ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿದೆ. ಇಡೀ ಜಮ್ಮು ಮತ್ತು ಕಾಶ್ಮೀರ ಶಾಂತಿಯಾಗಿದೆ ಎಂದು ಕೇಂದ್ರ ಸರ್ಕಾರ ಹಲವು ದಿನಗಳಿಂದಲೂ ಹೇಳುತ್ತಾ ಬರುತ್ತಿದೆ. ಆದರೆ, ಅಲ್ಲಿನ ಜೀವನಾಡಿಯಂತಿದ್ದ ಇಂಟರ್ ನೆಟ್ ಸೇರಿದಂತೆ ಮತ್ತಿತರೆ ಸಂಪರ್ಕ ಸೌಲಭ್ಯಗಳನ್ನು ಸ್ಥಗಿತಗೊಳಿಸಿರುವುದನ್ನು ಪುನರ್ ಸ್ಥಾಪಿಸುವ ಧೈರ್ಯವನ್ನು ಮಾತ್ರ ಸರ್ಕಾರ ಮಾಡುತ್ತಿಲ್ಲ. ಅಂದರೆ, ಕಣಿವೆ ರಾಜ್ಯದಲ್ಲಿ ಇಂಟರ್ನೆಟ್ ಸ್ಥಗಿತಗೊಂಡು ಬರೋಬ್ಬರಿ 160 ದಿನಗಳೇ ಕಳೆದಿವೆ. ಅಲ್ಲಿನ ಜನರು ಇಂಟರ್ನೆಟ್ ಸೇವೆ ಇರಲಿ, ದೂರವಾಣಿ ಸಂಪರ್ಕವೂ ಇಲ್ಲದೇ ಪರಿತಪಿಸುತ್ತಿದ್ದಾರೆ.
ಕೇಂದ್ರದಲ್ಲಿನ ಬಿಜೆಪಿ ಸರ್ಕಾರ 2019 ರ ಆಗಸ್ಟ್ 5 ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿತ್ತು. ಇದರಿಂದ ಅಲ್ಲಿನ ಜನರು ರೊಚ್ಚಿಗೆದ್ದು ಹಿಂಸಾಚಾರ ನಡೆಸುತ್ತಾರೆಂದು ಮುಂಜಾಗ್ರತಾ ಕ್ರಮವಾಗಿ ಇಡೀ ರಾಜ್ಯದಲ್ಲಿ ಇಂಟರ್ನೆಟ್, ದೂರವಾಣಿ ಸಂಪರ್ಕ ಸೇರಿದಂತೆ ಮತ್ತಿತರೆ ಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಅಂದಿನಿಂದ ಇಂದಿನವರೆಗೆ ರಾಜ್ಯದಲ್ಲಿ ಈ ಸೇವೆಗಳು ಪುನರ್ ಸ್ಥಾಪನೆಗೊಳ್ಳಲೇ ಇಲ್ಲ. ವಿಶೇಷ ಸ್ಥಾನಮಾನ ರದ್ದು ಮಾಡಿದ್ದರ ಬಗ್ಗೆ ನಾವೇನೂ ಪ್ರತಿಭಟನೆಯನ್ನೂ ಮಾಡುತ್ತಿಲ್ಲ, ಅದರ ವಿರುದ್ಧ ಧ್ವನಿಯನ್ನೂ ಎತ್ತುತ್ತಿಲ್ಲ. ಹಾಗಿದ್ದಾಗ್ಯೂ ಸರ್ಕಾರ ಮುಂಜಾಗ್ರತಾ ಕ್ರಮದ ನೆಪದಲ್ಲಿ ನಮ್ಮ ಮೂಲಭೂತ ಹಕ್ಕಿನಂತಿರುವ ಇಂಟರ್ನೆಟ್, ದೂರವಾಣಿ ಸಂಪರ್ಕಗಳನ್ನು ಕಡಿದು ಹಾಕಿ ನಮ್ಮನ್ನು ಹೈರಾಣು ಮಾಡುತ್ತಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದು ಬಿಜೆಪಿ ಸರ್ಕಾರ ಕಾಶ್ಮೀರ ಜನತೆಯನ್ನು ಶೋಷಣೆ ಮಾಡುತ್ತಿರುವ ಪರಿ. ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವರು ಪಾಕಿಸ್ತಾನದ ಪರವಾಗಿರುವವರು ಇದ್ದಾರೆ. ಇವರ ಕುಮ್ಮಕ್ಕಿನಿಂದಲೇ ಅಲ್ಲಿ ಘರ್ಷಣೆಗಳು ನಡೆಯುತ್ತಿರುತ್ತವೆ. ಇವರನ್ನು ಹತ್ತಿಕ್ಕಲು ಸರ್ಕಾರದ ಬಳಿ ಹಲವಾರು ಮಾರ್ಗಗಳಿವೆ. ಆದರೆ, ಇವರ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಇಡೀ ರಾಜ್ಯದ ಸಂಪರ್ಕ ಸೇವೆಗಳನ್ನೇ ಕಡಿತ ಮಾಡಿದರೆ ಹೇಗೆ ಎಂಬ ಪ್ರಶ್ನೆಗಳು ನಾಗರಿಕ ವಲಯದಲ್ಲಿ ಕೇಳಿ ಬರುತ್ತಿವೆ. ಕೇವಲ ಕೆಲವೇ ಕೆಲವು ದುಷ್ಕರ್ಮಿಗಳಿಗಾಗಿ ನಮಗೆ ನೀಡಿರುವ ನಾಗರಿಕ ಸೌಲಭ್ಯಗಳನ್ನು ಕಡಿತಗೊಳಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಈ ನಾಗರಿಕರ ಪ್ರಶ್ನೆಯಾಗಿದೆ.
ಈ ಕುರಿತು ಸ್ವತಃ ಸುಪ್ರೀಂಕೋರ್ಟ್ ಸಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂಟರ್ನೆಟ್ ಎನ್ನುವುದು ನಾಗರಿಕರ ಮೂಲಭೂತ ಹಕ್ಕಾಗಿದೆ. ಮುಂಜಾಗ್ರತಾ ಕ್ರಮದ ನೆಪದಲ್ಲಿ ಈ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವುದಲ್ಲದೇ, ಈ ಕುರಿತಾಗಿ ಸೂಕ್ತ ವಿವರಣೆಗಳನ್ನು ನೀಡುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ.
ರಾಜ್ಯಗಳಲ್ಲಿ ಏನಾದರೂ ಅನಾಹುತಗಳು ಅಥವಾ ಘರ್ಷಣೆಗಳು ನಡೆಯಬಹುದೆಂಬ ಮುನ್ಸೂಚನೆ ಬಂದರೆ ನಿಷೇಧಾಜ್ಞೆ ಅಂದರೆ ಐಪಿಸಿ 144 ನ್ನು ಹೇರಿ ಪರಿಸ್ಥಿತಿಯನ್ನು ಹತೋಟಿಗೆ ತರುವ ಅಧಿಕಾರವನ್ನು ಆಯಾಯಾ ರಾಜ್ಯ ಸರ್ಕಾರಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಈ 144 ನೇ ಸೆಕ್ಷನ್ ಅನ್ನು ಬಹುತೇಕ ಸಂದರ್ಭಗಳಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ನಾವು ಗಮನಿಸಬಹುದು.
ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಇಂಡಿಯನ್ ಟೆಲಿಗ್ರಾಫ್ ಆ್ಯಕ್ಟ್ ಅಡಿಯಲ್ಲಿ ಇಂಟರ್ನೆಟ್ ಸೇವೆಗಳನ್ನು ಅಮಾನತು ಮಾಡಲು ಅವಕಾಶವಿದೆ. ಆದರೆ, ವಿಕೋಪ ಪರಿಸ್ಥಿತಿ ಸಂದರ್ಭದಲ್ಲಿ ಮಾತ್ರ ಈ ಅಮಾನತನ್ನು ಜಾರಿಗೆ ತರಲು ಅವಕಾಶವಿರುತ್ತದೆ. ಆದರೆ, ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಕೇಂದ್ರ ಸರ್ಕಾರ ಈ ಕಾಯ್ದೆಗಳ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ.
