ಕರಾವಳಿಯ ತುಳು ನಾಟಕವೊಂದರಲ್ಲಿ ಶತಮಾನದ ಡೈಲಾಗ್ ಒಂದಿದೆ. ಅದುವೇ `ಬ್ಯಾಂಕಿಗೂ ಬ್ಯಾಂಕಿಗೂ ಮದುವೆ’. ಕೆನರಾ ಬ್ಯಾಂಕಿಗು ಸಿಂಡಿಕೇಟ್ ಬ್ಯಾಂಕಿಗು ಮದುವೆ. ಇದು ಅತೀ ಶ್ರೀಮಂತರ ವಿವಾಹ. ಸರಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ವಿಲೀನ ಮಾಡುವ ಮೂಲಕ ದೊಡ್ಡ ಪ್ರಮಾಣದ ಸಾಲ ಪಡೆಯುವವರಿಗೆ ಪ್ರಯೋಜನ ಆಗಲಿದೆ. ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಜನರಿಂದ ಈ ಬ್ಯಾಂಕುಗಳು ದೂರ ಆಗಲಿವೆ.
ಕರ್ನಾಟಕ ರಾಜ್ಯದ ಮಟ್ಟಿಗೆ ಕರಾವಳಿಯಲ್ಲಿ ಸ್ಥಾಪಿತವಾದ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಶನ್ ಹಾಗೂ ವಿಜಯ್ ಬ್ಯಾಂಕ್ ಕೇಂದ್ರ ಸರಕಾರದ ಈ ಕ್ರಮದಿಂದ ತಮ್ಮ ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಕೂಡ ವಿಲೀನ ಮಾಡಿಕೊಂಡಂತಾಗಿದೆ.
ಈಗ ಸಿಂಡಿಕೇಟ್ ಬ್ಯಾಂಕನ್ನು ಕೆನರಾ ಬ್ಯಾಂಕಿನೊಂದಿಗೆ ವಿಲೀನ ಮಾಡಲಾಗಿದೆ. ಈ ಹಿಂದೆ, ಕರಾವಳಿ ಮೂಲದ ವಿಜಯ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡಾ ಮತ್ತು ದೇನಾ ಬ್ಯಾಂಕ್ ಜತೆ ವಿಲೀನಗೊಳಿಸಲಾಗಿತ್ತು. ವಿಜಯ ಬ್ಯಾಂಕ್ ವಿಲೀನ ವಿರುದ್ಧ ಕರಾವಳಿಯಲ್ಲಿ ವಿರೋಧ ವ್ಯಕ್ತವಾಗಿತ್ತು. ಇದೀಗ ಕೆನರಾ ಬ್ಯಾಂಕನ್ನು ಹೊರತುಪಡಿಸಿ ಉಳಿದೆಲ್ಲ ಬ್ಯಾಂಕುಗಳು ಇತಿಹಾಸಕ್ಕೆ ಸೇರಲಿವೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಯುನೈಟೆಡ್ ಬ್ಯಾಂಕ್
ಅನ್ನು ವಿಲೀನ ಮಾಡಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಗಳು ವಿಲೀನವಾಗಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಘೋಷಿಸಿದ್ದರು. ಇದರೊಂದಿಗೆ ಸಾರ್ವಜನಿಕ ವಲಯದಲ್ಲಿ ಕೇವಲ ಹನ್ನೆರಡು ಬ್ಯಾಂಕುಗಳು ಉಳಿದುಕೊಳ್ಳಲಿವೆ. ಈ ರೀತಿ ಮಾಡುವ ಮೂಲಕ ಬ್ಯಾಂಕುಗಳ ರಾಷ್ಟ್ರೀಕರಣದ ಕತೆಯನ್ನು ಕೂಡ ಅಳಿಸಿ ಹಾಕುವ ಯತ್ನ ಮಾಡಿರುವುದು ಗಮನಾರ್ಹ.

