ಭದ್ರಾವತಿ ಎಂದರೆ ಜಗತ್ತಿಗೆ ಮೊದಲ ಸಾರ್ವಜನಿಕ ವಲಯದ ಉಕ್ಕು ಹಾಗೂ ಕಬ್ಬಿಣ ಕಾರ್ಖಾನೆ ಕೊಟ್ಟ ನಾಡು. ದೇಶದ ಕೈಗಾರಿಕಾ ಕ್ರಾಂತಿಯ ಉಜ್ವಲ ಚರಿತ್ರೆ, ರಾಜ್ಯದ ಮೊದಲ ಕೈಗಾರಿಕಾ ನಗರ, ಎಲ್ಲದಕ್ಕೂ ಮಿಗಿಲಾಗಿ ಸರ್ ಎಂ ವಿಶ್ವೇಶ್ವರಯ್ಯನವರ ಚಾಕಚಕ್ಷತೆಗೆ ಹಾಗೂ ಮೈಸೂರು ಮಹಾರಾಜರ ಉದಾರ ದೇಣಿಗೆಯ ದ್ಯೋತಕ, ಸಾವಿರಾರು ನೌಕರರನ್ನು ಸಲಹಿ, ಇಂದಿಗೂ ಸಲಹುತ್ತಾ ಬಂದಿರುವ ಈ ಕಾರ್ಖಾನೆ ಸಂಪೂರ್ಣವಾಗಿ ಮುಚ್ಚುವ ಹಂತಕ್ಕೆ ಬಂದಿದೆ. ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಭಾರತೀಯ ಉಕ್ಕು ಪ್ರಾಧಿಕಾರ) ನಾಡಿನ ಹೆಮ್ಮೆಯ ಕಾರ್ಖಾನೆ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಹಾಗೂ ಉಕ್ಕು ಕಾರ್ಖಾನೆಯನ್ನು ಮಾರಾಟ ಮಾಡಲು ಟೆಂಡರ್ ಹೊರಡಿಸಿದೆ. ಇದರ ಅರ್ಥ ಸರ್ಕಾರ ಬಂಡವಾಳ ಹಿಂತೆಗೆದು ಖಾಸಗಿಯವರಿಗೆ ವಹಿಸಿಕೊಡಲು ನಿರ್ಧರಿಸಿದೆ. ಅಂದರೆ, ನಿಜ ಅರ್ಥದಲ್ಲಿ ಖಾಸಗೀಕರಣ. ಕಾರ್ಖಾನೆ ನಡೆಸಲು ಯಾರೂ ಟೆಂಡರ್ ಪಡೆಯಲಿಲ್ಲ ಅಂದರೆ ಲಾಕ್‌ಔಟ್ ಮಾಡಲಾಗುತ್ತದೆ. ಅದಿರು ಸಂಪನ್ನವಾಗಿದ್ದ ಈ ಕಾರ್ಖಾನೆ ಇಂದಿಗೂ ಸುಸ್ಥಿತಿಯಲ್ಲಿದೆ. ನಿಪುಣ ಉದ್ಯೋಗಿಗಳಿದ್ದಾರೆ, ಅದಿರಿಗೂ ಕೊರತೆ ಇಲ್ಲ ಆದರೆ ರಾಜಕಾರಣಿಗಳ ಹಿತಾಸಕ್ತಿ ಕೊರತೆ, ಕೇಂದ್ರ ಸರ್ಕಾರಕ್ಕೆ ಅಂಟಿಕೊಂಡಿರುವ ಖಾಸಗೀಕರಣವೆಂಬ ಮೋಹಕ್ಕೆ ಕಾರ್ಖಾನೆ ಬಲಿಯಾಗುತ್ತಿದೆ.
ರಾಜಕಾರಣಿಗಳೇ ಮುಗಿಸಿದ್ರು:
ಶಿವಮೊಗ್ಗ ಬಿಜೆಪಿ ಸಂಸದ ಬಿ ವೈ ರಾಘವೇಂದ್ರ ಹಾಗೂ ಇದರ ಪೂರ್ವದಲ್ಲಿ ಸಂಸದರಾಗಿದ್ದ ಇವರ ತಂದೆ ಬಿ ಎಸ್ ಯಡಿಯೂರಪ್ಪ ಈ ಕಾರ್ಖಾನೆ ಉಳಿಸಿಕೊಳ್ಳಲು ಗಟ್ಟಿದನಿಯನ್ನೇ ಪ್ರದರ್ಶಿಸಲಿಲ್ಲ. ಎರಡು ದಶಕಗಳ ಈಚೆಗೆ ಯಾವೊಬ್ಬ ಸಂಸದನೂ ಕೂಡ ಸಂಸತ್‌ನಲ್ಲಿ ಈ ಬಗ್ಗೆ ಹೋರಾಟ ನಡೆಸಲಿಲ್ಲ. ಖಾಸಗೀಕರಣ ಒಳ್ಳೆಯದು ಎಂದು ನಯವಾಗಿ ಸಂಸದ ರಾಘವೇಂದ್ರ ಜಾರಿಕೊಳ್ಳುತ್ತಿದ್ದಾರೆ. ಆದರೆ, ಚುನಾವಣಾ ಪೂರ್ವದಲ್ಲಿ ಅವರು ಇದನ್ನೂ ಅಜೆಂಡಾ ಮಾಡಿಕೊಂಡಿದ್ದರು. ಎರಡು ವರ್ಷಗಳ ಹಿಂದೆ ಬಿ ಎಸ್ ಯಡಿಯೂರಪ್ಪನವರ ಮನವಿ ಮೇರೆಗೆ ಭದ್ರಾವತಿಗೆ ಬಂದಿದ್ದ ಅಂದಿನ ಉಕ್ಕು ಖಾತೆ ಸಚಿವ ಚೌಧರಿ ಬೀರೇಂದ್ರ ಸಿಂಗ್ ತಜ್ಞರ ಸಮಿತಿ ಕಳಿಸುವುದಾಗಿ ಹೇಳಿದರು. ಕಾರ್ಖಾನೆಯನ್ನು ಉಳಿಸಲು ಬಹಳ ಆಸಕ್ತಿ ಹೊಂದಿದ್ದ ಅವರು ಇದು ದೇಗುಲ ಎಂದು ಹಾಡಿ ಹೊಗಳಿದ್ದರು, ಸಮಿತಿಯನ್ನೂ ಕಳಿಸಿದ್ದರು. ಆದರೆ, ಅವರು ತಮ್ಮ ಮಂತ್ರಿಸ್ಥಾನ ತ್ಯಜಿಸುವುದರೊಂದಿಗೆ ಕಾರ್ಖಾನೆ ಪುನಶ್ಚೇತನದ ಕೊನೆಯ ಆಸೆಯೂ ಕಮರಿಹೋಯ್ತು.
ಭದ್ರಾವತಿ ಕಾರ್ಖಾನೆ ಜೊತೆಗೆ ಪಶ್ಚಿಮ ಬಂಗಾಳದ ದುರ್ಗಾಪುರ ಹಾಗೂ ತಮಿಳುನಾಡಿನ ಸೇಲಂ ಕಾರ್ಖಾನೆ ಮಾರಾಟಕ್ಕೂ ಟೆಂಡರ್ ಕರೆಯಲಾಗಿದೆ. ಆದರೆ, ತಮಿಳುನಾಡಿನ ರಾಜಕಾರಣಿ ಪೆರಂಬದೂರಿನ ಸಂಸದ ಟಿಆರ್ ಬಾಲು ಎರಡು ದಿನಗಳ ಕಾಲ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕಾರ್ಖಾನೆ ಖಾಸಗೀಕರಣಕ್ಕೆ ಬಿಡುವುದಿಲ್ಲ ಎಂದು ಹೇಳಿದರು. ಆ ಗತ್ತು ನಮ್ಮಲ್ಲಿಲ್ಲ ಎಂಬುದು ಕಾರ್ಖಾನೆ ಕಾರ್ಮಿಕರ ಸಂಘಟಕರಾದ ಅಮೃತ್ ಅವರ ಕೊರಗು.


