಏಳ್ಗೆಯ ಪಥವನ್ನು ಗುರುತಿಸಬಹುದಾಗಿದೆ” ಇದು ಇತರ ಭಾಷಾ ಸಂಸ್ಕೃತಿಗಳಿಗೂ ಅನುರಣಿಸಲಿದೆ ಎಂಬುದಾಗಿ ಝುಟ್ಷಿ ಅಭಿಪ್ರಾಯಪಟ್ಟಿದ್ದಾರೆ.

ಅಮಿತ್ ಶಾ ಅವರು ಸೆಪ್ಟೆಂಬರ್ 18 ರಂದು, ಹಿಂದಿ ಕುರಿತಾದ ತಮ್ಮ ಮೊದಲಿನ ಹೇಳಿಕೆಗೆ ಸ್ಪಷ್ಟನೆ ನೀಡುವುದಕ್ಕಿಂತ ಹೆಚ್ಚಾಗಿ, ಹಿಂದಿಯನ್ನು ದ್ವಿತೀಯ ಭಾಷೆಯಾಗಿ ಕಲಿಯಬಹುದು ಎಂಬ ರಿಯಾಯಿತಿ ತೋರುವ ಮಾತುಗಳನ್ನಾಡಿದರು. ಆದರೆ ಅದೇ ದಿನ ಅವರು, ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ ಸಿ) ಪ್ರಕ್ರಿಯೆಯನ್ನು ದೇಶದಾದ್ಯಂತ ಅನ್ವಯಿಸಲಾಗುವುದು ಎಂಬುದಾಗಿ ಪುನರುಚ್ಚರಿಸಿದರು. ಈ ಹೇಳಿಕೆಯ ಶೈಲಿಯು ಭಾಷಾ ವಿಭಜನೆಗಳನ್ನು ಮೀರಿ ಇಡೀ ದೇಶಕ್ಕೆ ಒಂದೇ ಕಾನೂನು ಅನ್ವಯಿಸುವ ಬೆದರಿಕೆ ರೂಪದಂತಿತ್ತು.

ತಾಂತ್ರಿಕವಾಗಿ, ಭಾಷಾ ವೈವಿಧ್ಯತೆ ಇರಬಹುದು. ಆದರೆ ಎಲ್ಲಾ ಭಾರತೀಯ ಭಾಷೆಗಳು ಅಸ್ಸಾಂನಲ್ಲಿನ ವಿದೇಶಿಯರ ನ್ಯಾಯಾಲಯ, ಬಂಧನ ಕೇಂದ್ರಗಳು ಮುಂತಾದ ಎನ್ಆರ್ ಸಿ ಪದಸಂಪತ್ತನ್ನು ಒಳಗೊಳ್ಳಲಾರಂಭಿಸಿದರೆ ಎನಾಗುತ್ತದೆ? ಆದ್ದರಿಂದ, ಭಾಷಾ ಹೆಮ್ಮೆ ಮತ್ತು ಪ್ರತಿರೋಧವು ತುರ್ತಾಗಿ ಎಚ್ಚೆತ್ತುಕೊಳ್ಳಬೇಕಿದೆ ಹಾಗೂ ಸ್ವತಂತ್ರ ಜ್ಞಾನ ಶಾಸ್ತ್ರಗಳು, ಜಾಗತಿಕ ದೃಷ್ಟಿ ಮತ್ತು ತಮ್ಮ ಭಾಷಾ ಸಂಸ್ಕೃತಿಗಳಲ್ಲಿ ಬೇರುಬಿಟ್ಟಿರುವ ವಿಶ್ವಪ್ರಜೆಯ ಲಕ್ಷಣಗಳನ್ನು ಪುನಃ ಕಂಡುಕೊಳ್ಳಬೇಕಿದೆ. ಸಾಂಕೇತಿಕ ಬೀದಿ ಪ್ರದರ್ಶನ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಭಟಿಸುವುದನ್ನು ಮೀರಿ ಮುಂದಡಿಯಿಡಬೇಕಿದೆ.

RS 500
RS 1500

SCAN HERE

don't miss it !