ಕರಾವಳಿಯ ಸಹಕಾರಿ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಗೆ ಶತಮಾನಗಳ ಇತಿಹಾಸವಿದೆ. ಕರಾವಳಿಯ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಶನ್ ಹಾಗೂ ವಿಜಯ್ ಬ್ಯಾಂಕ್ ಸ್ಥಾಪನೆಯ ಹಿಂದೆ ಕರಾವಳಿಯ ಹಿರಿಯರ ಅಪ್ರತಿಮ ಸಾಧನೆ, ಸಾರ್ವಜನಿಕ ಶ್ರೇಯಸ್ಸಿನ ಗುರಿ ಇತ್ತು.
1906ರಲ್ಲಿ ಅಮ್ಮೆಂಬಳ ಸುಬ್ಬಾ ರಾವ್ ಪೈ ಅವರು ಮನೆ, ಮನೆಯಿಂದ ಅಕ್ಕಿ ಸಂಗ್ರಹಿಸಿ ಬ್ಯಾಂಕ್ ಆರಂಭಿಸಿದ್ದರು. ಕೆನರಾ ಬ್ಯಾಂಕ್ ಹಿಂದೂ ಪರ್ಮನೆಂಟ್ ಫಂಡ್ ಎಂಬುದಾಗಿ ಆರಂಭವಾಗಿದ್ದ ಸಂಸ್ಥೆ. ದೇಶದಾದ್ಯಂತ ಬೆಳೆಯುತ್ತಾ ಇಂದು 2542 ಶಾಖೆಗಳ ಹೊಂದಿರುವ ದೇಶದ ಪ್ರಮುಖ ಬ್ಯಾಂಕ್.
ಅದೇ ವರ್ಷ ಉಡುಪಿಯಲ್ಲಿ ದಾನಿಗಳ ಕೂಟದ ಮುಖ್ಯಸ್ಥರಾಗಿದ್ದ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಶಿಂ ಸಾಹೇಬ್ ಬಹದ್ದೂರ್ ಅವರು ದಿ ಕೆನರಾ ಬ್ಯಾಂಕಿಂಗ್ ಕಾರ್ಪೋರೇಶನ್ (ಉಡುಪಿ) ಲಿಮಿಟೆಡ್ ಎಂದು ಸ್ಥಾಪಿಸಿದ್ದರು. 1972ರಲ್ಲಿ ಅದು ಕಾರ್ಪೋರೇಶನ್ ಬ್ಯಾಂಕ್ ಎಂದಾಗಿ, 1980ರಲ್ಲಿ ರಾಷ್ಟ್ರೀಕರಣಗೊಂಡಿತು. ಇದು ದೇಶಾದ್ಯಂತ 4,724 ಶಾಖೆಗಳನ್ನು 3040 ಎಟಿಎಂಗಳನ್ನು ಹೊಂದಿದೆ.
1925ರಲ್ಲಿ ಉಪೇಂದ್ರ ಅನಂತ್ ಪೈ, ವಾಮನ್ ಕುಡ್ವ ಮತ್ತು ಡಾ. ಟಿ. ಎಂ. ಎ. ಪೈ ಸೇರಿಕೊಂಡು ಕೇವಲ ಎಂಟು ಸಾವಿರ ರೂಪಾಯಿ ಮೂಲ ಬಂಡವಾಳದೊಂದಿಗೆ ಕೆನರಾ ಇಂಡಸ್ಟ್ರಿಯಲ್ ಮತ್ತು ಬ್ಯಾಂಕಿಂಗ್ ಸಿಂಡಿಕೇಟ್ ಲಿಮಿಟೆಡ್ ಅನ್ನು ಸ್ಥಾಪಿಸಿದ್ದರು. ಅಂದು ಕೈಮಗ್ಗದ ಉದ್ಯಮ ಸಂಕಷ್ಟದಲ್ಲಿದ್ದಾಗ ಕರಾವಳಿಯ ನೇಕಾರರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಸಂಸ್ಥೆ ಆರಂಭವಾಗಿತ್ತು. 1963ರಲ್ಲಿ ಮರುನಾಮಕರಣಗೊಂಡ ಸಿಂಡಿಕೇಟ್ ಬ್ಯಾಂಕ್ ಈಗ ದೇಶಾದ್ಯಂತ 2125 ಶಾಖೆಗಳನ್ನು ಹೊಂದಿದೆ.