ಟೆಂಡರ್ ಎಂಬುದು ಮುಗಿಸುವ ಪ್ರಕ್ರಿಯೆ:
ಉಕ್ಕು ಪ್ರಾಧಿಕಾರ ಈ ಕಾರ್ಖಾನೆಗೆ ಟೆಂಡರ್ ಕರೆದಿದ್ದಾರೆ. ಈಗಿನ ಮಾರುಕಟ್ಟೆ ಸ್ಥಿತಿ ನೋಡಿದರೆ ಯಾರೂ ಕೂಡ ಬಂಡವಾಳ ಹೂಡಲು ಮುಂದೆ ಬರುವುದಿಲ್ಲ. ಒಂದು ವೇಳೆ ಬಂದರೆ ಈಗಿರುವ ಗುತ್ತಿಗೆ ನೌಕರರು ಬೀದಿಪಾಲಾಗುತ್ತಾರೆ. ಉಳಿದವರನ್ನು ಬೇರೆಡೆ ಹಾಕ್ತಾರೆ. ಸ್ಥಳೀಯರಿಗೆ ಉದ್ಯೋಗ ನೀಡ್ತಾರೆ ಎಂಬ ಯಾವುದೇ ಭರವಸೆ ಇಲ್ಲ. ಕಾರ್ಖಾನೆ ಎಷ್ಟು ದಿನ ನಡೆಸುತ್ತಾರೆಂಬುದು ಖಾತ್ರಿ ಇರುವುದಿಲ್ಲ. ಇಲ್ಲಿರುವ ಸಮುಚ್ಛಯಗಳು ಸಮುದಾಯ ಭವನಗಳಾದಿಯಾಗಿ ಖಾಸಗಿ ಸುಪರ್ದಿಗೆ ಬರುತ್ತವೆ. ಈಗಿರುವ ಸ್ಥಿತಿಯಲ್ಲಿ ಟೆಂಡರ್ ಆಕಾಂಕ್ಷಿಗಳು ಕಡಿಮೆ. ನಿಯಮಾವಳಿಗಳ ಪ್ರಕಾರ ಮೂರು ಪ್ರಕಟಣೆಗಳ ನಂತರ ಯಾರೂ ಬಾರದಿದ್ದರೆ ಕಾರ್ಖಾನೆಯನ್ನು ಮುಚ್ಚಲಾಗುತ್ತದೆ. ಅದಕ್ಕೆ ನಿದರ್ಶನ ಇದೇ ಭದ್ರಾವತಿಯಲ್ಲಿರುವ ಮೈಸೂರ್ ಪೇಪರ್ ಮಿಲ್. ಅಲ್ಲಿಗೆ 260 ಕಾಯಂ ನೌಕರರು 70 ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ 1,600 ಗುತ್ತಿಗೆ ನೌಕರರ ಜೀವನ ಡೋಲಾಯಮಾನವಾಗಲಿದೆ. ಬಿಲಾಯ್ ಉಕ್ಕು ಕಾರ್ಖಾನೆ ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಪೋಷಿಸುತ್ತಾ ಲಾಭದಲ್ಲಿದೆ. ಇದೊಂದು ಅದ್ಭುತ ನಿದರ್ಶನ. ಇದೇ ತರಹ ನಮ್ಮೂರಿನ ಕಾರ್ಖಾನೆಯೂ ಆಗಿರಬೇಕಿತ್ತು ಎಂಬುದು ನಿವೃತ್ತ ಉದ್ಯೋಗಿಗಳ ಆಶಯ.
ಕಾರ್ಖಾನೆ ಹುಟ್ಟು ಹಾಗೂ ಬೆಳವಣಿಗೆ:
ದಟ್ಟ ಕಾನನ, ಬೇಸಿಗೆ ಕಾಡ್ಗಿಚ್ಚಿಗೆ ಭಸ್ಮವಾಗುವ ಮರಗಿಡಗಳು, ಭದ್ರಾ ತೀರದ ಬೆಂಕಿಪುರ ಎಂಬುದು ಕಾಲಕ್ರಮೇಣ ಭದ್ರಾವತಿಯೆಂದು ಹೆಸರಾಯ್ತು. ಅಕ್ಕಪಕ್ಕ ಸುಣ್ಣದ ಕಲ್ಲು, ಬೆಣಚುಗಲ್ಲು, ತುಸುದೂರದ ಕೆಮ್ಮಣ್ಣು ಗುಂಡಿಯಲ್ಲಿ ಹೇರಳವಾಗಿ ಸಿಗುತ್ತಿದ್ದ ಕಬ್ಬಿಣದ ಅದಿರು. ಇದನ್ನೆಲ್ಲಾ ಗಮನಿಸಿದ್ದ ಅಂದಿನ ಮೈಸೂರು ಸಂಸ್ಥಾನದ ದಿವಾನರಾದ ಸರ್ ಎಂ ವಿಶ್ವೇಶ್ವರಯ್ಯ ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಇಲ್ಲೊಂದು ಕಾರ್ಖಾನೆ ಸ್ಥಾಪಿಸಿ ಜನರಿಗೆ ಉದ್ಯೋಗ ನೀಡೋಣ ಎಂದು ಹೇಳಿದ್ದರು. ಆಧುನಿಕತೆಗೆ ತೆರೆದುಕೊಂಡಿದ್ದ ಸಂಸ್ಥಾನ ಜನ ಸುಖಕ್ಕಾಗಿ ಏನೂ ಬೇಕಾದರೂ ಮಾಡಲು ಸಿದ್ಧವಾಗಿತ್ತು, ಹೀಗೆ 1918ರಲ್ಲಿ ಈ ಕಾರ್ಖಾನೆಯನ್ನು ಸ್ಥಾಪಿಸಲಾಯಿತು. ಮುಂದೆ 1923ರಲ್ಲಿ ಸ್ಥಾವರ ಆರಂಭವಾಯಿತು. ತುಂಬಾ ಕುತೂಹಲಕಾರಿ ಎಂದರೆ ಇದ್ದಿಲು ಊದು ಕುಲುಮೆ ಮೂಲಕ ಬೀಡು ಕಬ್ಬಿಣವನ್ನ ತಯಾರು ಮಾಡಲು ಶುರುಮಾಡಿದ್ದರು. ಈ ಕಬ್ಬಿಣವನ್ನು ಅಮೆರಿಕಾಗೆ ರಫ್ತು ಕೂಡ ಮಾಡಿರುವ ದಾಖಲೆಗಳಿವೆ. ಕಾಲಕ್ರಮೇಣ ತಯಾರಿಕೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ 1936ರಲ್ಲಿ ಮೆದು ಉಕ್ಕು ತಯಾರಿಸಲಾರಂಬಿಸಲಾಯಿತು. ಮೈಸೂರ್ ಐರನ್ ಫ್ಯಾಕ್ಟರಿ ಕೂಡ ಹೆಸರು ಬದಲಿಸಿಕೊಂಡಿತು. 1962ರಲ್ಲಿ ಕಾರ್ಖಾನೆ ನಿಯಮಿತ ( ಲಿಮಿಟೆಡ್) ಸಂಸ್ಥೆಯಾಯ್ತು. 1976ರಲ್ಲಿ ಇದರ ಕರ್ತೃ ಹೆಸರನ್ನೇ ನಾಮಕರಣ ಮಾಡಲಾಯಿತು ನಂತರ ಇದು ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್ ಆಗಿ ಬದಲಾಯ್ತು.

ಕೆಮ್ಮಣ್ಣುಗುಂಡಿಯಿಂದ ರಮಣದುರ್ಗದವರೆಗೆ:
1923ರಿಂದಲೂ ಕೆಮ್ಮಣ್ಣುಗುಂಡಿಯಿಂದಲೇ ಅದಿರನ್ನು ಸ್ವಯಂಚಾಲಿತ ರೋಪ್ ವೇ ಮೂಲಕ ಸಾಗಿಸಿ ನಂತರ ಮೀಟರ್‌ಗೇಜ್ ಗೂಡ್ಸ್ ರೈಲಿನಲ್ಲಿ ಕಾರ್ಖಾನೆಗೆ ಸಾಗಿಸಲಾಗುತ್ತಿತ್ತು. ಆದರೆ ಅರಣ್ಯ ಇಲಾಖೆ 2004ರಲ್ಲಿ ಪರವಾನಗಿ ನವೀಕರಣ ಮಾಡದೇ ಗಣಿಗಾರಿಕೆಯನ್ನು ನಿಲ್ಲಿಸಿ ಬಿಟ್ಟಿತು. ಸ್ವಂತ ಗಣಿಯಿಲ್ಲದೇ ಖಾಸಗಿಯವರಿಗೆ ಅದಿರಿಗಾಗಿ ದುಂಬಾಲು ಬಿದ್ದ ಕಾರ್ಖಾನೆಗೆ ಕೆಟ್ಟ ದಿನಗಳು ಆರಂಭವಾದವು. ಆಗ ದುಬಾರಿ ವೆಚ್ಚದಲ್ಲಿ ಉಕ್ಕು ತಯಾರು ಮಾಡಬೇಕಾಯ್ತು. ಅಂದಿನಿಂದ ಇಂದಿನವರೆಗೆ ಕಾರ್ಖಾನೆ ನಿರಂತರವಾಗಿ ವಾರ್ಷಿಕ ನೂರೈವತ್ತು ಕೋಟಿ ನಷ್ಟಕ್ಕೆ ಸಿಲುಕಿಕೊಳ್ಳುತ್ತಾ ಬಂದಿತು. