ಮಾಧ್ಯಮಗಳಿಗೆ ಜಾಹೀರಾತು ಆದಾಯ ಗಣನೀಯವಾಗಿ ಇಳಿಮುಖವಾಗುತ್ತಿರುವ ಈ ಹೊತ್ತಲ್ಲೇ ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನ ಎಂಬುದು ಅವುಗಳ ಗಾಯದ ಮೇಲೆ ಬರೆ ಎಳೆದಂತೆ ಬಂದಿದೆ. ಇತ್ತೀಚೆಗೆ ರಾಷ್ಟಮಟ್ಟದ ಹಾಗು ರಾಜ್ಯಮಟ್ಟದ ಪತ್ರಿಕೆಗಳ ಪುಟಗಳ ಸಂಖ್ಯೆಯಲ್ಲಿನ ಕಡಿತ, ಮಾಧ್ಯಮಗಳಿಗೂ ಆರ್ಥಿಕ ಹಿಂಜರಿತದ ಹೊಡೆತದ ಬಿಸಿ ತಾಕುತ್ತಿದೆ ಎಂಬುದರ ಮುನ್ಸೂಚನೆ ನೀಡಿತ್ತು. ಜಾಕೆಟ್ ಪೇಜ್‍ನಲ್ಲಿ ಬರುತ್ತಿದ್ದ ಆಟೋಮೊಬೈಲ್ ಕಂಪನಿಗಳ ಜಾಹೀರಾತು, ಪುಟಗಟ್ಟಲೆ ಇರುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮದ ಜಾಹೀರಾತುಗಳು ವೃತ್ತಪತ್ರಿಕೆಯಲ್ಲಿ ಇತ್ತೀಚೆಗೆ ನೋಡಿದ್ದು ನೆನಪಾಗುವುದೇ ಇಲ್ಲ ಎಂಬ ಸ್ಥಿತಿಗೆ ತಲುಪಿಬಿಟ್ಟಿದೆ. ಈ ಹೊತ್ತಿನಲ್ಲಿ ಕರ್ನಾಟಕದ ಪ್ರಮುಖ ಬ್ಯಾಂಕುಗಳ ವಿಲೀನವಾದರೆ, ಮಾಧ್ಯಮಗಳ ಮುಖ್ಯ ಆದಾಯದ ಮೂಲವಾಗಿರುವ ಬ್ಯಾಂಕುಗಳ ಜಾಹೀರಾತುಗಳು ಸ್ಥಗಿತಗೊಂಡರೆ, ಪತ್ರಿಕೆಗಳ ಸ್ಥಿತಿ ಏನು ಎಂಬ ಭೀತಿ ಮಾಧ್ಯಮ ವಲಯವನ್ನು ಕಾಡಲಾರಂಭಿಸಿದೆ.
ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಹೊಸ ಆವೃತ್ತಿ ಆರಂಭಿಸಲು ಮಾಧ್ಯಮಗಳ ಮೊದಲ ಆಯ್ಕೆ ಮಂಗಳೂರಾಗಿತ್ತು. ಸುಶಿಕ್ಷಿತರ ಸಂಖ್ಯೆ ಹೆಚ್ಚಾಗಿರುವ ಕಾರಣ ಓದುಗರ ಸಂಖ್ಯೆ ಹೆಚ್ಚು ಎನ್ನುವ ಅಂಶ ಒಂದಾದರೆ, ಅತಿ ದೊಡ್ಡ ಜಾಹೀರಾತು ಮಾರುಕಟ್ಟೆ ಎನ್ನುವ ಉದ್ಧೇಶವೂ ಇತ್ತು. `ಬ್ಯಾಂಕುಗಳ ತೊಟ್ಟಿಲು’ ಎಂಬ ಹಿರಿಮೆಯ ಜೊತೆಗೆ, ಇಲ್ಲಿನ ಕೈಗಾರಿಕೆಗಳು ಹಾಗು ಶೈಕ್ಷಣಿಕ ಸಂಸ್ಥೆಗಳ ಜಾಹೀರಾತುಗಳ ಆದಾಯ ರಾಷ್ಟ್ರಮಟ್ಟದ ಪತ್ರಿಕೆಗಳು ತಮ್ಮ ಆವೃತ್ತಿಯನ್ನು ಇಲ್ಲಿ ಸ್ಥಾಪಿಸುವಂತೆ ಪ್ರೇರೇಪಿಸಿದ್ದವು. ಬಹುತೇಕ ಎಲ್ಲಾ ರಾಷ್ಟ್ರ ಹಾಗು ರಾಜ್ಯ ಮಟ್ಟದ ಪತ್ರಿಕೆಗಳ ಆವೃತ್ತಿಗಳು ಇಲ್ಲಿರುವುದು ಮಾತ್ರವಲ್ಲದೆ, ಅನೇಕ ಸ್ಥಳೀಯ ಪತ್ರಿಕೆಗಳೂ ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಬ್ಯಾಂಕಿಂಗ್, ಶಿಕ್ಷಣ, ರಿಯಲ್ ಎಸ್ಟೇಟ್, ಕೈಗಾರಿಕೆ, ಧಾರ್ಮಿಕತೆ ಹೀಗೆ ನಾನಾ ಕಾರಣಗಳಿಗಾಗಿ ಮಂಗಳೂರು ಆವೃತ್ತಿಯ ಪತ್ರಿಕೆಗಳಿಗೆ ಜಾಹೀರಾತುಗಳಿಗೆ ಎಂದೂ ಕೊರತೆ ಇರಲಿಲ್ಲ. ಆದರೆ ಇದೀಗ ಮೊದಲ ಬಾರಿಗೆ, ಇಲ್ಲಿ ಪತ್ರಿಕೆಗಳು ಜಾಹೀರಾತು ಸಮಸ್ಯೆ ಎದುರಿಸಲಾರಂಭಿಸಿವೆ. ಬ್ಯಾಂಕ್ ವಿಲೀನ ಪ್ರಕ್ರಿಯೆ ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ. ಮಾಧ್ಯಮ ಮಿತ್ರರನ್ನು ಆಫ್ ದಿ ರೆಕಾರ್ಡ್ ಮಾತುಕತೆಗೆ ಎಳೆದರೆ, ಈ ಸಮಸ್ಯೆಯ ಚಿತ್ರಣ ದೊರಕುತ್ತದೆ.

ಆಡ್ ಐಡಿಯಾ ಕನ್ಸ್‍ಲ್ಟಿಂಗ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವೇಣು ಶರ್ಮಾ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ರಿಕೆಗಳು ಪಡೆದುಕೊಳ್ಳುತ್ತಿದ್ದ ಜಾಹೀರಾತುಗಳಲ್ಲಿ ಶೇಕಡಾ 30 ಪ್ರತಿಶತ ಬ್ಯಾಂಕುಗಳಾದ್ದಾಗಿತ್ತು. ಇನ್ನುಳಿದ 30 ಶೇಕಡಾ ರಿಟೇಲ್ ಜಾಹೀರಾತುಗಳು ಮತ್ತು ಇತರ ಶೇಕಡಾ 30 ರಾಷ್ಟ್ರೀಯ ಜಾಹೀರಾತುಗಳ ಪಾಲು. ಶೈಕ್ಷಣಿಕ ಜಾಹೀರಾತು ಕೇವಲ ಎಸ್‍ಎಸ್‍ಎಲ್‍ಸಿ, ಪಿಯುಸಿ ಫಲಿತಾಂಶಗಳ ಸಂದರ್ಭಕ್ಕಷ್ಟೇ ಸೀಮಿತವಾಗಿತ್ತು (ಏಪ್ರಿಲ್ ನಿಂದ ಜೂನ್ ಕೊನೆಯವರೆಗೆ). ಅದರ ನಂತರ ಸಿಕ್ಕಿದರೆ ಅದು ಪದವಿಗ್ರಹಣ ಸಮಾರಂಭಗಳಿಗೆ ಸೀಮಿತವಾಗಿತ್ತು. ನೀಟ್ ಮೂಲಕ ವೈದ್ಯಕೀಯ ಸೀಟುಗಳನ್ನು ಹಂಚಿಕೆ ಮಾಡಲು ಆರಂಭಿಸಿದ ನಂತರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜುಗಳ ಜಾಹೀರಾತುಗಳೂ ನಿಂತು ಹೋಗಿದ್ದವು.