ಮಕ್ಕಳ ಅನುಕೂಲಕ್ಕಾಗಿ ಸರ್ಕಾರಿ ಶಾಲೆಗಳೂ ಶಾಲಾ ಬಸ್ ಖರೀದಿಸಬಹುದು : ರಾಜ್ಯ ಸರ್ಕಾರ ಆದೇಶ
ಕರ್ನಾಟಕ

ಮಕ್ಕಳ ಅನುಕೂಲಕ್ಕಾಗಿ ಸರ್ಕಾರಿ ಶಾಲೆಗಳೂ ಶಾಲಾ ಬಸ್ ಖರೀದಿಸಬಹುದು : ರಾಜ್ಯ ಸರ್ಕಾರ ಆದೇಶ

by ಪ್ರತಿಧ್ವನಿ
July 2, 2022
ಪಾಲಿಕೆ ಆವರಣದಲ್ಲೇ ಕ್ರಿಕೆಟ್ ಆಡಿ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ ಯುವಕರು
Uncategorized

ಪಾಲಿಕೆ ಆವರಣದಲ್ಲೇ ಕ್ರಿಕೆಟ್ ಆಡಿ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ ಯುವಕರು

by ಪ್ರತಿಧ್ವನಿ
June 30, 2022
ಜಮ್ಮುವಿನಲ್ಲಿ ಸಿಕ್ಕಿಬಿದ್ದ ಲಷ್ಕರೆ ಉಗ್ರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ!
ದೇಶ

ಜಮ್ಮುವಿನಲ್ಲಿ ಸಿಕ್ಕಿಬಿದ್ದ ಲಷ್ಕರೆ ಉಗ್ರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ!

by ಪ್ರತಿಧ್ವನಿ
July 3, 2022
‘ಬುಲ್ಲಿ ಬಾಯ್’ ಆ್ಯಪ್ ಸೃಷ್ಟಿಕರ್ತರಿಗೆ ಜಾಮೀನು: ಮಹಿಳೆಯರ ವಿರುದ್ಧದ ಹಿಂಸೆಯನ್ನು ಸಾಮಾನ್ಯೀಕರಿಸುವುದರ ಅಪಾಯವೆಷ್ಟು?
ದೇಶ

‘ಬುಲ್ಲಿ ಬಾಯ್’ ಆ್ಯಪ್ ಸೃಷ್ಟಿಕರ್ತರಿಗೆ ಜಾಮೀನು: ಮಹಿಳೆಯರ ವಿರುದ್ಧದ ಹಿಂಸೆಯನ್ನು ಸಾಮಾನ್ಯೀಕರಿಸುವುದರ ಅಪಾಯವೆಷ್ಟು?

by ಪ್ರತಿಧ್ವನಿ
June 29, 2022
ಮಹಾ ರಾಜಕೀಯ ಬಿಕ್ಕಟ್ಟಿನ ನಂತರ ಮುರ್ಮುಗೆ ಗೆಲುವಿನ ಅವಕಾಶ ಜಾಸ್ತಿಯಿದೆ : ಮಮತಾ ಬ್ಯಾನರ್ಜಿ
ದೇಶ

ಮಹಾ ರಾಜಕೀಯ ಬಿಕ್ಕಟ್ಟಿನ ನಂತರ ಮುರ್ಮುಗೆ ಗೆಲುವಿನ ಅವಕಾಶ ಜಾಸ್ತಿಯಿದೆ : ಮಮತಾ ಬ್ಯಾನರ್ಜಿ

by ಪ್ರತಿಧ್ವನಿ
July 1, 2022
Next Post
ಅರಿಂದಮ್ ಚೌಧರಿ ಎಂಬ ‘ಮೋಸದ ಬೆಕ್ಕಿಗೆ’ ಗಂಟೆ ಕಟ್ಟಿದ ಕತೆ

ಅರಿಂದಮ್ ಚೌಧರಿ ಎಂಬ ‘ಮೋಸದ ಬೆಕ್ಕಿಗೆ’ ಗಂಟೆ ಕಟ್ಟಿದ ಕತೆ

ಉಪಚುನಾವಣೆಗೇ ತಡೆಯಾಜ್ಞೆ ನೀಡಿತು ಅನರ್ಹತೆಯ ಜಟಿಲತೆ

ಉಪಚುನಾವಣೆಗೇ ತಡೆಯಾಜ್ಞೆ ನೀಡಿತು ಅನರ್ಹತೆಯ ಜಟಿಲತೆ

ಮಣ್ಣುಗೂಡಿದ ಗಣಿ ಕಾರ್ಮಿಕರ ಜೀವನ

ಮಣ್ಣುಗೂಡಿದ ಗಣಿ ಕಾರ್ಮಿಕರ ಜೀವನ, ನಿಂತಲ್ಲೇ ಇರುವ ಪುನರುಜ್ಜೀವನ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist