ಬ್ಯಾಂಕ್ ವಂಚನೆ ಹಿಂದಿನ ಸರಕಾರದಲ್ಲಿ ನಡೆಯುತ್ತಿತ್ತು. ಈಗ ನಡೆಯುವುದಿಲ್ಲ ಎಂಬ ಭಾವನೆ ಜನಸಾಮಾನ್ಯರಲ್ಲಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಅಧಿಕೃತ ವರದಿ ಪ್ರಕಾರ 2018ರ ಹಣಕಾಸು ವರ್ಷಕ್ಕಿಂತ 2019ರ ವಿತ್ತ ವರ್ಷದಲ್ಲಿ ಬ್ಯಾಂಕ್ ವಂಚನೆ ಮೊತ್ತದಲ್ಲಿ ಶೇಕಡ 74ರಷ್ಟು ಹೆಚ್ಚಳವಾಗಿದೆ.
100 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ವಂಚನೆ ಪ್ರಕರಣ ಸಂಖ್ಯೆಯಲ್ಲೂ ಹೆಚ್ಚಳ ಉಂಟಾಗಿದ್ದು, ಒಂದು ಲಕ್ಷ ರೂಪಾಯಿಂದ ಕಡಿಮೆ ಮೊತ್ತದ ವಂಚನೆ ಪ್ರಕರಣಗಳು ಶೇಕಡ 1ಕ್ಕಿಂತಲೂ ಕಡಿಮೆ. ದೊಡ್ಡ ಕುಳಗಳೇ ದುರುದ್ದೇಶ ಪೂರಕವಾಗಿ ಪ್ರಭಾವ ಬಳಸಿ ಸಾಲ ಮಂಜೂರು ಮಾಡಿಸಿಕೊಂಡು ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
2018ರ ಹಣಕಾಸು ವರ್ಷದಲ್ಲಿ 41,167 ಕೋಟಿ ರೂಪಾಯಿ ಮೊತ್ತದ ಬ್ಯಾಂಕ್ ವಂಚನೆ ಆಗಿದ್ದರೆ, 2019ರ ಹಣಕಾಸು ವರ್ಷದಲ್ಲಿ 71,543 ಕೋಟಿ ರೂಪಾಯಿ ಮೊತ್ತ ವಂಚನೆ ಆಗಿದೆ. ಅಂದರೆ, ಶೇಕಡಾ 74ರಷ್ಟು ಹೆಚ್ಚಳ ಆಗಿದೆ. ಬ್ಯಾಂಕ್ ವಂಚನೆ ಪ್ರಕರಣಗಳ ಸಂಖ್ಯೆ ಕೂಡ ಶೇಕಡ 15ರಷ್ಟು ಹೆಚ್ಚಳ ಆಗಿದೆ. ಹಿಂದಿನ ಹಣಕಾಸು ಅವಧಿಯಲ್ಲಿ 5,900 ವಂಚನೆ ಪ್ರಕರಣಗಳು ನಡೆದಿದ್ದರೆ, 2019ರ ಹಣಕಾಸು ವರ್ಷ 6,800 ಬ್ಯಾಂಕ್ ವಂಚನೆ ಪ್ರಕರಣಗಳು ಪತ್ತೆ ಆಗಿವೆ. ಬಹುತೇಕ ಪ್ರಕರಣಗಳು ಹಿಂದಿನ ವರ್ಷಗಳಲ್ಲಿ ನಡೆದಿರುವ ವ್ಯವಹಾರಗಳಾಗಿವೆ ಎಂದು ಆಗಸ್ಟ್ 29, 2019ರಂದು ಆರ್ ಬಿ ಐ ಬಿಡುಗಡೆ ಮಾಡಿದ ವರದಿ ವಿವರಿಸಿದೆ.

ವಂಚನೆ ನಡೆದಿರುವ ಮತ್ತು ಪತ್ತೆ ಆಗಿರುವ ಅವಧಿ ಸರಾಸರಿ 22 ತಿಂಗಳು
ನೂರು ಕೋಟಿ ರೂಪಾಯಿಗಿಂತ ಹೆಚ್ಚಿನ ವಂಚನೆಗಳು ನಡೆದಿರುವುದು ಮತ್ತು ಪತ್ತೆ ಆಗಿರುವ ಅವಧಿ ಸರಾಸರಿ ನಾಲ್ಕೂವರೆ ವರ್ಷಗಳು. ನೂರು ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತ ಒಳಗೊಂಡಿರುವ 2018-19ರಲ್ಲಿ ಪತ್ತೆಯಾದ ವಂಚನೆ ಪ್ರಕರಣಗಳಲ್ಲಿ ಒಳಗೊಂಡ ಒಟ್ಟು ಹಣ 52,000 ಕೋಟಿ ರೂಪಾಯಿ.
ಸರಕಾರಿ ವಲಯದ ರಾಷ್ಟ್ರೀಯ ಬ್ಯಾಂಕುಗಳಲ್ಲೇ ಅತೀ ಹೆಚ್ಚಿನ ಪ್ರಮಾಣದ ಮತ್ತು ಹಣದ ಅವ್ಯವಹಾರ ನಡೆದಿರುವುದಶಾಗಿ ವರದಿ ಹೇಳುತ್ತದೆ. ಶೇಕಡ 90ರಷ್ಟು ವಂಚನೆಗಳು ನಡೆದಿರುವುದು ಇಂತಹ ಬ್ಯಾಂಕುಗಳಲ್ಲಿ. ಆದರೆ, ಕಳೆದ ಅವಧಿಗಿಂತ ಈ ವರ್ಷ ಖಾಸಗಿ ಬ್ಯಾಂಕುಗಳಲ್ಲಿ ವಂಚನೆ ಪ್ರಕರಣಗಳಲ್ಲಿಯೂ ಹೆಚ್ಚಳ ಆಗಿದ್ದು, ಕಳೆದ ವರ್ಷದ 2,478 ಕೋಟಿ ರೂಪಾಯಿಯ ಹೋಲಿಕೆಗೆ ಈ ಬಾರಿ 5,515 ಕೋಟಿ ರೂಪಾಯಿಯಷ್ಟು ವಂಚನೆ ಪ್ರಕರಣಗಳು ಪತ್ತೆಯಾಗಿವೆ.