ಇತ್ತೀಚೆಗೆ, ಸಿಎಎ, ಎನ್ಆರ್ ಸಿ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ಉತ್ತರಪ್ರದೇಶ, ಹರ್ಯಾಣ, ತೆಲಂಗಾಣ, ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ತ್ರಿಪುರಾ, ಮೇಘಾಲಯ, ರಾಜಧಾನಿ ದೆಹಲಿಯೂ ಸೇರಿದಂತೆ ಮತ್ತಿತರೆ ರಾಜ್ಯಗಳಲ್ಲಿ ಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಆದರೆ, ಜಮ್ಮು ಮತ್ತು ಕಾಶ್ಮೀರದ ಜನತೆಯ ಪರಿಸ್ಥಿತಿ ಹೇಗಿದೆಯೆಂದರೆ ಇನ್ನು ಕೆಲವು ದಿನಗಳು ಅಥವಾ ತಿಂಗಳ ಕಾಲ ಇಂಟರ್ನೆಟ್, ಸ್ಥಿರ ಮತ್ತು ಮೊಬೈಲ್ ದೂರವಾಣಿ ಸಂಪರ್ಕ ಸ್ಥಗಿತ ಮುಂದುವರಿದರೆ ಜನತೆ ಇಂಟರ್ನೆಟ್ ಸೌಲಭ್ಯವನ್ನೇ ಮರೆತುಬಿಡುವಂತಾಗಿದ್ದಾರೆ. ಈ ಕಣಿವೆ ರಾಜ್ಯದಲ್ಲಿ 8 ದಶಲಕ್ಷಕ್ಕೂ ಅಧಿಕ ಜನರು ಮೊಬೈಲ್, ಇಂಟರ್ನೆಟ್ ಬಳಕೆದಾರರಿದ್ದಾರೆ. ಇವರೆಲ್ಲರೂ ಒಂದಲ್ಲಾ ಒಂದು ಕಾರಣಕ್ಕೆ ಮೊಬೈಲ್ ಅಥವಾ ಇಂಟರ್ನೆಟ್ ಅನ್ನು ಅವಲಂಬಿಸಿದ್ದವರು. ಆದರೆ, ಸರ್ಕಾರದ ಈ ಕ್ರಮದಿಂದ ಅವರ ಪಾಡು ಹೇಳತೀರದಂತಾಗಿದೆ.
ಇಲ್ಲಿನ ನಾಗರಿಕರ ಪರಿಸ್ಥಿತಿ ಹೇಗಿದೆ ಎಂಬುದಕ್ಕೆ ಇಲ್ಲಿವೆ ಕೆಲವು ನಿದರ್ಶನಗಳು:-
ಇಲ್ಲಿನ ಸುಮಾರು 1000 ವೈದ್ಯರು ಸೇರಿ ‘Save Heart Kashmir’ಎಂಬ ವಾಟ್ಸಪ್ ಗ್ರೂಪ್ ಮಾಡಿಕೊಂಡಿದ್ದರು. 2017 ರಲ್ಲಿ ಆರಂಭವಾಗಿದ್ದ ಈ ಗ್ರೂಪಿನಲ್ಲಿ ವೈದ್ಯರು ರೋಗಿಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ರೋಗಿಗಳಿಗೆ ಉತ್ತಮ ಚಿಕಿತ್ಸೆ ಬಗ್ಗೆ ಪರಸ್ಪರ ಚರ್ಚಿಸುತ್ತಿದ್ದರು. ಇದರ ಮೂಲಕವೇ ಹಲವಾರು ಶಿಫಾರಸುಗಳನ್ನು ವರದಿಗಳನ್ನು ನೀಡುತ್ತಿದ್ದರು. ಹೀಗಾಗಿ ಈ ಗ್ರೂಪ್ ವೈದ್ಯರ ಪಾಲಿಗೆ ಹೃದಯದಂತಿತ್ತು. ಆದರೆ, ಸರ್ಕಾರ ಇಂಟರ್ನೆಟ್, ವಾಟ್ಸಪ್ ಸೇವೆಗಳನ್ನು ಸ್ಥಗಿ ತಗೊಳಿಸಿರುವ ಪರಿಣಾಮ ಈ ಗ್ರೂಪ್ ಕಳೆದ ಐದು ತಿಂಗಳಲ್ಲಿ ಸಂಪೂರ್ಣ ನಿಷ್ಕ್ರಿಯವಾಗಿದೆ. ಹೀಗಾಗಿ ವೈದ್ಯರಿಗೆ ವಿಚಾರ ವಿನಿಮಯ ಮಾಡಿಕೊಳ್ಳುವುದು, ಸಲಹೆ ಸೂಚನೆಗಳನ್ನು ನೀಡುವುದು ದುಸ್ಥರವಾಗಿದೆ.