“ಆದರೆ ಸುಮಾರು ಒಂದೂವರೆ ಎರಡು ವರ್ಷಗಳ ಹಿಂದಿನಿಂದಲೇ ಬ್ಯಾಂಕುಗಳು ತಮ್ಮ ಜಾಹೀರಾತು ಪ್ರಮಾಣವನ್ನು ಕಡಿತಗೊಳಿಸಿದ್ದವು. ವಾಹನ ಸಾಲ, ಗೃಹ ಸಾಲ, ವೈಯಕ್ತಿಕ ಸಾಲ…ಈ ರೀತಿಯ ಜಾಹೀರಾತುಗಳು ಬಹುತೇಕ ಸ್ಥಗಿತಗೊಂಡಿತ್ತು. ಇತ್ತೀಚೆಗೆ ಪತ್ರಿಕೆಗಳಿಗೆ ಬ್ಯಾಂಕಿನಿಂದ ದೊರಕುತ್ತಿದ್ದ ಜಾಹೀರಾತೆಂದರೆ ಅದು ಹೆಚ್ಚಾಗಿ ಟೆಂಡರ್‍ಗಳು ಮತ್ತು ನೋಟಿಫಿಕೇಶನ್‍ಗಳದ್ದು. ನಿಯಮದ ಪ್ರಕಾರ ಸ್ಥಳೀಯ ಭಾಷಾ ಪತ್ರಿಕೆ ಸೇರಿದಂತೆ ಕನಿಷ್ಠ ಎರಡು ಪತ್ರಿಕೆಗಳಲ್ಲಿ ಈ ಜಾಹೀರಾತನ್ನು ಪ್ರಕಟಿಸಬೇಕು. ಹೀಗಾಗಿ ಬ್ಯಾಂಕುಗಳು ಪತ್ರಿಕೆಗಳನ್ನು ಅವಲಂಬಿಸಿದ್ದವು. ಆದರೂ ಈ ಜಾಹೀರಾತಿನ ಪ್ರಮಾಣವೇ ಪತ್ರಿಕೆಗಳಿಗೆ ಶೇಕಡಾ 30 ರಷ್ಟಿತ್ತು” ಎನ್ನುತ್ತಾರೆ ವೇಣು ಶರ್ಮಾ.

ಇನ್ನೊಬ್ಬ ಪತ್ರಕರ್ತರ ಪ್ರಕಾರ ಇತ್ತೀಚೆಗೆ ಬ್ಯಾಂಕುಗಳು ಇ ನೋಟಿಫಿಕೇಶನ್, ಇ-ಟೆಂಡರ್‍ನ್ನು ಕರೆಯಲಾರಂಭಿಸಿವೆ. ಅದನ್ನು ಬ್ಯಾಂಕ್ ನ ವೆಬ್‍ಸೈಟ್‍ನಲ್ಲಿಯೇ ಪ್ರಕಟಿಸುತ್ತವೆ. ಹಾಗಾಗಿ ಪತ್ರಿಕೆಗಳ ಮೇಲೆ ಬ್ಯಾಂಕುಗಳ ಅವಲಂಬನೆ ಕಡಿಮೆಯಾಗಿದೆ. ಈ ಬೆಳವಣಿಗೆಯೂ ಪತ್ರಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ.
ಈಗ ಬ್ಯಾಂಕುಗಳು ಜಾಹೀರಾತು ಪ್ರಸರಣಕ್ಕಾಗಿ ತಮ್ಮ ಮಾಧ್ಯಮವನ್ನೂ ಬದಲಿಸಿದೆ. ಗ್ರಾಹಕರಿಗೆ ನೇರವಾಗಿ ಕರೆ ಮಾಡಲಾಗುತ್ತದೆ ಇಲ್ಲವೇ ಮೊಬೈಲ್ ಮೂಲಕ ಸಂದೇಶಗಳನ್ನು ಕಳುಹಿಸಲಾಗುತ್ತದೆ. ಇಲ್ಲವೇ ಬ್ಯಾಂಕಿನ ಸಿಬ್ಬಂದಿಗಳೇ ಗ್ರಾಹಕರನ್ನು ವೈಯಕ್ತಿಕವಾಗಿ ಭೇಟಿ ಮಾಡುತ್ತಾರೆ. ಇದಲ್ಲದೆ ಇಂಟರ್ ನೆಟ್ ಬ್ಯಾಂಕಿಂಗ್ ಬಂದ ನಂತರ ಬ್ಯಾಂಕ್‍ನ ಸಂಪೂರ್ಣ ಕಾರ್ಯ ವೈಖರಿಯೇ ಬದಲಾಗಿದೆ. ಇದಲ್ಲದೆ, ಜಾಹೀರಾತುಗಳನ್ನು ಎಷ್ಟು ಕೊಡಬೇಕು, ಹೇಗೆ ಕೊಡಬೇಕು, ಯಾರಿಗೆ ಕೊಡಬೇಕು ಎಂಬುದನ್ನು ಜಾಹೀರಾತು ಕೌನ್ಸಿಲ್ ನಿರ್ಧರಿಸುತ್ತದೆಯೇ ಹೊರತು ಮೊದಲಿನ ಹಾಗೆ ಲಾಬಿ ಅಸಾಧ್ಯ ಎಂಬುದು ವೇಣು ಶರ್ಮಾರ ಅಭಿಪ್ರಾಯ.

“ಮೊದಲು ಮಂಗಳೂರಿನಲ್ಲಿ ಕಾರ್ಪೋರೇಶನ್ ಬ್ಯಾಂಕ್ ಥರದ ಬ್ಯಾಂಕುಗಳು ಅವರ ಬ್ಯಾಂಕಿನ ಹಣಕಾಸು ಸ್ಥಿತಿಗತಿಯ ವರದಿಯನ್ನು ಪ್ರಕಟಿಸಲು 3 ತಿಂಗಳಿಗೊಂದು ಧಾಂ ಧೂಂ ಪತ್ರಿಕಾ ಗೋಷ್ಠಿ ನಡೆಸುತ್ತಿದ್ದವು. ಪತ್ರಕರ್ತರಿಗೆ ದುಬಾರಿ ಗಿಫ್ಟ್ ವೋಚರ್‍ಗಳು ಉಡುಗೊರೆಯಾಗಿ ಬರುತ್ತಿದ್ದವು. ಈಗ ಕಳೆದ ಒಂದು ವರ್ಷದಿಂದ ಒಂದು ಪತ್ರಿಕಾ ಗೋಷ್ಠಿಯೂ ನಡೆದಿಲ್ಲ. ಬ್ಯಾಂಕುಗಳ ಜಾಹೀರಾತಿಗೂ ಕತ್ತರಿ ಬಿದ್ದರೆ ಮಾಧ್ಯಮಗಳು ಅಧೋಗತಿಯನ್ನು ತಲುಪುತ್ತವೆ“ ಎನ್ನುತ್ತಾರೆ ರಾಜ್ಯ ಮಟ್ಟದ ಪತ್ರಿಕೆಯ ವರದಿಗಾರರೊಬ್ಬರು.
ಬ್ಯಾಂಕುಗಳ ತ್ರೈಮಾಸಿಕ ವರದಿಯನ್ನು ಅವರು ಜಾಹೀರಾತು ನೀಡುತ್ತಾರೆ ಎಂಬ ಕಾರಣಕ್ಕೋಸ್ಕರವೇ ಪತ್ರಿಕೆಗಳು ಪ್ರಾಮುಖ್ಯತೆ ನೀಡಿ ಪ್ರಕಟಿಸುತ್ತಿದ್ದವು ಎನ್ನುತ್ತಾರೆ ಸ್ಥಳೀಯ ಪತ್ರಕರ್ತರು. ಆದರೆ ಬ್ಯಾಂಕಿಗೆ ಲಾಭಾಂಶವೇ ಇಲ್ಲದಾಗ ತ್ರೈಮಾಸಿಕ ವರದಿ ಪ್ರಕಟಿಸುವುದನ್ನೇ ಅದು ನಿಲ್ಲಿಸಿತು. `ರಾಷ್ಟ್ರೀಕೃತ ಬ್ಯಾಂಕುಗಳ ನಡುವೆ ಪೈಪೋಟಿ ನಡೆಸುವಂತಿಲ್ಲ ಎಂಬ ನಿಯಮದಿಂದಾಗಿ ಠೇವಣಿಗೆ ಸಂಬಂಧಿಸಿದ ಜಾಹೀರಾತುಗಳು ಈ ಮೊದಲೇ ಸ್ಥಗಿತಗೊಂಡಿತ್ತು. ಗೃಹ ಸಾಲ, ವಾಹನ ಸಾಲದಂತಹ ಜಾಹೀರಾತುಗಳು ಬಹುತೇಕ ಪತ್ರಿಕೆಗಳಿಂದ ಕಣ್ಮರೆಯಾಗಿತ್ತು. ರೇರಾ ಕಾಯ್ದೆಯಿಂದಾಗಿ ರಿಯಲ್ ಎಸ್ಟೇಟ್‍ನ ಜಾಹೀರಾತುಗಳೂ ನಿಂತಿತ್ತು. ಈಗ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯಿಂದ ಬ್ಯಾಂಕುಗಳ ಮುಖ್ಯ ಕಚೇರಿ ಬೇರೆಲ್ಲೋ ಸ್ಥಾಪನೆಯಾಗಬಹುದು. ಇಲ್ಲಿನ ಸ್ಥಳೀಯ ಪತ್ರಿಕೆಗಳಿಗೆ ಬ್ಯಾಂಕುಗಳ ಜಾಹೀರಾತು ಸಿಗುವುದು ಇನ್ನು ದುಸ್ತರವಾದೀತು’ ಎಂಬುದು ಕರಾವಳಿಯ ಪ್ರಮುಖ ಪತ್ರಿಕೆಯೊಂದರ ಪತ್ರಕರ್ತರ ಅಭಿಪ್ರಾಯ.