ಈ ಪೈಕಿ ಸಾಲ ಪಡೆದು ವಂಚನೆ ಮಾಡಿರುವ ಪ್ರಕರಣಗಳೇ ಹೆಚ್ಚಾಗಿದ್ದು, ಕಾರ್ಡ್ ಮತ್ತು ಆನ್ ಲೈನ್ ವ್ಯವಹಾರದಲ್ಲಿ ನಡೆದ ವಂಚನೆ ಪ್ರಕರಣಗಳು ಅತ್ಯಂತ ಕಡಿಮೆಯಾಗಿದೆ. 2018-19 ಹಣಕಾಸು ವರ್ಷದಲ್ಲಿ ಕಾರ್ಡ್ ಅಥವ ಆನ್ ಲೈನ್ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಒಟ್ಟು ಪ್ರಕರಣಗಳ ಶೇಕಡ 0.3ಕ್ಕಿಂತ ಕಡಿಮೆ. ವಂಚನೆ ಮತ್ತು ಪೋರ್ಜರಿ ಪ್ರಕರಣಗಳು ಹೆಚ್ಚಿದ್ದು, ಅವ್ಯವಹಾರ, ವ್ಯವಹಾರಿಕ ಮೋಸದ ಪ್ರಕರಣಗಳು ಅನಂತರದ ಸ್ಥಾನದಲ್ಲಿವೆ.

2009 ರಿಂದ 2019 ರ ಅವಧಿಯಲ್ಲಿ ಒಟ್ಟು 50,000 ಬ್ಯಾಂಕ್ ವಂಚನೆ ಪ್ರಕರಣಗಳು ಪತ್ತೆ ಆಗಿವೆ ಎಂದು ಈ ಹಿಂದೆ ರಿಸರ್ವ್ ಬ್ಯಾಂಕ್ ವರದಿ ತಿಳಿಸಿತ್ತು. ಖಾಸಗಿ ವಲಯದ ಐಸಿಐಸಿಐ ಬ್ಯಾಂಕಿನಲ್ಲಿ ಅತೀ ಹೆಚ್ಚು 6,811 ಅವ್ಯವಹಾರಗಳು ನಡೆದಿದ್ದು, ಒಟ್ಟು 55,033 ಕೋಟಿ ರೂಪಾಯಿ ವಂಚನೆಯಲ್ಲಿ ಒಳಗೊಂಡ ಹಣ. ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ (ಎಸ್ ಬಿ ಐ) ಮತ್ತು ಖಾಸಗಿ ರಂಗದ ಎಚ್ ಡಿಎಫ್ ಸಿ ಬ್ಯಾಂಕುಗಳಲ್ಲಿ ಕೂಡ ಹೆಚ್ಚಿನ ಪ್ರಮಾಣದ ವಂಚನೆಗಳು ನಡೆದಿತ್ತು.
ಕಳೆದ ಹನ್ನೊಂದು ವರ್ಷಗಳಲ್ಲಿ ನಮ್ಮ ದೇಶದಲ್ಲಿ ನಡೆದ ಬ್ಯಾಂಕ್ ವಂಚನೆಯ ಹಣದ ಒಟ್ಟು ಮೊತ್ತ ಎರಡು ಲಕ್ಷ ಕೋಟಿ ರೂಪಾಯಿಗಳು. 2017-18 ಹಣಕಾಸು ವರ್ಷದಲ್ಲಿ 5,916 ಪ್ರಕರಣಗಳಲ್ಲಿ 41,167 ಕೋಟಿ ರೂಪಾಯಿ ಅವ್ಯವಹಾರ ಆಗಿದ್ದರೆ, 2016-17ರಲ್ಲಿ 23,933 ಕೋಟಿ ರೂಪಾಯಿ ಅವ್ಯವಹಾರ ನಡೆದಿತ್ತು. 2015-16ರಲ್ಲಿ ಬ್ಯಾಂಕ್ ವಂಚನೆಯಲ್ಲಿ ಒಳಗೊಂಡ ಹಣದ ಮೊತ್ತ 18,455 ಕೋಟಿ ರೂಪಾಯಿ ಆಗಿತ್ತು.
2012-2013ರಲ್ಲಿ 8,590 ಕೋಟಿ ರೂಪಾಯಿ ವಂಚನೆ ಆಗಿದ್ದರೆ, 2013-14ರಲ್ಲಿ ಈ ಮೊತ್ತ 10,170 ಕೋಟಿ ರೂಪಾಯಿಗೆ ಹೆಚ್ಚಳ ಆಗಿತ್ತು. ಹೀಗೆ ಕಳೆದ ಐದಾರು ವರ್ಷಗಳಲ್ಲಿ ಬ್ಯಾಂಕ್ ವಂಚನೆ ಪ್ರಕರಣಗಳು ಹೆಚ್ಚಳ ಆಗುತ್ತಿರುವುದು ಗಮನಾರ್ಹವಾಗಿದೆ. ಆಡಳಿತ ಪಕ್ಷ ಮತ್ತದರ ಹಿಂಬಾಲಕರು ಹೇಳುತ್ತಿರುವುದಕ್ಕೂ ವಾಸ್ತವಕ್ಕೂ ಅಜಗಜಾಂತರವಿದೆ.