ಈಗಾಗಲೇ ವಿಲೀನ ಆಗಿರುವ ವಿಜಯ ಬ್ಯಾಂಕನ್ನು ಮಂಗಳೂರಿನ ಎ. ಬಿ. ಶೆಟ್ಟಿ ಮತ್ತು ಇತರರು ಸೇರಿಕೊಂಡು 1931ರಲ್ಲಿ ಸ್ಥಾಪಿಸಿದ್ದರು. ಈ ಬ್ಯಾಂಕಿನ ಬೆಳವಣಿಗೆಯೊಂದಿಗೆ ಕರಾವಳಿಯ ರೈತರು ಮತ್ತು ರೈತರ ಮಕ್ಕಳು ಬೆಳೆಯಲು ಸಾಧ್ಯವಾಗಿತ್ತು. 1960ರ ದಶಕದಲ್ಲಿ ಮುಲ್ಕಿ ಸುಂದರ್ ರಾಮ್ ಶೆಟ್ಟಿ ವಿಜಯ ಬ್ಯಾಂಕನ್ನು ಮತ್ತೊಂದು ಮಜಲಿಗೆ ಏರಿಸಿದವರು. ಇವೆಲ್ಲ ಬ್ಯಾಂಕುಗಳು ರಾಷ್ಟ್ರೀಕರಣವಾಗಿ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದವು.
ಸರಕಾರ ಸಾಮಾನ್ಯವಾಗಿ ಸಣ್ಣ ಸಾಲಗಾರರ ಪರವಾಗಿದ್ದರೆ, ಇತ್ತೀಚಿಗಿನ ವರ್ಷಗಳಲ್ಲಿ ಅತಿ ದೊಡ್ಡ ವ್ಯಾಪಾರಿಗಳಿಗೆ ಬೇಕಾದಂತೆ ಮತ್ತು ಸರಕಾರ ಹಣಕಾಸು ವ್ಯವಸ್ಥೆ ಪೂರಕ ಆಗುವಂತೆ ಬ್ಯಾಂಕುಗಳ ವಿಲೀನ ಮಾಡುತ್ತಿರುವಂತೆ ಕಾಣುತ್ತದೆ.
ಈ ವಿಲೀನ ಪ್ರಕ್ರಿಯೆಯಲ್ಲಿ ಕೂಡ ಸುಸ್ಥಿತಿಯಲ್ಲಿರುವ ಬ್ಯಾಂಕುಗಳನ್ನು ಅದಕ್ಕಿಂತ ಕಡಿಮೆ ಗುಣಮಟ್ಟದ ಬ್ಯಾಂಕಿನೊಂದಿಗೆ ವಿಲೀನ ಮಾಡಿರುವುದರ ಹಿನ್ನೆಲೆ ಸ್ಪಷ್ಟವಾಗಿಲ್ಲ. ಇಂಡಿಯನ್ ಬ್ಯಾಂಕೊಂದನ್ನು ಹೊರತು ಪಡಿಸಿ ಉಳಿದೆಲ್ಲ ಆಂಕರ್ ಬ್ಯಾಂಕುಗಳ ಕ್ಯಾಪಿಟಲ್ ಅಡೆಕ್ವೆಸಿ ರೇಶಿಯೊ (Capital Adequacy Ratio) ವಿಲೀನ ಆಗುತ್ತಿರುವ ಬ್ಯಾಂಕುಗಳಿಗಿಂತ ಕಡಿಮೆ ಆಗಿದೆ.
ಬ್ಯಾಂಕ್ ಆಫ್ ಇಂಡಿಯಾ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ರಾಷ್ಟ್ರೀಯ ಬ್ಯಾಂಕುಗಳಾಗಿ, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಯುಸಿಒ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ ಮತ್ತು ಪಂಜಾಬ್, ಸಿಂಧ್ ಬ್ಯಾಂಕುಗಳು ಪ್ರಾದೇಶಿಕ ನೆಲೆಯಲ್ಲಿ ಮುಂದುವರೆಯಲಿವೆ. ಅಲ್ಲಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಪಟ್ಟಿ ಕಣ್ಮರೆಯಾಗಿ ವಿಲೀನವಾದ ಅನಂತರದ ಬೃಹತ್ ಗಾತ್ರದ ಬ್ಯಾಂಕುಗಳ ಪಟ್ಟಿ ಹೊರಬಂದಿದೆ.