ವೈದ್ಯರ ಪಾಡು ಇದಾದರೆ, ಇನ್ನು ಕಳೆದ ಗುರುವಾರ ವಿದ್ಯಾರ್ಥಿಗಳ ಪಾಡಂತೂ ಹೇಳತೀರದಂತಾಗಿತ್ತು. ಹತ್ತನೇ ತರಗತಿ ಫಲಿತಾಂಶ ಅಂದು ಪ್ರಕಟವಾಗಿತ್ತು. ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಬೆರಳತುದಿಯಲ್ಲೇ ಅಂದರೆ ಮೊಬೈಲ್ ನಲ್ಲಿಯೇ ರಿಸಲ್ಟ್ ನೋಡಲು ಅವಕಾಶವಿತ್ತು. ಆದರೆ, ಕೇಂದ್ರ ಸರ್ಕಾರ ಇಂಟರ್ನೆಟ್ ಸ್ಥಗಿತಗೊಳಿಸಿ ಈ ಅವಕಾಶವನ್ನು ಕಿತ್ತುಕೊಂಡಿದೆ. ಅಂದು ಲಕ್ಷಾಂತರ ಮಕ್ಕಳು ದೂರವಿರುವ ಶಾಲೆಗಳಿಗೆ ಎಡತಾಕಿ ರಿಸಲ್ಟ್ ನೋಡಿಕೊಂಡು ಬರಬೇಕಾಯಿತು. ಇದರಿಂದ ವಿದ್ಯಾರ್ಥಿಗಳು ಪಡಿಪಾಟಲು ಪಡುವಂತಾಯಿತು.
ಇದಲ್ಲದೇ, ವೃದ್ಧ ದಂಪತಿ ದೂರದೂರಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಮೊಬೈಲ್ ಮತ್ತು ಇಂಟರ್ನೆಟ್ ಇದ್ದಿದ್ದರಿಂದ ತಮ್ಮ ಮಕ್ಕಳು ಮತ್ತು ಕುಟುಂಬ ಸದಸ್ಯರೊಂದಿಗೆ ವಿಡೀಯೋ ಕಾಲ್ ಮೂಲಕ ಪ್ರತಿದಿನ ಮಾತನಾಡಿಕೊಂಡು ಸಂತಸಪಡುತ್ತಿದ್ದರು. ಆದರೆ, ಕಳೆದ ಆಗಸ್ಟ್ ನಿಂದ ಈ ಸೌಲಭ್ಯದಿಂದ ವಂಚಿತರಾಗಿದ್ದು, ಸಂಬಂಧಿಕರ ಸಂಪರ್ಕವನ್ನೇ ಕಡಿದುಕೊಂಡು ಪರಿತಪಿಸುತ್ತಿದ್ದಾರೆ.
ಹೀಗೆ ಹತ್ತು ಹಲವಾರು ಸಂಕಷ್ಟದ ಉದಾಹರಣೆಗಳು ಜಮ್ಮು ಮತ್ತು ಕಾಶ್ಮೀರದಲ್ಲಿವೆ. ಕಳೆದ ಆರು ವರ್ಷಗಳಿಂದಲೂ ಡಿಜಿಟಲ್ ಇಂಡಿಯಾ ಜಪ ಮಾಡುತ್ತಾ ಬಂದಿರುವ ಬಿಜೆಪಿ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಪಾಲಿಗೆ ಮಾತ್ರ ಸಿಂಹಸ್ವಪ್ನವಾಗಿ ಕಾಡುತ್ತಿದೆ. ದೇಶದ ಕಿರೀಟದಂತಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಜಿಟಲ್ ಇಂಡಿಯಾಗೆ ಅರ್ಥವೇ ಇಲ್ಲದಂತಾಗಿರುವುದು ದುರದೃಷ್ಟಕರ.