ಈ ಅಭಿಪ್ರಾಯಕ್ಕೆ ಭಿನ್ನವಾದ ವಾದವೂ ಇದೆ. ಬ್ಯಾಂಕುಗಳ ಟೆಂಡರ್, ನೋಟಿಫಿಕೇಶನ್ ಜಾಹೀರಾತುಗಳು ಹೆಚ್ಚಾಗಿ ಪ್ರಕಟಗೊಳ್ಳುತ್ತಿದ್ದದ್ದು ಪ್ರಸರಣ ಸಂಖ್ಯೆ ಹೆಚ್ಚಾಗಿರುವ ಪತ್ರಿಕೆಗಳಲ್ಲಿ. ಅದರ ಹೊರತು ಉಳಿದ ಪತ್ರಿಕೆಗಳಿಗೆ ಅವರ ಜಾಹೀರಾತು ದೊರಕುತ್ತಿದ್ದದ್ದು ವಿಶೇಷ ಪುರವಣಿ, ದೀಪಾವಳಿ ವಿಶೇಷಾಂಕಗಳಿಗೆ ಮಾತ್ರ. ಹೀಗಾಗಿ ಬ್ಯಾಂಕ್ ವಿಲೀನ ಪ್ರಕ್ರಿಯೆ ಸ್ಥಳೀಯ ಪತ್ರಿಕೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರಲಾರದು ಎನ್ನುತ್ತಾರೆ, ಹೊಸದಿಗಂತ ಪತ್ರಿಕೆಯ ಸಂಪಾದಕ ಪ್ರಕಾಶ ಇಳಂತಿಲ.
ಒಟ್ಟಾರೆ ಬ್ಯಾಂಕ್ ವಿಲೀನ ಪ್ರಕ್ರಿಯೆಯ ದೂರಗಾಮಿ ಪರಿಣಾಮಗಳು ಬ್ಯಾಂಕಿಂಗ್ ರಂಗದ ತೊಟ್ಟಿಲೆಂದೇ ಕರೆಯಲ್ಪಡುವ ಮಂಗಳೂರಿನಲ್ಲಿ ಈ ರೀತಿ ಸಂಚಲನ ಉಂಟು ಮಾಡಲಾರಂಭಿಸಿದೆ. ಇವೆಲ್ಲದರ ನೇರ ಪರಿಣಾಮ ಪತ್ರಕರ್ತರ ಮೇಲಾಗುತ್ತಿದೆ. “ಮಂಗಳೂರಿನಲ್ಲಿ ಈಗಾಗಲೆ ಪತ್ರಿಕೆಗಳು ಹೊಸ ನೇಮಕಾತಿಯನ್ನು ನಿಲ್ಲಿಸಿವೆ. ವರದಿಗಾರರನ್ನು ನೇಮಿಸಿಕೊಳ್ಳಬೇಕಾದಲ್ಲಿ ಬಿಡಿ ಸುದ್ದಿ ಸಂಗ್ರಾಹಕರ ನೇಮಕವಾಗುತ್ತಿದೆ. ಇನ್ ಕ್ರಮೆಂಟ್ ಯಾವ ಪತ್ರಿಕೆಗಳಲ್ಲೂ ಇಲ್ಲ. ಪತ್ರಿವರ್ಷ ಟ್ರೈನೀ ವರದಿಗಾರರನ್ನು ನೇಮಿಸಿಕೊಳ್ಳುತ್ತಿದ್ದ ಪ್ರಜಾವಾಣಿಯಂತಹ ಪತ್ರಿಕೆಗಳೇ ಇಂದು ಆ ಹುದ್ದೆಯನ್ನೇ ರದ್ದುಗೊಳಿಸಿವೆ’ ಎನ್ನುತ್ತಾರೆ ಇನ್ನೊಂದು ಪತ್ರಿಕೆಯ ಪತ್ರಕರ್ತೆ.
ಒಟ್ಟಿನಲ್ಲಿ ಮಾಧ್ಯಮದ ಭವಿಷ್ಯ ಕವಲುದಾರಿಯಲ್ಲಿದೆ. ಮುದ್ರಣ ಮಾಧ್ಯಮಕ್ಕಂತೂ ಭವಿಷ್ಯವೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ಮಾಧ್ಯಮವಲಯದಲ್ಲಿ ದಟ್ಟವಾಗಿ ಕೇಳಿಬರುತ್ತಿರುವ ಮಾತು.