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಂಡೂರಿನಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದರೂ ಖಾಸಗಿ ವ್ಯಕ್ತಿಯ ದೂರಿನಿಂದ ಅದು ಕಡತದಲ್ಲೇ ಉಳಿಯಿತು. ಮುಂದೆ ಬಿಎಸ್ ಯಡಿಯೂರಪ್ಪನವರೂ ಕೂಡ ಸಂಡೂರು ತಾಲೂಕಿನ ರಮಣದುರ್ಗದಲ್ಲಿ ಅನುಮತಿ ನೀಡಿದರೂ ಕಾರ್ಯರೂಪಕ್ಕೆ ಬರಲಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ಈ ಎರಡೂ ಪ್ರದೇಶಗಳನ್ನು ಬಳಸಿಕೊಳ್ಳಲು ಕೇಂದ್ರಕ್ಕೆ ಮನವಿ ಮಾಡಿದರು ಆದರೆ ಕೇಂದ್ರ ಸರ್ಕಾರ ಕಾರ್ಖಾನೆ ಉಳಿಸಲು ಉತ್ಸಾಹ ತೋರಲಿಲ್ಲ.
ನೂರೆಂಟು ವಿಘ್ನಗಳು ನಷ್ಟಕ್ಕೆ ತಳ್ಳಿದವು:
ಸೆಂಟ್ರಲ್ ಮಾರ್ಕೆಟಿಂಗ್ ಆರ್ಗನೈಜೇಷನ್ ಮಾರ್ಕೆಟಿಂಗ್ ಗೆ ಸರ್ಕಾರ ಉಕ್ಕು ಮಾರಾಟದ ಜವಾಬ್ದಾರಿ ವಹಿಸಿದ ಮೇಲೆ ಇಲ್ಲಿನ ಸರಕು ಸಾಕಷ್ಟು ಉಳಿಯಿತು. ಆಧುನೀಕರಣಕ್ಕೆ ತೆರೆದುಕೊಳ್ಳದೇ -ಉತ್ಪಾದನಾ ವೆಚ್ಚ ಏರತೊಡಗಿತು. ಬಹಳ ಮುಖ್ಯವಾಗಿ ಆಳುವ ವರ್ಗಕ್ಕೆ ಆಸಕ್ತಿ ಕೊರತೆ ಇವೆಲ್ಲಾ ಭದ್ರಾವತಿಯ ಭವ್ಯ ಪರಂಪರೆಯನ್ನ ಚರಿತ್ರೆಯ ಪುಟದಲ್ಲಿ ಸೇರಿಸಲು ತವಕಿಸುತ್ತಿವೆ. ಕಾರ್ಮಿಕರ ಸಂಘ ಮಾತ್ರ ಮರುಭೂಮಿಯಲ್ಲಿ ಒರತೆ ಹುಡುಕುವಂತೆ ನೂರು ದಿನಗಳ ಹೋರಾಟ ಆರಂಭಿಸಿ ದಿನಾ ಗೇಟ್ ಮುಂದೆ ಪ್ರತಿಭಟನೆ ಮಾಡುತ್ತಿದೆ. ಜಿಲ್ಲೆಯ ಸಂಸದರು ಲೋಕಸಭೆಯಲ್ಲಿ ವಿಐಎಸ್‌ಎಲ್ ಹೆಸರು ಪ್ರಸ್ತಾಪಿಸಿದ್ದೇ ದೊಡ್ಡ ಸಾಧನೆ ಎಂಬಂತೆ, ಅವರ ಭಾಷಣದ ವಿಡಿಯೋ ಎಲ್ಲೆಡೆ ಹರಿದಾಡಿದ್ದವು, ಚುನಾವಣೆ ಅಜೆಂಡವೂ ಆಗಿದ್ದ ಕಾರ್ಖಾನೆಯ ಬಗ್ಗೆ ಏನಾಯ್ತು ಎಂಬ ವಿವರಣೆಯನ್ನೂ ಸಂಸದರು ದಿಲ್ಲಿಯ ತಮ್ಮದೇ ಪಕ್ಷದ ಮುಖಂಡರಿಗೆ ನೀಡಲಿಲ್ಲ.